ನಾದದ ನದಿಯೊ೦ದು..

– ಎ ಈಶ್ವರಯ್ಯ

ನಾದವಿಹಾರ

ಸಂಗೀತದ ಅಂತಸ್ಥ ಮೌಲ್ಯ!

ಮೊನ್ನೆ ಒಂದು ಸಂಗೀತ ಕಛೇರಿ ಕೇಳಿ ಹೊರಬರುತ್ತಿರುವಾಗ ಪರಿಚಿತರೊಬ್ಬರು ‘ತುಂಬ ಚೆನ್ನಾಗಿತ್ತು ಅಲ್ವಾ?’ ಎಂದು ಉದ್ಗರಿಸಿದರು. ನಾನು ನಕ್ಕು ‘ಹೂಂ’ ಎಂದು ಮುಂದೆ ಸಾಗಿದೆ. ಮನೆಗೆ ಬಂದಾಗ ಗೆಳೆಯರೊಬ್ಬರ ಫೋನ್. ಅವರೂ ಕಛೇರಿಗೆ ಬಂದವರೇ. ಲೋಕಾಭಿರಾಮದಲ್ಲಿ ಕಛೇರಿಯ ಪ್ರಸ್ತಾಪವೂ ಬಂದಾಗ ‘ಬರೀ ಡಲ್ ಅಲ್ವಾ? ನಿಧಾನವಾಗಿ ಹಾಡಿ ಬೋರ್ ಹೊಡೆಸಿಬಿಟ್ಟರು’ ಅಂದರು. ಆಗಲೂ ನಾನು ಹೂಂಗುಟ್ಟಿ ಸುಮ್ಮನಾದೆ. ಆದರೆ ಈ ಎರಡು ವಿಭಿನ್ನ ಪ್ರತಿಕ್ರಿಯೆಗಳು ನನ್ನಲ್ಲಿ ಒಂದು ಮೂಲಭೂತ ಪ್ರಶ್ನೆ ಹುಟ್ಟಿಕೊಳ್ಳುವುದಕ್ಕೆ ಕಾರಣವಾದವು. ಸಂಗೀತಕ್ಕೆ ವಸ್ತುನಿಷ್ಠವಾದ ಒಂದು ಅಂತಸ್ಥ ಮೌಲ್ಯ (.intrinsic value) ಇರುವುದು ಸಾಧ್ಯವಿಲ್ಲವೇ? ಇದ್ದರೆ ಅದು ನಿರ್ಣಯವಾಗುವುದು ಹೇಗೆ? ಯಾವುದೇ ಒಂದು ವಸ್ತು ಒಬ್ಬ ಕುಶಲಕಮರ್ಮಿ ಅಥವಾ ಕಲಾವಿದನ ಕೈಸೇರಿ ರೂಪಾಂತರ ಹೊಂದಿ ಬಂದಾಗ ಅದಕ್ಕೆ ಎರಡು ಬಗೆಯ ಮೌಲ್ಯ ನಿರ್ಧಾರವಾಗಿರುತ್ತದೆ. ಒಂದು ಮುಖಬೆಲೆ (face value), ಇನ್ನೊಂದು ಅಂತಸ್ಥ ಮೌಲ್ಯ. ಅಂತಸ್ಥ ಮೌಲ್ಯ ಮೂಲದ್ರವ್ಯದ ಬೆಲೆ ಎಂದಾದರೆ ಮುಖಬೆಲೆ ಪರಿವರ್ತನೆಗೊಂಡ ಕ್ರಿಯೆಯಿಂದ ನಿರ್ಧಾರವಾಗುವ ಮೌಲ್ಯ. ಇವೆರಡರ ಹಿಂದೆ ಕೆಲವೊಂದು ನಿಯಮಗಳು ಕೆಲಸ ಮಾಡುತ್ತವೆ. ಮುಖ್ಯವಾದದ್ದೆಂದರೆ ಮುಖಬೆಲೆ ಯಾವತ್ತೂ ಅಂತಸ್ಥ ಮೌಲ್ಯಕ್ಕಿಂತ ಕನಿಷ್ಠವಾಗಿರಲು ಬರುವುದಿಲ್ಲ.   ಉದಾಹರಣೆಗೆ ಬಂಗಾರದಿಂದ 10 ರೂಪಾಯಿ ನಾಣ್ಯವನ್ನು ಟಂಕಿಸಲು ಸಾಧ್ಯವೇ? ಸಾಧ್ಯವಿದೆ. ಆದರೆ ಚಲಾವಣೆಗೆ ತರಲು ಸಾಧ್ಯವಿಲ್ಲ. ಮುಖಬೆಲೆಗಿಂತ ಅದೆಷ್ಟೋ ಹೆಚ್ಚಾಗಿರುತ್ತದೆ ಅದರ ಅಂತಸ್ಥ ಮೌಲ್ಯ. ಒಂದು ಕಾಗದದ ಚೂರಿನಲ್ಲಿ 1000 ರೂಪಾಯಿ ಎಂದು ಬರೆದಿರುವುದು ಚಲಾವಣೆಯಲ್ಲಿರುತ್ತದೆ. ಈ ಮುಖಬೆಲೆಯೂ ಸಾರ್ವತ್ರಿಕ, ಸಾರ್ವಕಾಲಿಕ ಅಲ್ಲ. ನ್ಯೂಗಿನಿಯ ಬುಟಕಟ್ಟು ಮನುಷ್ಯನಿಗೆ ಅದನ್ನು ಕೊಟ್ಟರೆ ಆತ ಅದರಲ್ಲಿ ತಂಬಾಕು ಸುತ್ತಿ ಹೊಗೆ ಬಿಡಬಹುದು. ಕಲಾ ಮೌಲ್ಯವೂ ಹೀಗೇನೇ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ದಾವಿಂಚಿಯ ಮೊನಲೀಸಾ ತೈಲಚಿತ್ರವನ್ನು .ಫ್ರೇಮಿನಿಂದ ಹರಿದು ತೆಗೆದು ರದ್ದಿ ಪೇಪರ್ ಕೊಳ್ಳುವ ಅಂಗಡಿಯಾತನಿಗೆ ಕೊಟ್ಟರೆ ಆತ ಅದನ್ನು ಮಡಚಿ ತಕ್ಕಡಿಯಲ್ಲಿಟ್ಟು ತೂಗಬಹುದು. ನಮ್ಮಜ್ಜಿ ಮೊಮ್ಮಕ್ಕಳ ಪಠ್ಯ ಪುಸ್ತಕಕ್ಕೆ ಬೈಂಡ್ ಹಾಕಲು ಸಾಧ್ಯವೇ ಎಂದು ಪ್ರಯತ್ನಿಸಲೂ ಬಹುದು. ಕಲೆಯ ಮೌಲ್ಯ ನಿರ್ಣಯ ಬುದ್ಧಿಯ ಬಳಕೆಯಿಂದ, ವ್ಯಾವಹಾರಿಕ ಮಟ್ಟದಲ್ಲಿ ಸಾಧ್ಯವಿಲ್ಲ ಎಂದಾಯಿತು. ಒಂದು ಪ್ರತ್ಯೇಕ ವರ್ಗ ಭಾವನಾತ್ಮಕ ನೆಲೆಯಲ್ಲಿ ಈ ಕೆಲಸ ನಡೆಸುತ್ತಿರುವುದು ನಮಗರಿವಾಗುತ್ತದೆ.   ಪೈಂಟಿಂಗ್ನಲ್ಲಿ ಕೊನೆಯ ಪಕ್ಷ ಕ್ಯಾನ್ವಸ್ ಎನ್ನುವ ಮೂಲದ್ರವ್ಯವಾದರೂ ಇದೆ. ಆದರೆ ಸಂಗೀತದಲ್ಲಿ ನೋಟಕ್ಕೆ ಸಿಗುವ, ಸ್ಪರ್ಶಕ್ಕೆ ದಕ್ಕುವ ದ್ರವ್ಯಗಳೇ ಇಲ್ಲ. ನಾದ, ಲಯ ಅನ್ನುವ ಅಮೂರ್ತ ಕಲ್ಪನೆಗಳನ್ನು ಬಳಸಿಕೊಂಡು ಅದಕ್ಕೆ ಭಾವ ಅನ್ನುವ ಇನ್ನೊಂದು ಅಮೂರ್ತ ದ್ರವ್ಯದ ಲೇಪ ನೀಡಿ ಸಂಗೀತವನ್ನು ಸೃಷ್ಟಿಸಲಾಗುತ್ತದೆ. ಅಂದರೆ ಅದಕ್ಕೆ ವ್ಯಾವಹಾರಿಕ ನೆಲೆಯಲ್ಲಿ ಅಂತಸ್ಥ ಮೌಲ್ಯವೇ ಇಲ್ಲ ಎಂದಾಯಿತು. ‘ರಸಿಕ’ ಅನ್ನುವಾತ ತನಗೆ ದೊರಕುವ ‘ಆನಂದ’ ಎನ್ನುವ ಮಗುದೊಂದು ಅಮೂರ್ತ ‘ಅನುಭವ’ದ ಮೂಲಕ ಅದಕ್ಕೆ ಮೌಲ್ಯ ಒದಗಿಸುತ್ತಾನೆ. ಅಂದರೆ ಜನ ಸಮುದಾಯದ ಒಂದು ಪ್ರತ್ಯೇಕ ವರ್ಗ ಬೇರೇನೇ ಆದ ಒಂದು ಭಾವನಾತ್ಮಕ ಚೌಕಟ್ಟಿನಲ್ಲಿ ಸಂಗೀತದ ಮೌಲ್ಯ ನಿರ್ಧರಿಸುತ್ತಾರೆ.   ಇಲ್ಲಿ ಕೂಡ ಮೌಲ್ಯ ಸಾಪೇಕ್ಷವೇ ಆಗಿರುತ್ತದೆ ಅನ್ನುವುದಕ್ಕೆ ಮೇಲೆ ಹೇಳಿದ ಇಬ್ಬರು ಮಿತ್ರರ ವಿಭಿನ್ನ ಪ್ರತಿಕ್ರಿಯೆಗಳೇ ಸಾಕ್ಷಿ. ಸಂಗೀತದಿಂದ ವ್ಯಕ್ತಿ ಏನನ್ನು ಅಪೇಕ್ಷಿಸುತ್ತಾನೆ, ಅದನ್ನು ಸ್ವೀಕರಿಸುವುದಕ್ಕೆ ಆತ ಎಷ್ಟರ ಮಟ್ಟಿಗೆ ಸಿದ್ಧನಾಗಿರುತ್ತಾನೆ ಅನ್ನುವುದರ ಮೇಲೆ ಆತ ನಿರ್ಧರಿಸುವ ಮೌಲ್ಯ ಅವಲಂಬಿತವಾಗಿರುತ್ತದೆ. ಇದರ ಅರ್ಥ ಅಭಿವ್ಯಕ್ತಿಯಲ್ಲಿರುವ ಗುಣಗಳು ಗಣನೆಗೆ ಬರುವುದಿಲ್ಲ ಎಂದಲ್ಲ. ಮೂಲಭೂತ ಅಪೇಕ್ಷಿತ ಗುಣಗಳು ಅದರಲ್ಲಿ ಇಲ್ಲವಾದರೆ ಯಾರಲ್ಲೂ ಯಾವ ರೀತಿಯ ಸಂವೇದನೆಯನ್ನೂ ಅದು ಮೂಡಿಸುವುದಿಲ್ಲ. ಅದರೆ ಅತ್ಯುನ್ನತ ಮಟ್ಟದ ಅಭಿವ್ಯಕ್ತಿಯ ಮೌಲ್ಯವೂ ನಿರ್ಣಯವಾಗುವುದು ಶ್ರೋತೃವಿನ ಸಾಂಸ್ಕೃತಿಕ ಮಟ್ಟದಲ್ಲಿ, ವ್ಯಕ್ತಿನಿಷ್ಠ ನೆಲೆಯಲ್ಲಿ. ಈ ಕಾರಣದಿಂದ ಒಂದು ಸಂಗೀತ ಕಛೇರಿ ಏಕ ಕಾಲದಲ್ಲಿ ಚೆನ್ನಾಗಿರಲೂ ಸಾಧ್ಯ, ಬೋರ್ ಹೊಡೆಸಲೂ ಸಾಧ್ಯ -ಶ್ರೋತೃವಿನ ದೃಷ್ಟಿಯಲ್ಲಿ. ಸಂಗೀತದ ಹಿಂದಿರುವ ಈ ಸಂಕೀರ್ಣ ಮಾನಸಿಕ ವ್ಯವಹಾರದ ಅರಿವು ಕಲಾವಿದರಲ್ಲೂ ರಸಿಕರಲ್ಲೂ ಇರಬೇಕು. ಒಂದಕ್ಕಿಂತ ಹೆಚ್ಚು ಅನುಭವಾಧಾರಿತ ಸತ್ಯಗಳು ಸಹಬಾಳ್ವೆ ನಡೆಸುವುದು ಕಲಾಕ್ಷೇತ್ರದಲ್ಲಿ ಮಾತ್ರ. ಸಂಗೀತ cognoscente ಗೆ ಮಾತ್ರ ಪ್ರಸ್ತುತವಲ್ಲ, ಒಬ್ಬ ಸಾಮಾನ್ಯ ಶ್ರೋತೃವಿಗೂ ಅದು ಪ್ರಸ್ತುತವೇ ಆಗಿರುತ್ತದೆ. ತನ್ನದೇ ಆದ ಸಂವೇದನೆಗಳ ವರ್ತುಲದಲ್ಲಿ ಆತ ತನ್ನನ್ನು ಸಂಗೀತದೊಂದಿಗೆ ಗುರುತಿಸಿಕೊಂಡಿರುತ್ತಾನೆ. ಇದನ್ನು ಗಮನದಲ್ಲಿರಿಕೊಂಡು ಪ್ರಕೃತ ನಾವು ನೋಡುತ್ತಿರುವ ಕರ್ನಾಟಕ ಸಂಗೀತ ಕಛೇರಿಯ ವಿನ್ಯಾಸವನ್ನು ರೂಪಿಸಲಾಗಿದೆ. ಆದರೆ ಸಂಗೀತದಿಂದ ಪಡೆಯುವ ಆನಂದದ ಮಟ್ಟವನ್ನು, ತಾನು ಸೂಕ್ಷ್ಮವಾಗುತ್ತ ಆ ಮೂಲಕ ಸಂಗೀತದ ಸೂಕ್ಷ್ಮಗಳನ್ನು ಗ್ರಹಿಸಿಕೊಳ್ಳುತ್ತ ಎತ್ತರಿಸಿಕೊಳ್ಳುವ ಜವಾಬ್ದಾರಿ ನೂರಕ್ಕೆ ನೂರು ರಸಿಕನದ್ದಾಗಿರುತ್ತದೆ. ಈ ಯತ್ನದಲ್ಲಿ ಕಲಾವಿದರು, ಸಂಘಟಕರು ಮತ್ತು ಪ್ರಾಜ್ಞರು ಆತನ ನೆರವಿಗೆ ಬರಬೇಕಾದ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ. ಶಾಸ್ತ್ರೀಯ ಸಂಗೀತವನ್ನು ಉಳಿಸುವುದಕ್ಕೆ ಇರುವುದು ಇದೊಂದೇ ದಾರಿ.        ]]>

‍ಲೇಖಕರು G

March 21, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

3 ಪ್ರತಿಕ್ರಿಯೆಗಳು

  1. V.N.Laxminarayana

    ಒಳ್ಳೆಯ ಲೇಖನ.ಇಂಥವು ಆಗಾಗ ಕಾಣಿಸುಕೊಳ್ಳುತ್ತಿದ್ದರೆ ಅವಧಿಯ ಅಂತರಂಗದಲ್ಲಿ ಸಂವೇದನೆಯ ಕಸುವು ಹೆಚ್ಚಾಗುತ್ತದೆ.
    ಕ್ಯಾನ್ವಾಸ್,ವರ್ಣ ದ್ರವ್ಯಗಳಾಗಿರುವಂತೆ,ಪೇಂಟಿಂಗ್ ಅನ್ನುವುದು ಬೆಳಕಿನ ಸಂಯೋಜನೆ,ಆಕಾರಗಳ ವಿನ್ಯಾಸ,ಸ್ಥಗಿತ ಚಲನೆ,ಭಂಗಿ, ಲಯ, ಕೋನಗಳ ಮೂಲಕ ಮೆದುಳಿನಲ್ಲಿ ಅನುಭವವಾಗುವಂತೆ ಸಂಗೀತದಲ್ಲಿಯೂ ವಾದ್ಯಗಳು,ಕಂಠ,ಬೆರಳು,ಗಾಳಿ ಮುಂತಾದ ದ್ರವ್ಯಗಳ ಚಲನೆ,ಕಂಪನದಿಂದ ಶಬ್ದ,ಲಯ ವಿನ್ಯಾಸಗಳ ಮೂಲಕ ಕಲಾವಿದರು ತಮ್ಮ ಮೆದುಳಿನಲ್ಲಿ ಸೃಷ್ಟಿಸುವ ಅನುಭವ ಕೇಳುಗರ ಕರಣಗಳ ಮೂಲಕ ದೇಹದಲ್ಲಿ ಕಂಪನ ವಿನ್ಯಾಸಗಳನ್ನು ಉಂಟುಮಾಡಿ ಮೆದುಳಿನಲ್ಲಿ ಅನುಭವವಾಗೇ ಮುಟ್ಟುತ್ತದೆ ಅಲ್ಲವೆ? ಇದರ ಬಗ್ಗೆ ಅರಿವಿರುವ, ಕಲೆಯ ವ್ಯಾಕರಣ ತಿಳಿದವರಿಗೆ ಕಲಾನುಭವವಾಗಿ ಉಳಿದವರಿಗೆ ಅವರವರ ಅರಿವಿನ ಸ್ತರಗಳಿಗೆ ತಕ್ಕಂತೆ ಅರ್ಥೈಸಿಕೊಳ್ಳಬಹುದಾದ ಅನುಭವವಾಗುತ್ತದೆ.ಅವರವರ ಸಾಮಾಜಿಕ ಪರಿಸರ ಅವರ ಪ್ರಜ್ಞೆಯಲ್ಲಿ ಪ್ರತಿಫಲಿತಗೊಂಡು ಮೌಲ್ಯ ಏರ್ಪಡುತ್ತದೆ. ಅದು ಅಂತಸ್ಥ ಮೌಲ್ಯವೋ ಮುಖ ಬೆಲೆಯೋ ಎನ್ನುವುದು ಅನುಭವಿಸುವವರ ಸಾಮಾಜಿಕತೆಯಲ್ಲಿದೆ. ಸಾಮಾಜಿಕತೆ ಇನ್ನೂ ರೂಪುಗೊಳ್ಳದ ವಯಸ್ಸಿನ ಮಗುವಿಗೆ ಚಿನ್ನ, ಕಾಗದ,ಎಲ್ಲಾ ಮೌಲ್ಯರಹಿತ ವಸ್ತುಗಳೇ. ಕರಣಗಳಿಗೆ ದಕ್ಕುವುದು ಮೂರ್ತ.ಹಾಗೆ ದಕ್ಕುವ ಮೂಲಕ ಅನುಭವದ ಸಂವೇದನೆಯಾಗಿರುವುದು ಅಮೂರ್ತ.ಆದರೆ ಮೂರ್ತದ ಮೂಲಕ ಪ್ರಕಟವಾಗಲಾರದ ಅಮೂರ್ತ ಯಾವುದೂ ಇಲ್ಲ.ಯಾವುದಕ್ಕಾದರೂ ಬೆಲೆ ಬರುವುದು ದೇಹದ ಮೂಲಕ ರೂಪ ಪಡೆಯುವ ಶ್ರಮದೊಂದಿಗೆ ಕೂಡಿದಾಗಲೇ.
    -ವಿ.ಎನ್.ಲಕ್ಷ್ಮೀನಾರಾಯಣ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: