ನಾಗೇಶ್ ಹೆಗಡೆ ಬರೆಯುತ್ತಾರೆ: ಪತ್ರಿಕೆ ಭಾಷೆಯಲ್ಲಿ ಇವರೊಬ್ಬ"ವೆಂಡರ್"

ಮುಂಜಾನೆಯ ಬೆಡಗಿನ ಬೆಳಕು
-ನಾಗೇಶ್ ಹೆಗಡೆ
Vender kannu
ಜಗವೆಲ್ಲ ಮಲಗಿರುವಾಗ ದಿನಪತ್ರಿಕೆಯ ಸಿಬ್ಬಂದಿ ಅವೊತ್ತಿನ ವರದಿಯ ಕೊನೆಯ ವಾಕ್ಯವನ್ನೂ ಪುಟಕ್ಕೆ ಜೋಡಿಸಿ ಮುದ್ರಣಕ್ಕೆ ಕಳುಹಿಸಿದ ಮೇಲೆ ಅಂದಿನ ಮಟ್ಟಿಗೆ ಪತ್ರಿಕೆಯನ್ನು “ಮಲಗಿಸುತ್ತಾರೆ” ಇಂಗ್ಲೀಷ್‍ನಲ್ಲಿ ಇದಕ್ಕೆ  “ಪುಟ್ ಟು ಬೆಡ್” ಅನ್ನುತ್ತಾರೆ. ತೂಕಡಿಸುವ ಮಗುವನ್ನು ತೊಟ್ಟಿಲಲ್ಲಿ ಹೊದಿಕೆ ಹೊದಿಸಿ ಮಲಗಿಸಿದ ಹಾಗೆ.
ಮುಂಜಾನೆ ನಸುಕು ಹರಿಯುವ ಮೊದಲೇ ಅದೇ ಗರಿ ಗರಿ ಪತ್ರಿಕೆ ನಮ್ಮ ಮನೆಯ ಬಾಗಿಲಲ್ಲಿ ಮಲಗಿರುತ್ತದೆ. ಅಲ್ಲಿ ಮುದ್ರಣಮನೆಯಲ್ಲಿ ಮಲಗಿದ ಪತ್ರಿಕೆ ಇಲ್ಲಿ ಬಂದು ಮಲಗಿದ್ದು ಹೇಗೆ? ದೇವಕಿಯ ಬಸಿರಿನಿಂದ ಭೂಮಿಗೆ ಇಳಿದ ಬೇಬಿಕೃಷ್ಣನನ್ನು ಸರಿರಾತ್ರಿಯಲ್ಲಿ ಜೈಲಿನಿಂದ ವಸುದೇವ ಸಾಗಿಸಿ ನಂದಗೋಪನ ಮನೆಗೆ ಒಪ್ಪಿಸಿದ ಹಾಗೆ?
ಕತ್ತಲ ಸಾಮ್ರಾಜ್ಯದ ಆ ವಾಸ್ತವಗಳೆಲ್ಲಾ ಈ ಸಂಕಲನದ ಪುಟಪುಟಗಳಲ್ಲಿ ಬಿಚ್ಚಿಕೊಳ್ಳುತ್ತವೆ. ಬೆಳಗಿನ ಜಾವದ ಲ್ಲಿ ನಗರದ ಬೀದಿಗಳ ಸಂದುಮೂಲೆಗಳ ನಸುಗತ್ತಲಿನಲ್ಲಿ ದಿನಪತ್ರಿಕೆಗಳನ್ನು ಇಳಿಸುವ, ಬಂಡಲ್ ಬಿಚ್ಚಿ ವಿಂಗಡಿಸುವ, ಪುರವಾಣಿಗಳನ್ನು ಕರಪತ್ರಗಳನ್ನು ತೂರಿಸಿ ಮತ್ತೆ ಬಂಡಲ್ ಕಟ್ಟಿ ಸೈಕಲ್ ಮೇಲೆ ಜೋಡಿಸುವ ಚಕಚಕ ಸರಣಿ ಘಟನೆಗಳ ಅಗೋಚರ ಜಗತ್ತೇ ಇಲ್ಲಿದೆ. ಅಲ್ಲಿ ನಡೆಯುವ ತಮಾಷೆಗಳು, ತಿಕ್ಕಾಟಗಳು, ವಿಷಗಳಿಗೆಗಳು, ರಸಗಳಿಗೆಗಳನ್ನು ಶಿವು ಇಲ್ಲಿ ಕ್ರಮವಾಗಿ ಪೋಣಿಸಿದ್ದಾರೆ. ಡೆಲಿವರಿ ಮುಂಚಿನ ಆ ಕ್ಷಣಗಳು ಒಂದರ್ಥದಲ್ಲಿ ಪ್ರಸೂತಿ ಗೃಹದಲ್ಲಿ ಆತಂಕದ, ಅವಸರದ, ಸಂಭ್ರಮದ, ತಲ್ಲಣದ ಗಳಿಗೆಗಳಂತೆಯೇ ಇರುತ್ತವೆ.
ನಮಗೇನೋ ದಿನಪತ್ರಿಕೆ ಡೆಲಿವರಿ ಆಗಿದ್ದಷ್ಟೇ ಗೊತ್ತು. ಪತ್ರಿಕೆ ಬರುವುದು ತುಸು ತಡವಾದರೆ, ಅದನ್ನು ತಂದ ಹುಡುಗನ ಮೇಲೆ ಹರಿಹಾಯುತ್ತೇವೆ. ಪುರವಾಣಿ ಬರಲಿಲ್ಲವೆಂದು ದೂರುತ್ತೇವೆ. “ಪ್ರಜಾವಾಣಿ”ಯ ಬದಲಿಗೆ ಎಲ್ಲೋ ಅಪರೂಪಕ್ಕೆ ಅಪ್ಪಿತಪ್ಪಿ ಬೇರೊಂದು ಹಾಕಿದ್ದಾನೆಂದು ಬಡಪಾಯಿಯನ್ನು ತರಾಟೆಗೆ ತೆಗೆದುಕೊಳ್ಳುತ್ತೇವೆ. ತಿಂಗಳ ಕೊನೆಯಲ್ಲಿ ಹಣ ಎಣಿಸಿ ಕೊಡುವಾಗ ಹಿಂದಿನ ಯಾವುದೋ ಸಣ್ಣಪುಟ್ಟ ಲೋಪವನ್ನು ಎತ್ತಿಕೊಂಡು ತಕರಾರು ಮಾಡುತ್ತೇವೆ. ಗೊಣಗುತ್ತೇವೆ. ಪತ್ರಿಕೆಯ ವಿತರಣೆಯ ಹೊಣೆ ಹೊತ್ತ ಏಜೆಂಟನ ಮೇಲೆ ಕೂಗಾಡುತ್ತೇವೆ.
ಶಿವು ಒಬ್ಬ ಏಜೆಂಟ್. ಪತ್ರಿಕೆಗಳ ಪ್ರಸರಣದ ಪರಿಭಾಷೆಯಲ್ಲಿ ಇವರೊಬ್ಬ “ವೆಂಡರ್”. ಇವರ ಕಾಯಕ ಬೆಳಿಗ್ಗೆ ನಾಲ್ಕಕ್ಕೆ ಆರಂಭವಾಗಿ ಏಳಕ್ಕೆ ಮುಗಿದುಹೋಗುತ್ತದೆ. ಸೂರ್ಯನನ್ನು ಎಬ್ಬಿಸಿ ಮನೆಮನೆಗೆ ಅಕ್ಷರಗಳ ಬೆಳಕನ್ನು ವಿತರಿಸಿ ನಂತರ ಇವರು ವೇಷ ಬದಲಿಸಿ ಬೇರೆಯದೇ ಜಗತ್ತಿನ ಒಡೆಯರಾಗಲು ಹೊರಡುತ್ತಾರೆ. ಫೋಟೊಗ್ರಫಿ ಮಾಡುತ್ತಾರೆ. ಅಲ್ಲಿ ಮತ್ತೆ  ಸೂರ್ಯನ ಸಹವಾಸ. ಗುಡ್ಡಬೆಟ್ಟ, ನೀರು ನೆರಳು ಬೆಳಕಿನಲ್ಲಿ ಛಾಯಾಬಿಂಬಗಳನ್ನು ಸೆರೆ ಹಿಡಿಯುತ್ತಾ ಇಂದು ಶಿವು ಅಂದರೆ ಅನೇಕ ರಾಷ್ಟ್ರೀಯ, ಅಂತರರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿಗಳನ್ನು ಪಡೆದ ಪ್ರವೀಣ. ಅದು ಸಾಲದೆಂಬಂತೆ, ತಮ್ಮ ಫೋಟೊಗ್ರಫಿಯ ಚೆಲುವು ಗೆಲುವುಗಳೊಂದಿಗೆ ಊರೂರು ಸುತ್ತಾಟದ ಅನುಭವಗಳನ್ನು ಬ್ಲಾಗ್ ಮೂಲಕ ಹರಿಬಿಡುತ್ತಿರುವ ಸೊಗಸುಗಾರ.
ಸುಮಾರು ಹತ್ತು ವರ್ಷಗಳ ಹಿಂದೆ ಇವರು ಮೊದಲ ಬಾರಿಗೆ ತಾನು ಸೆರೆಹಿಡಿದ ವರ್ಣಮಯ ಪೋಟೊಗಳೊಂದಿಗೆ “ಪ್ರಜಾವಾಣಿ” ಕಛೇರಿಗೆ ಬಂದಾಗ ಇವರಲ್ಲೊಬ್ಬ ಬರಹಗಾರನು ಅವಿತಿದ್ದಾನೆಂಬ ಕಲ್ಪನೆ ನನಗಿರಲಿಲ್ಲ. ಶಾಯಿ ತುಂಬಿದ ಪೆನ್ನನ್ನು ಕೊಡವಿ ಕೊಡವಿ ಹನಿ ಸಿಡಿಸಿದ ನಂತರವೇ ಸಲೀಸಾಗಿ ಅಕ್ಷರಗಳು ಮೂಡುತ್ತವಲ್ಲ. “ಲೇಖನ ಬರೆಯಲಾಗದಿದ್ದರೆ ಪತ್ರಿಕಾ ಕಛೇರಿಗೆ ಬರಲೇಬೇಡಿ” ಎಂದೆಲ್ಲಾ ಬೆದರಿಸಿ ಇವರನ್ನು ಸಾಕಷ್ಟು ಕೊಡವಿ ಹಿಂಸಿಸಿದ್ದಕ್ಕೆ ನನಗೇನು ಬೇಸರವಿಲ್ಲ. ಅವರು ಮೂಡಿಸಿದ ಚಿತ್ತಾರಗಳು ಈಗ ನಿಮ್ಮೆದುರು ಇವೆ.
ಕನ್ನಡದ ಮಟ್ಟಿಗೆ ಇಂಥದೊಂದು ಕೃತಿ ಹೊಸದಂತೂ ಹೌದು. ಪತ್ರಿಕೆಗಳ ವಿತರಣೆಯ ವಿಶಿಷ್ಟ ಕಾರ್ಯಚರಣೆಯ ಬಗ್ಗೆ ಪತ್ರಿಕೆಗಳಂತೂ ಬರೆಯುವುದಿಲ್ಲ. ಅಬ್ದುಲ್ ಕಲಾಂನಿಂದ ಹಿಡಿದು ಅದೆಷ್ಟೋ ಹೆಸರಾಂತ ವ್ಯಕ್ತಿಗಳು[ಅಮೆರಿಕದ ಅದ್ಯಕ್ಷರಾಗಿದ್ದ ಐಸೆನ್‍ಹೊವರ್, ಹ್ಯಾರಿ ಟ್ರೂಮನ್, ಚಿತ್ರಲೋಕದ ವಾಲ್ಟ್ ಡಿಸ್ನಿ, ವಿಜ್ಞಾನ ಕತೆಗಾರ ಐಸ್ಯಾಕ್ ಅಸಿಮೊವ್] ತಮ್ಮ ಬಾಲ್ಯದ ದಿನಗಳಲ್ಲಿ ಚಳಿಮಳೆಯನ್ನು, ನಾಯಿಭಯವನ್ನು ಲೆಕ್ಕಿಸದೆ ಮನೆಮನೆಗೆ ಸುತ್ತಾಡಿ ಪೇಪರಿ ವಿತರಿಸಿ, ಪುಡಿಗಾಸು ಸಂಪಾದಿಸಿ ಎತ್ತರೆಕ್ಕೇರಿದ್ದರ ಬಗ್ಗೆ ನಾವು ಓದಿದ್ದೇವೆ. ಆದರೆ ಅಷ್ಟೇ ಆಳಕ್ಕಿಳಿದು ನಸುಗತ್ತಲಿನ ಆ ಪ್ರಪಂಚದತ್ತ ಬೆಳಕು ಬೀರಿದವರು ಮಾತ್ರ ಕಮ್ಮಿ.
ಅಂಥದ್ದೊಂದು ಚುಮುಚುಮು ಬೆಳಕು ಇಲ್ಲಿದೆ.

‍ಲೇಖಕರು avadhi

November 13, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

2 ಪ್ರತಿಕ್ರಿಯೆಗಳು

  1. ರಂಜಿತ್

    >>”ದೇವಕಿಯ ಬಸಿರಿನಿಂದ ಭೂಮಿಗೆ ಇಳಿದ ಬೇಬಿಕೃಷ್ಣನನ್ನು ಸರಿರಾತ್ರಿಯಲ್ಲಿ ಜೈಲಿನಿಂದ ವಸುದೇವ ಸಾಗಿಸಿ ನಂದಗೋಪನ ಮನೆಗೆ ಒಪ್ಪಿಸಿದ ಹಾಗೆ?”<<
    ಶಿವೂ ಸರ್ ಬದುಕಿಗೆ, ಅವರ ವೆಂಡರ್ ಕಣ್ಣಿನ ಗ್ರಹಿಕೆಗೆ ಮತ್ತು ನಾಗೇಶ್ ಹೆಗಡೆ ಈ ಬರಹಕ್ಕೆ ನನ್ನದೊಂದು ಸಲಾಮ್!

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ರಂಜಿತ್Cancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: