ನಲ್ಮೆಯಿ೦ದ ನಟರಾಜು : ಸ೦ಬ೦ಧಗಳ ಸುಳಿಗಳಲ್ಲಿ

ಪ್ರೇಮ ಎಂತ ಮಧುರವೋ ಅಷ್ಟೇ ಸಂಕೀರ್ಣ.. – ಎಸ್ ಎಮ್ ನಟರಾಜು ಒಬ್ಬ ಮಧ್ಯ ವಯಸ್ಸಿನವನು ತನ್ನ ಹೆಂಡತಿಯ ಜೊತೆ ಚಂದದ ಜೀವನ ನಡೆಸುತ್ತಲೇ ಅವನಿಗಿಂತ ಕಿರಿಯಳಾದ ಸುಂದರ ವಿಧವೆಯೊಬ್ಬಳನ್ನು ಇನ್ನಿಲ್ಲದಂತೆ ಪ್ರೀತಿಸುತ್ತಿರುತ್ತಾನೆ. ಅವನ ಮತ್ತು ಆ ಕಿರಿ ವಯಸ್ಸಿನ ಸುಂದರಿಯ ನಡುವಿನ ಸಂಬಂಧ ಕುರಿತು ಆತನ ಆತ್ಮೀಯ ಗೆಳೆಯನಿಗೆ ಚೆನ್ನಾಗಿ ಗೊತ್ತಿರುತ್ತದೆ. ಆ ಮಧ್ಯವಯಸ್ಸಿನವನ ಆತ್ಮೀಯ ಗೆಳೆಯ ಇನ್ನೂ ಮದುವೆಯಾಗಿರದ ಬ್ರಹ್ಮಚಾರಿಯಾಗಿರುತ್ತಾನೆ. ತನ್ನ ಗೆಳೆಯನ ವಿವಾಹೇತರ ಸಂಬಂಧದಿಂದ ಅವನ ಸಂಸಾರ ಒಡೆದು ಹೋಗುವುದು ನಿಶ್ಚಯ ಎಂದು ಅರಿತ ಮದುವೆಯಾಗಿರದ ಗೆಳೆಯ ಆ ಸುಂದರಿಯ ಮನವೊಲಿಸಲು ಪ್ರಯತ್ನಿಸುತ್ತಾನೆ. ಮಧ್ಯ ವಯಸ್ಸಿನವನ ಪ್ರೀತಿ ಪರಾಕಷ್ಟೆಯ ತಲುಪಿದಾಗ, ಹೆಂಡತಿಗೆ ವಿವಾಹ ವಿಚ್ಚೇಧನ ನೀಡಿ ಬೇರೆಯವಳನ್ನು ಮದುವೆಯಾದ ಎಂದು ಜನರಿಂದ ಅನ್ನಿಸಿಕೊಳ್ಳುವ ಬದಲು, ತನ್ನ ಹೆಂಡತಿಯನ್ನು ಕೊಂದು ತನ್ನ ಸುಂದರ ಪ್ರೇಯಸಿಯ ಜೊತೆ ಬದುಕು ಕಟ್ಟುವ ಕನಸು ಕಾಣುತ್ತಾನೆ. ಅದರಂತೆ ತನ್ನ ಹೆಂಡತಿ ರಾತ್ರಿ ನಿದ್ರಿಸುವ ಮುಂಚೆ ನಿತ್ಯ ಸೇವಿಸುವ ಔಷಧಿಯ ಬಾಟಲ್ ನಲ್ಲಿ ವಿಷದ ಗುಳಿಗೆಗಳನಿಟ್ಟು ಅವಳನ್ನು ಸಾಯಿಸಿಬಿಡುವ ಸಂಚು ರೂಪಿಸುತ್ತಾನೆ. ಆ ಸಂಚನ್ನು ತನ್ನ ಮನೆಯ ನಾಯಿಯ ಮೇಲೆ ಮೊದಲು ಪ್ರಯೋಗಿಸಿ ಅದನ್ನು ಕೊಲ್ಲುವಲ್ಲಿ ಯಶಸ್ವಿಯಾಗುತ್ತಾನೆ. ತನ್ನ ಪ್ರಯೋಗ ಫಲಿಸಿದ್ದನ್ನು ಕಂಡು ಒಂದು ದಿನ ತನ್ನ ಹೆಂಡತಿಯ ಔಷಧಿಯ ಬಾಟಲ್ ನಲ್ಲಿ ವಿಷದ ಗುಳಿಗೆಗಳ ಹಾಕಿ ತನ್ನ ಪ್ರೇಯಸಿಯನ್ನು ಕಾಣಲು ಖುಷಿಯಿಂದ ಅವಳ ಮನೆಗೆ ಹೋಗುತ್ತಾನೆ. ಆ ಸುಂದರಿ ಇವನ ಬರುವಿಕೆಗಾಗಿ ಕಾದವಳಂತೆ ಕಂಡರೂ ತನ್ನಿಂದ ಅವನ ಸಂಸಾರ ಒಡೆದು ಹೋಗುವುದು ತನಗೆ ಇಷ್ಟವಿಲ್ಲ ಆದ್ದರಿಂದ ತಾನು ಅವನನ್ನು ಮದುವೆಯಾಗುವ ಸಾಧ್ಯತೆಯೇ ಇಲ್ಲ ಎಂದು ತನ್ನ ಗಟ್ಟಿ ನಿರ್ಧಾರವನು ಅವನಿಗೆ ತಿಳಿಸಿಬಿಡುತ್ತಾಳೆ. ಅವಳ ನಿರ್ಧಾರದಿಂದ ಕಂಗೆಟ್ಟ ಮಧ್ಯ ವಯಸ್ಸಿನವನು ತನ್ನ ಪ್ರೇಯಸಿಯ ಮನೆಯಿಂದ ಬೇಸರಿಸಿಕೊಂಡು ಹೊರಟು ಬಿಡುತ್ತಾನೆ. ಮನೆಯಿಂದ ಹೊರಗೆ ಹೋದವನು ತನ್ನ ಪ್ರೇಮ ಪತ್ರಗಳು ಫೋಟೋಗಳು ತನ್ನ ಪ್ರೇಯಸಿಯ ಬಳಿ ಇರುವುದು ನೆನಪಾಗಿ ಅವುಗಳ ಮರಳಿ ಪಡೆಯಲು ಮತ್ತೆ ಅವಳ ಮನೆ ಒಳಗೆ ವಾಪಸ್ಸು ಬರುತ್ತಾನೆ. ಅಚ್ಚರಿಯೆಂದರೆ ಆ ಸುಂದರಿ ಮದುವೆಯಾಗದಿರುವ ತನ್ನ ಗೆಳೆಯನ ತೋಳ ತೆಕ್ಕೆಯಲ್ಲಿ ಅಳುತ್ತಿರುವುದು ಕಾಣುತ್ತದೆ. ತಕ್ಷಣ ತನ್ನ ಬರುವಿಕೆ ಅವರಿಗೆ ಮುಜುಗರ ತಂದುದರ ಅರಿವಾಗಿ ತನ್ನ ಪ್ರೇಮ ಪತ್ರಗಳನ್ನು ಮತ್ತು ಫೋಟೋಗಳನ್ನು ಪಡೆದು ತನ್ನ ಹೆಂಡತಿಯನ್ನು ಕೊಲ್ಲಲು ತಾನು ಬಳಸಿರುವ ಸಂಚು ನೆನಪಾಗಿ ಆತುರಾತುರವಾಗಿ ತನ್ನ ಮನೆ ಕಡೆ ಡ್ರೈವ್ ಮಾಡುತ್ತಾನೆ. ಮಾರ್ಗ ಮಧ್ಯೆ ಅವನು ಅತಿ ವೇಗವಾಗಿ ಕಾರ್ ಓಡಿಸುತ್ತಿರುವುದ ಕಂಡು ಪೋಲೀಸರು ಅವನನ್ನು ಹಿಡಿದು ನಿಲ್ಲಿಸುತ್ತಾರೆ.. ಇದು ಸಿನಿಮಾವೊಂದರ ಮುಕ್ಕಾಲು ಭಾಗದ ಕಥೆ. ಇನ್ನು ಉಳಿದ ಕಾಲು ಭಾಗದ ಕಥೆಯ ಈಗಲೇ ಹೇಳಿಬಿಟ್ಟರೆ ಚಂದ ಇರಲ್ಲ ಅಲ್ಲವೇ.. ಮೇಲಿನ ಸಿನಿಮಾದ ಕಥೆಯಲ್ಲಿ ಏಕ ಮುಖ (ಒನ್ ವೇ), ದ್ವಿ ಮುಖ (ಟೂ ವೇ), ಮತ್ತು ತ್ರಿಕೋನ ಪ್ರೇಮಕಥೆಗಳು ನಮಗೆ ಎದ್ದು ಕಾಣುತ್ತವೆ. ಹಾಗಾದರೆ ನಿಜ ಜೀವನದಲ್ಲಿ ಈ ತರಹದ ಸಂಕೀರ್ಣವಾದ ಪ್ರೇಮ ಕಥೆಗಳು ಕಾಣಸಿಗುವುದಿಲ್ಲವೇ? ಖಂಡಿತಾ ಸಿಗುತ್ತವೆ. ಅಂತಹ ಕಥೆಗೆ ಈ ಕೆಳಗಿನ ಕಥೆ ಒಂದು ಪುಟ್ಟ ಉದಾಹರಣೆ. ಒಂದು ಆಫೀಸಿನಲ್ಲಿ ಒಬ್ಬ ಹುಡುಗ ಕೆಲಸ ಮಾಡುತ್ತಿರುತ್ತಾನೆ. ಅಲ್ಲಿ ಆತನ ಗೆಳೆಯರ ದೊಡ್ಡ ಗುಂಪೇ ಇರುತ್ತದೆ. ಅವರಲ್ಲಿ ಒಬ್ಬ ಗೆಳೆಯ ಆತನಿಗೆ ತುಂಬಾ ಆತ್ಮೀಯನಾಗಿರುತ್ತಾನೆ. ಆ ಇಬ್ಬರು ಗೆಳೆಯರ ಮಧ್ಯೆ ಒಬ್ಬ ಹುಡುಗಿ ಸಹ ಇರುತ್ತಾಳೆ. ಆ ಹುಡುಗನಿಗೆ ಆ ಹುಡುಗಿಯ ಕಂಡರೆ ವಿಶೇಷ ಪ್ರೀತಿ. ಆ ಹುಡುಗಿಗೂ ಅಷ್ಟೆ ಆ ಹುಡುಗಿ ಎಂದರೆ ಬಹುಶಃ ಇಷ್ಟವಾಗಿರುತ್ತದೆ. ಅವರಿಬ್ಬರ ನಡುವೆ ಮೊಬೈಲ್ ನಲ್ಲಿ ಮೆಸೇಜ್ ಗಳ ವಿನಿಮಯ ಮತ್ತು ಮಾತುಕತೆ ಸುಮಾರು ಮೂರು ವರ್ಷಗಳಿಂದಲೂ ಸಾಂಗವಾಗಿ ನಡೆದಿರುತ್ತದೆ. ಆ ಹುಡುಗನ ರೂಮು ಆಫೀಸಿನ ಹತ್ತಿರವೇ ಇರುತ್ತದೆ. ಅವನ ಗೆಳೆಯ ಮತ್ತು ಆ ಹುಡುಗಿಯ ಮನೆಗಳು ಆಫೀಸಿನಿಂದ ದೂರವಿದ್ದರೂ ಅವರು ಅಕ್ಕ ಪಕ್ಕ ಏರಿಯಾದಲ್ಲೇ ಇರುತ್ತವೆ. ಎಷ್ಟೋ ಸಲ ಸಂಜೆ ಮೂವರು ಸೇರಿ ಟೀ ಕುಡಿದು ಆ ಹುಡುಗ, ತನ್ನ ಗೆಳೆಯ ಮತ್ತು ಗೆಳತಿಗೆ ಬೈ ಹೇಳಿ ತನ್ನ ರೂಮಿಗೆ ಹೊರಟರೆ ಅವನ ಗೆಳೆಯ ಮತ್ತು ಆ ಹುಡುಗಿ ತಮ್ಮ ತಮ್ಮ ಮನೆಗಳಿಗೆ ಹೆಚ್ಚು ಸಲ ಬೇರೆ ಬೇರೆಯಾಗಿ ಹೊರಟರೂ ಕೆಲವೊಮ್ಮೆ ಜೊತೆಯಲ್ಲೇ ಹೋಗುತ್ತಿರುತ್ತಾರೆ. ಅವರ ಪಯಣವು ಕೆಲವೊಮ್ಮೆ ಬಸ್ ನಲ್ಲಾದರೆ ಇನ್ನೂ ಕೆಲವೊಮ್ಮೆ ಗೆಳೆಯ ಎನಿಸಿಕೊಂಡವನ ಸ್ವಂತದ ಕಾರಿನಲ್ಲೇ ಆಗಿರುತ್ತದೆ. ಹೀಗಿರುವಾಗ ಒಂದು ದಿನ ಹಠಾತ್ತನೆ ಈ ಮೂವರು ಜೊತೆಯಲ್ಲಿ ಟೀ ಕುಡಿಯಲು ಹೋಗುತ್ತಿದ್ದುದು ನಿಂತು ಬಿಡುತ್ತದೆ. ಆ ಹುಡುಗ, ತನ್ನ ಗೆಳೆಯನಿಗೆ ಎಲ್ಲರೆದುರು ಸಿಕ್ಕಾಪಟ್ಟೆ ಬಯ್ಯಲು ಶುರು ಮಾಡುತ್ತಾನೆ. ಆ ಹುಡುಗಿಯ ಮೇಲೂ ಯದ್ವಾತದ್ವ ಹರಿಹಾಯುತ್ತಾನೆ. ಅವಳು ತನ್ನನ್ನು ಪ್ರೇಮಿಸುತ್ತಿದ್ದಳು ಈಗ ತನ್ನ ಗೆಳೆಯನನ್ನು ಮದುವೆಯಾಗುತ್ತಾಳಂತೆ ಎಂದು ಅವಳ ಕುರಿತು ಸಿಕ್ಕ ಸಿಕ್ಕವರ ಬಳಿ ತನ್ನ ಮತ್ತು ಅವಳ ನಡುವಿದ್ದ ಪ್ರೀತಿ ಪ್ರೇಮ ಪ್ರಣಯದ ಕತೆಯ ತುಣುಕುಗಳನ್ನು ಕೋಪದಿಂದ ಹಂಚಿಕೊಳ್ಳಲು ಶುರು ಮಾಡುತ್ತಾನೆ. ಅಚ್ಚರಿಯೆಂದರೆ ಆ ಮೂರೂ ಜನ ಬೆಳಿಗ್ಗೆ ಆಯಿತು ಎಂದರೆ ಒಂದೇ ಆಫೀಸಿನಲ್ಲಿ ಒಬ್ಬರ ಮುಖ ಒಬ್ಬರು ನೋಡಬೇಕಾದ ಮತ್ತು ಆಫೀಸಿನ ಕೆಲಸ ಕುರಿತು ಮಾತನಾಡಬೇಕಾದ ಅನಿವಾರ್ಯತೆ ಇರುತ್ತದೆ. ಆ ಹುಡುಗಿಗೆ ತನ್ನ ಆಫೀಸಿನ ಕೆಲಸ ಕುರಿತು ತನ್ನ ಹಳೆಯ ಪ್ರೇಮಿಯೊಡನೆ ಮಾತನಾಡಬೇಕಾದ ಅನಿವಾರ್ಯತೆ ಬಂದಾಗ ತನ್ನ ಮತ್ತು ಅವನ ನಡುವೆ ಏನೂ ನಡೆದೇ ಇಲ್ಲ ಎನ್ನುವಂತೆ ಅವಳು ಎಷ್ಟೊಂದು ಸಹಜವಾಗಿ ಅವನೊಡನೆ ನಗುತ್ತಲೇ ಮಾತನಾಡುತ್ತಿರುತ್ತಾಳೆ. ತನ್ನ ಆತ್ಮೀಯ ಗೆಳೆಯನ ಪ್ರೇಯಸಿಯನ್ನೇ ಮದುವೆಯಾಗಲು ಹೊರಟಿರುವ ಆ ಹುಡುಗನ ಗೆಳೆಯ ಸಹ ತನಗೆ ಏನೂ ಗೊತ್ತಿಲ್ಲ ತಾನು ಏನೂ ಮಾಡಿಲ್ಲ ಎನ್ನುವವನ ಹಾಗೆ ಮೌನ ವಹಿಸಿಬಿಡುತ್ತಾನೆ. ಆ ಹುಡುಗಿ ಆ ಹುಡುಗನ ಜೀವನದಿಂದ ಹೀಗೆ ದೂರವಾಗುತ್ತಿದ್ದಂತೆ ಅಷ್ಟು ದಿನ ಅವನು ಎಲ್ಲದರಲ್ಲೂ ಸೋತು ಸುಣ್ಣವಾಗುತ್ತಿದ್ದವನಿಗೆ ಯಶಸ್ಸು ಎನ್ನುವುದು ಮೆಲ್ಲನೆ ಕಣ್ಣು ಬಿಟ್ಟು ನೋಡತೊಡಗುತ್ತದೆ. ಆ ಯಶಸ್ಸು ಅವನನ್ನು ಕೆಲಸಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶವನ್ನು ತಂದು ಅವನ ಮುಂದೆ ನಿಲ್ಲಿಸಿಬಿಡುತ್ತದೆ. ಇತ್ತ ಅವನ ಗೆಳೆಯ ಮತ್ತು ಆ ಹುಡುಗಿ ಅವನು ಹೋಗುವುದನ್ನೇ ಕಾಯುತ್ತಾ ಕುಳಿತ್ತಿದ್ದವರಂತೆ ಅವನು ವಿದೇಶಕ್ಕೆ ಹೋಗುವ ದಿನವೇ ತಮ್ಮ ಮದುವೆಯ ಮುಹೂರ್ತ ಇಟ್ಟುಕೊಳ್ಳುತ್ತಾರೆ!!   ಪ್ರೇಮಕತೆಗಳು ಎಷ್ಟು ವಿಚಿತ್ರ ನೋಡಿ. ಯಾರು ಯಾವಾಗ ಹೇಗೆ ಬದಲಾಗಿ ಬಿಡುತ್ತಾರೋ ಹೇಳಲಾಗುವುದಿಲ್ಲ. ಈಗ ಮೇಲಿನ ಸಿನಿಮಾದ ಕಥೆಯನ್ನು ಹೇಳಿಬಿಡುವೆ. ಆ ಮಧ್ಯ ವಯಸ್ಸಿನವನು ಹೆಂಡತಿ ರಾತ್ರಿ ಔಷಧಿ ತೆಗೆದುಕೊಳ್ಳಲು ಇನ್ನರ್ಧ ಗಂಟೆ ಬಾಕಿ ಇರುವಾಗ ಇತ್ತ ಪೋಲೀಸರ ಕೈಗೆ ಸಿಕ್ಕಿ ಹಾಕಿಕೊಂಡು ಯಾಕಷ್ಟು ವೇಗವಾಗಿ ಕಾರು ಓಡಿಸುತ್ತಿದ್ದೇನೆ ಎಂದು ಸತ್ಯವನ್ನು ಹೇಳಲಾಗದೆ ಏನೋ ಸುಳ್ಳು ಹೇಳಿ ಪೋಲೀಸರಿಗೆ ದಂಡ ಕಟ್ಟುತ್ತಾನೆ. ಮನೆಗೆ ಫೋನ್ ಮಾಡಿದರೂ ರಿಂಗ್ ಆಗುತ್ತಿರುವ ಫೋನನ್ನು ಹೆಂಡತಿ ಎತ್ತುತ್ತಿಲ್ಲದಿರುವುದ ಕಂಡು ಆಕಸ್ಮಾತ್ ಇವತ್ತು ಮಾತ್ರೆ ನುಂಗಿ ತನ್ನ ಹೆಂಡತಿ ಬೇಗ ಮಲಗಿಬಿಟ್ಟಳೇ? ಅಯ್ಯೋ ಏನು ಅನಾಹುತವಾಗಿದೆಯೋ ಏನೋ ಎಂದು ಯೋಚಿಸುತ್ತಲೇ ವೇಗವಾಗಿ ಕಾರ್ ಓಡಿಸುತ್ತಾ ಮನೆ ತಲುಪುತ್ತಾನೆ. ಅವನು ಮನೆಗೆ ಬೇಗ ಬಂದುದ ಕಂಡು ಅವನ ಹೆಂಡತಿ ಖುಷಿಯಿಂದ ಇವತ್ತು ಇಷ್ಟು ಬೇಗ ಮನೆಗೆ ಬಂದೆಯಾ ಡಾರ್ಲಿಂಗ್ ಎಂದು ತಬ್ಬಿ ಮುತ್ತಿಡುತ್ತಾಳೆ. ಆಕೆಗೆ ಏನೂ ಅನಾಹುತ ಆಗದಿರುವುದ ಕಂಡು ಖುಷಿಯಿಂದ ತಾನು ಸಹ ಅವಳನ್ನು ತಬ್ಬಿ ಮುತ್ತಿಡುತ್ತಾನೆ. ನಂತರ ಬೆಡ್ ರೂಮ್ ಹೊಕ್ಕವನೇ ತಾನು ಬೆಳಿಗ್ಗೆ ಇಟ್ಟಿದ್ದ ವಿಷದ ಗುಳಿಗೆಗಳಿರುವ ಔಷಧಿಯ ಬಾಟಲ್ ತೆಗೆದು ಅವಳ ನಿತ್ಯದ ಔಷಧಿಯ ಬಾಟಲ್ ಅನ್ನು ಇಟ್ಟು ನೆಮ್ಮದಿಯ ನಿಟ್ಟುಸಿರು ಬಿಡುತ್ತಾ ಕಿಟಕಿಯ ಹೊರಗೆ ದೃಷ್ಟಿ ಹಾಯಿಸುತ್ತಾನೆ. ತನಗೆ ಪರಿಚಯವಿರುವ ಪುರುಷನೊಬ್ಬ ಅರೆ ಬೆತ್ತಲೆಯಾಗಿ ಕಳಚಿಕೊಳ್ಳುತ್ತಿರುವ ಪ್ಯಾಂಟ್ ಸರಿ ಮಾಡಿಕೊಳ್ಳುತ್ತಾ ಅವನ ಮನೆಯ ಹಿಂದಿನ ಬಾಗಿಲಿನಿಂದ ಹೊರಗೆ ಹೋಗುತ್ತಿರುವುದು ಕಾಣುತ್ತದೆ. ಅವನು ತನ್ನ ಹೆಂಡತಿಯ ಪ್ರಿಯತಮ ಎಂದು ಅರಿವಿಗೆ ಬರುತ್ತಲೇ ತನ್ನದೇ ತಪ್ಪುಗಳು ನೆನಪಾಗಿ ಆ ಕ್ಷಣದಲ್ಲಿ ಬೇರೊಂದು ರೂಮಿನಲ್ಲಿದ್ದ ತನ್ನ ಹೆಂಡತಿಗೆ ಏನನ್ನೂ ಹೇಳದೆ ಸುಮ್ಮನಾಗಿಬಿಡುತ್ತಾನೆ.   ಆಶ್ಚರ್ಯವಾಗುತ್ತಿದೆಯೇ ಆತ್ಮೀಯರೇ ಪ್ರೇಮದ ಸಂಕೀರ್ಣತೆಗಳ ಕಂಡು. ಮೊದಲಿಗೆ ಒನ್ ವೇ, ಟೂ ವೇ, ತ್ರಿಕೋನದಂತೆ ಕಂಡ ಕಥೆ ಕೊನೆಗೆ ಚತುಸ್ಕೋನ ಮತ್ತು ಪಂಚಕೋನವಾಗಿ ಗೋಚರಿಸುತ್ತಿದೆಯಲ್ಲವೇ!! ಹೀಗಿರುವಾಗ ಸಿನಿಮಾದ ಕೊನೆಗೆ ಮಧ್ಯವಯಸ್ಸಿನವನ ಮದುವೆಯಾಗದಿದ್ದ ಬ್ರಹ್ಮಚಾರಿ ಗೆಳೆಯ ಆ ಸುಂದರ ಹೆಣ್ಣಿನ ಜೊತೆ ಮದುವೆಯಾಗಿರುತ್ತಾನೆ. ಈ ಸಿನಿಮಾದ ಕಥೆಯ ನಿರೂಪಣೆ ಮಾಡುತ್ತಿದ್ದ ಅವನು ಸಿನಿಮಾ ಕಥೆಯ ಹೀಗೆ ಪೂರ್ತಿ ಹೇಳಿ ಕೊನೆಯಲ್ಲಿ “ಹಾಸಿಗೆಯಲ್ಲಿ ನಮ್ಮ ಪಕ್ಕ ಮಲಗುವ ನಮ್ಮ ಸಂಗಾತಿಯ ಮನಸ್ಸಿನಲ್ಲಿ ಏನಿರುತ್ತದೆ ಎಂದು ಯಾರಿಗಾದರೂ ತಿಳಿದಿದ್ದರೆ ದಯವಿಟ್ಟು ಕೈ ಎತ್ತಿ” ಎಂದು ಪ್ರೇಕ್ಷಕರನ್ನು ಕೇಳುತ್ತಾನೆ. ಅವನು ಕೇಳಿದ ತರಹದ ಪ್ರಶ್ನೆಯನೇ ಮೇಲೆ ಹೇಳಿದ ನಿಜ ಜೀವನದ ಪ್ರೇಮಕತೆಯ ಪಾತ್ರಗಳಲ್ಲೂ, ನಿಮ್ಮಲ್ಲೂ, ನಾನು ಕೇಳಿಕೊಂಡರೆ ಏನು ಉತ್ತರ ಸಿಗಬಹುದು??]]>

‍ಲೇಖಕರು G

August 1, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

8 ಪ್ರತಿಕ್ರಿಯೆಗಳು

 1. Badarinath Palavalli

  ತ್ರಿಕೋನ ಪ್ರೇಮ ಕಥೆಗಳು ಯಾರಿಗಾದರೂ, ತ್ಯಾವಗಲಾದರೂ ಮತ್ತು ಯಾವ ವಯಸ್ಸಿನಲ್ಲಾದರೂ ಸಂಭವಿಸುವ ಅವಘಡಗಳೇ. ಒಳ್ಳೆಯ ಬರಹ.

  ಪ್ರತಿಕ್ರಿಯೆ
 2. Santhosh

  Hey Nattu,
  what is this:)
  Both the stories reminded of Uppi’s way of writing movie scripts.
  excellent.
  Instead of writing like article, write it as a story itself.
  enjoyed reading it:)

  ಪ್ರತಿಕ್ರಿಯೆ
 3. Mohan V Kollegal

  ಪ್ರೇಮಕತೆಗಳು ಎಷ್ಟು ವಿಚಿತ್ರ ನೋಡಿ. ಯಾರು ಯಾವಾಗ ಹೇಗೆ ಬದಲಾಗಿ ಬಿಡುತ್ತಾರೋ
  ಹೇಳಲಾಗುವುದಿಲ್ಲ – ಓನ್ ವೇ, ಟೂ ವೇ, ತ್ರಿಕೋನ, ಪಂಚಕೋನ ಆ ಕೋನ ಈ ಕೋನದ ಕಥೆಗಳು ಸ್ವಲ್ಪ ಭಯವನ್ನು ಹುಟ್ಟು ಹಾಕಿತ್ತು…. ಚೆನ್ನಾಗಿದೆ ಲೇಖನ….:)

  ಪ್ರತಿಕ್ರಿಯೆ
 4. Nataraju S M

  ಸಹೃದಯಿಗಳೇ, ನಿಮ್ಮ ಪ್ರೀತಿಪೂರ್ವಕ ಪ್ರೋತ್ಸಾಹಕ್ಕೆ ಅನಂತ ವಂದನೆಗಳು..
  ನಾಗೇಶ್ ಬ್ರದರ್, ಸಿನಿಮಾದ ಹೆಸರು ‘ಮ್ಯಾರೀಡ್ ಲೈಫ್’. ಧನ್ಯವಾದಗಳು..

  ಪ್ರತಿಕ್ರಿಯೆ
 5. ಈಶ್ವರ ಕಿರಣ

  ತಡವಾದ ಪ್ರತಿಕ್ರಿಯೆಗೆ ಕ್ಷಮೆ ಇರಲಿ. ಚಂದದ ವಿಷಯ, ಒಳ್ಳೆಯ ಬರಹ. ಒಂದೇ ಬಾರಿಗೆ ಓದಬೇಕಾದಾಗ ಎರಡು ಕತೆಗಳು ಮಿಕ್ಸ್ ಆಗಿಬಿಟ್ಟವು.
  Nice write up 🙂

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: