ನಮ್ಮ ನಡುವಿನ ಸೂಪರ್ ಮ್ಯಾನ್…

ಉಳುವ ಯೋಗಿಯ ನೋಡಲ್ಲಿ

– ಸಂತೋಷ್ ಇಗ್ನೇಶಿಯಸ್

ಬಡಕಲು ದೇಹ ನಡಕಲು ನಡಿಗೆಯಲ್ಲಿ ನಡೆದು ಬಂದ ಈ ದೇಶಕ್ಕೆ ಅಷ್ಟಿಷ್ಟು ಗಟ್ಟಿಯಾಗಿ ನಿಲ್ಲಲು ಆಸರೆಯಾದುದು “ಬೆನ್ನೆಲುಬು”. ಒಬ್ಬ ಮನುಷ್ಯನ ಒರಟುತನಕ್ಕೆ, ಗಡಸುತನಕ್ಕೆ ಅವನ ತಾಕತ್ತಿಗೆ ಬೆನ್ನೆಲುಬು ಸಾಕ್ಷಿಯಾಗಿ ನಿಲ್ಲುವಂಥದ್ದು. ನಾನು ಈಗಾಗಲೇ “ಈ ದೇಶಕ್ಕೆ” ಎಂದು ಬರೆದುಬಿಟ್ಟಿದ್ದೇನೆ. ಇದು ದೇಹಕ್ಕೋ, ದೇಶಕ್ಕೋ ಎಂಬ ಗೊಂದಲ ಮೂಡಿದ್ದರೆ ನೀವು ಸರಿಯಾದ ಧಾಟಿಯಲ್ಲೇ ಯೋಚಿಸುತ್ತಿದ್ದೀರಿ ಎಂದು ಭಾವಿಸುತ್ತೇನೆ. ಇಲ್ಲಿ ದೇಶದ ಬೆನ್ನೆಲುಬಿನ ಬಗ್ಗೆಯೇ ಹೇಳಲು ಹೊರಟ್ಟಿದ್ದೇನೆ. ಈ ದೇಶದ ಬೆನ್ನೆಲುಬು ರೈತ ಎಂದು ಅದಾವ ಧೀರೊದ್ಧಾತ ಉದ್ಗರಿಸಿದನೋ… ಗೊತ್ತಿಲ್ಲ. ಉದ್ದುದ್ದಗಲ ದೇಶ ಕೃಷಿಯನ್ನೇ ಪ್ರಧಾನವಾಗಿ ನೆಚ್ಚಿಕೊಂಡು ಉಸಿರಾಡುತ್ತಾ ಹೆಸರೇಳುತ್ತ ಬಂದಿರುವುದೆ ಇದಕ್ಕೆ ಸಾಕ್ಷಿ. ಆದರೆ ಈಗಿನ ಪೀಳಿಗೆ ಕೃಷಿಯಂತಹ ಕ್ಲಿಷ್ಟ ಕೆಲಸವನ್ನು ದೂರವಿಟ್ಟು ಬೇರೆ ಬೇರೆ ಉದ್ಯೋಗವನ್ನು ಅರಸಿ ಹೋಗುತ್ತಿರುವುದರಿಂದ ರೈತವರ್ಗ ಶೇಕಡವಾರಿನಲ್ಲಿ ಕ್ಷೀಣಿಸುತಿದೆ. ರೈತ ದೇಶದಲ್ಲಿ “ಬೆನ್ನೆಲುಬಿನಂತಹ” ಪ್ರಧಾನ ಸ್ಠಾನವನ್ನು ಕಳೆದುಕೊಳ್ಳುತ್ತಿದ್ದಾನೆಯೆ? ಎಂಬ ಪ್ರಶ್ನೆ ಮೂಡುತಿದೆ. ಆ ಸ್ಠಾನವನ್ನು ತುಂಬ ಬಲ್ಲ ಇತರೆ ಉದ್ದಿಮೆಗಳು ನಮ್ಮ ದೇಶವನ್ನು ನಿಧಾನವಾಗಿ ಆವರಿಸುತ್ತಿವೆಯಾದರು ಕೃಷಿಯೇ ಇಂದಿಗೂ ದೇಶದ ಪ್ರಧಾನ ಉದ್ದಿಮೆ. ರೈತರೆ ಅದರ ಬೆನ್ನೆಲುಬು ಅನ್ನುವುದು ಮಾತ್ರ ಸಾರ್ವತ್ರಿಕ. ಜಾಗತೀಕರಣ, ಉದಾರೀಕರಣ, ಖಾಸಗಿಕರಣಗಳಂಥ ನೀತಿಗಳು ಜಾರಿಯಾದದ್ದೇ ತಡ ಇತರೆ ಎಲ್ಲ ಉದ್ಧಿಮೆಗಳಿಂದ ಆದಾಯವೂ ಹೆಚ್ಚು, ಲಾಭವೂ ಹೆಚ್ಚು. ಅದರ ಫಲವಾಗಿ ಬೆಲೆ ಏರಿಕೆಯೂ ಹೆಚ್ಚಾಗಿದೆ. ವಾಸಕ್ಕೆ ಅಗತ್ಯವಾಗಿರುವ ಯಾವ ವಸ್ತುವೇ ಆಗಲಿ, ಆಹಾರ ತಿಂಡಿ-ತಿನಿಸುಗಳೇ ಆಗಲಿ ವಿಪರೀತ ಎನುವಷ್ಟು ಬೆಲೆ ಏರಿಕೆಯಾಗಿದೆ. ಕೃಷಿ ಉದ್ದಿಮೆಯಲ್ಲಿ ಅಕ್ಕಿ ಬೇಳೆ ತರಕಾರಿಯಂತಹ ದಿನ ಬಳಕೆಗಳು ಕೈಗೆಟುಕದ ಬೆಲೆ ಮುಟ್ಟಿದೆ. ವಿಧಿಯಿಲ್ಲದೆ ಕೊಂಡುಕೊಳ್ಳಲೇಬೇಕು. ಇಂತಹ ಸ್ಥಿತಿಯಲ್ಲಿ ಇವನ್ನೆಲ್ಲ ಬೆಳೆದ ರೈತ ಇದರ ಬಹುಪಾಲು ಲಾಭಪಡೆದು ಶ್ರೀಮಂತವರ್ಗದವನಾಗಬೇಕಿತ್ತು; ದೊಡ್ಡ ಉದ್ಧಿಮೆಯಾಗಿ ಬೆನ್ನೆಲುಬು ಎಂಬ ಪಟ್ಟದ ಜೊತೆಗೆ ತಲೆ, ಭುಜ, ತೊಳು, ಸೊಂಟದಾದಿಯಾಗಿ ಎಲ್ಲ ಬಿರುದನ್ನು ಪಡೆಯಬೇಕಿತ್ತು ಕೃಷಿ; ಆದರೆ ಅದದ್ದೇನು! ಕೀಟಗಳಂಥ ಮಧ್ಯವರ್ತಿಗಳಿಂದ ಕೃಷಿ ವ್ಯವಸ್ಥೆ ನೆಲಕಚ್ಚುತ್ತಾ ಹೋಯಿತು. ಒಂದು ರೀತಿಯಲ್ಲಿ ಮಧ್ಯವರ್ತಿಗಳಿಂದ ಮೋಸಕ್ಕೊಳಗಾದ ಉದ್ದಿಮೆಯಾಗಿಬಿಟ್ಟಿದೆ. ಅತ್ತ ಮಾರುಕಟ್ಟೆಯ ಬೆಲೆಯೂ ಇಲ್ಲದೇ ಬೆಂಬಲ ಬೆಲೆಯೂ ಸಿಗದೆ ಕುಸಿಯುತ್ತಿದ್ದಾನೆ ರೈತ. ಎಲ್ಲರ ಸ್ಥಿತಿಯಲ್ಲೂ ಉತ್ತಮದತ್ತ ಬದಲಾವಣೆಗಳು ಕಾಣಿಸುತ್ತಿರುವಾಗ ನಿಸ್ವಾರ್ಥ ರೈತನ ಸ್ಥಿತಿ ಮಾತ್ರ ಹಾಗೆ ಇದೆ. ಕಾರಣ ಸಾಮಾನ್ಯ ಅಕ್ಕಿಯ ಬೆಲೆ 30 ರಿಂದ 50 ಇರುವಾಗ ಅದರ ಉತ್ಪಾದಕ ರೈತನಿಗೆ ಸಿಗುವುದು ಕೇವಲ 8 ರಿಂದ 12 ರೂ. ಮಾತ್ರ. ಅಂದರೆ ಇದರ ನಾಲ್ಕು ಪಟ್ಟು ಲಾಭ ಬಂಡವಾಳಶಾಹಿಗೆ, ವ್ಯಾಪಾರಸ್ಥರಿಗೆ ಮತ್ತು ಮಧ್ಯವರ್ತಿಗಳಿಗೆ ಸೇರುತ್ತಿದೆ. ಉತ್ತು, ನಾಟಿಮಾಡಿ, ನಾಲ್ಕೈದು ತಿಂಗಳು ನೀರುಣಿಸಿ, ಕ್ರೀಮಿ ಕೀಟ ರೋಗಗಳಿಂದ ಕಾಪಾಡಿ ನಿದ್ದೆಗೆಟ್ಟು ಬೆಳೆ ತೆಗೆದರೆ ಕಡೆಗೆ ತಾನೂ ನೆಮ್ಮದಿಯಾಗಿ ಅನ್ನ ತಿನ್ನಲಾಗದ ಪರಿಸ್ಥಿತಿ. ಒಂದು ಮೂಟೆ ಮನೆ ಮನೆಮಂದಿಗಾಗಲಿ ಎಂದು ಮಾರದೆ ಉಳಿಸಿಕೊಂಡರೆ, ಮಾರಿದ್ದರಿಂದ ಬಂದ ಹಣ ಖರ್ಚನ್ನು ಸರಿದೂಗಿಸುವುದಿಲ್ಲವಲ್ಲ ಎಂಬ ಆತಂಕ. ಇತ್ತ ದೊಡ್ಡ ಪಟ್ಟಣಗಳಲ್ಲಿ “ಮಾಲ್” ಗಳ ಸಂಸ್ಕೃತಿ ಹೆಚ್ಚುತಿದೆ. ಇಂತಹ ಮಾಲುಗಳಲ್ಲಿ ಒಂದು ಪೊಪ್‌ಕಾರ್ನ್ ಪೊಟ್ಟಣವನ್ನು ಕೊಂಡುಕೊಂಡರೆ 80 ರಿಂದ 100 ರೂ. ಇದನ್ನು ತಯಾರಿಸಲೊ ನಾಲ್ಕು ಹಿಡಿ ಮೆಕ್ಕೆಜೋಳ ಬಳಸಿದ್ದರೆ ಹೆಚ್ಚು. ಆ ನಾಲ್ಕು ಹಿಡಿ ಮೆಕ್ಕೆ ಜೋಳವನ್ನು ಉತ್ಪಾದಕ ರೈತನಿಂದ ಖರೀದಿಸುವಾಗ ಒಂದೋ ಎರಡೊ ರೂಪಾಯಿ ಕೊಟ್ಟಿರುತ್ತಾರೆ ಅಷ್ಟೇ. ಇದಕ್ಕೊಂದು ತಾಜಾ ಉದಾಹರಣೆ; ಇತ್ತೀಚೆಗೆ ಮಧ್ಯವರ್ತಿಗಳೊಬ್ಬರು ನಮ್ಮ ಊರಿನಲ್ಲಿ ತೆಂಗಿನಕಾಯಿಯನ್ನು ಒಂದಕ್ಕೆ 3 ರೂಗೆ ಕೊಂಡುಕೊಂಡರು. ಆದರೆ ಬೆಂಗಳೂರಿನಲ್ಲಿ ಆ ತೆಂಗಿನಕಾಯಿಗೆ 10 ರಿಂದ 15 ರೂ. ಬೆಲೆಯಿದೆ. ತಮಾಷೆ ಏನೆಂದರೆ ಹತ್ತು ವರ್ಷದ ಹಿಂದೆಯೂ ರೈತರಿಂದ ತೆಂಗಿನಕಾಯಿ ಒಂದಕ್ಕೆ 3 ರೂ ಕೊಟ್ಟು ಖರೀದಿಸುತಿದ್ದರು. ರೈತರನನ್ನು ಈಗಲೂ ಅಮಾಯಕನನ್ನಾಗಿ ಇರಿಸಿದ್ದಾರೆ ಮಧ್ಯವರ್ತಿಗಳು. ಎಳನೀರಿನ ವ್ಯಾಪಾರದಲ್ಲೂ ಇದೇ ಧೋರಣೆ. ಇದ್ಯಾವುದರ ಅಂದಾಜು ಲೆಕ್ಕಾಚಾರ ತಿಳಿದಿಲ್ಲದ ರೈತ ಮಾತ್ರ ತನ್ನ ಬೆನ್ನೆಲುಬನ್ನು ಹುರಿಮಾಡಿಕೊಂಡು ತಲೆ ಬಗ್ಗಿಸಿ ದುಡಿಯುತ್ತಲೇ ಇದ್ದಾನೆ. ದೇಶದಲ್ಲಿ ಜಾಗತಿಕರಣ ಉದಾರೀಕರಣ ಯಾವುದೆ ಬಂದರೂ ರೈತಾರ ಉದ್ದಾರ ಮಾತ್ರ ಸಾಧ್ಯವಿಲ್ಲ ಎಂಬ ವ್ಯಾಕರಣ ಗೊತ್ತೆಯಿದೆ. ರಾಜ್ಯದಲ್ಲಿ ಆಡಳಿತ ಪಕ್ಷದಲ್ಲಿನ ಬಿಗುಮಾನದಿಂದ ಸರ್ಕಾರ ಸ್ಥಿರವಾಗಿಲ್ಲ; ರಾಷ್ಟ್ರಪತಿಯ ಆಯ್ಕೆಯಲ್ಲಿ ವಿವಿಧ ರಾಜಕೀಯ ಪಕ್ಷದ ದೊಂಬರಾಟ ನಡೆಯಿತಲ್ಲ; ಲಂಡನ್ ಒಲಂಪಿಕ್‌ನಲ್ಲಿ ಕ್ರೀಡಾಳುಗಳಿಗೆ ಲೈಂಗಿಕ ಸುರಕ್ಷಿತೆಗಾಗಿ ನಿರೋದ್ ಗಳನ್ನು ಇನ್ನಿಲ್ಲದಂತೆ ಹಂಚಿದ್ದಾರಲ್ಲ; ಕಾರ್ಗಿಲ್ ಯುದ್ಧ ಗೆದ್ದು ಜುಲೈ ಗೆ 13 ನೇ ವರ್ಷದ ವಿಜಯೋತ್ಸವ ಆಚರಿಸಿದೇವಲ್ಲ; ರಾಜೇಶ್ ಖನ್ನನ ಸಾವು ಅವನ ಮಹಿಳಾ ಅಭಿಮಾನಿಗಳಿಗೆ ಹೃದಯವಿದ್ರಾವಕ ಗಳಿಗೆ ಎಂದು ಟಿವಿ ಚಾನೆಲುಗಳು ಬಿತ್ತರಿಸಿದ್ದವಲ್ಲ; ಅಸ್ಸಾಂ ನಲ್ಲಿ ಎರಡು ಸಮುದಾಯದ ನಡುವೆ ಹತ್ತಿ ಉರಿದ ಭೀಕರ ಕಾಳಗ ಆನೇಕರನ್ನು ಆಹುತಿ ತೆಗೆದುಕೊಂಡಿತ್ತಲ್ಲ…… ಇವ್ಯಾವುದರ ಮೇಲೂ ಬೇರೆ ಉದ್ದಿಮೆಗಳಂತೆ ರೈತನು ಲಾಭ ನಷ್ಟಕ್ಕೆ ತಕ್ಕಡಿ ಹಿಡಿಯುವುದಿಲ್ಲ. ತಾನು ಬೆಳೆದ ಬೆಳೆಗೆ ತಕ್ಕಡಿ ಹಿಡಿಯುವಾಗಲೂ ಕೊಟ್ಟ ಕ್ರಯಕ್ಕೆ ಇಟ್ಟು ತೃಪ್ತನಾಗುತ್ತಾನೆ ರೈತ. ಈ ವರ್ಷ ಕರ್ನಾಟಕದಲ್ಲಿ ಬರದ ಛಾಯೆ ಹೆಚ್ಚಾಗಿಯೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವನ್ನು ಹೊಣೆಮಾಡಿ, ಪರಹಾರಕೊಡಿ ಅಥವಾ ಸಾಲಮನ್ನಾ ಮಾಡಿ ಎಂದು ಬೊಬ್ಬೆಯಿಟ್ಟು ಜವಾಬ್ಧಾರಿಯಿಂದ ತಪ್ಪಿಸಿಕೊಳ್ಳುವ ಜಾಣಕೋರನಲ್ಲ. ಅಷ್ಟಿಷ್ಟು ಮಳೆಯಾದರೆ ಸಾಕು ನೇಗಿಲು ಹೊತ್ತು ಹೊಲವನ್ನು ಉಳುವುದೇ ಧರ್ಮ ಎಂದು ಕಚ್ಚೆ ಬಿಗಿ ಮಾಡಿ ಹೋರಟುಬಿಡುತಾನೆ. ಇದೆಲ್ಲ ನೋಡುತ್ತಿದ್ದರೆ ರಾಷ್ಟ್ರಕವಿ ಕುವೆಂಪುರವರು “ನೇಗಿಲ ಯೋಗಿ” ಶೀರ್ಷಿಕೆಯಡಿ ರೈತನ ಮೇಲೆ ಬರೆದ ಕಾವ್ಯ ಸರ್ವಕಾಲಕ್ಕೂ ಒಪ್ಪುತ್ತಿದೆ. “ರಾಜ್ಯಗಳುದಿಸಲಿ ರಾಜ್ಯಗಳಲಿಯಲಿ ಹಾರಲಿ ಗದ್ದುಗೆ ಮುಕುಟಗಳು, ಮುತ್ತಿಗೆ ಹಾಕಲಿ ಸೈನಿಕರೆಲ್ಲ ಬಿತ್ತುಳುವುದನವ ಬಿಡುವುದೇ ಇಲ್ಲ” ಎನ್ನುವಾಗ ಮೈ ರೋಮಾಂಚನವಾಗುತ್ತದೆ]]>

‍ಲೇಖಕರು G

September 9, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಬ್  ಕಿ  ಬಾರ್  ಡೆಮೊಕ್ರಟಿಕ್  ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

ನನ್ನ ’ಎದೆಗೆ ಬಿದ್ದ ಅಕ್ಷರ’

ನನ್ನ ’ಎದೆಗೆ ಬಿದ್ದ ಅಕ್ಷರ’

ಡಾ.ಬಿ.ಆರ್.ಸತ್ಯನಾರಾಯಣ ಮೊನ್ನೆ ರಾತ್ರಿ ನನ್ನ ತೋಟದ ಮನೆಯಲ್ಲಿದ್ದೆ. ತುಂತುರು ಮಳೆ ಬೀಳುತ್ತಿತ್ತು. ಕರೆಂಟು ಮಾಯವಾಗಿತ್ತು. ಮರು ಓದಿಗೆಂದು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This