ನಾಗರೇಖಾ ಗಾಂವಕರ ಅವರ ‘ಆ್ಯನ್ ಫ್ರಾಂಕ್’

ನಾಗರೇಖಾ ಗಾಂವಕರ ಅವರ ಹೊಸ ಅನುವಾದ ಕೃತಿ ಆ್ಯನ್ ಫ್ರಾಂಕ್ ಳ ‘ದಿ ಡೈರಿ ಆ ಎ ಯಂಗ್ ಗರ್ಲ್’

ಈ ಕೃತಿಗೆ ಹಿರಿಯ ಸಾಹಿತಿ ಚನ್ನಪ್ಪ ಕಟ್ಟಿ ಅವರು ಬರೆದ ಮುನ್ನುಡಿ ಇಲ್ಲಿದೆ-

ಚನ್ನಪ್ಪ ಕಟ್ಟಿ

ಕನ್ನಡ ಹಾಗೂ ಇಂಗ್ಲೀಷ್ ಎರಡೂ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನಾಗರೇಖಾ ಗಾಂವಕರ ಅವರು ದಾಂಡೇಲಿಯ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತ ಕಾವ್ಯ, ಕತೆ, ಅಂಕಣ, ವಿಮರ್ಶಾ ಬರಹಗಳ ಮೂಲಕ ಸಾಹಿತ್ಯ ಲೋಕಕ್ಕೆ ಈಗಾಗಲೇ ಪರಿಚಿತರಾಗಿದ್ದಾರೆ. ಪ್ರಸ್ತುತ ‘ದಿ ಡೈರಿ ಆಫ್ ಎ ಯಂಗ್ ಗರ್ಲ್’ ಅನುವಾದ ಕೃತಿಯ ಮೂಲಕ ಅವರು ಅನುವಾದ ಕ್ಷೇತ್ರವನ್ನೂ ಪ್ರವೇಶಿಸಿದ್ದಾರೆ.

ಹದಿಮೂರು ವರ್ಷದ ಆ್ಯನ್ ಫ್ರಾಂಕ್ ಮತ್ತು ಅವಳು ಬರೆದ ಮೂರುನೂರು ಪುಟಗಳಿಗೂ ಮೀರಿದ ‘ಡೈರಿ’- ಇವೆರಡನ್ನೂ ಸಾಹಿತ್ಯ ಲೋಕದ ವಿಸ್ಮಯಗಳು ಎಂದು ಪರಿಭಾವಿಸಲಾಗಿದೆ. ಜನಾಂಗೀಯ ದ್ವೇಷದ ಮೂಲಕ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಹಿಟ್ಲರ್ ನ ಕುರಿತಾಗಿ ಲಭ್ಯವಿರುವ ಚಾರಿತ್ರಿಕ ದಾಖಲೆಗಳಿಗೇನೂ ಕೊರತೆ ಇಲ್ಲ. ಆದರೆ ಅವೆಲ್ಲ ರಾಜಕೀಯ ಚರಿತ್ರೆಯ ಕಥನಗಳಾಗಿ ಪ್ರಸಿದ್ಧವಾಗಿವೆ.

ಇಂಥ ಸಂದರ್ಭದಲ್ಲಿ ರಾಜಕೀಯ ಚರಿತ್ರೆಯ ಕಥನಗಳ ಗಡಿರೇಖೆಗಳ ಆಚೆಗೆ ಇರುವ ಅನೂಹ್ಯವಾದ ತಲ್ಲಣಗಳ ಖಾಸಗಿ ಲೋಕವೊಂದು ಅಗೋಚರವಾಗಿಯೇ ಉಳಿದಿರುತ್ತದೆ. ಅಂಥದ್ದೊಂದು ಸುಡುಸುಡುವ ಕೆಂಡದಂತಹ ಖಾಸಗಿ ಬದುಕಿನ ಕಥನವನ್ನು ಆ್ಯನ್ ಫ್ರಾಂಕ್ಳ ‘ಡೈರಿ’ ತನ್ನೆಲ್ಲಾ ತಾಜಾತನದಿಂದ ಓದುಗನ ಉಡಿಯಲ್ಲಿ ಹಾಕುತ್ತದೆ. ಗೆಸ್ಟಪೋಗಳ ಕ್ರೂರ ಹಸ್ತಗಳ ನಿಲುಕಿಗೆ ಸಿಲುಕದೆ ಗುಪ್ತಗೃಹವೊಂದರಲ್ಲಿ ಅಡಗಿಕೊಂಡಿರುವ ಎರಡು ಕುಟುಂಬಗಳ ಪೈಕಿ ಒಟ್ಟೊ ಫ್ರಾಂಕ್ನದ್ದೂ ಒಂದು. ಈ ಫ್ರಾಂಕ್ ಕುಟುಂಬದ ಹದಿಮೂರು ವರ್ಷದ ಆ್ಯನ್ ಫ್ರಾಂಕ್ ಅಡಗುತಾಣದಲ್ಲಿ ತಾನು ಅನುಭವಿಸಿದ ಬೆಂಕಿಯುಗುಳುವ ಕತೆಯನ್ನು ತನ್ನ ಗೆಳೆಯ ಕಿಟಿಗೆ ಬರೆದುಕೊಂಡ ಪತ್ರಗಳ ಒಂದು ದೊಡ್ಡ ಗುಚ್ಛದಲ್ಲಿ ಕಾಣಿಸುತ್ತಾಳೆ.

ಪ್ರಸ್ತುತ ಕೃತಿಯನ್ನು ‘ಡೈರಿ’ ಎಂದು ಕರೆಯಲಾಗಿದ್ದರೂ ಅದರ ನಿರೂಪಣಾ ವಿಧಾನವನ್ನು ಗಮನಿಸಿದರೆ ಅದನ್ನು epistolary ಪ್ರಕಾರದ್ದನ್ನಾಗಿಯೂ ಪರಿಗಣಿಸಬೇಕಾಗುತ್ತದೆ. ಈ ಕೃತಿಯು ಒಂದು ಅರ್ಥದಲ್ಲಿ ಡೈರಿಯೂ ಹೌದು. ಇನ್ನೊಂದು ಅರ್ಥದಲ್ಲಿ ಪತ್ರವೂ ಹೌದು. ಇಲ್ಲಿನ ಪ್ರತಿಯೊಂದು ಪತ್ರಕ್ಕೂ ಆ್ಯನ್ ಫ್ರಾಂಕ್ ದಿನಾಂಕವನ್ನು ನಮೂದಿಸಿದ್ದಾಳೆ. ಆದರೆ ಇಲ್ಲಿನ ಯಾವುದೇ ಪತ್ರವು ಆ್ಯನ್ ಫ್ರಾಂಕ್ ಳ ಗೆಳೆಯ ಕಿಟಿಗೆ ತಲುಪುವುದಿಲ್ಲ. ಅಲ್ಲದೆ ಪ್ರತಿಯಾಗಿ ಕಿಟಿಯಿಂದ ಯಾವುದೇ ಪತ್ರವು ಆ್ಯನ್ ಫ್ರಾಂಕ್ ಳಿಗೆ ಬರುವುದಿಲ್ಲ. ಇಂಥದ್ದೊಂದು ತಂತ್ರಗಾರಿಕೆ ಪ್ರಸ್ತುತ ಕೃತಿಯ ಆಶಯಕ್ಕೆ ಅತ್ಯಂತ ಸೂಕ್ತವಾಗಿ ಹೊಂದಿಕೊಳ್ಳುವಂಥದ್ದಾಗಿದೆ.

ಉಸಿರು ಬಿಗಿಹಿಡಿದೇ ಗೌಪ್ಯವಾಗಿ ಬದುಕಬೇಕಾದ ಒತ್ತಡದಲ್ಲಿ ಇರುವ ಜೀವವೊಂದಕ್ಕೆ ತನ್ನ ಒಳತೋಟಿಗಳನ್ನು ತೋಡಿಕೊಳ್ಳಲು ಈ ತಂತ್ರ ವಿಧಾನ ಅನುಕೂಲಕರವಾಗಿದೆ. ಒತ್ತಡದಿಂದ ಬಿಡುಗಡೆಗೊಳ್ಳಲು ಆ್ಯನ್ ಫ್ರಾಂಕ್ ಳ ಬಳಿ ಇಂಥದ್ದೊಂದು ಮಾರ್ಗವಿರದಿದ್ದರೆ ಅವಳು ಸರಿಸುಮಾರು ಎರಡು ವರ್ಷಗಳ ಕಾಲ ಚಿತ್ತಸ್ವಾಸ್ಥ್ಯದಲ್ಲಿ ಬದುಕಲು ಸಾಧ್ಯವಿರುತ್ತಿರಲಿಲ್ಲ. ಅವಳು ಕೊನೆಯುಸಿರು ಎಳೆಯುವ ಮುನ್ನ ಎಂಥ ಮಾನಸಿಕ ಸ್ಥಿತಿಯಲ್ಲಿ ಇದ್ದಳೊ ಆ ಸ್ಥಿತಿಯಲ್ಲಿಯೇ ಅವಳು ಎರಡು ವರ್ಷಗಳ ಕಾಲ ಯಮಯಾತನೆಯನ್ನು ಅನುಭವಿಸಬೇಕಾಗುತ್ತಿತ್ತು. ಸಮವಯಸ್ಕ ಸಹ ಜೀವಿಯೊಂದಿಗೆ ತನ್ನ ಏನೆಲ್ಲ ತೊಳಲಾಟವನ್ನು ತೋಡಿಕೊಳ್ಳುತ್ತಾಳಾದ್ದರಿಂದ ಅವಳ ಬರವಣಿಗೆಗೆ ಬೇರೆ ಬೇರೆ ಆಯಾಮಗಳು ದತ್ತವಾಗಿವೆ.

ಪ್ರಸ್ತುತ ಕೃತಿಯು ಕೇವಲ ಕರಾಳ ರಾಜಕೀಯ ಚರಿತ್ರೆಯ ಕಥನವಾಗುವ ಅಪಾಯದಿಂದ ಪಾರಾಗಲು ಅವಳು ಆಯ್ಕೆ ಮಾಡಿಕೊಂಡ ಬರೆಹದ ಈ ಮಾದರಿ ಸಹಕಾರಿಯಾಗಿದೆ. ಯಾವುದನ್ನು ಅವಳು ತಂದೆಯ ಬಳಿ, ತಾಯಿಯ ಬಳಿ ಅಥವಾ ಹಿರಿಯ ಸಹೋದರಿಯ ಬಳಿ ಹೇಳಿಕೊಳ್ಳಲು ಸಾಧ್ಯವಿಲ್ಲವೊ ಅದನ್ನು ಅನಾವರಣಗೊಳಿಸಿಕೊಳ್ಳಲು ಈ ಮಾದರಿಯಲ್ಲಿ ಅವಳಿಗೆ ವಿಪುಲ ಅವಕಾಶ ದೊರಕಿದೆ. ಗುಪ್ತಗೃಹದ ಕತ್ತಲೆಯಲ್ಲಿ ಬದುಕುತ್ತಿದ್ದರೂ ಲಭ್ಯವಿರುವ ಸೀಮಿತ ಆಕರಗಳ ಸಹಾಯದಿಂದ ತನಗೆ ಕಾಣದ ಬಾಹ್ಯಲೋಕದ ಮೇಲೂ ತನ್ನ ಮನಸ್ಸಿನ ಅಂತರಾಳದ ಗುಹ್ಯಲೋಕದ ಮೇಲೂ ಬೆಳಕು ಚೆಲ್ಲಲು ಅವಳಿಗೆ ಸಾಧ್ಯವಾಗಿದೆ.ಅವಳು ವಾಸವಾಗಿರಬೇಕಾದ ಗುಪ್ತಗೃಹವು ಅವಳ ಅಂತರಂಗದ ವಿಕಸನಕ್ಕೆ ಬಹುದೊಡ್ಡ ವೇದಿಕೆಯನ್ನು ನಿರ್ಮಿಸಿದೆ. ತಂದೆ, ತಾಯಿ, ಹಿರಿಯ ಸಹೋದರಿ, ಪೀಟರ್, ವ್ಯಾನ್ ಡ್ಯಾನ್ ದಂಪತಿ, ಡಸೆಲ್, ಮೇಪ ಮುಂತಾದ ಗುಪ್ತಗೃಹದ ಸಹಸದಸ್ಯರ ವಿವಿಧ ಸ್ಥರದ ಮುಖಾಮುಖಿಯಲ್ಲಿ ಆ್ಯನ್ ಫ್ರಾಂಕ್ಳಲ್ಲಿ ಒಂದು ದೊಡ್ಡ ಪರಿವರ್ತನೆಯಾಗುತ್ತ ಹೋಗುತ್ತದೆ. ಗುಪ್ತಗೃಹದಲ್ಲಿ ನಡೆಯುವ ಹಸಿವು, ಈರ್ಷೆ, ಕಿಶೋರಾವಸ್ಥೆಯಲ್ಲಿ ಕಾಡುವ ದೇಹ ಸೆಳೆತದ ತಲ್ಲಣಗಳು ಮುಗ್ಧಳಾದ ಬಾಲಕಿಯೊಬ್ಬಳನ್ನು ಹೇಗೆ ಪ್ರಬುದ್ಧಳನ್ನಾಗಿ ಹೇಗೆ ಪರಿವರ್ತಿಸುತ್ತದೆ ಎನ್ನುವುದನ್ನು ‘ಡೈರಿ’ ತುಂಬಾ ರೋಚಕವಾಗಿ ಹಾಗೂ ಆಪ್ತವಾಗಿ ದಾಖಲಿಸುತ್ತದೆ. ಹೀಗಾಗಿ ಡೈರಿ ಬರವಣಿಗೆಯು ಆ್ಯನ್ ಫ್ರಾಂಕ್ಳಿಗೆ ಮುಕ್ತಿಯ ಮಾರ್ಗದ ಹಾಗೇ ಗೋಚರಿಸುತ್ತದೆ.

ಗುಪ್ತಗೃಹದ ಬಹುಪಾಲು ಸಹಜೀವಿಗಳು ನಾಝಿ ಸೈನಿಕರು ನಿರ್ಮಿಸಿದ concentration camp ನ ಗ್ಯಾಸ್ ಚೇಂಬರಿನಲ್ಲಿ ಸುಟ್ಟು ಬೂದಿಯಾದರೆ ಆ್ಯನ್ ಫ್ರಾಂಕ್ಳು ಗುಪ್ತಗೃಹವೆಂಬ ಈ ಯಾತನಾ ಶಿಬಿರದ ಗ್ಯಾಸ್ ಚೇಂಬರನಲ್ಲಿ ಸುಟ್ಟುಕೊಂಡು ಪರಿಶುದ್ಧ ಚಿನ್ನವಾಗಿ ಹೊರಹೊಮ್ಮುತ್ತಾಳೆ. ಕಾಗದವೆನ್ನುವುದು ತುಂಬಾ ಸಹನಶೀಲವೆಂದು ನಂಬಿ ಅದರ ಮೇಲೆ ಬರೆಯುತ್ತ ಬರೆಯುತ್ತ ಕೊನೆಯಲ್ಲಿ ಆ್ಯನ್ ಫ್ರಾಂಕ್ ತಾನೂ ಸಹನಶೀಲಳಾಗುತ್ತ ಹೋಗುತ್ತಾಳೆ. ಬಾಹ್ಯದ ನಾಝಿಜಂ ಯಹೂದಿಗಳನ್ನು ಕಾಡಿದರೆ ಅಂಥದ್ದನ್ನೇ ನೆನಪಿಸುವ ಸಾಮಾಜಿಕ ಸಂರಚನೆಗಳು ನಿರ್ಮಿಸಿದ ಇನ್ನೊಂದು ತೆರನಾದ ಆಕ್ಟೋಪಸ್ ಹಿಡಿತಗಳು ಆ್ಯನ್ ಫ್ರಾಂಕ್ಳನ್ನು ಕಾಡುವ ಸಮಾನಾಂತರದ ಕಥನವಾಗಿ ಇಲ್ಲಿ ನಮಗೆ ಕಾಣಸಿಗುತ್ತದೆ.

ಮುಕ್ತವಾಗಿ ನಿಸರ್ಗದ ಮಡಿಲಿನಲ್ಲಿ ಜೀವಿಸಲು ಹಂಬಲಿಸುವ, ಸದಾ ಎದೆಯ ಮಾತಿಗೆ ಕಿವಿಗೊಡಲು ಹೆಣಗಾಡುವ ಆ್ಯನ್ ವಿಪರೀತವಾದ ತಹತಹವನ್ನು ಎದುರಿಸುತ್ತಾಳೆ. ಹಾಗೆ ಎದುರಿಸುತ್ತಲೇ ಅವಳ ಲೋಕದೃಷ್ಟಿ ವಿಸ್ತಾರಗೊಳ್ಳುತ್ತ ಹೋಗುತ್ತದೆ. ತನ್ನೊಳಗೇ ಇರುವ ವ್ಯಕ್ತಿತ್ವ ಹಾಗೂ ಬಾಹ್ಯದಲ್ಲಿ ತೋರಿಸಿಕೊಳ್ಳುವ ವ್ಯಕ್ತಿತ್ವಗಳ ಸಂಘರ್ಷದಲ್ಲಿ ಆ್ಯನ್ ಫ್ರಾಂಕ್ ಪ್ರಬುದ್ಧಳಾಗುತ್ತ ಹೋಗುವ ಪರಿ ಕಿಶೋರಾವಸ್ಥೆಯನ್ನು ಅಧ್ಯಯನ ಮಾಡುವವರಿಗೆ ಫಲವತ್ತಾದ ನೆಲದ ಹಾಗೆ ಕಾಣುತ್ತದೆ. ಐರಿಶ್ ಕಾದಂಬರಿಕಾರ James Joyce ನ A portrait of an Artist as a Young Manದಲ್ಲಿ ಬಳಕೆಯಾಗಿರುವ bildugsromanದಂತಹ ಸಾಹಿತ್ಯ ಪ್ರಕಾರವನ್ನು ಈ ‘ಡೈರಿ’ ಹೋಲುತ್ತದೆ. ಆ ಕಾದಂಬರಿಯ ನಾಯಕ Stephen Dedalus ನನ್ನು ಆ್ಯನ್ ಫ್ರಾಂಕ್ಳೊಂದಿಗೆ ಹೋಲಿಸಿ ಅಧ್ಯಯನ ಮಾಡಬಹುದು.

ಮೂರುನೂರಾ ಅರವತ್ತು ಪುಟಗಳಷ್ಟು ದೀರ್ಘವಾದ ಈ ‘ಡೈರಿ’ಯನ್ನು ನಾಗರೇಖಾ ಗಾಂವಕರ ಅವರು ತುಂಬಾ ತಾಳ್ಮೆ ಹಾಗೂ ಶ್ರದ್ಧೆಯಿಂದ ಅನುವಾದಿಸಿದ್ದಾರೆ. ಅಂತರಂಗದ ಗೋಳನ್ನು ಚಿತ್ರಿಸಲು ಆ್ಯನ್ ಫ್ರಾಂಕ್ ಬಳಸಿರುವ ದೀರ್ಘವಾದ interior monologueನ ಹಾಗೆ ತೋರುವ ಇಲ್ಲಿನ ಬರವಣಿಗೆ ಅನುವಾದಕನಿಗೆ ಒಂದು ಪಂಥಾಹ್ವಾನದ ಹಾಗೆ ಇದೆ. ಅನುವಾದದ ಸಂದರ್ಭದಲ್ಲಿ ಅನುವಾದಕನು ಭಾಷಿಕವಾದ ಹಾಗೂ ಸಾಂಸ್ಕೃತಿಕವಾದ ಬಿಕ್ಕಟ್ಟುಗಳನ್ನು ಎದುರಿಸಬೇಕಾಗುತ್ತದೆ. ಆ ಬಿಕ್ಕಟ್ಟುಗಳಿಗೆ ನಾಗರೇಖಾ ಅವರು ಸರಿಯಾಗಿಯೇ ಮುಖಾಮುಖಿಯಾಗಿದ್ದಾರೆ.

ಅನುವಾದವು ಒಡ್ಡುವ ಆ ಪಂಥಾಹ್ವಾನವನ್ನು ಗಂಭೀರವಾಗಿ ಸ್ವೀಕರಿಸಿರುವ ಲೇಖಕಿ ಅನುವಾದದ ಕೆಲಸವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. Source textಅನ್ನು Target textಗೆ ಪಠ್ಯಂತರಗೊಳಿಸುವಾಗ ಉಂಟಾಗುವ ದೋಷಗಳಿಂದ ಮುಕ್ತವಾಗಿರಲು ಏನೆಲ್ಲ ಎಚ್ಚರಿಕೆಯನ್ನು ಅನುವಾದಕ ವಹಿಸಬೇಕೋ ಅದೆಲ್ಲವನ್ನು ಪೂರೈಸಿದ್ದಾರೆ.

ನಾಗರೇಖಾ ಗಾಂವಕರ ಅವರು ತಮ್ಮ ಅನುವಾದ ಪಯಣದ ಮೊದಲ ಹೆಜ್ಜೆಯನ್ನು ಅತ್ಯಂತ ಗಟ್ಟಿಯಾಗಿಯೇ ಊರಿದ್ದಾರೆ. ಜಗತ್ತಿನ ಎಪ್ಪತ್ತಕ್ಕಿಂತ ಅಧಿಕ ಭಾಷೆಗಳಿಗೆ ಅನುವಾದಗೊಂಡಿರುವ ‘ಡೈರಿ’ಯನ್ನು ಅವರು ಕನ್ನಡದ ಓದುಗರಿಗೆ ನೀಡಿದ್ದಾರೆ. ತನ್ಮೂಲಕ ಬಾಲಕಿಯೊಬ್ಬಳ ಅಂತರಂಗದ ವಿಕಸನದ ಕಥನವನ್ನು ಕನ್ನಡ ಓದುಗರಿಗೆ ನೀಡಿದ್ದಾರೆ. ‘ನನ್ನ ಸಾವಿನ ನಂತರವೂ ನಾನು ಬದುಕಬಯಸುವೆ’ ಎಂದು ಹಂಬಲಿಸುತ್ತಿದ್ದ ಆ್ಯನ್ ಫ್ರಾಂಕ್ಳ ಹೆಬ್ಬಯಕೆಯನ್ನು ನಾಗರೇಖಾ ಗಾಂವಕರ ಅವರು ಈ ‘ಡೈರಿ’ ಮೂಲಕ ಈಡೇರಿಸಿದ್ದಾರೆ. ಇಂಥದ್ದೊಂದು ನಿಡಿದಾದ ‘ಡೈರಿ’ಯನ್ನು ಕನ್ನಡ ಓದುಗರಿಗೆ ನೀಡುತ್ತಿರುವ ಅವರಿಗೆ ಎಲ್ಲ ರೀತಿಯ ಶುಭ ಹಾರೈಕೆಗಳು.

ನಾಗರೇಖಾ ಗಾಂವಕರ

ʼದಿ ಡೈರಿ ಆಫ್ ಎ ಯಂಗ್ ಗರ್ಲ್’ ಇದು ನಾಝಿಗಳು ನೆದರಲ್ಯಾಂಡನ್ನು ತಮ್ಮ ವಶಕ್ಕೆ ತೆಗೆದುಕೊಂಡ ಸಂದರ್ಭದಲ್ಲಿ ಆ್ಯನ್ ಫ್ರಾಂಕ್ ಎಂಬ ಹದಿಮೂರು ವರ್ಷದ ಹುಡುಗಿ ತನ್ನ ಕುಟುಂಬದೊಂದಿಗೆ ಎರಡು ವರ್ಷಗಳ ಕಾಲ ಅಡಗುತಾಣದಲ್ಲಿ ಬದುಕುತ್ತಿರುವಾಗ ಡಚ್ ಭಾಷೆಯಲ್ಲಿ ಬರೆದಿಟ್ಟ ದಿನಚರಿ. 1944ರಲ್ಲಿ ಈ ಕುಟುಂಬವನ್ನು ನಾಝಿಗಳು ಬಂಧಿಸಿದರು. ಆದರೆ ಸಾಂಸರ್ಗಿಕ ವಿಷಮಜ್ವರದಿಂದ ಬೆರ್ಜನ್-ಬೆಸ್ಲನ್ನ ಬಂಧಿಯಾಳುಗಳ ಯಾತನಾ ಶಿಬಿರದಲ್ಲಿ ಆ್ಯನ್ ಫ್ರಾಂಕ್ ಕೊನೆಯುಸಿರೆಳೆದಳು. ಆಕೆಯ ಈ ಡೈರಿಯನ್ನು ಮೇಪ್ ಗೇಸ್ ತಿದ್ದಿ ಸರಿಮಾಡಿ, ಆ್ಯನ್ ಕುಟುಂಬದಲ್ಲಿ ಬದುಕುಳಿದ ಆ್ಯನ್ಳ ತಂದೆ ಓಟ್ಟೋ ಫ್ರಾಂಕ್ನಿಗೆ ನೀಡಿದಳು.

ಇಲ್ಲಿಯವರೆಗೆ ಸುಮಾರು 70 ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿರುವ ಈ ದಿನಚರಿ ಗುಪ್ತವಾಸದ ಬದುಕಿನಲ್ಲೂ ಆಶಾವಾದದ ನಿಲುವುಳ್ಳ ಎಳೆ ಮನಸ್ಸೊಂದರ ತುಮುಲಗಳಿಂದ, ದಿನದಿಂದ ದಿನಕ್ಕೆ ಆ ವ್ಯಕ್ತಿತ್ವ ಗಳಿಸಿಕೊಂಡ ಪ್ರೌಢ ನಿಲುವುಗಳಿಂದ, ರಾಜಕೀಯ, ಸಾಮಾಜಿಕ ಚಿಂತನೆಗಳನ್ನು ತನ್ನ ಎಳೆಯ ವಿಚಾರಗಳಲ್ಲಿ ವ್ಯಕ್ತಪಡಿಸಿದ ರೀತಿಯಿಂದಲೂ ಅಪೂರ್ವವೆನಿಸುತ್ತದೆ.

ಆಮ್ಸ್ಟರ್ ಡ್ಯಾಮ್‌ ನಲ್ಲಿ ಓಟ್ಟೋ ಫ್ರಾಂಕ್ ಜ್ಯಾಮ್ ತಯಾರಿಕೆಯಲ್ಲಿ ಬಳಸುತ್ತಿದ್ದ ‘ಪೆಕ್ಟಿನ್’ ಅನ್ನು ತಯಾರಿಸುವ ಮತ್ತು ಮಾರುವ ‘ಓಪೆಕ್ಟಾ’ ಎಂಬ ವ್ಯವಹಾರ ಸಂಸ್ಥೆಯೊಂದನ್ನು ಹರ್ಮನ್ ವ್ಯಾನ್ ಪೆಲ್ಸ್ ಎಂಬ ಇನ್ನೊಬ್ಬ ಯಹೂದಿಯ ಜೊತೆಗೂಡಿ ನಡೆಸುತ್ತಿದ್ದರು. ಗುಪ್ತವಾಸದ ದಿನಗಳಲ್ಲಿ ಫ್ರಾಂಕ್ನ ಈ ಫುಡ್ ಫ್ರಾಸೆಸಿಂಗ್ ಬಿಸಿನೆಸ್ನ ಉಗ್ರಾಣ ಮತ್ತು ಆಫೀಸು ಕಟ್ಟಡಗಳು ಫ್ರಾಂಕ್ ಕುಟುಂಬ ಮತ್ತು ವ್ಯಾನ್ಡ್ಯಾನ್ಸ್ ಕುಟುಂಬಕ್ಕೆ ಅಡಗುತಾಣವಾಗಿ ರೂಪಿಸಲ್ಪಟ್ಟಿತು.

ಫ್ರಾಂಕ್ ಕುಟುಂಬದಲ್ಲಿ ತಂದೆ ಓಟ್ಟೋ ಫ್ರಾಂಕ್, ತಾಯಿ ಎಡಿಥ್ ಹಾಗೂ ಸಹೋದರಿ ಮಾರ್ಗೊಟ್ ಮತ್ತು ಆ್ಯನ್ ಫ್ರಾಂಕ್ ಇದ್ದರೆ, ವ್ಯಾನ್ಡ್ಯಾನ್ಸ ಕುಟುಂಬದಲ್ಲಿ ಹರ್ಮನ್ ವ್ಯಾನ್ ಪೆಲ್ಸ್, ಆತನ ಪತ್ನಿ ಆಗಸ್ಟ್ ಹಾಗೂ ಪುತ್ರ ಪೀಟರ್ ಹೀಗೆ ಏಳು ಜನ ಸದಸ್ಯರು ಇದ್ದರು. ನಾಲ್ಕು ತಿಂಗಳ ನಂತರ ದಂತವೈದ್ಯನಾದ ಯಹೂದಿ ಅಲ್ಬರ್ಟ್ ಡಸೆಲ್ ಕೂಡಾ ಇವರೊಂದಿಗೆ ಬಂದು ಸೇರಿಕೊಂಡರು. ಹೀಗೆ ಒಟ್ಟು ಎಂಟು ಜನರು ಗುಪ್ತವಾಸದ ದಿನಗಳಲ್ಲಿ ಅನುಭವಿಸಿದ ಸಂಕಟಗಳು, ದುಃಖ ದುಮ್ಮಾನದ ನಡುವೆಯೇ ಪಟ್ಟ ಸಂತಸದ ಕ್ಷಣಗಳು, ಮೋಜು ಮಸ್ತಿಗಳು, ತಾಕಲಾಟಗಳು, ವೈಯಕ್ತಿಕ ನೆಲೆಯಲ್ಲಿ ವ್ಯಕ್ತವಾಗುತ್ತಿದ್ದ ಭಿನ್ನ ಅಭಿಪ್ರಾಯಗಳು, ಪರಸ್ಪರ ದೋಷಾರೋಪಣೆಗಳ ನಡುವೆಯೂ ಬೆಸೆದ ಬಾಂಧವ್ಯ, ಎಲ್ಲವೂ ಮನುಷ್ಯನ ಸಂದರ್ಭೋಚಿತ ಮನಸ್ಥಿತಿಯನ್ನು ತೆರೆದಿಡುವಲ್ಲಿ ಡೈರಿ ಯಶಸ್ವಿಯಾಗಿದೆ.

ಆ್ಯನ್ ಫ್ರಾಂಕ್ಳ ಮೂಲ ಡೈರಿ ಮೂರು ವಾಲ್ಯೂಮುಗಳಲ್ಲಿ ಬರೆದಿದ್ದು, ಮೊದಲ ಸಂಪುಟ ಕೆಂಪು ಮತ್ತು ಬಿಳಿ ಬಣ್ಣದ ಆಟೋಗ್ರಾಫ್ ಪುಸ್ತಕ. ಇದು 1942 ಜೂನ್ 12 ರಂದು ಆ್ಯನ್ ಫ್ರಾಂಕ್ಳ 13ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ತಂದೆ ಓಟ್ಟೋ ಫ್ರಾಂಕ್ ಕಾಣಿಕೆಯಾಗಿ ನೀಡಿದ ಡೈರಿ. ಎರಡು ದಿನಗಳ ತರುವಾಯ ಅಂದರೆ ಜೂನ್ 14ರಿಂದ ಈ ಆ್ಯನ್ ಡೈರಿಯನ್ನು ಬರೆಯತೊಡಗಿದಳು. ಎರಡನೆಯ ಸಂಪುಟ ಶಾಲಾ ಅಭ್ಯಾಸ ಪುಸ್ತಕದಲ್ಲಿ ಬರೆಯಲಾಗಿದೆ. ಹಾಗೇ ಮೂರನೆಯ ಸಂಪುಟ ಕೂಡ ಶಾಲಾ ಅಭ್ಯಾಸ ಪತ್ರಿಕೆಯಲ್ಲಿಯೇ ಬರೆಯಲಾಗಿದೆ.

ಮೊದಲ ಸಂಪುಟವು 14 ಜೂನ ರಿಂದ 5 ಡಿಸೆಂಬರ್ 1942ರ ನಡುವಿನ ಅವಧಿಯನ್ನು ಒಳಗೊಂಡಿದೆ. ಎರಡನೆಯ ಸಂಪುಟದಲ್ಲಿ 22 ಡಿಸೆಂಬರ್ ರಿಂದ 17 ಏಪ್ರಿಲ್ 1944 ವರೆಗೆ ನಮೂದಾಗಿದೆ. ಮೂರನೇ ಸಂಪುಟ 17 ಏಪ್ರಿಲ್, 1944ರಿಂದ 1 ಆಗಸ್ಟ್ , 1944ವರೆಗೆ ಬರೆಯಲಾಗಿದೆ. 1, ಆಗಸ್ಟ್, 1944ರಂದು ಆಕೆ ಬರೆದದ್ದೆ ಕೊನೆಯ ಬರಹ. ಅದಾದ ಮೂರು ದಿನಗಳ ತರುವಾಯ ಅಂದರೆ 4 ಆಗಸ್ಟ್, 1944 ರಂದು ಕಪಟಿ ಸ್ಥಳಿಯ ಬಾತ್ಮಿದಾರನೊಬ್ಬ ಗೆಸ್ಟಪೋಗಳಗೆ [ಗುಪ್ತ ಪೋಲಿಸರಿಗೆ ] ಫ್ರಾಂಕ್ ಕುಟುಂಬದ ರಹಸ್ಯ ಅಡಗುತಾಣದ ಮಾಹಿತಿ ನೀಡಿ ಗೆಸ್ಟಪೋಗಳನ್ನು ಅಲ್ಲಿಗೆ ಕರೆತಂದ. ‌

ಸುಮಾರು ಎರಡು ವರ್ಷ ಮತ್ತು ಒಂದು ತಿಂಗಳುಗಳ ಕಾಲ ಗೌಪ್ಯವಾಗಿ ವಾಸಿಸುತ್ತಿದ್ದ ಎಂಟೂ ಯಹೂದಿಗಳು ತಾವಾಗಿಯೇ ಹೊರಬಂದು ಶರಣಾದರು. ಅವರನ್ನೆಲ್ಲಾ ನಾಝಿ ಯಾತನಾಶಿಬಿರಗಳಿಗೆ ಸಾಗಿಸಲಾಯಿತು. ತಾಯಿ ಶ್ರೀಮತಿ ಫ್ರಾಂಕ್ ಮತ್ತು ಸಹೋದರಿ ಮಾರ್ಗೊಟ್ ಆ್ಯನ್ಗಿಂತಲೂ ಮೊದಲೆ ಸಾವನ್ನಪ್ಪಿದರೆ, ಆ್ಯನ್ ಮರಣಿಸಿದ್ದು 1945ರ ಫೆಬ್ರುವರಿ ಕೊನೆ ಅಥವಾ ಮಾರ್ಚ್ ಮೊದಲ ವಾರವಾಗಿರಬಹುದೆಂದು ನಂಬಲಾಗಿದೆ. ಯಾಕೆಂದರೆ ಮರಣಹೊಂದಿದ ಸರಿಯಾದ ದಿನಾಂಕ ತಿಳಿದುಬಂದಿಲ್ಲ. ಅದೂ ಕೂಡಾ 1945ರ ಆಗಸ್ಟ್ 15ರಂದು ಬ್ರಿಟಿಷ್ ಪಡೆಗಳು ಈ ಎಲ್ಲ ಸೆರೆಯಾಳುಗಳನ್ನು ಸೆರೆಮುಕ್ತಗೊಳಿಸುವ ಕೆಲವೇ ಕೆಲವು ವಾರಗಳ ಮುಂಚೆ ಎಂಬುದು ವಿಪರ್ಯಾಸ.

ಈ ಡೈರಿಯನ್ನು 1947 ಜೂನ್ 25ರಂದು ಡಚ್ ಭಾಷೆಯಲ್ಲಿ ‘Het Achterhuis‌ʼ ಎಂಬ ಶೀರ್ಷಿಕೆಯ ಅಡಿಯಲ್ಲಿ ಪ್ರಕಟವಾಯಿತು.
ಇಡೀ ಡೈರಿಯನ್ನು ಆ್ಯನ್ ತನ್ನ ಸ್ನೇಹಿತೆ ಎಂದು ಕರೆದುಕೊಂಡಿರುವ ‘ಕಿಟಿ’ಯನ್ನು ಸಂಬೋಧಿಸಿ ಬರೆದಿದ್ದಾಳೆ. 1950ರಲ್ಲಿ ಈ ಪುಸ್ತಕವು ಜರ್ಮನ್ ಭಾಷೆಗೂ, 1952ರಲ್ಲಿ ಮೊದಲ ಬಾರಿ ಇಂಗ್ಲೀಷ್ ಭಾಷೆಗೂ ಅನುವಾದಗೊಂಡಿತು.‌ ಹಾಗೂ ಈಗಾಗಲೇ ಜಗತ್ತಿನ 70 ಭಾಷೆಗಳಿಗೆ ಅನುವಾದಗೊಂಡಿದೆ.

ಇಂತಹ ಕೃತಿಯೊಂದನ್ನು ಕನ್ನಡಕ್ಕೆ ಅನುವಾದಿಸುವ ಇರಾದೆ ಮೂರು ವರ್ಷಗಳಿಂದಲೂ ಕಾಡುತ್ತಿತ್ತು. ಹತ್ತನೇ ತರಗತಿಯಲ್ಲಿ ಓದುತ್ತಿದ್ದ ನನ್ನ ಮಗಳ ಇಂಗ್ಲೀಷ್ ಪಠ್ಯವಾಗಿದ್ದ ಈ ಡೈರಿಯ ಕೆಲವೇ ಕೆಲವು ಆಯ್ದ ಭಾಗಗಳನ್ನು ಓದುತ್ತಾ, ಆ ಪುಸ್ತಕವನ್ನು ಇಡಿಯಾಗಿ ಓದುವ ಹಂಬಲ ಹತ್ತಿತ್ತು. ಪುಸ್ತಕ ಓದಿದ ಮೇಲೆ ಅದನ್ನು ಕನ್ನಡಕ್ಕೆ ತಂದರಾಗುತ್ತಿತ್ತು ಎಂಬ ಆಸೆಗೆ ಪೂರಕವಾಗಿ ನೆಲೆ ಪ್ರಕಾಶನದ ಚಿನ್ನಪ್ಪ ಕಟ್ಟಿ ಸರ್ ಹಾಗೂ ದೇವು ಮಾಕೊಂಡ ಬಹಳ ಉತ್ತೇಜನ ನೀಡುವ ರೀತಿಯಲ್ಲಿ ಸ್ಪಂದಿಸಿದರು. ಆದರೆ ಅನುವಾದದ ಕುರಿತು ಇನ್ನೂ ಮಾಗಬೇಕಾಗಿದ್ದ ನಾನು ಧೈರ್ಯದಿಂದ ಈ ಪ್ರಯತ್ನಕ್ಕೆ ಮುಂದಾಗಿದ್ದು, ನನ್ನೊಳಗಿನ ಒಂದು ತುಡಿತದ ಕಾರಣ.

ಇತ್ತೀಚೆಗೆ ಪಾಶ್ಚಾತ್ಯ ಸಾಹಿತ್ಯ ಹಾಗೂ ಅನ್ಯಭಾಷಾ ಸಾಹಿತ್ಯದ ಅನುವಾದ ಕೃತಿಗಳೆಡೆಗೆ ಹೆಚ್ಚು ಓದುಗರು ಆಕರ್ಷಿತರಾಗುತ್ತಿದ್ದಾರೆ. ಹಾಗಾಗಿ ಕನ್ನಡದಲ್ಲಿ ಈಗ ಹೆಚ್ಚು ಅನುವಾದಕರು ತಮ್ಮ ಆಯ್ಕೆಯ ಆನುವಾದದಲ್ಲಿ ನಿರತರಾಗುತ್ತಿದ್ದಾರೆ. ಯಾಕೆ ಅನುವಾದ ಮೂಲ ಕೃತಿಯನ್ನೆ ಓದಿದ ಖುಷಿ ನೀಡದು ಎಂಬ ಪ್ರಶ್ನೆ ಮತ್ತೆ ಕೆಲವು ಬಾರಿ ಮೂಲಕ್ಕಿಂತಲೂ ಅನುವಾದವೇ ಸೊಗಸು ಎಂಬ ಪ್ರತಿಕ್ರಿಯೆಗಳ ನಡುವೆ ಹೀಗೆ ಅನುವಾದದ ಪ್ರಯತ್ನಗಳು ನಡೆಯುತ್ತಲೆ ಇವೆ. ಕೆಲವರು ತಮ್ಮ ಪರಿಸರಕ್ಕೆ ಅನುಗುಣವಾಗಿ ಕೊಂಚ ಬದಲಾವಣೆಯ ನಿಟ್ಟಿನಲ್ಲಿ ಪರಿವರ್ತನೆ ಮಾಡಬಹುದು. ಆದರೆ ಇದು ಅನುವಾದಕ್ಕೆ ಸ್ವೀಕರಿಸಿದ ಎಲ್ಲ ಕೃತಿಗಳಿಗೂ ಅನ್ವಯವಾಗದು.

ಇನ್ನು ವ್ಯಕ್ತಿಯಿಂದ ವ್ಯಕ್ತಿಗೆ ಅನುವಾದದ ರೀತಿಗಳು, ಉಪಕ್ರಮಗಳು ಭಿನ್ನವೇ. ಕೆಲವು ಅನುವಾದಕರು ಶಬ್ದಶಃ ಅನುವಾದಕ್ಕೆ ಪ್ರಾಮುಖ್ಯತೆ ನೀಡಿದರೆ, ಕೆಲವರು ಮೂಲದ ಆಶಯ ಮತ್ತು ಆತ್ಮಕ್ಕೆ ಪೂರಕವಾಗಿ ಅನುವಾದ ಅಗತ್ಯವನ್ನು ಸಮರ್ಥಿಸಿರುತ್ತಾರೆ. ಒಂದು ಆತ್ಮವನ್ನು ಮತ್ತೊಂದು ಆತ್ಮಕ್ಕೆ ಜೋಡಿಸುವುದೇ ಅನುವಾದ ಎಂಬ ಅನುವಾದದ ಕುರಿತ ಎಚ್.ಎಸ್.ವಿಯವರ ಮಾತು ಅನುವಾದದ ಪರಿಕಲ್ಪನೆಗೆ ಬಹುಮುಖ್ಯ ಆಯಾಮ. ಎರಡು ಆತ್ಮಗಳ ಬೆಸುಗೆ ಇದ್ದಂತೆ. ಇದೊಂದು ಕಲೆ. ಅಂತಹ ಸರಳ ಸಂಗತಿಯಲ್ಲ. ಪದಗಳ ಬಳಕೆಯಲ್ಲಿ ಎಷ್ಟೋ ನಾವಿನ್ಯತೆಯನ್ನು ತರಲು ಅನುವಾದಕ ಪ್ರಯತ್ನಿಸುತ್ತಲೆ ಇರುತ್ತಾನೆ. ಹಾಗಾಗಿ ಅನುವಾದದ ಬಗ್ಗೆ ಅಂತಹ ಹೆಚ್ಚಿನ ಅಧ್ಯಯನ ಮಾಡದ ನಾನು ಕೇವಲ ಆಸಕ್ತಿಯಿಂದ ಅನುವಾದಕ್ಕೆ ತೊಡಗಿಸಿಕೊಂಡ ಮೊದಲ ಪುಸ್ತಕವಿದು. ಮೂಲ ಪಠ್ಯಕ್ಕೆ ಎಷ್ಟು ಸಾಧ್ಯವಾಗುತ್ತೋ ಅಷ್ಟು ಸಮೀಪವಾಗಿ ಅನುವಾದಿಸಲು ಮತ್ತು ಆದಷ್ಟು ಕನ್ನಡದ ಸೊಗಡನ್ನು ಕೊಡಲು ನನ್ನಿಂದಾದ ಪ್ರಯತ್ನ ಮಾಡಿರುವೆ.

ಅನುವಾದವನ್ನು ಮುಗಿಸಿ ಅದನ್ನು ಚನ್ನಪ್ಪ ಕಟ್ಟಿ ಸರ್ ಅವರಿಗೆ ಕಳುಹಿಸಿಕೊಟ್ಟಿದ್ದೆ. ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ಕೆಲವೇ ದಿನಗಳಲ್ಲಿ ಓದಿ, ಅನುವಾದದಲ್ಲಿಯ ಕೆಲವು ಲೋಪಗಳನ್ನು ಗುರುತಿಸಿ, ಆ ಕುರಿತು ಚರ್ಚಿಸಿ ಸಲಹೆ ಸೂಚನೆ ನೀಡಿದರು. ಅವರ ಕೆಲಸದಲ್ಲಿಯ ತಾಳ್ಮೆ, ತನ್ಮಯತೆ ಮತ್ತು ಶಿಸ್ತು ಬಹಳ ವಿಶೇಷವಾಗಿದ್ದು, ನಾನು ಅನುವಾದದ ಸಂದರ್ಭದಲ್ಲಿ ಎದುರಿಸಿದ ಹಲವು ಸವಾಲುಗಳಿಗೆ ಸರಿಯಾದ ಮಾರ್ಗದರ್ಶನ ನೀಡಿದ್ದು ಖುಷಿಯಾಗಿದೆ. ಅಷ್ಟೇ ಅಲ್ಲದೇ ತಮ್ಮ ನೆಲೆ ಪ್ರಕಾಶನ ಮೂಲಕ ಈ ಪುಸ್ತಕವನ್ನು ಪ್ರಕಟಿಸುವ ಭರವಸೆಯನ್ನು ನೀಡಿ, ಅದರಂತೆ ಬಹಳ ಅಚ್ಚುಕಟ್ಟಾಗಿ, ಕಡಿಮೆ ಅವಧಿಯಲ್ಲಿ ಪುಸ್ತಕವನ್ನು ಪ್ರಕಟಿಸಿಕೊಟ್ಟಿದ್ದಾರೆ. ಅವರನ್ನು ನಾನು ಹೃತ್ಪೂರ್ವಕವಾಗಿ ನೆನೆಯುತ್ತೇನೆ.

ನನ್ನ ಈ ಕಾರ್ಯದಲ್ಲಿ ಅನುವಾದದ ಅನೇಕ ಸಾಧ್ಯತೆಗಳ ಬಗ್ಗೆ ಚರ್ಚಿಸಿ ಪುಸ್ತಕದ ಪ್ರಕಟನೆಗೆ ಸಹಾಯ ಮಾಡಿದವರು ಯುವ ಸಾಹಿತಿ ದೇವು ಮಾಕೊಂಡ ಅವರು. ಅವರಿಗೆ ಧನ್ಯವಾದಗಳನ್ನು ಹೇಳಬಯಸುವೆ.

ಹಾಗೇ ಪುಸ್ತಕದ ಮುಖಪುಟವನ್ನು ಕಲಾವಿದರಾದ ಟಿ ಎಫ್ ಹಾದಿಮನಿಯವರು ಬಹು ಮುತುವರ್ಜಿಯಿಂದ ಚಿತ್ರಿಸಿಕೊಟ್ಟಿದ್ದಾರೆ. ಅವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುವೆ.

ನನ್ನ ಬರವಣಿಗೆ ಅನುವಾದ ಇತ್ಯಾದಿ ಎಲ್ಲ ಕೆಲಸದಲ್ಲಿ ಸಹಕಾರ ನೀಡುವ ಪತಿ ಪ್ರವೀಣ, ಮಕ್ಕಳಾದ ಸಾಕ್ಷಿ ಮತ್ತು ಸೃಷ್ಟಿ ಇವರಿಗೆ ನನ್ನ ಪ್ರೀತಿ.

‍ಲೇಖಕರು Avadhi

December 31, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಸತೀಶ ಕುಲಕರ್ಣಿ ಹಾವೇರಿ ನೆಲದ ಮಾತುಗಳಿಗೊಂದು ವಿಚಿತ್ರ ರುಚಿ ಇದೆ. ಸಿಟ್ಟು ಸೆಡವು, ಗಡಸು ಗಿಚ್ಚಿ ಹೊಡೆಯುವ ಮೊನಚು ಇವುಗಳದ್ದು. ವ್ಯಂಗ್ಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This