ನಾಟಕ ಮಾಡಿಸಿದ ವರ್ಷವೇ ಬಾಬರಿ ಮಸೀದಿಯನ್ನು ದ್ವಂಸಗೊಳಿಸಿದ್ದರು…

ಈ ದಿನ ಬಿಡುಗಡೆ ಸಂಜೆ ೬ ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ. ನಂತರ ಸಮಕಾಲೀನ ಸಂಗತಿಗಳ ಬಗ್ಗೆ ಪ್ರಸನ್ನ ಜೊತೆ ಸಂವಾದ, ಪ್ರಯೋಗ ರಂಗದಿಂದ ನಾಟಕ
– ಪ್ರಸನ್ನ

1992ರಷ್ಟು ಹಿಂದೆಯೇ, ದೆಹಲಿಯ ರಾಷ್ಟ್ರೀಯ ನಾಟಕಶಾಲೆಯ ವಿದ್ಯಾಥರ್ಿಗಳಿಗೆಂದು ಈ ನಾಟಕವನ್ನು ಬರೆದು, ರಂಗ ಪ್ರದರ್ಶನವನ್ನು ಸಿದ್ಧಪಡಿಸಿದ್ದೆ. ಈಗ, ಇಷ್ಟು ತಡವಾಗಿ, ಪರಿಷ್ಕರಿಸಿ ಪ್ರಕಟಿಸುತ್ತಿದ್ದೇನೆ. ಹದಿಹರೆಯದ ಮಕ್ಕಳಿಗಾಗಿ ಬರೆದದ್ದಾದರೂ, ದೊಡ್ಡವರು ಈ ನಾಟಕವನ್ನು ಮಾಡಬಾರದು ಅಥವಾ ನೋಡಬಾರದೆಂದೇನಿಲ್ಲ.
ನಾಟಕವು ತೀರ ಗಂಭೀರವಾಗಿಬಿಟ್ಟು ಜನರಿಂದ ದೂರ ಉಳಿದುಬಿಡಬಾರದೆಂಬ ಕಳಕಳಿಯಿಂದ, ಸಾಧ್ಯವಿದಷ್ಟು ಆಪ್ತವಾಗಿ ಹಾಗೂ ಮನೋರಂಜಕವಾಗಿ-ಇಂದಿನ ಯುವಕ ಯುವತಿಯರು ಗಾಂಧೀಜಿಯವರೊಂದಿಗೆ ನಗುನಗುತ್ತ ಹರಟುವುದು ಸಾಧ್ಯವಿದ್ದರೆ ಹೇಗಿರುತ್ತಿತ್ತೋ ಹಾಗೆಯೇ ನಾಟಕದ ಶೈಲಿ ಇರಬೇಕೆಂಬ ಪ್ರಯತ್ನವಿದೆ ಇಲ್ಲಿ.
ನಾಟಕದಲ್ಲಿರುವ ಏಕಮೇವ ಕಾಲ್ಪನಿಕ ಪಾತ್ರವೆಂದರೆ, ರಾಮಿ ಮೇಡಂ ಎನ್ನುವ, ಅವರ ನೆಚ್ಚಿನ ಅಧ್ಯಾಪಕಿ ಮಾತ್ರ. ಈಕೆ ನಾಟಕದುದ್ದಕ್ಕೂ ಮಕ್ಕಳ ಜೊತೆಗಿದ್ದು, ಅವರ ಆಸಕ್ತಿಗಳನ್ನು ಪ್ರೋತ್ಸಾಹಿಸುತ್ತಲೇ, ಅವರು ದಾರಿತಪ್ಪದಂತೆ ಕೈ ಹಿಡಿದುಕೊಂಡು, ಘನ ವಿಚಾರಗಳ ಗೋಂಡಾರಣ್ಯದಲ್ಲಿ ಅವರನ್ನು ನಡೆಸಿಕೊಂಡು ತಂದು ತುದಿಮುಟ್ಟಿಸುತ್ತಾರೆ. ಇತ್ತ ಮಕ್ಕಳೂ ಸಹಿತ, ಪೇಟೆಯ ಮಕ್ಕಳು ಹೇಗೆ ಅರಣ್ಯ ಸುತ್ತಿ ಸಂಭ್ರಮಪಡುತ್ತವೋ ಹಾಗೆಯೇ ಈ ಬೌದ್ಧಿಕ ಅರಣ್ಯವನ್ನು ಸುತ್ತಿ ಸಂಭ್ರಮಪಡುತ್ತವೆ.
1992ರಲ್ಲಿ ದೆಹಲಿಯಲ್ಲಿ ಈ ನಾಟಕದ ಪ್ರದರ್ಶನವು ಅಪಾರವಾದ ಯಶಸ್ಸನ್ನು ಕಂಡಿತ್ತು. ಆಗ ನಾಟಕದ ಹೆಸರು ಗಾಂಧಿ ಎಂತಲೇ ಇತ್ತು. ನಾಟಕದ ಚಚರ್ೆಯು ಪಾರ್ಲಿಮೆಂಟಿನವರೆಗೂ ತಲುಪಿತ್ತು. ದಿವಂಗತ ಮಧು ಲಿಮಯೆ, ದಿವಂಗತ ರಾಮಚಂದ್ರಗಾಂಧಿ, ಶ್ರೀ ಅಶೀಷ್ ನಂದಿ, ಶ್ರೀಮತಿ ಗೀತಾ ಕಪೂರ್, ಶ್ರೀ ಸುದೀರ್ ಚಂದ್ರ ಆದಿಯಾಗಿ ಹಲವು ಪ್ರತಿಷ್ಠಿತ ಗಾಂಧಿವಾದಿಗಳು, ಸಮಾಜವಾದಿಗಳು ಹಾಗೂ ಇತಿಹಾಸಕಾರರು ನಾಟಕವನ್ನು ನೋಡಿ ಮೆಚ್ಚಿದ್ದರು, ಮಾತ್ರವಲ್ಲದೆ ಮಾರ್ಗದರ್ಶನವನ್ನೂ ನೀಡಿದರು.
ಹಿಂಸೆಯು ಆಕರ್ಷಕವಾದದ್ದು ಎಂಬ ಆತಂಕವು ಮಧು ಲಿಮಯೆಯವರನ್ನು ಆಗ ಕಾಡಿತ್ತು. ನಿನ್ನ ನಾಟಕದಲ್ಲಿಯೂ ಸಹ, ನಿನ್ನೆಲ್ಲ ಪ್ರಯತ್ನದ ನಂತರವೂ, ಹಿಂಸೆ ಎಂಬುದು ಆಕರ್ಷಕವಾಗಿ ಚಿತ್ರಿತವಾದ ಬಿಡುವ ಸಾಧ್ಯತೆ ಇದೆ ಎಚ್ಚರ! ಎಂದು ಬುದ್ಧಿವಾದ ಹೇಳಿದರು ಅವರು. ನಾಟಕದ ಪರಿಷ್ಕರಣದ ಸಂದರ್ಭದಲ್ಲಿ ಆ ಹಿರಿಯರ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡಿದ್ದೇನೆ.

ದೆಹಲಿಯಲ್ಲಿ ನಾಟಕ ಮಾಡಿಸಿದ ವರ್ಷವೇ ಅಯೋಧ್ಯೆಯಲ್ಲಿ ಹಿಂದೂ ಕರಸೇವಕರು ಬಾಬರಿ ಮಸೀದಿಯನ್ನು ದ್ವಂಸಗೊಳಿಸಿದ್ದರು. ಆ ಘಟನೆಯ ಆಘಾತವೇ ಕೊಂದವರಾರು ನಾಟಕವನ್ನು ರಚಿಸಲು ಪ್ರೇರಣೆ ನೀಡಿದ್ದು. ಈಗ, ಹದಿನೈದು ವರ್ಷಗಳ ನಂತರದಲ್ಲಿ ಬಾಬರಿ ಮಸೀದಿಯ ಘಟನೆಯು ನಮ್ಮಗಳ ಸ್ಮೃತಿಯಿಂದ ಹಿಂದೆ ಸರಿದಿದೆ. ಆದರೆ ಮತೀಯವಾದವು ಮಾತ್ರ ಮತ್ತಷ್ಟು ಪ್ರಬಲವಾಗಿ ಬೆಳೆದು, ತನ್ನ ವಿಶ್ವರೂಪ ದರುಶನವನ್ನು ಮಾಡಿಸುತ್ತಿದೆ. ಹಿಂದೂಗಳಷ್ಟೇ ಅಲ್ಲದೆ
ಮುಸಲ್ಮಾನರು ಯಹೂದ್ಯರು ಕ್ರೈಸ್ತರು ತಮಿಳರು, ಬೌದ್ಧರು….ಹೀಗೆ ಯಾವುದೇ ತಾರತಮ್ಯವೂ ಇಲ್ಲದೆ, ಜಗತ್ತಿನ ಎಲ್ಲ ಸಮುದಾಯಗಳೂ ಮತೀಯವಾದದ ಸಂಕುಚಿತ ಯೋಚನೆಗೆ ಬಲಿಯಾಗಿವೆ.
ಪ್ರೀತಿ ಹಾಗೂ ಸಹಿಷ್ಣುತೆಗೆ ಬದಲಾಗಿ, ಅನುಮಾನ ಅಸೂಯೆ ಹಾಗೂ ದ್ವೇಷದ ಭಾವನೆಗಳು ನಮ್ಮೆಲ್ಲರ ಹೃದಯಗಳಲ್ಲಿ ಇಂದು ಮನೆ ಮಾಡಿದೆ. ಇತ್ತಕಡೆ, ನಾವು ನಮ್ಮ ಅಲ್ಪಸಂಖ್ಯಾತ ಸಮುದಾಯಗಳನ್ನು ಅಸಹನೆಯಿಂದ ನಡೆಸಿಕೊಂಡರೆ, ಅತ್ತಕಡೆ ಕಾಶ್ಮೀರದಲ್ಲಿ, ಅಲ್ಲಿನ ಬಹುಸಂಖ್ಯಾತರು ಸೇರಿಗೆ ಸವ್ವಾಸೇರು ಎನ್ನುವಂತೆ, ಅಮರನಾಥ ಮಂದಿರಕ್ಕೆ ನೂರು ಎಕರೆ ಜಮೀನು ಮಂಜೂರು ಮಾಡಿದ್ದನ್ನು ನೆಪಮಾಡಿಕೊಂಡು ಹಿಂಸಾತ್ಮಕ ಹಿಂಸಾತ್ಮಕ ಪ್ರತಿಭಟನೆಗೆ ಇಳಿದಿದ್ದಾರೆ. ಶ್ರೀಮಂತ ರಾಷ್ಟ್ರಗಳ ನಾಯಕರಿಗೆ, ವಿಶ್ವದ ಎಲ್ಲ ಬಡದೇಶಗಳೂ ಆತಂಕವಾದಿಗಳಂತೆ ಕಾಣತೊಡಗಿದ್ದಾರೆ! ಇದನ್ನೇ ನಾನು ಸೇರಿಗೆ ಸವ್ವಾ ಸೇರು ಎಂದದ್ದು!
ಗಾಂಧೀಜಿ ತಾನು ನಂಬಿದಂತೆ ಬದುಕಿ ಮರೆಯಾಗಿ ಹೋದರು. ಆದರೆ ಅವರ ವಿಚಾರಗಳು ಹಾಗೂ ಆತನ ಜೀವನಶೈಲಿಯು ನಮ್ಮನ್ನು ಗಾಢವಾಗಿ ಹಿಡಿದುಬಿಟ್ಟಿದೆ. ಆಧುನಿಕ ಮಾನವನಿಗೆ ಗಾಂಧೀಜಿಯವರನ್ನು ಮರೆಯುವುದು ಸಾಧ್ಯವಾಗಿಲ್ಲ. ದಿನ ಕಳೆದಂತೆ, ಭವಿಷ್ಯದ ಆತಂಕವು ನಮ್ಮನ್ನು ಹೆಚ್ಚು ಹೆಚ್ಚಾಗಿ ಕಾಡತೊಡಗಿದೆ. ನಮಗಿಷ್ಟವಿರದಿದ್ದರೂ, ಯಂತ್ರ ನಾಗರೀಕತೆಯ ಕೀಲುಗಳನ್ನು ಒಂದೊಂದಾಗಿ ಕಳಚುವುದು ಅನಿವಾರ್ಯವಾಗಬಹುದೇನೋ ಎಂಬ ಅರಿವು ಮಾನವ ಜಗತ್ತಿನಲ್ಲಿ ನಿಧಾನವಾಗಿ ಮೂಡುತ್ತಿದೆ. ಹಾಗಾಗಿಯೇ ಗಾಂಧೀಜಿ ದಿನ ಕಳೆದಂತೆ ಹೆಚ್ಚು ಹೆಚ್ಚು ಪ್ರಸ್ತುತರಾಗುತ್ತಿರುವುದು.
ಇತ್ತ, ಕನ್ನಡ ರಂಗಭೂಮಿಯು ಬಳಲುತ್ತಿದೆ. ಕಳೆದ ಶತಮಾನದ ಪೂವರ್ಾರ್ಧದವರೆಗೆ ಅದರ ಪ್ರಾಥಮಿಕ ಜವಾಬ್ದಾರಿಯು ಮನರಂಜನೆಯಾಗಿತ್ತು. ಮನರಂಜನೆ ಮಾಡುತ್ತಲೇ ಅದು, ಜನರ ಶೈಕ್ಷಣಿಕ ಜವಾಬ್ದಾರಿಯನ್ನೂ ಸಹ ನಿರ್ವಹಿಸುತ್ತಿತ್ತು. ಈಗ ಕಾಲ ಬದಲಾಗಿದೆ. ಮನರಂಜನೆಯ ಜವಾಬ್ದಾರಿಯು ರಂಗಭೂಮಿಯ ಕೈತಪ್ಪಿ ಟೆಲಿವಿಷನ್, ಸಿನಿಮಾ, ಇಂಟರ್ನೆಟ್ ಇತ್ಯಾದಿ ಇಲೆಕ್ಟ್ರಾನಿಕ್ ಮಾಧ್ಯಮಗಳ ಪಾಲಾಗಿದೆ. ಹಾಗಾಗಿ ಮನರಂಜನೆಗಾಗಿಯೇ ರಂಗಭೂಮಿಯತ್ತ ಬರುತ್ತಿದ್ದ ದೊಡ್ಡ ಪ್ರಮಾಣದ ಜನರು ರಂಗಭೂಮಿಯನ್ನು ತೊರೆದು ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಕನ್ನಡ ರಂಗಭೂಮಿಯು ತನ್ನ ಶೈಕ್ಷಣಿಕ ಜವಾಬ್ದಾರಿಗೆ ಹೆಚ್ಚಿನ ಒತ್ತು ನೀಡಬೇಕು. ಆ ಮೂಲಕ ಕನ್ನಡ ಸಮಾಜಕ್ಕೆ ಮತ್ತೆ ತಾನು ಉಪಯುಕ್ತವಾಗಬೇಕು. ಬೇರೆ ದಾರಿಯಿಲ್ಲ. ಚರಿತ್ರೆಯೂ ಇದೇ ಮಾತನ್ನು ಪುಷ್ಟೀಕರಿಸುತ್ತದೆ.

ಕಳೆದ ಶತಮಾನದ ಅರವತ್ತರ ದಶಕದಲ್ಲಿ ಸಿನಿಮಾದ ಪ್ರಭಾವವು ಹೆಚ್ಚಿದಾಗ ಸಹಿತ ರಂಗಭೂಮಿಯ ಆಕರ್ಷಣೆ ಕಡಿಮೆಯಾಗಿತ್ತು. ಆಗ ವಿದ್ಯಾವಂತರ ಒಂದು ವರ್ಗವು ರಂಗಭೂಮಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು. ಕೈಲಾಸಂ ಶ್ರೀರಂಗ ಕುವೆಂಪುರಂತಹ ನಾಟಕಕಾರರು ಹಾಗೂ ಅಮೆಚೂರ್ ರಂಗತಂಡಗಳು, ಸಾಮಾಜಿಕ ಆಶಯಗಳನ್ನು ಬಿಂಬಿಸುವ ಮೂಲಕವಾಗಿ ರಂಗಭೂಮಿಯನ್ನು ಜೀವಂತವಾಗಿಟ್ಟಿದ್ದರು. ಈಗ ಟೆಲಿವಿಷನ್ನಿನ ಆಗಮನದ ನಂತರ ವಿದ್ಯಾವಂತರೂ ಸಹ ರಂಗಭೂಮಿಯನ್ನು ತೊರೆದು ಹೋಗಿದ್ದಾರೆ. ಹಾಗಿದ್ದರೆ ಮುಂದೇನು?
ಈಗ ನಾವು ಮಕ್ಕಳ ಹತ್ತಿರ ಹಾಗೂ ಅವರ ಪೋಷಕರ ಹತ್ತಿರ ಹೋಗಬೇಕಾಗಿದೆ. ಈ ಸಂದರ್ಭದಲ್ಲಿ ದಿವಂಗತ ಬಿ.ವಿ. ಕಾರಂತರ ಹೆಸರನ್ನು ನೆನೆಯದಿದ್ದರೆ ಅಪಚಾರವಾಗುತ್ತದೆ. ಕಾರಂತರು ಈ ಸಂಗತಿಯನ್ನು ಬಹಳ ಮೊದಲೇ ಗ್ರಹಿಸಿದ್ದರು. ಅವರು ಶೈಕ್ಷಣಿಕ ರಂಗಭೂಮಿಗಾಗಿ ಮಾಡಿದ ಕೆಲಸಗಳು, ಕನ್ನಡ ರಂಗಭೂಮಿಗೆ ಮಾತ್ರವಲ್ಲ, ಇಡೀ ದೇಶಕ್ಕೇ ಮಾದರಿಯಾಗಬಲ್ಲಂತಹದು. ಸಂತೋಷದ ಸಂಗತಿಯೆಂದರೆ, ಕಾರಂತರ ನಂತರದಲ್ಲಿ ಶೈಕ್ಷಣಿಕ ರಂಗಭೂಮಿಯ ಕೆಲಸವು, ಅಲ್ಪ ಪ್ರಮಾಣದಲ್ಲಿಯಾದರೂ ಸರಿ, ವ್ಯವಸ್ಥಿತ ರೀತಿಯಲ್ಲಿ ಮುಂದುವರೆದಿದೆ. ಹಲವಾರು ವೃತ್ತಿಪರ ರಂಗ ನಿದರ್ೆಶಕರುಗಳು ಶಾಲಾ ಕಾಲೇಜುಗಳಿಗಾಗಿ ಕೆಲಸ ಮಾಡತೊಡಗಿದ್ದಾರೆ. ಮಕ್ಕಳ ನಾಟಕ ಮಾಡಲೆಂದೇ ಒಂದೆರಡು ರೆರ್ಪಟಿರಿ ತಂಡಗಳು ಕಾರ್ಯನಿರತವಾಗಿವೆ.
ರಂಗಾಯಣದಲ್ಲಿ ‘ರಂಗ ಕಿಶೋರ’ ಯೋಜನೆಯು ಆರಂಭವಾಗಿದೆ. ಕಲಾತ್ಮಕವಾಗಿ ಕೂಡ ಪಾಠ ನಾಟಕಗಳ ಮಹತ್ವದ ಪ್ರಯೋಗಗಳು ಕನ್ನಡದಲ್ಲಿ ಆಗಿವೆ. ಕೊಂದವರಾರು ನಾಟಕವು, ಈ ಒಂದು ಮಹತ್ವದ ರಂಗಪರಂಪರೆಗೆ ನನ್ನದೊಂದು ಕಿರು ಕಾಣಿಕೆಯಷ್ಟೇ.
ನಾಟಕದ ರಚನೆಯ ಸಂದರ್ಭದಲ್ಲಿ ನನಗೆ ಸಹಾಯ ಮಾಡಿದ ದೆಹಲಿ ವಿಶ್ವವಿದ್ಯಾಲಯದ ಇತಿಹಾಸತಜ್ಞ ಪ್ರೊಫೆಸರ್ ರೋಬಿ ಚಟಜರ್ಿಯವರ ಸಹಕಾರವನ್ನು ನಾನಿಲ್ಲಿ ಕೃತಜ್ಞತೆಯಿಂದ ನೆನೆಯುತ್ತೇನೆ. ಅದೇ ರೀತಿಯಾಗಿ ದಿವಂಗತ ಮೋಹನ್ ಉಪ್ರೇತಿಯವರು ನನ್ನ ಗುರುಗಳು. ಅವರು ನಾಟಕಕ್ಕೆ ಸಂಗೀತ ನೀಡಿದ್ದರು. ಅವರನ್ನು ನಾನು ಗೌರವದಿಂದ ನೆನೆಯುತ್ತೇನೆ. ರಾಷ್ಟ್ರೀಯ ನಾಟಕ ಶಾಲೆಯ 1993ರ ಸಾಲಿನ ವಿದ್ಯಾಥರ್ಿಗಳನ್ನು ಸಹ ನಾನಿಲ್ಲಿ ನೆನೆಯುತ್ತೇನೆ.
ಈ ನಾಟಕದಲ್ಲಿ ಅಡಿಗರು, ಕುವೆಂಪು ಆದಿಯಾಗಿ ಕನ್ನಡದ ಹಲವು ಧೀಮಂತ ಕವಿಗಳ ಕವನಗಳು ಬಳಕೆಯಾಗಿವೆ ಎಂಬ ಸಂಗತಿಯನ್ನು ಗೌರವಪೂರ್ವಕವಾಗಿ ನೆನೆಯುತ್ತೇನೆ.
(ಕೃತಿಗೆ ಬರೆದ ಮಾತುಗಳಲ್ಲಿ)

‍ಲೇಖಕರು avadhi

November 25, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This