ನಾಗ ದೋಷ ಬಂದಿರೋದು ನನಗಲ್ಲ..

manjunath kamath

ಮಂಜುನಾಥ್ ಕಾಮತ್

ಕಷ್ಟದ ಮೇಲೆ ಕಷ್ಟ ಅಂದ್ರೆ ಇದೇ ಇರ್ಬೇಕು. ರೆಡ್ಡಿಯ ಚಕ್ರದಡಿಗೆ ನಾಗರ ಮರಿ ಬಿದ್ದು ಸತ್ತಾಗ ಸರ್ಪ ಸಂಸ್ಕಾರ ಮಾಡಿದ್ದಿದ್ದರೆ ಏನಾಗ್ತಿತ್ತು. ಇದು ನಾಗ ದೋಷವೇ. ಸುಬ್ರಮಣ್ಯಕ್ಕಾದ್ರೂ ಹೋಗಿ ಏನೋ ಒಂದು ಮಾಡ್ಕೊಂಡು ಬಾ. ಆಗಲಾದ್ರೂ ಸರಿ ಹೋದೀತು ಅಂದೋರು ಹಲವರು.

tundu hyklu“ರೆಡ್ಡಿ” ಮಾಡಿದ ಕಾರುಬಾರಿಗೆ ದೋಷದ ಕಳಂಕವನ್ನೀಗ ಹೊರುತ್ತಿರುವವನು “ಕಾಳಿಂಗ”. ಅದು ನನ್ನ ರಾಯಲ್ ಎನ್ಫೀಲ್ಡ್ ಬುಲೆಟ್ಟು. ತಗೊಂಡು ಒಂದೂವರೆ ವರುಷವೂ ಆಗಲಿಲ್ಲ. ಅದೆಷ್ಟು ಸ್ಕಿಡ್ಡು, ಆ್ಯಕ್ಸಿಡೆಂಟು. ಈ ರೆಡ್ಡಿ ಬೇರೆಯಲ್ಲ, ಕಾಳಿಂಗ ಬೇರೆಯಲ್ಲ. ಎರಡರದ್ದೂ ಒಂದೇ ಆತ್ಮ. ಕೆಂಪಗಿದ್ದ ರೆಡ್ಡಿ ಕಪ್ಪು ಕಾಳಿಂಗನಾಗಿದ್ದಾನೆ. ಅದು  ಅಪಘಾತವೊಂದರ ಪ್ರಸಾದ.

ಎರಡು ವಾರದ ಹಿಂದೆ ಬೀದಿ ನಾಯಿಯೊಂದು ಅಡ್ಡ ಬಂದು ಬಿದ್ದುಬಿಟ್ಟೆ. ಸರಿ. ಮುಖ ಮೂತಿ ಚಚ್ಚಿಸಿಕೊಂಡ ಕಾಳಿಂಗನನ್ನು ರಿಪೇರಿ ಮಾಡಿಸಿದೆ. ಮುಗೀತಲ್ಲ. ಇನ್ನು ಜಾಗರೂಕತೆಯಿಂದ ಬೈಕ್ ಓಡಿಸಬೇಕು. ಯಾವ ಅಪಘಾತವೂ ಆಗದಂತೆ ನೋಡ್ಕೋಬೇಕು. ಖರ್ಚನ್ನು ನಿಯಂತ್ರಿಸಬೇಕು ಅಂತಿದ್ದೆ. ಆದ್ರೆ ಈ ವಾರದಲ್ಲೇ ಮತ್ತೆ ಠುಸ್ ಅನ್ನಬೇಕೆ. ಟೈರು ಪಂಕ್ಚರ್ರು.

ಇದೇನ್ ಮಹಾ. ಪಂಕ್ಚರ್ರಾಗೋದು ಮಾಮೂಲು ಅನ್ನಬಹುದು ನೀವು. ಆದರೆ ಬೆನ್ನು ಹಿಡಿದ ಬೇತಾಳನಂತೆ ಒಂದರ ಹಿಂದೆ ಒಂದು ಕಷ್ಟಗಳು ಎದುರಾದರೆ,  ಅದು ಮರು ದಿನವೂ ಕಾಡಿದರೆ ಏನ್ಮಾಡೋದು?

ಉಡುಪಿಯಲ್ಲಿದ್ದರೆ, ಮಧ್ಯಾಹ್ನ ಊಟಕ್ಕೀಗ ಬಂಟ್ಸ್ ಹೋಟೆಲ್ ಖಾಯಂ. ದೊಡ್ಡ ದೊಡ್ಡ ಕಬಾಬ್ ಪೀಸು ಮತ್ತು ಉದ್ದದ ನಂಗ್ ಮೀನಿನ ಮಸಾಲೆ ಫ್ರೈಗಾಗಿ ಆ ಹೊಟೇಲನ್ನು ನಾನು  ಇಷ್ಟ ಪಡುತ್ತೇನೆ. ನನ್ನಿಷ್ಟದ ಮೀನನ್ನೇ ತಿಂದು ಊಟ ಮುಗಿಸಿ ಸುಚಿತ್ ಜೊತೆಗೆ ಬುಲೆಟ್ ಹತ್ತಿದ್ದೇನೆ. ಸಿಟಿ ಬಸ್ಟ್ಯಾಂಡ್ ನಿಂದ ಕಿದಿಯೂರು ಹೊಟೇಲ್ ಕಡೆಯ ಏರನ್ನು ಏರುತ್ತಿದ್ದೇನೆ. ಆದರೆ ಏರಲಾಗಲಿಲ್ಲ. ಹಿಂದಿನ ಟೈರು ಪಂಕ್ಚರ್ರಾಗಿ ಬುಲೆಟ್ ಫುಲ್ಲು ಶೇಕಿಂಗು.

ಏರು ದಾರಿಯಾಗಿದ್ದರಿಂದ ಚಾಲನೆ ನಿಯಂತ್ರಣ ತಪ್ಪಲಿಲ್ಲ. ನಿಲ್ಲಿಸಿದೆ. ಇಲ್ಲೆಲ್ಲಿ ಪ್ಯಾಚ್ ಹಾಕೋದಪ್ಪಾ. ಯಾರಿದ್ದಾರೆ. ಇಂದ್ರಾಳಿ ಆಟೋಕೇರ್ ನ ಶೈಲೇಶಣ್ಣನನ್ನು ಕರಿಯೋದಾ. ಅವರದೀಗ ಊಟದ ಹೊತ್ತು. ಪೆಟ್ರೋಲ್ ಬಂಕ್ ವರೆಗೆ ದೂಡಿಕೊಂಡು ಹೋಗಿ ಗಾಳಿ ಹಾಕಿ ನೋಡೋದಾ. ಟೈಯರ್ರು ಚಪ್ಪಟೆಯಾಗಿದೆ. ದೂಡಿಕೊಂಡು ಹೋದರೆ ರಿಮ್ಮಿಗೆ ಪೆಟ್ಟು. ಏನ್ಮಾಡೋದಿವಾಗ ಅಂತ ಆಲೋಚನೆಯಲ್ಲಿರುವಾಗಲೇ ಸ್ಪ್ಯಾನರ್ರು, ಮತ್ತೆರಡು ರಾಡ್ ನಂತದ್ದೇನೋ ಹಿಡಿದುಕೊಂಡು ಗಲೀಜು ಬಟ್ಟೆ ಹಾಕ್ಕೊಂಡಿದ್ದ ಒಬ್ಬಾತ ಬಳಿ ಬಂದ. ಪಂಕ್ಚರ್ರಾ? ಪ್ಯಾಚ್ ಹಾಕ್ಬೇಕಾ ಕೇಳಿದ.

ವರುಷದ ಹಿಂದೆ ಬೆಂಗಳೂರಿಗೆ ರೆಡ್ಡಿಯಲ್ಲೇ ಬಂದಿದ್ದೆ. ಹಿಂದಿರುಗುವಾಗ ಕಳಸದ ಮಾರ್ಗ. ನೇರ ದಾರಿಯಿಂದ ಬಾರದೇ ಚಹಾ ತೋಟದೊಳಗೆ ನುಗ್ಗಿದ್ದು ತಪ್ಪಾಗಿತ್ತು. ಬೇಲಿಯ ಮುಳ್ಳೊಂದು ಚುಚ್ಚಿ ಬಿಟ್ಟಿತ್ತು. ಆದರೂ ಐದಾರು ಕಿ.ಮೀ ಬಂದಿದ್ದೇನೆ. ಕಳಸೇಶ್ವರ ದೇವಸ್ಥಾನದ ಬಳಿ ಇಳಿಜಾರು ಇಳಿಯುತ್ತಿದ್ದೇನೆ. ಒಮ್ಮೆಲೇ ಠುಸ್ ಅಂತು. ನಿಯಂತ್ರಣ ತಪ್ಪಿತು. ಕೇರೆ ಹಾವಿನ ತರ ನನ್ನ ರೆಡ್ಡಿ ರಸ್ತೆ ತುಂಬ ತೆವಳಿತು.

Bullet1ಹೆಚ್ಚೇನೂ ಗಾಯಗಳಾಗಲಿಲ್ಲ. ಗಾಭರಿಯೂ ಇರಲಿಲ್ಲ. ಆದರೆ ಪ್ಯಾಚ್ ಹಾಕೋರನ್ನು ಹುಡುಕೋದಿಕ್ಕೇ ಸುಸ್ತಾಗೋಯ್ತು. ದೇವಸ್ಥಾನದ ಬಳಿಯೇ ಪಂಕ್ಚರ್ ಅಂಗಡಿಯೊಂದಿತ್ತು. ಬಾಗಿಲು ಮುಚ್ಚಿತ್ತು. ಗೋಡೆಯಲ್ಲಿ ಬರೆದಿಟ್ಟ ನಂಬರ್ರಿಗೆ ಕರೆ ಮಾಡೋಣವೆಂದರೆ ಸ್ವಿಚ್ ಆಫ್. ಆತನಿಗೆ ನಿನ್ನೆಯಷ್ಟೇ ಮದುವೆಯಂತೆ. ಅವನಿವತ್ತು ಬರುತ್ತಾನೆಯೇ.

ಕಳಸ ಬಸ್ಸು ನಿಲ್ದಾಣದವರೆಗೂ ದೂಡಿಕೊಂಡು ಬರಬೇಕಾಯ್ತು. ಅಲ್ಲೊಂದು ಟೈರು ವರ್ಕಿನ ಗೂಡಿತ್ತು. ಆದರೆ ಪ್ಯಾಚ್ ಹಾಕೋನು ಅಲ್ಲಿರಲಿಲ್ಲ. ಕರೆಂಟಿಲ್ಲ ಎಂದು ಮನೆಯಲ್ಲಿ ಕೂತ ಆತನನ್ನು ಕಾಡಿಬೇಡಿ ಕರ್ಕೊಂಡು ಬರ್ಬೇಕಾದ್ರೆ ರಸ್ತೆಯಲ್ಲಿ ತೆವಳಿದ್ದಕ್ಕಿಂತಲೂ ಕಷ್ಟವಾಗಿತ್ತು.

ಉಡುಪಿಯ ಈ ರಾಜ ಮಾರ್ಗದಲ್ಲಿ  ಆ ತೊಂದರೆ ಆಗಲಿಲ್ಲ. ಜಗತ್ತಿನ ಶಕ್ತಿಗೆ ನನ್ನ ಮಾತು ಕೇಳಿಸಿ ಇವನನ್ನು ಕಳಿಸಿದ್ದಾನೆ ಅನ್ನಿಸಿತು. ಖುಷಿ ಆಯ್ತು. ಬಸ್ಸಿನ ಟೈರಿನ ಕೆಲಸವೊಂದಕ್ಕೆ ಸಿಟಿ ಬಸ್ಟ್ಯಾಂಡಿಗೆ ಬಂದಿದ್ದನಂತೆ. ಇಲ್ಲೇ ಹತ್ತಿರದಲ್ಲಿ ಗ್ಯಾರೇಜಿದೆ, ಇದ್ಕೆ ಬೇಕಾದ ಸಾಮಾಗ್ರಿ ತರುತ್ತೇನೆ ಎಂದು ಓಡಿದ. ಬಂದ. ಬಿಚ್ಚಿದ. ವಾಲ್ ಬಳಿ ಒಡೆದೇ ಹೋದ ಟ್ಯೂಬನ್ನು ಬದಲಾಯಿಸಲೇ ಬೇಕೆಂದ. ಹೊಸತೊಂದನ್ನು ತಂದ. ಹಾಕಿದ. ಐನೂರು ರೂಪಾಯಿ ತೆಗೆದುಕೊಂಡ.

ಇದಕ್ಕೆಲ್ಲ ತಲೆಕೆಡಿಸಿಕೊಳ್ಳೋಕಿಲ್ಲ. ಇದೆಲ್ಲಾ ಮಾಮೂಲು. ಇಂತದ್ದೆಲ್ಲ ಮುಂದೆಯೂ ಬರುತ್ತೆ. ನನಗಿದು ಮೂರನೇ ಬಾರಿಯ ಅನುಭವ. ಒಟ್ಟಿನಲ್ಲಿ ಬೇಗ ಆಯ್ತಲ್ವ. ಧನ್ಯವಾದ ಹೇಳಿ ಸರಿಯಾದ ಸಮಯಕ್ಕೇ ನಾನೂ ಸುಚಿತ್ ಕ್ಲಾಸಿಗೆ ಹೋದೆವು.

ಆದರೆ ಗ್ರಹಚಾರ ನೆಟ್ಟಗಿಲ್ಲ ಅಂದ್ರೆ ಬೇರೇನಾಗುತ್ತೆ. ಹೊಸ ಟ್ಯೂಬು. ಒಂದು ವರುಷವಾದರೂ ತೊಂದ್ರೆ ಇಲ್ಲ ಅಂದ್ಕೊಂಡು ನಿನ್ನೆಯ ಖರ್ಚಿಗೆ ಸಮಾಧಾನ ಮಾಡ್ಕೊಂಡ್ರೆ,  ಮರುದಿನ ಬೆಳಿಗ್ಗೆ ಕಾಲೇಜಿಗೆ ಹೊರಡಲು ಬುಲೆಟ್ ಬಳಿ ಬರುತ್ತೇನೆ, ಹಿಂದಿನ ಟೈರಿನ ರಿಮ್ಮು ಮತ್ತೆ ನೆಲಕ್ಕಂಟಿತ್ತು. ಒಂದೇ ದಿನದಲ್ಲಿ ಮತ್ತೆ ಪಂಕ್ಚರ್ರು.

ನನಗೆ ನನ್ನ ಮೇಲೇ ಸಿಟ್ಟು. ಪದೇ ಪದೇ ನನಗೆ  ಹೀಗ್ಯಾಕೆ ಆಗುತ್ತಿದೆ… ಈ ವರೆಗೆ ಬುಲೆಟ್ಟಿಗೆ, ಅದ್ರ ಸರ್ವೀಸುಗಳಿಗೆ, ರಿಪೇರಿಗಳಿಗೆ, ಬಿದ್ದಾಗಿನ ನನ್ನ ಚಿಕಿತ್ಸೆಗಳಿಗೆ ಖರ್ಚು ಮಾಡಿದ್ದೆಲ್ಲವನ್ನೂ ತೆಗೆದಿಟ್ಟಿದ್ದಿದ್ದರೆ ಹಾರ್ಲೇ ಡೇವಿಡ್ಸನ್ನು ತಗೋಬಹುದಿತ್ತು ಎಂದು ಪದ್ಮನಾಭ ತಮಾಷೆ ಮಾಡುತ್ತಿರುತ್ತಾನೆ. ಆತ ಹಾಕಿದ್ದ ಚಾಲೆಂಜೊಂದನ್ನು ಮುರಿಯುವುದಕ್ಕೆಂದೆ ಬುಲೆಟ್ ತಗೊಂಡಿದ್ದು. ಈಗ ನೋಡಿದ್ರೆ, ಮಾರಿ ಬಿಡು ಮಾರಾಯ. ಬೇರೆಯದನ್ನೇ ತಗೋ ಎನ್ನುತ್ತಾನೆ.

ನಿಜಕ್ಕೂ ನಂಗೆ ಸುಖ ಇಲ್ಲ. ಕಾಳಿಂಗನನ್ನು ಮಾರಿ ಬಿಡೋದಾ? ಸದ್ಯಕ್ಕೀಗ ಕಾಲೇಜಿಗೆ ಹೊರಡಲೇಬೇಕು. ಮುಕ್ಕಾಲು ಗಂಟೆಯ ದಾರಿ. ಬಸ್ಸಿಗೆ ಹೋದರೆ ಮತ್ತಷ್ಟು ತಡವಾಗುತ್ತೆ. ಪ್ಯಾಚ್ ಹಾಕಿಸಿಯೇ ಹೋಗೋದು. ಹಿಂದೊಮ್ಮೆ ಪಳ್ಳಿಯ ಕಾಡಿನಲ್ಲಿ ಹೀಗೇ ಆಗಿದ್ದಾಗ  ಬಂದು ಸರಿ ಮಾಡಿಕೊಟ್ಟಿದ್ದು ನಮ್ಮೂರ ಮೆಕ್ಯಾನಿಕ್ಕುಗಳಾದ ರಾಮ, ಲಕ್ಷ್ಮಣರು. ಈಗಲೂ ಅವರನ್ನೇ ಕರೆದೆ.

Enfield Bike

ಫೋನ್ ಮಾಡಿದ ಹತ್ತೇ ನಿಮಿಷದಲ್ಲಿ ರಾಮ, ಲಕ್ಷ್ಮಣರಿಬ್ಬರೂ ಮನೆ ಮುಂದೆ ಹಾಜರ್. ಅರುವತ್ತು ವರುಷ ವಯಸ್ಸಿನ ಅವರಿಬ್ಬರೂ ಅವಳಿಗಳು. ನನಗೆ ಇವತ್ತಿಗೂ ಅವರಿಬ್ಬರಲ್ಲಿ ರಾಮ ಯಾರು, ಲಕ್ಷ್ಮಣ ಯಾರೂಂತ ಗುರುತಿಸಲು ಸಾಧ್ಯವಾಗಲಿಲ್ಲ. ರಾಮಣ್ಣ ಅಂದ್ರೆ ಸಾಕು ಇಬ್ಬರೂ ಓ ಅನ್ನುತ್ತಾರೆ. ನಮಗೂ ಕನ್ಫ್ಯೂಷನ್ನಿಲ್ಲ. ಅವರಲ್ಲೂ ಬೇರೆ ಬೇರೆ ಎಂಬ ಅಹಂಕಾರವಿಲ್ಲ.

ಮತ್ತೆ ಅವರು ಕೇವಲ ಮೆಕ್ಯಾನಿಕ್ಕುಗಳಲ್ಲ. ಆಟೋ ರಿಕ್ಷಾ ಚಾಲಕರು. ನಿಟ್ಟೆ ಊರಿನ ಮೊತ್ತ ಮೊದಲ ರಿಕ್ಷಾದ ಮಾಲೀಕರವರು.  ಲೆಮಿನಾ ಕ್ರಾಸಿನಲ್ಲಿ ಒಂದು ಆಮ್ಲೆಟ್ ಅಂಗಡಿಯೂ ಅವರಿಗಿದೆ. ಸಂಜೆ ಮೇಲೆ ಸಿಂಗಲ್ಲಾ, ಡಬ್ಬಲ್ಲಾ ಎಂದು ಕೇಳಿ ಕೇಳಿ ಮೊಟ್ಟೆಯನ್ನೊಡೆದು ಕಾವಲಿಗೆ ಸುರಿಯೋದೇ ಅವ್ರ ಕೆಲಸ. ನನ್ನ ಪಾಲಿಗೆ ಅವ್ರ ಪಾತ್ರ ಅಷ್ಟಕ್ಕೇ ಮುಗಿಯುವುದಿಲ್ಲ. ತುಳುನಾಡ ವೀರ ಪುರುಷರಾದ ಕೋಟಿ ಚೆನ್ನಯ್ಯರಂತೆಯೋ, ವೈಕುಂಟದ ದ್ವಾರ ಪಾಲಕರಾದ ಜಯ ವಿಜಯರಂತೆಯೋ ನಮ್ಮರ ಕಥಾಲೋಕದ ಕಾವಲು ಕಾಯುವ ವಿಶೇಷ ವ್ಯಕ್ತಿಗಳವರು.

ಗೇಟಿನ ಒಳಗೆ ಅವರ ಪ್ರವೇಶ ಆದದ್ದೇ ತಡ. ನನ್ನ ಕೋಪ, ಬೇಸರಗಳೆಲ್ಲಾ ಮಾಯವಾಯ್ತು. ಅಲ್ಲಿ ಹೊಸ ಲೋಕವೇ ಸೃಷ್ಟಿಯಾಯ್ತು. ಬೇರೆ ಮೆಕ್ಯಾನಿಕ್ಕುಗಳಂತೆ ಕೊಳಕು ಶರ್ಟು ಪ್ಯಾಂಟು ಧರಿಸಿ ಕೂರುವವರು ಅವರಲ್ಲ. ಕಾವಿ ಮುಂಡು. ಚಂದದ ಶರ್ಟು. ಸಮವಸ್ತ್ರವದು. ಆಟೋದಿಂದ ಇಳಿದವರು ಪರಸ್ಪರ ಬೈದುಕೊಂಡೇ ನನ್ನ ಬುಲೆಟ್ಟು ಮುಟ್ಟಿದರು. ಟೈರು ಬಿಚ್ಚಿದರು. ಆ ಹೊತ್ತಿಗೆ ವಾಕಿಂಗಿಗೆ ಹೋಗಿದ್ದ ನನ್ನ ತಂದೆಯೂ ಬಂದು ಬಿಟ್ಟರು. ಎದುರು ಮನೆಯ ನಾಗೂ ಬಂದ. ಈ ನಾಲ್ವರೂ ಒಂದೇ ವಯಸ್ಸಿನವರಂತೆ. ಒಟ್ಟೊಟ್ಟಿಗೆ ಶಾಲೆಗೆ ಹೋದವರಂತೆ. ದುಗ್ಗ ಶೆಟ್ರ ತೋಟಕ್ಕೆ ನುಗ್ಗಿ ಗೇರುಬೀಜ ಕದ್ದು ಸಂಜೆ ಹೊತ್ತಿಗೆ ಬಿಲೀಸ್ ಆಡಿ ಎಲ್ಲವನ್ನೂ ಕಳೆದುಕೊಂಡವರು. ಟೈರಿನೊಳಗಿಂದ ಟ್ಯೂಬು ಹೊರಗೆ ಬರುತ್ತಿದ್ದಂತೆಯೇ ಅವರ ನೆನಪುಗಳ ಬುತ್ತಿಯೂ ತೆರೆದುಕೊಂಡಿತು. ಬೆಳ್ಳಂಬೆಳಿಗ್ಗೆಯೇ ಚಂದದ ಕಥಾ ಲೋಕ ಮನೆಯಂಗಳದಲ್ಲಿ ಅರಳಿಕೊಂಡಿತು.

ಮಾತು ಅವರವರದೇ ಇತ್ತು. 1970 ದಶಕದಲ್ಲಿ  ತಾವು ರಿಕ್ಷಾ ತಗೊಂಡಿದ್ದು ಅಂದ ಕೂಡಲೇ ನನ್ನ ಕಿವಿ ನೆಟ್ಟಗಾಯ್ತು. 75 ರ ತುರ್ತು ಪರಿಸ್ಥಿತಿ ಹೇಗಿತ್ತು ಕೇಳಬೇಕೆನಿಸಿತು. ಕೇಳಿದ್ದೇ ತಡ ಉದುರಿತು ನೋಡಿ. ನೇರವಾಗಿ ತುರ್ತುಪರಿಸ್ಥಿತಿಯೇ ಅಲ್ಲವಾದರೂ ಆಚೀಚಿಗಿನ ಕೆಲವು ಘಟನೆಗಳು ಬಂದು ಬಿಟ್ಟವು.

ಆ ಕಾಲದಲ್ಲಿ, ಹೇಳದೆ ಕೇಳದೆ ಮನೆ ಮನೆಗೂ ಜೀಪು ಬರುತ್ತಿದ್ದುವಂತೆ. ಜೀಪಿನ ಸದ್ದು ಕೇಳಿದೊಡನೆ ಮನೆ ಯಜಮಾನ ಪರಾರಿ. ಅದೇನೂ ಪೊಲೀಸಿನವರದಲ್ಲ. ಆಸ್ಪತ್ರೆಯ ಜೀಪದು. ಜನಸಂಖ್ಯೆಯ ನಿಯಂತ್ರಣಕ್ಕಾಗಿ ಸಂತಾನ ಹರಣ ಚಿಕಿತ್ಸೆ. ನೂರು ರೂಪಾಯಿಯ ಆಸೆಗೆ ಕೆಲವರು ಮಾಡಿಸಿಕೊಂಡಿದ್ದಾರೆ. ಹಲವರಿಗದು ಹೆದರಿಕೆ. ಹಾಗಾಗಿ ಅಡಗಿಯೇ ಕೂರುತ್ತಿದ್ದರಂತೆ.

ನನಗೆ ಮತ್ತಷ್ಟು ಕುತೂಹಲವಾದದ್ದು ಪಾಕಿಸ್ಥಾನ, ಭಾರತದ ಯುದ್ಧದ ನೆನಪು. ಅದನ್ನು ರಾಮ, ಲಕ್ಷ್ಮಣರು ಹೇಳಲು ಹೊರಟಾಗಲೇ ನಡುವೆ ಬಾಯಿ ಹಾಕಿದ್ದು ನನ್ನ ತಂದೆ. ಪಾಕಿಸ್ಥಾನ ಅಲ್ಲ. ಬಾಂಗ್ಲಾದೇಶ. ಅಲ್ಲಿಗೆ ಬಾಂಗ್ಲಾ ವಿಮೋಚನೆಯ ಹೋರಾಟದ ಕತೆಯೂ ಆರಂಭವಾಯಿತು.

Black_Bulletಆಗ ನನ್ನ ತಂದೆ ಬಾಂಬೆ ವಿರಾರಿನ ಹೊಟೇಲೊಂದರಲ್ಲಿ ಕೆಲಸಕ್ಕಿದ್ದರಂತೆ. ರಾಮ, ಲಕ್ಷ್ಮಣರು ಪೂನಾದಲ್ಲಿ. ಪಾಕಿಸ್ಥಾನವೋ, ಬಾಂಗ್ಲಾದೇಶವೋ. ಒಟ್ಟಿನಲ್ಲಿ ಇವರಿಗೂ ನೆಮ್ಮದಿ ಇರಲಿಲ್ಲವಂತೆ. ರಾತ್ರಿ ಹೊತ್ತು ಬೆಳಕಿಲ್ಲ. ಬೆಂಕಿ ಹಾಕೋಕೂ ಇಲ್ಲ. ಕಡೆಗೆ ಬೀಡಿ ಸೇದೋರನ್ನೂ ಹೊಡೆದು ಓಡಿಸುತ್ತಿದ್ದರಂತೆ. ಬೆಂಕಿ, ಬೆಳಕು, ಹೊಗೆ ಕಂಡಲ್ಲಿ ಬಾಂಬು ಬೀಳುತ್ತೋ ಹೆದರಿಕೆ. ಇಂಡಿಯಾದವರಿಗೆ ಅದೆಷ್ಟು ಹೆದರಿಕೆಯಲ್ವೇ ಅಂದರು ತಂದೆ. ಮತ್ತೆ ಜೀವ ಹೋಗುತ್ತೆ ಅಂದ್ರೆ ಖುಷಿಯಲ್ಲಿರೋಕಾಗುತ್ತಾ ಅಂದರು ಅವಳಿಗಳಲ್ಲೊಬ್ಬರು.

ಅವರ ಮಾತು ಮುಂದುವರಿದಂತೆ ಕುತೂಹಲ ಹೆಚ್ಚಾದರೂ ನನಗೆ ಗಾಬರಿಯಾಯಿತು. ಮಾತಿನಲ್ಲಿ ಅವರೆಲ್ಲ ಅದೆಷ್ಟು ಮೈ ಮರೆತಿದ್ದರೆಂದರೆ, ಟ್ಯೂಬಿನ ತೂತನ್ನು ಗುರುತಿಸಿದ್ದಾರೆ. ಟೈರಿಗೆ ಸಣ್ಣ ಮೊಳೆಯೊಂದು ಚುಚ್ಚಿದ್ದಿತ್ತಂತೆ. ಅದನ್ನೂ ಕಿತ್ತೆಸೆದಿದ್ದಾರೆ. ಪ್ಯಾಚ್ ಹಾಕಿ ಟ್ಯೂಬನ್ನು ಟೈರೊಳಗೆ ತುರುಕಿಸಿ ಸೈಕಲ್ ಪಂಪಿನಿಂದ ಗಾಳಿಯನ್ನು ಹಾಕುತ್ತಿದ್ದಾರೆ.  ಅದೆಷ್ಟು ಸಲ ಹೊಡೆದರೂ ಗಾಳಿ ತುಂಬುತ್ತಿಲ್ಲ. ಒಳಗೆ ಹೋಗಿದ್ದ ಗಾಳಿಯೂ ಮಾತಿನ ನಡುವೆ ಒಮ್ಮೆ ಜೋರಾಗಿ ಠುಸ್ ಅಂದು ಬಿಡ್ತು. ವಾಲ್ ಪಿನ್ನನ್ನು ಹಾಕದೇ ಗಾಳಿ ಹೊಡೆದರೆ ಇನ್ನೇನಾಗಬೇಕು.

ಅಣ್ಣ ತಮ್ಮಂದಿರಿಬ್ಬರೂ ತಮ್ಮ ಮೂರ್ಖತನಕ್ಕಾಗಿ ಪರಸ್ಪರ ಬೈದುಕೊಂಡರು. ನನ್ನ ತಂದೆಯಂತೂ ಗಾಂಪರೊಡೆಯರ ಕಥೆಯನ್ನೇ ನೆನಪು ಮಾಡಿಕೊಂಡರು. ನಾಗು ಒಬ್ಬನಿದ್ದ, ಅವರು ಏನೇ ಹೇಳಿದರೂ ಹೂಂಗುಡೋಕೆ ಹಾಗೂ ಜೋರಾಗಿ ನಗೋಕೆ. ಗಾಳಿ ಹೋದ ಸದ್ದಿನೊಡನೆ ಒಮ್ಮೆಗೆ ಎಲ್ಲವೂ ನಿಂತು ಹೋಯ್ತು. ಬರೇ ಮೌನ. ಪಿನ್ನನ್ನು ಹಾಕಿ ಗಾಳಿ ಮತ್ತೆ ಹೊಡೆಯಲಾಯಿತು. ಟೈರು ಊದಿಕೊಂಡಿತು. ಬುಲೆಟ್ಟಿನ ಬುಡ ಸೇರಿತು. ಅಚಾನಕ್ಕಾಗಿ ತುಂಡಾಗಿ  ಹೊಟ್ಟೆಯೊಳಗೇ ಅಡಗಿ ಹೋದ ಮಾತುಗಳು ಮತ್ತೆ ಶುರುವಾದವು.

ಬಾಂಗ್ಲಾ ದೇಶದಲ್ಲಿ ಯುದ್ಧವಾಗುತ್ತಿದ್ದಾಗ ತಮ್ಮೂರಿನಿಂದಲೂ ಲೋಡುಗಟ್ಟಲೆ ಅಕ್ಕಿ, ಆಹಾರಗಳೆಲ್ಲಾ ಹೋಗುತ್ತಿದ್ದವಂತೆ. ನಮ್ಮ ದುಡಿಮೆ ಎಲ್ಲಾ ಬಾಂಗ್ಲಾದ ಪಾಲು. ಈಗ ಅವರಿಗದೆಲ್ಲ ನೆನಪುಂಟಾ. ನಮ್ಮ ಮೇಲೇನೇ ಬರುತ್ತಾರೆ ಈಗ. ಅವ್ರಿಗೆಲ್ಲಾ ಉಪಕಾರ ಎಂಬುದೇ ಗೊತ್ತಿಲ್ಲ ಎಂದು ಕೋಪದಿಂದ ಕುದಿಯುತ್ತಿದ್ದ ನನ್ನ ತಂದೆ ಆ ಕಾಲಕ್ಕೆ ಥಿಯೇಟರಿಗೆ ಬಂದ “ಜೈ ಬಾಂಗ್ಲಾದೇಶ್” ಸಿನಿಮಾ ಕತೆಯನ್ನೂ ಹೇಳಿದರು. ಅಷ್ಟೊತ್ತಿಗೆ ಟೈರನ್ನು ಸಿಕ್ಕಿಸಿ ರಾಮ, ಲಕ್ಷ್ಮಣರಿಬ್ಬರೂ ಕೈ ತೊಳೆದು ಬಂದರು. ಪಿಚ್ಚರ್ರಿನವರಿಗೇನು. ಅವ್ರಿಗೆ ಹಣ ಮಾಡಿದರಾಯ್ತು. ಇನ್ನು ನೋಡಿ ಭಾಸ್ಕರ ಶೆಟ್ರ ಪಿಚ್ಚರ್ರೂ ಬರುತ್ತೆ. ಎಲ್ಲಾ ಲಾಟ್ ಪುಟ್ಟು ಮಾರ್ರೆ ಎನ್ನುತ್ತಾ ಅಮ್ಮ ಮಾಡಿಟ್ಟಿದ್ದ ಚಹಾ ಕುಡಿದು, ನೂರು ರೂಪಾಯಿ ಕೇಳಿ ಪಡೆದು, ಆಟೋ ಹತ್ತಿ ಹೊರಟು ಹೋದರು. ಈ ನಡುವೆ ಶಸ್ತ್ರ ಚಿಕಿತ್ಸೆ ಮಾಡಿಕೊಂಡವ್ರ ಹೆಸರುಗಳು ನಾಗುವಿನ ಬಾಯಲ್ಲಿ ಮತ್ತೊಮ್ಮೆ ಬಂದು ಹೋಯ್ತು. ಭೂ ಸುಧಾರಣೆಯ ಕಾಲದಲ್ಲಿ ನಮ್ಮೂರ ಕಾಂಗ್ರೆಸ್ ನಾಯಕ ಕುಟ್ಟಿ ಶೆಟ್ರ ಮನೆ ಕೆಡವಲು ಊರ ಗುತ್ತಿನವರು ಹೊಂಚು ಹಾಕಿದ್ದು. ಆಗ ಮಿಲಿಟರಿಯ ಪಟಲಾಮೇ ಬಂದು ಕುಟ್ಟಿ ಶೆಟ್ರಿಗೆ ರಕ್ಷಣೆ ಒದಗಿಸಿದ್ದು. ಹೀಗೆ ಹಲವಾರು ಕತೆಗಳು ಬಂದು ಹೋದವು. ಪಠ್ಯದಲ್ಲಿ ಓದಿದ್ದ ಇತಿಹಾಸದ ಕಥೆಗಳಿಗೆ ನಮ್ಮೂರಿನ ಜನರೇ ಪಾತ್ರಗಳಾಗಿ ಕಣ್ಣ ಮುಂದೆ ಮತ್ತೊಮ್ಮೆ ನಟಿಸಿ ಹೋದಂತಾಯ್ತು.

ರಾಮ, ಲಕ್ಷ್ಮಣರು ಬಂದು ಹೋದ ಆ ಅರ್ಧ ಗಂಟೆಯಲ್ಲು ನಾನು ಅದೆಂತಹಾ ಮೋಡಿಗೊಳಗಾಗಿದ್ದೆನೆಂದರೆ ಇಂತಹ ಮಾತುಗಳು, ಕತೆಗಳು ಕೇಳಲು ಸಿಗುತ್ತವೆ ಎಂದಾದರೆ ಕಾಳಿಂಗನ ಟೈರಿಗೆ ಅದೆಷ್ಟು ಸಲ ಮೊಳೆ ಚುಚ್ಚಿದರೂ ಪರವಾಗಿಲ್ಲ ಅನ್ನಿಸಿತು. ಇವರ ಮಾತುಗಳನ್ನು ಕೇಳಬೇಕು. ನಮ್ಮೂರ ಇತಿಹಾಸವನ್ನೂ ಬರೆಯಬೇಕೆನಿಸಿತು.

ಇಲ್ಲ. ಕಾಳಿಂಗನನ್ನು ನಾನು ಮಾರುವುದಿಲ್ಲ. ಅದೆಷ್ಟು ಸಲ ಬಿದ್ದರೂ ಸರಿಯೇ, ಕಷ್ಟ ಕೊಟ್ಟರೂ ಸರಿಯೇ. ನೂರಾರು ಕತೆಗಳನ್ನು ನನಗೆ ಕೇಳಿಸುತ್ತಿರೋ, ತೋರಿಸುತ್ತಿರೋ ಸಾರಥಿಯದು. ನಾಗ ದೋಷ ಬಂದಿರೋದು ನನಗಲ್ಲ. ನನ್ನ ಕಾಳಿಂಗನಿಗೂ ಅಲ್ಲ. ನನ್ನ ದಾರಿಗೆ ಅಡ್ಡ ಬಂದು ಮರಿಯನ್ನು ಸಾಯಿಸಿದ ದೇವರಿಗೆ.

‍ಲೇಖಕರು Admin

September 2, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರೀತಿಸುವವರು ನೋಡಿ ಕಲಿಯಬೇಕಾದದ್ದು ರೋಮಿಯೋ ಜುಲಿಯಟ್ಟರನ್ನಲ್ಲ..

ಪ್ರಸಾದ್ ಶೆಣೈ ಆರ್ ಕೆ ನಾವು ಎಲ್ಲರಂತೆ ಬದುಕದೇ ನಮ್ಮದೇ ಹೊಸತೊಂದು ದಾರಿಯನ್ನು ಕಂಡುಕೊಳ್ಳಬೇಕು ಅಂತ ಹೊರಟವರು. ಪ್ರೀತಿ ಮಾಡಿದರೂ ಯಾವ ಮಿಸ್...

ನನ್ನ ಮಾತು ನಿಂತು ಹೋಗಿತ್ತು..

ಅವನು ಹೇಳುತ್ತಲೇ ಇದ್ದ.. ಸುಚಿತ್ ಕೋಟ್ಯಾನ್ ಕುರ್ಕಾಲು  'ನೀನು ಹಾಗಾದ್ರೆ ನನ್ನ ಮದುವೆಯಾಗುದಿಲ್ಲ ಅಲ್ಲಾ... ಆಗುದಿಲ್ಲ ಅಲ್ಲ.........'...

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: