ನಲ್ಮೆಯಿ೦ದ ನಟರಾಜು : ಗೆಳೆತನ ಎ೦ದರೆ…

ಗೆಳೆತನದ ವಾರಕ್ಕೆಂದು ಗೆಳೆತನ ಕುರಿತ ವಿಶೇಷ ಲೇಖನ

ಗೆಳೆಯನಿಗೆ ಕಷ್ಟಗಳ ಸುರಿಮಳೆ ಬಂದಾಗ ಜೊತೆ ನಿಲ್ಲಬೇಕು

– ಎಸ್ ಎಂ ನಟರಾಜು ಮಾಲೂರು ತಾಲ್ಲೂಕಿನಲ್ಲಿ ಹಾಲಿನ ಡೈರಿಯ ಪಶು ವೈದ್ಯಾಧಿಕಾರಿಯಾಗಿ ಸೇರಿ ಒಂದು ವಾರವಾಗಿತ್ತು. ಅವತ್ತು ಬೆಳಿಗ್ಗೆ ಆ ಹುಡುಗನಿಂದ ಎಮರ್ಜೆನ್ಸಿ ಕೇಸ್ ಎಂದು ಕರೆ ಬಂದಿತ್ತು. ಮಾಲೂರಿನಿಂದ ಮೂರು ಕಿಲೋ ಮೀಟರ್ ದೂರದಲ್ಲಿದ್ದ ಆ ಊರಿಗೆ ಹೋದಾಗ ಆ ಹುಡುಗ ತನಗೆ ಜೀವನಾಧಾರವಾಗಿದ್ದ ಮೂರು ಹಸುಗಳಲ್ಲಿ ಒಂದು ಹಸುವನ್ನು ಆಗಾಗಲೇ ಕಳೆದುಕೊಂಡಿದ್ದ. ಇನ್ನೊಂದು ಹಸು ಮರಣ ಶಯ್ಯೆಯಲ್ಲಿರುವಂತೆ ಮಲಗಿತ್ತು. ಮತ್ತೊಂದು ಹಸು ಕೆಮ್ಮಿದರೆ ಹಸಿರು ಬಣ್ಣದ ಗಟ್ಟಿಯಾದ ದ್ರವ ಮೂಗಿನಿಂದ ಹೊರಬರುತ್ತಿತ್ತು. ಈಗಾಗಲೇ ಬೇರೆಯ ಡಾಕ್ಟರ್ ಗಳಿಗೆ ತೋರಿಸಿ ಗುಣವಾಗದಿದ್ದ ಆ ಕೇಸ್ ನನ್ನ ಬಳಿ ಬಂದಿತ್ತು. ನಾನು ಆಗಷ್ಟೇ ಹೊಸದಾಗಿ ಸೇರಿದ್ದೆನಾದ್ದರಿಂದ ಮರಣ ಶಯ್ಯೆಯಲ್ಲಿರುವ ಹಸುವಿಗಂತೂ ಏನೂ ಮಾಡಲಾಗದು, ಕೆಮ್ಮುತ್ತಿರುವ ಈ ಹಸುವಿಗೆ ಚಿಕಿತ್ಸೆ ನೀಡಿ ಹೇಗಾದರು ಮಾಡಿ ಗುಣಪಡಿಸಲು ನಿರ್ಧರಿಸಿದ್ದೆ. ಮೊದಲ ದಿನ ನನ್ನ ಬಳಿ ಇರೋ ಔಷಧಿಗಳಲ್ಲಿ ಒಂದು ಒಳ್ಳೆಯ ಆಂಟಿಬಯೋಟಿಕ್ ಹುಡುಕಿ ಚಿಕಿತ್ಸೆ ನೀಡಿದ್ದೆ. ಮಾರನೆಯ ದಿನ ಬೆಳಿಗ್ಗೆ ಮತ್ತೆ ಅದೇ ಕೇಸ್ ನೋಡಲು ಹೋದಾಗ ಆ ಹುಡುಗನ ತಾಯಿ “ಡಾಕ್ಟ್ರೆ, ನಿನ್ನೆ ಕೊಟ್ಟಿದ್ದರಲ್ಲ ಅದೇ ಔಷಧಿ ಕೊಡಿ.. ನಿನ್ನೆಯಿಂದ ಒಂದೇ ಒಂದು ಕಿತ ಕೆಮ್ಮದೆ ಅಷ್ಟೆ” ಎಂದು ಹೇಳಿದ್ದರು. ಅದೇ ಆಂಟಿಬಯೋಟಿಕ್ ಐದು ದಿನ ಕೊಟ್ಟಿದ್ದೆ. “ಈಗ ಹಸು ಮೇವು ಚೆನ್ನಾಗಿ ತಿಂದು ಕುಡ್ತಿ ಕುಡಿತದೆ” ಎಂದು ಆ ಹುಡುಗ ಹೇಳಿದ್ದ. ಕುಡ್ತಿ ಎಂಬ ಹೊಸ ಹೆಸರು ಕೇಳಿ ಅಚ್ಚರಿಯಾಗಿದ್ದ ನಾನು ’ಕುಡ್ತಿ’ ಎಂದರೆ ಹಿಂಡಿ ಬೂಸ ಮಿಶ್ರಣ ಮಾಡಿರುವ ನೀರು ಎಂದು, ’ತ್ವಾಕೆ’ ಎಂದರೆ ಬಾಲ ಎಂದು, ’ಕಲ್ದಿರ ಇರು’ ಎಂದರೆ ಸುಮ್ಮನೆ ಇರು ಎಂಬ ತೆಲುಗು ಮಿಶ್ರಣವಿರುವ ಕೋಲಾರ ಜಿಲ್ಲೆಯ ಕನ್ನಡದ ಪದಗಳನ್ನು ಕಲಿತ್ತಿದ್ದೆ. ಆ ಹಸು ಗುಣವಾದ ಮೇಲೆ ನನ್ನ ವಯಸ್ಸಿನ ಆ ಹುಡುಗ ನನಗೆ ತುಂಬಾ ಪರಿಚಯನಾದ. ದಿನಗಳೆದಂತೆ ನನ್ನ ರೂಮಿನಲ್ಲಿ ಟಿವಿ ಇಲ್ಲದುದ ಕಂಡು ತನ್ನ ಮನೆಯಲ್ಲಿ ಉಪಯೋಗಿಸದೆ ಇಟ್ಟಿದ್ದ ಒಂದು ಟಿವಿ ಮತ್ತು ಸಿಡಿ ಪ್ಲೇಯರ್ ಅನ್ನು ತಂದು “ನೀವು ಎಷ್ಟು ದಿನ ಇಲ್ಲಿ ಇರ್ತೀರೋ ಅಷ್ಟು ದಿನ ನಿಮ್ಮ ಹತ್ತಿರ ಇರಲಿ ಸರ್” ಎಂದು ಹೇಳಿ ನಾನು ಬೇಡವೆಂದರೂ ನನ್ನ ರೂಮಿನಲ್ಲಿ ಇಟ್ಟು ಹೋಗಿದ್ದ. ನನ್ನ ರೂಮಿನ ಹತ್ತಿರದಲ್ಲೇ ಪರಿಚಯವಿದ್ದ ಸಿಡಿ ಅಂಗಡಿಯಿಂದ ಸಿಡಿಯನ್ನು ದಿನಕ್ಕೆ ಐದು ರೂಪಾಯಿ ಬಾಡಿಗೆಗೆ ತಂದು ಸಮಯ ಸಿಕ್ಕಾಗಲೆಲ್ಲಾ ಕನ್ನಡ, ಹಿಂದಿ, ಇಂಗ್ಲೀಷ್ ಮತ್ತು ತೆಲುಗು ಸಿನಿಮಾ ನೋಡಲು ಶುರು ಮಾಡಿದ್ದೆ. ಒಂದು ಭಾನುವಾರ ಹೇಗೆ ಕಳೆಯುವುದು ಎಂದು ತೋಚದೆ ಇದ್ದಾಗ ಸಂಜೆ ಆತನಿಗೆ ಫೋನ್ ಮಾಡಿ ಕರೆದು ಅವನ ಜೊತೆ ಬಾರ್ ಒಂದರ ಒಳ ಹೊಕ್ಕಿದ್ದೆ. ಆತ ತನಗೆ ಒಂದು ಪಿಂಟ್ ಸಾಕು ಎಂದ ಕಾರಣ ಒಂದು ಪಿಂಟ್ ಜೊತೆಗೆ ಮತ್ತೊಂದು ದೊಡ್ಡ ಬಿಯರ್ ಬಾಟಲ್ ನಮ್ಮ ಟೇಬಲ್ ಮೇಲಿದ್ದವು. ಆ ಎರಡೂ ಬಾಟಲ್ ಗಳ ಓಪನ್ ಮಾಡಿ ನನ್ನ ಬಾಟಲಿನಿಂದ ಬಿಯರನ್ನು ಗ್ಲಾಸಿಗೆ ಹಾಕಿಕೊಂಡಾಗ ಅವನು ಚಿಕ್ಕ ಬಾಟಲ್ ಆಗಿರೋದರಿಂದ ಗ್ಲಾಸ್ ಬೇಡ ಹಾಗೆಯೇ ಕುಡಿವೆ ಎಂದು ಚಿಯರ್ಸ್ ಎಂದಿದ್ದ. ಚಿಯರ್ಸ್ ಎಂದವನೆ ನಾನು ಕುಡಿಯಲು ಶುರು ಮಾಡಿದ್ದೇ ತಾನು ಯಾರೊಡನೆಯೋ ಫೋನ್ ನಲ್ಲಿ ಮಾತನಾಡತೊಡಗಿದ್ದ. ನನ್ನ ಬಾಟಲ್ ಖಾಲಿಯಾಗುವ ಹಂತ ಬಂದರೂ ಆತನ ಬಾಟಲ್ ಇನ್ನೂ ಹಾಗೆಯೇ ಇರುವುದ ಕಂಡು “ಯಾಕ್ರೀ ರಾಜಣ್ಣ? ಇನ್ನೂ ಶುರುನೇ ಮಾಡಿಲ್ಲ ನೀವು” ಎಂದಿದ್ದೆ. “ಸಾರ್ ಬೇಜಾರ್ ಮಾಡ್ಕೊಬೇಡಿ ನಮ್ಮಪ್ಪ ಕುಡ್ದು ಕುಡ್ದು ಒಂದ್ ದಿನ ರೋಡಲ್ಲೇ ಸತ್ತೋಗಿದ್ರು. ಅದಕ್ಕೆ ನನ್ನ ಜೀವನದಲ್ಲಿ ಕುಡೀಬಾರದು ಅಂತ ಡಿಸೈಡ್ ಮಾಡಿದ್ದೀನಿ. ನೀವು ಬೇಜಾರ್ ಮಾಡಿಕೊಳ್ದೆ ಈ ಬಾಟಲ್ ನೂ ಖಾಲಿ ಮಾಡಿಬಿಡಿ” ಎಂದು ತನ್ನ ಪಾಲಿನ ಪಿಂಟ್ ಬಾಟಲ್ ಅನ್ನು ನನ್ನ ಮುಂದಿಟ್ಟಿದ್ದ ರಾಜಣ್ಣ. ಎದುರಿಗೆ ಕುಡಿಯದ ಗೆಳೆಯನನ್ನು ಕುಳ್ಳರಿಸಿಕೊಂಡು ಒಬ್ಬನೇ ಕುಡಿದ ಕಾರಣ ಅವತ್ತು ಯಾಕೋ ಕುಡಿತದ ಮೇಲೆ ವಾಕರಿಕೆ ಬಂದಂತಾಗಿತ್ತು. ಅವನ ಒತ್ತಾಯಕ್ಕೆ ಮಣಿದು ಅವನಿಗೆ ಕೂಲ್ ಡ್ರಿಂಕ್ಸ್ ತರಿಸಿ ಆ ಪಿಂಟ್ ಬಾಟಲ್ ಸಹ ಖಾಲಿ ಮಾಡಿದೆನಾದರೂ ಮತ್ತೆಂದೂ ಆ ರೀತಿ ಬಾರ್ ನಲ್ಲಿ ಕುಳಿತು ಕುಡಿಯಬೇಕು ಎನಿಸಲಿಲ್ಲ. ಆ ದಿನವಾದ ಮೇಲೆ ವಾರಕ್ಕೋ ಹದಿನೈದು ದಿನಕ್ಕೋ ಅವರ ಮನೆಯಲ್ಲೇ ಮಾಡಿದ್ದ ಒಳ್ಳೆಯ ಮಾಂಸದ ಊಟ ಮಾಡುತ್ತಿದ್ದೆವಾ ಹೊರತು ಬಾರ್ ಗೆ ಯಾವತ್ತಿಗೂ ಕಾಲಿಡುತ್ತಿರಲಿಲ್ಲ. ಹೀಗೆ ಇಬ್ಬರೂ ಒಳ್ಳೆಯ ಗೆಳೆಯರಾಗುತ್ತಿದ್ದಾಗಲೇ ನಾನು ನನ್ನ ಹೆಚ್ಚಿನ ವ್ಯಾಸಂಗಕ್ಕಾಗಿ ಕೊಲ್ಕತ್ತಾಗೆ ಪಯಣಿಸಬೇಕಾಯಿತು. ನಾನು ಕೊಲ್ಕತ್ತಾಗೆ ಬರುವಾಗ ನನ್ನದು ಅಂತ ಬ್ಯಾಂಕ್ ಅಕೌಂಟ್ ಇರಲಿಲ್ಲ. “ಏನಾದ್ರು ಪ್ರಾಬ್ಲಂ ಆದರೆ ಇರಲಿ” ಎಂದು ತನ್ನ ಎಟಿಎಮ್ ಕಾರ್ಡನ್ನು ನನ್ನ ಕೈಗಿತ್ತು ರಾಜಣ್ಣ ನನ್ನನ್ನು ಅಂದು ಕಳುಹಿಸಿಕೊಟ್ಟಿದ್ದ. ಕೊಲ್ಕತ್ತಾಗೆ ಬಂದ ಮೇಲೆ ಯಾರು ನನಗೆ ಫೋನ್ ಮಾಡ್ತಾರೋ ಬಿಡ್ತಾರೋ ವಾರಕ್ಕೆ ಒಂದು ಬಾರಿ ರಾಜಣ್ಣನಿಂದ ಫೋನ್ ಗ್ಯಾರಂಟಿ ಬರುತ್ತಿತ್ತು. ನಾನು ಸಹ ವಾರದಲ್ಲಿ ಒಂದು ಬಾರಿಯಾದರೂ ಫೋನ್ ಮಾಡಿ ಮಾತನಾಡಿಸುತ್ತಿದ್ದೆ. ಕೊಲ್ಕತ್ತಾಕ್ಕೆ ಬಂದ ಒಂದು ವರ್ಷದ ನಂತರ ನನ್ನ ತಂಗಿಯ ಮದುವೆಯಾಯಿತು. ನಮ್ಮೂರಿನಿಂದ ಅವನ ಊರು ಸುಮಾರು 120 ಕಿಲೋ ಮೀಟರ್ ಇದ್ದರೂ ಮದುವೆಯ ಹಿಂದಿನ ದಿನವೇ ನಮ್ಮೂರಿಗೆ ಬಂದಿದ್ದ. ನನಗೋ ಅವನ ಬರುವಿಕೆ ಆನೆ ಬಲ ತಂದಿತ್ತು. ಅವನ ಯಾವುದೇ ಗೆಳೆಯರಿಗೆ ಕಷ್ಟ ಬರಲಿ ಅವನು ಯಾವತ್ತಿಗೂ ಮೊದಲು ಹಾಜರ್. ಉದಾಹರಣೆಗೆ ನನ್ನ ತಂಗಿಗೊಮ್ಮೆ ಕಿಡ್ನಿಯಲ್ಲಿ ಕಲ್ಲುಗಳು ಕಾಣಿಸಿಕೊಂಡು ಆಸ್ಪತ್ರೆಗೆ ಸೇರಿಸಿದಾಗ ನಾನು ಕೊಲ್ಕತ್ತಾದಿಂದ ಬೆಂಗಳೂರಿಗೆ ತಲುಪುವಷ್ಟರಲ್ಲಿ ಅವನು ಮಾಲೂರಿನಿಂದ ಬೆಂಗಳೂರು ತಲುಪಿದ್ದ. ಗೆಳೆಯರೆಂದರೆ ಅವರ ಕಷ್ಟ ಸುಖಗಳು ನಮ್ಮ ಕಷ್ಟ ಸುಖಗಳು ಎನ್ನುವಂತೆ ಭಾವಿಸುವ ಆತ ನಿಜಕ್ಕೂ ಒಬ್ಬ ಅಧ್ಬುತವಾದ ಗೆಳೆಯ. ದೂರದ ಕೊಲ್ಕತ್ತಾದಲ್ಲಿದ್ದ ಕಾರಣ ಇಂತಹ ಆತ್ಮೀಯ ಗೆಳೆಯನ ಮದುವೆಗೆ ನಾನು ಹೋಗಲಾಗಿರಲಿಲ್ಲ. ನಂತರ ನನಗೆ ರಜೆ ಸಿಕ್ಕಿ ಬೆಂಗಳೂರಿಗೆ ಒಮ್ಮೆ ಹೋದಾಗ ಸೀದಾ ಹೆಚ್ ಕ್ರಾಸ್ ಸಮೀಪದ ಅವನ ಮಾವನ ಊರಿಗೆ ಬರುವಂತೆ ಹೇಳಿದ್ದ. ಅವನ ಮಾವನ ಮನೆಯಲ್ಲಿ ಒಂದಷ್ಟು ಹೊತ್ತು ವಿರಮಿಸಿ ಮಧ್ಯಾಹ್ನ ಹೋಳಿಗೆ ಊಟ ಮಾಡಿ, ಸಂಜೆ ಅವನ ಊರಿಗೆ ಪಯಣ ಬೆಳೆಸಿ ರಾತ್ರಿ ಅವನ ಊರಿನಲ್ಲೇ ತಂಗಿದ್ದೆವು. ನಾನು ಅವನನ್ನು ಕಾಣಲು ಎರಡು ಮೂರು ವರ್ಷಗಳ ನಂತರ ಹೋಗಿದ್ದ ಖುಷಿಗೆ ಮಾರನೆಯ ದಿನ ಮುಂಜಾನೆ ಬೈಕ್ ಏರಿ ಒಂದು ದಿನದ ಟ್ರಿಪ್ ಹೊರಟಿದ್ದೆವು. ಆ ಬೈಕ್ ಪಯಣ ನೆನೆಸಿಕೊಂಡಾಗಲೆಲ್ಲಾ ಮೋಟಾರ್ ಸೈಕಲ್ ಡೈರೀಸ್ ಸಿನಿಮಾ ನೆನಪಿಗೆ ಬರುತ್ತದೆ. ಮಾಲೂರಿನಿಂದ ಶುರುವಾದ ನಮ್ಮ ಪಯಣ ಮೊದಲಿಗೆ ಕೆಜಿಎಫ್ ಮುಟ್ಟಿತ್ತು. ಅಲ್ಲಿ ಚಿನ್ನದ ಗಣಿಯ ಮಣ್ಣಿನ ಗುಡ್ಡೆಯ ಮೇಲೆ ಅಡ್ಡಾಡಿದ್ದೆವು, ಆಮೇಲೆ ಕೋಟಿಲಿಂಗ ತಲುಪಿ ಆ ದೊಡ್ಡ ಶಿವ ಲಿಂಗದ ಮುಂದೆ ನಿಂತು ಒಂದಷ್ಟು ಫೋಟೋ ತೆಗೆಸಿಕೊಂಡು ಅಲ್ಲೇ ಪ್ರಸಾದದ ರೀತಿಯಲ್ಲಿ ನೀಡುವ ಊಟ ಮಾಡಿದ್ದೆವು, ನಂತರ ನಮ್ಮ ಪಯಣ ಬೆಳೆಸಿ ಯಾವುದೋ ಬೆಟ್ಟದ ಮೇಲಿದ್ದ ಆಂಜನೇಯ ದೇವಸ್ಥಾನದ ಮೇಲೆ ಒಂದಷ್ಟು ಹೊತ್ತು ಕುಳಿತು ವಿಶ್ರಮಿಸಿದ್ದೆವು. ಕೊನೆಗೆ ಉರಿ ಬಿಸಿಲಿನಲ್ಲಿಯೇ ಗಾಡಿ ಓಡಿಸುತ್ತಾ ನಮ್ಮ ಪಯಣ ಮುಳಬಾಗಿಲು ಸಮೀಪದ ಕುರುಡು ಮಲೆ ತಲುಪಿತ್ತು. ಆ ಗಣಪತಿ ದೇವಸ್ಥಾನದ ಒಳಗೆ ಹೊಕ್ಕಿದ್ದೇ ದೇವರ ವಿಗ್ರಹದ ಕಣ್ಣುಗಳು ನನ್ನನ್ನೇ ದಿಟ್ಟಿಸಿ ನೋಡುತ್ತಿರುವಂತೆ ಭಾಸವಾಯಿತು. ಎಷ್ಟೊಂದು ದೇವಸ್ಥಾನಗಳ ನೋಡಿರುವ ನನಗೆ ಆ ದೇವಸ್ಥಾನ ವಿಶೇಷ ಎನಿಸಿತು. ಮೊದಲು ಚಿಕ್ಕದಾಗಿದ್ದ ಈ ವಿಗ್ರಹ ಕಾಲಾಂತರದಲ್ಲಿ ಬೆಳೆದು ಬೆಳೆದು ಇಷ್ಟು ದೊಡ್ಡದಾಗಿದೆ ಈಗಲೂ ಅದು ಬೆಳೆಯುತ್ತಾ ಇದೆ ಎಂದು ಆ ವಿಗ್ರಹ ಕುರಿತು ಅಲ್ಲಿನ ಹುಡುಗನ ವಯಸ್ಸಿನ ಪೂಜಾರಿ ಕತೆ ಹೇಳಿದ್ದ. ಯಾಕೋ ನಾನು ನೋಡಿರೋ ದೇವಾಲಯಗಳಲ್ಲೆಲ್ಲಾ ನನ್ನ ಫೇವರೆಟ್ ಎಂದರೆ ಕುರುಡು ಮಲೆ ಗಣಪ ಎಂದೆನಿಸಿತ್ತದೆ. ನನ್ನನ್ನು ಅಂದು ನಮ್ಮ ಒಂದು ದಿನದ ಟ್ರಿಪ್ ನ ನಂತರ ಕೋಲಾರದ ಹೈವೇನಲ್ಲಿ ಬೆಂಗಳೂರಿನ ಬಸ್ ಹತ್ತಿಸಿದ ಗೆಳೆಯನ ಮುಖ ನೋಡಿ ನಾಲ್ಕು ವರ್ಷಗಳಾಗಿರಬಹುದು. ಅವನಿಗೆ ಮದುವೆಯಾಗಿ ಮಗುವಾದ ಮೇಲೆ ಯಾವಾಗಲಾದರೂ ಫೋನ್ ಮಾಡಿದಾಗ “ಹೇ ಮಾತಾಡೋ ಅಂಕಲ್ಲು..” ಎಂದು ತನ್ನ ಮಗನಿಗೆ ಫೋನ್ ಕೊಟ್ಟಾಗ ಯಾಕೋ ಆ ಪುಟ್ಟ ಹುಡುಗನ ಹಲೋ ಅನ್ನೋ ದನಿ ಕೇಳಿ ವಿಪರೀತ ಖುಷಿಯಾಗ್ತಾ ಇತ್ತು. ಹೀಗಿರುವಾಗ ಎರಡು ತಿಂಗಳ ಹಿಂದಿನ ಒಂದು ದಿನ ಯಾಕೋ ನನ್ನ ಗೆಳೆಯ ರಾಜಣ್ಣನ ಜೊತೆ ಮಾತನಾಡಬೇಕು ಎಂದು ಮನಸ್ಸು ಒತ್ತಿ ಒತ್ತಿ ಹೇಳುತ್ತಿತ್ತು. ನಾಳೆ ಫೋನ್ ಮಾಡೋಣ ನಾಳೆ ಮಾತನಾಡೋಣ ಅಂತ ಎರಡು ದಿನ ಮುಂದೂಡಿದರೂ ಯಾಕೋ ಮನಸ್ಸು ಕೇಳಲೇ ಇಲ್ಲ. ನಾನು ಅವತ್ತು ಫೋನ್ ಮಾಡಿದ್ದೇ ತಡ ಅತ್ತಲಿನ ದನಿ ಬಿಕ್ಕಿ ಬಿಕ್ಕಿ ಅಳುವುದ ಕಂಡು ನಾನು ದಿಗಿಲುಗೊಂಡೆ. “ರಾಜಣ್ಣ ಏನಾಯ್ತು? ಪ್ಲೀಸ್ ಹೇಳಿ ಏನಾಯ್ತು?” ಎಂದು ನಾನು ಗೋಗರೆದ ಮೇಲೆ “ನನ್ನ ತಮ್ಮನಿಗೆ ಆಕ್ಸಿಡೆಂಟ್ ಆಗಿಬಿಟ್ಟಿದೆ ಡಾಕ್ಟ್ರೆ” ಎಂದು ಮತ್ತೆ ರಾಜಣ್ಣ ಜೋರಾಗಿ ಅಳತೊಡಗಿದ. ನಮ್ಮ ಗೆಳೆತನವಾಗಿ ಸುಮಾರು ಏಳೂವರೆ ವರ್ಷಗಳಾಗಿರಬಹುದು. ಯಾರಿಗೆ ಏನೇ ಕಷ್ಟ ಬಂದರೂ ಯಾವಾಗಲು ಧೈರ್ಯ ಹೇಳುತ್ತಿದ್ದ ಗೆಳೆಯನ ಅಳು ಕೇಳಿ ಯಾಕೋ ಮನಸ್ಸಿಗೆ ಬಹಳ ಬೇಸರವಾಯಿತು. ಸಣ್ಣ ಲಗ್ಗೇಜ್ ಆಟೋದಿಂದ ಬ್ಯುಸಿನೆಸ್ ಶುರು ಮಾಡಿದ್ದ ರಾಜಣ್ಣ ಇತ್ತೀಚೆಗೆ ಲಾರಿಯೊಂದನು ಖರೀದಿಸಿದ್ದ. ಬೆಂಗಳೂರಿನ ಯಾವುದೋ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ತಮ್ಮನನ್ನು ಕೆಲಸ ಬಿಡಿಸಿ ಆಗಾಗ ಲಾರಿಯ ಜೊತೆ ಕಳುಹಿಸುತ್ತಿದ್ದ. ದುರಾದೃಷ್ಟವಸಾತ್ ಹಳ್ಳಕ್ಕೆ ಮಗುಚಿಕೊಂಡಿದ್ದ ಲಾರಿಯನ್ನು ಮತ್ತೆ ರೋಡಿಗೆ ತರಲು ಹೋಗಿ ಲಾರಿ ಪಲ್ಟಿ ಹೊಡೆದು ತಮ್ಮನ ಬೆನ್ನು ಮೂಳೆ ಮುರಿದಿತ್ತು. ಆಮೇಲೆ ಗೆಳೆಯ ರಾಜಣ್ಣನಿಗೆ ಕಷ್ಟಗಳ ಸುರಿಮಳೆಯೇ ಬಂದಿತು. ಬೆನ್ನು ಮೂಳೆ ಮುರಿದು ಕೈ ಕಾಲು ಅಲ್ಲಾಡಿಸಲು ಆಗದೆ ಎಲ್ಲವನೂ ಹಾಸಿಗೆಯ ಮೇಲೆ ಮಾಡಿಕೊಳ್ಳುವ ತಮ್ಮನನ್ನು ನೋಡಿದಾಗ ನನ್ನ ಗೆಳೆಯನಿಗೆ ಒಡ ಹುಟ್ಟಿದ ತಮ್ಮನ ಕಂಡು ಕರುಳು ಅದೆಷ್ಟು ಚುರುಕ್ ಎನ್ನುತ್ತಿತ್ತೋ ಗೊತ್ತಿಲ್ಲ. ಫೋನ್ ಮಾಡಿದಾಗಲೆಲ್ಲಾ ಅವನ ತಮ್ಮನ ಆರೋಗ್ಯವ ಕುರಿತು ಹೇಳುವುದರ ಜೊತೆಗೆ ಮುಗಿಲು ಮುಟ್ಟುತ್ತಿರುವ ಆಸ್ಪತ್ರೆಯ ಖರ್ಚು, ಕಷ್ಟ ಕಾಲದಲ್ಲಿ ಸಹಾಯ ಹಸ್ತ ನೀಡದ ಅವನೂರಿನ ಅವನ ಚೆಡ್ಡಿ ದೋಸ್ತ್ ಗಳ ಕುರಿತು ಸಹ ಹೇಳುತ್ತಿದ್ದ. ಇಷ್ಟು ಕಷ್ಟಗಳ ಕೊಡುವ ದೇವರು ಇದ್ದಾನೋ ಇಲ್ಲವೋ ತಿಳಿಯದೆ ಒಮ್ಮೊಮ್ಮೆ ನನ್ನ ಗೆಳೆಯನನ್ನು ಈ ಕಷ್ಟಗಳಿಂದ ದಯವಿಟ್ಟು ಪಾರು ಮಾಡು ಎಂದು ದೇವರಲ್ಲಿ ಪ್ರಾರ್ಥಿಸಬೇಕು ಎನಿಸುತ್ತಿತ್ತು. ಖುಷಿಯ ಸಂಗತಿ ಎಂದರೆ ಮೊನ್ನೆ ಮೊನ್ನೆ ಫೋನ್ ಮಾಡಿದಾಗ ತನ್ನ ತಮ್ಮನನ್ನು ಆಸ್ಪತ್ರೆಯಿಂದ ಮನೆಗೆ ಕರೆ ತಂದಿದ್ದೇನೆ. ಎಡಗೈ ಮೇಲಕ್ಕೆ ಎತ್ತುತ್ತಾನೆ ಬಲಗೈ ಒಂಚೂರು ಆಡಿಸ್ತಾನೆ ಎಂದು ಹೇಳುವುದರ ಜೊತೆಗೆ ಹೆಣ್ಣು ಮಗು ಕಣ್ರಿ ಎಂದು ಒಂಚೂರು ಮುಗುಳ್ನಕ್ಕಿದ್ದ. ನನಗಂತೂ ವಿಪರೀತ ಖುಷಿಯಾಯಿತು. ನಾನು ಎಂದಿನಂತೆ ರಾಜಣ್ಣ ಎಲ್ಲಾ ಸರಿಯಾಗುತ್ತೆ ಸುಮ್ಮನಿರಿ ಎಂದಷ್ಟೇ ಹೇಳಿದ್ದೆ.]]>

‍ಲೇಖಕರು G

August 8, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

16 ಪ್ರತಿಕ್ರಿಯೆಗಳು

 1. malathi S

  so nice Nataraju!! like the way you write. best wishes from our side to the well being of your friend Rajanna’s tamma…
  5/5…:-)
  Boss…

  ಪ್ರತಿಕ್ರಿಯೆ
 2. sumathi hegde

  ತುಂಬಾ ಇಷ್ಟ ಆಯ್ತು…ನಟರಾಜ್….ನಿಮ್ಮ ಹಾಗೆ ಎಲ್ಲರಿಗೂ ಜೀವನದಲ್ಲಿ ರಾಜಣ್ಣನ ಹಾಗೆ ಗೆಳೆಯರು ಸಿಗಲಿ… 🙂

  ಪ್ರತಿಕ್ರಿಯೆ
 3. raju

  ಗೆಳೆತನದ ಬಗ್ಗೆ ಅರ್ಥಪೂರ್ಣವಾಗಿ ವಿವರಿಸಿ ಬರೆದಿದ್ದೀರಿ.
  ಒಳ್ಳೇಯ ಗೆಳೆಯರನ್ನು ಪಡೆಯಲು ಅದೃಷ್ಠ ಮಾಡಿರಬೇಕು.
  ನನ್ನ ದುರಾದೃಷ್ಟ : ನನಗೆ ಸಿಕ್ಕ ಗೆಳೆಯರೆಲ್ಲಾ ಬೆನ್ನಿಗೆ ಚೂರಿ ಹಾಕಿದವರೇ
  ಯಾರಿಗಾಗಿ ಮರುಗಿದೆನೋ ಅವರೆಲ್ಲಾ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ
  ಶಾಶ್ವತ ನೋವು ತಂದಿಟ್ಟಿದ್ದಾರೆ
  ರಾಜು ವಿನಯ ದಾವಣಗೆರೆ

  ಪ್ರತಿಕ್ರಿಯೆ
 4. BANAVASI SOMASHEKHAR.

  ಗೆಳೆಯನಿಗೆ ಕಷ್ಟಗಳ ಸುರಿಮಳೆ ಬಂದಾಗ ಜೊತೆ ನಿಲ್ಲಬೇಕು.ತುಂಬಾ ಸೋಗಸಾಗಿ ಮೂಡಿದೆ.ಅಭಿನಂದನೆಗಳು.ಓದಿ ಆಸ್ವಾದಿಸಿದೆ.

  ಪ್ರತಿಕ್ರಿಯೆ
 5. Manjunath Maravanthe

  ಬಾರಿನಲ್ಲಿನ ಘಟನೆ ಕಣ್ಣಿಗೆ ಕಟ್ಟುವಂತೆ ಇದೆ. ಕಣ್ತೆರೆಸುವಂತಿದೆ.
  ರಾಜಣ್ಣನ ತಮ್ಮನ ಸ್ಥಿತಿ, ಅದಕ್ಕಾಗಿ ದುಃಖ್ಖಿಸುವ ರಾಜಣ್ಣ, ಕಷ್ಟಕಾಲದಲ್ಲಿ ಕೈ ಹಿಡಿಯದ ಊರ ಸ್ನೇಹಿತರು, ಕರುಳು ಚುರುಕ್ ಎನ್ನುವಂತಿದೆ.

  ಪ್ರತಿಕ್ರಿಯೆ
 6. Sarvesh Kumar

  Doctre anthu namma malurina bhashe and sneha eradu savididdiri anta aythu. chennagodhe lekhana, khushi aythu. Kudthi andhre nam kade aduge maneya enjalu neeru antha.

  ಪ್ರತಿಕ್ರಿಯೆ
 7. B C Vidya

  thumba hidisithu……. rajanna ega hegiddare.avarige nanna shubha harikegalu……. manamuttittu e lekhana…. devaru olled maadli…………

  ಪ್ರತಿಕ್ರಿಯೆ
 8. Badarinath Palavalli

  ಗೆಳೆತನದ ಬಗೆಗಿನ ಈ ವಾರದ ಬರಹ ಚೆನ್ನಾಗಿ ಮೂಡಿ ಬಂದಿದೆ. ಒಳ್ಳೆ ಗೆಳೆತನಕ್ಕೂ ಯೋಗ ಬೇಕು.
  ಬಾರಿನಲ್ಲಿನಡೆದ ಘಟನೆಯು ಅರ್ಥ ಮಾಡಿಕೊಳ್ಳ ಬೇಕಾದ ವಿಚಾರ.

  ಪ್ರತಿಕ್ರಿಯೆ
 9. Santhosh

  Hey Nattu,
  Very nice write up.
  I dont mention it as a story.
  Hats off to your good heart.
  I like the statement from you about not forgetting the friends even if they are in bad condition.
  Long live your friendship.
  Santhu.

  ಪ್ರತಿಕ್ರಿಯೆ
 10. Mohan V Kollegal

  ಓಹ್ ಭಾವಪೂರ್ಣ… ಒಳ್ಳೆಯ ಗೆಳೆತನವೆಂದರೆ ಮಾತಿನಲ್ಲೂ ನೋಯಿಸುವುದಲ್ಲ… ಬದಲಾಗಿ ತಲೆ ನೇವರಿಸುವುದು… ಖುಷಿಕೊಟ್ಟ ಬರಹ… 🙂

  ಪ್ರತಿಕ್ರಿಯೆ
 11. kanikiaraju

  Gelethana…jeevanada oosiru kattuva samayadalli…oosirannu bichiduthe…daiva gelethanakku hattira karedoyotthe..embuvudy illi shakshyavagide…nimma gelethana chirayuvagirali hagu itararige madariyagirali.

  ಪ್ರತಿಕ್ರಿಯೆ
 12. Nataraju S M

  ಒಂದು ದಿನದಲ್ಲಿ 62 ಫೇಸ್ ಬುಕ್ ಶೇರ್ ಮತ್ತು 14 ಕಾಮೆಂಟ್ ಗಳು…
  ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ ಹೀಗೆಯೇ ಇರಲಿ ಗೆಳೆಯರೇ..
  ನಿಮ್ಮೆಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು…

  ಪ್ರತಿಕ್ರಿಯೆ
 13. amardeep.p.s.

  ನಟರಾಜು ಅವ್ರೆ, ನಿಮ್ಮ ಗೆಳೆತನದ ಬಗ್ಗೆ ಓದಿ ನಿಮ್ಮ ಗೆಳೆಯನ ದೊಡ್ಡ ಗುಣ ಹಾಗು ನಿಮ್ಮ ಹಾರೈಕೆಯಾ ಮಾತು ಧೈರ್ಯ ತುಂಬುವ ಗುಣ ಇಷ್ಟವಾಯಿತು……ಅಭಿನಂದನೆಗಳು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: