ನಾಗೇಶ್ ಹೆಗಡೆ ಕಂಡಂತೆ ಸಾಯಿನಾಥ್

– ನಾಗೇಶ್ ಹೆಗಡೆ ಪಿ ಸಾಯಿನಾಥ್ ನಿರಂತರ ದುರಂತಗಳ ಹಸಿಹಸಿ ಚರಿತೆ ‘ನೇಗಿಲ ಕುಳವಾಗಲಿ ಖಡ್ಗ’ ಎಂದರು ಹಿಂದಿನವರು. ‘ಖಡ್ಗವಾಗಲಿ ಲೇಖನಿ’ ಎಂದರು ಈಚಿನವರು. ಲೇಖನಿಯನ್ನು ಕುಳವಾಗಿಯೂ, ಖಡ್ಗವಾಗಿಯೂ ಅಷ್ಟೇಕೆ ಸರ್ಜರಿಯ ನಾಜೂಕು ಶಸ್ತ್ರವಾಗಿಯೂ ಬಳಸಿದ ಅನನ್ಯ ಪತ್ರಕರ್ತ ಪಿ.ಸಾಯಿನಾಥ್. ಗ್ರಾಮೀಣ ಭಾರತದ ನೆಲವನ್ನು ಅವರಷ್ಟು ಆಳವಾಗಿ ಕೆದಕಿ ನೋಡಿ, ಹಸಿಹಸಿಯಾಗಿ ಅಲ್ಲಿನ ದುರಂತಗಳನ್ನು ಎತ್ತಿ ತೋರಿಸುತ್ತ ಬಂದವರು ಬೇರೊಬ್ಬರಿಲ್ಲ. ದಿಲ್ಲಿಯ ಆಡಳಿತ ಯಂತ್ರದ ಜಡತ್ವವನ್ನು ಮತ್ತು ನಮ್ಮ ಜನಪ್ರತಿನಿಧಿಗಳಿಗೆ ಕವಿದ ಮಬ್ಬನ್ನು ಅವರಷ್ಟು ತೀಕ್ಷ್ಣವಾಗಿ ಛೇದಿಸಿ ತೋರಿಸುತ್ತ ಬಂದವರು ಬೇರೊಬ್ಬರಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಯೋಜನಾತಜ್ಞರು ಮತ್ತು ಕೋಟ್ಯಧೀಶ ಉದ್ಯಮಪತಿಗಳು ತೊಡುವ ತರಾವರಿ ಮುಖವಾಡಗಳನ್ನು ಅವರಷ್ಟು ನಿರ್ಭಿಡೆಯಾಗಿ ಚಿಂದಿ ಮಾಡುವವರು ಬೇರೊಬ್ಬರಿಲ್ಲ. ನಮ್ಮ ಹಳ್ಳಿಗಳ ಕಡೆ ಮಾಧ್ಯಮಗಳು ಗಮನ ಹರಿಸುವುದೇ ಕಮ್ಮಿ. ಅದರಲ್ಲಂತೂ ಇಂಗ್ಲಿಷ್ ಪತ್ರಕರ್ತರಿಗೆ ಹಳ್ಳಿಗಳ ದೂಳು, ಸೆಗಣಿ ವಾಸನೆ, ಸವುಳು ನೀರು ಎಲ್ಲವೂ ಅಲರ್ಜಿ. ವರದಿಗಾರರನ್ನು ಸಂಪಾದಕರು ಹಳ್ಳಿಯ ಕಡೆ ಅಟ್ಟಿದರೆಂದರೆ ಒಂದೋ ಅಲ್ಲಿ ಭೀಕರ ದುರಂತ/ದುರಾಚಾರ ನಡೆದಿರಬೇಕು; ಇಲ್ಲವೆ ಸಾರ್ವತ್ರಿಕ ಚುನಾವಣೆ ಹತ್ತಿರ ಬಂದಿರಬೇಕು. ದೇಶದ ಎಲ್ಲ ಪ್ರಮುಖ ಮಾಧ್ಯಮಗಳ ವರದಿಗಾರರೂ ನಗರಗಳ ಥಳಕು ಬೆಳಕಿನ ಕಡೆಗೇ ಮುಗಿಬಿದ್ದಿರುವಾಗ, ಒಬ್ಬಂಟಿ ಪಥಿಕನಂತೆ ಸಾಯಿನಾಥ್ ಹಳ್ಳಿ ಹಳ್ಳಿಗಳಲ್ಲಿ ಸುತ್ತುತ್ತಾರೆ. ಎಡಿಟರ‍್ ಗಳೂ ತಲೆದೂಗುವಷ್ಟು ಕಟುವಾಗಿ, ನಿರ್ಭಿಡೆಯಾಗಿ ಬರೆಯುತ್ತಾರೆ. ಇಂಗ್ಲಿಷ್ ಪತ್ರಿಕೆಗಳು ಸಾಮಾನ್ಯವಾಗಿ ಕೃಷಿಕರ ಬವಣೆಗಳ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. ‘ಬರೆದರೆ ಯಾರೂ ಓದುವುದಿಲ್ಲ’ ಎಂಬ ದೋರಣೆ ಅವುಗಳದ್ದು. ಅಂಥ ಪತ್ರಿಕೆಯೊಂದರ ಸಂಪಾದಕರ ಮುಖಕ್ಕೆ ಹೊಡೆದಂತೆ ‘ಯಾರೂ ಓದುವುದಿಲ್ಲವೆಂದು ನಿಮಗೆ ಹೇಗೆ ಗೊತ್ತು? ನೀವೆಂದಾದರೂ ಓದುಗರ ಅಭಿಪ್ರಾಯ ಕೇಳಿದ್ದಿರಾ?’ ಎಂದು ಪ್ರಶ್ನಿಸಿ, ಅದೇ ಸಂಪಾದಕರಿಂದ ಪ್ರತಿಷ್ಠಿತ ಫೆಲೊಶಿಪ್ ಗಿಟ್ಟಿಸಿಕೊಂಡವರು ಸಾಯಿನಾಥ್. ಮಾಜಿ ರಾಷ್ಟ್ರಪತಿ ವಿ.ವಿ. ಗಿರಿಯವರ ಮೊಮ್ಮಗ ಅಂದಮೇಲೆ ಅಷ್ಟಾದರೂ ಜರ್ಬ ಅವರಿಗಿರಬೇಡವೆ? ಹಾಗಲ್ಲ. ಅವರಿಗೆ ಮೂಲತಃ ಭಾರತೀಯ ಕೃಷಿಕರ ಬಗ್ಗೆ ಕಳಕಳಿ ಇದೆ. ‘ಎಲ್ಲ ಇಂಗ್ಲಿಷ್ ಪತ್ರಿಕೆಗಳೂ ನಮ್ಮ ಸಮಾಜದ ತೀರ ಮೇಲ್ದರ್ಜೆಯ ಶೇಕಡಾ 5 ಜನರಿಗಾಗಿ ಲೇಖನಗಳನ್ನು ಬರೆಯುತ್ತವೆ; ನಾನು ತೀರ ಕೆಳದರ್ಜೆಯ ಶೇಕಡಾ 5 ಜನರಿಗಾಗಿ ಬರೆಯುತ್ತೇನೆ’ ಎಂಬ ಧ್ಯೇಯದಿಂದ ಪತ್ರಿಕಾರಂಗದಲ್ಲಿ ಸಾಗಿದವರು. ಮೊದಲು ‘ಬ್ಲಿಟ್ಝ್’, ನಂತರ ‘ಟೈಮ್ಸ್ ಆಫ್ ಇಂಡಿಯಾ’ಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿ ಈಗ ‘ದಿ ಹಿಂದೂ’ ಪತ್ರಿಕೆಯಲ್ಲಿ ಗ್ರಾಮೀಣ ವಿಭಾಗದ ಸಂಪಾದಕರಾಗಿದ್ದಾರೆ. ಕೃಷಿಕರು ಎಂದಾಕ್ಷಣ ನಮ್ಮ ಮನಸ್ಸಿನಲ್ಲಿ ಒಂದು ಸ್ಥಿರ ಚಿತ್ರಣ ಮೂಡುತ್ತದೆ. ಅವರಲ್ಲಿ ಹೆಚ್ಚಿನವರು ಬಡವರು, ಮುಗ್ಧರು. ಕಷ್ಟ ಸಹಿಷ್ಣುಗಳು. ಗಂಜಳ- ಗೊಬ್ಬರ- ಸೌದೆಹೊಗೆಯ ಮಧ್ಯೆ ಕೊಳಕು ಪರಿಸರದಲ್ಲೂ ಕ್ಯಾರೇ ಎನ್ನದೆ ಎಲ್ಲ ರಗಳೆಗಳ ನಡುವೆಯೂ ಆಗಾಗ ಹಾಡುಹಸೆಗಳಲ್ಲಿ ಬದುಕಿಗೆ ಬಣ್ಣ ಕಟ್ಟಿಕೊಳ್ಳುವವರು; ಶತಮಾನಗಳಿಂದ ‘ಅವರಿರುವುದೇ ಹೀಗೆ’ ಎಂಬ ಚಿತ್ರಣ ಅದು. ಅವರ ಕೊರತೆಗಳು ನೀಗಬೇಕು, ಬದುಕು ಸುಧಾರಿಸಬೇಕು, ಅದಕ್ಕೆ ಬೇಕಾದ ಶಿಕ್ಷಣ, ಆರೋಗ್ಯ, ಉದ್ಯೋಗಾವಕಾಶಗಳು ಸಿಗಬೇಕು, ನಾಗರಿಕ ಬದುಕನ್ನು ಹಳ್ಳಿಯ ಜನರೂ ಅನುಭವಿಸಬೇಕು ಎಂಬ ಸಂವಿಧಾನಶಿಲ್ಪಿಗಳ ಆಶಯಗಳು ನಮ್ಮ ಗಮನಕ್ಕೆ ಬರುವುದೇ ಕಡಿಮೆ. ಅಂಥ ಆಶಯವನ್ನು ಪೂರೈಸುವಲ್ಲಿ ಸ್ವತಂತ್ರ ಭಾರತದ ಆಡಳಿತ ಯಂತ್ರ ವಿಫಲವಾಗುತ್ತಿದೆ, ಹತ್ತು ಪಂಚವಾರ್ಷಿಕ ಯೋಜನೆಗಳ ನಂತರವೂ ನಾಳೆ ಎಂಬುದು ನಿನ್ನೆಗಿಂತ ಕರಾಳವಾಗುತ್ತಿದೆ. ಅದನ್ನು ಎತ್ತಿ ಹೇಳಬೇಕೆಂಬ ತುಡಿತ ಇನ್ನೂ ಕಡಿಮೆ. ದಿನಪತ್ರಿಕೆಯ ಯಾವುದೋ ಒಳಪುಟದಲ್ಲಿ ‘ಇಬ್ಬರು ರೈತರ ಆತ್ಮಹತ್ಯೆ’ ಎಂಬ ಪುಟ್ಟ ಸುದ್ದಿಯೊಂದು ಎಲ್ಲೋ ವಾರಕ್ಕೊಮ್ಮೆ ಪ್ರಕಟವಾದರೆ ಬಹುತೇಕ ಎಲ್ಲರೂ ಅದನ್ನು ಕಡೆಗಣಿಸುವುದು ಸಹಜ. ಕಷ್ಟಗಳನ್ನೇ ಹಾಸಿ ಹೊದೆದು ಬದುಕುತ್ತ, ಎಂಥ ತೀವ್ರ ಬರಗಾಲ, ಅನಾರೋಗ್ಯದ ಸ್ಥಿತಿಯಲ್ಲೂ ಹುಲ್ಲುಗರಿಕೆಯಂತೆ ನೆಲಕಚ್ಚಿ ಅವಡುಗಚ್ಚಿ ಜೀವ ಹಿಡಿದುಕೊಂಡು ಬದುಕುವ ಜೀವ ರೈತರದು. ಅಂಥ ರೈತರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂಥ ಕರಾಳ ಸಂದರ್ಭ ಏಕೆ ಬಂತು ಎಂಬ ಕುತೂಹಲ ಇದ್ದವರಿಗೆ ಮಾತ್ರ ಈ ಸುದ್ದಿ ಕಾಡುತ್ತದೆ. ಇದರ ಹಿಂದಿನ ಸತ್ಯವನ್ನು ಅರಿಯಲೆಂದು ಇಡೀ ರಾಷ್ಟ್ರದ ಆತ್ಮಹತ್ಯೆಗಳ ಅಂಕಿ ಸಂಖ್ಯೆಗಳನ್ನು ಕ್ರೋಡೀಕರಿಸಿದಾಗ ದಿಗಿಲಾಗುತ್ತದೆ. ನೂರಲ್ಲ, ಸಾವಿರವಲ್ಲ, ಲಕ್ಷಾಂತರ ರೈತರು ನಾನಾ ರಾಜ್ಯಗಳಲ್ಲಿ ಜೀವಹರಣ ಮಾಡಿಕೊಳ್ಳುತ್ತಿದ್ದಾರೆ; ಸರಾಸರಿ ಪ್ರತಿ 35 ನಿಮಿಷಗಳಿಗೆ ಒಬ್ಬೊಬ್ಬರಂತೆ ಸಾವಿಗೆ ಶರಣಾಗುತ್ತಿದ್ದಾರೆ ಎಂಬುದು ಅರಿವಾದಾಗ ಆತಂಕವಾಗುತ್ತದೆ. ಜಗತ್ತಿನ ಚರಿತ್ರೆಯಲ್ಲಿ ಹಿಂದೆಂದೂ ಕಂಡು ಕೇಳಿರದ ಬಹುದೊಡ್ಡ ದುರಂತವೊಂದು ನಮ್ಮ ಕಣ್ಣೆದುರೇ ನಡೆಯುತ್ತಿರುವಾಗ ಯಾರೂ ಅತ್ತ ಗಂಭೀರ ಗಮನ ಹರಿಸುತ್ತಿಲ್ಲವಲ್ಲ ಎಂದು ತಲ್ಲಣವಾಗುತ್ತದೆ. ಅಷ್ಟೇ ಇದ್ದಿದ್ದರೆ ಹೇಗೂ ಆಗುತ್ತಿತ್ತು. ಆದರೆ ನೊಂದವರಿಗೆ ಸಾಂತ್ವನ ಹೇಳುವ ಬದಲು ಅವರತ್ತ ಕಣ್ಣೆತ್ತಿ ನೋಡದೆ ಗೆದ್ದೆತ್ತುಗಳನ್ನು ಹಾಡಿಹೊಗಳುವ ಭರಾಟೆಯಲ್ಲಿ ನಾವಿದ್ದೇವೆ; ಇನ್ನೂ ವಿಪರೀತದ ಸಂಗತಿ ಏನೆಂದರೆ ಇಂದಿನ ದುಃಸ್ಥಿತಿಗೆ ಕಾರಣರಾದವರನ್ನೇ ಹಾಡಿಹೊಗಳುವವರ ಹಾವಳಿ ಹೆಚ್ಚುತ್ತಿದೆ. ಕೃಷಿರಂಗದ ದಳ್ಳುರಿಯ ಕಡೆ ಗಮನ ಹರಿಸಬೇಕಾದ ಕೇಂದ್ರ ಕೃಷಿ ಸಚಿವರು ಕ್ರಿಕೆಟ್ ರಂಗಕ್ಕೆ ಬಣ್ಣಬ್ಯಾಗಡೆ ಹಚ್ಚುವುದರಲ್ಲಿ ಮೈಮರೆತಿರುತ್ತಾರೆ. ಸೆನ್ಸೆಕ್ಸ್ ಸೂಚ್ಯಂಕ 20 ಸಾವಿರಕ್ಕೆ ಸಮೀಪಿಸಿತು ಎಂದು ಆರ್ಥಿಕ ತಜ್ಞರು ಹರ್ಷೋದ್ಗಾರ ಮಾಡುವ ಚಿತ್ರಗಳು ಮಾಧ್ಯಮಗಳಲ್ಲಿ ಬರುತ್ತವೆ. ಅದೇ ದಿನ ಒಳಪುಟಗಳಲ್ಲಿ ‘ಜಾಗತಿಕ ಹಸಿವು (ನಿವಾರಣಾ) ಸೂಚ್ಯಂಕ’ದ ಪಟ್ಟಿಯಲ್ಲಿ ಭಾರತದ ಸ್ಥಾನ ಶೋಚನೀಯ 94ನೇ ಶ್ರೇಯಾಂಕಕ್ಕೆ ಕುಸಿಯಿತೆಂಬ ವಾರ್ತೆ ಚಿಕ್ಕದಾಗಿ ಮುದ್ರಿತವಾಗಿರುತ್ತದೆ. ನಮ್ಮ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಒಂದೂವರೆ ಲಕ್ಷಕ್ಕೆ ಏರಿದ ಸಂಗತಿಯನ್ನು ವಾರ್ತಾ ಏಜನ್ಸಿಗಳು ಸಂಕ್ಷಿಪ್ತವಾಗಿ ವರದಿ ಮಾಡುತ್ತಿದ್ದಾಗ ಮಾಧ್ಯಮಗಳ ಗಮನವೆಲ್ಲ ದಿಲ್ಲಿಯ ವಿಮಾನ ನಿಲ್ದಾಣದ ಕಡೆ ಇರುತ್ತದೆ. ವಿದೇಶದಿಂದ ಬಂದಿಳಿದ ಇಬ್ಬರು ಶಂಕಿತ ಸಾಸರ್್/ಹಂದಿಜ್ವರ ಪೀಡಿತರ ವಾರ್ತೆಗೆಂದು ಮುಖಪುಟದಲ್ಲಿ ಜಾಗ ಕಾಯ್ದಿರಿಸಲಾಗುತ್ತದೆ. ಇಡೀ ದೇಶದ ಎಲ್ಲ ಸರಕಾರಿ ಆಸ್ಪತ್ರೆಗಳಿಗೆ ಸಾರ್ಸ್ ಜ್ವರ ನಿರೋಧಕ ಔಷಧಗಳನ್ನು ವಿತರಿಸುವ ಬಗ್ಗೆ ಆರೋಗ್ಯ ಸಚಿವರು ಭರವಸೆ ನೀಡುತ್ತಾರೆ. ಈ ಮಧ್ಯೆ ‘ಭಾರತದ ಡಾಲರ್ ಕೋಟ್ಯಧೀಶರ ಸಂಖ್ಯೆ 52ಕ್ಕೇರಿತು. ಜಗತ್ತಿನಲ್ಲಿ ನಾಲ್ಕನೆಯ ಅತಿ ಹೆಚ್ಚು ಶತಕೋಟ್ಯಧೀಶರಿರುವ ದೇಶವೆಂಬ ಹೆಗ್ಗಳಿಕೆ ಭಾರತಕ್ಕೆ ಬಂತು’ ಎಂದು ಮಾಧ್ಯಮಗಳು ಭೋಪರಾಕ್ ಹೇಳುತ್ತವೆ. ಟೈಟಾನಿಕ್ ಮುಳುಗುವ ಸ್ಥಿತಿಯಲ್ಲೂ ಹಡಗಿನ ಆರ್ಕೆಸ್ಟ್ರಾ ತಂಡದವರು ಪಯಣಿಗರನ್ನು ಸಂಗೀತ ಲೋಕದಲ್ಲಿ ತೇಲಿಸಲು ಹೆಣಗಾಡುವ ದೃಶ್ಯ ನೆನಪಿಗೆ ಬರುತ್ತದೆ. ಇಂಥ ವೈರುಧ್ಯಗಳನ್ನು, ಗ್ರಾಮಭಾರತದ ದುರಂತಗಳನ್ನು ಅದಕ್ಕೆ ಕಾರಣವಾದ ಜಾಗತಿಕ ಹುನ್ನಾರಗಳನ್ನು ಎತ್ತಿ ತೋರಿಸಬಲ್ಲ ಸಶಕ್ತ ಚಿಂತಕನೊಬ್ಬ ಇಂಗ್ಲಿಷ್ ಮಾಧ್ಯಮಕ್ಕೆ ಬೇಕಾಗಿತ್ತು. ಸಾಯಿನಾಥ್ ಬಂದರು. ನಮಗೆ ತೀರ ಸಾಮಾನ್ಯ ಎನ್ನಿಸುವ ದೃಶ್ಯಗಳನ್ನು ಸಾಯಿನಾಥ್ ಆಳಕ್ಕೆ ಬಗೆದು ತೋರಿಸಿದರು. ಒಂದು ಉದಾಹರಣೆ ನೋಡಿ: ನಗರದ ಎಲ್ಲ ಅನುಕೂಲಸ್ಥ ಮನೆಗಳಲ್ಲೂ ಕೆಲಸಕ್ಕೆ ಆಳುಗಳಿರುತ್ತಾರೆ. ಅದೇನೂ ನಮಗೆ ವಿಶೇಷ ಅಲ್ಲ. ಅದನ್ನೇ ಸಾಯಿನಾಥ್ ನಮಗೆ ತೋರಿಸುವುದು ಹೇಗೆಂದರೆ- ‘ದಿಲ್ಲಿಯಲ್ಲಿ ಜಾರ್ಖಂಡ್ ರಾಜ್ಯದಿಂದ ಬಂದ ಎರಡು ಲಕ್ಷ ಹೆಣ್ಣಾಳುಗಳು ಮನೆಗೂಲಿಗಳಾಗಿದ್ದಾರೆ. ಅವರೆಲ್ಲ ನೈಸರ್ಗಿಕ ಸಂಪತ್ತು ಚೆನ್ನಾಗಿರುವ ಊರುಗಳಿಂದಲೇ ಹೊರಟು ದಿಲ್ಲಿಗೆ ವಲಸೆ ಬಂದಿದ್ದಾರೆ. ಹೀನಾಯ ಬದುಕು ಮತ್ತು ಶೋಷಣೆಯನ್ನು ಬಿಟ್ಟರೆ ಈ ದಿಲ್ಲಿಯಲ್ಲಿ ಅವರಿಗೆ ಬೇರೇನೂ ಸಿಗಲಾರದು. ಆದರೂ ಇವರಿಗೆ ತಮ್ಮ ಹಳ್ಳಿಯ ದುರ್ಭರ ಪರಿಸ್ಥಿತಿಯಲ್ಲಿ ಏಗುವುದಕ್ಕಿಂತ ಇಲ್ಲಿನ ಅನಾಮಿಕ ಬದುಕೇ ಉತ್ತಮ ಎನ್ನಿಸಿರಬೇಕು. ಕಡೇಪಕ್ಷ ಇಲ್ಲಿ ಹೊಟ್ಟೆತುಂಬುತ್ತದೆ. ತುಸು ಹಣವನ್ನು ಊರಿಗೆ ಕಳಿಸುವ, ನಾಳಿನ ಬಗ್ಗೆ ತುಸು ಆಶಾಕಿರಣವನ್ನು ಉಳಿಸಿಕೊಳ್ಳುವ ಅವಕಾಶ ಇಲ್ಲಿದೆ.’ ಪಿ. ಸಾಯಿನಾಥ್ ಬರಹಗಳ ವಿಶೇಷ ಏನೆಂದರೆ, ಇವರು ಭಾವೋದ್ರೇಕಿತ ವಾಕ್ಯಗಳನ್ನು ಬಳಸುವುದಿಲ್ಲ. ಕೆರಳಿಸುವುದಿಲ್ಲ. ಚೀರುವುದಿಲ್ಲ. ಉದ್ಗಾರವನ್ನೇ ಎತ್ತುವುದಿಲ್ಲ. ಸಾಕಷ್ಟು ಸಂಯಮದಿಂದ, ತಗ್ಗಿದ ಸ್ವರದಲ್ಲೆಂಬಂತೆ ಸ್ಫೋಟಕ ಅಂಕಿ-ಅಂಶಗಳನ್ನು ನೀಡುತ್ತಾರೆ. ಶಬ್ದಗಳ ಡೊಂಬರಾಗಲೀ ಆಡಂಬರವಾಗಲೀ ಇಲ್ಲ. ಅವರ ಬರಹಗಳು ಕೆಂಡದ ಉಂಡೆಗಳಲ್ಲ; ಬದಲಿಗೆ ಹಿಮದಲ್ಲಿ ಹುದುಗಿಸಿಟ್ಟ ಹರಿತ ಚೂರಿ. ಬೇರೆಯವರ ಮಾತುಗಳನ್ನೇ ಕನ್ನಡಿಯಂತೆ ನಿಮ್ಮೆದುರು ಹಿಡಿದು ಸತ್ಯದ ಮುಖವಾಡವನ್ನು ಸರಿಸುತ್ತಾರೆ. ಅದೆಷ್ಟೊ ಬಾರಿ ಕಣ್ಣೆದುರು ಕಂಡ ವಾಸ್ತವಗಳನ್ನು ತೀರ ಹಸಿಹಸಿಯಾಗಿ, ಯಾವುದೇ ಬಗೆಯ ವಿಶ್ಲೇಷಣೆ ಮಾಡದೆ, ಉಪ್ಪು-ಖಾರಗಳ ಸ್ವಂತ ಮಾತುಗಳನ್ನೇ ಸೇರಿಸದೆ ನಿಭರ್ಾವುಕವಾಗಿ ಮುಂದಿಡುತ್ತಾರೆ. ಇನ್ನು ಕೆಲವೊಮ್ಮೆ ಕಣ್ಣಾರೆ ಕಂಡದ್ದನ್ನು, ಅವಿತಿದ್ದನ್ನು ಒಟ್ಟೊಟ್ಟಿಗೆ ಇಟ್ಟು ನಿಮ್ಮನ್ನು ದಂಗುಬಡಿಸುತ್ತಾರೆ. ವಿದರ್ಭದ ಹತ್ತಿ ಬೆಳೆಗಾರರ ಸಂಕಷ್ಟಗಳ ಕತೆಯನ್ನೇ ನೋಡಿ. ಸಾಯಿನಾಥ್ ರಂಥ ಕೆಲವರ ನಿರಂತರ ವರದಿಯಿಂದಾಗಿ ಅಲ್ಲಿನ ಕಟುವಾಸ್ತವಗಳು ಕೇಂದ್ರದ ಗಮನಕ್ಕೆ ಬಂದಾಗ ಪ್ರಧಾನ ಮಂತ್ರಿಯವರು 2006ರಲ್ಲಿ ವಿದರ್ಭಕ್ಕೆ ವಿಶೇಷ ನೆರವಿನ ಪ್ಯಾಕೇಜನ್ನು ಘೋಷಿಸುತ್ತಾರೆ. ಇತರ ನಾಲ್ಕಾರು ಇಂಗ್ಲಿಷ್ ಪತ್ರಿಕೆಗಳ ವರದಿಗಾರರೂ ತುಸು ಎಚ್ಚೆತ್ತು ವಿದರ್ಭದ ಪರಿಸ್ಥಿತಿಯನ್ನು ನೋಡಲೆಂದು ನಾಗಪುರಕ್ಕೆ ಬಂದಿಳಿಯುತ್ತಾರೆ. ಒಟ್ಟೂ ಆರು ಮಂದಿ ಹಳ್ಳಿಯ ಕಡೆ ಹೆಜ್ಜೆ ಹಾಕುತ್ತಾರೆ. ಅದೇ ಸಂದರ್ಭದಲ್ಲಿ (2006ರಲ್ಲಿ) ಮುಂಬೈಯಲ್ಲಿ ಲಕ್ಮೆ ಫ್ಯಾಶನ್ ವೀಕ್ ಪ್ರದರ್ಶನ ನಡೆದಿರುತ್ತದೆ. ದೇಶದ ನಾನಾ ಭಾಗಗಳಿಂದ ಬಂದ ಒಟ್ಟೂ 512 ಮಾಧ್ಯಮ ಪ್ರತಿನಿಧಿಗಳು ಅಲ್ಲಿನ ಶೋ ನೋಡಲೆಂದು ವಾರವಿಡೀ ಜಮಾಯಿಸಿರುತ್ತಾರೆ. ಜತೆಗೆ ಪ್ರತಿದಿನವೂ ನೂರು ಮಂದಿ ವರದಿಗಾರರು ನಿತ್ಯದ ಪಾಸ್ ಪಡೆದು ಬರುತ್ತಾರೆ. ಕ್ಯಾಟ್ವಾಕ್ ಮಾಡುವ ರೂಪದಶರ್ಿಯರನ್ನು ನೋಡಲೆಂದು, ವೇದಿಕೆಯ ಬಳಿ ಛಾಯಾಗ್ರಾಹಕರ, ವರದಿಗಾರರ ನೂಕು ನುಗ್ಗಲು ನಡೆದಿರುತ್ತದೆ. ಹತ್ತಿಯ ಉಡುಪುಗಳ ಪ್ರಚಾರಕ್ಕೆಂದೇ ವಿಶೇಷ ಆದ್ಯತೆ ಕೊಟ್ಟ ‘ಫ್ಯಾಶನ್ ಶೋ’ ಬಗ್ಗೆ ಎಲ್ಲೆಡೆ ರಸವತ್ತಾದ ವರದಿಗಳು ಪ್ರಕಟವಾಗುತ್ತವೆ. ಆದರೆ ಅದೇ ವೇಳೆಯಲ್ಲಿ ಅಲ್ಲಿಂದ ಒಂದೂವರೆ ಗಂಟೆಗಳಷ್ಟು ದೂರದಲ್ಲಿ ಹತ್ತಿ ಬೆಳೆಯ ವೈಫಲ್ಯ ಮತ್ತು ಬೆಲೆಕುಸಿತದಿಂದ ದಿವಾಳಿಯೆದ್ದ ರೈತರು ಮಾನ ಮುಚ್ಚಿಕೊಳ್ಳಲೂ ಆಗದೆ ನೇಣಿಗೆ ಶರಣಾಗುತ್ತಿರುವುದರ ಬಗ್ಗೆ ಅಧ್ಯಯನ ವರದಿ ತಯಾರಿಸಲೆಂದು ಕೇವಲ ಆರು ಪತ್ರಕರ್ತರು ಹಳ್ಳಿಗಳಲ್ಲಿ ಓಡಾಡುತ್ತಿರುತ್ತಾರೆ. ಒಂದು ಕಡೆ ಹತ್ತಿಯ ಬಟ್ಟೆಯ ಝಗಮಗಿಸುವ ಆಡಂಬರದ ಶೋ. ಇನ್ನೊಂದು ಕಡೆ ಹತ್ತಿಯ ಉತ್ಪಾದಕರ ಕುಟುಂಬಗಳಲ್ಲಿ ಶೋಕಾಚರಣೆ. ಈ ವೈರುಧ್ಯಗಳೇ ಪತ್ರಿಕೆಗಳ ಮುಖಪುಟಗಳಲ್ಲಿ ಬರಬೇಕಿತ್ತು. ‘ಇದಕ್ಕಿಂತ ಮುಖ್ಯವಾದ ಸುದ್ದಿ ನಮ್ಮ ಪತ್ರಿಕೆಗಳ ಮುಖಪುಟಕ್ಕೆ ಬೇರೇನಿದ್ದೀತು?’ ಎಂದು ತಣ್ಣಗೆ ಕೇಳುತ್ತಾರೆ ಸಾಯಿನಾಥ್. ಮಾಧ್ಯಮಗಳಿಗೆ ಕಾಣುವ ಜಗತ್ತು ಮತ್ತು ವಾಸ್ತವ ಜಗತ್ತಿನ ನಡುವಣ ಕಂದರವನ್ನು ಎತ್ತಿ ತೋರಿಸಲು ಇದಕ್ಕಿಂತ ಉತ್ತಮ ಉದಾಹರಣೆ ಬೇರೆ ಯಾವುದಿದ್ದೀತು? ಬೇರೆ ಉದಾಹರಣೆಗಳನ್ನು ಸ್ವತಃ ಸಾಯಿನಾಥ್ ಅವರೇ ಕೊಡುತ್ತಾರೆ. ಮಂಡ್ಯದ ಬಳಿಯ ರೈತವಿಧವೆ ಜಯಲಕ್ಷ್ಮಮ್ಮನಿಗೆ ಪ್ರತಿ ತಿಂಗಳಿಗೆ ನಾಲ್ಕು ಕಿಲೊ ಅಕ್ಕಿಯನ್ನು ಕರ್ನಾಟಕ ಸಾರ್ವಜನಿಕ ವಿತರಣ ವ್ಯವಸ್ಥೆಯ ಮೂಲಕ ನೀಡಲಾಗುತ್ತದೆ. ಅಂದರೆ ಪ್ರತಿ ಊಟಕ್ಕೆ 45 ಗ್ರಾಮ್ ಅಕ್ಕಿ ಅಷ್ಟೆ. ಆದರೆ ಬೆಂಗಳೂರಿನ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗೆ ಪ್ರತಿ ಊಟಕ್ಕೆ 710 ಗ್ರಾಮ್ ಅಕ್ಕಿ ನೀಡಲಾಗುತ್ತದೆ. ಅದೂ ಆತನಿಗೆ ಉಚಿತವಾಗಿ! ರೈತರ ಸಾಲ ಮನ್ನಾ ಮಾಡಲೆಂದು ಕೇಂದ್ರ ಸರಕಾರ 2007ರಲ್ಲಿ ಒಮ್ಮೆ ಮಾತ್ರ 60 ಸಾವಿರ ಕೋಟಿ ರೂಪಾಯಿಗಳನ್ನು ತೆಗೆದಿರಿಸಿದಾಗ ಎಲ್ಲ ಮಾಧ್ಯಮಗಳಲ್ಲೂ ಭಾರೀ ಚರ್ಚೆ ನಡೆದವು. ರೈತರ ಬಗ್ಗೆ ಸರಕಾರಕ್ಕಿರುವ ಕಾಳಜಿಯನ್ನು ಹಾಡಿ ಹೊಗಳುವ ವರದಿಗಳು ಬಂದವು. ಆದರೆ 1991ರಿಂದ ಪ್ರತಿವರ್ಷವೂ ಕಾರ್ಪೊರೇಟ್ ಬಿಸಿನೆಸ್ ಕಂಪನಿಗಳಿಗೆ ಸರಾಸರಿ 40 ಸಾವಿರ ರೂಪಾಯಿಗಳ ವಿನಾಯಿತಿಯನ್ನು ಘೋಷಿಸಲಾಗುತ್ತಿದೆ. ಪ್ರತಿವರ್ಷವೂ! ಆದರೆ ಅದರ ವಿವರ-ವಿಶ್ಲೇಷಣೆಗಳು ಪ್ರಕಟವಾಗುವುದೇ ಇಲ್ಲ. ಇತಿಹಾಸದುದ್ದಕ್ಕೂ ‘ಉನ್ನತಶ್ರೇಣಿಯ ಪತ್ರಿಕೋದ್ಯಮ’ ಎಂದರೆ ಏನು ಅನ್ನುವುದಕ್ಕೆ ಒಂದು ಮಾನದಂಡ ಇದೆ. ಆ ಮಾನದಂಡ ಏನು ಅಂದರೆ ಅತ್ಯಂತ ಮಹತ್ವದ ಸಾಮಾಜಿಕ ಬದಲಾವಣೆಗಳು ಘಟಿಸುತ್ತಿರುವಾಗ ಅದಕ್ಕೆ ಪತ್ರಕರ್ತರು ಎಷ್ಟರಮಟ್ಟಿಗೆ ಸಾಕ್ಷಿಯಾಗಿದ್ದರು? ಪ್ರಸ್ತುತರಾಗಿದ್ದರು? ಎಷ್ಟರಮಟ್ಟಿಗೆ ಸೂಕ್ತವಾಗಿ ಸ್ಪಂದಿಸಿದ್ದರು? ನಮ್ಮ ಕಾಲಘಟ್ಟದಲ್ಲಿ ಒಂದು ಯುಗಪಲ್ಲಟ ಬದಲಾವಣೆ ನಡೆಯುತ್ತಿದೆ ಎಂಬುದನ್ನು ಗ್ರಹಿಸುವ ಸಾಮರ್ಥ್ಯ ಎಷ್ಟು ಮಂದಿಗಿದೆ? ಎಂಬುದರ ಮಾನದಂಡ ಅದು. ನಮ್ಮ ಮಾಧ್ಯಮಗಳ ತಾಕತ್ತು ನೆಲಕಚ್ಚಿದೆ. ಹೊಲಗಳ ಕಂಪನೀಕರಣ, ವಿದೇಶೀ ಆಹಾರಸರಕುಗಳ ಮುಕ್ತ ಆಮದು ಇವೇ ಮುಂತಾದ ಹುನ್ನಾರಗಳಿಂದಾಗಿ ಕಂಗೆಟ್ಟ ರೈತರು ಕೋಟಿಗಟ್ಟಲೆ ಸಂಖ್ಯೆಯಲ್ಲಿ ಕೃಷಿಗೆ ವಿದಾಯ ಹೇಳಿ ನಗರಗಳಿಗೆ ಬರತೊಡಗಿದ್ದಾರೆ. ಈ ಪ್ರವಾಹವನ್ನು ನೋಡಿಯೂ ನೋಡದಂತೆ, ತೋರಿಸಿಯೂ ತೋರಿಸದಂತೆ ಮುಂದೆ ಸಾಗುವ ಮಾಧ್ಯಮಗಳನ್ನು ಏನೆಂದು ಕರೆಯೋಣ? ಅಣೆಕಟ್ಟೆಯ ಕಿರುಬಿರುಕುಗಳಲ್ಲಿ ಕಂಡೂ ಕಾಣದಂತೆ ಆರಂಭವಾಗಿರುವ ಕಿರುಪ್ರವಾಹವೇ ಒಂದು ದಿನ ಕಟ್ಟೆಯೊಡೆದು ನುಗ್ಗುವ ಪ್ರಳಯಾಂತಕ ಧಾರೆಯಾದೀತೆಂಬ ದೂರಂದಾಜು ಇರಬೇಕಲ್ಲವೆ? ಯಾರಿಗಿದೆ? ಸಾಯಿನಾಥ್ ಈ ಪ್ರಶ್ನೆಯನ್ನು ಎತ್ತಿಕೊಂಡೇ ಹಳ್ಳಿಗಳನ್ನು ಸುತ್ತಾಡುತ್ತ ಬರೆದ ಕೆಲವು ಲೇಖನಗಳು ಇಲ್ಲಿವೆ. ‘ಹಾಲು ಮತ್ತು ರೇಷ್ಮೆಯ ನಾಡು’ ಎಂದು ಕರೆಸಿಕೊಳ್ಳುತ್ತಿದ್ದ ಹಿಂದೂಪುರದಲ್ಲಿ ಈಗ ಎರಡೂ ತಳಕಚ್ಚಿವೆ. ಕಾಫಿ ಮತ್ತು ಕಾಳುಮೆಣಸಿನ ನಾಡೆಂದು ಪ್ರಸಿದ್ಧಿ ಪಡೆದಿದ್ದ ಕೇರಳದ ವೈನಾಡು ಪ್ರದೇಶದಲ್ಲಿ ಸಾಲು ಸಾಲು ಕೃಷಿಕರು ನೇಣಿಗೆ ತಲೆ ಕೊಟ್ಟಿದ್ದಾರೆ. ವಿದರ್ಭದಲ್ಲಿ ‘ಸಕ್ರಮ’ ಬಿಟಿ ಹತ್ತಿ ಎಂಬುದು ದೊಡ್ಡ ಹಿಡುವಳಿದಾರರನ್ನು ನಾಶ ಮಾಡಿದರೆ, ‘ಅಕ್ರಮ’ ಬಿಟಿ ಹತ್ತಿ ಚಿಕ್ಕ ಹಿಡುವಳಿದಾರರನ್ನು ನಾಶ ಮಾಡಿದೆ. ಇಂಥ ದುರಂತಗಳನ್ನೆಲ್ಲ ಹಿಂದಿಕ್ಕುವಂತೆ ಇದೀಗ ನೀರಿನ ಖಾಸಗೀಕರಣದ ಪ್ರಕ್ರಿಯೆ ಆರಂಭವಾಗಿದೆ. ದೇಶಕ್ಕೆ ಅನ್ನ ಕೊಡುತ್ತಿದ್ದ ರೈತನ ಅನ್ನದ ಬಟ್ಟಲನ್ನೇ ಕಸಿಯುವ ಯತ್ನ ಒಂದು ಕಡೆ ನಡೆದಿದೆ. ಅವನಿಗೆ ನೀರೂ ಸಿಗದಂತೆ ಮಾಡುವ ಯತ್ನ ಮತ್ತೊಂದು ಕಡೆ ನಡೆದಿದೆ. ಈ ಪುಸ್ತಕದ ಪುಟಪುಟಗಳ ಅಂಕಿ ಸಂಖ್ಯೆಗಳಲ್ಲಿ ಮತ್ತು ತಣ್ಣನೆಯ ಹೇಳಿಕೆಗಳಲ್ಲಿ ಹೇರಳ ಸ್ಫೋಟಕ ಸಾಮಗ್ರಿಗಳಿವೆ. ನಿಧಾನವಾಗಿ, ಹುಷಾರಾಗಿ ಓದುತ್ತ ಸಾಗಬೇಕು

ಟಿ ಎಲ್ ಕೃಷ್ಣೇಗೌಡ ಅವರು ಅನುವಾದಿಸಿರುವ ಸಾಯಿನಾಥ್ ಬರಹಗಳ ಸಂಕಲನಕ್ಕೆ ನಾಗೇಶ್ ಹೆಗಡೆ ಬರೆದ ಮುನ್ನುಡಿ. ಚಿಂತನ ಪ್ರಕಾಶನ ಪ್ರಕಟಿಸಿರುವ ಈ ಕೃತಿಯ ಹೆಸರು- ಬಿತ್ತಿದ್ದೀರಿ.. ಅದಕ್ಕೆ ಅಳುತ್ತಿದ್ದೀರಿ…

 ]]>

‍ಲೇಖಕರು G

June 30, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

4 ಪ್ರತಿಕ್ರಿಯೆಗಳು

 1. jagadishkoppa

  ಪ್ರಿಯ ನಾಗೇಶ್ ಹೆಗ್ಡೆಯವರಿಗೆ, ಹೇಗಿದ್ದೀರಾ? ನನ್ನ ತಲೆಮಾರಿನ ಪತ್ರಕರ್ತರಲ್ಲಿ ಪರಿಸರ ಅಥವಾ ಗ್ರಾಮೀಣ ಬದುಕಿನ ಬಗ್ಗೆ ಆಸಕ್ತಿ ಉಳಿದುಕೊಂಡಿದ್ದರೆ, ಅದಕ್ಕೆ ನೀವೂ ಮತ್ತು ಸಾಯಿನಾಥ್ ರಂತಂತಹ ಬದ್ಧತೆಯುಳ್ಳ ಪತ್ರಕರ್ತರು ಕಾರಣ. ಕನ್ನಡ ಪತ್ರಿಕೋದ್ಯಮಕ್ಕೆ ವಿಶೇಷವಾಗಿ ವಿಜ್ಙಾನ ಮತ್ತು ಪರಿಸರಕ್ಕೆ ನಿಮ್ಮ ಕೊಡುಗೆಯನ್ನು ಮರೆಯಲು ಸಾಧ್ಯವುಂಟೆ?
  ಜಗದೀಶ್ ಕೊಪ್ಪ, ಧಾರವಾಡ.

  ಪ್ರತಿಕ್ರಿಯೆ
  • D.RAVI VARMA

   jagadiish koppad sir hegiddiiri, nimma contact number tilisi nannadu 9902596614

   ಪ್ರತಿಕ್ರಿಯೆ
 2. sangamesh menasinakai

  ನಾಗೇಶ್ ಹೆಗ್ಡೆ ಅವರ ಬರೆಹಗಳ ಓದುಗರಲ್ಲಿ ನಾನೂ ಒಬ್ಬ. ಅವರಿಂದ ಪರೋಕ್ಷ ಪ್ರೇರಣೆ ಪಡೆದ ಅಸಂಖ್ಯ ಪತ್ರಕರ್ತರಲ್ಲಿಯೂ ಒಬ್ಬ. ಆದರೆ ಅವರ ಈ ಕೆಳಗಿನ ವಾಕ್ಯಗಳು ಸಂಪೂರ್ಣ ಸತ್ಯ ಅಲ್ಲ ಅನ್ನೋದು ನನ್ನ ಅಭಿಮತ. ಇಂಗ್ಲಿಷೇತರ, ಭಾರತಿಯ ಭಾಷೆಯಿಂದ ಬಂದ ನನ್ನಂಥ ಅನೇಕ ಪತ್ರಕರ್ತರು ನಾಗೇಶ್ ಅವರು ಭಾವಿಸಿರುವ ಅಂತರವನ್ನು ತೊಲಗಿಸಲು ಯತ್ನಿಸುತ್ತಿದ್ದೇವೆ. ಪತ್ರಿಕೆಯ ಸಂಪಾದಕರಿಂದ ಅಗತ್ಯ ಬೆಂಬಲವೂ ದೊರೆಯುತ್ತಿದೆ.
  Nagesh Hegade’s sentences: `ಅದರಲ್ಲಂತೂ ಇಂಗ್ಲಿಷ್ ಪತ್ರಕರ್ತರಿಗೆ ಹಳ್ಳಿಗಳ ದೂಳು, ಸೆಗಣಿ ವಾಸನೆ, ಸವುಳು ನೀರು ಎಲ್ಲವೂ ಅಲರ್ಜಿ.’ `ಇಂಗ್ಲಿಷ್ ಪತ್ರಿಕೆಗಳು ಸಾಮಾನ್ಯವಾಗಿ ಕೃಷಿಕರ ಬವಣೆಗಳ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. ‘ಬರೆದರೆ ಯಾರೂ ಓದುವುದಿಲ್ಲ’ ಎಂಬ ದೋರಣೆ ಅವುಗಳದ್ದು.’

  ಪ್ರತಿಕ್ರಿಯೆ
 3. D.RAVI VARMA

  ಇಂಗ್ಲಿಷ್ ಪತ್ರಕರ್ತರಿಗೆ ಹಳ್ಳಿಗಳ ದೂಳು, ಸೆಗಣಿ ವಾಸನೆ, ಸವುಳು ನೀರು ಎಲ್ಲವೂ ಅಲರ್ಜಿ.’ `ಇಂಗ್ಲಿಷ್ ಪತ್ರಿಕೆಗಳು ಸಾಮಾನ್ಯವಾಗಿ ಕೃಷಿಕರ ಬವಣೆಗಳ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. ‘ಬರೆದರೆ ಯಾರೂ ಓದುವುದಿಲ್ಲ’ ಎಂಬ ದೋರಣೆ ಅವುಗಳದ್ದು.ನಾಗೇಶ್ ಹೆಗ್ಡೆ ಅವರ ಪುಸ್ತಿಕೆಗಳನ್ನು, ಅವರ ಚಿಂತನೆಗಳನ್ನು ಓದುತ್ತಿರುವವರಲ್ಲಿ ನಾನು ಒಬ್ಬ, ಈ ನೆಲದ,ಬಗ್ಗೆ,ಜಲದಬಗ್ಗೆ, ಇಲ್ಲಿಯ ಪರಿಸರ, ಸಾಮಾಜಿಕ ಬದುಕಿನ ಬಗ್ಗೆ ಅತಿ ಘಮ್ಬೀರ ಕಾಳಜಿ ಇಟ್ಟುಕೊಂಡಿರುವ ಕೆಲವೇ ಚಿಂತಕರಲ್ಲಿ ನಾಗೇಶ್ ಹೆಗ್ಡೆ ತುಂಬಾ ಪ್ರಮುಖರಾಗುತ್ತಾರೆ ಎನ್ನುವುದಂತೂ ಸತ್ಯ. ಆದರೆ ಅವರ ಈ ಹೇಳಿಕೆ ತುಂಬಾ ಭಾವುಕರಾಗಿ ಹೇಳಿದ ಮಾತೆನಿಸುತ್ತದೆ, ನಮಗೆ ಇಂಗ್ಲಿಷ್ ಎಂದರೆ ಅಲೆರ್ಜೀ ,ಅಸ್ತೆ ಅಲ್ಲದೆ ಕನ್ನಡವನ್ನು ಪ್ರೀತೀಂದ ಎತ್ತಿಕೊಂದಸ್ತು ಪ್ರೀತೀಂದ ಇಂಗ್ಲೀಷನ್ನು ಎತ್ತಿಕೊಲ್ಲಲರೆವು.ಇನ್ನು ಒಂದರ್ಥದಲ್ಲಿ ಅದು ಬೇಗ ಅರಗಲಾರದೇನೋ, ಶ್ರೀ ಸಾಯಿನಾಥ್ ಅವರ ಹಿಂದೂ ಪತ್ರಿಕೆಯಲ್ಲಿ ಬಂದ ಲೇಖನಗಳು, outlooknalli ಬಂದ ಲೇಖನಗಳಾಗಲೀ,.ವೀಕ್ ಪತ್ರಿಕೆಯಲ್ಲಿ ಬರುತ್ತಿರುವ ಲೇಖನಗಳಾಗಲೀ, ಹೀಗೆ ಹೀಗೆ , ಇನ್ನು ಹಲವಾರು ಪತ್ರಿಕೆಗಳಲ್ಲಿ ಬರುತ್ತಿರುವ ಇಂಗ್ಲಿಷ್ ಲೇಖನಗಳು ನಿಜಕ್ಕೂ ಈ ನೆಲದ ಮಣ್ಣಿನ ವಾಸನೆಯನ್ನು ,ಇಲ್ಲಿಯ ಬರ್ಬರತೆಯನ್ನು, ಶೋಷಣೆಯನ್ನು , ಆರ್ಥಿಕ ಅಸಮಾನತೆಯನ್ನು ಹೊರಹಾಕುವಲ್ಲಿ ಕೆಲಸ ಮಾಡುತ್ತಿವೆ. ಆ ನಿಟ್ಟಿನಲ್ಲಿ ಒಂದು ಗ್ಯಾಪ್ create ಆಗಿರಬಹುದಸ್ಟೆ . ಆ ಪತ್ರಿಕೆಗಳಲ್ಲಿ ಬರುತ್ತಿರುವ ಚಿಂತನೆಗಳು, ಕಾಳಜಿಗಳು , ಕೆಲವು ಬರಹಗಾರರ ಸಮಯೋಚಿತ ಆಲೋಚನೆಗಳು ನಮಗೆ ಮುತ್ತುತ್ತಿಲ್ಲವೇನೋ ಎನ್ನುವ ಅನುಮಾನ ನನಗೆ ……..
  ರವಿ ವರ್ಮ ಹೊಸಪೇಟೆ ’

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: