ನಲ್ಮೆಯಿಂದ ನಟರಾಜು : ದೆಹಲಿಯಲ್ಲಿ ಒಂದು ದಿನ..

ದೆಹಲಿಯಲ್ಲಿ ಒಂದು ದಿನ..

ಗೆಳೆಯರು ಯಾರಾದರು ಕೆಲಸಕ್ಕೆ ಅರ್ಜಿ ಹಾಕು. ಕೆಲಸಕ್ಕೆ ಸೇರಿ ಸೆಟಲ್ ಆಗು ಎಂದರೆ ನಾನು ನಕ್ಕು ಸುಮ್ಮನಾಗುತ್ತಿದ್ದೆ. ನಮ್ಮ ಗುರುಗಳು ಡೇಲ್ ಕಾರ್ನೆಗಿಯವರು ಹೇಳುವಂತೆ “ಕೆಲಸಕ್ಕೆ ಸೇರೋದು ಮತ್ತು ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳೋದು ಜೀವನದ ಅತಿ ಮುಖ್ಯವಾದ ನಿರ್ಧಾರಗಳು”. ಯಾಕೆಂದರೆ ಈ ಎರಡರ ಜೊತೆ ಜೀವನವಿಡೀ ನಾವು ಬದುಕಬೇಕಾಗುತ್ತೆ ಅಂತ ಕಾರ್ನೆಗಿ ಹೇಳಿದ್ದಾರೆ. ಯಾಕೋ ಈ ಎರಡು ವಿಷಯಗಳ ಕುರಿತು ಒಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಅಂದರೆ ನಂಗೆ ಒಂಚೂರು ಕಷ್ಟಾನೆ ಆಗುತ್ತೆ. ಕಳೆದ ವರ್ಷ ಇನ್ನೇನು ಪಿಎಚ್ ಡಿ ಮುಗಿಯುತ್ತಲ್ಲ ಅನ್ನೋ ಧೈರ್ಯದ ಮೇಲೆ ನೋಡೋಣ ಎಂದು ಒಲ್ಲದ ಮನಸ್ಸಿನಿಂದಲೇ ಫೆಲೋಶಿಫ್ ಒಂದಕ್ಕೆ ಅರ್ಜಿ ಸಲ್ಲಿಸಿದ್ದೆ. ಅಚ್ಚರಿ ಎಂಬಂತೆ ಮೂರ್ನಾಲ್ಕು ತಿಂಗಳ ನಂತರ ಸಂದರ್ಶನ ಪತ್ರ ಬಂದಿತ್ತು. ಆ ಸಂದರ್ಶನದ ಕಾರಣ ಕೋಲ್ಕತ್ತಾದಿಂದ ದೆಹಲಿಗೆ ಪಯಣ ಬೆಳೆಸಬೇಕಿತ್ತು. ತಕ್ಷಣಕ್ಕೆ ರೈಲ್ವೆ ಟಿಕೆಟ್ ಬೇಕು ಎಂದರೆ ಭಾರತದ ಬೇರೆ ರಾಜ್ಯಗಳಲ್ಲಿ ಬೇಕಾದರೆ ಟಿಕೆಟ್ ದೊರೆತುಬಿಡುತ್ತವೆ ಆದರೆ ಕೋಲ್ಕತ್ತಾದಲ್ಲಿ ರೈಲಿನ ಟಿಕೆಟ್ ಅನ್ನು ಮುಂಗಡವಾಗಿ ಬುಕ್ಕಿಂಗ್ ರೂಪದಲ್ಲಿ ಪಡೆಯೋದು ತುಂಬಾ ಕಷ್ಟ. ಅಲ್ಲಿ ಇಲ್ಲಿ ಬ್ರೋಕರ್ ಗಳನ್ನು ಹಿಡಿದು ಬುಕ್ಕಿಂಗ್ ಮಾಡಿಸಲು ಒಂದಷ್ಟು ಹರ ಸಾಹಸ ಮಾಡಿದೆನಾದರೂ ಕಡಿಮೆ ಸಮಯದಲ್ಲಿ ದೆಹಲಿ ತಲುಪುವ ರೈಲುಗಳೆಲ್ಲಾ ಬುಕ್ ಆಗಿದ್ದ ಕಾರಣ ಆದದ್ದು ಆಗಲಿ ಎಂದು ಒಂಚೂರು ಸುತ್ತಿ ಬಳಸಿ ಪಯಣಿಸುವ ರೈಲೊಂದರಲ್ಲಿ ಇಂಟರ್ ನೆಟ್ ನಲ್ಲಿಯೇ ಟಿಕೆಟ್ ಬುಕ್ ಮಾಡಿಕೊಂಡಿದ್ದೆ.
ನಾನು ದೆಹಲಿಗೆ ಸಂದರ್ಶನಕ್ಕಾಗಿ ಹೋಗುತ್ತಿದ್ದುದು ನನ್ನ ಸಹಪಾಠಿ ಸೇರಿದಂತೆ ಯಾಕೋ ನಮ್ಮ ಲ್ಯಾಬಿನ ಯಾರಿಗೂ ಇಷ್ಟವಿಲ್ಲದಿರುವಂತೆ ಕಂಡಿತ್ತು. ಹೆಚ್ಚಿನವರಿಗೆ ಹೊಟ್ಟೆಕಿಚ್ಚಾಗಿತ್ತು ಅನಿಸುತ್ತೆ. ಅವರ ಮುಖ ನೋಡಿದಾಗ ಇವನಿಗೆ ಈ ಫೆಲೋಶಿಫ್ ಬರಬಾರದು ಅಂತ ಅವರೆಲ್ಲಾ ಪ್ರಾರ್ಥಿಸುತ್ತಾ ಕುಳಿತಿರುವಂತೆ ನನಗೆ ಭಾಸವಾಗುತ್ತಿತ್ತು. ಆದರೂ ನಿಗಧಿತ ದಿನದಿಂದು ಲಗ್ಗೇಜ್ ಪ್ಯಾಕ್ ಮಾಡಿಕೊಂಡು ಹೋಗಿ ಟ್ರೈನಿನಲ್ಲಿ ಕುಳಿತ್ತಿದ್ದೆ. ನಾನು ಕುಳಿತ್ತಿದ್ದ ಬೋಗಿಯಲ್ಲಿದ್ದ ನನ್ನ ಸಹ ಪ್ರಯಾಣಿಕರು ಕೋಲ್ಕತ್ತಾದವರೇ ಆಗಿದ್ದರು. ರಾಜಸ್ಥಾನದ ಯಾವುದೋ ಪುಟ್ಟ ಊರಿನಲ್ಲಿ ಮಿಲಿಟರಿಯಲ್ಲಿರುವ ಮಗನ ನೋಡಲು ಅವರು ಹೋಗುತ್ತಿದ್ದರು. ಅವರು ರಾತ್ರಿಯ ಊಟಕ್ಕೆ ಏನೇನೋ ತಿಂಡಿಗಳನ್ನು ರೆಡಿ ಮಾಡಿಕೊಳ್ಳುತ್ತಿದ್ದರು. ಬೆಂಗಾಳಿಗಳು ರೈಲಿನಲ್ಲಿ ಹೋಗುವಾಗ ಹೊರಗಡೆಯ ಊಟವನ್ನು ಸಾಮಾನ್ಯವಾಗಿ ತಿನ್ನುವುದಿಲ್ಲ. ಮನೆಯಿಂದ ಕಡ್ಲೆ ಪುರಿ, ಚೋಚೋ, ನೀರಿನಲ್ಲಿ ನೆನೆಸಿರೋ ಕಡ್ಲೆ ಕಾಳು, ಸೌತೆಕಾಯಿ, ಈರುಳ್ಳಿ, ಮೆಣಸಿನಕಾಯಿ, ಟೋಮ್ಯಾಟೋ, ಸಾಸಿವೆ ಎಣ್ಣೆ ಎಲ್ಲವನ್ನು ತಂದಿರುತ್ತಾರೆ. ಅವನ್ನೆಲ್ಲಾ ಬೆರೆಸಿದರೆ ಅವರ ಊಟ ರೆಡಿಯಾಗುತ್ತೆ. ಜೊತೆಗೆ ಬ್ರೆಡ್, ಬಿಸ್ಕತ್ ಮತ್ತು ಬಾಳೇಹಣ್ಣುಗಳ ಪೊಟ್ಟಣಗಳೂ ಸಹ ಅವರ ಬ್ಯಾಗಿನಲ್ಲಿರುತ್ತವೆ. ಅವುಗಳ ತಿಂದು ಹೇಗೋ ರೈಲಿನಲ್ಲಿ ಪಯಣಿಸಿಬಿಡುವ ಬೆಂಗಾಳಿಗಳು ಒಂತರಾ ಜಿಪುಣರು. 🙂
ರೈಲಿನಲ್ಲಿ ಪಯಣಿಸುವಾಗ ಕೆಲವರು ಸಹ ಪ್ರಯಾಣಿಕರ ಜೊತೆ ತುಂಬಾ ಆತ್ಮೀಯರಂತೆ ನಟಿಸಿ ಹಣ್ಣಿನಲ್ಲೋ, ಬಿಸ್ಕತ್ ನಲ್ಲೋ, ಕೂಲ್ ಡ್ರಿಂಕ್ಸ್ ನಲ್ಲೋ, ಊಟದಲ್ಲೋ ಮತ್ತು ಬರುವ ಔಷಧಿ ಬೆರೆಸಿಬಿಡುತ್ತಾರೆ. ಅಂತಹ ಔಷಧಿಗಳ ತಿಂದು ಪ್ರಜ್ಞೆ ತಪ್ಪಿದವರು ರೈಲಿನಲ್ಲೇ ಸತ್ತೋಗಿಬಿಡುವ ಘಟನೆಗಳು ಸಹ ಬಿಹಾರದ ರೈಲುಗಳಲ್ಲಿ ಘಟಿಸಿವೆ. ಆದ ಕಾರಣವೋ ಏನೋ ಅಪರಿಚಿತರೊಡನೆ ಕೋಲ್ಕತ್ತಾ ಕಡೆಯವರು ಮಾತನಾಡಲು ಒಂಚೂರು ಹಿಂದೆ ಮುಂದೆ ನೋಡುತ್ತಾರೆ. ಮೊದಲ ದಿನದ ಪಯಣದಲ್ಲಿ ನನ್ನೊಡನೆ ಮಾತನಾಡಲು ಒಂಚೂರು ಹಿಂದೆ ಮುಂದೆ ನೋಡಿದ್ದ ವಯಸ್ಸಾಗಿರುವ ಆ ಬೆಂಗಾಳಿ ದಂಪತಿಗಳು ಅವರಿಗೆ ಸರಿಯಾಗಿ ಹಿಂದಿ ಬಾರದ ಕಾರಣ ಮಧ್ಯೆ ಮಧ್ಯೆ ಮಾರನೆಯ ದಿನ ನನ್ನ ಜೊತೆ ಬೆಂಗಾಳಿಯಲ್ಲಿ ಅದೂ ಇದೂ ಕೇಳಲು ಶುರು ಮಾಡಿದ್ದರು. ಮಾರ್ಗದುದ್ದಕ್ಕೂ ಅದೂ ಇದೂ ಮಾತನಾಡುತ್ತಾ ಅವರೊಡನೆ ಒಂದಷ್ಟು ಸಮಯ ಕಳೆದಿದ್ದೆ. ಅವರ ಜೊತೆ ಮಾತನಾಡುವಾಗಲೇ ಯಮುನಾ ನದಿಯ ದಂಡೆಯ ಮೇಲಿರುವ ತಾಜ್ ಮಹಲ್ ನೋಡಿದ್ದೆ. ಖುಷಿಯಾಗಿ ಅವರಿಗೂ ತಾಜ್ ಮಹಲ್ ತೋರಿಸಿದ್ದೆ. ಹಿರಿಯ ಜೀವಿಗಳು ಅದ ನೋಡಿ ಖುಷಿಪಟ್ಟಿದ್ದರು. ರೈಲು ಯಮುನಾ ನದಿಯನ್ನು ದಾಟುತ್ತಿದ್ದಂತೆ ಆಗ್ರಾದ ಕೋಟೆ ಕಾಣಿಸಿತ್ತು. ಎತ್ತರವಾದ ಕೋಟೆ ಮುಗಿಯುತ್ತಿದ್ದಂತೆ ಹೊರಗಡೆ ಪ್ಲಾಸ್ಟಿಂಗ್ ಮಾಡದ ಸಾಲು ಸಾಲು ಮನೆಗಳು ಆಗ್ರಾದ ತುಂಬೆಲ್ಲಾ ಇರುವಂತೆ ಭಾಸವಾಗಿತ್ತು. ಒಂದಷ್ಟು ಮನೆಗಳ ಮಸೀದಿಗಳ ಫೋಟೋ ತೆಗೆದಿದ್ದೆ. ನನ್ನೊಡನೆ ಪಯಣಿಸುತ್ತಿದ್ದ ಆ ಇಬ್ಬರು ಹಿರಿಯರ ಫೋಟೋ ಸಹ ತೆಗೆದಿದ್ದೆ. ಮನೆಯ ಮುಂದೆ ಆರಾಮಾಗಿ ಕುರಿತ ಮುದುಕಿಯೋ, ನಿಧಾನವಾಗಿ ಚಲಿಸುತ್ತಿರುವ ರೈಲಿನೆಡೆಗೆ ಅಚ್ಚರಿಯ ಕಣ್ಣುಗಳ ಬಿಟ್ಟು ನೋಡುತ್ತಾ ದೂರದಿಂದಲೇ ಕೈ ಬೀಸುತ್ತಿರುವ ಹುಡುಗರೋ, ರೈಲ್ವೆ ಹಳಿ ದಾಟುತ್ತಿರುವ ಮೇಕೆಯೋ, ಏನೇನೋ ಕಣ್ಣ ಮುಂದೆ ಬಂದಷ್ಟೇ ವೇಗದಲ್ಲಿ ಮರೆಯಾಗುತ್ತಾ ಹೋಗಿದ್ದವು. ಅಲ್ಲಿ ಇಲ್ಲಿ ಒಂದಷ್ಟು ಹೊತ್ತು ನಿಲ್ಲಿಸಿದ್ದ ಕೊನೆಗೂ ರೈಲು ದೆಹಲಿ ತಲುಪಿದಾಗ ರಾತ್ರಿ 12 ಗಂಟೆಯಾಗಿತ್ತು. ಆ ಹಿರಿಯರಿಗೆ ಒಂದಷ್ಟು ನೀರಿನ ಬಾಟಲ್ ಗಳ ಖರೀದಿಸಿ ಕೊಟ್ಟು ಬೈ ಬೈ ಹೇಳಿದ್ದೆ. ಯಾಕೆಂದರೆ ಆ ರೈಲು ದೆಹಲಿಯಿಂದ ಬೇರೆ ಇನ್ಯಾವುದೋ ಜಾಗಕ್ಕೆ ಹೋಗುವುದರಲ್ಲಿತ್ತು. ಅವರು ಆ ಜಾಗಕ್ಕೆ ಹೋಗುತ್ತಿದ್ದರು.
ನನಗಾಗಿ ರೂಮ್ ಬುಕ್ ಆಗಿದೆ ಎಂದು ಗೆಳೆಯನೊಬ್ಬ ಫೋನ್ ಮಾಡಿ ಹೇಳಿದ್ದ. ಮಧ್ಯ ರಾತ್ರಿ ರಿಕ್ಷಾವಾಲಗಳನ್ನು ನಂಬಲು ಹಿಂಜರಿದು ಗೆಳೆಯ ಫೋನಿನಲ್ಲಿ ಆಣತಿ ಇತ್ತಂತೆ ನಾನು ನಡೆಯುತ್ತಾ ಹೋಗಿದ್ದೆ.  ಒಂದಷ್ಟು ದೂರ ನಡೆದ ಮೇಲೆ ನಾನು ತಲುಪಿದ ಜಾಗದ ಹೆಸರನ್ನು ಗೆಳೆಯನಿಗೆ ಹೇಳಿದಾಗ, ಹೋಟೆಲ್ ಒಂದು ಕಡೆ ಇದ್ದರೆ ನಾನು ವಿರುದ್ದ ದಿಕ್ಕಿನಲ್ಲಿ ನಡೆದಿರುವೆ ಎಂದು ಗೆಳೆಯ ಹೇಳಿದ್ದ. ಅಲ್ಲೇ ಕುಳಿತಿದ್ದ ಪೋಲೀಸರ ಬಳಿ ಹೋಗಿ ಹೋಟೆಲ್ ನ ವಿಳಾಸ ತೋರಿಸಿ ಈ ಅಡ್ರೆಸ್ ಎಲ್ಲಿ ಬರುತ್ತದೆ ಎಂದು ಕೇಳಿದ್ದೆ. ಆ ಪೋಲೀಸರ ಮಾತು ಕೇಳಿ ದೆಹಲಿ ಫೋಲೀಸರು ಒರಟರು, ಹೇಗೆ ಮಾತನಾಡಬೇಕು ಅನ್ನೋ ಕಾಮನ್ ಸೆನ್ಸ್ ಇಲ್ಲದವರು ಎಂದೆನಿಸಿತ್ತು.  ಆ ಗೆಳೆಯನಿಗೆ ಮತ್ತೆ ನನ್ನ ಸ್ಥಿತಿಯನ್ನು ತಿಳಿಸಿ ಫೋನ್ ಮಾಡಿದಾಗ ಪಾಪ ಅರ್ಧ ರಾತ್ರಿಯಲ್ಲಿ ತಾನು ತಂಗಿದ್ದ ಹೋಟೆಲ್ ರೂಮಿನಿಂದ ಹೊರಬಂದು ನನ್ನ ಹೋಟೆಲ್ ರೂಮ್ ತೋರಿಸಿದ್ದ. ಹೋಟೇಲ್ ಮ್ಯಾನೇಜರ್ ನಂತೆ ಕಾಣುವ ಒಬ್ಬ ವ್ಯಕ್ತಿಯೊಡನೆ ಮಾತನಾಡಿ ರೂಮು ಹೊಕ್ಕಾಗ ಬೆಳಿಗ್ಗೆ ಒಂದು ಗಂಟೆ. ಆ ಸಮಯದಲ್ಲೇ ಸ್ನಾನ ಮಾಡಿ ಸಂದರ್ಶನದ ಕುರಿತು ಯೋಚಿಸುತ್ತಾ ನಿದ್ದೆ ಬರದಿದ್ದರೂ ನಿದ್ದೆ ಮಾಡುವ ಪ್ರಯತ್ನ ಮಾಡಿದ್ದೆ.
ಸಂದರ್ಶನಕ್ಕೆ ಹೋಗಬೇಕಾಗಿರುವ ಜಾಗಕ್ಕೆ ಹೇಗೆ ಹೋಗಬೇಕು ಎಂದು ಹೇಳಿಕೊಡಲು ಬೆಳಿಗ್ಗೆ ಎಂಟೂವರೆಗೆ ರಾತ್ರಿ ಸಹಾಯ ಮಾಡಿದ್ದ ಅದೇ ಗೆಳೆಯ ತನ್ನ ಮತ್ತೊಬ್ಬ ಗೆಳೆಯನ ಜೊತೆ ಬಂದು ಆಗಲೇ ನನ್ನ ಹೋಟೆಲ್ ಮುಂದೆ ಕಾಯುತ್ತಾ ನಿಂತಿದ್ದ. ನಾನಿನ್ನೂ ತಿಂಡಿ ತಿಂದಿರಲಿಲ್ಲ. ತಿಂಡಿಯ ಕುರಿತು ಕೇಳಿದಾಗ ತಿಂಡಿ ಈಗ ತಾನೆ ತಿಂದೆ ಎಂದು ಸುಳ್ಳು ಹೇಳಿದ್ದೆ. ಆಮೇಲೆ ಮೆಟ್ರೋ ರೈಲು ನಿಲ್ದಾಣ ತಲುಪಿ ಅವನು ತೋರಿಸಿದ ಮೆಟ್ರೋ ರೈಲಿನ ಅದೇನೋ ಹಳದಿ, ನೀಲಿ, ಕೇಸರಿ ಬಣ್ಣದ ಮ್ಯಾಪ್ ಗಳ ನೋಡಿ ಒಂಚೂರು ಕನ್ ಫ್ಯೂಜ್ ಆಗಿದ್ದೆ. ಯಾಕೆಂದರೆ ಕೋಲ್ಕತ್ತಾದಲ್ಲಿ ಮೆಟ್ರೋ ಎಂದರೆ ಸೀದಾ ಒಂದೇ ರೂಟು. ಮಧ್ಯೆ ಮಾರ್ಗ ಬದಲಾವಣೆ ಮಾಡಬೇಕಾದ ಅವಶ್ಯಕತೆ ಇರೋದಿಲ್ಲ. ಆದರೆ ದೆಹಲಿಯ ಮೆಟ್ರೋದಲ್ಲಿ ಪ್ರತಿಯೊಂದು ಮಾರ್ಗಕ್ಕೂ ಒಂದೊಂದು ಬಣ್ಣದ ಪಟ್ಟಿಗಳ ಗುರುತಿದೆ. ನಾವು ಹಳದಿ ಮಾರ್ಗದಲ್ಲಿ ಚಲಿಸುತ್ತಾ ಮಧ್ಯೆ ಮಾರ್ಗ ಬದಲಾವಣೆ ಮಾಡಿ ಕೇಸರಿ ಬಣ್ಣದ ಮಾರ್ಗದಲ್ಲಿರುವ ಸ್ಥಳವನ್ನು ತಲುಪಬಹುದು. ಆ ರೀತಿ ಒಂದೆರಡು ಮಾರ್ಗ ಬದಲಾವಣೆ ಮಾಡಿ ನಾನು ತಲುಪಬೇಕಾದ ಸ್ಥಳದ ಸಮೀಪದ ಸ್ಥಳ ತಲುಪಿದಾಗ ಸಮಯ ಒಂಬತ್ತು ಮೂವತ್ತಾಗಿತ್ತು. ಜೀವನದಲ್ಲಿ ಅಟೆಂಡ್ ಮಾಡುತ್ತಿದ್ದ ಮೊದಲ ಸಂದರ್ಶನ ಅದು. ರೈಲಿನಿಂದ ಇಳಿದು ಕೈಯಲ್ಲಿ ಅಡ್ರೆಸ್ ಹಿಡಿದು ಈ ಸ್ಥಳ ಎಲ್ಲಿ ಬರುತ್ತದೆ ಎಂದು ಒಬ್ಬ ವ್ಯಕ್ತಿಯನ್ನು ಕೇಳಿದ್ದೆ. ಅವನು ನಂಗೆ ಗೊತ್ತಿಲ್ಲ ಅಂದಿದ್ದ. ಮತ್ತೊಬ್ಬ “ಇಲ್ಲಿಂದ ಹನ್ನೊಂದು ಕಿಲೋ ಮೀಟರ್ ಆಗುತ್ತೆ” ಈ ಜಾಗ ಎಂದಿದ್ದ. ಇನ್ನೊಬ್ಬ ಎರಡು ಕಿಲೋ ಮೀಟರ್ ಆಗುತ್ತೆ ಆಟೋದಲ್ಲಿ ಹೋಗಿಬಿಡಿ ಎಂದಿದ್ದ. ಸಂದರ್ಶನ ಇದ್ದುದ್ದು ಹತ್ತು ಗಂಟೆಗೆ. ಈ ರೀತಿ ಅವರಿವರ ಬಳಿ ವಿಳಾಸ ವಿಚಾರಿಸುತ್ತಾ ಸಮಯ ಒಂಬತ್ತು ಐವತ್ತಾಗಿತ್ತು. ಕೋಲ್ಕತ್ತಾದಲ್ಲಿ ಅಡ್ರೆಸ್ ಕೇಳಿದರೆ “ಜಾನಿ ನಾ (ಗೊತ್ತಿಲ್ಲ)” ಅಂತಾರೆ ಇಲ್ಲ ಅಂದ್ರೆ ನಾವು ಕೇಳಿದ ಸ್ಥಳ ಎಷ್ಟೇ ದೂರದಲ್ಲಿದ್ದರೂ “ಇಕಾನ್ ಥೇಕೆ ಪಾಂಚ್ ಮಿನಿಟ್ (ಇಲ್ಲಿಂದ ಐದೇ ನಿಮಿಷ)” ಎಂದು ಬಿಡುತ್ತಾರೆ. ಆದರೆ ದೆಹಲಿಯ ಜನ ಯಾಕಿಷ್ಟು ಸುಳ್ಳು ಹೇಳ್ತಾರೆ ಅನಿಸ್ತು. ಯಾಕೆಂದರೆ ನಾನು ನಿಂತಿರೋ ಜಾಗದ ಅಕ್ಕ ಪಕ್ಕದಲ್ಲೇ ಆ ಜಾಗ ಇದೆ ಅಂತ ಆ ಗೆಳೆಯ ಹೇಳಿದ್ದ.
ಯಾಕೋ ಸಮಯ ಹತ್ತಾಗುತ್ತಿದ್ದಂತೆ ನನಗೆ ಎದೆ ಬಡಿತ ಜೋರಾಗತೊಡಗಿತ್ತು. ಅಲ್ಲೇ ಹತ್ತಿರದಲ್ಲಿದ್ದ ಭಾರತದ ದೊಡ್ಡ ಆಸ್ಪತ್ರೆ ಏಮ್ಸ್ (AIIMS) ನ ಒಳ ಹೊಕ್ಕವನೇ ಕೆಲವು ವೈದ್ಯಕೀಯ ವಿದ್ಯಾರ್ಥಿಗಳ ಮುಂದೆ ಈ ವಿಳಾಸ ಹೇಳಿ ಎಂದು ವಿಳಾಸ ಇರುವ ಚೀಟಿ ಮುಂದಿಡಿದಿದ್ದೆ. ಚೀಟಿ ನೋಡುವ ಮೊದಲೇ ಅವರು “ಐ ಡೌಂಟ್ ನೋ (ನಂಗೆ ಗೊತ್ತಿಲ್ಲ)” ಎಂದು ತಲೆ ಅಲ್ಲಾಡಿಸುತ್ತಾ ಹೊರಟು ಹೋಗುತ್ತಿದ್ದರು. ಮನಸ್ಸಿನಲ್ಲಿ ಸಿಕ್ಕಾಪಟ್ಟೆ ನಮ್ಮೂರಿನ ಭಾಷೆಯಲ್ಲಿ ಬೈದುಕೊಂಡು ಕೊನೆಗೆ ಎದುರಿಗೆ ಸಿಕ್ಕ ಬಿಳಿ ಬಟ್ಟೆ ತೊಟ್ಟಿದ್ದ ಆಸ್ಪತ್ರೆಯ ಕಾಂಪೌಂಡರ್ ಒಬ್ಬನಿಗೆ ಚೀಟಿ ತೋರಿಸಿದ್ದೆ. “ಓ ಈ ಜಾಗನಾ? ಇಲ್ಲಿಂದ ಐದೇ ನಿಮಿಷ ಬನ್ನಿ ಅಲ್ಲಿಗೆ ಹೋಗೋ ದಾರಿ ತೋರಿಸ್ತೀನಿ” ಅಂತ ಆಸ್ಪತ್ರೆಯ ಒಳಭಾಗದಲ್ಲೇ ಕರೆದುಕೊಂಡು ಹೋಗಿ ಅಲ್ಲಿಂದ ಹೇಗೆ ಆ ಜಾಗಕ್ಕೆ ಹೋಗಬೇಕು ಎಂದು ದಾರಿ ತೋರಿಸಿದ್ದ. ಹೆಚ್ಚು ಓದಿಲ್ಲದ ಇಂತಹ ಸಾಮಾನ್ಯ ಮನುಷ್ಯನಿಗಿರುವ ಸಾಮಾನ್ಯ ಜ್ಞಾನಕ್ಕೆ ಒಂದು ಸಲಾಮ್ ಹೊಡೆದು  ಥ್ಯಾಂಕ್ ಗಾಡ್ ಎಂದುಕೊಂಡು, ಅವನು ತೋರಿಸಿದ ದಾರಿಯಲ್ಲಿ ಓಡಿದ್ದೆ. ಬೆವರು ಕಿತ್ತುಕೊಂಡು ಬರುತ್ತಿತ್ತು. ಮಾರ್ಗ ಮಧ್ಯೆ ಅವರಿವರನು ವಿಚಾರಸಿ ಕೊನೆಗೂ ಸಂದರ್ಶನ ನಡೆಯುತ್ತಿದ್ದ ಜಾಗ ಸೇರಿದೆ. ಏದುಸಿರು ಬಿಟ್ಟುಕೊಂಡು ಹೋದವನಿಗೆ ಡಾಕ್ಯುಮೆಂಟ್ ನೀಡಿ ಎಂದವರೇ ಡಾಕ್ಯುಮೆಂಟ್ ಗಳಿಗೆ ಫ್ಲಾಗ್ ಹಾಕಿ ಎಂದು ಎಷ್ಟೊಂದು ಚಿಕ್ಕ ಚಿಕ್ಕ ಫ್ಲಾಗ್ ಗಳನ್ನು ಕೈಗಿತ್ತಿದ್ದರು. ಹತ್ತು ಸೆಟ್ ಡಾಕ್ಯುಮೆಂಟ್ ಗಳಿಗೆ ಐದೈದು ಫ್ಲಾಗ್ ಗಳನ್ನು ಹಾಕಿ ಸಂದರ್ಶಕರಿಗೆ ಸುಲಭವಾಗಲಿ ಎಂದು ಆ ಡಾಕ್ಯುಮೆಂಟ್ ಹೆಸರನ್ನು ಬರೆಯಬೇಕಿತ್ತು. ಬೆವರು ಒರೆಸುತ್ತಲೇ ಫ್ಲಾಗ್ ಗಳನ್ನು ಹಾಕುತ್ತಿದ್ದೆ. ಮೂರನೇ ನಂಬರ್ ನಿಮ್ಮದೇನಾ? ನೆಕ್ಸ್ಟ್ ನೀವೆ ಎಂದು ಆ ವ್ಯಕ್ತಿ ಹೇಳಿದ್ದ. ದೀರ್ಘವಾಗಿ ಒಂದೆರಡು ಬಾರಿ ಉಸಿರೆಳೆದುಕೊಂಡು ಅರ್ಧಂಬರ್ಧ ಹಾಕಿದ್ದ ಫ್ಲಾಗ್ ಗಳನ್ನು ಬೇಗ ಬೇಗ ಹಾಕಿ ಅವನು ತೋರಿಸಿದ ಕೊಠಡಿಯೊಂದರಲ್ಲಿ ಹೋಗಿ ಕುಳಿತಿದ್ದೆ. ಒಂದೈದು ನಿಮಿಷವಾದ ಮೇಲೆ ಸಂದರ್ಶನದ ಕೋಣೆಗೆ ನನ್ನನ್ನು ಕರೆಸಿದ್ದರು.
ನಿಮ್ಮ ಹೆಸರು ಅದು ಇದು ಅಂತ ಒಂದೆರಡು ಪ್ರಶ್ನೆಯನ್ನು ಒಬ್ಬ ಸಂದರ್ಶಕರು ಶಾಂತವಾಗಿಯೇ ಕೇಳಿದ್ದರು. ನಾನು ಶಾಂತನಾಗಿಯೇ ಉತ್ತರಿಸಿದ್ದೆ. ನನ್ನ ಮೇಲೆ ಹಳೆಯ ಜನ್ಮದ ಕೋಪವಿದ್ದವನಂತೆ ಕಂಡ ವ್ಯಕ್ತಿಯೊಬ್ಬ ತನ್ನ ಮೊದಲ ಪ್ರಶ್ನೆ ನನ್ನೆಡೆಗೆ ರಭಸವಾಗಿ ಬಿಸಾಡಿದ ಹಾಗೆ ಆಯಿತು. ನಾನು ತಬ್ಬಿಬ್ಬಾದೆ. ಆ ಕೋಣೆಯಲ್ಲಿ ನನ್ನ ಮುಂದೆ ಹನ್ನೆರಡು ಜನ ಸಂದರ್ಶಕರು ಇದ್ದರು ಅನಿಸುತ್ತೆ. ಅವರಲ್ಲಿ ನಾಲ್ಕೈದು ಜನ ಹತ್ತಾರು ಪ್ರಶ್ನೆಗಳನ್ನು ನನ್ನೆಡೆಗೆ ಎಸೆದರು. ನಾನು ಇನ್ನೂ ತಬ್ಬಿಬ್ಬಾದೆ. ನನ್ನ ಸ್ಥಿತಿ ನೋಡಿ “ಕುಡಿಯಲು ನೀರು ಬೇಕಾ” ಅಂದ್ರು. ಬೇಡ ಅನ್ನುತ್ತಲೇ ಟೇಬಲ್ ಮೇಲಿದ್ದ ನೀರಿನ ಬಾಟಲ್ ನಿಂದ ಒಂದು ಗುಟುಕು ನೀರು ಕುಡಿದಿದ್ದೆ. ಯಾಕೋ ನನಗೆ ಆ ಫೆಲೋಶಿಫ್ ನೀಡಲು ಅವರ್ಯಾರಿಗೂ ಮನಸ್ಸಿಲ್ಲ ಅಂತ ನನಗೆ ತಿಳಿದು ಹೋಯಿತು. “ಒಳ್ಳೆ ಅಕಾಡೆಮಿಕ್ ರೆಕಾರ್ಡ್ ಇದೆ ನಿಮ್ಮದು? ಆದರೆ ಯಾಕೋ ತುಂಬಾ ಟೆನ್ಷನ್ ನಲ್ಲಿ ಇರುವಂತೆ ಕಾಣ್ತೀರ.. ಒಂದತ್ತು ನಿಮಿಷ ರೆಸ್ಟ್ ತೆಗೆದುಕೊಂಡು ಮತ್ತೆ ಬನ್ನಿ ಸಮಸ್ಯೆಯಿಲ್ಲ” ಎಂದು ಯಾರೋ ಹೇಳಿದ ಹಾಗೆ ಕೇಳಿಸಿತು. ಪರವಾಗಿಲ್ಲ ನೀವು ಮುಂದುವರಿಸಿ ನಿಮ್ಮ ಪ್ರಶ್ನೆಗಳನ್ನು ಎಂದಿದ್ದೆ. ಯಾಕೋ ಏನೋ ಅವರು ಕೇಳುತ್ತಿದ್ದ ಅತಿ ಚಿಕ್ಕ ಪ್ರಶ್ನೆಗಳಿಗೂ ಉತ್ತರ ಗೊತ್ತಿದ್ದರೂ ನಾನು ಉತ್ತರ ನೀಡಲು ತಡಬಡಿಸುತ್ತಿದ್ದೆ. “ನೀವು ಓದಿರೋ ವಿಷಯಕ್ಕೂ ನೀವು ಮಾಡಬೇಕು ಎನ್ನುತ್ತಿರುವ ಪ್ರಾಜೆಕ್ಟ್ ನ ವಿಷಯಕ್ಕೂ ಯಾಕೋ ಹೊಂದಿಕೆಯಾಗ್ತಾ ಇಲ್ಲ. ನಿಮ್ಮ ಇಷ್ಟದ ಟಾಪಿಕ್ ಬಗ್ಗೆ ಮತ್ತೊಂದು ಪ್ರಾಜೆಕ್ಟ್ ಬರೆದು ಮತ್ತೆ ರಿ ಸಬ್ಮಿಟ್ ಮಾಡಿ” ಆ ಗುಂಪಿನಲ್ಲಿ ಯಾರೋ ಒಬ್ಬರು ಅಂದ್ರು. ಮತ್ತೆ ಒಂದು ವರ್ಷ ಯಾರು ಕಾಯುತ್ತಾರೆ ಎಂದು ಮನಸ್ಸಿನಲ್ಲಿ ಎಣಿಸುತ್ತಾ ಪರವಾಗಿಲ್ಲ ಬೇಡ ಬಿಡಿ ಎಂದಿದ್ದೆ. ಫೆಲೋಶಿಫ್ ನ ನಾವು ಕೊಡೋದಲ್ಲ..ನೀವು ಗಳಿಸಬೇಕು ಅಂತ ಯಾರೋ ಅಂದರು. ಮತ್ಯಾರೋ ಪ್ರೀತಿಯಿಂದ “ಮುಂದಿನ ಸಾರಿ ಸಂದರ್ಶನಕ್ಕೆ ಹೋದರೆ ಬೇಟಾ ಪಡ್ಕೆ ಜಾನ (ಓದಿಕೊಂಡು ಹೋಗು) ಎಂದು ಹೇಳಿದ ಹಾಗೆ ಕೇಳಿಸಿತು. ಬಲವಂತದ ನಗೆ ನಕ್ಕು ಆ ರೂಮಿನಿಂದ ಹೊರಬಂದಿದ್ದೆ.
ನಾನು ಒಲ್ಲದ ಮನಸ್ಸಿನಿಂದಲೇ ಆ ಫೆಲೋಶಿಫ್ ಗೆ ಅರ್ಜಿ ಸಲ್ಲಿಸಿದ್ದರಿಂದ ಯಾಕೋ ಆ ಸಂದರ್ಶನದಲ್ಲಿ ಅನುತ್ತೀರ್ಣನಾದೆ ಎಂದು ಅಷ್ಟು ಬೇಸರವಾಗಲಿಲ್ಲ. ಹೊರಗೆ ಬಂದವನೇ ಆ ಸಂಸ್ಥೆಯ ಮುಂದೆ ನಿಂತು ತಂಪು ಕನ್ನಡಕ ಹಾಕಿಕೊಂಡು ನನ್ನ ಕ್ಯಾಮೆರಾದಲ್ಲಿ ಒಂದು ಫೋಟೋ ಕ್ಲಿಕ್ ಮಾಡುವಂತೆ ಅಲ್ಲೇ ನಿಂತಿದ್ದ ವ್ಯಕ್ತಿಯೊಬ್ಬನಿಗೆ ಹೇಳಿದ್ದೆ. ಆಮೇಲೆ ಅದೇ ಕನ್ನಡಕ ಹಾಕಿಕೊಂಡು ಕುತುಬ್ ಮಿನಾರ್ ಸುತ್ತಿ ನಂತರ ಇಂಡಿಯಾ ಗೇಟ್ ತಲುಪಿದ್ದೆ. ಅಲ್ಲಿ ಹುತಾತ್ಮ ಯೋಧರ ಸ್ಮಾರಕಕ್ಕೆ ಸಲ್ಯೂಟ್ ಹೊಡೆದು ಅಲ್ಲೇ ಒಂದು ಮರದಡಿ ಕುಳಿತು ಇಂಡಿಯಾ ಗೇಟ್ ನ ಮುಂದೆ ಯಾರೋ ನನ್ನ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ್ದ ನನ್ನ ಫೋಟೋವನ್ನು ನನ್ನ ಪುಟ್ಟ ನೋಟ್ ಪ್ಯಾಡ್ ಉಪಯೋಗಿಸಿ ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿದ್ದೆ. ನನ್ನ ಫೇಸ್ ಬುಕ್ ಗೆಳೆಯರು ಸಿಕ್ಕಾಪಟ್ಟೆ ಲೈಕ್ ಒತ್ತಿದ್ದರು. 🙂 ಅಲ್ಲಿಂದ ಹೊರಟು ಜಮ ಮಸೀದಿ ತಲುಪಿದ್ದೆ. ಆಗಲೇ ಸಂಜೆಯಾಗುತ್ತಿತ್ತು. ಅಲ್ಲಿ ಜಮ ಮಸೀದಿಯ ಬಳಿ ಸೂರ್ಯಾಸ್ತವನ್ನು ಎಂಜಾಯ್ ಮಾಡ್ತಾ ಕುಳಿತಿರಬೇಕಾದರೆ ನನ್ನ ಮೊಬೈಲ್ ಗೆ ಒಂದು ಕರೆ ಬಂದಿತ್ತು. ಕೋಲ್ಕತ್ತಾಗೆ ಅರ್ಜೆಂಟ್ ವಾಪಸ್ಸು ಬಾ ಕೆಲಸವಿದೆ ಎಂದು ಗೆಳೆಯನೊಬ್ಬ ಕರೆ ಮಾಡಿದ್ದ. ಜೊತೆಗೆ ಫ್ಲೈಟ್ ಟಿಕೆಟ್ ಸಹ ಬುಕ್ ಮಾಡಿದ್ದ. ತುರ್ತು ಕೆಲಸದ ನಿಮಿತ್ತ ಮತ್ತೆ ಜುಮ್ಮಾ ಮಸೀದಿಯಿಂದ ಮೆಟ್ರೋ, ಮೆಟ್ರೋದಿಂದ ಹೋಟೆಲ್ ರೂಮ್, ಹೋಟೆಲ್ ರೂಮಿನಿಂದ ರಿಕ್ಷಾ, ರಿಕ್ಷಾದಿಂದ ಮತ್ತೆ ಮೆಟ್ರೋ, ಮೆಟ್ರೋದಲ್ಲಿ ಮಾರ್ಗ ಬದಲಾವಣೆ.. ಆಮೇಲೆ ಏರ್ ಪೋರ್ಟ್ ನ ಮೆಟ್ರೋ, ಏರ್ ಪೋರ್ಟ್ ಮೆಟ್ರೋದಿಂದ ಏರ್ ಪೋರ್ಟ್.. ಹೀಗೆ ಸಂಜೆ ಆರರಿಂದ ಒಂಬತ್ತು ಮೂವತ್ತರವರೆಗೆ ನಾನು ಓಡುತ್ತಲೇ ಇದ್ದೆ. ಓಡಿ ಓಡಿ ಕೊನೆಗೆ ವಿಮಾನದಲ್ಲಿ ಕುಳಿತಾಗ ಅಲ್ಲಿನ ಹವಾ ನಿಯಂತ್ರಿತ ವಾತಾವರಣದಲ್ಲೂ ಬೆವರುತ್ತಾ ಗಗನಸಖಿಗೆ ಒಂದು ಲೋಟ ನೀರು ಕೊಡುವಂತೆ ಹೇಳಿದ್ದೆ. ನೀರು ಕುಡಿದಾದ ಮೇಲೆ ಸುಧಾರಿಸಿಕೊಳ್ಳುತ್ತಾ ನನ್ನ ಜೀವನದಲ್ಲಿ ಅತಿ ವೇಗವಾಗಿ ಕಳೆದ ಆ ದಿನವನ್ನು ನೆನೆಸಿಕೊಂಡಾಗ ದೆಹಲಿಯಲ್ಲಿ ಎಲ್ಲವೂ ಇದೆ ಜೀವವಿಲ್ಲ ಎಂದು ಗೆಳತಿಯೊಬ್ಬಳು ಹೇಳಿದ ಮಾತು ಜ್ಞಾಪಕಕ್ಕೆ ಬಂದಿತ್ತು…

‍ಲೇಖಕರು G

September 26, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Nataraju S M

    ಫೇಸ್ ಬುಕ್ ನಲ್ಲಿ 93 ಲೈಕುಗಳ ನೀಡಿದ್ದೀರಿ.. ಖುಷಿಯಾಯಿತು ಫ್ರೆಂಡ್ಸ್.. ಥ್ಯಾಂಕ್ ಯೂ.. :))

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: