ನಮ್ಮ ಪುರಾಣದ ಸೂಪರ್ ಮ್ಯಾನ್ ಗಳು..

ಮನೆ ಮನೆಗೆ ಬರುವ ರಾಮಾಯಣ ಪಾತ್ರಗಳು

ಕನ್ನಡ ಜಾನಪದ

-ಸಿದ್ಧರಾಮ ಹಿರೇಮಠ

ಕೂಡ್ಲಿಗಿ ಪಟ್ಟಣದ ತುಂಬೆಲ್ಲ ಮನೆ ಮನೆಗಳಿಗೆ ಈಗ ರಾಮಾಯಣದ ಪಾತ್ರಗಳು ಸಂಚರಿಸುತ್ತಿವೆ. ಹನುಮಂತ, ರಾಕ್ಷಸಿ, ಜಾಂಬವಂತ, ರಾಮ, ಸೀತೆ ಮುಂತಾದ ಪಾತ್ರಗಳು ಸಜೀವವಾಗಿ ಮನೆಗಳ ಮುಂದೆ ಪ್ರತ್ಯಕ್ಷಗೊಂಡು ಪ್ರೇಕ್ಷಕರ ಮನ ತಣಿಸುತ್ತಿವೆ. ಇವರೇ ಹಗಲು ವೇಷಗಾರರು. ಮನೆಗಳಲ್ಲಿ ಟಿವಿ ಬಂದು ಮಕ್ಕಳೆಲ್ಲ ಸುಪರ್‌ಮ್ಯಾನ್, ಸ್ಪೈಡರ್‌ಮ್ಯಾನ್‌ಗಳ ಮುಂದೆ ಕುಳಿತಿರುವಾಗ, ನಮ್ಮದೇ ನೆಲದ ರಾಮಾಯಣದ ಕತೆಗಳನ್ನು ಕಿರಿಯರಿಂದ ಹಿರಿಯರವರೆಗೆ ಪರಿಚಯಿಸುತ್ತಿರುವ ಹಗಲು ವೇಷಗಾರರು ಸದ್ದಿಲ್ಲದೇ ನಮ್ಮ ಸಂಸ್ಕೃತಿಯ ಕುರುಹನ್ನು ಉಳಿಸುತ್ತ ಸಾಗಿದ್ದಾರೆ. ತಲೆತಲಾಂತರದಿಂದ ಒಂದೇ ವೃತ್ತಿಯನ್ನು ಅವಲಂಬಿಸಿ ಬಂದಂತಹ ವೃತ್ತಿಗಳಲ್ಲಿ ಹಗಲುವೇಷವೂ ಒಂದಾಗಿದೆ. ಹಗಲು ಹೊತ್ತಿನಲ್ಲಿ ವಿವಿಧ ವೇಷಗಳನ್ನು ಧರಿಸಿ, ಮನೆಮನೆಗಳಿಗೆ ತೆರಳಿ ರಂಜನೆಯನ್ನೊದಗಿಸಿ ಹೊಟ್ಟೆ ಹೊರೆಯುವ ಕಾಯಕ ಹಗಲು ವೇಷಗಾರರದು. ತಾಲೂಕಿನಾದ್ಯಂತ ವರ್ಷವಿಡೀ ಹಗಲುವೇಷ ಹಾಕಿ ಪೌರಾಣಿಕ ನಾಟಕಗಳ ತುಣುಕುಗಳನ್ನು ತೋರಿಸುತ್ತ ತಮ್ಮ ಹೊಟ್ಟೆ ಹೊರೆಯುತ್ತಾರೆ. ಇವರಿಗೆ ಯಾವುದೇ ರೀತಿಯ ವೇದಿಕೆ, ವಿದ್ಯುತ್, ಧ್ವನಿವರ್ಧಕದ ವ್ಯವಸ್ಥೆ ಬೇಕಾಗಿಲ್ಲ. ಬೀದಿಯಲ್ಲಿ, ಮನೆಗಳ ಮುಂದೆ ತಮ್ಮ ಕಲಾಪ್ರದರ್ಶನ ಮಾಡುವುದಷ್ಟೇ ಇವರಿಗೆ ಗೊತ್ತಿರುವುದು. ಇದು ಇವರಲ್ಲಿ ವಂಶಪಾರಂಪರ್ಯವಾಗಿ ಬಂದಿದ್ದು. ಮೂಲತ: ಇವರದು ತಾಲೂಕಿನ ನಾಣ್ಯಾಪುರವಾದರೂ ಅದನ್ನು ಬಿಟ್ಟು ಕೂಡ್ಲಿಗಿ ಸೇರಿ ೨೦ ವರ್ಷಗಳೇ ಕಳೆದಿವೆ. ತಮ್ಮ ಜನಾಂಗದ ಹಲವಾರು ಜನ ಬೇರೆ, ಬೇರೆಕಡೆ ಹೊರಟುಹೋಗಿದ್ದು, ತಾವು ಮಾತ್ರ ಕೂಡ್ಲಿಗಿಯಲ್ಲೇ ನೆಲೆಸಿರುವುದಾಗಿ ಜಂಬಣ್ಣ ಹೇಳುತ್ತಾನೆ. ಪ್ರತಿ ಗ್ರಾಮದಲ್ಲೂ ಇವರು ೬ ದಿನ ನೆಲೆ ನಿಲ್ಲುತ್ತಾರೆ. ೬ ದಿನ ಇವರು ವಿವಿಧ ವೇಷಗಳನ್ನು ಧರಿಸಿ ಪೌರಾಣಿಕ ಪಾತ್ರಗಳನ್ನು ಮನಮುಟ್ಟುವಂತೆ ಅಭಿನಯಿಸುತ್ತಾರೆ. ೬ನೇ ದಿನ ಮುಸ್ಲಿಂ ಜನಾಂಗದ ಪಾತ್ರವನ್ನು ಧರಿಸಿ, ಒಂದು ಚಲನಚಿತ್ರ ಗೀತೆಯನ್ನು ಅಳವಡಿಸಿರುತ್ತಾರೆ. ಪಾತ್ರಕ್ಕೆ ತಕ್ಕಂತೆ ವೇಷಭೂಷಣ, ಬಣ್ಣವನ್ನು ಹಚ್ಚಿಕೊಂಡು, ಅದಕ್ಕೆ ತಕ್ಕಂತೆ ನೃತ್ಯ, ಸಂಭಾಷಣೆಗಳನ್ನು ಹೇಳುವುದೂ ಇವರಿಗೆ ಕರಗತವಾಗಿರುತ್ತದೆ. ಸಂಭಾಷಣೆಗಳನ್ನು ತಮ್ಮ ಅಜ್ಜಂದಿರ ಕಾಲದಿಂದಲೂ ಬಂದ ಪುಸ್ತಕಗಳಿಂದ ಕಲಿಯುತ್ತೇವೆ ಎಂದು ತಿಳಿಸುತ್ತಾರೆ. ಕೂಡ್ಲಿಗಿ ಪಟ್ಟಣದ ಗುಡೇಕೋಟೆ ರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್ ಟೆಂಟ್‌ನಲ್ಲಿ ವಾಸವಾಗಿರುವ ಇವರಿಗೆ ಶಾಶ್ವತವಾದ ನೆಲೆ ದೊರೆತಿಲ್ಲ. ಇವರ ಮಕ್ಕಳಿಗಾಗಿಯೇ ಆಶ್ರಯ ಕಾಲೊನಿಯಲ್ಲಿ ಪ್ರಾಥಮಿಕ ಶಾಲೆಯೊಂದನ್ನು ತೆರೆಯಲಾಗಿದೆ. ಮಕ್ಕಳು ಶಾಲೆಗೆ ಹೋಗುತ್ತವೆ. ಇವರಿಗೆ ಇದೇ ಕಾಯಕ. ಪ್ರತಿ ಮನೆಯವರು ಎಷ್ಟು ಕೊಡುವರೋ ಅದನ್ನೇ ಸಂತೋಷದಿಂದ ಪಡೆದು ಮುಂದಿನ ಗ್ರಾಮಕ್ಕೆ ತೆರಳುತ್ತಾರೆ. ತಬಲ, ಹಾರ್ಮೋನಿಯಂ ಇವರ ಪಕ್ಕವಾದ್ಯಗಳು. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿಯವರ ವಚನಗಳು, ಶಿಶುನಾಳ ಶರೀಫರ ತತ್ವಪದಗಳು, ದಾಸರ ಕೀರ್ತನೆಗಳನ್ನೂ ಸುಮಧುರವಾಗಿ ಹಾಡುತ್ತಾರೆ. ಬೇರೆ ಯಾವ ಕಾಯಕವೂ ಗೊತ್ತಿರದ ಇವರು ಮನೆ ಮುಂದೆ ಬಂದಾಗ ಸಂತೋಷದಿಂದ ಕಾಣಿಕೆ ನೀಡಿ, ಅಷ್ಟನ್ನು ಮಾತ್ರ ಇವರು ಬಯಸುವುದು. ಈ ಬಾರಿ ಇವರು ಅಭಿನಯಿಸುತ್ತಿರುವುದು ಶೂರ್ಪನಖಿ ಗರ್ವಭಂಗ. ಗಜಲಂಕಿಣಿಯಾಗಿ ಕೆ.ವೀರೇಶ, ಆಂಜನೇಯನಾಗಿ ಡಿ.ಕೃಷ್ಣ, ರಾವಣನಾಗಿ ಜಂಬಣ್ಣ, ಜಾಂಬವಂತನಾಗಿ ದುರುಗಪ್ಪ ಅಭಿನಯಿಸುತ್ತಿದ್ದಾರೆ. ಇವರಿಗೆ ಪಕ್ಕವಾದ್ಯದವರಾದ ಹಾರ್ಮೋನಿಯಂನ್ನು ಕೆ.ಸೀತಾರಾಂ, ತಬಲ ಡಿ.ಜಂಬಣ್ಣ ನುಡಿಸುತ್ತಾರೆ. ನಾಯಕನಾಗಿ ಡಿ.ಈರಣ್ಣ ಇದ್ದಾರೆ. ಗ್ರಾಫಿಕ್‌ನಲ್ಲಿ ಸುಪರ್‌ಮ್ಯಾನ್, ಸ್ಪೈಡರ್‌ಮ್ಯಾನ್‌ಗಳನ್ನು ಮಕ್ಕಳಿಗೆ ತೋರಿಸುವುದಕ್ಕಿಂತಲೂ ಜೀವಂತ ಪಾತ್ರಗಳೇ ಕಣ್ಣೆದುರಿನಲ್ಲಿರುವುದನ್ನು ಮಕ್ಕಳಿಗೆ ತೋರಿದರೆ ಇನ್ನೂ ಒಳ್ಳೆಯದಲ್ಲವೇ?  ]]>

‍ಲೇಖಕರು G

September 17, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This