ನಾಕೇ 'ನಾಕು ತಂತಿ'

 
suresh_b1ಬಿ ಸುರೇಶ ನಾಟಕ ರಂಗದಿಂದ ಕಿರು-ಹಿರಿ ತೆರೆಗೆ ಜಿಗಿದವರು. ರಂಗಕರ್ಮಿಗಳಿಗಿರುವ ವಿಮರ್ಶಾ ಪ್ರಜ್ಞೆ ಇವರು ಯಾವ ರಂಗಕ್ಕೆ
ಹೋದರೂ ಜೀವಂತವಾಗಿದೆ. ಅವರ ಬಿ ಸುರೇಶ ಬ್ಲಾಗ್ ನ ಬರಹಗಳು ಸಾಕ್ಷಿ. ನಾಕು ತಂತಿ ಕಿರುತೆರೆಯ ಧಾರಾವಾಹಿಗಳಲ್ಲೇ
ಅತ್ಯಂತ ಹೆಚ್ಚು ವೀಕ್ಷಕರನ್ನು ಹೊಂದಿದೆ. ನಾಕುತಂತಿ ಪ್ರಿಯರಿಗೆ ಖಂಡಿತಾ ಇಷ್ಟವಾಗುವಂತೆ ಸುರೇಶ್
ಮತ್ತೊಂದು ಬ್ಲಾಗ್ ರೂಪಿಸಿದ್ದಾರೆ. 

22

ಕಥಾ ಹಂದರ

ಕನ್ನಡದ ಸಂದರ್ಭದಲ್ಲಿ ದೈನಿಕ ಧಾರಾವಾಹಿಗಳು ಎಂಬುದು ಕಿರುತೆರೆಗೆ ಬಂದುದು ೧೯೯೬-೯೭ರಲ್ಲಿ. ಅಲ್ಲಿಂದ ಇಲ್ಲಿಯ ವರೆಗಿನ ಸುಮಾರು ಒಂದು ದಶಕದ ಹಾದಿಯಲ್ಲಿ ಅನೇಕ ಪ್ರಯೋಗಗಳಾಗಿವೆ. ಅಂತಹ ಪ್ರಯೋಗಗಳಲ್ಲಿಯೇ ವಿಶಿಷ್ಟವಾದ ಪ್ರಯೋಗ ‘ನಾಕುತಂತಿ’. ಉದಯ ವಾಹಿನಿಯಲ್ಲಿ ಪ್ರತಿದಿನ ಸಂಜೆ ನಾಲ್ಕರಿಂದ ಪ್ರಸಾರವಾಗುತ್ತಿರುವ (ಸೋಮವಾರದಿಂದ ಶುಕ್ರವಾರದವರೆಗೆ) ‘ನಾಕುತಂತಿ’ ಅನೇಕ ಕಾರಣಗಳಿಗೆ ವಿಶಿಷ್ಟವಾದುದು. ಹಾಗಾಗಿಯೇ ೨೦೦೪ರ ಮಾರ್ಚಿ ತಿಂಗಳ ೨೭ನೆಯ ತಾರೀಖು ಆರಂಭವಾದ ಈ ಧಾರಾವಾಹಿ ಇಂದು ೧೨೨೦ ಕಂತುಗಳನ್ನ ಪೂರೈಸಿ ಇಂದಿಗೂ ಜನಮಾನಸದ ಪ್ರೀತಿಯನ್ನು ಉಳಿಸಿಕೊಂಡು ಸಾಗುತ್ತಿದೆ.
‘ನಾಕುತಂತಿ’ ಧಾರಾವಾಹಿಗೆ ಜ್ಞಾನಪೀಠ ಪ್ರಶಸ್ತಿ ವಿಜೇತ ವರಕವಿ ಡಾ. ದ,ರಾ.ಬೇಂದ್ರೆ ಅವರ ಅದೇ ಹೆಸರಿನ ಕವನವನ್ನು ಶೀರ್ಷಿಕೆ ಗೀತೆಯಾಗಿ ಬಳಸಲಾಗಿದೆ. ವರಕವಿ ಬೇಂದ್ರೆಯವರು ಮನುಷ್ಯ ಜೀವನವನ್ನ ಗಮನಿಸುವ ಪರಿಯೇ ವಿಶಿಷ್ಟವಾದುದು. ಪ್ರತಿ ಜೀವಿಯ ಬದುಕನ್ನು ಕವಿಗಳು ತಂಬೂರಿಗೆ ಹೋಲಿಸುತ್ತಾರೆ. ಈ ತಂಬೂರಿಯಲ್ಲಿ ಆಯಾ ವ್ಯಕ್ತಿಯು ಸ್ವತಃ ಒಂದು ತಂತಿಯಾದರೆ ಅವನೊಂದಿಗೆ ಸೇರಿಕೊಳ್ಳುವ ಆತನ/ಆಕೆಯ ಅರ್ಧಾಂಗಿಯು ಎರಡನೇ ತಂತಿಯಾಗುತ್ತಾರೆ. ಅವರಿಬ್ಬರಿಂದ ಹುಟ್ಟಿದ ಸಂತಾನಗಳು ಮೂರನೆಯ ತಂತಿ. ಈ ಮೂರರ ಸುತ್ತ ಅವರೆಲ್ಲರೂ ಸೇರಿ ಕಟ್ಟಿಕೊಂಡ ಸಮಾಜ ಎಂಬುದು ನಾಲ್ಕನೆಯ ತಂತಿ. ಈ ನಾಲ್ಕೂ ತಂತಿಗಳು ಶೃತಿಬದ್ಧವಾಗಿದ್ದಾಗ ಮಾತ್ರ ವ್ಯಕ್ತಿಯ ಬದುಕಿನಲ್ಲಿ ಸಂಗೀತವೆಂಬುದು ಹುಟ್ಟುತ್ತದೆ ಎಂಬುದನ್ನ ಬೇಂದ್ರೆಯವರು ತಮ್ಮ ಕವನದ ಸಾಲುಗಳ ಮೂಲಕವೇ ಹೇಳುತ್ತಾರೆ.
ವರಕವಿಯ ಈ ಆಲೋಚನೆಯೇ ‘ನಾಕುತಂತಿ’ ಧಾರಾವಾಹಿಯ ತಾತ್ಪರ್ಯ. ಇಲ್ಲಿರುವ ಪ್ರತಿ ಪಾತ್ರವೂ ಒಂದು ತಂಬೂರಿಯಂತೆ ತಾನು-ತನ್ನದನ್ನ ಶೃತಿಬದ್ಧವಾಗಿಡಲು ಮಾಡುವ ಹರಸಾಹಸವೇ ‘ನಾಕುತಂತಿ’ಯ ಕಥನ. ‘ನಾಕುತಂತಿ’ಯಲ್ಲಿ ಪ್ರಧಾನವಾಗಿ ನಾಲ್ಕು ಧಾರೆಗಳಿವೆ. ಇವು ಅಮೃತವರ್ಷಿಣಿ, ಕಲ್ಯಾಣಿ, ಪೂರ್ವಿ, ಮೇಘಾಮಲ್ಹಾರ್ ಎಂಬ ಮೂವರು ಹೆಣ್ಣು ಮಕ್ಕಳ ಸುತ್ತಲೂ ಸಾಗುವ ನದಿಗಳು. ಈ ನಾಲ್ಕೂ ನದಿಗಳನ್ನ ಒಂದೆಡೆಗೆ ಹಿಡಿದಿಡುವ ವ್ಯಕ್ತಿ ಮಿತ್ರಾ ಎಂಬ ವೃದ್ಧ ಪಾತ್ರ. ಈತ ಈ ನಾಲ್ಕೂ ಪಾತ್ರಗಳ ತಂದೆ. ಈ ತಂಬೂರಿಗೆ ಕಟ್ಟಿದ ನಾಲ್ಕು ಕಂಬಿಗಳು ಅವನ ನಾಲ್ವರು ಹೆಣ್ಣು ಮಕ್ಕಳು. ಅಮೃತವರ್ಷಿಣಿ ತಂಬೂರಿಯ ಮೊದಲ ತಂತಿಯಾದ ಮಂದ್ರವನ್ನು ಹೋಲುವ ಪಾತ್ರ. ಕಲ್ಯಾಣಿ ಎರಡನೆಯ ತಂತಿಯಾದ ಮಂದ್ರವನ್ನು ತಾಗುವ ಪಾತ್ರ. ಪೂರ್ವಿ ಧನ್ಯಾಶ್ರೀ ಮೂರನೆಯ ತಂತಿಯಾದ ಉಚ್ಛ ಸ್ವರವನ್ನು ಹೋಲುವ ಪಾತ್ರ. ಮೇಘಾ ಮಲ್ಹಾರ್ ಕಡೆಯ ತಂತಿ. ಆಕೆ ಇನ್ನುಳಿದ ಮೂರು ತಂತಿಗಳಿಗೆ ಸಂವಾದಿಯಾದ ಪಾತ್ರ. ಹೀಗೆ ಒಂದು ಅಸಂಗತ ವಿವರವನ್ನು ಸಂಗತ ವಿವರಗಳ ಒಳಗೆ ತುಂಬಿ ತಂಬೂರಿಯ ನಾದವನ್ನು ಪ್ರೇಕ್ಷಕನಿಗೆ ಉಣಬಡಿಸುವ ಪ್ರಯತ್ನವಾಗಿ ಸಾಗುತ್ತಾ ಇರುವುದು ‘ನಾಕುತಂತಿ’ ಧಾರಾವಾಹಿಯ ಕಥನ.
ಮಿತ್ರಾ ಒರ್ವ ಪುಸ್ತಕ ಪರಿಚಾರಕ. ಕನ್ನಡ ಪುಸ್ತಕಗಳನ್ನು ಈ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಬೇಕೆಂಬ ಆಸೆಯಿರುವವನು. ಅದರೊಂದಿಗೆ ಹೆಣ್ಣು ಹುಟ್ಟಿದೊಡನೆ ಬೀದಿಗೆ ಬಿಸಾಡುವ ಜನರನ್ನು ಕುರಿತು ಆತನಿಗೆ ಕೋಪವಿದೆ. ಹೀಗಾಗಿ ಯಾರು ಯಾರೋ ಸಾಕಲಾಗದೆ ಕೈ ಬಿಟ್ಟ ಹೆಣ್ಣು ಮಕ್ಕಳನ್ನ ತನ್ನ ಮನೆಗೆ ತಂದು ಆತ ಸಾಕುತ್ತಾ ಇದ್ದಾನೆ. ಹೀಗೆ ಅವನ ಮನೆ ಸೇರಿರುವ ನಾಲ್ಕು ಜೀವಗಳೇ ಅಮೃತಾ, ಕಲ್ಯಾಣಿ, ಪೂರ್ವಿ, ಮೇಘಾ. ಈ ನಾಲ್ಕೂ ಮಕ್ಕಳೂ ಬೆಳೆದು ದೊಡ್ಡವರಾದ ಮೇಲೆ ಅವರಿಗೆ ತಾವು ಈ ತಂದೆಯ ಮಕ್ಕಳಲ್ಲ ಎಂಬ ಸತ್ಯ ತಿಳಯುತ್ತದೆ. ಅಲ್ಲಿಂದಾಚೆಗೆ ಪ್ರತಿ ಪಾತ್ರವೂ ತನ್ನ ಚರಿತ್ರೆ ಮತ್ತು ತನ್ನ ಭವಿಷ್ಯವನ್ನು ಹುಡುಕುತ್ತಾ ವರ್ತಮಾನದ ಜಗಳಗಳನ್ನು, ಸಮಸ್ಯೆಗಳನ್ನೂ ದಾಟಿಕೊಳ್ಳುವುದು ‘ನಾಕುತಂತಿ’ಯ ಹೂರಣ.
ಅಮೃತವರ್ಷಿಣಿ ಶಾಸ್ತ್ರೀಯ ಸಂಗೀತ ಬಲ್ಲ ಹೆಣ್ಣು ಮಗಳು. ಆದರೆ ಆಕೆಯ ಗಂಡ ಮಹಾ ಜಿಪುಣ ಹಾಗೂ ಅನುಮಾನದ ಪ್ರವೃತ್ತಿಯವನು. ಹೀಗಾಗಿ ಗಂಡನಿಂದ ಒದಗುವ ಅವಮಾನಗಳನ್ನು ಎದುರಿಸಲಾಗದೆ ಅಮೃತಾ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಈ ಸಂದರ್ಭದಲ್ಲಿ ತಾಯಿಯ ಕನಸು ತನ್ನದು ಎಂದು ಭಾವಿಸಿ ಸಂಗೀತಾಗಾರ್ತಿಯಾಗುವ ಹಾದಿಯಲ್ಲಿ ಅಮೃತಾಳ ಮಗಳು ಅಂಜಲಿ ಪ್ರಯತ್ನಿಸುತ್ತಾ ಹೋಗುತ್ತಾಳೆ. ಈ ಹಾದಿಯಲ್ಲಿ ಆ ಮಗು ಎದುರಿಸುವ ತಲ್ಲಣಗಳು ಅಂಜಲಿಯ ಕಥೆಯಾಗಿ ‘ನಾಕತಂತಿ’ಯಲ್ಲಿ ಬರುತ್ತದೆ.
ಕಲ್ಯಾಣಿ ಭಾರತೀಯ ಮಧ್ಯಮವರ್ಗದ ಪ್ರತೀಕ. ಅವಳು ಹೆಚ್ಚು ಓದಲಾಗದೆ ಬಹುಬೇಗ ಮದುವೆಯಾದವಳು. ಆಕೆಯ ಗಂಡ ಸುಧೀಂದ್ರ ಆಧುನಿಕ ಬದುಕಿನ ಒತ್ತಡಗಳನ್ನು ಎದುರಿಸಲಾಗದೆ ಮನೆಬಿಟ್ಟು ಹೋಗಿ ಯಾವುದೋ ಮಠದಲ್ಲಿ ಸನ್ಯಾಸಿಯಾಗಿರುವವನು. ಕಲ್ಯಾಣಿಯು ಗಂಡನಿಲ್ಲದ ತನ್ನ ಸಂಸಾರದ ನಾವೆಯನ್ನು ನಡೆಸಲು ಗಾರ್ಮೆಂಟ್ ಕೆಲಸ ಆರಂಭಿಸಿ, ಸ್ವತಃ ತಾನೇ ಒಂದು ಫ್ಯಾಕ್ಟರಿ ನಡೆಸುವಷ್ಟು ಬೆಳೆಯುತ್ತಾಳೆ. ಈ ಕಾಲದಲ್ಲಿ ಅವಳ ಹುಟ್ಟಿಗೆ ಕಾರಣವಾದ ಅಪ್ಪ ಮತ್ತು ಅಮ್ಮ ಇಬ್ಬರೂ ಅವಳಿಗೆ ಸಿಗುತ್ತಾರೆ. ಅಪ್ಪನಾದ ಸುಬ್ಬರಾಮುವು ಕಲ್ಯಾಣಿಯ ಗಂಡ ಸುಧೀಂದ್ರ ಯಾವ ಮಠದಲ್ಲಿ ಕಿರಿಸ್ವಾಮಿಯಾಗಿದ್ದನೋ ಅದೇ ಮಠದಲ್ಲಿ ಹಿರಿಸ್ವಾಮಿಯಾಗಿರುವವನು. ಕಲ್ಯಾಣಿಯ ತಾಯಿ ಲಲಿತೆ ಬೀದಿಗೆ ಬಿದ್ದಿದ್ದವಳು. ಈ ಇಬ್ಬರೂ ಸಿಕ್ಕ ನಂತರ ಮದುವೆಯಾಗದೆ ತನ್ನನ್ನ ಹಡೆದಿದ್ದ ತಾಯಿ-ತಂದೆಯರಿಗೆ ತನ್ನ ತಂಗಿ ಮೇಘಾಳ ಸಹಾಯ ತೆಗೆದುಕೊಂಡು ಕಲ್ಯಾಣಿ ಮದುವೆ ಮಾಡಿಸುತ್ತಾಳೆ. ಆದರೆ ಅವಳ ಗಂಡ ಸುಧೀಂದ್ರನನ್ನ ಮಠದ ರಾಜಕೀಯ ಮತ್ತು ಆಸ್ತಿ ಸಂಪಾದನೆಯ ಗಲಾಟೆಯಿಂದ ಬಿಡಿಸಿಕೊಳ್ಳಲಾಗದೆ ಒದ್ದಾಡುತ್ತಾಳೆ. ಇಲ್ಲಿ ಬರುವ ವಿವರಗಳ ಮೂಲಕ ಸಮಕಾಲೀನ ರಾಜಕೀಯ ಶಕ್ತಿಗಳು ಹೇಗೆ ಮಠಗಳನ್ನು ಬಳಸಿಕೊಳ್ಳುತ್ತವೆ ಎಂಬ ವಿವರಗಳು ಸಹ ಬರುತ್ತವೆ. ಕಲ್ಯಾಣಿ ತನ್ನ ಗಂಡನನ್ನು ಉಳಿಸಲು ಮಾಡುವ ಯುದ್ಧದಲ್ಲಿ ಮಠದ ನಿಗೂಢಗಳನ್ನು ಬಗೆಯುತ್ತಾ, ತಂದೆ-ತಾಯಿಯನ್ನು ಕಾಪಾಡುವ ಪ್ರಯತ್ನ ಮಾಡುತ್ತಾಳೆ. ಈ ನಡುವೆ ಅವಳ ಮೈದುನ ಶಂಕರನು ಮುಸಲ್ಮಾನ ಹುಡುಗಿಯೊಬ್ಬಳನ್ನು ಪ್ರೀತಿಸುವ ಮತ್ತು ಮದುವೆಯಾಗುವ ವಿವರವೂ ಸೇರಿಕೊಂಡು ಕಲ್ಯಾಣಿಯ ಬದುಕು ಅನೇಕ ತಲ್ಲಣಗಳನ್ನು ಎದುರಿಸುತ್ತಾ ಸಾಗುತ್ತದೆ. ಇದು ಕಲ್ಯಾಣಿಯ ಕಥನ
ಪೂರ್ವಿ ಧನ್ಯಾಶ್ರೀಯು ಮಿತ್ರ ಸಾಕಿದ ಮಕ್ಕಳಲ್ಲಿಯೇ ಅತೀ ಹೆಚ್ಚು ಓದಿಕೊಂಡವಳು. ಸಾಫ್ಟ್ವೇರ್ ಇಂಜಿನಿಯರ್. ಇದರೊಂದಿಗೆ ಭರತನಾಟ್ಯ ಕುರಿತು ಅವಳಿಗೆ ಅತೀವ ಪ್ರೀತಿ. ಭರತನಾಟ್ಯಕ್ಕಾಗಿ ಇನ್ನೆಲ್ಲ ಕೆಲಸಗಳನ್ನೂ ಮರೆಯುವವಳು. ಇಂತಹ ಪೂರ್ವಿಯ ತಾಯಿಯು ದೊಡ್ಡ ರಾಜಕೀಯ ನಾಯಕಿಯಾದ ಮತ್ತು ಲೋಕದ ಕಣ್ಣಿಗೆ ಕುಮಾರಿಯಾದ ಸುಕನ್ಯಾ ಸರ್ದೇಸಾಯಿಯ ಮಗಳು. ಮಿತ್ರನಿಂದ ಇವಳೇ ತಾಯಿಯೆಂದು ತಿಳಿದರೂ ತಂದೆ ಯಾರೆಂದು ತಿಳಿಯದ ಪೂರ್ವಿಯು ತನಗೆ ಜನ್ಮ ಕೊಟ್ಟವನನ್ನ ಅರಸುವ ಪ್ರಯತ್ನದಲ್ಲಿಯೇ ಇರುತ್ತಾಳೆ. ಇದೇ ಕಾಲದಲ್ಲಿ ಅತೀವ ಹೆಣ್ಣುಬಾಕತನವಿರುವ ಹೊಸಮನೆ ಸದಾನಂದ್ ಎಂಬ ಮತ್ತೊಬ್ಬ ರಾಜಕೀಯ ನಾಯಕ ಪೂರ್ವೀಯನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಾನೆ. ಸುಕನ್ಯಾ ಸರ್ದೇಸಾಯ್ಗೆ ಆ ಹೊಸ್ಮನೆ ಸದಾನಂದ ಎಂದರೆ ಆಗದು. ಅವನನ್ನ ಹಣಿಯಲು ಅವಳು ಎಲ್ಲಾ ಸಾಧನಗಳನ್ನೂ ಬಳಸಿಕೊಳ್ಳುತ್ತಾಳೆ. ಪೂರ್ವಿಯ ತಂಗಿಯಾದ ಮೇಘಾಳ ಮೂಲಕ ಹೊಸ್ಮನೆ ಸದಾನಂದನ ವಿರುದ್ಧ ನಿರಂತರ ಯುದ್ಧವನ್ನು ಚಾಲನೆಯಲ್ಲಿ ಇಡುತ್ತಾಳೆ. ಆ ಮೂಲಕ ತನ್ನ ಮಗಳಾದ ಪೂರ್ವಿಯನ್ನು ಕಾಪಾಡಲು ಪ್ರಯತ್ನಿಸುತ್ತಾಳೆ. ತನ್ನ ಬೆನ್ನ ಹಿಂದೆ ಆಗುತ್ತಿರುವ ಯುದ್ಧದ ಪರಿವೆಯಿಲ್ಲದ ಪೂರ್ವಿ ತನಗೇ ಗೊತ್ತಿಲ್ಲದೆ ಒಂದಾದ ಮೇಲೆ ಒಂದು ಎಂಬಂತೆ ಸಂಕಷ್ಟಗಳಲ್ಲಿ ಸಿಲುಕಿಕೊಳ್ಳುತ್ತಾಳೆ. ಇದೆಲ್ಲಾ ಸಂಕಷ್ಟಗಳಿಂದ ಅವಳನ್ನು ಬಿಡಿಸಿ ತರುವ ಸುಕನ್ಯಾಳ ಪ್ರಯತ್ನ ಮತ್ತು ಸುಕನ್ಯಾಳನ್ನ ದಾಟಿ ಹೇಗಾದರೂ ಪೂರ್ವಿಯನ್ನ ಪಡೆಯಬೇಕೆಂಬ ಹೊಸಮನೆ ಸದಾನಂದನ ಹಂಬಲ ‘ನಾಕುತಂತಿ’ಯ ಪೂರ್ವಿ ಕಥನ.
ಮೇಘಾಮಲ್ಹಾರ್ ಪತ್ರಕರ್ತೆ. ಗಂಡು ಆಲೋಚನೆಗಳಿರುವ ಹೆಣ್ಣು. ಪ್ರಖರ ಸ್ತ್ರೀವಾದಿ. ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ದುಡಿಯುವ ಮೇಘಾ ಈಗ ಛಾನೆಲ್ ಒಂದರ ಪ್ರಧಾನ ಸುದ್ದಿಸಂಪಾದಕಿ. ಇವಳ ತಾಯಿ ಸವದತ್ತಿಯ ಎಲ್ಲಮ್ಮನ ಜೋಗತಿಯಾಗಿ ಮುತ್ತು ಕಟ್ಟಿಸಿಕೊಂಡು ದೇವದಾಸಿಯಾಗಿದ್ದವಳು. ತನಗೆ ಹುಟ್ಟಿದ ಮಗಳೂ ದೇವದಾಸಿಯಾಗಿ ಮೈ ಮಾರಿಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಮೇಘಾಳ ತಾಯಿ ಹುಟ್ಟಿದ ಮಗುವನ್ನ ಮಿತ್ರನಿಗೆ ಕೊಟ್ಟಿರುತ್ತಾಳೆ. ಮೇಘಾ ಸ್ವತಃ ದೊಡ್ಡ ಪತ್ರಕರ್ತೆಯಾದಾಗ ಅವಳಿಗೆ ತನ್ನ ಜನ್ಮದಾತೆಯ ವಿವರ ತಿಳಿದು ತಾಯಿಯನ್ನು ದೊಡ್ಡ ಮಾಂಸದ ಮಾಫಿಯಾದಿಂದ ಬಿಡಿಸಿ ತರುತ್ತಾಳೆ. ಈ ಮಾಂಸದ ಅಡ್ಡೆಗಳ ಜೊತೆಗೆ ನೇರ ಸಂಬಂಧ-ವ್ಯಾಪಾರ ಇರುವ ಹೊಸಮನೆ ಸದಾನಂದನ ದ್ವೇಷವನ್ನ ಕಟ್ಟಿಕೊಳ್ಳುತ್ತಾಳೆ. ಒಂದೆಡೆಗೆ ಮೇಘಾಳ ಅಕ್ಕ ಪೂರ್ವಿಯನ್ನ ಹೇಗಾದರೂ ತನ್ನ ತೆಕ್ಕೆಗೆ ಎಳೆದುಕೊಳ್ಳಬೇಕೆಂದು ಪ್ರಯತ್ನಿಸುತ್ತಾ ಇರುವ ಹೊಸ್ಮನೆ ಸದಾನಂದ ಮತ್ತೊಂದೆಡೆ ತನ್ನೆಲ್ಲ ಕೆಲಸಗಳಿಗೆ ವಿರೋಧಿಯಾಗಿರುವ ಮೇಘಾಳನ್ನು ಮಣ್ಣುಗೂಡಿಸಬೇಕೆಂದು ಹರಸಾಹಸ ಮಾಡುತ್ತಾ ಇದ್ದಾನೆ. ಈ ಹಗ್ಗ ಜಗ್ಗಾಟಗಳ ನಡುವೆ ತನ್ನ ಪ್ರಾಣ ಉಳಿಸಿಕೊಳ್ಳುತ್ತಾ ತನ್ನ ಅಕ್ಕನ ಮಗಳಾದ ಅಂಜಲಿಯನ್ನ ಮತ್ತು ತನ್ನ ದೊಡ್ಡ ಅಕ್ಕ ಕಲ್ಯಾಣಿಯ ಬದುಕನ್ನ ಹಸನುಗೊಳಿಸಲು ಮೇಘಾ ನಿರಂತರ ಯುದ್ಧದಲ್ಲಿ ತೊಡಗಿರುತ್ತಾಳೆ. ಇದು ಮೇಘಾ ಕಥನ.
ಹೀಗೆ ನಾಲ್ಕು ಧಾರೆಗಳಲ್ಲಿ ಹರಿಯುವ ‘ನಾಕುತಂತಿ’ ಘಟನೆಯಿಂದ ಘಟನೆಗೆ ಬೆಳೆಯುತ್ತಾ ಸಾಗುತ್ತದೆ. ಎಲ್ಲಿಯೂ ನಿಲ್ಲದೆ, ನೀರವವಾಗದೆ ಭೋರ್ಗರೆವ ಜಲಪಾತವಾಗುತ್ತದೆ. ಹೀಗಾಗಿಯೇ ‘ನಾಕುತಂತಿ’ಯನ್ನ ನೋಡುವವರು ಎಂದಿಗೂ ಇದು ಎಳೆತ ಎಂಬ ಮಾತನ್ನ ಸಾವಿರ ಕಂತುಗಳನ್ನ ದಾಟಿದರೂ ಆಡಿಲ್ಲ ಎಂಬುದು ಈ ಕಥಾ ನಿರೂಪಣಾ ತಂಡದ ಹೆಗ್ಗಳಿಕೆ.
ಅಂಬಿಕಾನಾಥ ಟೆಲಿಕ್ರಿಯೇಷನ್ಸ್ ನಿರ್ಮಿಸಿರುವ, ಮೀಡಿಯಾಹೌಸ್ ಅಡ್ವರ್ಟೈಸಿಂಗ್ ಮತ್ತು ಮಾರ್ಕೆಟಿಂಗ್ ಸಂಸ್ಥೆಯ ನಿರ್ವಹಣೆಯಿರುವ ‘ನಾಕುತಂತಿ’ಯ ಮೂಲಕಥೆ ಬರೆದು ಚಿತ್ರಕಥೆ-ಸಂಭಾಷಣೆ ಒದಗಿಸಿ, ಪ್ರಧಾನ ನಿರ್ದೇಶನ ಮಾಡುತ್ತಾ ಇರುವವರು ಬಿ.ಸುರೇಶ.
ಈ ಹಿಂದೆ ಬೆಂಗಳೂರು ದೂರದರ್ಶನ ಕೇಂದ್ರದ ಮೂಲಕ ಪ್ರಸಾರವಾದ ಅತೀ ಜನಪ್ರಿಯ ಧಾರಾವಾಹಿ ‘ಸಾಧನೆ’ಯ ನಂತರ ಬಿ.ಸುರೇಶ ಉದಯ ವಾಹಿನಿಗೆ ಮಾಡುತ್ತಾ ಇರುವ ‘ನಾಕುತಂತಿ’ಯೂ ಸಹ ಅದೇ ರೀತಿಯ ಜನಪ್ರೀತಿಯನ್ನು ಗಳಿಸಿಕೊಂಡು ಸಾಗುತ್ತಾ ಇದೆ.
 
 

ತಾಂತ್ರಿಕ ತಂಡ

ಕಥಾವಿಸ್ತರಣೆ
ಡಾ.ಪಿ.ಚಂದ್ರಿಕಾ, ಸಿ.ಎಸ್.ಶ್ರೀನಿವಾಸ್, ಬಿ,ಸುರೇಶ, ಪ್ರಸನ್ನ ಹಿರೇಮಠ
ಛಾಯಾಗ್ರಹಣ
ಸಿ.ಡಿ.ರಾಜು
ಸಂಕಲನ
ಸಂಗಮನಾಥ್
ಶೀರ್ಷಿಕೆ ಗೀತೆ ಸಾಹಿತ್ಯ
ವರಕವಿ ದ,ರಾ.ಬೇಂದ್ರೆ
ಶೀರ್ಷಿಕೆ ಗೀತೆ ಸಂಗೀತ 
ಹಂಸಲೇಖ
ಶೀರ್ಷಿಕೆ ಗೀತೆ ಗಾಯನ
ಫಯಾಜ್ ಖಾನ್ ಮತ್ತು ಎಂ.ಡಿ.ಪಲ್ಲವಿ
ಹಿನ್ನೆಲೆ ಸಂಗೀತ 
ಶಿವಸತ್ಯ
ಪ್ರಕರಣ ನಿರ್ದೇಶಕ
ಕಾರ್ತಿಕ್ ಸಿ.ಎಸ್.
ನಿರ್ಮಾಪಕರು 
ಎಸ್.ವಿ.ಶಿವಕುಮಾರ್ ಮತ್ತು ಶೈಲಜಾನಾಗ್
ಚಿತ್ರಕಥೆ/ಸಂಭಾಷಣೆ/ ಪ್ರಧಾನ ನಿರ್ದೇಶನ
ಬಿ.ಸುರೇಶ
ಪ್ರಧಾನ ಕಲಾವಿದರು
ಮಿತ್ರ : ವೆಂಕಟರಾವ್
ಮೇಘಾ ಮಲ್ಹಾರ್ : ಸುಜಾತ ಸುಭಾಷ್
ಪೂರ್ವಿ ಧನ್ಯಾಶ್ರೀ : ಶಮಾ ಸಂಜಯ್
ಕಲ್ಯಾಣಿ : ಶೈಲಶ್ರೀ
ಅಂಜಲಿ : ನಮ್ರತಾ
ಸುಕನ್ಯಾ ಸರ್ದೇಸಾಯ್ : ಶೈಲಜಾನಾಗ್
ಹೊಸಮನೆ ಸದಾನಂದ : ಶ್ರೀನಿವಾಸಪ್ರಭು

ಇತರ ಪ್ರಧಾನ ಪಾತ್ರಗಳಲ್ಲಿ
ನಾಗರಾಜಮೂರ್ತಿ, ಸಿದ್ಧರಾಜ ಕಲ್ಯಾಣ್ಕರ್, ಮಲ್ಲಿಕಾರ್ಜುನಯ್ಯ, ಅಕ್ಕಿಚೆನ್ನಬಸಪ್ಪ, ಶಶಿಧರ್ ಕೋಟೆ, ಶ್ರೀನಾಥ್ ವಸಿಷ್ಠ, ರಮೇಶ್ ಪಂಡಿತ್, ರೇಖಾ ವಿ.ಕುಮಾರ್, ಮಂಜುಳಮ್ಮ, ವಿ.ಎಚ್.ಸುರೇಶ್, ಬಿ.ಎಂ.ವೆಂಕಟೇಶ್, ವಿಜಯಕುಮಾರ್ ಜಿತೂರಿ, ಶ್ಯಾಮಲ, ಕರಿಸುಬ್ಬು, ಇತ್ಯಾದಿ

 

‍ಲೇಖಕರು avadhi

December 29, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: