ನಮ್ಮ ಮಗುವಿಗೆ ಫಾರಿನ್ ಹೆಸರಿಟ್ಟಂತೆ ಭಾಸವಾಗುತ್ತಿತ್ತು…

ಡಿ ಜಿ ಮಲ್ಲಿಕಾರ್ಜುನ್ ಸುಮಾರು ಮೂವತ್ತು ವರ್ಷಗಳ ಹಿಂದೆ ನನ್ನ ತಂದೆ ಮನೆಗೆ ಒಂದು ಗ್ರಾಮಾಫೋನ್ ತಂದಿದ್ದರು. ಗ್ರಂಡಿಕ್ ಎನ್ನುವ ಜರ್ಮನ್ ಕಂಪನಿಯದ್ದು. ಆಗ ಅದಕ್ಕೆ ಒಂದೂವರೆ ಸಾವಿರ ಕೊಟ್ಟಿದ್ದರಂತೆ. ಸಿಕ್ಕಾಪಟ್ಟೆ ದೊಡ್ಡದಿತ್ತು. ಅದರ ಒಂದು ಭಾಗದಲ್ಲಿ ರೇಡಿಯೋ ಇದ್ದರೆ ಇನ್ನೊಂದು ಭಾಗದಲ್ಲಿ ಗ್ರಾಮಾಫೋನ್ ಇತ್ತು. ಒಮ್ಮೆಗೇ ಆರು ಪ್ಲೇಟ್ ಹಾಕಬಹುದಾಗಿತ್ತು. ಒಂದಾದ ನಂತರ ಒಂದು ಪ್ಲೇ ಆಗುತ್ತಿತ್ತು. ಬೆಳಿಗ್ಗೆ ಐದೂವರೆಗೆಲ್ಲಾ ನನ್ನಜ್ಜಿ ದೇವರ ಹಾಡುಗಳನ್ನು ಹಾಕುತ್ತಿದ್ದರು. ನಂತರ ನನ್ನಮ್ಮ ಆಗಿನ ಕಾಲದ ಕನ್ನಡ, ತೆಲುಗು ಹಾಗೂ ಹಿಂದಿ ಚಿತ್ರಗೀತೆಗಳನ್ನು ಹಾಕುತ್ತಿದ್ದರು. ಈಗಲೂ ಗ್ರಾಮಾಫೋನ್‌ನಲ್ಲಿ ಕೇಳಿದ ಹಾಡುಗಳನ್ನು ಕೇಳಿದಾಗ ಅಂದಿನ ದಿನಗಳು ನೆನಪಾಗುತ್ತವೆ. ಆ ಗ್ರಾಮಾಫೋನ್ ಪ್ಲೇಟುಗಳಲ್ಲಿ ಪುಟ್ಟ ಅಪರಿಚಿತ ಪ್ಲೇಟೊಂದಿತ್ತು. ಅದರಲ್ಲಿ ಕೇವಲ ಮ್ಯೂಜಿಕ್ ಮಾತ್ರ ಬರುತ್ತಿತ್ತು. ನನ್ನಮ್ಮನಿಗೆ ಇಷ್ಟವಾದ ಪ್ಲೇಟ್‌ಗಳಲ್ಲಿ ಅದೂ ಒಂದು. ಅದರ ಸಂಗೀತ ಎಲ್ಲರಿಗೂ ಇಷ್ಟವಾಗುತ್ತಿತ್ತು. ಅಮ್ಮ ಅದನ್ನು “ಕಮ್ ಸೆಪ್ಟೆಂಬರ್” ಎಂದು ಕರೆಯುತ್ತಿದ್ದರು. ನನಗೆ ಸರಿಕಾಣುತ್ತಿರಲಿಲ್ಲ. ನಮ್ಮ ಮಗುವಿಗೆ ಫಾರಿನ್ ಹೆಸರಿಟ್ಟಂತೆ ಭಾಸವಾಗುತ್ತಿತ್ತು. ಮುಂದೆ ಟೇಪ್‌ರೆಕಾರ್ಡರ್ ಬಂದು ಗ್ರಾಮಾಫೋನ್ ಮೇಲೆ ಕುಳಿತುಕೊಂಡಿತು. ಗ್ರಾಮಾಫೋನ್ ಬಳಕೆಯೇ ನಿಂತುಹೋಯಿತು. ಟೀವಿ ಕೂಡ ಜೀವನದ ಭಾಗವಾಯಿತು. ಅದರೊಂದಿಗೆ ವಿಸಿಆರ್ ಕೂಡ ಆಗಮಿಸಿತು. ಕಾಲಾಯ ತಸ್ಮೈ ನಮಃ. ಮಾಧುರಿ ದೀಕ್ಷಿತ್ ಮತ್ತು ಸಂಜಯ್ ಕಪೂರ್ ನಟಿಸಿರುವ “ರಾಜ” ಎನ್ನುವ ಚಿತ್ರ ೧೯೯೫ ರಲ್ಲಿ ಬಿಡುಗಡೆಯಾಯಿತು. ಆ ಸಮಯದಲ್ಲಿ ಟೀವಿಯಲ್ಲಿ ಆ ಚಿತ್ರದ ಹಾಡೊಂದು ಬಂತು. “ನಜ್‌ರೇ ಮಿಲೀ… ದಿಲ್ ದಡ್‌ಕಾ… ಮೇರೆ ದಡ್‌ಕನ್ ನೇ ಕಹಾ… ಲವ್ ಯೂ ರಾಜಾ…” ಎಂಬ ಹಾಡು ಬರುತ್ತಿದ್ದಂತೆಯೇ ನನ್ನಜ್ಜಿ, “ಅರೇ.. ಕಮ್ ಸೆಪ್ಟೆಂಬರ್” ಅಂದರು. ಅಡುಗೆ ಮನೆಯಿಂದ ಹಾಡು ಕೇಳಿಸಿಕೊಂಡು ನನ್ನಮ್ಮನೂ ಹೊರಗೆ ಬಂದು, “ಕಮ್ ಸೆಪ್ಟೆಂಬರ್ ಮ್ಯೂಜಿಕ್ಕಲ್ವಾ?” ಅಂದರು. ಕಮ್ ಸೆಪ್ಟೆಂಬರ್‌ನ ಟ್ಯೂನ್ ಬಳಸಿದ್ದರಿಂದಾಗಿ ಹಿಂದಿ ಬರದಿದ್ದರೂ ಎಂಬತ್ತನಾಲ್ಕು ವರ್ಷದ ನನ್ನಜ್ಜಿಗೆ ಈಗಲೂ ಈ ಹಿಂದಿ ಹಾಡೆಂದರೆ ಬಹಳ ಇಷ್ಟ! ನನಗೆ ಹೆಣ್ಣು ಕೊಟ್ಟ ಮಾವ ಫಿಲಂ ಪ್ರೇಮಿ. ಬೆಂಗಳೂರಿನ ಮೊಟ್ಟಮೊದಲ ಥಿಯೇಟರ್ ಪ್ಲಾಜಾ(ಈಗಿಲ್ಲ ಬಿಡಿ!) ದಲ್ಲಿ ಮೊಟ್ಟಮೊದಲ ಚಿತ್ರದಿಂದ ಎಲ್ಲಾ ಚಿತ್ರಗಳನ್ನೂ ನೋಡಿದಂತಹ ಭೂಪರು. ಅವರ ಬಳಿ ಮಾತಾಡುವಾಗ ಈ ’ಕಮ್ ಸೆಪ್ಟೆಂಬರ್’ ವಿಚಾರ ಬಂತು. ಆಗವರು, “ಅದೊಂದು ಅದ್ಭುತವಾದ ಚಿತ್ರ. ಸಿಡಿ ಸಿಕ್ಕರೆ ನೋಡಿ. ನನಗೂ ತಂದುಕೊಡಿ” ಅಂದರು. ಅದೊಂದು ಆಲ್ಬಮ್ ಅಥವಾ ಹಾಡಿನ ಸಾಲಿರಬಹುದೆಂದು ಭಾವಿಸಿದ್ದ ನನಗೆ ಚಿತ್ರವೆಂದು ತಿಳಿದು ಖುಷಿ ಮತ್ತು ಕುತೂಹಲ ಎರಡೂ ಉಂಟಾಯಿತು. ಅಂತೂ “ಕಮ್ ಸೆಪ್ಟೆಂಬರ್” ಚಿತ್ರದ ಡಿವಿಡಿ ಕೊಳ್ಳುವಲ್ಲಿ ಯಶಸ್ವಿಯಾದೆ. ವಿಚಿತ್ರವೆಂದರೆ ಇಷ್ಟೆಲ್ಲಾ ಆಗುವಷ್ಟರಲ್ಲಿ ಅಷ್ಟೊಂದು ಅದರ ಸಂಗೀತವನ್ನು ಇಷ್ಟಪಡುತ್ತಿದ್ದ ನನ್ನ ತಾಯಿಯೇ ಇಲ್ಲ ಈ ಚಿತ್ರವನ್ನು ನೋಡಲು. ವಯಸ್ಸಾದ ನನ್ನಜ್ಜಿಗೆ ಅರ್ಥವಾಗದ ಇಂಗ್ಲೀಷ್ ಚಿತ್ರಕ್ಕಿಂತ ಯಾವಾಗಲಾದರೊಮ್ಮೆ ಈ ಸಂಗೀತದ ಸೊಲ್ಲು ಕೇಳಿಸಿದರೆ ಸಾಕು, ದಿಲ್ ಖುಷ್!! * * * * * “ಹೆಣ್ಣು ಗಂಡಿನಿಂದ ಗೌರವವನ್ನು ಬಯಸುತ್ತಾಳೆ. ಹೆಣ್ಣು ಸುಲಭವಾಗಿ ಗಂಡಿಗೆ ದೊರಕಿದರೆ ಆಕೆಯನ್ನು ಆತ ಗಂಭೀರವಾಗಿ ಪರಿಗಣಿಸುವುದಿಲ್ಲ… ನಿಶ್ಚಿತಾರ್ಥ, ಮದುವೆ, ಮನೆ ಮತ್ತು ಮಕ್ಕಳು ಎಂಬುದೆಲ್ಲ ಬೇಕೆನ್ನುವುದಿದ್ದರೆ ಹೆಣ್ಣು ತನ್ನ ಆದರ್ಶಗಳನ್ನು ಉಚ್ಛಸ್ಥಾಯಿಯಲ್ಲಿಟ್ಟುಕೊಳ್ಳಬೇಕು… ಶಯನಗೃಹವೆಂಬುದು ಮದುವೆಯ ದಿರಿಸಿನಂತೆ. ಗಂಡು ಮದುವೆಗೆ ಮುಂಚೆ ಆ ದಿರಿಸಿನಲ್ಲಿ ಹೆಣ್ಣನ್ನು ನೋಡಬಾರದು…” ಇಂಥಹ ಸಾರ್ವಕಾಲಿಕವಾದ ಮಾತುಗಳನ್ನು ಆಡುವುದು ೧೯೬೧ರಲ್ಲಿ ಬಿಡುಗಡೆಯಾದ “ಕಮ್ ಸೆಪ್ಟೆಂಬರ್” ಚಿತ್ರದ ನಾಯಕ ರಾಬರ್ಟ್. ಹಾಗಂತ ಇದೇನೂ ನೀತಿ ಬೋಧನೆಯ ಚಿತ್ರವಲ್ಲ. ಪ್ರೇಮ, ಪ್ರೀತಿಯ ಅಪ್ಪಟ ಹಾಸ್ಯಮಯ ಚಿತ್ರ. ಚಿತ್ರದ ನಾಯಕ ರಾಬರ್ಟ್ ಟಾಲ್ಬೋಟ್ ಒಬ್ಬ ಲಕ್ಷಾಧೀಶ್ವರ ಅಮೇರಿಕನ್. ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳು ಇಟಲಿಯ ನದಿ ದಂಡೆಯಲ್ಲಿರುವ ತನ್ನ ಬಂಗಲೆಯಲ್ಲಿ ತನ್ನ ರೋಮನ್ ಗೆಳತಿ ಲೀಸಾಳೊಂದಿಗೆ ಕಳೆಯುವುದು ರೂಢಿ. ಎಲ್ಲ ಎಡವಟ್ಟುಗಳ ಪ್ರಾರಂಭವಾಗುವುದು ಆತ ಇದ್ದಕ್ಕಿಂದ್ದಂತೆ ಜುಲೈ ತಿಂಗಳಿನಲ್ಲಿ ಆಗಮಿಸಿದಾಗ! ವರ್ಷದ ಕೇವಲ ಒಂದು ತಿಂಗಳಿನ ಅವಧಿಯ ಸಂಬಂಧದ ಅನಿಶ್ಚಿತತೆಯನ್ನು ಮನಗಂಡು ಲೀಸಾ ಒಬ್ಬ ಇಂಗ್ಲೀಷಿನವನನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದಾಗ ರಾಬರ್ಟ್‌ನ ಫೋನ್ ಬರುತ್ತದೆ. ಅವನ ಜೇನಿನಂತೆ ಮಧುರವಾದ ಪ್ರೀತಿಬೆರೆತ ದನಿಗೆ ಕರಗಿ ಮದುವೆ ದಿರಿಸನ್ನು ಕಿತ್ತೊಗೆದು ಓಡುತ್ತಾಳೆ. ಇತ್ತ ಅವನ ಬಂಗಲೆಯನ್ನು ನೋಡಿಕೊಳ್ಳುವ ಮೋರಿಸ್ ಒಡೆಯನಿರದ ಬಂಗಲೆಯನ್ನು ವಸತಿಗೃಹವನ್ನಾಗಿಸಿರುತ್ತಾನೆ! ಸೆಪ್ಟೆಂಬರಿನಲ್ಲಿ ಬರುವ ರಾಬರ್ಟ್ ಜುಲೈನಲ್ಲಿ ಬಂದಾಗ ಅವನ ಪಜೀತಿ ಹೇಳತೀರದು. ವಸತಿಗೃಹವೆಂದು ತಿಳಿದು ಉಳಿದಿರುವ ಆರು ಹದಿಹರೆಯದ ಹುಡುಗಿಯರು ಜೊತೆಗೊಬ್ಬ ವಾರ್ಡನ್‌ರನ್ನು ಸಂಭಾಳಿಸಲು ಅವರ ಬಳಿಯೊಂದು ಸುಳ್ಳು ಯಜಮಾನನ ಬಳಿಯೊಂದು ಸುಳ್ಳು… ಹೀಗೆ ಸುಳ್ಳಿನ ಸರಮಾಲೆ ಬೆಳೆದು ಸಿಕ್ಕಿಬೀಳುತ್ತಾನೆ. ಅಷ್ಟರಲ್ಲಿ ಲೀಸಾಳ ಆಗಮನವಾಗುತ್ತದೆ. ತನ್ನ ಮತ್ತು ಲೀಸಾಳ ನಡುವೆ ಶಿವಪೂಜೆಯಲ್ಲಿ ಆಗಮಿಸಿದ ಕರಡಿಗಳಂತಿರುವ ಹುಡುಗಿಯರನ್ನು ಆಚೆ ಕಳಿಸಲು ಮೋರಿಸ್‌ಗೆ ಆಜ್ಞಾಪಿಸುತ್ತಾನೆ. ವಸತಿಗೃಹವೆಂದು ತಿಳಿದು ಉಳಿದಿರುವ ಹುಡುಗಿಯರನ್ನು ಹೊರಕಳಿಸಬೇಕೆಂದಿರುವಾಗ, “ಪ್ರಣಯ ಪಕ್ಷಿ”ಗಳಂತೆ ನಾವಿನ್ನು ಹಾರಾಡಬಹುದು ಎಂದು ಕನಸುಕಾಣುತ್ತಾ ರಾಬರ್ಟ್ ಬಿಚ್ಚಿದ ಶಾಂಪೇನ್ ಬಾಟಲ್‌ನ ಬಿರಡೆ ತುಳಿದು ಅವರ ವಾರ್ಡನ್ ಬಿದ್ದು ಲೆಕ್ಕಾಚಾರವೆಲ್ಲಾ ಉಲ್ಟಾ ಹೊಡೆಯುತ್ತದೆ. ನಾಲ್ವರು ಮೆಡಿಕಲ್ ಕಾಲೇಜಿನ ಹುಡುಗರ ಆಗಮನದೊಂದಿಗೆ ಪರಿಸ್ಥಿತಿ ಬಿಗಡಾಯಿಸುತ್ತದೆ. ಮೆಡಿಕಲ್ ವಿದ್ಯಾರ್ಥಿ ಟೋನಿ ಮತ್ತು ರಾಬರ್ಟ್‌ನ ಮನೆಯಲ್ಲಿ ಉಳಿದಿರುವ ಸ್ಯಾಂಡಿ ಎಂಬ ಹುಡುಗಿಯ ನಡುವೆ ಪ್ರೇಮಾಂಕುರ, ರಾಬರ್ಟ್ ಮತ್ತು ಲೀಸಾಳ ನಡುವೆ ಪ್ರೇಮ ನಿವೇದನೆ ಇವುಗಳ ನಡುವೆ ಸೂತ್ರದಾರನಂತೆ ಕೆಲಸ ಮಾಡುವ ಮೋರಿಸ್ ನಮ್ಮನ್ನು ತುದಿಗಾಲಿನಲ್ಲಿ ನಿಂತು ಆನಂದಿಸುವಂತೆ ಮಾಡುತ್ತಾರೆ. ಚಿತ್ರವನ್ನು ನೋಡುವ ನಮಗೇ ಇಷ್ಟು ಆನಂದವಾಗುವುದಾದರೆ ಚಿತ್ರ ತಂಡಕ್ಕೆ ಹೇಗಿರಬೇಕೆಂದು ನೋಡಿದರೆ, ಚಿತ್ರದ ಶೂಟಿಂಗ್ ಮುಗಿದು ೧೦ ದಿನಕ್ಕೆಲ್ಲಾ ಇದರಲ್ಲಿ ಯುವ ಪ್ರೇಮಿಗಳಾಗಿ ನಟಿಸಿದ್ದ ಬಾಬ್ಬಿ ಡ್ಯಾರಿನ್ ಮತ್ತು ಸ್ಯಾಂಡ್ರಾ ವಿವಾಹವಾದರಂತೆ! ಚಿತ್ರದುರ್ಗಕ್ಕೆ ಹೋದಾಗ ಈಗಲೂ ನಾವು ನಾಗರಹಾವು ಚಿತ್ರದಲ್ಲಿ ಆರತಿ ಇಲ್ಲಿ ಕುಣಿದದ್ದು, ವಿಷ್ಣುವರ್ಧನ್ ಇಲ್ಲಿ ನಿಂತಿದ್ದು ಎಂದೆಲ್ಲಾ ಮಾತನಾಡುವಂತೆ “ಕಮ್ ಸೆಪ್ಟೆಂಬರ್” ಚಿತ್ರದ ಇಟಲಿಯ ಪೋರ್ಟೋಫಿನೋ ಬಳಿಯಿರುವ ಬಂಗಲೆಯು ಶೂಟಿಂಗ್ ಮಾಡಿದ್ದರಿಂದಾಗಿ ಪ್ರಸಿದ್ದಿ ಪಡೆದು ಪ್ರವಾಸಿ ಸ್ಥಳವಾಗಿದೆ. ಇಂಥ ಚಂದದ ಚಿತ್ರವನ್ನು ನಮ್ಮ ಬಾಲಿವುಡ್‌ನವರು ರೀಮೇಕ್ ಮಾಡಿದ್ದಾರೆ. ೧೯೮೦ರಲ್ಲಿ “ಏಕ್ ಬಾರ್ ಕಹೋ” ಎಂಬ ಈ ಚಿತ್ರದಲ್ಲಿ ಬಿಸ್ವಜಿತ್ ಮತ್ತು ಶಬಾನಾ ಅಜ್ಮಿ ನಟಿಸಿದ್ದರು.]]>

‍ಲೇಖಕರು avadhi

July 7, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

3 ಪ್ರತಿಕ್ರಿಯೆಗಳು

 1. Mahendra

  Mr Mallikarjun, it is nice contribution which deserves high appreciation. It recalls many reminiscences of old days, which appear in a different light now, which can be appostraophed as ‘sweet old days’! Reading the article I was immersed deeply in my past with many mixed feelings.
  thanks to an unknown friend. – mahendra, Berlin, 07.07.2010

  ಪ್ರತಿಕ್ರಿಯೆ
 2. malathi S

  thanks for revoking old memories…cos they are the sweetest. . Though i have watched this movie years before , now i want to watch it my teenage girls.
  🙂
  ms

  ಪ್ರತಿಕ್ರಿಯೆ
 3. Iynanda Prabhu

  ಪ್ರಿಯ ಮಲ್ಲಿಕಾರ್ಜುನ್,
  Grundig ತಯಾರಿಕೆಯ ಆ ಸಿಕ್ಕಾಪಟ್ಟೆ ದೊಡ್ಡ ಗ್ರಾಮಾಫೋನನ್ನು Radiogram ಎಂದು ಕರೆಯುತ್ತಿದ್ದರು. Juke boxನಲ್ಲಿರುವಂತೆ ಈ ಗ್ರಾಮಾಫೋನ್ಇನಲ್ಲಿ record plateಗಳನ್ನು ಜೋಡಿಸಿಟ್ಟರೆ ಯಂತ್ರವೇ ಅವುಗಳಲ್ಲಿ ಒಂದೊಂದನ್ನು ಎತ್ತಿ ಹಾಡಿಸಿ ವಾಪಸ್ ಇಡುತ್ತದೆ. Juke boxನಲ್ಲಿ ಯಾವ sequenceನಲ್ಲಿ ಬೇಕಾದರೂ recordಗಳನ್ನು ಹಾಡಿಸಬಹುದಾದ programming facility ಇದೆ.
  ಬೆಂಗಳೂರಿನ ಮಹಾತ್ಮಾಗಾಂಧಿ ರಸ್ತೆಯ ಬಳಿಯಿರುವ Koshi’sನಲ್ಲಿ Juke Box ಇತ್ತು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: