ನಲ್ಮೆಯಿ೦ದ ನಟರಾಜು : ತಪ್ಪು ಮಾಡೋದು ಸಹಜ ಕಣೋ

ತಪ್ಪು ಮಾಡೋದು ಸಹಜ ಕಣೋ – ನಟರಾಜು ಎಸ್ ಎ೦ ಹರಿಯುವ ಪುಟ್ಟ ಝರಿಯೊಂದರಲ್ಲಿ ಎರಡು ಮೀನುಗಳು ಈಜುತ್ತಲೂ ನೆಗೆಯುತ್ತಲೂ ಇರುವಾಗ, ಆ ಝರಿಯ ನೀರಿನಲ್ಲಿ ಶುಭ್ರವಾದ ಬಿಳಿಯ ಉಣ್ಣೆಯಿಂದ ಕೂಡಿದ ಹೊಳೆಯುವ ತನ್ನ ಮೈಯನ್ನು ಕಂಡು ಕುರಿಯೊಂದು ಗರ್ವದಿಂದ ಬೀಗಿ ಜಿಗಿಯುತ್ತಾ ನೆಗೆಯುತ್ತಾ ಕುಣಿಯುತ್ತಾ ಖುಷಿಯಾಗಿರುತ್ತದೆ. ಕುರಿಯ ಕುಣಿತ ನೋಡಿ ತಮ್ಮ ಬಿಲದಿಂದ ಹೊರಬಂದ ಎಂತದೋ ಐದು ಮುದ್ದು ಪ್ರಾಣಿಗಳು, ಒಂದು ಮುದ್ದು ಹಕ್ಕಿ ಮತ್ತು ಒಂದು ಚಂದದ ಹಾವು ಸಹ ಕುಣಿಯುತ್ತಿರುತ್ತವೆ. ಇದ್ದಕ್ಕಿದ್ದ ಹಾಗೆ ಟ್ರಕ್ ನಂತಿರುವ ಜೀಪಿನಲ್ಲಿ ಬಂದ ಯಾರೋ ಆ ಕುರಿಯನ್ನು ಹಿಡಿದು ಹೊರಟವರು ಅದರ ಮೈ ಮೇಲಿನ ಉಣ್ಣೆಯನ್ನು ಕತ್ತರಿಸಿ ಮತ್ತೆ ಆ ಕುರಿಯನ್ನು ಅದು ಇದ್ದ ಜಾಗದಲ್ಲೇ ತಂದು ಎಸೆದುಬಿಡುತ್ತಾರೆ. ಉಣ್ಣೆ ಕತ್ತಿರಿಸಿದ ಮೇಲೆ ಬೆತ್ತಲ ದೇಹದಂತೆ ಕಾಣುವ ಕುರಿಯನ್ನು ಕಂಡು ಇಷ್ಟು ದಿನ ಆ ಕುರಿಯ ಕುಣಿತಕ್ಕೆ ಹೆಜ್ಜೆ ಹಾಕುತ್ತಿದ್ದ ಕುರಿಯ ಸ್ನೇಹಿತರಂತಿದ್ದ ಅದೇ ಪ್ರಾಣಿಗಳು ನಗೋಕೆ ಶುರು ಮಾಡುತ್ತವೆ. ಅವುಗಳ ನಗುವಿನಿಂದ ಅವಮಾನಿತಗೊಂಡಂತೆ ಕಂಡ ಕುರಿ ಅಳೋಕೆ ಶುರು ಮಾಡಿದ್ದೇ ಮಳೆಯೂ ಬರುತ್ತದೆ. ಜೊತೆಗೆ ಕತ್ತಲೂ ಆಗಿ ಕುರಿ ಮಂಕಾಗಿ ಮೂಲೆ ಸೇರಿ ಬಿಡುತ್ತದೆ. ಇದು ಪಿಕ್ಷರ್ ಎಂಬ ಕಂಪನಿ ತಯಾರಿಸಿರುವ 4 ನಿಮಿಷ 30 ಸೆಕೆಂಡ್ ಗಳ ಕಿರು ಚಿತ್ರವೊಂದರ ಅರ್ಧ ಕಥೆ. ಈಗ ಈ ಕಥೆಯನ್ನು ಸಧ್ಯಕ್ಕೆ ಇಲ್ಲಿಗೆ ನಿಲ್ಲಿಸುವೆ. ಈಗ ಇಂಟರ್ ವಲ್ ಎಂದುಕೊಳ್ಳಿ. ಉಳಿದರ್ಥ ಕಥೆಯನ್ನು ಮತ್ತೆ ಶುರು ಮಾಡುವ ಮುನ್ನ ಈ ವಿರಾಮದ ವೇಳೆ ಮತ್ತೊಂದು ನಿಜ ಜೀವನದ ಘಟನೆ ಹೇಳುವೆ ಕೇಳಿ. ಒಮ್ಮೆ ನನ್ನ ಬದುಕು ರಸ್ತೆಗೆ ಬಿದ್ದಿತ್ತು. ರಸ್ತೆಗೆ ಬಿದ್ದಿತ್ತು ಎಂದರೆ ನಿತ್ಯ ನೂರರಿಂದ ನೂರೈವತ್ತು ಕಿ ಮೀ ದೂರ ಕಾರಿನಲ್ಲಿ ಪ್ರಯಾಣಿಸಬೇಕಾದ ಅನಿವಾರ್ಯತೆ ಒದಗಿತ್ತು. ಆ ಅನಿವಾರ್ಯತೆಯಲ್ಲಿ ನನ್ನ ಜೊತೆಯಾಗುತ್ತಿದ್ದವರು ಎಂದರೆ ಕಾರ್ ಡ್ರೈವರ್ ಗಳು. ಡ್ರೈವರ್ ಗಳಲ್ಲಿ ತರಾವರಿ ಜನರಿದ್ದಾರೆ. ಅಂತಹ ತರಾವರಿ ಜನರಲ್ಲಿ ನನಗೆ ಸಿಕ್ಕಿದ್ದ ಒಬ್ಬ ಚಾಲಕನ ಹೆಸರು ಮುನಿಯಪ್ಪ. ಆಗ ಅವನ ವಯಸ್ಸು ಇಪ್ಪತ್ತೈದು ವರ್ಷಗಳಿರಬಹುದು. ಕುಳ್ಳ ದೇಹದ, ಗುಂಗುರು ಕೂದಲಿನ ಗಟ್ಟಿ ಮನುಷ್ಯ. ಒರಟು ಕೆಲಸಗಳ ಮಾಡಿ ಹುರಿಗೊಂಡ ದೇಹದವನ ಕೈಗಳ ರಕ್ತ ನಾಳಗಳು ಕೈಯಲ್ಲಿ ಕಟ್ಟಿಕೊಂಡ ದಾರಕ್ಕೋ ಏನೋ ಎದ್ದು ಕಾಣುತ್ತಿದ್ದವು. ಹಾಗೆಯೇ ಅವನ ಬಲಗೈ ಮೇಲೆ ಅವನು ಹಚ್ಚೆ ಹೊತ್ತಿಸಿಕೊಂಡಿರುವ ಆ ಹೆಸರೂ ಎದ್ದು ಕಾಣುತ್ತಿತ್ತು. ಬೆಳಿಗ್ಗೆಯಿಂದ ಸಂಜೆವರೆಗೂ ಜೊತೆಯಲ್ಲೇ ತಿರುಗುವ ಆತನ ಜೊತೆ ಒಮ್ಮೊಮ್ಮೆ ಮಾತುಗಳು, ಜೋಕುಗಳು, ಪ್ರಯಾಣ ಮಾಡಿ ಬೇಸರಗೊಂಡರೆ ಮೌನಗಳೂ ಆವರಿಸಿಬಿಡುತ್ತಿದ್ದವು. ಅಂತಹ ಎಷ್ಟೋ ಮಾತುಗಳಲ್ಲಿ ಒಂದು ದಿನ ಅವನ ಕೈ ಮೇಲಿನ ಹಚ್ಚೆಯನ್ನು ನೋಡಿ “ಏನ್ ಮುನಿಯಪ್ಪ ಯಾರ್ ಹೆಸ್ರು ಅದು” ಎಂದು ನಗುತ್ತಾ ಕೇಳಿದ್ದೆ. “ಸರ್ ನಮ್ ಮಿಸ್ಸಸ್ ಹೆಸ್ರು ಸರ್” ಎಂದಿದ್ದ. “ಓ ಹಂಗಾದ್ರೆ ಲವ್ ಮ್ಯಾರೇಜಾ?” ಎಂಬ ನನ್ನ ಪ್ರಶ್ನೆಗೆ ನಾಚುತ್ತಾ ಮುನಿಯಪ್ಪ ಕಥೆಯೊಂದನು ಹೇಳಲು ರೆಡಿಯಾಗಿದ್ದ. “ಸಾರ್, ನಾನು ಒಂದು ಪ್ಯಾಕ್ಟರಿಗೆ ಕೆಲಸಕ್ಕೆ ಹೋಗ್ತಾ ಇದ್ದೆ. ಅಲ್ಲಿ ಅವರೂ ಕೆಲಸಕ್ಕೆ ಬರ್ತಾ ಇದ್ರು. ಒಂದೇ ಊರವ್ರು ಆಗಿದ್ರಿಂದ ಒಂದೇ ಬಸ್ಸಲ್ಲಿ, ಒಂದೇ ಟೈಮ್ ಗೆ ಹೋಗ್ತಾ ಬರ್ತಾ ಒಬ್ಬರನೊಬ್ರು ಇಷ್ಟಪಟ್ ಬುಟ್ಟೋ. ಈ ವಿಷಯ ನಮ್ ಮನೇಲು ಅವ್ರ್ ಮನೇಲು ಗೊತ್ತಾಗೋಯ್ತು. ನಾವು ಇಬ್ರೂ ಬ್ಯಾರೆ ಬ್ಯಾರೆ ಕ್ಯಾಸ್ಟ್ ಸರ್. ಆಮೇಲೆ ಅವರನ್ನ ಅವರ್ ಮನೆಯವ್ರು ಪ್ಯಾಕ್ಟರಿಗೆ ಕಳಿಸದೇ ಹೋದ್ರು. ನಮ್ ಮಿಸ್ಸಸ್ ನಾನ್ ಇಲ್ಲ ಅಂದೆ ಬದುಕಲ್ಲ ಅಂತ ಒಂದಿನ ಮೈ ಮೇಲೆ ಸೀಮೆಣ್ಣೆ ಹುಯ್ಯಕೊಂಡ್ ಬಿಟ್ಟಿದ್ರು. ಅವ್ರ ಮನೇವ್ರು ಆ ಟೈಮಲ್ಲಿ ನೋಡಕಂಡು ತಡೆದಿದ್ರು. ಆ ವಿಷಯ ಊರವ್ರಿಗೆ ಗೊತ್ತಾಗಿ ಆಮೇಲೆ ನ್ಯಾಯ ಪಂಚಾಯ್ತಿ ಆಗಿ ನಮ್ ಮದುವೆ ಆಯ್ತು ಸರ್. ಆದ್ರೆ ಬ್ಯಾರೆ ಕ್ಯಾಸ್ಟ್ ಹುಡುಗೀನ ಮದುವೆ ಆಗವ್ನೆ ಅಂತ ನಮ್ ಅಪ್ಪ ಅಣ್ಣ ನನ್ನ ಮನೇಗೆ ಸೇರಿಸ್ದೆ ಹೋದ್ರು. ಒಂದಷ್ಟ್ ದಿನ ಬಾಡಿಗೆ ಮನೇಲಿ ಇದ್ದೋ. ಈಗ ಗೌವರ್ಮೆಂಟ್ ನೋರು ಸೈಟ್ ಕೊಟ್ಟಾವ್ರೆ ಅಲ್ಲಿ ಇದ್ದೀವಿ ಸರ್.” ಎಂದು ತನ್ನ ಪ್ರೇಮ ಪುರಾಣವನ್ನು ಆತ ಹೇಳಿದಾಗ ಯಾಕೋ ಅವನ ಯಶಸ್ವೀ ಪ್ರೇಮ ಕಥೆ ಕೇಳಿ ಖುಷಿಯಾಗಿತ್ತು.   ಹೀಗೆ ನನ್ನೊಡನೆ ನಿತ್ಯ ಪಯಣಿಸುತ್ತಿದ್ದ ಮುನಿಯಪ್ಪ ಒಂದು ದಿನ ಕಾರಣಾಂತರದಿಂದ ನನ್ನೊಡನೆ ಕೆಲಸಕ್ಕೆ ಬಂದಿರಲಿಲ್ಲ. ಅಂದು ಸಂಜೆಯ ವೇಳೆ ನಮ್ಮ ಆಫೀಸಿನ ಹೊರಗೆ ನಮ್ಮ ಆಫೀಸಿನ ಅವನ ಸ್ನೇಹಿತರೇ ಮುನಿಯಪ್ಪನನ್ನು ಥಳಿಸುತ್ತಿದ್ದದನ್ನು ಕಂಡು ನನಗೆ ಅಚ್ಚರಿಯಾಗಿತ್ತು. ನಾವು ಆಫೀಸಿನವರು ಸೇರಿ ಹೇಗೋ ಆತನನ್ನು ಬಿಡಿಸಿ ಅಂದು ಮನೆಗೆ ಕಳಿಸಿದ್ದೆವು. ಅವನ ಮೂಗಿನಲ್ಲಿ ಸುರಿಯುತ್ತಿದ್ದ ರಕ್ತ ಒಂಚೂರು ಹರಿದ ಬಟ್ಟೆಯನ್ನು ನೋಡಿ ಬೇಸರವಾಗಿದ್ದ ನಾನು ಅವನ ಗೆಳೆಯನಂತಿದ್ದ ಆಫೀಸಿನ ಹುಡುಗನೊಬ್ಬನನು ವಿಚಾರಿಸಿದಾಗ ಅಂದು ಬೆಳಿಗ್ಗೆಯಿಂದ ನಡೆದ ಘಟನೆಯನ್ನು ಆತ ವಿವರಿಸಿದ್ದ. ಅಂದು ಬೆಳಿಗ್ಗೆ ಕೆಲಸಕ್ಕೆ ಬಂದ ಮುನಿಯಪ್ಪ ಆಫೀಸಿನ ಪಕ್ಕದಲ್ಲೇ ಇರುವ ನಮ್ಮ ಆಫೀಸಿನಲ್ಲೇ ಕೆಲಸ ಮಾಡುವ ಹುಡುಗನ ರೂಮಿಗೆ ಹೋಗಿದ್ದ. ಆ ಹುಡುಗ ಮತ್ತು ಮುನಿಯಪ್ಪ ಒಳ್ಳೆಯ ಸ್ನೇಹಿತರು. ಆ ಹುಡುಗ ಆಫೀಸಿಗೆ ರೆಡಿಯಾಗಲು ಸ್ನಾನಕ್ಕೆ ಕುಳಿತ್ತಿದ್ದರಿಂದ ಆಮೇಲೆ ಬರುವೆನೆಂದು ಮುನಿಯಪ್ಪ ಅವನ ಗೆಳೆಯನ ರೂಮಿನಿಂದ ಹೊರಟು ಬಂದಿದ್ದಾನೆ. ಆ ಹುಡುಗ ಸ್ನಾನ ಮಾಡಿ ಆಫೀಸಿಗೆ ಹೋಗಲು ರೆಡಿಯಾಗುತ್ತಿರುವಾಗ ತನ್ನ ಪ್ಯಾಂಟಿನ ಜೇಬಿನಲ್ಲಿದ್ದ ಪರ್ಸ್ ನಲ್ಲಿ ಆಫೀಸಿನ ದುಡ್ಡು 5000 ರೂಪಾಯಿ ಕಾಣೆಯಾಗಿರುವುದು ಗೊತ್ತಾಗುತ್ತದೆ. ಯಾರು ಕದ್ದಿರಬಹುದು ಎಂದು ಯೋಚಿಸುತ್ತಲೇ ಆಫೀಸಿಗೆ ಬಂದು ಆ ಹುಡುಗ ದುಡ್ಡು ಮಾಯವಾಗಿರುವ ವಿಷಯವನ್ನು ಬಹಿರಂಗ ಮಾಡುತ್ತಾನೆ. ಎಲ್ಲೋ ಇಟ್ಟಿರಬೇಕು ಸರಿಯಾಗಿ ಹುಡುಕು ಎಂಬ ಸಲಹೆಗಳ ಜೊತೆಗೆ ನಾನು ಹುಡುಕಿದೆ ಸಿಗಲಿಲ್ಲ ಎಂಬ ಉತ್ತರವನ್ನು ಆ ಹುಡುಗ ನೀಡಿದಾಗ ಯಾರಾದರೂ ನಿನ್ನ ರೂಮಿಗೆ ಬಂದಿದ್ದರಾ ಎಂಬ ಪ್ರಶ್ನೆಯನ್ನು ಗುಂಪಿನಲ್ಲಿ ಒಬ್ಬರು ಅವನ ಮುಂದಿಡುತ್ತಾರೆ. ಆತ ಆ ಪ್ರಶ್ನೆಗೆ ಆತನಿಗೆ ಹೊಳೆದಿದ್ದು ಹೌದು ಮುನಿಯಪ್ಪ ಬಂದಿದ್ದ ಎಂಬ ಉತ್ತರ. ಬೆಳಿಗ್ಗೆ ಆಫೀಸಿನ ಹತ್ತಿರ ಬಂದವನು ಒಂದಷ್ಟು ಹೊತ್ತಿನ ಬಳಿಕ ಇವತ್ತು ಕೆಲಸಕ್ಕೆ ಬರಲ್ಲ ಎಂದು ಹೇಳಿ ಆತ ಹೊರಟು ಹೋಗಿರುವುದು ಮುನಿಯಪ್ಪನ ಮೇಲಿನ ಗುಮಾನಿಗೆ ಕಾರಣವಾಗುತ್ತದೆ. ಸರಿ ಆತ ಎಲ್ಲಾದರೂ ಸಿಕ್ಕರೆ ಹುಡುಕಿ ಕರೆ ತನ್ನಿ ಎಂಬ ಮ್ಯಾನೇಜರ್ ಮಾತನು ಪಾಲಿಸಲು ಒಬ್ಬ ಮಧ್ಯ ವಯಸ್ಸಿನ ಅಟೆಂಡರ್ ಮತ್ತು ಇನ್ನೊಂದಿಬ್ಬರು ಹುಡುಗರು ಹೊರಟು ಬಿಡುತ್ತಾರೆ. ಕೆಲಸಕ್ಕೆ ರಜಾ ಹಾಕಿದ್ದ ಮುನಿಯಪ್ಪ ಆರಾಮಾಗಿ ಬಾರ್ ನಲ್ಲಿ ಕುಳಿತು ಎಣ್ಣೆ ಕುಡಿದು ಹೋಟೆಲ್ ಒಂದರಲ್ಲಿ ಊಟ ಮಾಡಿ ಹೊರಟು ಹೋದ ಮಾಹಿತಿಯನ್ನು ಮುನಿಯಪ್ಪನನ್ನು ಹುಡುಕಲು ಹೋಗಿದ್ದ ಹುಡುಗರು ಕಲೆ ಹಾಕಿರುತ್ತಾರೆ. ಜೊತೆಗೆ ಆತ ಇರುವ ಜಾಗವನ್ನು ಕಂಡು ಹಿಡಿದು ಆಫೀಸಿಗೆ ಕರೆ ತಂದಿರುತ್ತಾರೆ. ಮಧ್ಯ ವಯಸ್ಸಿನ ಆ ಅಟೆಂಡರ್ ಹೋಟಲ್ ನಲ್ಲಿ ಇನ್ನೊಂದಿಷ್ಟು ತನಿಖೆ ನಡೆಸಿ ಮುನಿಯಪ್ಪ ಹೊಸ ಹೊಸ ನೂರರ ನೋಟುಗಳನ್ನು ಬಿಲ್ ಆಗಿ ನೀಡಿರುವ ಮಾಹಿತಿಯನ್ನು ಸಹ ಕಲೆ ಹಾಕಿರುತ್ತಾನೆ. ಆಫೀಸಿಗೆ ಎಳೆ ತಂದ ಮುನಿಯಪ್ಪನನ್ನು ಸತ್ಯ ಬಾಯಿ ಬಿಡಿಸಲು ವಿಫಲವಾಗಿ ಕೊನೆಗೆ ಆತ ಊಟ ಮಾಡಿದ್ದ ಹೋಟೆಲ್ ನ ಕ್ಯಾಶಿಯರ್ ಬಳಿಯೇ ಆತನನ್ನು ಕರೆದೊಯ್ದಿರುತ್ತಾರೆ. ಆಗ ಮುನಿಯಪ್ಪ ಅವನ ಊರಿನವನೇ ಆದ ಹೋಟೆಲ್ ನ ಕ್ಯಾಶಿಯರ್ ಹತ್ತಿರ ಒಂದಷ್ಟು ದುಡ್ಡನ್ನು ಸಂಜೆ ತೆಗೆದುಕೊಳ್ಳುತ್ತೇನೆ ನಿನ್ನ ಬಳಿ ಇಟ್ಟಿರು ಎಂದು ಹೇಳಿ ದುಡ್ಡು ಕೊಟ್ಟಿರುವುದು ಹಾಗು ಮುನಿಯಪ್ಪನೇ ಹಣ ಕದ್ದಿದ್ದಾನೆ ಎಂಬ ವಿಷಯ ಖಾತ್ರಿಯಾಗಿರುತ್ತದೆ. 2500 ರೂಪಾಯಿ ಹೋಟೆಲ್ ನವನ ಹತ್ತಿರ ಇದೆ ಉಳಿದ 2500 ರೂಪಾಯಿ ಏನು ಮಾಡಿದೆ ಎಂಬುದರ ಉತ್ತರ ಪಡೆಯಲು ಹಾಗೆ ಮುನಿಯಪ್ಪನಿಗೆ ಹೊಡೆದಿರುತ್ತಾರೆ. ಆತನಿಗೆ ಹೊಡೆದಿದ್ದವರು ಆತನ ಕ್ಲೋಸ್ ಫ್ರೆಂಡ್ಸ್. ಮುನಿಯಪ್ಪ ತನ್ನ ಫ್ರೆಂಡ್ ಹತ್ತಿರಾನೆ ದುಡ್ಡು ಕದ್ದು ಮಾನ ಹರಾಜು ಹಾಕಿಕೊಂಡನಲ್ಲ ಎಂದು ಯೋಚಿಸಿ ಈಗ ಆಗಿರುವ ಅವಮಾನಕ್ಕೆ ಆತ ನಾಳೆ ಕೆಲಸಕ್ಕೆ ಬರುವುದಿಲ್ಲ ಎಂದುಕೊಂಡು ನಾನು ನನ್ನ ರೂಮಿಗೆ ಹೋಗಿದ್ದೆ. ಈಗ ಕುರಿಯ ಕಥೆಯನ್ನು ಮುಗಿಸಿಬಿಡುವೆ. ಅವತ್ತು ಹಾಗೆ ಅವಮಾನವಾದಂತೆ ರಾತ್ರಿ ಕಳೆದ ಕುರಿ ಬೆಳಿಗ್ಗೆ ಜಾಕಲೋಪ್ ಎಂಬ ಬುದ್ದಿವಂತ ಪ್ರಾಣಿಯ ಕಣ್ಣಿಗೆ ಬೀಳುತ್ತದೆ. ನಿನ್ನ ಮೈ ಬಣ್ಣ ಪಿಂಕ್ ಆಗಿದ್ದರೇನು ಬ್ಲಾಕ್ ಆಗಿದ್ದರೇನು ನಿನ್ನ ಕಾಲುಗಳಲ್ಲಿ ಇನ್ನೂ ಶಕ್ತಿಯಿದೆ ನೀನು ಮತ್ತೆ ಕುಣಿಯಬಲ್ಲೆ. ಜನ ಏನು ಅಂದುಕೊಂಡರೆ ನಿನಗೇನಾಗಬೇಕು ಎಂದು ಬುದ್ದಿ ಹೇಳಿ ಆ ಜಾಕಲೋಪ್ ಆ ಕುರಿಯನ್ನು ಮತ್ತೆ ಕುಣಿಯುವಂತೆ ಮಾಡಿರುತ್ತದೆ. ನಂತರದ ದಿನಗಳಲ್ಲಿ ಆ ಕುರಿ ಖುಷಿಯಾಗಿ ಕುಣಿಯುತ್ತಾ ಕಾಲ ಕಳೆಯುತ್ತಿರುವಾಗಲೇ ಮತ್ತೆ ಉಣ್ಣೆ ಬೆಳೆಯುತ್ತೆ. ಎಂದಿನಂತೆ ಟ್ರಕ್ ನಲ್ಲಿ ವರ್ಷಕ್ಕೊಮ್ಮೆ ಬರುವ ಜನ ಆ ಕುರಿಯನ್ನು ಹೊತ್ತೊಯ್ದು ಉಣ್ಣೆ ಕತ್ತರಿಸಿ ಅದನ್ನು ಬೆತ್ತಲೆಗೊಳಿಸಿ ಮತ್ತೆ ಅದೇ ಜಾಗದಲ್ಲಿ ಬಿಸಾಕಿ ಹೊರಟು ಬಿಡುತ್ತಾರೆ. ಹಾಗೆ ಅವರು ಬಿಸಾಕಿ ಹೊರಟು ಹೋದ ನಂತರ ಮೊದಲಿನ ಹಾಗೆ ಬೇಸರಗೊಳ್ಳದೇ ಮೈಗಂಟಿದ ಧೂಳನ್ನು ಕೊಡವಿ ಎದ್ದು ಕುರಿ ಮತ್ತೆ ಖುಷಿಯಾಗಿ ಕುಣಿಯುತ್ತಾ ನೆಗೆಯುತ್ತಾ ಜಿಗಿಯುತ್ತಾ ಇರುತ್ತದೆ. ಅದರ ಜೊತೆ ಉಳಿದ ಪ್ರಾಣಿಗಳು ಹೆಜ್ಜೆ ಹಾಕುತ್ತವೆ. ಆ ಘಟನೆಯಾದ ಮರು ದಿನ ಮುನಿಯಪ್ಪ ಎಂದಿನಂತೆ ನನ್ನ ರೂಮಿನ ಎದುರು ಕಾರು ನಿಲ್ಲಿಸಿ ಹಾರನ್ ಮಾಡಿ ನನ್ನ ರೂಮಿಗೆ ಬಂದವನೇ ನಗುತ್ತಾ ಸರ್ ರೆಡಿನಾ ಎಂದಿದ್ದ. “ಒಂದೈದು ನಿಮಿಷ” ಎಂದು ರೆಡಿಯಾಗಿ ನಾನು ಕಾರನಲಿ ಕುಳಿತ್ತಿದ್ದೆ. ಯಾಕೋ ಹಿಂದಿನ ದಿನದ ವಿಷಯ ಕೆದಕಲು ನಾನು ಇಚ್ಚಿಸಿರಲಿಲ್ಲ. ಆ ದಿನವೆಲ್ಲಾ ಬ್ಯುಸಿ ಇದ್ದುದರಿಂದ ಹೇಗೋ ದಿನದ ಕೊನೆಗೆ ಅಂದಿನ ಕೆಲಸ ಮುಗಿಸಿ ನಮ್ಮ ನಮ್ಮ ಮನೆಗಳಿಗೆ ಹೊರಟಿದ್ದೆವು. ನಂತರದ ದಿನಗಳಲ್ಲಿ ಅವನು ಎಂದಿನಂತೆ ಖುಷಿಯಾಗಿ ಮಾತನಾಡಲು ಶುರು ಮಾಡಿದ್ದ. ಅವನು ಯಾವುದನ್ನು ಮನಸ್ಸಿಗೆ ಹಚ್ಚಿಕೊಂಡಂತೆ ನನಗೆ ಕಾಣಲಿಲ್ಲ. ಅವನ ಗೆಳೆಯರು ಸಹ ಆತನನ್ನು ಹಣ ಕದ್ದವನು ಎಂಬ ಭಾವನೆಯಲ್ಲಿ ನೋಡಿದಂತೆ ಕಾಣಲಿಲ್ಲ. ಬಹುಶಃ ಅವನ ಮೇಲಿನ ಆರೋಪ ಸಾಬೀತಾದ ಮಾರನೆಯ ದಿನ ಆತ ಕೆಲಸಕ್ಕೆ ಬಾರದಿದ್ದರೆ ಅವನು ಹಣ ಕದ್ದಿದ್ದರಿಂದ ಕೆಲಸ ಬಿಟ್ಟ ಎಂಬ ಕಥೆ ಎಲ್ಲರ ಮನಸ್ಸಿನಲ್ಲಿ ಉಳಿದುಬಿಡುತ್ತಿತ್ತು. ಆದರೆ ಆತ ಮತ್ತೆ ಕೆಲಸಕ್ಕೆ ಬಂದಿದ್ದ. ಎಲ್ಲರೂ ಅವನನು ಮೊದಲಿನ ಮುನಿಯಪ್ಪನನು ಹೇಗೆ ನೋಡುತ್ತಿದ್ದರೋ ಹಾಗೆಯೇ ನೋಡುತ್ತಿದ್ದರು. ಯಾರಿಗೂ ಅವನ ಮೇಲೆ ಬೇಸರವಾಗಲಿ ಕೋಪವಾಗಲಿ ಇರಲಿಲ್ಲ. ಕೆಲವು ಸಾರಿ ಯಾರೋ ಮಾಡಿದ ತಪ್ಪಿಗೆ ಆ ಕುರಿಯ ಹಾಗೆ ಬೆತ್ತಲೆಗೊಂಡವರಂತೆ ಅವಮಾನಿತರಾಗಿ ನಾವು ಮಂಕಾಗಿಬಿಡುತ್ತೇವೆ. ಇನ್ನು ಕೆಲವು ಸಲ ಮುನಿಯಪ್ಪನ ಹಾಗೆ ನಾವೇ ನಮಗೆ ಗೊತ್ತಿಲ್ಲದೆ ತಪ್ಪೊಂದನು ಮಾಡಿಬಿಟ್ಟಿರುತ್ತೇವೆ. ಪಿಕ್ಷರ್ ಕಿರು ಚಿತ್ರದ ಆ ಕುರಿ ಮತ್ತು ನಮ್ಮ ಡ್ರೈವರ್ ಮುನಿಯಪ್ಪ ಈ ಎರಡು ಕ್ಯಾರೆಕ್ಟರ್ ಗಳನ್ನು ಪಕ್ಕ ಪಕ್ಕ ನಿಲ್ಲಿಸಿ ನೋಡಿದಾಗ, ಒಮ್ಮೆ ಏನೋ ತಪ್ಪು ಮಾಡಿದವನ ಹಾಗೆ ಬೇಸರವನು ಮನಸ್ಸಿಗೆ ತಂದುಕೊಂಡು ಕುಳಿತಿದ್ದ ನನ್ನನ್ನು “ಮಗ, ಇದ್ ಸರಿ ಬುಡು. ಯಾರೂ ಮಾಡ್ದೇ ಇರೋ ತಪ್ ಮಾಡ್ ಬುಟ್ಟಿದ್ದೀಯ. ಹೋಗು ಎದ್ದು ಕೆಲ್ಸ ನೋಡು.” ಎಂದು ನಮ್ಮವ್ವ ಬಯ್ದಿದ್ದ ಮಾತು ನೆನಪಿಗೆ ಬಂದಿತು. ಆ ಮಾತು ಅದೆಷ್ಟು ಸತ್ಯ ಅಲ್ವಾ ಸಹೃದಯಿಗಳೇ? ನಾವು ಸಾಮಾನ್ಯವಾಗಿ ಯಾರೂ ಮಾಡದೆ ಇರೋ ತಪ್ಪನ್ನು ಮಾಡಿರೋದಿಲ್ಲ. ಎಲ್ಲರಿಗೂ ತಿಳಿದಿರುವಂತೆ ಮನುಷ್ಯರಾಗಿ ತಪ್ಪು ಮಾಡುತ್ತೇವೆ ನಿಜ. ಆಕಸ್ಮಾತ್ ತಪ್ಪು ಮಾಡಿದರೆ ಮತ್ತೆ ಆ ತಪ್ಪನು ಮಾಡದ ಹಾಗೆ ತಿದ್ದಿ ನಡೆಯಬೇಕು ಎನಿಸುತ್ತೆ..]]>

‍ಲೇಖಕರು G

July 11, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

14 ಪ್ರತಿಕ್ರಿಯೆಗಳು

 1. malathi S

  to err is human to forgive is divine anta hELikene ideyalla nataraju?? khushiyaaytu happy ending nOdi…
  chendada baraha..looking forward to ur write up every week..good luck!
  🙂
  malathi S

  ಪ್ರತಿಕ್ರಿಯೆ
 2. Charitha

  ಕಥೆ ಚೆನಾಗಿದೆ ನಟೂ.. ಒಳ್ಳೆ ನಿರೂಪಣೆ.
  ನಿಜ, ನಮಗೆ ನಾವೇ ಮಿತ್ರರು!! ನಮ್ಮನ್ನು ನಾವು ನಂಬಿದಾಗ ಮಾತ್ರ ಜಗತ್ತೂ ನಮ್ಮನ್ನು ನಂಬೋದು! 🙂

  ಪ್ರತಿಕ್ರಿಯೆ
 3. Nandeesh

  ನಿಜ ಒಳ್ಳೆಯ ಸಂದೇಶ… ಒಂದೇ ತಪ್ಪಿಗೆ ಹೈರಾಣಾಗಿಬಿಟ್ಟರೆ ಮುಂದೆ ಎಷ್ಟೋ ಕೆಲಸಗಳು ಕೈಗೂಡುವುದಿಲ್ಲ. ಹಾಗೇ ತಪ್ಪು ಒಪ್ಪಿಕೊಳ್ಳುವುದೂ ತಾಕತ್ತೇ

  ಪ್ರತಿಕ್ರಿಯೆ
 4. ರಾಘವೇಂದ್ರ ತೆಕ್ಕಾರ್

  ತಪ್ಪು ಮಾಡೋದು ಸಹಜಾ ಕಣೋ, ತಿದ್ದಿ ನಡೆಯೋನು ಮನುಜಾ ಕಣೊ 🙂 :).ನಿರೂಪಣೆ ಹೊಸತೆರನಾಗಿದೆ. ಇಷ್ಟ ಆಯಿತು.

  ಪ್ರತಿಕ್ರಿಯೆ
 5. Manjula

  ನಿಮ್ಮ ನಿರೂಪಣೆಯ ಶೈಲಿ ಇಷ್ಟ ಆಯಿತು. ಒಂದು ಸಾಮಾನ್ಯ ವಿಷಯವನ್ನು ಬೇರೆ ಬೇರೆ ಉದಾಹರಣೆಗಳೊಂದಿಗೆ ತಳಕು ಹಾಕಿ ಬರೆದಿರೋ ರೀತಿ, ನಿಜವಾಗಲೂ ಸುಂದರವಾಗಿದೆ. ಓದಿ ಖುಷಿ ಆಯಿತು 🙂

  ಪ್ರತಿಕ್ರಿಯೆ
 6. sumathi hegde

  ಯಾರಿಗೆ ಆಗಲಿ ಜೀವನದಲ್ಲಿ ಒಮ್ಮೆ ತಿದ್ದಿಕೊಳ್ಳಲು ಅವಕಾಶ ಕೊಡಬೇಕು… ಇದು ನನ್ನ ಅಭಿಪ್ರಾಯ…

  ಪ್ರತಿಕ್ರಿಯೆ
 7. mahadev hadapad

  ಮತ್ತೆ ಚನ್ನಾಗಿ ಬರೆದಿದ್ದೀರಿ ಬ್ರದರ್… ಅದೊಂಥರ ಕತೆಯ ಎಳೆಯನ್ನ ನೂಲತೀರಾ… ನಾದದ ನವನೀತ ಅನ್ನೋ ಹಾಗೆ. ಸಹಜವಾದ ಸತ್ಯವಾದ ನಿರೂಪಣೆ

  ಪ್ರತಿಕ್ರಿಯೆ
 8. Sunil Agadi

  ತಪ್ಪು ಮಾಡುವುದು ತಪ್ಪಲ್ಲ…ಆದರೆ ತಪ್ಪು ಮಾಡಿ ಅರೆತು ತಿಳಿದುಕೊಂಡು ನಡೆಯದಿರುವುದು ತಪ್ಪು . ತಪ್ಪುಗಳು ಎಲ್ಲರಿಂದನು ಆಗುತ್ತವೆ, ಆದರೆ ಅವುಗಳನ್ನು ಅರೆತುಕೊಂಡು ತಿದ್ದಿಕೊಳ್ಳುವವನೆ ನಿಜವಾದ ಜಾಣ.
  ಕಥೆ ಹೇಳುವ ನಿಮ್ಮ ಪರಿ ತುಂಬಾ ಇಷ್ಟವಾಯಿತು . ಚೆನ್ನಾಗಿದೆ ನೀತಿ ಕಥೆ.

  ಪ್ರತಿಕ್ರಿಯೆ
 9. malathi S

  Dear Avadhi!
  illi comment galige like button iddidre onderaDu r really deserving..:-)
  ms

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: