ನವ ವೃತ್ತಿರಂಗಭೂಮಿ ಮತ್ತು ಇತರೆ ರಂಗಸವಾಲುಗಳು

ಮಲ್ಲಿಕಾರ್ಜುನ ಕಡಕೋಳ

ಈಚಿನ ದಿನಮಾನಗಳಲ್ಲಿ “ನವ ವೃತ್ತಿರಂಗಭೂಮಿ” ಎಂಬ ಪದ ಪ್ರಯೋಗ ಕೆಲವು ಮಂದಿ ಎಲೈಟ್ ರಂಗಕರ್ಮಿಗಳು ಖಾಯಷ್ ಪಟ್ಟು ಬಳಕೆ ಮಾಡುತ್ತಿದ್ದಾರೆ. ಅದು ವರ್ತಮಾನದ ಹೊಸ ಅಲೆ ರಂಗ ಸಂಸ್ಕೃತಿ ಚಿಂತನೆಯ ಮುದ್ದಾಂ ಬಳಕೆಯಂತೆ ಕಂಡು ಬಂದರೂ ಅದೇನು ಖಾನೇಸುಮಾರಿ ಬಳಕೆಯೇನಲ್ಲ. ಅವರು ಬುದ್ಧಿಪೂರ್ವಕವಾಗಿಯೇ, ವೃತ್ತಿ ರಂಗ ವಾಂಛೆಯಿಂದ ಈ ಹೊಸ ನುಡಿಗಟ್ಟನ್ನು ಬಳಸುತ್ತಿದ್ದಾರೆ.

ತಾವು ನಾಟಕವನ್ನೇ ವೃತ್ತಿಯಾಗಿ ಬದುಕುತ್ತಿರುವುದರಿಂದ ಅಥವಾ ತಮ್ಮ ವೃತ್ತಿ ಜೀವನವೇ ರಂಗ ಕಾಯಕವಾದ್ದರಿಂದ ತಮ್ಮದೂ ವೃತ್ತಿ ರಂಗಭೂಮಿ Blood group ಎಂಬ ಅಭಿಮತ ಅವರದಾಗಿರಬಹುದು. ಆದರೆ ತಮ್ಮದು ನವ ವೃತ್ತಿರಂಗಭೂಮಿ (Neo professional theatre) ಎಂಬ ವಿನೂತನ ಹೆಸರಿನಿಂದ ಕರೆಯುವ ಸೂಕ್ಷ್ಮ ಯತ್ನಗಳು ಕೆಲವರಿಂದ ಪ್ರಜ್ಞಾಪೂರ್ವಕವಾಗೇ ಕರೆಪತ್ರಗೊಳ್ಳುತ್ತವೆ (ಕರಪತ್ರ ವಲ್ಲ). ಹೀಗೆ ಕರೆಯುವ ಮೂಲಕ ಪರಂಪರಾಗತ ಕಂಪನಿ ಶೈಲಿಯ ನಾಟಕಗಳ ವೃತ್ತಿರಂಗಭೂಮಿ ತಮ್ಮದಲ್ಲ ಎಂಬುದನ್ನು ಒಪ್ಪಿಕೊಂಡಂತಾಗಿದೆ.

ವೃತ್ತಿಪರತೆಯ ಉಮೇದಿನಲ್ಲಿ ಉದ್ಭವಗೊಂಡ ಇದನ್ನು ವೃತ್ತಿನಿರತೆಯ ಜಾಣ ಬಳಕೆಯೆಂದು ಕರೆಯಬಹುದೇನೋ..? ವೃತ್ತಿರಂಗಭೂಮಿ ಮತ್ತು ಆಧುನಿಕತೆ ಹೆಸರಿನ ವೈಚಾರಿಕ ರಂಗಭೂಮಿಗಳದ್ದು  ಹೃದಯ ಮತ್ತು ಮಿದುಳಿನ ಸಂಬಂಧವಿದ್ದಂತೆ. ಮನುಷ್ಯನಿಗೆ ಯಾವುದು ಮುಖ್ಯ, ಯಾವುದು ಅಮುಖ್ಯವೆಂದು ನಿರ್ಧರಿಸಲಾಗದು. ಎರಡೂ ಮುಖ್ಯವೇ ಇರಬಹುದು. ಆದರೆ ಎರಡರಲ್ಲಿ ಅತಿ ಹೆಚ್ಚು ಮುಖ್ಯ ಯಾವುದು..? ಉತ್ತರ ಅಷ್ಟು ಸರಳವಾಗಿ ಪ್ರಾಪ್ತವಾಗಲಾರದು. ಇದು ಹೃದಯ ಮತ್ತು ಮಿದುಳಿನ ಕುರಿತಾದ ತೀಕ್ಷ್ಣ ಮೀಮಾಂಸೆಯಿದ್ದಂತೆ.

ಬುದ್ದಿವಂತ ಮತ್ತು ಸಾಮಾನ್ಯರ ನಡುವಿನ ಸಂಬಂಧ ಮಾತ್ರವಲ್ಲ, ಅದು ಜನಸಂಸ್ಕೃತಿಯ ಜೀವಬಾಹುಳ್ಯತನದ ಕಂಡುಕೊಳ್ಳುವಿಕೆ. ಲಿಪಿಬಲ್ಲವರ ಮತ್ತು ಲಿಪಿಯನರಿಯದವರ ನಡುವಿನ ಫರಕುಗಳು ಎಂಬಂಥದು. ಇನ್ನೊಂದರ್ಥದಲ್ಲಿ ಸಮಗ್ರ ರಂಗಸಮಷ್ಟಿ ಪ್ರಜ್ಞೆಯ ಹುಡುಕಾಟ. ನೇಪಥ್ಯದಲಿ ಅದು ನಿಜದ ನೆಲೆಯ ಅನುಭಾವ ರಂಗದಂತೆ. ಪ್ರಾಯಶಃ ಹೊಸ ಅಲೆಯ ಹಾಗೂ ವೃತ್ತಿ ರಂಗಭೂಮಿ ನಡುವಿನ ರಂಗ ಸಂವೇದನೆ, ರಂಗ ಜಿಜ್ಞಾಸೆಗಳ ಅಸ್ಮಿತೆಯ ಹುಡುಕಾಟವೂ ಆಗಿದೆ. ಮತ್ತೆ ಕೆಲವರ ಪಾಲಿಗದು ಅಕ್ಷರಸ್ಥರು – ಅನಕ್ಷರಸ್ಥರ ನಡುವಿನ ವ್ಯತ್ಯಾಸದಂತೆ ಕಂಡುಬರುತ್ತದೆ. ಅದೇನೇ ಇರಲಿ ಅದೊಂದು ಬಗೆಯ ಆನುವಂಶಿಕ ರಂಗಸಂಬಂಧವಿದ್ದಂತೆ ಎಂಬುದನ್ನು ನಿರಾಕರಿಸಲಾಗದು.

ಸಾಮಾಜಿಕವಾಗಿ ಹಲವು ತಲ್ಲಣ, ತಳಮಳಗಳ ಮೇಳೈಕೆಯ ವೃತ್ತಿ ರಂಗಭೂಮಿಯದು ಸುಡುಸುಡುವ ಸತ್ಯಗಳ ನಡುವೆ ಅರಳಿದ ರಂಗಬದುಕು. ಜನಸಾಮಾನ್ಯರ ಮನಸು, ಹೃದಯಗೆದ್ದ ಲೋಕಮುದ್ರೆಯ ರಂಗಲೋಕವದು. ಹೌದು ಅದಕ್ಕೆ ಲೋಕಮೀಮಾಂಸೆಯ ಗಟ್ಟಿಯಾದ ಠಸ್ಸೆ ಎಲ್ಲಕಾಲಕ್ಕೂ ಲಭಿಸಿದೆ. ಹೀಗಾಗಿಯೇ ವೃತ್ತಿರಂಗಭೂಮಿಯು ಜನಪದೀಕರಣ ದೀಕ್ಷೆಗೆ ಭಾಜನವಾಗಿ *ಪ್ರೇಕ್ಷಕ ರಂಗಭೂಮಿ* ಹುಟ್ಟಿಹಾಕಿದೆ. 

ಆಧುನಿಕ ಮತ್ತು ಆಧುನಿಕೋತ್ತರ ರಂಗಭೂಮಿಯ ಕೆಲವು ಮಂದಿ ರಂಗಪ್ರವರ್ತಕರು ನವ ವೃತ್ತಿ ರಂಗಭೂಮಿಯೆಂಬ ಹೊಸ ಹೆಸರನ್ನು ಪ್ರಾಕಾರವಾಗಿ ಬೆಳಸುವಲ್ಲಿ ತೋರುತ್ತಿರುವ ಉದ್ದೇಶಿತ ಪ್ರೀತಿ ಆಸಕ್ತಿದಾಯಕ. ಅದು ಕಂಪನಿ ಶೈಲಿ ವೃತ್ತಿ ರಂಗದ ಮೇಲಿನ ಪ್ರೀತಿಯೇ ಆಗಿದೆ. ಏಕೆಂದರೆ ಅದು ವೃತ್ತಿ ರಂಗಭೂಮಿಯಲ್ಲ ನವ ವೃತ್ತಿರಂಗಭೂಮಿ. ನಗರ ಮತ್ತು ಗ್ರಾಮೀಣ ಹವ್ಯಾಸಿಗಳು ಸೇರಿದಂತೆ ಒಟ್ಟು ರಂಗಸಂಸ್ಕೃತಿಯ ತಾಯಿಬೇರುಗಳಿರುವುದೇ ವೃತ್ತಿ ರಂಗಭೂಮಿಯಲ್ಲಿ.

ಈ ಕಾರಣಕ್ಕಾಗಿ ಕಂಪನಿ ನಾಟಕಗಳು ಗ್ರಾಮೀಣರನ್ನೊಳಗೊಂಡು ಕೆಳ ಮತ್ತು ಕೆಳ ಮಧ್ಯಮ ವರ್ಗದ ಬಹು ಜನಸಮುದಾಯದ ಪ್ರೀತಿಗೆ ಪಾತ್ರವಾದವು. ಹಾಗೆ ಆಗುವಲ್ಲಿ ಅಂದಿನ ಸ್ವಾತಂತ್ರ್ಯ ಹೋರಾಟ, ದೇಶಭಕ್ತಿ, ಖಾದಿಚಳವಳಿ, ಅನ್ಯೋನ್ಯ ಪ್ರೀತಿಯ ಸಾಮಾಜಿಕ ಮತ್ತು ಕೌಟುಂಬಿಕ ಬದುಕಿನ ಹತ್ತು ಹಲವು ಅನನ್ಯತೆಗಳೇ ಹೆಚ್ಚು ಕಾರಣ. ಆದರೆ ಆಧುನಿಕವೆಂದು ಹೇಳಲಾದ ವೈಚಾರಿಕ, ಪ್ರಯೋಗಶೀಲ ನಾಟಕಗಳು ಮಧ್ಯಮ ವರ್ಗದ ಬಹುಸಂಖ್ಯಾತರು ಮತ್ತು ಗ್ರಾಮೀಣರನ್ನು ತಲುಪಲೇ ಇಲ್ಲ. ಅಷ್ಟೇ ಯಾಕೆ ಬಹುಪಾಲು ಕೆಳಮಧ್ಯಮ ವರ್ಗದ ರಂಗ ಸಂವೇದನೆಗಳಿಂದಲೂ ಹೊಸ ಅಲೆಯ ಆಧುನಿಕ ನಾಟಕಗಳು ಬಹಳೇ ದೂರ ಉಳಿದವು.

ಯುರೋಪ್ ನೆಲದಲ್ಲೇ ಔಟ್ ಡೇಟೆಡ್ ಆದ ಅಸಂಗತ ನಾಟಕಗಳನ್ನು ಇಲ್ಲಿ ಸಂಗತಗೊಳಿಸುವ ಯತ್ನಗಳು ಜನಸಾಮಾನ್ಯರನ್ನು ತಲುಪುವಲ್ಲಿ ಯಶಸ್ಸು ಸಾಧಿಸಲಿಲ್ಲ.  ಕಂಪನಿ ನಾಟಕಗಳ ವೃತ್ತಿ ರಂಗಭೂಮಿಯದು ಶ್ರಮ ಸಂಸ್ಕೃತಿಯ ಬದುಕು. ಕುರ್ಚಿಗುಂಡಿ ತೋಡುವ ಕ್ರಿಯೆಯೊಂದಿಗೆ ಆರಂಭಗೊಳ್ಳುತ್ತದೆ. ಅವರು ರಂಗಸಜ್ಜಿಕೆ ಸಿದ್ಧಳಿಸುವ ಕ್ರಿಯೆಯೇ ಅಭೂತಪೂರ್ವ.

ರಸ್ತಾ ಸೀನ್, ಜಂಗಲ್ ಸೀನ್, ಬಗೀಚಾ ಸೀನ್, ದರ್ಬಾರ್ ಸೀನ್, ಮಹಡಿಮನೆ.. ಹೀಗೆ ತರಹೇವಾರಿ ಸೀನುಗಳಲ್ಲದೇ ಆಯಾ ನಾಟಕಗಳಿಗೆ ತಕ್ಕನಾದ ದೃಶ್ಯಾವಳಿಗಳನ್ನು ಸೃಷ್ಟಿಸುವಲ್ಲಿ ಇವರ ಜನಪ್ರಿಯ ಮಾದರಿಗಳು ಸಾರ್ವತ್ರಿಕ ಪ್ರೀತಿ ಗಳಿಸಿರುತ್ತವೆ. ಇವತ್ತಿನ ನ್ಯೂಕ್ಲಿಯರ್ ಕುಟುಂಬಗಳ ಸಂದರ್ಭದಲ್ಲಿ ಆವತ್ತಿನ ಅವಿಭಜಿತ ಕುಟುಂಬ ಪ್ರೀತಿಯ ನಾಟಕಗಳು ಇಂದಿನ ತುರ್ತು ಅಗತ್ಯವೆನಿಸಿದರೆ ಅಚ್ಚರಿಯೇನಲ್ಲ. ಇಂತಹ ಅನೇಕ ರಂಗ ಸಾಧ್ಯತೆಗಳನ್ನು ಆಧುನಿಕ ರಂಗಭೂಮಿಯಲ್ಲಿ ಕಾಣಲು ದುಃಸಾಧ್ಯ.

ಹಳ್ಳಿ ಹಳ್ಳಿಗೂ ಹಬ್ಬಿಕೊಂಡಿರುವ  ವೃತ್ತಿರಂಗದ ಕಂಪನಿ ನಾಟಕಗಳ ಬೇರುಗಳು ಪ್ರಜಾಸತ್ತಾತ್ಮಕ ಬಲಾಢ್ಯತೆಯ ಮೇಲುಗೈ ಹೊಂದಿವೆ. ಹಾಗೆ ನೋಡಿದರೆ ಇದು ಹಳ್ಳಿಗರ ಹವ್ಯಾಸದ ವೃತ್ತಿ ರಂಗಭೂಮಿಯೇ ಆಗಿದೆ. ಅಂದರೆ ವರ್ಷಕ್ಕೊಮ್ಮೆ ಜಾತ್ರೆಗೋ, ಹಟ್ಟೀ ಹಬ್ಬಕ್ಕೋ ವೃತ್ತಿ ರಂಗಭೂಮಿಯ ನಾಟಕಗಳನ್ನೇ ಲಕ್ಷ, ಲಕ್ಷ ರೂಪಾಯಿಗಳನ್ನು ಖರ್ಚುಮಾಡಿ ಆಡುವ ಮೂಲಕ ತಮ್ಮ ಜವಾರಿ ಪ್ರೀತಿ, ಸಂತಸ ಮೆರೆಯುತ್ತಾರೆ. 

ರೊಟ್ಟಿ ಬುತ್ತಿ ಕಟ್ಟಿಕೊಂಡು, ಕುಟುಂಬದ ಸದಸ್ಯರೆಲ್ಲರೂ ಎತ್ತಿನಗಾಡಿ ಹೂಡಿಕೊಂಡು ಬೇರೆ ಊರಿನ ಕಂಪನಿ ನಾಟಕಗಳನ್ನು ನೋಡಲು ಹೋಗುವುದೇ ಅವರಿಗೆ ಜಾತ್ರೆಯ ಸಡಗರ ಸಂಭ್ರಮ. ಅವರು ಯಾರೂ ಆಧುನಿಕ ಶೈಲಿಯ ನಾಟಕ ಪ್ರದರ್ಶನಗಳ ಗೋಜಿಗೆ ಹೋಗಲಾರರು. ಅಂದರೆ ರೆಪರ್ಟರಿ ಉರುಫ್ ರಂಗಾಯಣ, ರಂಗಶಾಲೆಗಳ ರಂಗಪ್ರಯೋಗ ಪ್ರದರ್ಶನದ ತಂಟೆಗೆ ಹೋಗಲಾರರು.

*ಆಧುನಿಕೋತ್ತರ ರಂಗಮೀಮಾಂಸೆ*

ನಾಟಕಗಳನ್ನೇ ವೃತ್ತಿ ಮಾಡಿಕೊಂಡ ಮಾತ್ರಕ್ಕೆ ಅದು ವೃತ್ತಿ ರಂಗಭೂಮಿ ಆಗಬೇಕೆ..? ಕೆಲವು ಕುಟುಂಬಗಳಿಗೆ *ಸರ್ಕಾರ* ಎಂಬ ಅಡ್ಡ ಹೆಸರು ಇದ್ದ ಮಾತ್ರಕ್ಕೆ ಅವು ಆಡಳಿತ ನಡೆಸುವ ಸರ್ಕಾರವಾಗುವುದುಂಟೇ.? ಅಲ್ಲಮನು ಹೇಳುವ ಲಿಪಿಬಲ್ಲೆನೆಂಬ ಅಹಮಿಕೆ ಬೇಡವೆನಿಸುತ್ತದೆ. ಆದರೆ ಕೆಲವು ಮಂದಿ ಆಧುನಿಕ ರಂಗಕರ್ಮಿಗಳು ಸಹಿತ “ನವ ವೃತ್ತಿರಂಗಭೂಮಿ” ಎಂಬ ಪದಬಳಕೆ ಮಾಡಲು ಹಿಂಜರಿಕೆ ತೋರುವುದನ್ನು ಕೂಡ ಕೇಳಿದ್ದೇನೆ. 

ನವ ವೃತ್ತಿರಂಗಭೂಮಿ ತಮ್ಮದೆಂದು ಹೇಳಲಾಗುವ ಅವರೆಲ್ಲರೂ ಅಕ್ಷರಶಃ ಆಧುನಿಕ ರಂಗಭೂಮಿಯ ಅಕ್ಷರ ಲಿಪಿಬಲ್ಲ ಶ್ಯಾಣೇ ಮಂದಿ. ಎನ್ ಎಸ್ ಡಿ, ನೀನಾಸಂ, ರಂಗಾಯಣ, ಶಿವಸಂಚಾರ, ಮೊದಲಾದ ರೆಪರ್ಟರಿಗಳಲ್ಲಿ ಡಿಪ್ಲೊಮಾ, ಡಿಗ್ರಿಗಳನ್ನು ಪಡಕೊಂಡು ಬಂದ ರಂಗಕರ್ಮಿಗಳು. ನಾಟಕಗಳನ್ನೇ ವೃತ್ತಿ, ರಂಗ ವ್ಯವಸಾಯ ಮಾಡಿಕೊಂಡಿರುವುದರಿಂದ ಅವರ ವೃತ್ತಿಯೇ ರಂಗಭೂಮಿಯ ಕಾಯಕ ಎಂಬುದು ಅವರ ಹದಿನಾರಾಣೆ ಅಂಬೋಣ.

ಈಗಾಗಲೇ ಕಂಪನಿ ನಾಟಕಗಳ ಪರಂಪರಾಗತ ವೃತ್ತಿ ರಂಗಭೂಮಿ ಅಸ್ತಿತ್ವದಲ್ಲಿದ್ದು ಗೊಂದಲಬೇಡವೆಂದು, ತಮ್ಮದು ನವ ವೃತ್ತಿರಂಗಭೂಮಿ ಎಂದು ಪದಾರ್ಥ ತರ್ಕದ ಹೊಸ ನುಡಿಗಟ್ಟಿನ ನಾಮಕರಣ. ವರ್ತಮಾನದ ಖರೇ ಖರೇ ಕಂಪನಿ ನಾಟಕಗಳ ವೃತ್ತಿ ರಂಗಭೂಮಿಯು, ಆಧುನಿಕ ರಂಗಭೂಮಿಯ ಶ್ಯಾಣೇರು ಒಡ್ಡುವ ಈ ಎಲ್ಲ ರಂಗ ಸವಾಲುಗಳನ್ನು ಎದುರಿಸುತ್ತಲೇ ತನ್ನ ಮೂಲ ಅಸ್ತಿತ್ವವನ್ನು ಜತನವಾಗಿ ಕಾಪಿಟ್ಟುಕೊಳ್ಳಬೇಕಿದೆ. ಆ ಮೂಲಕ ವೃತ್ತಿರಂಗಭೂಮಿಯ ಸೋಪಜ್ಞಶೀಲ ಪರಂಪರೆಯನ್ನು ಮೆರೆಯಬೇಕಿದೆ.

‍ಲೇಖಕರು Avadhi

December 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹಳೆ ಬೇರು, ಹೊಸ ಚಿಗುರಿನ ಕತೆಗಳು

ಹಳೆ ಬೇರು, ಹೊಸ ಚಿಗುರಿನ ಕತೆಗಳು

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ದಿಲ್ಲಿಯಲ್ಲಿರುವ ನನ್ನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This