ನಲ್ಮೆಯಿ೦ದ ನಟರಾಜು : ಚಾರು ದಾ ತಮ್ಮ ಕೇಳಿದ ಪ್ರಶ್ನೆ

ಅಷ್ಟೆಲ್ಲಾ ದುಡ್ಡು ಸಂಪಾದನೆ ಮಾಡಿ ಏನ್ ಮಾಡ್ತೀರ? – ನಟರಾಜು ಎಸ್ ಎಂ ಕಥೆ 1: ಕೋಲ್ಕತ್ತಾದಿಂದ ಮುನ್ನೂರ ಅರವತ್ತು ಕಿಲೋ ಮೀಟರ್ ದೂರದಲ್ಲಿ ಪುರೂಲಿಯಾ ಜಿಲ್ಲೆಗೆ ಸೇರಿದ ಅಯೋಧ್ಯ ಪಹಾಡ್ ಎಂಬ ಸರಣಿ ಬೆಟ್ಟಗಳಿವೆ. ಆ ಬೆಟ್ಟದ ಮೇಲೆ ಎಷ್ಟೊಂದು ಊರುಗಳು ಸಹ ಇವೆ. ಅಲ್ಲಿನ ಸುತ್ತ ಮುತ್ತಲಿನ ಆ ಬೆಟ್ಟಗಳ ಮತ್ತು ಕಾಡುಗಳ ಸಮೂಹಕ್ಕೆ ಜಂಗಲ್ ಮಹಲ್ ಎಂದು ಕರೆಯುತ್ತಾರೆ. ಆ ಜಂಗಲ್ ಮಹಲ್ ನ ಒಳಗೆ ಮಾವೋವಾದಿಗಳು ಎಂದು ಕರೆಯಲ್ಪಡುವ ಒಂದು ಬಗೆಯ ನಕ್ಸಲೀಯರ ಗುಂಪುಗಳು ಅಡಗಿ ಕುಳಿತಿವೆ. ಒಮ್ಮೆ ಆ ಅಯೋಧ್ಯ ಪಹಾಡ್ ನ ಮೇಲಿರುವ ಒಂದು ಪುಟ್ಟ ಊರಿಗೆ ಹೋಗಿದ್ದೆ. ಮಾವೋವಾದಿಗಳಿಗೆ ಹೆದರಿ ಆ ಜಾಗಕ್ಕೆ ಟ್ರೆಕ್ಕಿಂಗ್ ಮತ್ತು ಪ್ರವಾಸಕ್ಕೆ ಬರುತ್ತಿದ್ದ ಜನರು ಇದ್ದಕ್ಕಿದ್ದ ಹಾಗೆ ಬರುವುದ ನಿಲ್ಲಿಸಿದ ಮೇಲೆ ಅಲ್ಲಿನ ಹೋಟೆಲ್ ಗಳು ಮತ್ತು ಪ್ರವಾಸಿ ಮಂದಿರಗಳೆಲ್ಲಾ ಮುಚ್ಚಿ ಹೋಗಿದ್ದವು. ಆ ವಿಷಯ ತಿಳಿಯದಿದ್ದ ನಾನು ಆ ಜಾಗ ಪ್ರವಾಸಿ ತಾಣವೆಂದು ಭಾವಿಸಿ ಅಲ್ಲಿಗೆ ಹೋಗಿದ್ದರಿಂದ ಬಸ್ ನಲ್ಲಿ ನನ್ನ ಪಕ್ಕ ಕುಳಿತ್ತಿದ್ದ ಚಾರು ದಾ ಎಂಬಾತ ಆ ಊರಿನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದ. ಆಗಂತುಕರನ್ನು ಮನೆಯಲ್ಲಿ ಇಟ್ಟುಕೊಂಡರೆ ಇತ್ತ ಮಾವೋವಾದಿಗಳ ಕೆಂಗಣ್ಣಿಗೂ ಅತ್ತ ಪಹರೆ ತಿರುಗುವ ನಾಗಾ ಟ್ರೂಪಿಗೂ ಉತ್ತರಿಸಬೇಕಾಗಿ ಬರುತ್ತದೆ ಎನ್ನುವ ಭಯ ಅವನಲ್ಲಿತ್ತು ಅನಿಸುತ್ತೆ. ರಾತ್ರಿ ವೇಳೆ ಆ ಊರು ತಲುಪಿದ್ದರಿಂದ ಆ ಊರಿನಲ್ಲೇ ಇರುವ ಪುಟ್ಟ ಹೋಟೆಲ್ ನಲ್ಲಿ ಬಿಸಿ ಬಿಸಿ ರೋಟಿ ಮತ್ತು ಮೊಟ್ಟೆಯ ಫ್ರೈ ತಿಂದು ಹೊಟ್ಟೆ ತುಂಬಿಸಿಕೊಂಡು ಚಾರು ದಾ ನ ಅಣ್ಣನ ಮನೆಯಲ್ಲಿ ಮಲಗಿದೆನಾದರೂ ಯಾಕೋ ಹೊಸ ಜಾಗವಾಗಿದ್ದರಿಂದ ಕಣ್ಣಿಗೆ ನಿದ್ದೆ ಹತ್ತಿರಲಿಲ್ಲ. ನಿದ್ದೆ ಬರದೆ ಇದ್ದುದರಿಂದ ಸುಮ್ಮನೆ ಗೋಡೆಯ ಮೇಲೆ ಕಣ್ಣು ಆಡಿಸಿದ್ದೆ. ಕಿಟಕಿಯಂತೆ ಕಾಣುವ ಸರಳುಗಳಿಲ್ಲದ ಮಣ್ಣಿನಿಂದ ಮಾಡಿದ ಗೋಡೆಯಲ್ಲಿನ ಕಿಟಕಿ ಕಣ್ಣಿಗೆ ಬಿದ್ದಿತ್ತು. ಆ ಕಿಟಕಿಯಲ್ಲಿ ಒಬ್ಬ ವ್ಯಕ್ತಿ ಸಲೀಸಾಗಿ ನುಗ್ಗಿ ಆ ಮನೆ ಒಳಗೆ ಬರಬಹುದಿತ್ತು. ಆ ಕಿಟಕಿ ನೋಡಿದ್ದೇ ದೆವ್ವಗಳ ಮತ್ತು ಮಾವೋವಾದಿಗಳ ಚಿತ್ರಗಳು ಕಣ್ಣ ಮುಂದೆ ಬರಲು ಶುರು ಮಾಡಿದವು. ಯಾರಾದರೂ ಮಾವೋವಾದಿಗಳು ಬಂದು ಆ ಕಿಟಕಿಯಿಂದ ಗನ್ ತೂರಿಸಿ ನನ್ನ ಕೊಂದು ಬಿಟ್ಟರೆ ಏನು ಮಾಡುವುದು ಎಂದು ಒಮ್ಮೆ ಭಯವಾದರೆ ಮತ್ತೊಮ್ಮೆ ಯಾರಾದರೂ ಕೋಲು ಉಪಯೋಗಿಸಿ ಕಿಟಕಿಯಿಂದ ನನ್ನ ಬ್ಯಾಗ್ ಕದ್ದು ಬಿಟ್ಟರೆ ಏನು ಮಾಡುವುದು ಎನ್ನುವ ಭಯವೂ ಆಗುತ್ತಿತ್ತು. ನನ್ನ ಭಯ ಹೆಚ್ಚಿಸಲೆಂದೇ ಗೂಳಿಡುವ ನರಿಗಳು, ಮಕ್ಕಳು ಅಳುವಂತೆ ಸದ್ದು ಮಾಡುವ ಬೆಕ್ಕುಗಳು ಕೂಗ ತೊಡಗಿದಾಗ ಆಕಸ್ಮಾತ್ ಬಿಳಿ ಬಟ್ಟೆ ತೊಟ್ಟ ದೆವ್ವ ಬಂದು ಹ್ಹಿ ಹ್ಹಿ ಹ್ಹಿ ಎಂದು ನಕ್ಕು ಬಿಟ್ಟರೆ ಎಂದು ನೆನೆದಿದ್ದೇ ವಿಪರೀತ ಭಯವಾಗಿ ರಗ್ಗು ಹೊದ್ದು ಕಣ್ಮುಚ್ಚಿದ್ದೆ. ಮನೆಯ ಮುಂದೆ ಕಸ ಗುಡಿಸುವ ಸದ್ದು ಮತ್ತು ನೀರು ಎರಚುವ ಸದ್ದಿಗೆ ಎಚ್ಚರವಾದಾಗ ಬೆಳಕಾಗಿತ್ತು. ಬೆಳಿಗ್ಗೆ ರೆಡಿಯಾಗಿ ಚಾರು ದಾ ನ ಮನೆ ಮುಂದಿರುವ ಹುಣಸೇ ಮರದ ಕೆಳಗೆ ಹಗ್ಗದಿಂದ ಮಾಡಿರುವ ಮಂಚಗಳ ಮೇಲೆ ಕುಳಿತುಕೊಳ್ಳಲು ಹೋದಾಗ ನನ್ನ ಬರುವಿಕೆಗೆ ಕಾದು ಕುಳಿತಿರುವಂತೆ ಚಾರು ದಾ ನ ಕಿರಿಯ ತಮ್ಮ ಕುಳಿತ್ತಿದ್ದ. ಚಾರು ದಾ ಕೊಟ್ಟ ಹಾಲು ಹಾಕದೆ ಬರೀ ಟೀ ಪುಡಿ, ಸಕ್ಕರೆ ಹಾಕಿ ಮಾಡಿರುವ ಕೆಂಪು ಚಹಾದ ರುಚಿ ಬೇರೆ ತರಹ ಇರುವುದ ಕಂಡು ಏನಿದು ಸ್ಪೆಷಲ್ ಟೀ ಎಂದಿದ್ದೆ. ಚಾರು ದಾ ದಾಲ್ಚಿನ್ನಿ ಎಲೆಯನ್ನು ನನ್ನ ಕೈಗೆ ನೀಡಿ ನಕ್ಕಿದ್ದ. ಆ ಚಹಾಕ್ಕೆ ಬೇರೆ ರುಚಿ ಬಂದಿರುವುದರ ಹಿಂದಿನ ಗುಟ್ಟು ತಿಳಿಯಿತು. ಹಾಗೆಯೇ ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾಗ ಚಾರು ದಾ ನಿಗೆ ಹೆಂಡತಿ ಇದ್ದು ಇಬ್ಬರು ಮಕ್ಕಳು ಮತ್ತು ಮೂರು ಜನ ಅಣ್ಣ ತಮ್ಮಂದಿರು ಇದ್ದಾರೆ ಎಂದು ತಿಳಿಯಿತು. ಮೊದಲ ಅಣ್ಣನ ಹೆಂಡತಿ ಸ್ವರ್ಗವಾಸಿ. ಆತ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಕೆಲಸಗಾರ. ಆತನಿಗೆ ಒಬ್ಬ ಮಗನಿದ್ದಾನೆ. ಹಿರಿಯ ತಮ್ಮ ವ್ಯವಸಾಯ ಮಾಡಿಕೊಂಡಿದ್ದಾನೆ. ಅವನಿಗೆ ಮೂರು ಜನ ಮಕ್ಕಳು. ಕಿರಿಯ ತಮ್ಮನಿಗೆ ಚಿಕ್ಕ ವಯಸ್ಸು. ಎರಡು ಮಕ್ಕಳಿವೆ. ನನ್ನೊಡನೆ ಮಾತನಾಡಲು ಆತುರನಾಗಿದ್ದ ಕಿರಿಯ ತಮ್ಮನನು ಮಾತಿಗೆ ಎಳೆದಾಗ ಅವನು ತನ್ನ ಕಥೆಯನ್ನು ಹೀಗೆ ಹಂಚಿಕೊಂಡ..

“ನಾನು ಚಾರು ದಾ ನ ಕಿರಿಯ ತಮ್ಮ. ನಾನು 12 ನೇ ತರಗತಿಯ ವರೆಗೂ ಓದಲಷ್ಟೇ ಸಾಧ್ಯವಾಯಿತು. ಯಾಕೆಂದರೆ ಹತ್ತಿರದ ಸಿಟೀಲಿ ಡಿಗ್ರಿ ಮಾಡುತ್ತಿದ್ದವನನ್ನು ನಮ್ಮ ಊರಿನ ಶಾಲೆಯಲ್ಲೇ ಮಾಸ್ಟರರ ಕೆಲಸ ಕೊಡಿಸುವೆ ಎಂದು ಆಮಿಷ ತೋರಿಸಿ ಸ್ಥಳೀಯ ರಾಜಕೀಯ ಪುಢಾರಿಯೊಬ್ಬ ನನ್ನಿಂದ ಹಣ ಪಡೆದು ನಮ್ಮೂರಿನ ಶಾಲೆಯಲ್ಲಿ ಮಾಸ್ಟರ್ ಕೆಲಸ ಕೊಡಿಸಿದ್ದ. ಒಂದಷ್ಟು ವರ್ಷಗಳ ಮೇಲೆ ಫರ್ಮನೆಂಟ್ ಆಗುವುದೆಂದು ಭರವಸೆ ಸಹ ನೀಡಿದ್ದ. ಕಾಲ ಕಳೆದಂತೆ ಹೇಗಿದ್ದರೂ ಕೆಲಸವಿದೆಯಲ್ಲಾ ಎಂದು ಮದುವೆಯಾದೆ. ದುರದೃಷ್ಟವಶಾತ್ ಸ್ಥಳೀಯ ಸರ್ಕಾರ ಬದಲಾಯಿತು. ಅಧಿಕಾರಕ್ಕೆ ಬಂದ ಹೊಸ ಸ್ಥಳೀಯ ರಾಜಕೀಯ ಪುಢಾರಿಗಳು ನನ್ನನ್ನು ಕೆಲಸದಿಂದ ತೆಗೆದು ತಮಗೆ ಬೇಕಾದವರನ್ನು ಕೆಲಸಕ್ಕೆ ಸೇರಿಸಿಕೊಂಡರು. ಮದುವೆಯಾಗಿದ್ದರಿಂದ ಸಂಸಾರ ಕಟ್ಟಿಕೊಂಡು ಎಲ್ಲಿಗೂ ಹೋಗಲಾಗಲಿಲ್ಲ. ಊರಿನಲ್ಲಿ ಅದೂ ಇದೂ ಕೆಲಸ ಮಾಡ್ತಾ ಏನಾದರೂ ಬ್ಯುಸಿನೆಸ್ ಮಾಡೋಣ ಎಂದುಕೊಂಡೆ. ಸುತ್ತ ಮುತ್ತಲಿನ ಊರುಗಳಲ್ಲಿ ಕೋಳಿ ಅಂಗಡಿಗಳು ಇರದಿರುವುದ ಕಂಡು ಕೋಳಿ ಮಾಂಸ ಮಾರುವ ಅಂಗಡಿಯೊಂದನು ಶುರು ಮಾಡಿದ್ದೆ. ಕೋಳಿ ಕತ್ತರಿಸಲು ಒಬ್ಬ ಹುಡುಗನನ್ನು ಸಹ ನೇಮಿಸಿಕೊಂಡಿದ್ದೆ. ಒಂದಷ್ಟು ತಿಂಗಳುಗಳ ನಂತರ ವ್ಯಾಪಾರ ಕುದುರಿ ನನ್ನ ಕೋಳಿ ಅಂಗಡಿ ಫೇಮಸ್ ಆಗುತ್ತಿದ್ದಂತೆ ಆ ಕೋಳಿ ಕತ್ತರಿಸುವ ಹುಡುಗ ಕೆಲಸ ಬಿಟ್ಟುಬಿಟ್ಟ. ಒಂದಷ್ಟು ದಿನ ನಾನೇ ಕೋಳಿ ಕತ್ತರಿಸಿದೆನಾದರೂ ಮೊಬೈಲ್ ನಲ್ಲಿ ಶ್ರೀ ಹರಿಯ ಹಾಡುಗಳನ್ನು ಕೇಳಿದಾಗಲೆಲ್ಲಾ ಕೋಳಿಗಳನ್ನು ದಿನಾ ಕತ್ತರಿಸಿ ನಾನು ಪಾಪಿಯಾಗುತ್ತಿದ್ದೇನೆ ಎಂಬ ಭಾವನೆ ನನ್ನಲ್ಲಿ ಮೂಡುತ್ತಿತ್ತು. ಅದಕ್ಕೆ ನನ್ನ ಕೋಳಿ ಅಂಗಡಿಯನ್ನು ಅಳಿದುಳಿದ ಕೋಳಿಗಳ ಸಮೇತ ನನ್ನ ಗೆಳೆಯನೊಬ್ಬನಿಗೆ ಮಾರಿಬಿಟ್ಟೆ. ಈಗ ಪುಟ್ಟ ಅಂಗಡಿ ಇಟ್ಟುಕೊಂಡಿದ್ದೇನೆ. ವ್ಯವಸಾಯದ ಜೊತೆಗೆ ಅಂಗಡಿಯನ್ನು ನಡೆಸುತ್ತಾ ಅದರ ಜೊತೆ ಶ್ರೀ ರಾಮಕೃಷ್ಣ ಮಠದವರು ನಮ್ಮ ಹಳ್ಳಿಯವರಿಗಾಗಿ ನಡೆಸುವ ಮನೆ ಪಾಠದ ಶಾಲೆಯೊಂದರಲ್ಲಿ ಮನೆ ಪಾಠ ಮಾಡುತ್ತಾ ನನ್ನ ಹೆಂಡತಿ ಮಕ್ಕಳ ಜೊತೆ ನೆಮ್ಮದಿಯಾಗಿದ್ದೇನೆ. ” ಎಂದು ಅವನು ತನ್ನ ಕಥೆ ಹೇಳುತ್ತಿದ್ದರೆ ಅವನ ಮಾತುಗಳನ್ನು ನನ್ನಂತೆಯೇ ಆಸಕ್ತಿಯಿಂದ ಆಲಿಸುತ್ತಿದ್ದ ಅವನ ಮಕ್ಕಳು ಮತ್ತು ಹೆಂಡತಿ ಅವನು ಕೋಳಿ ಕತ್ತರಿಸುವಾಗ ಪಾಪಪ್ರಜ್ಞೆ ಮೂಡುತ್ತಿತ್ತು ಎಂಬ ಮಾತಿಗೆ ನಕ್ಕಿದ್ದರು. ತನ್ನ ಮಾತನು ಆತ ಮುಂದುವರೆಸುತ್ತಾ ನೀವು ಯಾವೂರು ಏನು ಓದಿದ್ದೀರಿ ಏನು ಕೆಲಸ ಎಂದೆಲ್ಲಾ ಪ್ರಶ್ನೆಗಳನ್ನು ಕುತೂಹಲದಿಂದ ಕೇಳಿದ್ದ. ನಾನು ಕೆಲಸದಲ್ಲಿಲ್ಲ. ಆದರೆ ಪಿ ಎಚ್ ಡಿ ಮಾಡುತ್ತಿದ್ದೇನೆ ಸರ್ಕಾರದಿಂದ ಫೆಲೋಶಿಫ್ ಬರುತ್ತದೆ ಎಂದಾಗ ಎಷ್ಟು ಬರುತ್ತೆ ಫೆಲೋಶಿಪ್ ಎಂದಿದ್ದ. ನಾನು “ಪರವಾಗಿಲ್ಲ ಬರೋ ಫೆಲೋಶಿಪ್ ನಲ್ಲಿ ಜೀವನ ಸಾಗಿಸಬಹುದು” ಎಂದು ಹೇಳಿದ್ದೆ. ಕೋಲ್ಕತ್ತಾದಲ್ಲಿ ನಿಮಗೆ ಎಷ್ಟು ಖರ್ಚು ಬರುತ್ತದೆ. ಅಪ್ಪ ಅಮ್ಮ ಏನು ಮಾಡಿಕೊಂಡಿದ್ದಾರೆ. ಅವರಿಗೆ ನೀವು ಹಣ ಕಳಿಸ್ತೀರ ಎಷ್ಟು ಕಳಿಸ್ತೀರಿ ಎಂದು ಹತ್ತಾರು ಪ್ರಶ್ನೆಗಳ ಕೇಳಿದವನೆ ಅವನ ಪ್ರಶ್ನೆಗಳಿಗೆ ನಾನು ಉತ್ತರಿಸುತ್ತಿದ್ದಂತೆ ಕೊನೆಗೆ ನಿಮ್ಮ ಫೆಲೋಶಿಪ್ ಇಷ್ಟಿರಬಹುದು ಎಂದು ಹೇಳಿದ್ದ. ನಾನು ನಕ್ಕಿದ್ದೆ. ನನಗೆ ಅವನ ಬುದ್ದಿವಂತಿಕೆ ಕಂಡು ಅಚ್ಚರಿಯಾಗಿತ್ತು. ನಿಮಗೆ ಎಷ್ಟೊಂದು ದುಡ್ಡು ಬರುತ್ತೆ ನೋಡಿ ನಾವು ಇಲ್ಲಿ ಒಂದು ಸಾವಿರ ಎರಡು ಸಾವಿರ ಸಂಪಾದನೆ ಮಾಡಬೇಕು ಅಂದ್ರೆ ಎಷ್ಟು ಕಷ್ಟಪಡಬೇಕು ಎಂದಿದ್ದ. ಅಯ್ಯೋ ಸಿಟಿಗಳಲ್ಲಿ ಸಾಫ್ಟ್ ವೇರ್ ಇಂಜಿನಿಯರುಗಳು, ಎಂಬಿಎ ಮಾಡಿರೋರ ಮುಂದೆ ನನ್ನ ಫೆಲೋಶಿಪ್ ಏನಂದ್ರೆ ಏನೂ ಅಲ್ಲ ಎಂದು ಅವನಿಗೆ ವಿವರಿಸಿದ್ದೆ. “ಅವರಿಗೆಲ್ಲಾ ಅಷ್ಟೊಂದು ಸಂಬಳ ಬರುತ್ತೆ ಅಂತೀರಲ್ಲ ಸರ್ಕಾರ ನಮ್ಮಂತಹ 10ನೇ ಕ್ಲಾಸ್, ಅಥವಾ 12 ನೇ ಕ್ಲಾಸ್ ಓದಿರೋ ನಿರುದ್ಯೋಗಿಗಳನ್ನು ಗುರುತಿಸಿ ನಮಗೆ ನಮ್ಮೂರಲ್ಲೇ ಒಂದು ಮನೆ ಪಾಠ ಮಾಡೋ ಕೆಲಸಾನೋ ಇಲ್ಲಾ ಇನ್ಯಾವುದಾದ್ರು ಕೆಲಸ ವಹಿಸಿ ಅವರಿಗೆಲ್ಲಾ ಕೊಡೋ ಸಂಬಳದಲ್ಲಿ ಒಂದೆರಡು ಸಾವಿರ ಕಡಿಮೆ ಮಾಡಿ ನಮ್ಮಂತಹವರಿಗೆ ಕೊಟ್ರೆ ಆಗಲ್ವ” ಎಂದಿದ್ದ. ನನಗೆ ಏನು ಉತ್ತರ ನೀಡಬೇಕೋ ತಿಳಿಯಲಿಲ್ಲ.. ಕಥೆ 2: ಕೋಲ್ಕತ್ತಾದಲ್ಲಿರುವ ಸಿಯಾಲ್ದಾ ರೈಲ್ವೆ ನಿಲ್ದಾಣ ಬಹುಶಃ ಭಾರತದಲ್ಲಿ ಅತಿ ಹೆಚ್ಚು ಗಿಜಿಗುಡುವ ರೈಲ್ವೆ ನಿಲ್ದಾಣಗಳಲ್ಲೊಂದು. ಒಂದು ದಿನ ಮುಂಜಾನೆ ಯಾವುದೋ ಕೆಲಸದ ನಿಮಿತ್ತ ಸಿಯಾಲ್ದಾದಿಂದ ಬ್ಯಾರಕ್ ಪುರಕ್ಕೆ ಹೋಗಲು ಲೋಕಲ್ ಟ್ರೈನ್ ಹತ್ತಿದ್ದೆ. ನಾನಿದ್ದ ಬೋಗಿ ತುಂಬಾ ಜನ. ನಿಲ್ಲಲು ಜಾಗವಿರಲಿಲ್ಲ. ಅಷ್ಟು ಜನಗಳ ಮಧ್ಯೆ ನಿಂತಿದ್ದರೂ ಡಿಸೆಂಬರ್ ತಿಂಗಳಾಗಿದ್ದರಿಂದ ಬೆಳಗಿನ ಚುಮುಚುಮು ಚಳಿಗೆ ಮೈ ಒಂಚೂರು ನಡುಗುತ್ತಿತ್ತು. ಆ ಚಳಿಯಲ್ಲೇ ಹಳೆ ಬಟ್ಟೆ ತೊಟ್ಟಿರುವ ವಯಸ್ಸಾದ ಹೆಂಗಸೊಬ್ಬಳು ನಾನಿದ್ದ ಬೋಗಿಯನ್ನು ಏರಿದಳು. ಆಕೆಯ ಕೈಯಲ್ಲಿ ಯಾವುದೋ ಹಳೆಯ ಬುತ್ತಿ ಇತ್ತು. ಇದ್ದಕ್ಕಿದ್ದಂತೆ ಒಬ್ಬೊಬ್ಬಳೇ ಏನೇನೋ ಮಾತನಾಡಿಕೊಳ್ಳುತ್ತಿದ್ದಳು. ಟ್ರೈನ್ ಶುರುವಾಗಿದ್ದೇ ತಡ ಟ್ರೈನಿನ ಸದ್ದಿನ ಜೊತೆಗೆ ಅವಳ ಸದ್ದು ಸಹ ಜೋರಾಯಿತು. ಏನೋ ಬಡಬಡಿಸುತ್ತಿದ್ದಾಳೆ ಎಂದು ಎತ್ತಲೋ ಧ್ಯಾನಸ್ಥನಾಗಿದ್ದ ನನಗೆ ಅವಳ ಬೆಂಗಾಳಿ ಮಾತುಗಳು ಒಂಚೂರು ಚೂರೇ ಕಿವಿಗೆ ಬೀಳುತ್ತಿದ್ದವು. ಟ್ರೈನಿನ ಸದ್ದಿಗೆ ಅವಳ ಮಾತು ಅಷ್ಟು ಅರ್ಥ ಆಗದಿದ್ದರೂ ನನಗೆ ಅರ್ಥವಾದ ಮಾತುಗಳ ತುಣುಕುಗಳು ಈಗಿವೆ. “ನಿಮ್ಮ ಮೊಕ ಮಣ್ ತಿನ್ನ. ಯಾರಾದ್ರು ಬಡವ್ರು, ಬಿಕ್ಷುಕ್ರು ಕೈ ಚಾಚಿದ್ರೆ ಒಂದ್ ರೂಪಾಯೋ ಎರಡು ರೂಪಾಯೋ ನೀಡಿದ್ರೆ ನಿಮ್ ಕೈ ಸೇದೋಗುತ್ತಾ. ದಿನಾ ಆಫೀಸ್ ಗೆ ಹೋಗ್ತೀರ. ತಿಂಗ್ ತಿಂಗ್ಳು ಸಂಬಳ ಎಣಿಸ್ತೀರ. ಯಾರ್ಗಾದ್ರು ಒಂದ್ ರೂಪಾಯಿ ಸಹಾಯ ಮಾಡೀರ ನೀವು. ನೀವೆಲ್ಲಾ ಆಫೀಸರ್ ಗಳು, ಓದಿರೋರು. ನೀವ್ ಓದಿ ಬೂದಿ ಮುಕ್ಕೀರೋದು ಅಷ್ಟರಲ್ಲೇ ಅದೆ.” ಎಂದು ಬಾಯಿಗೆ ಬಂದಂತೆ ಬಯ್ಯುತ್ತಲೇ ಇದ್ದಳು. ಆಶ್ಚರ್ಯವೆಂದರೆ ಯಾರೊಬ್ಬರು ತುಟಿ ಪಿಟಿಕ್ ಅನ್ನಲಿಲ್ಲ. ಇವತ್ತು ಆಗಷ್ಟ್ ಹದಿನೈದು. ನಮ್ಮ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯವನು ನೆನೆದು ತ್ರಿವರ್ಣ ಧ್ವಜ ಹಾರಿಸಿ ಖುಷಿಪಡಬೇಕಾದ ದಿನ. ಮೇಲಿನ ಮೊದಲ ಕತೆಯಲ್ಲಿ ಕಂಡ ಚಾರು ದಾ ನ ತಮ್ಮನಂತೆ ಇಂದಿಗೂ ಹಳ್ಳಿಗಳಲ್ಲಿ ತುಂಡು ಭೂಮಿಯಲ್ಲಿ ಮಳೆ ಬಂದರೆ ಬೆಳೆ ಬೆಳೆಯುವ, ಇಲ್ಲದಿದ್ದರೆ ಕೈ ಚೆಲ್ಲಿ ಕೂರುವ ನಿರುದ್ಯೋಗಿ ಸಹೋದರರರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಹಾಗೆಯೇ ಎರಡನೇ ಪುಟ್ಟ ಕತೆಯಲ್ಲಿ ಕಂಡ ಆ ಹೆಂಗಸಿನಂತೆ ಅನ್ನವಿಲ್ಲದೆ ಮನೆ ಇಲ್ಲದೆ ರಸ್ತೆಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ ಜೀವಿಸುತ್ತಿರುವ ಲಕ್ಷಾಂತರ ಬಡಜನರ ದೊಡ್ಡ ಗುಂಪುಗಳೂ ಇವೆ. ನಿರುದ್ಯೋಗಿಗಳಿಗೆ ಕೆಲಸ ನೀಡಿ, ಬಡ ಜನರ ಬದುಕು ಚಂದವಾಗಲು ಕಾರ್ಯಕ್ರಮಗಳ ರೂಪಿಸುವ ಬದಲು ನಮ್ಮ ಮಂತ್ರಿ ಮಹೋಶಯರು, ಅಧಿಕಾರಿಗಳು ಹಣ ನುಂಗುವುದರಲ್ಲಿ ನಿರತರಾಗಿದ್ದಾರೆ.. ಎಷ್ಟೆಲ್ಲಾ ಹಣ ಸಂಪಾದಿಸಿದ ಮೇಲೂ ಜನ ಹಣ ಇಟ್ಟುಕೊಂಡು ಏನು ಮಾಡಲು ಸಾಧ್ಯ ಎಂದು ನನ್ನನ್ನು ನಾನು ಪ್ರಶ್ನಿಸಿಕೊಳ್ಳುತ್ತಲೇ ಇದ್ದೇನೆ..  ]]>

‍ಲೇಖಕರು G

August 15, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

 1. Manjunath Maravanthe

  ನಮಗೆ ಸ್ವಾತಂತ್ರ್ಯ ಸಿಕ್ಕದೆ. ಅದರ ಸತ್ಫಲ ಮಾತ್ರ ಇನ್ನೂ ದಕ್ಕದಿರುವುದು ವಿಪರ್ಯಾಸವೇ ಸರಿ.

  ಪ್ರತಿಕ್ರಿಯೆ
 2. Ashoka Bhagamandala

  ನಮ್ಮ ದೇಶದ ಗಂಭೀರ ಸಮಸ್ಯೆಯನ್ನು ಅತ್ಯಂತ ಸರಳವಾಗಿ ಮನದಟ್ಟಾಗುವಂತೆ ನಿಮ್ಮ ಸ್ವಂತ ಅನುಭವಗಳ ಮೂಲಕ ತುಂಬಾ ಚೆನ್ನಾಗಿ ವಿವರಿಸಿದ್ದೀರ.

  ಪ್ರತಿಕ್ರಿಯೆ
 3. Badarinath Palavalli

  ಕಣ್ಣು ತೆರೆಸುವ ಲೇಖನ, ಚಾರು ದಾ ಅವರಂತೆ ನಮ್ಮ ಹಳ್ಳಿಗಳಲ್ಲೂ ಅರೆ ಹೊಟ್ಟೆ ಸಂಸಾರಸ್ಥರಿದ್ದಾರೆ. ಅಂತೆಯೇ ನನ್ನ ನಗರದಲ್ಲೂ ತೀರ ಬಡತನವೇ ಮೈ ಹೊದ್ದುಕೊಂಡ ಜನಸ್ತೋಮವೂ ಇದೆ.
  ಸರ್ಕಾರ ಸದಾ ಅಭಿವಿದ್ಧಿ ಮಂತ್ರ ಪಠಿಸುತ್ತದೆ. ಆದರೆ ಅದು ಸ್ವ ಅಭಿವೃದ್ಧಿಗಷ್ಟೇ ಸೀಮಿತವಾಗಿ ಭಾರತದಲ್ಲಿ ಶ್ರೀಮಂತ ಬಡವರ ನಡುವಿನ ಅಂತರ ಅಜಗಜಾಂತರ ಆಗುತ್ತಿದೆ.
  ಯಾವತ್ತು ಮನೋ ಕ್ರಾಂತಿಗೆ ಗುರಿಯಾಗಿ ಹೊಸ ಸಮಾಜಕ್ಕೆ ನಾಂದಿಯಾಗುವುದಿಲ್ಲವೋ ಅಲ್ಲಿಯವರೆಗೆ ಈ ಅಂತರವು ತಪ್ಪಿದ್ದಲ್ಲ.

  ಪ್ರತಿಕ್ರಿಯೆ
 4. sumathi hegde

  ತುಂಬಾ ಇಷ್ಟ ಆಯ್ತು…ನಿಮ್ಮ ಲೇಖನ..ನಿಮ್ಮ ಕೊನೆಯ ಪ್ರಶ್ನೆಗೆ ಮಾತ್ರ ಯಾರ ಹತ್ತಿರ ಉತ್ತರ ಸಿಗುವುದಿಲ್ಲ…:)

  ಪ್ರತಿಕ್ರಿಯೆ
 5. M.S.Krishna Murthy

  ಜೀವನಾನುಭವಕ್ಕೆ ತಕ್ಕನಾದ ಪ್ರವಾಸ,

  ಪ್ರತಿಕ್ರಿಯೆ
 6. Praveen

  ನಟರಾಜು ಅವರೇ ಸಮಯೋಚಿತ ಲೇಖನ. ಎಂದಿಗೂ ಉತ್ತರಗಳೇ ಸಿಕ್ಕದ ಪ್ರಶ್ನೆಗಳನ್ನು ಕೇಳುತ್ತ ಕುಳಿತುಕೊಳ್ಳುವ ಅನಿವಾರ್ಯತೆ ಮಾತ್ರ ಉಳಿದುಕೊಂಡಿದೆ. ಪರಿಹಾರಗಳಿದ್ದರೂ ಅವುಗಳನ್ನು ಜಾರಿಗೆ ತರಲಾಗದ ಅಸಹಾಯಕತೆ ಎಲ್ಲೆಲ್ಲೂ ಕಂಡುಬರುತ್ತಿದೆ. ಯೋಚಿಸಲು ಹಚ್ಚುವ ಲೇಖನ..

  ಪ್ರತಿಕ್ರಿಯೆ
 7. Nataraju S M

  ಲೇಖನವನ್ನು ಮೆಚ್ಚಿದ ಸಹೃದಯಿಗಳಿಗೆಲ್ಲಾ ನನ್ನ ವಂದನೆಗಳು.. ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ..
  ಪ್ರೀತಿಯಿಂದ
  ನಟರಾಜು

  ಪ್ರತಿಕ್ರಿಯೆ
 8. Raghunandan K

  ಉತ್ತರಗಳಿಲ್ಲದ ಪ್ರಶ್ನೆಗಳಲ್ಲಿ ಸ್ವಾತಂತ್ರ್ಯ ಮೂಕ ಮೂಕ…
  ದೇಶದ ಸ್ವಾತಂತ್ರ್ಯದಾಚೆಯ ಮನುಷ್ಯನ ಸ್ವಾತಂತ್ರ್ಯ ಎಂದು ಸಿದ್ಧೀಸೀತು??
  ಇತಿಹಾಸದಲ್ಲಿ ನೆರಳೂ ನಗುತ್ತಿದೆ, ಸುಂದರ ಚಿಂತನೀಯ ಬರಹ..

  ಪ್ರತಿಕ್ರಿಯೆ
 9. shivakumar c

  ಚಾರು ದ ಕಥೆಯಲ್ಲಿ ಬಡ ಜನರನ್ನು ರಾಜಕಿಯ ವ್ಯಕ್ತಿಗಳು ಹೇಗೆ ದುರುಪಯೋಗ ಪಡಿಸಿಕೊಳ್ಳುತಾರ ಎಂಬುದು ತಿಳಿಯುತ್ತದೆ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: