ನಲ್ಮೆಯಿ೦ದ ನಟರಾಜು : ನಮ್ಮೂರಿನ ಕಿಂದರಿ ಜೋಗಿ

ನಮ್ಮೂರಿನ ಕಿಂದರಿ ಜೋಗಿ

– ಎಸ್ ಎಂ ನಟರಾಜು

ಒಂದು ಸಂಜೆ ನನ್ನ ಹುಡುಕಿಕೊಂಡು ಯಾರೋ ಬಂದಿದ್ದಾರೆ ಎಂದು ನಮ್ಮ ಹಾಸ್ಟೆಲ್ ನ ಗೇಟ್ ಕೀಪರ್ ಬಂದು ಹೇಳಿದ್ದ. ನಾನಾಗ 9 ನೇ ತರಗತಿಯಲ್ಲಿದ್ದೆ. ಕೈಯಲ್ಲಿ ಹೆಲ್ಮೆಟ್ ಹಿಡಿದು ಬಂದಿದ್ದ ಆ ಅಂಕಲ್ “ನಾನು ಸಂತೋಷನ ಫ್ರೆಂಡ್ ನ ತಂದೆ.” ಎಂದಿದ್ದರು. ಸಂತೋಷ್ ನನ್ನ ರೂಮ್ ಮೇಟ್ ಆಗಿದ್ದ. ಜೊತೆಗೆ ನನ್ನೂರಿನವರು. ನನ್ನ ಚೆಡ್ಡಿ ದೋಸ್ತ್ ನ ತಮ್ಮ. ಅವನು ಎರಡು ದಿನಗಳಿಂದ ಹಾಸ್ಟೆಲ್ ಗೆ ಬಂದಿರಲಿಲ್ಲ. ಅವನ ಸಂಬಂಧಿಕರು ತುಂಬಾ ಜನ ಮೈಸೂರಿನಲ್ಲಿದ್ದ ಕಾರಣ ಅವನು ಅವರ ಮನೆಗೆ ಹೋಗಿರಬಹುದು ಎಂದು ನಾನು ಸುಮ್ಮನಾಗಿದ್ದೆ. ನನ್ನ ಹುಡುಕಿ ಬಂದ ಅಂಕಲ್ ಸಂತೋಷ್ ಸೇರಿದಂತೆ ಅವನ ಜೊತೆ ಮೂರ್ನಾಲ್ಕು ಹುಡುಗರು ಮೊನ್ನೆಯಿಂದ ಕಾಣುತ್ತಿಲ್ಲ ಎಂಬ ವಿಷಯ ತಿಳಿಸಿದ್ದರು. ಆ ಮೂರ್ನಾಲ್ಕು ಹುಡುಗರಲ್ಲಿ ಅವರ ಮಗನೂ ಒಬ್ಬನಾಗಿದ್ದ. ಸ್ಕೂಲಿಗೆ ಹೋದ ಮಗ ಎರಡು ದಿನವಾದರೂ ಮನೆಗೆ ಬಾರದುದ ಕಂಡು ಆತಂಕಗೊಂಡು ಅವರ ಮಗನ ಸ್ನೇಹಿತರ ಮನೆಗಳಿಗೆ ಹೋಗಿ ವಿಚಾರಿಸಿ ಅವರಿಂದ ಯಾವುದೇ ವಿಷಯ ತಿಳಿದು ಬರದಿದ್ದಾಗ ಸಂತೋಷನನ್ನು ಹುಡುಕುತ್ತಾ ನನ್ನ ಹಾಸ್ಟೆಲ್ ಗೆ ಬಂದಿದ್ದರು. ಸಂತೋಷ್ ಸಹ ಕಾಣೆಯಾಗಿರುವುದು ಕಾತರಿಯಾಗುತ್ತಿದ್ದಂತೆ ಸಂತೋಷನ ಸಂಬಂಧಿಕರ ಮನೆಗೆ ಕರೆದೊಯ್ಯುವಂತೆ ಹೇಳಿ ನಮ್ಮ ವಾರ್ಡನ್ ಗೆ ನನ್ನನ್ನು ಕರೆದೊಯ್ಯುತ್ತಿರುವೆ ಎಂಬ ವಿಷಯ ತಿಳಿಸಿ ನನ್ನನ್ನು ತಮ್ಮ ಯೆಜ್ಡಿ ಬೈಕಿನಲ್ಲಿ ಕುಳ್ಳರಿಸಿಕೊಂಡು ಹೋಗಿದ್ದರು. ಆ ಅಂಕಲ್ ನನ್ನು ಸಂತೋಷನ ಮಾವನವರ ಮನೆಗೆ ಕರೆದೊಯ್ದಿದ್ದೆ. ಅಲ್ಲಿ ಸಂತೋಷ್ ಸೇರಿದಂತೆ ಅವನ ನಾಲ್ವರು ಗೆಳೆಯರು ಕೆ ಆರ್ ಎಸ್ ನ ರಸ್ತೆಯಲ್ಲಿ ಸೈಕಲ್ ನಲ್ಲಿ ಹೋಗುತ್ತಿದ್ದರು ಎಂದು ಅವರ ಮಾವ ಆ ಅಂಕಲ್ ಗೆ ತಿಳಿಸಿದ್ದರು. ಆಮೇಲೆ ಆ ಐವರು ಹುಡುಗರು ಎಲ್ಲಿ ಹೋದರು ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಅವರ ಫೋಟೋಗಳ ಸಮೇತ ಟಿವಿಯಲ್ಲಿ ಕಾಣೆಯಾದವರ ಬಗ್ಗೆ ಪ್ರಕಟಣೆ ನೀಡಲು ಆ ಅಂಕಲ್ ಮತ್ತು ಸಂತೋಷನ ಮಾವ ಮಾತನಾಡಿಕೊಳ್ಳುತ್ತಿದ್ದರು. ಸಂತೋಷ್ ಮತ್ತು ನಾನು ಒಂದೇ ರೂಮಿನಲ್ಲಿದ್ದರೂ ಅವನು ಬೇರೆ ಸ್ಕೂಲು, ನಾನು ಬೇರೆ ಸ್ಕೂಲು. ನನ್ನದು ಒಂದು ಪುಟ್ಟ ಸ್ಕೂಲಾದರೆ ಅವನ ಸ್ಕೂಲು ಮೈಸೂರಿಗೆ ದೊಡ್ಡ ಸ್ಕೂಲ್. ಅವನ ಸ್ಕೂಲಿನ ಹೆಸರು ಹಾರ್ಡ್ವಿಕ್ ಹೈಸ್ಕೂಲ್. ಹಾಸ್ಟೆಲ್ ನಲ್ಲಿ ಸಂತೋಷ್ ಎಂದು ಅವನ ಹೆಸರು ಹಿಡಿದು ಕರೆಯೋ ಬದಲು ಹಾರ್ಡ್ವಿಕ್ ಎಂದೇ ಕರೆಯುತ್ತಿದ್ದರು. ನಮ್ಮಂತೆ ಹಾಸ್ಟೆಲ್ ನಿಂದ ಸ್ಕೂಲಿಗೆ ಉಳಿದ ಹುಡುಗರ ಜೊತೆ ಲೈನ್ ನಲ್ಲಿ ಹೋಗಬೇಕು ಲೈನ್ ನಲ್ಲಿ ಬರಬೇಕು ಎಂಬ ರೂಲ್ಸ್ ನಿಂದ ಅವನು ಮುಕ್ತನಾಗಿದ್ದ. ಯಾಕೆಂದರೆ ಅವನು ಒಬ್ಬನೇ ಆ ಸ್ಕೂಲಿಗೆ ಹೋಗುತ್ತಿದ್ದ ಕಾರಣ ಅವನು ಒಂದು ರೀತಿಯಲ್ಲಿ ನಮಗೆಲ್ಲರಿಗಿಂತ ಹೆಚ್ಚು ಸ್ವತಂತ್ರನಾಗಿದ್ದ ಎನ್ನಬಹುದು. ಸಂತೋಷ್ ದೇಹದಾರ್ಡ್ಯ ಚೆನ್ನಾಗಿತ್ತು. ಅದಕ್ಕೆ ಅವನು ಅವನ ಸ್ಕೂಲಿನಲ್ಲಿ ಎನ್ ಸಿ ಸಿ ಸೇರಿದ್ದ. ನಮ್ಮ ಹಾಸ್ಟೆಲ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯಾದಾಗ ಅವನೇ ನಮ್ಮೆಲ್ಲರಿಗೂ ವಿಶ್ರಮ್ ಸಾವಧಾನ್ ಎಂದು ಹೇಳಿಕೊಡುತ್ತಿದ್ದ. ಅವನ ಮುಖಂಡತ್ವದಲ್ಲೇ ನಾವೆಲ್ಲಾ ಜನಗಣಮನ ಹೇಳುತ್ತಿದ್ದುದು. ಅವನು ನಮಗೆ ಎನ್ ಸಿ ಸಿ ಯ ಒಂದೆರಡು ಪಾಠಗಳನ್ನು ಹೇಳುಕೊಡುವಾಗ ಅವನ ಕಮಾಂಡಿಂಗ್ ನೇಚರ್ ಗೆ ನಮ್ಮ ಹಾಸ್ಟೆಲ್ ನ ಮ್ಯಾನೇಜರ್ ಬೆರಗಾಗುತ್ತಿದ್ದರು. ಒಂದು ರೀತಿಯಲ್ಲಿ ಸಂತೋಷ್ ನಮ್ಮೆಲ್ಲರಿಗಿಂತ ಒಂತರಾ ಭಿನ್ನವಾಗಿದ್ದ ಎನ್ನಬಹುದಿತ್ತು. ಅಂತಹ ಭಿನ್ನವಾದ ಕ್ಯಾರೆಕ್ಟರ್ ಇದ್ದ ಹುಡುಗ ಹೀಗೆ ಒಮ್ಮೆಗೆ ನಾಪತ್ತೆಯಾಗಿದ್ದುದು ನಿಜಕ್ಕೂ ಅಚ್ಚರಿಯಾಗಿತ್ತು. ಅವತ್ತು ನಮ್ಮ ಹಾಸ್ಟೆಲ್ ಗೆ ಬಂದಿದ್ದ ಆ ಅಂಕಲ್ ತಮ್ಮ ಮಗ ಮತ್ತು ಸಂತೋಷ್ ಸೇರಿದಂತೆ ಉಳಿದ ಹುಡುಗರ ಫೋಟೋಗಳನ್ನು ಕಾಣೆಯಾದವರು ಎಂದು ಟಿವಿಯಲ್ಲಿ ಬರುವಂತೆ ಮಾಡಿದರೂ ಏನೋ ಜೈಲಿನಂತಿದ್ದ ಹಾಸ್ಟೆಲ್ ವಾಸಿಗಳಾದ ನಮಗೆ ತಿಳಿದಿರಲಿಲ್ಲ. ಮೂರ್ನಾಲ್ಕು ತಿಂಗಳಾದ ಮೇಲೆ ನಾನು ಸ್ಕೂಲು ಮುಗಿಸಿ ಹಾಸ್ಟೆಲ್ ಒಳಗೆ ಹೋಗುತ್ತಿದ್ದಂತೆ ನಮ್ಮ ಹಾಸ್ಟೆಲ್ ನ ಹುಡುಗರು “ಹಾರ್ಡ್ವಿಕ್ ಬಂದವ್ನೆ ಕಣೋ. ಹಾರ್ಡ್ವಿಕ್… ನಿನ್ನ ರೂಮ್ ಮೇಟ್” ಎಂದು ಖುಷಿಯಾಗಿ ಹೇಳಿದ್ದರು. ಅವನ ಬರುವಿಕೆ ನನಗೆ ತುಂಬಾ ಖುಷಿ ತಂದಿತ್ತು. ಅವನು ನಮ್ಮ ರೂಮಿನಲ್ಲಿದ್ದಾನೆ ಎಂದು ತಿಳಿದು ಖುಷಿಯಾಗಿ ಓಡಿ ಹೋಗಿ ರೂಮಿನ ಬಾಗಿಲು ತೆಗೆದಾಗ ರೂಮಿನ ಮೂಲೆಯಲ್ಲಿ ಮಡಚಿಟ್ಟಿದ್ದ ಹಾಸಿಗೆಯ ಮೇಲೆ ಸಂತೋಷ್ ಕುಳಿತ್ತಿದ್ದ. ಒಂದು ಕ್ಷಣ ಅವನನ್ನು ಗುರುತು ಹಿಡಿಯಲು ಕಷ್ಟವಾಯಿತು. ಮುಖ ಕೆಂಪಾಗಿದ್ದು ಸ್ವಲ್ಪ ಊದಿಕೊಂಡಿತ್ತು. ಅವನು ಸ್ವಲ್ಪ ಡುಮ್ಮನಾಗಿದ್ದ. “ಲೋ ಹೆಂಗಿದ್ದೀಯೋ? ಎಲ್ಗೋ ಹೋಗಿದ್ದೆ ಇಷ್ಟ್ ದಿನ?” ಎಂದು ಮಾತಿಗೆಳೆದಿದ್ದೆ. “ಯಾಕೋ ಜ್ವರ ಬಂದದೆ ಕಣೋ.. ” ಎಂದವನನ್ನು ಹೆಚ್ಚು ಮಾತನಾಡಲು ಒತ್ತಾಯಿಸಬಾರದು ಎಂದುಕೊಳ್ಳುತ್ತಿರುವಾಗ “ರಾಜಸ್ಥಾನ್ ಗೆ” ಹೋಗಿದ್ದೆ ಎಂದ. ರಾಜಸ್ಥಾನ್ ಎಂದರೆ ಒಂಟೆಗಳು ನೆನಪಿಗೆ ಬರುತ್ತಿದ್ದ ವಯಸ್ಸು ಅದು. “ಅಯ್ಯಪ್ಪಾ, ಅಲ್ಲಿಗೆ ಯಾಕ್ಲಾ ಹೋಗಿದ್ದೆ. ಹೆಂಗ್ ಹೋದೆ. ಎಲ್ಲಿದ್ದೆ? ಬಸ್ ಚಾರ್ಚ್ ಗೆಲ್ಲಾ ದುಡ್ ಏನ್ ಮಾಡ್ದೆ” ಎಂದಾಗ “ಒಂದಿನ ನಾನು ನನ್ನ ಫ್ರೆಂಡ್ಸ್ ಕೆ ಆರ್ ಎಸ್ ನೋಡೋಣ ಅಂದ್ ಕೊಂಡು ಕೆ ಆರ್ ಎಸ್ ರೋಡಲ್ಲಿ ಸೈಕಲ್ ತುಳಕೊಂಡ್ ಹೋಗ್ತಾ ಇದ್ದೋ. ಮಾಮ ಅದೇ ರೋಡಲ್ಲಿ ಗಾಡೀಲಿ ಹೋಗ್ತಾ ನಮ್ಮನ್ನು ನೋಡಿತ್ತು. ಆಮೇಲೆ ಆ ರೋಡಲ್ಲಿ ಒಂದು ಲಾರಿ ನಿಂತಿತ್ತು. ಆ ಲಾರಿಯವರನ್ನು ಸುಮ್ನೆ ಮಾತನಾಡಿಸಿದ್ವಿ. ಅವರು ರಾಜಸ್ಥಾನಕ್ಕೆ ಹೋಗ್ತಾ ಇದ್ದೀವಿ. ಬರ್ತೀರ ಅಂದ್ರು. ಆಯ್ತು ಅಂತ ಎಲ್ರೂ ಲಾರಿ ಹತ್ತಿದ್ವಿ.” ಎಂದಿದ್ದ. “ಸೈಕಲ್ ಏನ್ ಮಾಡಿದ್ರಿ.” ಎಂದು ಕೇಳೋದನ್ನು ಮರೆತ್ತಿದ್ದೆ. ರಾಜಸ್ಥಾನಕ್ಕೆ ಹೋಗಿ ಅಲ್ಲಿ ಯಾರದೋ ಮನೆಯಲ್ಲಿ ಒಂಟೆಗಳಿಗೆ ಮುಳ್ಳಿನ ಸೊಪ್ಪು ಕತ್ತರಿಸುವುದರ ಜೊತೆಗೆ ಅದೂ ಇದೂ ಅಂತ ಕೆಲಸ ಮಾಡಿಕೊಂಡಿದ್ದೆವು ಎಂದಿದ್ದ. ಅವನ ಕೈ ನೋಡಿದೆ. ಮುಳ್ಳುಗಳು ಚುಚ್ಚಿಯೋ ಏನೋ ಅಲ್ಲಲ್ಲಿ ಮಾರ್ಕುಗಳಾಗಿದ್ದವು. ಜೊತೆಗೆ ನಮ್ಮ ಕೈಗಳಿಗಿಂತ ಅವನ ಅಂಗೈ ಒರಟಾಗಿತ್ತು.

ನಾವು ಹಾಗೆ ಮಾತನಾಡುತ್ತಾ ಕುಳಿತ್ತಿರುವಾಗ ಅವನ ಅಣ್ಣ ಬಂದವನೇ ಅವನನ್ನು ಅವನ ಮಾವನವರ ಮನೆಗೆ ಕರೆದೊಯ್ದಿದ್ದ. ಅಂದು ಅವನ ಜೊತೆ ಭೇಟಿಯಾದ ಮೇಲೆ ಮತ್ತೆ ಎಷ್ಟೋ ದಿನ ಭೇಟಿಯಾಗಲು ಸಾಧ್ಯವಾಗಲಿಲ್ಲ. ಅವನ ಜ್ವರ ಕಡಿಮೆಯಾಗಿ ಉಷಾರಾದ ಮೇಲೆ ಅವನನ್ನು ಊರಿಗೆ ಕರೆದುಕೊಂಡು ಹೋಗಿದ್ದರು. ಸ್ಕೂಲಿಗೆ ಮೂರ್ನಾಲ್ಕು ತಿಂಗಳು ಗೈರು ಹಾಜರಾಗಿದ್ದುದರಿಂದ ಅವನು ಆ ವರ್ಷದ ಪರೀಕ್ಷೆ ಬರೆಯಲಾಗಲಿಲ್ಲ. ಮುಂದಿನ ವರ್ಷ ನಮ್ಮೂರಿನ ಪಕ್ಕದ ಊರಿನಲ್ಲಿದ್ದ ಹೈಸ್ಕೂಲು ಸೇರಿದ್ದ. ಮರಳಿ ಗೂಡಿಗೆ ಬಂದ ಖುಷಿಗೋ ಏನೋ ಹೊಸ ಸ್ಕೂಲಿಗೆ ಸೇರಿದ ಮೇಲೆ ಅವನಲ್ಲೊಬ್ಬ ಹೊಸ ಹುಡುಗ ಹುಟ್ಟುಕೊಂಡಿದ್ದ. ಕ್ರಿಕೆಟ್ ಆಗಷ್ಟೇ ನಮ್ಮೂರಿನ ಕೆರೆ ಬಯಲುಗಳಲ್ಲಿ ಕಣ್ಣು ಬಿಡುತ್ತಿತ್ತು. ಅವನು ಬಂದ ಮೇಲೆ ನಮ್ಮೂರಿನಲ್ಲಿ ಒಂದು ಹೊಸ ಕ್ರಿಕೆಟ್ ಟೀಮ್ ರೆಡಿಯಾಯಿತು. ಅದೇ ಸಮಯಕ್ಕೆ ಅಂತಹುದೋ ಟೀಮುಗಳು ಸುತ್ತಮುತ್ತಲಿನ ಹಳ್ಳಿಗಳಲ್ಲೂ ಹುಟ್ಟಿಕೊಂಡಿದ್ದವು. ಆಗಾಗ ಟೂರ್ನಿಮೆಂಟ್ ಗಳು ಸಹ ನಡೆಯುತ್ತಿದ್ದವು. ಆ ಟೂರ್ನಿಮೆಂಟ್ ಗಳಲ್ಲಿ ಇವನ ಸಿಕ್ಸ್ ಗಳದೇ ಮಾತಾಗುತ್ತಿತ್ತು. ಟೂರ್ನಿಮೆಂಟ್ ಗಳನ್ನು ಆಡಲು ಬೇರೆ ಊರಿನ ಹುಡುಗರು ಹತ್ತಾರು ಕಿಲೋ ಮೀಟರ್ ಗಳಿಂದ, ನಡೆಯುತ್ತಲೋ, ಸೈಕಲ್ ನಲ್ಲಿಯೋ ಬಸ್ ನಲ್ಲಿಯೋ ಬಂದು ನಮ್ಮ ಊರು ತಲುಪುತ್ತಿದ್ದರು. ನಮ್ಮೂರಿನ ಹುಡುಗರು ಸಹ ಬೇರೆ ಊರುಗಳಿಗೆ ಹೋಗಿ ಟೂರ್ನಿಮೆಂಟ್ ಆಗಿ ಕಪ್ ಗೆದ್ದೇ ಊರು ತಲುಪುತ್ತಿದ್ದರು. ಬಹುಶಃ ನಮ್ಮ ಸಂತೋಷನೇ ಟೀಮ್ ಕ್ಯಾಪ್ಟನ್ ಆಗಿದ್ದ ಎನಿಸುತ್ತದೆ. ನಮ್ಮ ಕೇರಿಯಲ್ಲಿ ಸಂತೋಷನ ಮನೆಯಲ್ಲಿ ಮಾತ್ರ ಟೀವಿ ಇದ್ದುದರಿಂದ ಕ್ರಿಕೆಟ್ ಮ್ಯಾಚ್ ನೋಡಲು ಹುಡುಗರ ದಂಡೇ ಅವನ ಮನೆಯಲ್ಲಿ ನೆರೆದಿರುತ್ತಿತ್ತು. ಆ ಚಿಕ್ಕ ಚಿಕ್ಕ ಹುಡುಗ ಹುಡುಗಿಯರ ದಂಡೇ ಕ್ರಮೇಣ ಸಂತೋಷನ ಮನೆ ಪಾಠದ ಹುಡುಗರಾಗಿ ಮಾರ್ಪಾಟಾಗಿದ್ದರು. ನಂತರ ಸಂತೋಷ್ ಇದ್ದೆಡೆಯೆಲ್ಲೆಲ್ಲಾ ಆ ಹುಡುಗರೂ ಸಹ ಹಾಜರ್. ಒಮ್ಮೆ ಸ್ಕೂಲಿನಿಂದ ತಪ್ಪಿಸಿಕೊಂಡು ರಾಜಸ್ಥಾನ ತಿರುಗಿ ಒಂದು ವರ್ಷವನ್ನು ಕಳೆದುಕೊಂಡಿದ್ದವನೇ ನಮ್ಮೂರಿನ ಹುಡುಗರಿಗೆ ಎಲ್ಲಾ ವಿಷಯಗಳಲ್ಲೂ ಒಂತರಾ ಗುರುವಾಗಿಬಿಟ್ಟ. ಆ ಹುಡುಗರ ಪಾಲಿಗೆ ಸಂತೋಷ್ ಹೇಳಿದ್ದೇ ವೇದವಾಕ್ಯ ಆಗಿ ಹೋಯಿತು. ಮೈಸೂರಿನಲ್ಲಿ ಹೈಸ್ಕೂಲು ಮುಗಿಸಿ ನಮ್ಮ ಕನಕಪುರದ ರೂರಲ್ ಕಾಲೇಜಿನಲ್ಲಿ ನಾನು ಪಿಯುಸಿ ಸೇರಿದ್ದೆ. ಮುಂದಿನ ವರ್ಷ ಹೈಸ್ಕೂಲು ಮುಗಿಸಿ ಸಂತೋಷ್ ಸಹ ಅದೇ ಕಾಲೇಜು ಸೇರಿದ್ದ. ನಂತರದ ದಿನಗಳಲ್ಲಿ ಕಾಲೇಜಿನಲ್ಲಿ ಎನ್ ಸಿ ಸಿ ಸೇರಿ ಸಂತೋಷ್ ಒಳ್ಳೆಯ ಹೆಸರು ಮಾಡಿಬಿಟ್ಟಿದ್ದ. ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪೇರೇಡ್ ನಲ್ಲಿ ಸಹ ಭಾಗವಹಿಸಿದ್ದ. ಅವನು ದೆಹಲಿಯ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಿದ್ದ ಎಂದು ಅವನ ಪೋಟೋ ನಮ್ಮ ಕಾಲೇಜಿನ ಮ್ಯಾಗಜೀನ್ ನಲ್ಲಿ ಪ್ರಕಟವಾಗಿತ್ತು. ಅವನು ನಮ್ಮೂರಿನ ಹುಡುಗ ನನ್ನ ಫ್ರೆಂಡ್ ಎಂದು ಖುಷಿಯಾಗಿ ನನ್ನ ಗೆಳೆಯರೊಂದಿಗೆ ಹೇಳಿಕೊಳ್ಳುತ್ತಿದ್ದೆ. ಪಿಯುಸಿ ಮುಗಿಸಿ ನಾನು ಬೆಂಗಳೂರಿಗೆ ಡಿಗ್ರಿಗಾಗಿ ಸೇರಿದ ಮೇಲೆ ಅವನೂ ಸಹ ಮಾರನೆಯ ವರ್ಷ ಲಾ ಕಾಲೇಜೊಂದರಲ್ಲಿ ಎಲ್ ಎಲ್ ಬಿ ಗೆ ಸೇರಿದ್ದ. ಅವನ ಅಣ್ಣ ನನ್ನ ಚಡ್ಡಿ ದೋಸ್ತ್ ಆದ ಕಾರಣ ಅವನು ಸಿಕ್ಕಿದಾಗ “ಸಂತೋಷನಿಗೆ ಐಪಿಎಸ್ ಮಾಡಿಸೋ” ಎಂದು ಹೇಳುತ್ತಿದ್ದೆ. “ನೋಡೋಣ ಇರೋ ಅವನು ಲಾ ಮುಗಿಸಲಿ” ಎನ್ನುತ್ತಿದ್ದ ನನ್ನ ಗೆಳೆಯ. ಒಂದಷ್ಟು ವರ್ಷಗಳಾದ ಮೇಲೆ ಸಂತೋಷ್ ಡಿಗ್ರಿ ಮುಗಿಸಿ ಒಂದು ಪುಟ್ಟ ಸಮಸ್ಯೆಗೆ ಸಿಲುಕಿ ಜೀವನ ಕಂಡುಕೊಳ್ಳಲು ಮೈಸೂರು ಸೇರಿಬಿಟ್ಟ. ಜೊತೆಗೆ ಊರಿಗೆ ಬರೋದನ್ನು ಸಹ ಕಡಿಮೆ ಮಾಡಿಬಿಟ್ಟಿದ್ದ. ಆಮೇಲೆ ಸಂಸಾರ, ಕೆಲಸ ಅನ್ನೋದರಲ್ಲಿ ಸಂತೋಷ್ ಮಗ್ನನಾಗಿಬಿಟ್ಟ. ಊರು ಬಿಟ್ಟು ತುಂಬಾ ವರ್ಷಗಳಾದರೂ ಯಾಕೋ ಏನೋ ನಮ್ಮೂರಿಗೆ ನಾನು ಹೋದಾಗಲೆಲ್ಲಾ ಸಂತೋಷನ ಹಿಂದೆ ಸುತ್ತುತ್ತಿದ್ದ ಆ ಹುಡುಗರೇ ಕಣ್ಣೆದುರಿಗೆ ಬರುತ್ತಾರೆ. ಅಂದು ಹುಡುಗರಾಗಿದ್ದವರು ಇಂದು ನಮ್ಮೂರಿನ ಯುವಕರು. ಆ ಹುಡುಗರಲ್ಲಿ ಕೆಲವರು ಡಿಗ್ರಿ ಮುಗಿಸದಿದ್ದರೂ ಕಡೇ ಪಕ್ಷ ಎಸ್ ಎಸ್ ಎಲ್ ಸಿ, ಪಿಯುಸಿ ಓದಿಕೊಂಡು ಒಳ್ಳೆ ಹುಡುಗರಾಗಿದ್ದಾರೆ. ನಮ್ಮೂರಿನ ಬೀದಿಗಳಲ್ಲಿ ಬ್ಯಾಟ್ ಬಾಲ್ ಹಿಡಿದು ತಿರುಗೋ ಹುಡುಗರು ಇಂದು ಬಹುಶಃ ಹೆಚ್ಚು ಕಾಣೋದಿಲ್ಲ. ಬದಲಿಗೆ ಸಿಗರೇಟು ಎಣ್ಣೆ ಬಾಟಲುಗಳ ಹಿಡಿದು ತಿರುಗೋ ಹುಡುಗರು ಹೆಚ್ಚಿರಬಹುದು. ನಮ್ಮೂರಿನಲ್ಲಷ್ಟೇ ಅಲ್ಲ ಪ್ರತೀ ಊರುಗಳಲ್ಲೂ ಬಹುಶಃ ಈಗ ಇದೇ ಸ್ಥಿತಿ ಎಂದುಕೊಳ್ಳುವೆ. ನಮ್ಮೂರಿನ ಸಂತೋಷನ ಹಾಗೆ ಪ್ರತಿ ಊರುಗಳಲ್ಲೂ ಮನೆ ಪಾಠ ಮಾಡುವ, ಊರಿನಲ್ಲಿ ಗುಂಪನ್ನು ಒಳ್ಳೆಯ ಉದ್ದೇಶಕ್ಕಾಗಿ ಕಟ್ಟುವ, ಊರಿನ ಹುಡುಗರಿಗೆ ಆದರ್ಶ ವ್ಯಕ್ತಿಯಂತೆ ಕಾಣುವ ಹುಡುಗರು ಇದ್ದೇ ಇರುತ್ತಾರೆ. ಅವರ ಸಂಖ್ಯೆ ಇನ್ನೂ ಹೆಚ್ಚಲಿ ನಮ್ಮೂರುಗಳು ಸಮೃದ್ದಿಯಾಗಲಿ…  ]]>

‍ಲೇಖಕರು G

August 29, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

 1. Badarinath Palavalli

  ಇಂತ ಯುವ ಪಡೆಯ ಅಹರ್ನಿಶಿ ದುಡಿಮೆಯಿಂದಲೇ ನಮ್ಮ ಹಳ್ಳಿಗಾಡುಗಳೂ ಅಕ್ಷರದ ಶಕ್ತಿಯನ್ನು ಅರಿತುಕೊಂಡಿರುವುದು. ಒಳ್ಳೆಯ ನೆನಪಿನ ಓಲೆ.

  ಪ್ರತಿಕ್ರಿಯೆ
 2. Santhosh

  @ನಟ್ಟು ಸಂತೋಷ ಅನ್ನುವವರೆಲ್ಲ ಹಾಗೆಯೇ, ಹಹಹ!! 😉
  ತಮಾಷೆ ಒತ್ತಟ್ಟಿಗಿರಲಿ.
  ಕಲ್ಪಿಸಿ ಬರೆದ ಕತೆಯ ರೀತಿಯ ಓಘ ನಿಮ್ಮ ಈ ನಿಜ ಜೀವನದ ಗೆಳೆಯನ ಕತೆಗಿದೆ.
  ಬಹುಶಃ ನೀವು ನಿಮ್ಮ ಗೆಳೆಯನನ್ನು “ಎಲೆ ಮಲೆ ಕಾಯಿ” ಅಂಕಣಕ್ಕೆ ಎಳೆತರಬೇಕಿತ್ತು ಅನಿಸುತ್ತದೆ.
  ಅತೀ ಚಿಕ್ಕ ವಯಸ್ಸಿನಲ್ಲೇ ದೊಡ್ಡವರ ಹಾಗೆ ಯೋಚಿಸುವ ಮತ್ತು ಜೀವನದಲ್ಲಿ ಇತರರಿಗೆ ಮಾದರಿಯಾಗುವ ಈ ರೀತಿಯ ವ್ಯಕ್ತಿಗಳು ಸಮಾಜದಲ್ಲಿ ಹೆಚ್ಚಬೇಕಿದೆ.

  ಪ್ರತಿಕ್ರಿಯೆ
 3. chinmay

  Sensational one..!! it has brought me to your long ago days, i roamed like any thing in the avenue of your memorable lines with friend Mr Santhosh. Thank you All The Very Best Friend..!!!

  ಪ್ರತಿಕ್ರಿಯೆ
 4. Utham danihalli

  Enthaha hudugaru prathi halliyalu eruthare natanna adre avrge prothsahakintha hechu bayavane thumbthare jana
  Enthaha hudugarige prothsaha sikki uru bellaguvanthagali
  Nimm lekanada udhesha ederali shubhavagali gellaya

  ಪ್ರತಿಕ್ರಿಯೆ
 5. Nataraju S M

  ಒಮ್ಮೊಮ್ಮೆ ಬ್ಲಾಗ್ ಲೇಖಕನ ಸ್ಥಿತಿ ಫಿಲಂ ರಿಲೀಸ್ ಮಾಡಿ ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ಕಾಯೋ ನಿರ್ಮಾಪಕನ ಹಾಗೆ ಇರುತ್ತದೆ. ಆ ಸ್ಥಿತಿಯನ್ನು ಎಲ್ಲಾ ಲೇಖಕರಲ್ಲದಿದ್ದರೂ ಕೆಲವರಾದರೂ ಅನುಭವಿಸುತ್ತಾರೆ. ಆ ಕೆಲವರಲ್ಲಿ ನಾನೂ ಒಬ್ಬ. ನಿಮ್ಮ ಪ್ರೀತಿ ಪ್ರೋತ್ಸಾಹ ಎಂದಿಗೂ ಬತ್ತದಿರಲಿ.. ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗಳಿಗೆ..

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: