ಅಮಾಸೆ ಟೈಮ್ಸ್. ಕನ್ನಡ ಟೈಮ್ಸ್ ಪತ್ರಿಕೆಯನ್ನು ರೆಗ್ಯೂಲರ್ ಆಗಿ ಓದುವವರಿಗೆ ಈ ಅಮಾಸೆ ಟೈಮ್ಸ್ ರುಚಿ ಗೊತ್ತಿರುತ್ತದೆ. ಇದರ ಆರೋಗ್ಯಕರ ಕೀಟಲೆ ಖುಷಿ ಕೊಡುವಂಥದ್ದು. ಇದರ ರುಚಿಯನ್ನು ಅವಧಿಯ ಓದುಗರಿಗೂ ಬಡಿಸೋಣ ಎಂಬ ಆಸೆ.
* * *
ಡಾ. ಸಿದ್ದಲಿಂಗಯ್ಯನವರಿಗೆ ನಾಡೋಜ ಪ್ರಶಸ್ತಿ ಬಂದ ತಕ್ಷಣ ಅಭಿನಂದನಾತಜ್ಞ ಡಾ.ಹಂಪನಾ “ಪ್ರಸಿದ್ಧಲಿಂಗಯ್ಯ”, “ಸುಪ್ರಸಿದ್ಧಲಿಂಗಯ್ಯ” ಎಂದು ಹೊಗಳಿ ಶಬ್ದಶೂಲಕ್ಕೇರಿಸಿದ್ದು ಕಿವಿಗೆ ಬಿದ್ದ ತಕ್ಷಣ, ಹಂಪಿ ವಿಶ್ವವಿದ್ಯಾಲಯದಲ್ಲಿ “ಸಿದ್ದಲಿಂಗಯ್ಯನವರನ್ನು ಇಷ್ಟು ಚಿಕ್ಕ ವಯಸ್ಸಿಗೇ ನಾಡೋಜಗೊಳಿಸಿದ್ದು ನ್ಯಾಯವೇ?” ಎಂಬ ಚರ್ಚೆ ಶುರುವಾದ ಸುದ್ಧಿ ಬೆಳಕಿಗೆ ಬಂದಿದೆ.
ಅದಕ್ಕೆ ಉತ್ತರವಾಗಿ, “ಬಾಡ್ ತಿಂದಂಗ್ ನಗ್ಬೇಕು” ಎಂಬಂಥ ದಲಿತ ಸಂಸ್ಕೃತಿಯ ಮಹೋಪಮೆಗಳನ್ನು ಸಮರ್ಥವಾಗಿ ಬಳಸಿರುವ ಕವಿಗೆ ನಾಡೋಜ ದಕ್ಕಿದ್ದು ನ್ಯಾಯಬದ್ಧ ಎಂದು ಕೆಲವು “ಬಾಡೋಜ” ಸಾಹಿತಿಗಳು ಠರಾವು ಪಾಸು ಮಾಡಿ, ಕರ್ನಾಟಕ ಬಾಡೋಜರ ಎಚ್.ಒ.ಡಿ. ಮೈಸೂರ್ ಶ್ರೀರಾಮ್ ಅವರಿಗೆ ರವಾನಿಸಿದ ಸುದ್ದಿ ಬಂದಿದೆ.
ಅದರ ಬೆನ್ನಲ್ಲೇ ಕೋಲಾರ ಸೈಡ್ ನ ರೈಟರ್ ಗಳಿಗೆ ನಾಡೋಜ ಕೊಡದಿರುವುದರಿಂದ ಕಾಡು-ತೋಪಿನ ಚಂದ್ರಶೇಖರ ನಂಗಲಿಗೆ “ಕಾಡೋಜ” ಅವಾಲ್ಡ್ ಕೊಡಲು ಆದಿಮ ಪಾರ್ಟಿಗಳು ಒಂದೇ ಸಾಲಿನ ನಿರ್ಣಯ ಪಾಸು ಮಾಡಿದ ವಿಚಾರ ನಂಬಲನರ್ಹ ಮೂಲಗಳಿಂದ ತಿಳಿದು ಬಂದಿದೆ!
* * *
ಹಾಡೋಜ, ಕೇಡೋಜ ಪ್ರಶಸ್ತೀನೂ ಕೊಡ್ರೀ!
ಅಮಾಸೆ ಟೈಮ್ಸ್ ನೋರು ನಾಡೋಜ, ಬಾಡೋಜ, ಕಾಡೋಜ ಅಂತ ಗೇಲಿ ಮಾಡಿದ್ದನ್ನು ಕಂಡ ಜಾನಪದ ಟೆರರಿಸ್ಟ್ಸ್ ಒಂದ್ಕೆಡೆ ಸೇರಿ ಬಂಬಾಟಾಗಿ ಹಾಡೋ ಜನ್ನಿ, ಅಪ್ಪಗೆರೆ, ಪಿಚ್ಚಳ್ಳಿ ಎಲ್ಲರೂ “ಹಾಡೋಜ” ಅವಾಲ್ಡ್ ಕೊಡದವರಿಗೆ ಕೇಡೋಜ ಅವಾಲ್ಡ್ ಕೊಡಿ ಅಂತ ಧರಣಿ ಮಾಡಿದ ಸುದ್ದಿ ಅಮಾಸೆ ಕಛೇರಿಗೆ!
* * *
ಘಾಂಧೀ ಪ್ರಸನ್ನ ಎಲ್ಲಿ!
ಅಮಟೇಕೊಪ್ಪದ ಘಾಂಧಿ ಪ್ರಸನ್ನ ಅವರ ಉಪವಾಸ, ಸತ್ಯಾಗ್ರಹ ಫುಲ್ ಮೀಲ್ಸ್ ಸತ್ಯಾಗ್ರಹ ಏನೂ ಇಲ್ಲದೆ ಬಣಗುಡುತ್ತಿದ್ದ ಕಲಾಕ್ಷೇತ್ರದ ಹತ್ತಿರ ಅಮಾಸೆ ರಿಪೋರ್ಟರ್ ಯಾಕ್ಸಾರ್ ಪ್ರಸನ್ನ ಕಾಣ್ಸ್ತಾ ಇಲ್ಲ ಅಂದ್ರೆ, “ಎನ್ ಎಸ್ ಡಿ ಕಡೆ ೧೦ ಲ್ಯಾಕ್ಸ್ ಪ್ರಾಜೆಕ್ಟ್ ಸಿಕ್ಕಿರಬೇಕು. ಈ ಕಡೆ ಬರ್ತಾ ಇಲ್ಲ” ಎಂದು ನಕ್ಕರು ಒಬ್ಬ ಕಲ್ಚರ್ ವಲ್ಚರ್.
“ಅಂದ್ರೆ?”
“ಅಂದ್ರೆ, ಎನ್ ಎಸ್ ಡಿ ಮೇಲೆ ಪ್ರಸನ್ನ ಗಲಾಟೆ ಮಾಡಿದ ತಕ್ಷಣ ಅಲ್ಲಿ ೧೦ ಲ್ಯಾಕ್ಸ್ ಡೈರೆಕ್ಷನ್ ಪ್ರಾಜೆಕ್ಟ್ ರೆಡೀ ಅಂತ!”
0 ಪ್ರತಿಕ್ರಿಯೆಗಳು