'ನಾಗಮಂಡಲ'ದ ಆ ಒಂದು ಹಾಡು

 

14441190_10207987186460860_5356800857419524870_n

ಎ ಆರ್ ಮಣಿಕಾಂತ್

ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ!

ಈ ಹಸಿರು ಸಿರಿಯಲಿ…

ಚಿತ್ರ : ನಾಗಮಂಡಲ        ಗೀತ ರಚನೆ : ಗೋಪಾಲ ಯಾಗ್ನಿಕ್ 

ಸಂಗೀತ : ಸಿ. ಅಶ್ವತ್ಥ್            ಗಾಯನ : ಸಂಗೀತಾ ಕಟ್ಟಿ

nagamandala

ಈ ಹಸಿರು ಸಿರಿಯಲಿ ಮನಸು ಮೆರೆಯಲಿ

ನವಿಲೇ….

ನಿನ್ನಾಂಗೆಯ ಕುಣಿವೆ ನಿನ್ನಂತೆಯೇ ನಲಿವೆ

ನವಿಲೇ ನವಿಲೇ… ||ಪ||

ಈ ನೆಲದ ನೆಲೆಯಲಿ ಕನಸು ಸುರಿಯಲಿ ನವಿಲೇ

ನೀನೇನೆ ನಾನಾಗುವೆ ಗೆಲುವಾಗಿಯೇ ಉಲಿವೆ

ನವಿಲೇ… ನವಿಲೇ… ||ಅ.ಪ||

ತಂಗಾಳಿ ಬೀಸಿ ಬರದೆ

ಸೌಗಂಧ ಸುಖವ ತರದೆ

ಚಿಗುರೆಲೆಯು ಎಲ್ಲಿ ಮರವೆ

ನಿನ್ನ ಗೆಳತಿ ನಾನು ಮೊರೆವೆ

ಮತ್ಯಾಕೆ ಮೌನ ಗಿಳಿಯೆ

ಸಿಟ್ಯಾಕೆ ಎಂದು ತಿಳಿಯೆ

ಹೊತ್ಯಾಕೆ ಹೇಳು ಅಳಿಲೆ, ಗುಟ್ಯಾಕೆ ನನ್ನ ಬಳಿಯೆ

ಹೇಳಿರೆ ನಿಮ್ಮನ್ನು ನಾ ಹ್ಯಾಂಗ ಮರೆಯಲೀ, ತೊರೆಯಲೀ ||೧||

ಏನಂಥ ಮುನಿಸು ಗಿರಿಯೆ

ಮಾತನ್ನ ಮರೆತೆ ಸರಿಯೆ

ಜೇನಂಥ ಪ್ರೀತಿ ಸುರಿದೇ, ನನ್ನ ಜೀವ ಜೀವ ನದಿಯೆ

ಸುರಲೋಕ ಇದನು ಬಿಡಲೆ

ಚಿರಕಾಲ ಇಲ್ಲೆ ಇರಲೇ

ನಗುತಿರು ನೀಲಿ ಮುಗಿಲೆ

ನಾನಿನ್ನು ನಿಮ್ಮಿಂದ ಬಹುದೂರ ಸಾಗುವೆ ಹರಸಿರೇ ||೨||

ಒಂದು ಸಿನಿಮಾ ಅಂದಮೇಲೆ ಅದರಲ್ಲಿ ನಾಲ್ಕು ಅಥವಾ ಐದು ಹಾಡುಗಳಿರುತ್ತವೆ. ಇನ್ನೂ ಹೆಚ್ಚೆಂದರೆ ಆರು ಹಾಡುಗಳಿರುತ್ತವೆ. ಆ ಪೈಕಿ ಎರಡು ಅಥವಾ ಮೂರು ಹಾಡುಗಳು ಚೆನ್ನಾಗಿರುತ್ತವೆ ಅಥವಾ ಒಂದೂ ಚೆನ್ನಾಗಿರುವುದಿಲ್ಲ! ಇದು, ಈಗೀಗ ಒಂದು ಹೋಗುತ್ತಿರುವ ಸಿನಿಮಾದ ಹಾಡುಗಳಿಗೆ ಸಂಬಂಸಿದಂತೆ ಹೇಳಬಹುದಾದ ಖಡಕ್ ಮಾತು.

ಪ್ರತಿಯೊಂದು ಸಿನಿಮಾದ ಐದು ಹಾಡುಗಳ ಪೈಕಿ ಎರಡು ಕೇಳುವಂತೆಯೂ, ಉಳಿದವು ಕೇಳಿದ ತಕ್ಷಣವೇ ಮರೆಯುವಂತೆಯೂ ಇರುತ್ತವೆ ಎಂಬ ಅಭಿಪ್ರಾಯ ಈ ಹಿಂದೆಯೂ ಇತ್ತು. ಆಗಲೇ ಅಂದರೆ ೧೯೯೭ರಲ್ಲಿ  ಒಂದು ಸಿನಿಮಾ ಬಂತು. ಅದು ನಾಗಮಂಡಲ. ನಾಗಭರಣ ನಿರ್ದೇಶನ, ಅಶ್ವತ್ಥ್ ಸಂಗೀತವಿದ್ದ ಈ ಚಿತ್ರದಲ್ಲಿ ಒಟ್ಟು ಹದಿನಾರು ಹಾಡುಗಳಿದ್ದವು! ಸ್ವಾರಸ್ಯವೆಂದರೆ ಎಲ್ಲ ಹಾಡುಗಳೂ ಜನಪ್ರಿಯವಾದವು. ಅದರಲ್ಲೂ – ‘ಈ ಹಸಿರು ಸಿರಿಯಲಿ ಮನಸು ಮರೆಯಲಿ ನವಿಲೇ…’ ಎಂಬ ಹಾಡಂತೂ ಎಲ್ಲ ಹೆಣ್ಣು ಮಕ್ಕಳ ಎದೆಗೂಡು ಹೊಕ್ಕು ಕೂತುಬಿಟ್ಟಿತು.

ಮದುವೆಯಾಗಿ ಗಂಡನ ಮನೆಗೆ ಹೋಗುವ ಮೊದಲು, ಬಾಲೆಯೊಬ್ಬಳು ತನ್ನನ್ನು ಬೆಳೆಸಿದ ಊರಿಗೆ, ತನ್ನನ್ನು ಅದುವರೆಗೂ ಕಾಡಿದ ನದಿ, ಬೆಟ್ಟ, ಕಾಡು, ಹಕ್ಕಿ, ತಂಗಾಳಿ, ತಂಬೆಲರಿಗೆ ಕೃತಜ್ಞತೆ ಹೇಳುವ ನೆಪದಲ್ಲಿ ಬರುವ ಹಾಡಿದು. ಅವಳು ಮಲೆನಾಡಿನವಳು. ಅವನೋ ಬಯಲುಸೀಮೆಯ ಒರಟ. ಈ ಊರಿನ ಸೊಬಗು ಗಂಡನ ಊರಲ್ಲಿಲ್ಲ ಎಂದು ತಿಳಿದಾಗಲೂ, ಮನಸ್ಸಿನ ನೋವನ್ನು ಯಾರಿಗೂ ತೋರ್ಗಡದೆ ಅವಳು ಪ್ರಕೃತಿಯ ಅಣು ಅಣುವನ್ನೂ ಮಾತಾಡಿಸುವವಳಂತೆ ಹಾಡುತ್ತಾ, ಕುಣಿಯುತ್ತಾ ಹೋಗುತ್ತಾಳೆ. ಹಾಡಿನ ಮಧ್ಯೆ ಆಕೆ ಛಕ್ಕನೆ ನಿಂತು- ಸಂಕಟದಿಂದ ಒಮ್ಮೆ, ಸಂತೋಷದಿಂದ ಮತ್ತೊಮ್ಮೆ ನವಿಲೇ… ನವಿಲೇ ಅನ್ನುತ್ತಾಳಲ್ಲ? ಆಗ, ಆ ಹುಡುಗಿ ನಮಗೂ ವಿದಾಯ ಹೇಳುತ್ತಿದ್ದಾಳೆ ಅನ್ನಿಸಿ ಸಂಕಟವಾಗುತ್ತದೆ. ಮತ್ತೆ ಹಾಡಿಗೆ ಕಿವಿಯಾದರೆ ಅಂಧನಿಗೂ ಹೊಸದೊಂದು ಬೆಳಕು ಕಂಡಂಥ ಖುಷಿಯಾಗುತ್ತದೆ.

‘ನಾಗಮಂಡಲ’ದ ಎಲ್ಲ ಹಾಡುಗಳನ್ನು ಬರೆದವರು ಹಿರಿಯ ಪತ್ರಕರ್ತ ಗೋಪಾಲ ವಾಜಪೇಯಿ. ಸಿನಿಮಾದ ಟೈಟಲ್ ಕಾರ್ಡ್‌ನಲ್ಲಿ ಅವರ ಹೆಸರು ಗೋಪಾಲ ಯಾಜ್ಞಿಕ್ ಎಂದಿದೆ. ‘ವಾಜಪೇಯಿ’ ಎಂಬ ಹೆಸರಿನಲ್ಲಿಯೇ ಹಾಡು ಬರೆದಿದ್ದರೆ ಅವತ್ತಿನ ಸಂದರ್ಭದಲ್ಲಿ ನೌಕರಿಯೇ ಹೋಗಿಬಿಡುತ್ತಿತ್ತು. ಆ ಕಾರಣದಿಂದಲೇ ಗಿರೀಶ್ ಕಾರ್ನಾಡ್ ಹಾಗೂ ಸಿ. ಅಶ್ವತ್ಥ್ ಸೇರಿಕೊಂಡು ಗೋಪಾಲ ವಾಜಪೇಯಿ ಎಂಬುದನ್ನು ‘ಗೋಪಾಲ ಯಾಜ್ಞಿಕ್’ ಎಂದು ಬದಲಿಸಿಬಿಟ್ಟರು.

ಇಲ್ಲಿ ಹೇಳಲೇಬೇಕಾದ ಮಾತೊಂದಿದೆ. ಏನೆಂದರೆ ಚಿತ್ರರಂಗದಲ್ಲಿ ಹೆಚ್ಚಿನ ಹಾಡುಗಳು ಟ್ಯೂನ್‌ಗೆ ತಕ್ಕಂತೆ ಹೆಣೆದಂಥವು. ಆದರೆ, ನಾಗಮಂಡಲದ ಕಥೆಯೇ ಬೇರೆ. ಇಲ್ಲಿ ಒಟ್ಟು ಹದಿನಾಲ್ಕು ಹಾಡುಗಳು ಟ್ಯೂನ್‌ನ ಹಂಗಿಲ್ಲದೆ ಬರೆದಂಥವು. ‘ಈ ಹಸಿರು ಸಿರಿಯಲಿ… ಹಾಗೂ ‘ಮಾಯಾದೋ ಮನದ ಭಾರ’ ಹಾಡುಗಳು ಟ್ಯೂನ್ ಕೇಳಿಸಿಕೊಂಡು ಬರೆದಂಥವು.

‘ಈ ಹಸಿರು ಸಿರಿಯಲಿ…’ ಹಾಡಿದೆಯಲ್ಲ? ಅದರಲ್ಲಿ ಹೆಣ್ಣೊಬ್ಬಳ ಪಿಸುಮಾತಿದೆ, ಸಂಕೋಚವಿದೆ, ನಾಚಿಕೆಯಿದೆ, ಬಿಗುಮಾನವಿದೆ, ಹೊಂಗನಸಿದೆ, ಹುಸಿಕೋಪವಿದೆ, ಸಾಂತ್ವನವಿದೆ, ಸಂಭ್ರಮವಿದೆ, ಸಲ್ಲಾಪವಿದೆ ಮತ್ತು ಕಂಡೂ ಕಾಣದ ಹಾಗೆ ಸಂಟಕವೂ ಇದೆ. ತವರಿಗೆ ವಿದಾಯ ಹೇಳುವ ಬೆಡಗಿಯೊಬ್ಬಳ ಮನಸಿನ್ಯಾಗಿನ ಮಾತು ಹೀಗೇ ಇರುತ್ತದೆ ಎಂದು ಹೇಗೆ ಅಂದಾಜು ಮಾಡಿಕೊಂಡರು ವಾಜಪೇಯಿ?  ಈ ಹಾಡು ಬರೆದಾಗ ಅವರ ಕಣ್ಮುಂದೆ ಯಾರಾದರೂ ಹುಡುಗಿ ಇದ್ದಳಾ? ಅಥವಾ  ಆಗಷ್ಟೇ ಮದುವೆಯಾಗಿದ್ದ ಒಬ್ಬಾಕೆ ತನ್ನ ಸಂಕಟವನ್ನು ವಿವರಿಸಿದಳಾ? ಇಂಥ ಪ್ರಶ್ನೆಗೆ ಉತ್ತರವನ್ನು ಅವರಿಂದಲೇ ಕೇಳೋಣವಾಗಲಿ, ಓವರ್ ಟು ವಾಜಪೇಯಿ :

***

vlcsnap-2011-08-03-21h32m26s251-520x293೮೦ರ ದಶಕದಲ್ಲಿ  ‘ಸಂಕೇತ್’ ತಂಡಕ್ಕಾಗಿ ‘ನಾಗಮಂಡಲ’ ನಿರ್ದೇಶಿಸಿದ್ದರು ಶಂಕರ್‌ನಾಗ್. ಅದಕ್ಕೆ ನಾನು ಹಾಡುಗಳನ್ನು ಬರೆದುಕೊಟ್ಟಿದ್ದೆ. ಮುಂದೆ  ‘ ಸಂಯುಕ್ತ ಕರ್ನಾಟಕ- ಕರ್ಮವೀರ’ದ ನೌಕರಿಯ ನೆಪದಲ್ಲಿ ಬೆಂಗಳೂರು-ಹುಬ್ಬಳ್ಳಿಗೆ ಹೋಗಿಬರುವುದು ನಡೆದೇ ಇತ್ತು. ಇಂಥ ಸಂದರ್ಭದಲ್ಲಿಯೇ  ನಾಗಾಭರಣ ಅವರ ನಿರ್ದೇಶನದಲ್ಲಿ ‘ನಾಗಮಂಡಲ’ ಸಿನಿಮಾ ತಯಾರಾಗುವ ಸುದ್ದಿ ಕಿವಿಗೆ ಬಿತ್ತು. ಅದಕ್ಕೆ ಸಿ. ಅಶ್ವತ್ಥ್ ಅವರ ಸಂಗೀತವೆಂದೂ ಗೊತ್ತಾಯಿತು. ಈ ಚಿತ್ರಕ್ಕೆ ನನ್ನಿಂದ ಹಾಡು ಬರೆಸಲು ಭರಣ-ಅಶ್ವತ್ಥ್ ನಿರ್ಧರಿಸಿದ್ದರು. ಆ ವೇಳೆಗೆ ನನಗೂ ಬೆಂಗಳೂರಿಗೆ ವರ್ಗವಾಗಿತ್ತು. ಆದರೂ ಏನೋ ಹೆದರಿಕೆ. ಸಿನಿಮಾಕ್ಕೆ ಕೆಲಸ ಮಾಡುವ ವಿಷಯ ಗೊತ್ತಾಗಿ ಅದೇ ಕಾರಣಕ್ಕೆ ನೌಕರಿಯಿಂದ ತೆಗೆದುಬಿಟ್ಟರೆ… ಎಂಬ ಆತಂಕ. ಇವೆರಡನ್ನೂ ಮೀರಿದ ಸೋಮಾರಿತನ…

ಈ ಕಾರಣಗಳಿಂದಲೇ ತುಂಬ ತಡವಾಗಿ ನಾಗಾಭರಣರ ಕಚೇರಿಗೆ ಹೋದೆ. ಅವತ್ತಿಗಿನ್ನೂ ಅಶ್ವತ್ಥ್‌ರ ಪರಿಚಯವಿರಲಿಲ್ಲ. ನಾನುಹೋಗಿ ಹತ್ತು ನಿಮಿಷಗಳಾಗಿರಬಹುದು. ಆಗಲೇ ತಮ್ಮ ಸ್ಕೂಟರ್‌ನಲ್ಲಿ ಭರ್ರನೆ ಬಂದರು ಅಶ್ವತ್ಥ್. ತಕ್ಷಣ ಎದ್ದು ನಿಂತು ನಮಸ್ಕರಿಸಿದೆ. ನನಗೊಂದು ಪ್ರತಿ ನಮಸ್ಕಾರ ಹಾಕಿದ ಅಶ್ವತ್ಥ್,  ನಾಗಾಭರಣರ ಕಡೆ ತಿರುಗಿ ಅಬ್ಬರಿಸಿದರು : ‘ರೀ ಭರಣ, ಯಾವನ್ರೀ ಅವ್ನು ವಾಜ್‌ಪೇಯಿ ಅಂದ್ರೆ? ಅವ್ನು ಬರೋದ್ಯಾವಾಗ? ಹಾಡು ಬರೆಯೋದ್ಯಾವಾಗ? ಸಿನಿಮಾ ಶುರುವಾಗೋದ್ಯಾವಾಗ? ರ್ರಾಮಾ…. ರ್ರಾಮಾ…!

ನಾಗಾಭರಣರು ನಗುತ್ತಾ- ‘ಇಲ್ಲಿ  ಕೂತಿದಾರಲ್ರೀ, ಅವರೇ ವಾಜ್‌ಪೇಯಿ’ ಅಂದರು. ತಕ್ಷಣವೇ ನನ್ನತ್ತ ತಿರುಗಿದ ಅಶ್ವತ್ಥ್ ‘ಓಹ್ ನೀವಾ, ಗೊತ್ತಾಗ್ಲಿಲ್ಲ. ಸಾರಿ, ಸಾರಿ, ಸ್ಸಾರೀ…’ ಅಂದರು.

ಮುಂದೆ ಎಲ್ಲವೂ ತುಂಬ ವೇಗವಾಗಿ ನಡೆದುಹೋಯಿತು. ‘ನಮಗೆ ಹದಿನಾರು ಹಾಡು ಬೇಕು. ಮಿನರ್ವಾ ಕಾಮತ್ ಹೊಟೇಲಿನಲ್ಲಿ ಒಂದು ರೂಂ ಬುಕ್ ಆಗಿದೆ ನಿಮ್ಗೆ. ಅಲ್ಲಿದ್ದುಕೊಂಡು ದಿನಕ್ಕೆ ಒಂದರಂತೆ ಹಾಡು ಬರೆದ್ರೆ ಸಾಕು. ಎರಡು ಹಾಡುಗಳನ್ನು ಟ್ಯೂನ್‌ಗೆ ಹೊಂದುವಂತೆ ಬರೀಬೇಕು. ಉಳಿದ ಹದಿನಾಲ್ಕು ಹಾಡುಗಳಿಗೆ ಟ್ಯೂನ್‌ನ ಹಂಗಿಲ್ಲ’  ಎಂದರು ಭರಣ- ಅಶ್ವತ್ಥ್.

ಕಥೆ ಮತ್ತು ಹಾಡು ಬರುವ ಸಂದರ್ಭ ಗೊತ್ತಿತ್ತಲ್ಲ? ಹಾಗಾಗಿ ಸಂಭ್ರಮದಿಂದಲೇ ಹದಿನಾಲ್ಕು ದಿನಗಳಲ್ಲಿ ಹದಿನಾಲ್ಕು ಹಾಡು ಬರೆದೆ. ಅವು ಭರಣ-ಅಶ್ವತ್ಥ್‌ಗೆ ತುಂಬ ಇಷ್ಟವಾದವು. ಹದಿನೈದನೆಯದಾಗಿ ಈ ಹಿಂದೆ ನಾಟಕಕ್ಕೆಂದು ಬರೆದಿದ್ದ. ‘ಮಾಯಾದೋ ಮನದ ಭಾರ’ ಹಾಡನ್ನೇ ಉಳಿಸಿಕೊಂಡರು. ಇಷ್ಟೂ ಹಾಡುಗಳ ಧ್ವನಿ ಮುದ್ರಣವೂ ಆಗಿಹೋಯ್ತು. ಉಳಿದ ಹಾಡನ್ನು ಬರೆದುಕೊಡ್ತೇನೆ ಎಂದು ಹೇಳಿ, ಹೋಟೆಲಿನ ರೂಂ ಖಾಲಿ ಮಾಡಿದೆ.

ನಂತರದ ಐದಾರು ದಿನ ಹಾಗೇ ಕಳೆದುಹೋಯಿತು. ಅದೊಮ್ಮೆ ಅರವಿಂದ್ ಸ್ಟುಡಿಯೋದಲ್ಲಿ ಸಿಕ್ಕ ಅಶ್ವತ್ಥ್-ಕಥಾನಾಯಕಿ ಗಂಡನ ಮನೆಗೆ ಹೋಗೋಕ್ಕಿಂತ ಮೊದಲು ತಾನು ಹುಟ್ಟಿ ಬೆಳೆದ ಊರಿನೊಂದಿಗೆ ಅಲ್ಲಿನ ಪರಿಸರದೊಂದಿಗೆ ಮಾತಾಡುವಂಥ ಹಾಡು ನಾಳೆಯೇ ಬೇಕು. ನೀವು ಹಾಡು ಕೊಡದಿದ್ರೆ ಅಷ್ಟೆ… ಎಂದು ಪ್ರೀತಿಯ ಗದರಿಕೆ ಹಾಕಿದ ದಡಬಡನೆ ಹೋಗಿಯೇ ಬಿಟ್ಟರು.

‘ಹಾಡು ಕೊಡಲಿಲ್ಲ‘ ಎಂಬುದನ್ನೇ ನೆಪ ಮಾಡಿಕೊಂಡು ಅಶ್ವತ್ಥ್ ನಾಳೆ ಬೆಳಗ್ಗೆಯೇ ಸೀದಾ ನಾನಿದ್ದ ಸಂಯುಕ್ತ ಕರ್ನಾಟಕ ಕಚೇರಿಗೇ ಬಂದುಬಿಟ್ಟರೆ ಗತಿಯೇನು ಅನ್ನಿಸಿದಾಗ ಗಾಬರಿಯಾಯಿತು. ಅವತ್ತೇ ರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿದ್ದ ರೂಂನಲ್ಲಿ ಹಾಡು ಬರೆಯಲು ಕೂತೆ. ಎಷ್ಟು ಯೋಚಿಸಿದರೂ ಹಾಡಿನ ಮೊದಲ ಸಾಲು ಹೊಳೆಯಲೊಲ್ಲದು. ಹೀಗೆ ಚಿಂತೆಯಲ್ಲಿದ್ದಾಗಲೆಲ್ಲ ರೇಡಿಯೋ ಅಥವಾ ಕ್ಯಾಸೆಟ್ ಪ್ಲೇಯರ್ ಆನ್ ಮಾಡಿಕೊಂಡು ಕೂರುವುದು ನನ್ನ ರೂಢಿ. ಅದು ಮೆಲ್ಲಗೆ ಹಾಡುತ್ತಿದ್ದರೆ ನನಗೆ ಎಂಥದೋ ಹುಕಿ. ಅವತ್ತೂ ಹಾಗೆಯೇ ರೇಡಿಯೋ ಹಾಕಿದ್ದಾಗ ಹಳೆಯ ಹಾಡೊಂದು ಅಲೆಯಲೆಯಾಗಿ ಕೇಳಿಬಂತು: ‘ಕಣ್ವ ಋಷಿಯ ಸಾಕು ಮಗಳು, ಹೆಸರು ಶಾಕುಂತಲೇ…’

ಅಷ್ಟೆ, ಕಣ್ವ ಮತ್ತು ಶಾಕುಂತಲೆ ಎಂಬೆರಡು ಪದಗಳನ್ನು ಕೇಳಿದ್ದೇ ತಡ ಮನದೊಳಗೆ ಝಗ್ಗೆಂದು ಹೊತ್ತಿತು ದೀಪ. ಆಶ್ರಮದಿಂದ ದುಷ್ಯಂತನ ಅರಮನೆಗೆ ಹೋಗುವ ಮುನ್ನ ಶಾಕುಂತಲೆ ಅಲ್ಲಿನ ಗಿಡ-ಮರ, ಪಶು-ಪಕ್ಷಿ, ನದಿ-ತಂಗಾಳಿ, ಬೆಟ್ಟ-ಗುಡ್ಡಗಳಿಗೆಲ್ಲ ವಿದಾಯ ಹೇಳುತ್ತಾಳಲ್ಲ? ಅದನ್ನೇ ‘ನಾಗಮಂಡಲ’ದ ನಾಯಕಿಗೂ ಸಮೀಕರಿಸಿ ನೋಡಬಾರದೇಕೆ ಅಂದುಕೊಂಡೆ. ಅದುವರೆಗೂ ಹೊಳೆಯದಿದ್ದ ಪದ ಹಾಗೂ ಸಾಲುಗಳು ಹೊಳೆದವಲ್ಲ? ಅದೇ ಕಾರಣಕ್ಕೆ ನನ್ನ ಮನಸ್ಸು ನವಿಲಾಗಿ ಕುಣಿಯುತ್ತಿತ್ತು. ಕಥಾನಾಯಕಿ ಬೆಳಗಿನ ಹೊತ್ತು ಹಸಿರು ಸಿರಿಯ ನಡುವೆ ಕುಣಿಕುಣಿಯುತ್ತ ಹಾಡುವ ಗೀತೆ ಆ ನೀರವ ರಾತ್ರಿಯಲ್ಲಿ ಒಂದೊಂದೇ ಪದವಾಗಿ ಅರಳ ತೊಡಗಿತು… ಬೆಳಗ್ಗೆ ಹಾಡು ನೋಡಿದ ಭರಣ- ಅಶ್ವತ್ಥ್ ನಿಂತಲ್ಲೇ ಕುಣಿದಾಡಿಬಿಟ್ಟರು…

***

ಈಗ ಹೈದ್ರಾಬಾದ್‌ನಲ್ಲಿದ್ದಾರೆ ವಾಜಪೇಯಿ. ‘ನಾಗಮಂಡಲ’ಕ್ಕೆ ಹಾಡು ಬರೆದ ಸಂದರ್ಭ ನನಪಾದರೆ ಅವರು ಈಗಲೂ ಭಾವುಕರಾಗಿ ಬಿಕ್ಕಳಿಸುತ್ತಾರೆ  ಮೊನ್ನೆಯಷ್ಟೇ ಅವರಿಗೆ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ಬಂದಿದೆ. ಈ ಕಾಡುವ ಹಾಡಿನ ನೆಪದಲ್ಲಿ ಅವರಿಗೊಂದು ಅಭಿನಂದನೆ ಹೇಳಿ. ಅಭಿಮಾನದ ಮಾತುಗಳನ್ನು ಕೇಳಿ ಕೇಳಿ ಆ ಕವಿ ಜೀವ ಸಂಭ್ರಮ ಮಿಸಲಿ. ಅವರ ದೂರವಾಣಿ ಸಂಖ್ಯೆ : ೦೯೩೯೯೯೯೪೫೨೫.

‍ಲೇಖಕರು Admin

September 22, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

 1. dayanand

  ಸರ್ ನೀವು ಕೊಟ್ಟ ನಂಬರ್ ನಲ್ಲಿ ಗೋಪಾಲ ವಾಜಪೇಯಿಯವರು ಸಂಪರ್ಕಕ್ಕೆ ಸಿಗಲಿಲ್ಲ, pls give number

  ಪ್ರತಿಕ್ರಿಯೆ
 2. ತಿಮ್ಮನಗೌಡ ಅ೦ಗಡಿ

  ಒಳ್ಳೆಯ ಹಾಡೊ೦ದರ ಬಗ್ಗೆ ತು೦ಬಾ ಒಳ್ಳೆಯ ಲೇಖನ. ಧನ್ಯವಾದಗಳು.

  ಪ್ರತಿಕ್ರಿಯೆ
 3. ಸಣ್ಣಳ್ಳಿ ಹನುಮಂತ

  ನಿಮ್ಮ ಬರೆವಣಿಗೆಯಲ್ಲಿ ಒಂದು ಆಪ್ತತೆ ಇದೆ ಆ ಕಾರಣಕ್ಕೆ ಲಯ,ತಾಳ,ಸಂಗೀತದ ಓಘಕ್ಕೆ ಓಗೊಟ್ಟು ಓದಿಸಿಕೊಂಡು ಸಾಗುತ್ತದೆ.

  ಪ್ರತಿಕ್ರಿಯೆ
 4. Sudharshan Bhandarkar

  ನಿಮ್ಮ ಬರಹ ಸಂತಸ ತಂದಿತು.ಧನ್ಯವಾದ

  ಪ್ರತಿಕ್ರಿಯೆ

Trackbacks/Pingbacks

 1. kannada-websites.in - 'ನಾಗಮಂಡಲ'ದ ಆ ಒಂದು ಹಾಡು « Avadhi / ಅವಧಿ... ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ… ಚಿತ್ರ : ನಾಗಮಂಡಲ…

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: