ನಾದದ ನದಿಯೊಂದು ನಡಧಾಂಗ!

door_number142.jpg“ಡೋರ್ ನಂ 142”

 

 

 

ಬಹುರೂಪಿ

ಟಾಟಾ ಸ್ಕೈ ಆಗತಾನೆ ರೂಮು ಹೊಕ್ಕಿತ್ತು. ಇಡೀ ಆಕಾಶವೇ ಸಿಕ್ಕಿಬಿಟ್ಟಿತೇನೋ ಎಂಬ ಸಂಭ್ರಮದಲ್ಲಿದ್ದೆ. ಚಾನಲ್ ಗಳನ್ನು ಮಗುಚುತ್ತಾ ಹೋದಂತೆ ಇದು ದಿಢೀರನೆ ಎದುರಾಯಿತು. ಅರೆ, ಟೆಲಿವಿಷನ್ ಚಾನಲ್ ಗಳ ಮಧ್ಯೆ ಅಡಗಿ ಕೂತ ರೇಡಿಯೋ ಚಾನಲ್! ಆಕಾಶವಾಣಿ. ಡಿಷ್ ಗಳು ರೇಡಿಯೋ ಚಾನಲ್ ಗಳನ್ನೂ ನೀಡುತ್ತದೆ ಎಂದು ಗೊತ್ತಿರಲಿಲ್ಲ. ಆಕಾಶಕ್ಕೆ ನಿಜಕ್ಕೂ ಏಣಿ ಹಾಕುವುದೇ ಬೇಕಿರಲಿಲ್ಲ. ಅಷ್ಟು ಸಂಭ್ರಮ ನನ್ನನ್ನು ಆವರಿಸಿಕೊಂಡಿತು. ನನ್ನ ಕೈಗೆ ಇಷ್ಟು ದಿನ ಸಿಗದ ರೇಡಿಯೋ ಅಂತೂ ಸಿಕ್ಕುಬಿಟ್ಟಿದೆ. ಭೂಮಿಗೆ ಸ್ವರ್ಗವೆ ಇಳಿದಿತ್ತು ಎಂಬುದಕ್ಕೂ ನನ್ನ ಸ್ಥಿತಿಗೂ ಯಾವ ವ್ಯತ್ಯಾಸವೂ ಇರಲಿಲ್ಲ.

ಎರಡು ದಿನ ಕಳೆದಿತ್ತು. ಈ ಎರಡೂ ದಿನಗಳಲ್ಲಿ ಟಿವಿಯಲ್ಲಿ ಯಾರೂ ಕುಣಿಯಲು, ಅಳಲು, ಕೇಕೆ ಹಾಕಲು ನಾನು ಅವಕಾಶವನ್ನೇ ಕೊಟ್ಟಿರಲಿಲ್ಲ. ಬರೀ ರೇಡಿಯೋ ರೇಡಿಯೋ ರೇಡಿಯೋ. ಗಾಂಧಿ ಚಿಂತನೆ, ಸುಪ್ರಭಾತ, ಫಿಲಂ ಸಾಂಗ್ಸ್, ರೈತರಿಗೆ ಸಲಹೆ… ಅಷ್ಟೆ. ಮೂರನೆಯ ದಿನ ಮತ್ತೆ ರೇಡಿಯೋ ಚಾನಲ್ ನತ್ತ ಕಣ್ಣು ಹಾಯಿಸಿದೆ. ಎದೆ ಧಸಕ್ ಎಂದಿತು. ಅಲ್ಲೇನಿತ್ತು. ರೇಡಿಯೋ ಜಲಂಧರ್ ಬಿಟ್ಟು ಉಳಿದ ಎಲ್ಲಾ ಆಕಾಶವಾಣಿ ಚಾನಲ್ ಗಳೂ ಮಾಯವಾಗಿತ್ತು. ಮನಸ್ಸಿನೊಳಗೆ ಸೂತಕದ ಛಾಯೆ.

banna.jpg

ಯಾಕೆ ಹೀಗಾಗುತ್ತದೆ? ಬೆಳಗ್ಗೆ ಇನ್ನೂ ಕಣ್ಣು ಬಿಡುವ ವೇಳೆಗೆಲ್ಲಾ, ಕಣ್ಣು ಬಿಡುವ ವೇಳೆಗೆ ಏನು, ಪ್ರತಿ ದಿನಾ ನನ್ನನ್ನು ನಿದ್ದೆಯಿಂದ ಹೊರಗೆ ಎಳೆಯುತ್ತಿದ್ದುದೇ ಅಡುಗೆ ಮನೆಯಿಂದ ಹೊರಗೆ ಬೀಳುತ್ತಿದ್ದ ರೇಡಿಯೋ ದನಿ. ಚೋಟಾ ಚೇತನ್ ಸಿನೆಮಾದಲ್ಲಿಯಂತೆ ನಿದ್ದೆ ಎಂಬ ಗವಿ ಹೊಕ್ಕವನನ್ನು ಜಾದೂ ಮಾಡಿ ದಿಢೀರನೆ ಈ ಪ್ರಪಂಚವೆಂಬ ಪ್ರಪಂಚಕ್ಕೆ ತಂದು ನಿಲ್ಲಿಸುತ್ತಿದ್ದುದೇ ಅದು. ಅವಳಿಗೋ ಕಾಫಿ ಮಾಡುವಾಗ ಸಕ್ಕರೆ ಹಾಕಿದರೆ ಮಾತ್ರ ನೆಮ್ಮದಿಯಾಗುತ್ತಿರಲಿಲ್ಲ. ಜೊತೆಗೊಂದಿಷ್ಟು ಚಿಂತನವನ್ನೂ ಹಾಕಬೇಕಿತ್ತು. ಚಿತ್ರಾನ್ನಕ್ಕೆ ಒಗ್ಗರಣೆಯ ಜೊತೆ ರೈತರಿಗೆ ಸಲಹೆಯ ಒಗ್ಗರಣೆಯನ್ನೂ ಕೊಡಬೇಕಿತ್ತು. ಮನೆಗೆ ಹಾಲು ತರುವವ ಗಾಂಧಿ ಚಿಂತನೆಯ ವೇಳೆಗೆ ಇಲ್ಲದಿದ್ದರೆ ಅಂದು ಎರಡು ಬೈಗುಳ ಗ್ಯಾರಂಟಿ. ರೇಡಿಯೋ ಇವಳ ಬಾಳ ಸಂಗಾತಿ, ನಾನು ಸುಮ್ಮನೆ ಸಂಗಾತಿ ಎಂಬಂತೆ ಅವಳ ಜೀವ ರೇಡಿಯೋದೊಂದಿಗೆ ಬೆಸೆದುಕೊಂಡು ಹೋಗಿತ್ತು.

ನಾನು ಹೀಗಾದಾಗಲೆಲ್ಲ ಯೋಚನೆ ಮಾಡುತ್ತಿದ್ದೆ. ಯಾಕೆ ರೇಡಿಯೋ ನನ್ನೊಳಗೆ ಹಾಡಾಗಲಿಲ್ಲ ಅಂತ. ಯಾಕೋ ಗೊತ್ತಿಲ್ಲ. ಅಪ್ಪನಿಗೆ ಮಕ್ಕಳು ಪಾಠ ಓದುವುದು ಬಿಟ್ಟರೆ ಉಳಿದ ಸಮಯ ಭಜನೆ ಮಾಡಿದರೆ ಮಾತ್ರ ಉದ್ಧಾರವಾಗುತ್ತಾರೆ ಎಂಬ ಭಾವನೆಯಿತ್ತೇನೊ. ರೇಡಿಯೋ ಹಾಳು ಮಾಡುತ್ತೆ ಹುಡುಗರನ್ನು ಅಂದುಕೊಂಡಿದ್ದರೇನೊ. ಮನೆಯೊಳಗೆ ಅದನ್ನು ಬರಲು ಬಿಟ್ಟೇ ಇರಲಿಲ್ಲ.

ನನ್ನ ಅಣ್ಣನಿಗೆ ಸಿಕ್ಕಿದ್ದೆಲ್ಲಾ ಪ್ರಯೋಗದ ವಸ್ತುವೇ. ಒಂದು ದಿನ ಬೆಳಗ್ಗೆಯೇ ರೂಮು ಬಾಗಿಲು ಹಾಕಿಕೊಂಡವನು ಮಧ್ಯಾಹ್ನವಾದರೂ ತೆರೆಯಲಿಲ್ಲ. ಯಥಾಪ್ರಕಾರ ಬಾಗಿಲ ಕೆಳಗಿನ ಸಂದಿಯಲ್ಲಿ ಇಣುಕಿ, ಕಿವಿಯನ್ನು ಬಾಗಿಲಿಗೇ ಅಂಟಿಸಿ ನೋಡಿದ್ದಾಯ್ತು. ಒಳಗೆ ಏನೋ ಕೊರ ಕೊರ ಸದ್ದು. ಅಂತೂ ಇಂತೂ ಓಪನ್ ಸೆಸೇಮ್ ಮಂತ್ರ ಹೇಳದೇನೇ ಸಂಜೆ ವೇಳೆಗೆ ಬಾಗಿಲು ಓಪನ್ ಆಯ್ತು. ಒಳಗೆ ಹೋದರೆ ವಾರೆವಾಹ್ ಇವನೇನು ಮನುಷ್ಯನೊ ಅಥವಾ ಆಕಾಶದಿಂದ ಇಳಿದಿದಾನೊ ಅನಿಸಿಬಿಡ್ತು. ಯಾವುದೋ ಮರದ ಪೆಟ್ಟಿಗೆಗೆ ವೈರು, ಗುಂಡಿ ಎಲ್ಲಾ ಇಟ್ಟು ತಾಮ್ರದ ತಂತಿ ನೇತಾಕಿ, “ಇದು ಆಕಾಶವಾಣಿ ಬೆಂಗಳೂರು, ವಾರ್ತೆಯನ್ನು ಓದುತ್ತಿರುವವರು…” ಎಂಬ ಸದ್ದು ಬರುವಂತೆ ಮಾಡಿಬಿಟ್ಟಿದ್ದ. ಆಫ್ಟರಾಲ್ ಒಂದು ಮರದ ತುಂಡನ್ನು ರೇಡಿಯೋ ಆಗಿಸಿಬಿಟ್ಟಿದ್ದ. ಮಾರ್ಕೋನಿ ಅಂದ್ರೆ ಯಾರೊ ನನಗೇನು ಗೊತ್ತು? ಆದರೆ ಎದುರುಗಡೆ ನಿಂತಿದ್ನಲ್ಲ ಆತ ಮಾರ್ಕೋನಿಗಿಂತಾ ಗ್ರೇಟ್ ಅನ್ನಿಸಿಬಿಟ್ಟಿದ್ದ. ಆದ್ರೆ ಏನ್ಮಾಡೋದು? ಸಂಜೆ ಅಪ್ಪ ಮನೆಗೆ ಬರುವ ವೇಳೆಗೆ ಮಾರ್ಕೋನಿ ಕಂಡುಹಿಡಿದಿದ್ದ ರೇಡಿಯೋ ಮತ್ತೆ ಮರದ ಪೆಟ್ಟಿಗೆ ಆಗಿ ಅಟ್ಟ ಸೇರಿಬಿಡ್ತು.

ರೇಡಿಯೋ ಅಂದ್ರೆ ರೇಡಿಯೋನೇ. ಈ ಜಗತ್ತಿಗೆ ಒಂದು ಕಿಟಕಿ ಅಂತಾ ಇದ್ರೆ ಅದು ರೇಡಿಯೋನೇ ಅಂತಾ ತೀರ್ಮಾನ ಮಾಡಿಬಿಟ್ಟೆ. ಅಷ್ಟರಲ್ಲೇ ಶುರುವಾಯ್ತು ಎಂಎಸ್ ಐಎಲ್ ನವರ ಸ್ಪೆಷಲ್ ಪ್ರೋಗ್ರಾಂ. ಅದುವರೆಗೂ ಎಲ್ಲೂ ಕೇಳದಿದ್ದ ಹಾಡುಗಳು, ಯಾಕೋ ಇದು ನನ್ನದೇ ಅನ್ನೋ ಹಾಡುಗಳು, ಯಾಕೋ ನನ್ನ ಕಾಡ್ತಾ ಇದೆ ಅನ್ನೋ ಹಾಡುಗಳು ಜುಳುಜುಳು ರೇಡಿಯೋದಿಂದ ಹರಿಯೋದಕ್ಕೆ ಶುರುವಾಯ್ತು. ರೇಡಿಯೋ ಬೇಕೇ ಬೇಕು ಅನಿಸ್ತು. ಏನ್ಮಾಡೋದು. ಇನ್ನೂ ಚಡ್ಡಿ ಹಾಕ್ಕೊಂಡು ಸ್ಕೂಲಿಗೋಗ್ತಾ ಇದ್ದ ಸಮಯ ಅದು. ರಾತ್ರಿ ಎಂಎಸ್ ಐಎಲ್ ಹಾಡು ಬರೋ ಟೈಮಿಗೆ ಸರಿಯಾಗಿ ಪಕ್ಕದ ಮನೇಗೆ ಹಾರ್‍ತಿದ್ದೆ. ಪಕ್ಕದ ಮನೇಗೆ ಅಂದ್ರೆ ಪಕ್ಕದ ಮನೇಗಲ್ಲ. ಅವರ ಕಿಟಕಿ ಹತ್ರ ಮಹಡಿ ಮೆಟ್ಟಿಲು ಇತ್ತಲ್ಲಾ ಅಲ್ಲಿಗೆ. ಸರಿಯಾಗಿ ಹನ್ನೆರಡನೇ ಮೆಟ್ಟಿಲು ಮೇಲೆ ಕೂತರೆ ಹಾಡು ಕೇಳುತ್ತೆ ಅಂತಾ ಗೊತ್ತಾಯ್ತು. ಸರಿ, ರೇಡಿಯೋ ಮತ್ತೆ ನನ್ನೊಳಗೆ ಮ್ಯಾಜಿಕ್ ಮಾಡ್ಬಿಡ್ತು.

ಮದುವೆ ಆಯ್ತು. ಸಂಸಾರದಲ್ಲಿ ಸರಿಗಮ ಅನ್ನೋದು ಇರ್ಬೇಕು ಅನ್ನೋದಾದ್ರೆ ರೇಡಿಯೋನೂ ಇರ್‍ಬೇಕು ಅನ್ನಿಸ್ತು. ಅಷ್ಟೊ ಇಷ್ಟೊ ಇದ್ದ ದುಡ್ಡನ್ನ ಕೂಡಿಸಿ, ಊರು ತುಂಬಾ ಓಡಾಡಿ ಕಪ್ಪನೆ ಬಣ್ಣದ, ಪುಟ್ಟದಾದ ಬಿಪಿಎಲ್ ಸ್ಯಾನಿಯೋ ಕಂ ಟೇಪ್ ರೆಕಾರ್ಡರ್ ತಂದ್ವಿ. ಹಾಡ್ತಾ ಇತ್ತು. ಆದ್ರೆ ಅಣ್ಣನಿಗೂ ಇನ್ಯಾರಿಗೋ ಗುದ್ದಾಟ ಬಿದ್ದಿತ್ತು. ನನ್ಗೇನು ಗೊತ್ತು ಒಂದು ದಿನ ಬಂದವರೇ ನಾವು ಟ್ರಿಪ್ ಹೋಗ್ತಾ ಇದೀವಿ. ನಿಮ್ಮ ರೇಡಿಯೋ ಕೊಟ್ಟಿರ್ತೀರಾ ತಂದ್ಕೊಡ್ತೀವಿ ಅಂದ್ರು. ಕೊಟ್ಟೆ. ಅಷ್ಟೆ, ಅದು ವಾಪಸ್ ಬರಲೇ ಇಲ್ಲ. ನನ್ನ ಕರುಳು ಕತ್ತರಿಸಿ ಹೋಯ್ತು ಅನ್ನೋದು ಅವರಿಗೆ ಗೊತ್ತಾಗಲೂ ಇಲ್ಲ.

ಆಮೇಲೆ ಬಂತು. ವರದಕ್ಷಿಣೆ ಅಂದ್ರೆ ಏನು ಅನ್ನೋದಂತೂ ನನಗೆ ಗೊತ್ತಿಲ್ಲ. ಆದರೆ ವರ ಅಂದ್ರೇನು ಅಂತ ಗೊತ್ತು. ಹೆಂಡತಿ ಮನೆಯಿಂದ ಬರುವಾಗ ಒಂದ್ಸಲ ರೇಡಿಯೋನೂ ತಂದ್ಲು. ಸಂಸಾರ ಮತ್ತೆ ಸರಿಗಮ ಎರಡೂ ಬಂತು. ಆದ್ರೆ ಏನೋ ರೋಗ, ರೇಡಿಯೊ ಕುರ್‍ರ್ ಕುರ್‍ರ್ ಅಂತಾ ಸದ್ದು ಮಾಡುತ್ತೆ, ರಿಪೇರಿಗೋಗುತ್ತೆ. ಥತ್ ಅನ್ನಿಸ್ತು. ಒಂದಿನ ಮುಂಜಾವಲ್ಲಿ ಹೆಂಡತಿ ಕಣ್ಣು ಬಿಡೋದಕ್ಕೂ ಮುಂಚೆ ಪುಟ್ಟ ರೇಡಿಯೋ ತಂದು ಪ್ರಸೆಂಟ್ ಮಾಡ್ದೆ. ನನ್ನ ಹೆಂಡತಿ ಕಣ್ಣು ಅರಳಿದ್ದ ಥರಾ ಇದೆಯಲ್ಲಾ…

ಆಮೇಲೂ ಅಷ್ಟೆ. ರೇಡಿಯೋ ಇದ್ರೂ ರೇಡಿಯೋ ಯಾವಾಗ ಒತ್ತಬೇಕು ಅಂತಾನೇ ಮರೆತೋಯ್ತು. ಅಡುಗೆ ಮನೇಲಿ ರೇಡಿಯೋ, ಹಾಲ್ನಲ್ಲಿ ಟೇಪ್ ರೆಕಾರ್ಡರ್ ಅನ್ನೋ ಹಾಗಾಯ್ತು. ಈ ಮಧ್ಯೆ ವರ್ಲ್ಡ್ ಸ್ಪೇಸ್ ಬಂತು. ಜಗತ್ತಿನ ರೇಡಿಯೋಗಳನ್ನೆಲ್ಲ ಗಂಟುಹಾಕೋ ಮ್ಯಾಜಿಕ್ ಅದು. ಅದನ್ನು ತಗೊಂಡು ಬಂದೆ. ಆಂಟೆನಾ ಸಿಗಿಸಿದೆ. ಹಾಡು ಬಿಟ್ಟು ಉಳಿದ ಎಲ್ಲಾ ಸಿಗ್ನಲ್ಲೂ ಬಂತು. ಇ-ಮೇಲ್ ಮಾಡಿದೆ. ಫೋನ್ ಮಾಡಿದೆ. ಕೊನೆಗೆ ಸೆಟ್ ನ ಮತ್ತೆ ಪ್ಯಾಕ್ ಮಾಡಿ ಬೀರು ಮೂಲೇಲಿ ಇಟ್ಟೆ.

ಈಗ ನೋಡಿದ್ರೆ ಟಾಟಾ ಸ್ಕೈ ಬಾಲ್ಯದ ಎಲ್ಲಾ ಸಂಗೀತಾನೂ ಮೀಟ್ತು. ನೆನಪುಗಳ ನದಿ ಹರಿಸ್ತು. ಎರಡೇ ದಿನ ಎಲ್ಲರ ಪ್ರೀತಿ ಥರಾ ಮಾಯಾನೂ ಆಗೋಯ್ತು.

ಒಂದಿನ ಎಸ್ ಎಂ ಎಸ್ ಬಂತು. ವರ್ಲ್ಡ್ ಸ್ಪೇಸ್ ನಿಂದ. ಕಾಲ್ ಮಾಡಿದೆ. ಆ ಕಡೆಯಿಂದ ನಿಮ್ಮ ಚಂದಾ ರಿನ್ಯೂ ಮಾಡಿ ಅಂದ್ರು.

ಯಾವ ಕಾಲ್ ಸೆಂಟರ್ ಹುಡುಗೀನೊ ಏನೊ. ನನ್ನ ರೇಡಿಯೋ ದುಃಖ ಅವಳ ಮುಂದೆ ಬಿಚ್ಚಿಟ್ರೆ ಏನು ಪ್ರಯೋಜನ ಅನ್ನಿಸ್ತು. ಸುಬ್ಬಲಕ್ಷ್ಮಿ ಇದ್ರೂ ಇಲ್ಲದಿದ್ರೂ ರೇಡಿಯೋದಲ್ಲಿ ಬೆಳಗು ಮಾಡ್ತಾರೆ. ನನಗೆ ರೇಡಿಯೋ ಇಲ್ಲ. ಆ ಬೆಳಗೂ ಇಲ್ಲ. 

‍ಲೇಖಕರು avadhi

December 4, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಉದಯಕುಮಾರ್ ಹಬ್ಬು 'ಡೋರ್ ನಂ 142' ಈ ಕೃತಿ ನಮ್ಮೆಲ್ಲರ ಮನೆ ಮನದ ಡೋರ್ ನಂ ಆಗಿಬಿಟ್ಟಿದೆ. ನಮೆಲ್ಲರ ಬಾಲ್ಯದ ನೆನಪುಗಳು, ಹದಿಹರೆಯದ ಬಿಸಿ,...

ಯಾವುದೀ ಪ್ರವಾಹವು…

ಯಾವುದೀ ಪ್ರವಾಹವು…

ಡೋರ್ ನಂ 142 ಬಹುರೂಪಿ   ಮುಖ ಮುಖವೂ ಮುಖವಾಡವ ತೊಟ್ಟು ನಿಂತ ಹಾಗಿದೆ ಆಡುತಿರುವ ಮಾತಿನೊಳಗೆ ಹೃದಯ ಕಾಣದಾಗಿದೆ ಯಾವುದೀ ಪ್ರವಾಹವು... ರೇಡಿಯೋ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This