ನಲ್ಮೆಯಿಂದ ನಟರಾಜು : ಎಲ್ಲರ ಅದೃಷ್ಟಗಳು ಅಷ್ಟು ಚೆನ್ನಾಗಿರುವುದಿಲ್ಲ ಅಲ್ಲವೇ?

ಎಲ್ಲರ ಅದೃಷ್ಟಗಳು ಅಷ್ಟು ಚೆನ್ನಾಗಿರುವುದಿಲ್ಲ ಅಲ್ಲವೇ?? – ಎಸ್ ಎಂ ನಟರಾಜು ಕೋಲ್ಕತ್ತಾದ ನನ್ನ ಹಾಸ್ಟೆಲ್ ನ ರೂಮಿನಲ್ಲಿ ಒಂದು ದಿನ ಮಲಗಿರುವಾಗ ಪಕ್ಕದ ರೂಮಿನ ಹುಡುಗ ಸಂಕಟಪಡುತ್ತಿರುವುದು ನನಗೆ ಅಸ್ಪಷ್ಟವಾಗಿ ಕೇಳಿಸುತ್ತಿತ್ತು. ಆಗ ಸಮಯ ರಾತ್ರಿ ಸುಮಾರು ಎರಡು ಗಂಟೆಯಾಗಿತ್ತು ಅನಿಸುತ್ತೆ. ಅವನು ರೂಮಿನಲ್ಲಿ ಒಬ್ಬನೇ ಇದ್ದ. ನಾನೂ ಸಹ ರೂಮಿನಲ್ಲಿ ಒಬ್ಬನೇ ಇದ್ದೆ. ಅವನ ಸಂಕಟ ನನ್ನನ್ನು ನಿದ್ದೆಯಿಂದ ಏಳುವಂತೆ ಮಾಡಿತ್ತು. ಒಂದೆರಡು ನಿಮಿಷ ಕಳೆಯುತ್ತಿದ್ದಂತೆ ಅವನಿಗೆ ಏನೋ ನಿಜಕ್ಕೂ ತೊಂದರೆ ಇರಬಹುದು ಎನಿಸಿ ಎದ್ದು ಅವನ ರೂಮಿನ ಬಾಗಿಲು ತಟ್ಟಿದ್ದೆ. “ಸೌಮಿಕ್ ಬಾಗಿಲು ತೆಗೆ.. ಆರ್ ಯೂ ಓಕೆ?” ಎಂಬ ನನ್ನ ದನಿಗೆ “ಐ ಆಮ್ ಓಕೆ. ಒಂದತ್ತು ನಿಮಿಷ ಆದ ಮೇಲೆ ಬಾಗಿಲು ತೆಗೀತೀನಿ” ಎಂದು ಅವನು ತೊದಲುತ್ತಾ ನುಡಿದಿದ್ದ. ಏನಾಯಿತೋ ಏನೋ ಎಂದುಕೊಂಡು ನಾನು ಅವನ ರೂಮಿನ ಹೊರಗಡೆ ಒಂದಷ್ಟು ಹೊತ್ತು ನಿಂತಿದ್ದೆ. “ಏನಾದರು ಪ್ರಾಬ್ಲಂ ಆದರೆ ನನ್ನನ್ನು ಕೂಗು” ಎಂದವನೇ ತುಂಬಾ ಚಳಿ ಇದ್ದುದರಿಂದ ನನ್ನ ರೂಮಿನ ಒಳ ಹೊಕ್ಕಿದ್ದೆ. ರೂಮಿನ ಒಳ ಹೊಕ್ಕಿದ ನಂತರ ಅವನು ಬಾಗಿಲು ತೆರೆದ ಸದ್ದಾಯಿತು. ಬಾಗಿಲು ತೆರೆದ ಸದ್ದಿನೊಂದಿಗೆ ವಾಂತಿಯ ಸದ್ದೂ ಆಯಿತು. ಏನಾಯಿತು ಎಂದು ಎದ್ದು ಬೇಗನೆ ಬಾಗಿಲು ತೆರೆದು ಹೊರ ಬಂದಾಗ ಹೊರಗೆ ಆತ ವಾಂತಿ ಮಾಡಿ ಸುಸ್ತಾಗಿ ನಿಂತಿರುವುದು ಕಂಡಿತು. ಒಂಚೂರು ತೂರಾಡುವಂತೆ ಕಾಣುತ್ತಿದ್ದ ಅವನನು ಹಿಡಿದು ಅವನ ರೂಮಿನ ಮಂಚದ ಮೇಲೆ ಕುಳ್ಳರಿಸಿ ಕುಡಿಯಲು ನೀರು ಕೊಟ್ಟಿದ್ದೆ. ನೀರು ಕುಡಿದು ನಿರಾಳನಾದವನಂತೆ ಕಂಡವನನ್ನು ಒಂದಷ್ಟು ಹೊತ್ತು ಮಂಚದ ಮೇಲೆ ಹಾಗೆಯೇ ಮಲಗಿರು ಎಂದಿದ್ದೆ. ತಲೆ ಸುತ್ತುತ್ತಿದೆ ಎಂದವನು ಹಾಸಿಗೆಯ ಮೇಲೆ ಮಲಗಿದ. ನನ್ನ ರೂಮಿನಲಿ ಹಾಲಿನ ಪೌಡರ್ ಇತ್ತು. ಪುಟ್ಟ ಎಲೆಕ್ಟ್ರಿಕ್ ಇಮ್ಮರ್ಸನ್ ರಾಡ್ ಉಪಯೋಗಿಸಿ ಒಂದು ಲೋಟದಲ್ಲಿ ನೀರು ಬಿಸಿ ಮಾಡಿ ಹಾಲಿನ ಪೌಡರ್ ಮಿಕ್ಸ್ ಮಾಡುತ್ತಿರುವಾಗ ಆತ ಮೆಲ್ಲನೆ ಎದ್ದು ಬಂದು ತನ್ನ ರೂಮಿನಿಂದ ನನ್ನ ರೂಮು ತಲುಪಿದ್ದ. ನಾನು ಬಿಸಿ ಮಾಡಿ ಕೊಟ್ಟ ಹಾಲನ್ನು ಕುಡಿಯುತ್ತಾ “ಏನಾಯಿತು?” ಎಂಬ ನನ್ನ ಪ್ರಶ್ನೆಗೆ “ಮೈ ಕೈ ನೋವಿನ ಮಾತ್ರೆಯ ಜೊತೆ ಮತ್ತೊಂದು ಮಜಲ್ ರಿಲಾಕ್ಸೆಂಟ್ ಮಾತ್ರೆ ನುಂಗಿದ್ದೆ. ಎರಡು ಮಾತ್ರೆಗಳನು ಜೊತೆಯಲಿ ತೆಗೆದುಕೊಳ್ಳಬಾರದಿತ್ತು ಅನಿಸುತ್ತೆ. ರಿಯಾಕ್ಷನ್ ಆಗಿಬಿಟ್ಟಿತು.” ಎಂದವನೇ ತನಗಾದ ಭಯಾನಕ ಅನುಭವವನ್ನು ಹೇಳತೊಡಗಿದ. “ಸಂಜೆಯಿಂದ ಮೈ ಕೈ ತುಂಬಾ ನೋಯುತ್ತಿತ್ತು. ಅದಕ್ಕೆ ಆ ಎರಡು ಮಾತ್ರೆಗಳನ್ನು ನುಂಗಿದ್ದೆ. ಮಾತ್ರೆ ನುಂಗಿ ಒಂದರ್ಧ ಗಂಟೆಯಾಗಿತ್ತು ಅನಿಸುತ್ತೆ ತಲೆ ಸುತ್ತೋಕೆ ಶುರು ಆಯ್ತು. ಮಂಚದ ಮೇಲೆ ಮಲಗಿದ್ರೆ ನಾನು ಮಲಗಿರೋ ಮಂಚ ರೂಮಿನಲ್ಲಿ ಫ್ಯಾನಿನ ಹಾಗೆ ಜೋರಾಗಿ ತಿರುಗುತ್ತಾ ಇದೆಯೇನೋ ಅನಿಸ್ತಾ ಇತ್ತು. ಹೇಗೋ ಕಷ್ಟ ಪಟ್ಟು ಎದ್ದು ವಾಂತಿ ಮಾಡಿಬಿಟ್ಟೆ. ಆಮೇಲೆ ಒಂಚೂರು ನಿರಾಳ ಅನಿಸಿತ್ತು.” ಎಂದು ತನ್ನ ಮಾತು ಮುಗಿಸಿ ಅವನಿಗೆ ಮಾಡಿದ ಪುಟ್ಟ ಸಹಾಯಕ್ಕೆ ಥ್ಯಾಂಕ್ಸ್ ಅಂತ ಹೇಳಿ ತನ್ನ ರೂಮಿಗೆ ಹೊರಟುಬಿಟ್ಟಿದ್ದ. “ಏನಾದ್ರು ಪ್ರಾಬ್ಲಂ ಆದರೆ ಜಸ್ಟ್ ಕಾಲ್ ಮಿ” ಎಂದು ಹೇಳಿ ಅವನಿಗೆ ಗುಡ್ ನೈಟ್ ಹೇಳಿದ್ದೆ. ಆತ ನೋಡಲು ತುಂಬಾ ಸ್ಪುರದ್ರೂಪಿ. ಸುಮ್ಮನೆ ಹಾಗೆ ಎರಡು ಮಾತ್ರೆಗಳನ್ನು ಜೊತೆಯಲ್ಲಿ ನುಂಗಿಬಿಡಲು ಅವನು ದಡ್ಡನೇನಲ್ಲ. ವೃತ್ತಿಯಲ್ಲಿ ಅವನು ವೈದ್ಯ. ಜೊತೆಗೆ ಒಳ್ಳೆಯ ಬ್ರೈಟ್ ಸ್ಟೂಡೆಂಟ್ ಸಹ. ಹಾಸ್ಟೆಲ್ ಗಳಲ್ಲಿ ಎಂತೆಂತಹ ಹುಡುಗರನ್ನೋ ನೋಡಿದ್ದ ನನಗೆ ಅವನ ಆ ಸ್ಥಿತಿ ಕಂಡು ಅವನು ಆಕಸ್ಮಾತ್ ಯಾವುದಾದರೂ ಡ್ರಗ್ ತೆಗೆದುಕೊಂಡಿದ್ದನಾ ಎಂದು ನನಗೆ ಅನುಮಾನ ಬಂದಿತ್ತು. ಯಾಕೆಂದರೆ ಕೆಲವು ಹಾಸ್ಟೆಲ್ ಗಳಲ್ಲಿ ಡ್ರಗ್ ಅಡಿಕ್ಟ್ಸ್ ಗಳು ಕಾಣಸಿಗುವುದು ಅಚ್ಚರಿಯೇನಲ್ಲ. ಉದಾಹರಣೆಗೆ ನಮ್ಮ ಹಾಸ್ಟೆಲ್ ನಲ್ಲಿ ಒಬ್ಬ ಹುಡುಗನ ರೂಮಿನಲ್ಲಿ ಒಮ್ಮೆ ಕೆಮ್ಮಿನ ಸಿರಪ್ಪಿನ ಬಾಟಲುಗಳ ರಾಶಿ ರಾಶಿಯನು ಮೊದಲಿಗೆ ಕಂಡಿದ್ದ ನನಗೆ ಪಾಪ ಆ ಹುಡುಗನಿಗೆ ಏನೋ ಕೆಮ್ಮಿರಬಹುದು ಎಂದೆನಿಸಿತ್ತು. ಆದರೆ ಅದನ್ನು ಆತ ಡ್ರಗ್ ತರಹ ಉಪಯೋಗಿಸುತ್ತಾನೆ ಎಂದು ಕೇಳಿ ನಾನು ಶಾಕ್ ಆಗಿದ್ದ ದಿನ ಇನ್ನೂ ನೆನಪಿದೆ. ನಾವು ಒಮ್ಮೊಮ್ಮೆ ಡಾಕ್ಟರ್ ಹತ್ತಿರ ಹೋಗಬೇಕಾಗುತ್ತೆ ಎಂದು ಸಣ್ಣ ತಲೆ ನೋವಿಗೆ, ಮೈ ಕೈ ನೋವಿಗೆ, ಹೊಟ್ಟೆ ನೋವಿಗೆ ಕೈಗೆ ಸಿಕ್ಕ ಮಾತ್ರೆ ನುಂಗಿಬಿಡುತ್ತೇವೆ. ಹಾಗೆಯೇ ನನ್ನ ಪಕ್ಕದ ರೂಮಿನ ಹುಡುಗ ಕೂಡ ಮಾತ್ರೆಗಳನ್ನು ನುಂಗಿದ್ದ. ಸ್ವತಃ ಡಾಕ್ಟರ್ ಆಗಿದ್ದ ಕಾರಣ ಒಂದೆರಡು ಮಾತ್ರೆ ಹೆಚ್ಚಿಗೆ ನುಂಗಿದ್ದ ಎನಿಸುತ್ತೆ. ಅವನ ಅದೃಷ್ಟ ಚೆನ್ನಾಗಿತ್ತು ಜಾಸ್ತಿ ಹೆಚ್ಚು ಕಡಿಮೆ ಆಗದೆ ಆತ ಬದುಕುಳಿದಿದ್ದ. ಪಕ್ಕದ ರೂಮಿನ ಆ ಹುಡುಗನನ್ನು ಒಂದೆರಡು ವರ್ಷದಿಂದ ನೋಡಿದ್ದ ನನಗೆ ಅವನು ಯಾಕೋ ಡ್ರಗ್ ಅಡಿಕ್ಟ್ ಆಗಿರಲಾರ ಎನಿಸಿತ್ತು. ಅವನು ಡ್ರಗ್ ಅಡಿಕ್ಟ್ ಆಗಿರಲಾರ ಎಂದು ತಿಳಿಯಲು ಸುಮಾರು ದಿನಗಳೇ ಹಿಡಿಯಿತು. ಆ ದಿನಗಳಲ್ಲೇ ಈ ಕೆಳಗಿನ ಘಟನೆಯೂ ನಡೆದು ಹೋಯಿತು. ಒಂದೂರಿನಲ್ಲಿ ಒಬ್ಬ ಹುಡುಗನಿದ್ದ. ನೋಡಲು ತುಂಬಾ ಚೆನ್ನಾಗಿದ್ದ. ಚಿಕ್ಕ ವಯಸ್ಸಿಗೆ ಅವನ ತಂದೆ ಅವರ ಮನೆ ಬಿಟ್ಟು ಹೊರಟು ಹೋಗಿದ್ದರು. ಮನೆಯಲ್ಲಿ ತಾಯಿ, ತಂಗಿ ಮತ್ತು ಆತ ಇದ್ದರು. ತಾಯಿ ಒಂದೆರಡು ಹಸು ಕಟ್ಟಿ ಇರೋ ತುಂಡು ಭೂಮೀಲಿ ವ್ಯವಸಾಯ ಮಾಡಿ ಮನೆ ನಡೆಸಿದರೆ ಆತ ಬೆಂಗಳೂರಿನ ಪ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆ ಪ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗಲು ನಿತ್ಯ ತನ್ನೂರಿನಿಂದ ಸೈಕಲ್ ನಲ್ಲಿ ಪಕ್ಕದ ಪೇಟೆ ತಲುಪಿ ಅಲ್ಲಿಂದ ಟ್ರೈನ್ ಹಿಡಿದು ಬೆಂಗಳೂರು ತಲುಪುತ್ತಿದ್ದ. ಸಂಜೆ ಕೆಲಸ ಮುಗಿಸಿ ಟ್ರೈನ್ ಪಯಣ ಮಾಡಿ ಬೆಂಗಳೂರಿನಿಂದ ಆ ಪೇಟೆ ತಲುಪಿ ಮತ್ತೆ ಸೈಕಲ್ ನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದ. ಅವನು ಹೋಗುತ್ತಿದ್ದ ಪ್ಯಾಕ್ಟರಿಗೆ ಅವನ ಊರಿನ ಕೆಲವು ಹುಡುಗರೂ ಮತ್ತು ಪಕ್ಕದ ಊರಿನ ಕೆಲವು ಹುಡುಗ ಹುಡುಗಿಯರೂ ಕೆಲಸಕ್ಕೆ ಹೋಗುತ್ತಿದ್ದರು. ಆ ಹುಡುಗಿಯರ ಗುಂಪಿನಲ್ಲಿ ಆಕೆಯೂ ಇದ್ದಳು. ಆತ ನೋಡಲು ತುಂಬಾ ಚೆನ್ನಾಗಿದ್ದ ಕಾರಣ ಪಕ್ಕದ ಊರಿನ ಆ ಹುಡುಗಿ ಆತನನ್ನು ಪ್ರೀತಿಸಲು ಶುರು ಮಾಡಿದ್ದಳು. ಸಂಜೆ ಪ್ಯಾಕ್ಟರಿಯ ಕೆಲಸ ಮುಗಿಸಿ ಊರಿಗೆ ವಾಪಾಸ್ಸಾಗುವಾಗ ಅವಳನ್ನು ಪಕ್ಕದ ಊರಿನ ಅವಳ ಮನೆವರೆಗೂ ತಲುಪಿಸುವ ಹೊಸ ಜವಾಬ್ದಾರಿ ಸಹ ಅವನ ಹೆಗಲಿಗೆ ಹೊತ್ತುಕೊಂಡಿದ್ದ. ನೀಲಗಿರಿ ತೋಪುಗಳ ನಡುವೆ ಮಣ್ಣಿನ ರಸ್ತೆಗಳಲ್ಲಿ ಅವಳನ್ನು ಮುಂದೆ ಕುಳ್ಳರಿಸಿಕೊಂಡು ಮೂರ್ನಾಲ್ಕು ವರ್ಷ ಸೈಕಲ್ ತುಳಿದ ಮೇಲೆ ಒಂದು ದಿನ ಅವಳ ಜೊತೆ ಸಂಸಾರ ಹೂಡುವ ಯೋಚನೆಯೂ ಬಂದುಬಿಟ್ಟಿತು. ಮೊದಮೊದಲಿಗೆ ಆ ಹುಡುಗನ ಮನೆಯವರಿಂದ ಒಂಚೂರು ವಿರೋಧ ಬಂದರೂ ನಂತರ ಎಲ್ಲಾ ಸರಿ ಹೋಗಿ ಅವನ ತಂಗಿಯ ಮದುವೆಯ ನಂತರ ಆತನ ಮದುವೆಯೂ ಆಗಿ ಹೋಯಿತು. ಪ್ರೀತಿಸಿ ಮದುವೆಯಾಗಿದ್ದ ಆತ ಒಟ್ಟಿನಲ್ಲಿ ಖುಷಿಯಾಗಿದ್ದ. ಆ ಹುಡುಗನನ್ನು ಒಂದೆರಡು ಸಲ ಮಾತನಾಡಿಸಿದ್ದೆನಾದರೂ ಅವನ ಪ್ರೇಮಕತೆಯನ್ನು ಗೆಳೆಯನೊಬ್ಬನಿಂದ ಕೇಳಿ ತಿಳಿದುಕೊಂಡಿದ್ದೆ. ದೂರದ ಕೋಲ್ಕತ್ತಾಕ್ಕೆ ಬಂದ ಮೇಲೆ ಒಮ್ಮೆ ಆ ಗೆಳೆಯನ ಜೊತೆ ಮಾತನಾಡುತ್ತಾ ಆ ಹುಡುಗನ ಕುರಿತು ಆ ಹುಡುಗ ಹೇಗಿದ್ದಾನೆ ಎಂದು ಕೇಳಿದ್ದೆ. “ಮೊನ್ನೆ ತೀರಿಕೊಂಡುಬಿಟ್ಟರೀ” ಎಂದಿದ್ದ ನನ್ನ ಗೆಳೆಯ. ಅವನ ಮಾತು ಕೇಳಿ ನನಗೆ ಶಾಕ್ ಆಗಿತ್ತು. ನನ್ನ ಗೆಳೆಯ ಮಾತು ಮುಂದುವರೆಸುತ್ತಾ “ಅದೇನೋ ಔಷಧಿ ತಿಂದು ಸತ್ತೋದ ಕಣ್ರೀ” ಎಂದು ಹೇಳಿದ್ದ. “ಲವ್ ಮ್ಯಾರೇಜ್ ಎಲ್ಲಾ ಆಗಿತ್ತಲ್ರಿ ಮತ್ತೆ ಸಾಯೋವಂತಹುದ್ದು ಏನಾಗಿತ್ತು” ಎಂದು ಗೆಳೆಯನನ್ನ ಪ್ರಶ್ನಿಸಿದ್ದೆ. “ಅವನಿಗೆ ಅದೇನೋ ಉಷಾರಿರಲಿಲ್ಲ. ಡಾಕ್ಟರ್ ಔಷಧಿ ಕೊಟ್ಟಿದ್ರು. ಎರಡು ತರಹದ ಮಾತ್ರೆ ಒಟ್ಟಿಗೆ ತೊಗೋಬಾರ್ದಿತ್ತಂತೆ. ಅವನಿಗೆ ಗೊತ್ತಿಲ್ದೆ ತಿಂದುಬಿಟ್ಟಿದ್ದ. ಆಮೇಲೆ ಹೆಚ್ಚು ಕಡಿಮೆ ಆಗಿ ಆಸ್ಪತ್ರೆಗೆ ತೊಗೊಂಡ್ ಹೋಗೋವಷ್ಟರಲ್ಲಿ ಸತ್ತೋದ” ಎಂದು ಗೆಳೆಯ ಆ ಹುಡುಗನ ಸಾವಿಗೆ ಹೇಳಿದ ಕಾರಣ ಕೇಳಿ ನನಗೆ ಇನ್ನೂ ಶಾಕ್ ಆಗಿತ್ತು. ಪ್ರೀತಿಸಿ ಮದುವೆಯಾಗಿ ವಿಧಿಯಾಟದಲ್ಲಿ ಅತಿ ಚಿಕ್ಕ ವಯಸ್ಸಿಗೆ ವಿಧವೆಯಾದ ಅವನ ಪುಟ್ಟ ಹೆಂಡತಿ ಮತ್ತು ಇರೋ ಒಬ್ಬನೇ ಮಗನನ್ನು ಕಳೆದುಕೊಂಡ ಒಂಟಿ ಜೀವಿಯಾದ ಅವನ ತಾಯಿ ಕಣ್ಣ ಮುಂದೆ ಬಂದರು. ಅವನ ಅಗಲಿಕೆಯಿಂದ ಆ ಎರಡು ಹೆಣ್ಣು ಜೀವಿಗಳಿಗೆ ಅದೆಷ್ಟು ನೋವಾಗಿರಬಹುದು ಎನ್ನುವುದ ನೆನೆಸಿಕೊಂಡು ತುಂಬಾ ಬೇಸರವಾಗಿತ್ತು.]]>

‍ಲೇಖಕರು G

August 22, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

 1. D.RAVI VARMA

  ನಟರಾಜ್ ಮನಕಲಕುವ ಬರಹ … ಈ ಸಾವು ನನ್ನನ್ನು ತುಂಬಾ ತುಂಬಾ ಕಾಡುತ್ತಿದೆ.

  ಪ್ರತಿಕ್ರಿಯೆ
 2. Dr,D,T,KRISHNA MURTHY.

  ನನ್ನ ವೈದ್ಯಕೀಯ ವೃತ್ತಿ ಜೀವನದ ಸುಮಾರು ಮೂವತ್ತೈದು ವರ್ಷಗಳಲ್ಲಿ,ಔಷಧಿಗಳಿಂದ ಆಗುವ ಸಾಕಷ್ಟು ಅಡ್ಡ ಪರಿಣಾಮಗಳನ್ನು ನೋಡಿದ್ದೇನೆ.ಯಾವುದೇ ಔಷಧಿ ಅಡ್ಡ ಪರಿಣಾಮಬೀರಬಹುದು.”TIZANIDINE” ಎನ್ನುವ muscle relaxantನಿಂದ ಕೆಲವರಿಗೆ ಸಿಕ್ಕಾಪಟ್ಟೆ ತಲೆ ತಿರುಗುತ್ತದೆ.ನಮ್ಮ ದೇಶದಲ್ಲಿ ಆಗುವ ಔಷಧಿಗಳ ದುರುಪಯೋಗದಷ್ಟು ಬೇರೆಲ್ಲೂ ಆಗುವುದಿಲ್ಲವೆನಿಸುತ್ತದೆ.ಸುಮಾರು ಮೂವತ್ತು ವರ್ಷಗಳ ಹಿಂದೆ ಒಬ್ಬನಿಗೆ tetracyclin capsule ನುಂಗಿದ್ದಕ್ಕೆ laryngeal edema ಆಗಿ ಉಸಿರಾಡುವುದೇ ಕಷ್ಟವಾಗಿತ್ತು.ಸಕಾಲದಲ್ಲಿ ಅವನಿಗೆ ವೈದ್ಯಕೀಯ ನೆರವು ನೀಡಿದ್ದರಿಂದ ಆ ವ್ಯಕ್ತಿ ಬದುಕುಳಿದ.ನನ್ನ ಸಂಬಂಧಿಯೋಬ್ಬರು ಯಾರೋ ಫ್ರೀ ಸ್ಯಾಂಪಲ್ ಕೊಟ್ಟರು ಅಂತ ಕ್ಯಾಲ್ಶಿಯಂ ಮತ್ತು ವಿಟಾಮಿನ್ ಮಾತ್ರೆಗಳನ್ನು ನುಂಗಿ ಮೈ ಕೈ ಎಲ್ಲಾ ಊದಿಕೊಂಡು ಅವಸ್ಥೆ ಪಟ್ಟರು. ಆದ್ದರಿಂದ ಸ್ನೇಹಿತರೆ,ಯಾವುದೇ ಮಾತ್ರೆಗಳನ್ನು ವೈದ್ಯರ ಸಲಹೆ ಇಲ್ಲದೆ ಉಪಯೋಗಿಸಬೇಡಿ.ಸಣ್ಣ ,ಪುಟ್ಟ ತೊಂದರೆಗಳಿಗೆ ಆದಷ್ಟೂ ಔಷಧಿ ತೆಗೆದು ಕೊಳ್ಳದಿರುವುದೇ ಒಳಿತು.ಅವಶ್ಯಕತೆ ಇದ್ದರೆ ಮಾತ್ರ ಸೂಕ್ತ ವೈದ್ಯಕೀಯ ಸಲಹೆಯೊಂದಿಂಗೆ ಔಷಧಿಗಳನ್ನು ಸೇವಿಸಿ.ಯಾವುದೇ ಔಷಧಿ ಅಡ್ಡ ಪರಿಣಾಮ ಬೀರಬಹುದು ಎನ್ನುವುದು ಸದಾ ನೆನಪಿರಲಿ.

  ಪ್ರತಿಕ್ರಿಯೆ
 3. PRASHANTH.P. KHATAVAKAR

  ರೂಮ್ ಅಲ್ಲಿದ್ದ ಹುಡುಗ ಎನಾದ .. ಎರಡು ಮೂರು ಸರಿ ಓದಿದೆ ಸರ್.. ಕಥೆಯಲ್ಲಿ ಮುಂದೆ ಬೇರೆ ಕಥೆ ಸೇರಿದೆ .. ಆ ಹುಡುಗನ ಸಮಸ್ಯೆ ಮತ್ತು ಆರೋಗ್ಯದ ವಿವರಣೆ , ಮುಂದೇನಾಯಿತು ಎಂಬುದು ಎಲ್ಲಿದೆ .. ?

  ಪ್ರತಿಕ್ರಿಯೆ
 4. PRASHANTH.P. KHATAVAKAR

  ಅದು ಮೊದಲೆಲ್ಲಾ ಎಲ್ಲದಕ್ಕೂ ಡಾಕ್ಟರ್ ಬಳಿ ಹೋಗುವ , ಕೇಳುವ ಅಭ್ಯಾಸವಿತ್ತು .. ಕಾಲ ಬದಲಾದಂತೆ “ಪ್ರಥಮ ಚಿಕಿತ್ಸಾ ಪೆಟ್ಟಿಗೆ” ಅಂತಾ ಶುರುವಾದಗಿಂದ ಮಾತ್ರೆಗಳ ಸೇರಿಸಿಕೊಂಡು , ಯಾವಾಗ ಬೇಕೆನಿಸಿದಲ್ಲಿ ತೊಗೊಳ್ಳುವ ಅಭಾಸ್ಯ ಕೆಲವರು ಮಾಡಿಕೊಂಡಿದ್ದಾರೆ .. ಅದನ್ನು ಬಿಡಬೇಕು .. ಸರಿಯಾಗಿ ಪ್ರಥಮ ಚಿಕಿತ್ಸೆ ಎಂದರೆ ಏನು ಅಂತಾ ಮೊದಲು ತಿಳಿಯಬೇಕು .. ಬೆಳಗ್ಗೆ ಮಳೆಯಲ್ಲಿ ನೆನೆದೆ , ಮಧ್ಯಾಹ್ನ ಐಸ್ ತಿಂದೆ ಅದಕ್ಕೆ ಕೆಮ್ಮು ಶೀತ ನೆಗಡಿ ಅಂತಾ ಒಂದು ಮಾತ್ರೆ , ತಲೆ ನೋವು ಅಂತಾ ಮತ್ತೊಂದು , ಬಸ್ ಟ್ರೈನ್ ಜರ್ನಿ ಸುಸ್ತಾಗುತ್ತೆ ಅಂತಾ ಇನ್ನೊಂದು ಮಾತ್ರೆ .. ಹೀಗೆ ಎಲ್ಲಾ FIRST AID BOX ಅಲ್ಲಿ ಇಡೋದು ಬಿಡಬೇಕು .. ಎಷ್ಟೋ ಜನ ಈ ಒಂದು ಕೆಟ್ಟ ಅಭ್ಯಾಸ ಇಟ್ಟಿರೋದು ನೋಡಿದ್ದೇವೆ .. ಸರಿಯಾದ ಮಾಹಿತಿ ಇಲ್ಲದೇ ಯಾವುದೇ ಮಾತ್ರಗಳ ಬಳಕೆ ಮಾಡಬಾರದು .. ಮತ್ತು ಬೇರೆ ಯಾರಿಗೂ ಸಲಹೆ ಕೊಡುವುದು ಅಥವಾ ಮಾತ್ರೆ ಹಂಚುವುದು ಮಾಡಬಾರದು … 🙂

  ಪ್ರತಿಕ್ರಿಯೆ
 5. sumathi hegde

  ಆ ಹುಡುಗನ ಕಥೆ ಮಾತ್ರ ನಿಜಕ್ಕೂ ದುರದೃಷ್ಟಕರ…. ಮಾತ್ರೆಗಳ ಉಪಯೋಗ ಕೆಲವೊಮ್ಮೆ ಹೇಗೆ ಅಡ್ಡ ಪರಿಣಾಮಕ್ಕೆ ದಾರಿ ಎಂಬುದನ್ನು ಉತ್ತಮವಾಗಿ ಬಿಂಬಿಸಿದ್ದೀರ…ಧನ್ಯವಾದಗಳು….

  ಪ್ರತಿಕ್ರಿಯೆ
 6. Santhosh

  ದೇವರು ನಮಗೆ ಹುಟ್ಟಿದಾಗಲೇ ಕೊಡುವ ಅತಿ ದೊಡ್ಡ ವರವೆಂದರೆ ಅದು ರೋಗ ನಿರೋಧಕ ಶಕ್ತಿ.
  ಇತ್ತೀಚೆಗೆ ಜನಗಳು ಇದನ್ನು ಅರ್ಥ ಮಾಡಿಕೊಳ್ಳದೇ ಚಿಕ್ಕ ತಲೆನೋವು, ದಣಿವು ಎಲ್ಲಕ್ಕೂ ಒಂದೊಂದು ಮಾತ್ರೆ ನುಂಗುವುದನ್ನು ರೂಢಿ ಮಾಡಿಕೊಂಡು
  ಪ್ರಕೃತಿದತ್ತ ನಿರೋಧಕ ಶಕ್ತಿಯನ್ನೇ ಕಾಲ ಕ್ರಮೇಣ ಹಾಳುಮಾಡಿಕೊಳ್ಳುತ್ತಾರೆ.
  ಏನೇ ಮಾಡಿದರೂ ಅದಕ್ಕೆ ಸೂಕ್ತ ಪರಿಣಿತರ ಸಲಹೆ ಅತ್ಯವಶ್ಯ ಎನ್ನುವುದನ್ನು ಎಲ್ಲರೂ ಮನಗಾಣಬೇಕು.
  ಚೆನ್ನಾಗಿದೆ ಬರಹ!!

  ಪ್ರತಿಕ್ರಿಯೆ
 7. Raghunandan K

  ಆರೋಗ್ಯದ ಸುಖಕ್ಕಾಗಿ ಅರಿವಿಲ್ಲದೆ ಜೀವ ಕಳೆದುಕೊಳ್ಳುವ ದೌರ್ಭಾಗ್ಯ…
  ಕಾಡುವ ಬರಹಕ್ಕಾಗಿ ಧನ್ಯವಾದ..

  ಪ್ರತಿಕ್ರಿಯೆ
 8. Mohan V Kollegal

  ಈ ಸಂಚಿಕೆಯಲ್ಲಿ ಭಾವಪೂರ್ಣ ಮತ್ತು ಸುಂದರ ಲೇಖನದೊಂದಿಗೆ ಒಂದು ಸಂದೇಶವಿದೆ… ಚೆನ್ನಾಗಿದೆ ನಟಣ್ಣ…:)

  ಪ್ರತಿಕ್ರಿಯೆ
 9. Nataraju S M

  ಎಂದಿನಂತೆ ನಿಮ್ಮ ಮೆಚ್ಚುಗೆಯ ನುಡಿಗಳಿಗೆ ತುಂಬು ಹೃದಯದ ಧನ್ಯವಾದಗಳು..

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: