ನಾನಂತೂ ಬಹುತೇಕ ಮಠಾಧೀಶರು ಸಮಾಜದ ಶತ್ರುಗಳು ಎಂದೇ ಭಾವಿಸಿದ್ದೇನೆ

ಮಠಾಧೀಶರು ಸಮಾಜದ ಶತ್ರುಗಳೇ?

-ದಿನೇಶ್ ಕುಮಾರ್ ಎಸ್.ಸಿ

ದೇಸೀಮಾತು

dsc_3968-1

ಆನೆಯನೇರಿಕೊಂಡು ಹೋದಿರಿ ನೀವು,
ಕುದುರೆಯನೇರಿಕೊಂಡು ಹೋದಿರಿ ನೀವು.
ಕುಂಕುಮ-ಕಸ್ತುರಿಯ ಪೂಸಿಕೊಂಡು ಹೋದಿರಿ ಅಣ್ಣಾ;
ಸತ್ಯದ ನಿಲುವನರಿಯದೆ ಹೋದಿರಲ್ಲಾ!
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ
ಅಹಂಕಾರವೆಂಬ ಮದಗಜವನೇರಿ
ವಿಧಿಗೆ ಗುರಿಯಾಗಿ ನೀವು ಕೆಟ್ಟು ಹೋದಿರಲ್ಲಾ!
ನಮ್ಮ ಕೂಡಲಸಂಗಮದೇವನನರಿಯದೆ
ನರಕಕ್ಕೆ ಭಾಜನವಾದಿರಲ್ಲಾ!

ಚಿತ್ರದುರ್ಗದ ಸಮ್ಮೇಳನ ಮುಗಿದರೂ, ಸಮ್ಮೇಳನದಲ್ಲಿ ಹುಟ್ಟಿಕೊಂಡ ಕಿಚ್ಚು-ರೊಚ್ಚು ಇನ್ನೂ ಮುಂದುವರೆದಿದೆ. ಸಮ್ಮೇಳನ ಆರಂಭವಾಗುವುದಕ್ಕೆ ಮುನ್ನವೇ `ಮಠಾಧೀಶರು ನಮ್ಮ ಶತ್ರುಗಳು’ ಎಂದು ಸಮ್ಮೇಳನಾಧ್ಯಕ್ಷ ಎಲ್.ಬಸವರಾಜು ಹೇಳಿದ್ದರು. ವಿಶೇಷವೆಂದರೆ ಈ ನಾಡಿನ ಸಾವಿರ ಸಾವಿರ ಮಠಾಧೀಶರ ಪೈಕಿ ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಮಾತ್ರ ಈ ಹೇಳಿಕೆಯಿಂದ ರೊಚ್ಚಿಗೆದ್ದರು. ಎಲ್.ಬಿಯವರು ಹೇಳಿದ ಮಾತು ತಮ್ಮನ್ನು ಕುರಿತೇ ಆಡಿದ್ದಿರಬೇಕು ಎಂದು ಶಿವಾಚಾರ್ಯರು ಭಾವಿಸಿದರೇನೋ? ಹೀಗಾಗಿ ಅವರು ಎಲ್.ಬಿಯವರ ವಿರುದ್ಧ ಹರಿಹಾಯ್ದರು. ಸಮ್ಮೇಳನ ನಿರ್ವಹಣೆಯಲ್ಲಿ ಮಠಾಧೀಶರ ಪಾತ್ರವೂ ಇದ್ದಿದ್ದರಿಂದಾಗಿ ಎಲ್.ಬಿಯವರು ಸಮ್ಮೇಳನಾಧ್ಯಕ್ಷ ಪದವಿ ತಿರಸ್ಕರಿಸಿ ಈ ಮಾತುಗಳನ್ನು ಆಡಬೇಕಿತ್ತು ಎಂದು ಅಪ್ಪಣೆ ಕೊಡಿಸಿದರು. ಇದಕ್ಕೆ ಪ್ರತಿಯಾಗಿ ಶಿವಾಚಾರ್ಯರ ಮಾತುಗಳನ್ನು ಸಮ್ಮೇಳನದ ವೇದಿಕೆಗಳಲ್ಲೇ ಕಿ.ರಂ.ನಾಗರಾಜ್ ಮತ್ತಿತರರು ಖಂಡಿಸಿದರು.

ಅಲ್ಲಿಗೆ ಎಲ್ಲವೂ ಮುಗಿಯಲಿಲ್ಲ. ಪ್ರಜಾವಾಣಿಗೆ ಬರೆದ ವಾಚಕರ ವಾಣಿಯಲ್ಲಿ ಪ್ರೊ. ಚಂದ್ರಶೇಖರ ಪಾಟೀಲರು ತಮ್ಮ ಎಂದಿನ ಶೈಲಿಯಲ್ಲಿ ಶಿವಾಚಾರ್ಯರನ್ನು ಕುಟುಕಿದರು. `ಶಿವಮೊಗ್ಗದಲ್ಲೂ ಧಮಕಿ ಇತ್ತು. ನಂತರದ ಸಮ್ಮೇಳನಗಳಲ್ಲಿ ಈ ಬಗೆಯ ನೇರ ಹಸ್ತಕ್ಷೇಪವನ್ನು ನಮ್ಮ ರಾಜಕೀಯ ವಲಯದ ಪ್ರಭುಗಳು ಕಡಿಮೆ ಮಾಡಿದ್ದಾರೆ. ಆದರೆ `ಸಿರಿಗರ’ ಹೊಡೆಸಿಕೊಂಡ ಸ್ವಾಮಿಗಳ ಕಿತಾಪತಿ ಮಾತ್ರ ಮೊನ್ನೆಯ ಸಮ್ಮೇಳನದಲ್ಲಿ ಎದ್ದು ಕಾಣುವಂತಿತ್ತು. ಇಂಥವರನ್ನು ಕೂಡ ನಮ್ಮ ಪ್ರಜ್ಞಾವಂತ ಜನತೆ ರಿಪೇರಿ ಮಾಡುತ್ತಾರೆ’ ಎಂದು ಚಂಪಾ ಬರೆದಿದ್ದರು.

ನಂತರ ಶಿವಾಚಾರ್ಯರ ಸರದಿ. ವಿಜಯಕರ್ನಾಟಕದ ತಮ್ಮ ಬಿಸಿಲು ಬೆಳದಿಂಗಳು ಅಂಕಣದಲ್ಲಿ (ಫೆ.೧೮) ಶಿವಾಚಾರ್ಯರು ಸಮ್ಮೇಳನ ಮತ್ತು ವೈಚಾರಿಕತೆಯ ಪ್ರಹಸನ ಎಂಬ ಲೇಖನವೊಂದನ್ನು ಬರೆದು, ಚಂಪಾ ಅವರನ್ನು ಹಂಗಿಸಿದ್ದಾರೆ. `ಪ್ರಗತಿಪರರು, ಚಿಂತಕರು ಎನಿಸಿಕೊಂಡ ಕೆಲವರು ಬಹಿರಂಗವಾಗಿ ಮಠಗಳೊಂದಿಗೆ ಗುರ್ತಿಸಿಕೊಳ್ಳಲು ಸಿದ್ಧರಿಲ್ಲ. ಆದರೆ ಅಂತರಂಗದಲ್ಲಿ ಮಾತ್ರ ಮಠಗಳ ಸಹಾಯ ಇವರಿಗೆ ಬೇಕೇ ಬೇಕು. ಎಂದು ಹೇಳುತ್ತ ಅದಕ್ಕೆ ಉದಾಹರಣೆಯೊಂದನ್ನು ಪೋಣಿಸಿದ್ದಾರೆ.

ಚಂಪಾ ಮತ್ತೆ ಉತ್ತರಿಸಿದ್ದಾರೆ; ಪ್ರಜಾವಾಣಿಯಲ್ಲಿ. `ತಮ್ಮ ವಿದ್ಯೆಯ ಬಗ್ಗೆ ನನಗೆ ಗೌರವ ಇದೆ. ಆದರೆ ನಿಮ್ಮಲ್ಲಿ ವಿದ್ಯೆಗೆ ತಕ್ಕ ವಿನಯ ಇಲ್ಲ. ನೀವು ಜರ್ಮನಿಯ ಬದಲಾಗಿ ಇಂಗ್ಲೆಂಡಿಗೆ ಹೋಗಿದ್ದರೆ ಚೆನ್ನಾಗಿತ್ತು. ಜರ್ಮನಿಯ ಜ್ಞಾನದೊಂದಿಗೆ ಅಲ್ಲಿಯ ಹಿಟ್ಲರ್ ಪ್ರಜ್ಞೆಯನ್ನೂ ತಂದ ಹಾಗಿದೆ.’ ಎಂದು ಚಂಪಾ ನೇರವಾಗಿ ದಾಳಿ ನಡೆಸಿದ್ದಾರೆ.

ಈ ಚರ್ಚೆ ಇನ್ನಷ್ಟು ಮುಂದುವರೆಯುವ ಸಾಧ್ಯತೆಗಳೂ ಇವೆ, ಆಗಲಿ. ಎಲ್ಲ ವಿವಾದಗಳಿಗೆ ಮೂಲಧಾತುವಾಗಿರುವ ಎಲ್.ಬಿಯವರ ಮಾತಿನ ಬಗ್ಗೆ ನನಗನ್ನಿಸಿದ್ದನ್ನು ಇಲ್ಲಿ ಹೇಳಲು ಹೊರಟಿದ್ದೇನೆ.

****

ಚಂಪಾ ಬಳಸಿದ `ಸಿರಿಗರ’ ಪದ ಇಂಟರೆಸ್ಟಿಂಗ್ ಅನಿಸಿತು. ಶಿವಾಚಾರ್ಯರು ಪ್ರತಿನಿಧಿಸುವ `ಸಿರಿಗೆರೆ ಪದದ ಹಾಗೆಯೇ ಧ್ವನಿಸುವ `ಸಿರಿಗರ’ ಪದವನ್ನು ಚಂಪಾ ಬೇಕೆಂತಲೇ ಬಳಸಿದ್ದರು. ಬಸವಣ್ಣನವರ ವಚನವೊಂದರಲ್ಲೂ ಸಿರಿಗರ ಎಂಬ ಪದದ ಉಲ್ಲೇಖವಿದೆ; ಆ ವಚನ ಇಲ್ಲಿದೆ:

ಹಾವು ತಿಂದವರ ನುಡಿಸಬಹುದು!
ಗರ ಹೊಡೆದವರ ನುಡಿಸಬಹುದು!
ಸಿರಿಗರ ಹೊಡೆದವರ ನುಡಿಸಬಾರದು ನೋಡಯ್ಯ!
ಬಡತನವೆಂಬ ಮಂತ್ರವಾದಿ ಹೋಗಲು
ಒಡನೆ ನುಡಿವರಯ್ಯ ಕೂಡಲಸಂಗಮದೇವ.

ಶಿವಾಚಾರ್ಯರ ಮಾತು ಹಾಗಿರಲಿ, ಸಾವಿರಾರು ಧರ್ಮಗುರುಗಳಿಗೆ ಇಂದು ಹೊಡೆದಿರುವುದು `ಸಿರಿಗರ’ವೇ ಹೌದು. ಮಠಾಧೀಶರು ಇಂದು ಶ್ರೀಮಂತರಲ್ಲಿ ಶ್ರೀಮಂತರು. ಈ ಶ್ರೀಮಂತಿಕೆಯ ಗುಟ್ಟು ರಟ್ಟಾಗುವುದೇ ಇಲ್ಲ. ಯಾವ ಮಠದ ಮೇಲೂ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸುವುದಿಲ್ಲ. ವರ್ಷಕ್ಕೊಮ್ಮೆ ಲಾಭ-ನಷ್ಟದ ಲೆಕ್ಕಾಚಾರ ಕೊಡಿ ಎಂದು ನಮ್ಮ ಸರ್ಕಾರಗಳೂ ಕೇಳುವುದಿಲ್ಲ. ಯಾವ ಲೋಕಾಯುಕ್ತಕ್ಕೂ ಮಠದ ಆಸ್ತಿಪಾಸ್ತಿಯ ತನಿಖೆ ನಡೆಸುವ ಅಧಿಕಾರ ಇಲ್ಲ!

ಪ್ರಬಲ ಮಠಾಧೀಶರಂತೂ ತಮ್ಮ ಶಿಕ್ಷಣ ಸಂಸ್ಥೆಗಳದ್ದೂ ಸೇರಿದಂತೆ ಇತರ ಕೆಲಸಗಳಿಗಾಗಿ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡದ ಬಾಗಿಲು ತುಳಿಯುವುದಿಲ್ಲ. ಕಾರ್‍ಯದರ್ಶಿ ಮಟ್ಟದ ಅಧಿಕಾರಿಗಳೇ ಮಠಕ್ಕೆ ಫೈಲುಗಳನ್ನು ಹಿಡಿದುಕೊಂಡು ಹೋಗುತ್ತಾರೆ. ಅರ್ಥಾತ್ ಸರ್ಕಾರವೇ ಮಠಗಳಿಗೆ ತೆರಳುತ್ತದೆ. ಮಠಗಳಲ್ಲೇ ಸರ್ಕಾರದ ಕೆಲಸಗಳು ನಡೆಯುತ್ತವೆ. ಹಿಂದೊಮ್ಮೆ ಮೈಸೂರಿನ ಹಿರಿಯ ರಾಜಕಾರಣಿ ಎಚ್.ವಿಶ್ವನಾಥ್ ಮಠಗಳ ವಿರುದ್ಧ ಹರಿಹಾಯ್ದಿದ್ದರು. ಆಗಲೂ ಮಠಾಧೀಶರ ಪರವಾಗಿ ರಣಕೇಕೆ ಹಾಕಿದವರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳೇ! ಶಿವಾಚಾರ್ಯರು ತಮ್ಮ ಪ್ರಭಾವವನ್ನು ಎಷ್ಟು ನಿಖರವಾಗಿ ಬಳಸಿದರೆಂದರೆ ಮತ್ತೆ ವಿಶ್ವನಾಥ್ ಆ ಸ್ವಾಮಿಗಳ ವಿರುದ್ಧ ಬಾಯಿ ತೆರೆಯಲೇ ಇಲ್ಲ!

ಹಿಂದೆ ಆದಿಚುಂಚನಗಿರಿ ಮಠದ ಸ್ವಾಮೀಜಿಗಳು ಹೆಲಿಕಾಪ್ಟರ್ ಒಂದನ್ನು ಕೊಂಡುಕೊಂಡರು. ಹಾಸನದ ಜವೇನಹಳ್ಳಿ ಮಠದಲ್ಲಿ ನಡೆದ ಬೃಹತ್ ಕಾರ್ಯಕ್ರಮವೊಂದರಲ್ಲಿ ನಿಡುಮಾಮಿಡಿ ಸ್ವಾಮೀಜಿ ಮಾತನಾಡುತ್ತ, `ಸ್ವಾಮಿಗಳಿಗೇಕೆ ಹೆಲಿಕಾಪ್ಟರ್, ಎಲ್ಲವನ್ನೂ ತ್ಯಾಗ ಮಾಡಿದವರು ಸ್ವಾಮಿಗಳಲ್ಲವೆ? ಯಾಕೆ ಐಷಾರಾಮಿ ಕಾರುಗಳು? ಯಾಕೀ ಐಷಾರಾಮಿ ಜೀವನ?’ ಎಂದು ಪ್ರಶ್ನಿಸಿದ್ದರು. ನಂತರ ಹಾಸನಕ್ಕೆ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಚುಂಚನಗಿರಿ ಸ್ವಾಮೀಜಿ `ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ, `ನಾಯಿಗಳು ಬೊಗಳುತ್ತವೆ, ಅವುಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಹೇಳಿದ್ದರು. ಮಠಗಳ ಆಸ್ತಿಪಾಸ್ತಿ, ವೈಭವೋಪೇತ ಬದುಕಿನ ಬಗೆ ಯಾರಾದರೂ ಪ್ರಶ್ನಿಸಿದರೆ ಅವರು `ನಾಯಿ’ ಎನ್ನಿಸಿಕೊಳ್ಳಬೇಕಾಗುತ್ತದೆ!

ಸಾಕಷ್ಟು ರಾಜಕಾರಣಿಗಳು ಪ್ರಬಲ ಮಠಾಧೀಶರ ಬಳಿ ತಮ್ಮ ಕಪ್ಪು ಹಣವನ್ನು ತೆಗೆದಿರಿಸಿರುತ್ತಾರೆ ಎಂಬ ಮಾತೂ ಇದೆ. ಹಿರಿಯ ರಾಜಕಾರಣಿಯೊಬ್ಬರು ಮಠವೊಂದರಲ್ಲಿ ಇಟ್ಟ ಹಣವನ್ನು ಆ ಮಠದ ಸ್ವಾಮಿ ಹಿಂದಿರುಗಿಸಲಿಲ್ಲ, ಅದಕ್ಕಾಗಿ ಆ ಸ್ವಾಮಿಗೂ-ರಾಜಕಾರಣಿಗೂ ಜಟಾಪಟಿ ನಡೆಯಿತು ಎಂಬ ಮಾತುಗಳೂ ಇವೆ. ಇದೆಲ್ಲ ಸತ್ಯವೋ ಸುಳ್ಳೋ, ಆದರೆ ಕಪ್ಪು ಹಣ ಇಡುವುದಕ್ಕೆ ಮಠಗಳಿಂತ ಹೆಚ್ಚು ಸೇಫ್ ಜಾಗ ಇನ್ನೊಂದಿಲ್ಲ ಎಂಬುದು ಮಾತ್ರ ನಿಜ. ಯಾಕೆಂದರೆ ಮಠಗಳಿಗೆ ಯಾವ ಪೊಲೀಸು, ಟ್ಯಾಕ್ಸಿನವರೂ ಹೋಗುವುದಿಲ್ಲ. ಕಳುಹಿಸುವ ಧೈರ್ಯ ಯಾವ ಸರ್ಕಾರಕ್ಕೂ ಇಲ್ಲ.

*****

ಕಾಮ ಒಂದನೇ ಭವಿ, ಕ್ರೋಧ ಎರಡನೇ ಭವಿ
ಲೋಭ ಮೂರನೇ ಭವಿ, ಮೋಹ ನಾಲ್ಕನೇ ಭವಿ
ಮದ ಐದನೇ ಭವಿ, ಮತ್ಸರ ಆರನೇ ಭವಿ
ಆಮಿಷ ಏಳನೇ ಭವಿ
ಇಂತೀ ಏಳು ಭವಿಗಳ ತಮ್ಮೊಳಗಿಟ್ಟುಕೊಂಡು
ಲಿಂಗವಿಲ್ಲದವರ ಭವಿ ಭವಿ ಎಂಬರು
ತಮ್ಮಂತರಂಗದಲ್ಲಿದ್ದ ಲಿಂಗಾಂಗದ ಸುದ್ದಿಯನ್ನರಿಯದೆ
ಅಚ್ಚಪ್ರಸಾದಿ-ನಿಚ್ಚಪ್ರಸಾದಿ-ಸಮಯಪ್ರಸಾದಿಗಳೆಂದು
ಜಲಕ್ಕೆ ಕನ್ನವನಿಕ್ಕಿ ಉದಕವ ತಂದು
ಲಿಂಗಮಜ್ಜನಕ್ಕೆರೆವ ಹಗಲುಗಳ್ಳರಿಗೆ ಮೆಚ್ಚುವನೆ
ಚೆನ್ನಮಲ್ಲಿಕಾರ್ಜುನ?

ಬಸವಣ್ಣನ ಪೂರ್ವದಿಂದಲೂ ಭವಿ-ಭಕ್ತ ಸಂಘರ್ಷ ನಡೆದುಬಂದಿದೆ. ಕೆಳಜಾತಿಗಳ ಜನರು ವೀರಶೈವಕ್ಕೆ ಸೇರ್ಪಡೆಯಾದಾಗ ಎದುರಾದ ವಿರೋಧಗಳ ಕುರಿತೇ ನೂರಾರು ವಚನಗಳು ಇವೆ. ಅಕ್ಕಮಹಾದೇವಿ ಸಹ ಈ ವಚನದಲ್ಲಿ ಹೊಸದಾಗಿ `ಭಕ್ತ’ರಾದವರ ವಿರುದ್ಧ ನಡೆದ ಮಸಲತ್ತಿನ ವಿರುದ್ಧ ಮಾತನಾಡಿದ್ದಾಳೆ. ಭವಿ ಎಂದರೆ ಯಾರು ಎಂಬುದಕ್ಕೆ ಅಕ್ಕ ತನ್ನದೇ ಆದ ವ್ಯಾಖ್ಯೆ ನೀಡುತ್ತಾಳೆ. ಆಕೆಯ ಪ್ರಕಾರ ಲಿಂಗವಿಲ್ಲದವರು ಭವಿಗಳಲ್ಲ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಆಮಿಷಗಳನ್ನು ತಮ್ಮ ಒಡಲಲ್ಲಿ ಇಟ್ಟುಕೊಂಡವರೇ ನಿಜವಾದ ಭವಿಗಳು. ಅವರು ಲಿಂಗವಂತರಾದರೂ ಭವಿಗಳು.

`ಸಿರಿಗರ’ ಹೊಡೆಸಿಕೊಂಡ ನಮ್ಮ ಬಹುತೇಕ ಮಠಾಧೀಶರೆಲ್ಲರೂ ಅಕ್ಕ ವ್ಯಾಖ್ಯಾನಿಸುವ `ಭವಿ’ಗಳ ಪಟ್ಟಿಯಲ್ಲೇ ಬರುವಂಥವರು. ಇದನ್ನು ನಿರಾಕರಿಸುವ ಶಕ್ತಿಯೂ ಮಠಾಧೀಶರಿಗಿಲ್ಲ. ಈ ಎಲ್ಲ ಮಠಾಧೀಶರೂ ಆಸ್ತಿ ಸಂಗ್ರಹಣೆಯಲ್ಲೇ ಅತಿ ಹೆಚ್ಚು ತೃಪ್ತಿ ಕಾಣುವವರು. ಆಸ್ತಿ ಗಳಿಕೆಯ ಹಾದಿಯಲ್ಲಿ ಅವರು ಎಂಥ ಸಂಘರ್ಷದ ಮಾರ್ಗವನ್ನಾದರೂ ತುಳಿಯಬಲ್ಲರು. ಆಸ್ತಿ ಗಳಿಸಿದ ನಂತರ ಅದರ ಮದದಲ್ಲಿ ಏನು ಬೇಕಾದರೂ ಮಾಡಬಲ್ಲರು, ಮಾತಾಡಬಲ್ಲರು, ದಕ್ಕಿಸಿಕೊಳ್ಳಬಲ್ಲರು.

ಸ್ವಾಮಿಗಳು ಜಂಗಮವಾಗಲು ಬಯಸಲೊಲಲ್ಲರು. ಅವರು ಸ್ಥಾವರಗಳನ್ನು ನಿರ್ಮಿಸಿಕೊಂಡು ಕುಳಿತವರು. ಸ್ಥಾವರಗಳಲ್ಲಿ ಕುಳಿತವರು ಅರಿಷಡ್ವರ್ಗಗಳಿಂದ ದೂರವಿರುವುದು ಸಾಧ್ಯವೇ ಇಲ್ಲ. ದೂರವಿದ್ದೇವೆಂದು ತೋರಿಸಿಕೊಳ್ಳುವುದೂ ಸಾಧ್ಯವಿಲ್ಲ!

ಉಳ್ಳವರು ಶಿವಾಲಯವ ಮಾಡಿಹರು!
ನಾನೇನ ಮಾಡುವೆ? ಬಡವನಯ್ಯ!
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಳಶವಯ್ಯ!
ಕೂಡಲಸಂಗಮದೇವ ಕೇಳಯ್ಯ,
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!

ಬಸವಣ್ಣನವರ ಈ ವಚನವನ್ನು ಅದೆಷ್ಟು ಮಠಾಧೀಶರು ಅದೆಷ್ಟು ಸಾವಿರ ಬಾರಿ ತಮ್ಮ `ಆಶೀರ್ವಚನ’ಗಳಲ್ಲಿ ಹೇಳಿದ್ದಾರೋ? ಪಾಪ, ಅವರಿಗೆ ಸ್ಥಾವರ ಮತ್ತು ಜಂಗಮಕ್ಕಿರುವ ವ್ಯತ್ಯಾಸವೂ ಗೊತ್ತಿಲ್ಲ. ದೇಹವೇ ದೇಗುಲವಾಗುವ ಆತ್ಮ ಸಾಕ್ಷಾತ್ಕಾರ ಅವರ `ಕಾಣ್ಕೆ’ಗೆ ದಕ್ಕುವುದಿಲ್ಲ. ಹೀಗಾಗಿ ಮಠ ಕಟ್ಟಿಕೊಂಡು, ಗುಡಿ ಕಟ್ಟಿಕೊಂಡು ಕುಳಿತವರು ಈ ಮಠಾಧೀಶರು.

*****

ಬಸವಣ್ಣನೂ ಸೇರಿದಂತೆ ಯಾವ ವಚನಕಾರನೂ/ಳೂ ತನ್ನನ್ನು ತಾನು `ನಾವು’ ಎಂದು ಸಂಬೋಧಿಸಿಕೊಂಡಿದ್ದಿಲ್ಲ. ಆದರೆ ಶಿವಾಚಾರ್ಯ ಸ್ವಾಮಿಗಳಂಥವರು ಯಾವ ಸಂಕೋಚವೂ ಇಲ್ಲದೆ ಈ ರೀತಿಯ ಆತ್ಮ ಪ್ರತ್ಯಯ ಬಳಸುತ್ತಾರೆ. ಇದು ಮಠದ ಭಕ್ತರಿಗಾಗಿ ಹೊರಡಿಸುವ ಪತ್ರಿಕೆಯಲ್ಲಿ ಪ್ರಕಟವಾಗಿದೆ ಎಂದುಕೊಳ್ಳುವಂತೂ ಇಲ್ಲ. ಪ್ರಕಟವಾಗುವುದು `ವಿಜಯ ಕರ್ನಾಟಕ’ ಎಂಬ ನಂ.೧ ಪತ್ರಿಕೆಯಲ್ಲಿ.

ಶಿವಾಚಾರ್ಯರ ಅಹಮಿಕೆಗಳು ಪ್ರದರ್ಶನವಾಗುವುದು ಕೇವಲ ಈ ಬಗೆಯ ಆತ್ಮಪ್ರತ್ಯಯದಿಂದ ಮಾತ್ರವಲ್ಲ. ಈ ಸಾಲುಗಳನ್ನು ಗಮನಿಸಿ: `ಸಮ್ಮೇಳನಾಧ್ಯಕ್ಷರು ಚಿತ್ರದುರ್ಗಕ್ಕೆ ಕಾಲಿಡುತ್ತಿದ್ದಂತೆಯೇ ಮಠಾಧೀಶರು ನಮ್ಮ ಶತ್ರುಗಳು ಎಂಬ ರಣಕಹಳೆಯನ್ನು ಊದಿದರು. ಮೆರವಣಿಗೆಯಲ್ಲಿ ಬಂದು ಸಾನ್ನಿಧ್ಯ ವಹಿಸಿ ವಧೂವರರನ್ನು ಹರಸಿ ಕಾಣಿಕೆ ಪಡೆಯಬೇಕಾಗಿದ್ದ ಸ್ವಾಮಿಗಳು ಸ್ವತಃ ಕಾಣಿಕೆ ಕೊಟ್ಟು ಮುಂದೆ ನಿಂತು ಸಾಹಿತ್ಯ ಕನ್ನಿಕೆಯ ಮದುವೆ ಮಾಡಿಸಿ ಮದುಮಕ್ಕಳ ಮೆರವಣಿಗೆ ಮಾಡಿಸಿದರೂ ಬೀಗರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಶತ್ರುಗಳೆಂದು ಗೊತ್ತಿದ್ದೂ ಬೀಗತನ ಮಾಡುವ ಉದ್ದೇಶ ಬೀಗರಿಗೆ ಏನಿತ್ತೋ ದೇವರೇ ಬಲ್ಲ!’

ಕೆಲವು ಪ್ರಶ್ನೆಗಳು:
ಮೆರವಣಿಗೆಯಲ್ಲಿ ಬಂದು ಶಿವಾಚಾರ್ಯರು ಸಾನ್ನಿಧ್ಯವನ್ನೇ ವಹಿಸಬೇಕೆ? ಎಲ್ಲ ಸಾಹಿತ್ಯ ಪ್ರೇಮಿಗಳಂತೆ ಸಹಜವಾಗಿ ಭಾಗವಹಿಸಲು ಆಗುವುದಿಲ್ಲವೆ? ಸಾಹಿತ್ಯ ಸಮ್ಮೇಳನದಲ್ಲಿ ಕಾಣಿಕೆ ವಸೂಲಿ ಮಾಡಲಾಗಲಿಲ್ಲವಲ್ಲ ಎಂಬ ಕೊರಗೇ ನಿಮಗೇ? ಬದಲಾಗಿ ನೀವೇ ಒಂದಿಷ್ಟು ಕಾಣಿಕೆ ಕೊಡಬೇಕಾಯಿತಲ್ಲ ಎಂಬ ಸಂಕಟವೆ? `ಬೀಗತನದ ಪ್ರಶ್ನೆಗೆ ಬರುವುದಾದರೆ ಸಮ್ಮೇಳನಕ್ಕೆ ಒಂದಿಷ್ಟು ಸಹಾಯ ಮಾಡಿದ ಮಾತ್ರಕ್ಕೆ ಇಡೀ ಸಮ್ಮೇಳನದ ವಾರಸುದಾರಿಕೆಯನ್ನು ನಿಮಗೆ ಕೊಟ್ಟವರ್‍ಯಾರು? ಸಾಹಿತ್ಯ ಪರಿಷತ್ತು ನಡೆಸುವ ಸಾಹಿತ್ಯ ಸಮ್ಮೇಳನ ಮಠಾಧೀಶರ ಖಾಸಗಿ ಸ್ವತ್ತಾಗುವುದು ಸಾಧ್ಯವೆ? ಸಮ್ಮೇಳನಕ್ಕೆ ಸರ್ಕಾರವೂ ದುಡ್ಡು ಕೊಟ್ಟಿದೆ, ಚಿತ್ರದುರ್ಗದ ಸಾಮಾನ್ಯ ಜನರೂ ದೇಣಿಗೆ ಕೊಟ್ಟಿದ್ದಾರೆ, ಸರ್ಕಾರಿ ನೌಕರರೂ ಕಾಸು ಕೊಟ್ಟಿದ್ದಾರೆ. ಹೀಗಿರುವಾಗ `ಶತ್ರುಗಳೊಂದಿಗೆ ಬೀಗತನ ಪ್ರಶ್ನೆಯಾದರೂ ಎಲ್ಲಿಂದ ಉದ್ಭವಿಸುತ್ತದೆ? ಸಿರಿಗೆರೆ ಮಠವೇನಾದರೂ ಸಮ್ಮೇಳನ ಆಯೋಜಿಸಿದ್ದರೆ, ಈ ಮಾತು ಬರುತ್ತಿತ್ತು. ಆದರೆ ಇದು ಹಾಗಲ್ಲ ಎಂಬ ಸಾಮಾನ್ಯಪ್ರಜ್ಞೆ ನಿಮಗಿಲ್ಲವೆ?

******

`ಮಠಾಧೀಶರು ನಮ್ಮ ಶತ್ರುಗಳು ಎಂದು ಎಲ್.ಬಿಯವರು ಯಾವ ಅರ್ಥದಲ್ಲಿ ಹೇಳಿದರೋ? ಆದರೆ ನಾನಂತೂ ಬಹುತೇಕ ಮಠಾಧೀಶರು ಸಮಾಜದ ಶತ್ರುಗಳು ಎಂದೇ ಭಾವಿಸಿದ್ದೇನೆ. (ಮುಂದೆ ಮಠಾಧೀಶರು ಎಂಬ ಪದಬಳಕೆ ಇರುವೆಡೆಯೆಲ್ಲ ಬಹುತೇಕ ಎಂದು ಸೇರಿಸಿಕೊಂಡು ಓದುವುದು)

ಯಾಕೆಂದರೆ;
ಇವರು ಅಪ್ಪಟ ಜಾತಿವಾದಿಗಳು, ಕೋಮುವಾದಿಗಳು ಮತ್ತು ಯಥಾಸ್ಥಿತಿವಾದಿಗಳು.
ಮನುಷ್ಯರ ಹೆಗಲ ಮೇಲೆ ಕುಳಿತು ಮೆರವಣಿಗೆ ಮಾಡಿಸಿಕೊಳ್ಳುವ ಜೀವವಿರೋಧಿಗಳು.
ಕಿರೀಟ, ಪಲ್ಲಕ್ಕಿ, ಸಿಂಹಾಸನಗಳನ್ನು ಬಳಸಿ ದರ್ಬಾರು ನಡೆಸುವ ಪ್ರಜಾಪ್ರಭುತ್ವ ವಿರೋಧಿಗಳು.
ಕ್ಯಾಪಿಟೇಷನ್ ಲಾಬಿಯ ಅಧಿಕೃತ ಯಜಮಾನರು, ಶಿಕ್ಷಣವನ್ನು ಬಿಕರಿಗಿಟ್ಟವರು.
ಕಾವಿಯ ನೆರಳಲ್ಲಿ ರಾಜಕಾರಣ ಮಾಡುವವರು, ಧರ್ಮ-ರಾಜಕಾರಣವನ್ನು ಕಲಬೆರಕೆ ಮಾಡಿದವರು.
ಎಲ್ಲಕ್ಕಿಂತ ಮಿಗಿಲಾಗಿ ಅಸ್ಪೃಶ್ಯತೆ, ಮೌಢ್ಯ, ಅಂಧಾನುಕರಣೆ, ಹೀನ ಆಚರಣೆಗಳ ಪೋಷಕರು, ಪ್ರತಿಪಾದಕರು.

ಮಠಾಧೀಶರು ಶಾಲೆ ಕಾಲೇಜು ತೆರೆದು ಜ್ಞಾನದಾಸೋಹ ನೀಡುತ್ತಿಲ್ಲವೆ? ಬಡಮಕ್ಕಳಿಗೆ ಶಿಕ್ಷಣ ನೀಡುತ್ತಿಲ್ಲವೆ? ಅನ್ನ ಕೊಡುತ್ತಿಲ್ಲವೆ? ಇಂಥ ಹಲವಾರು ಪ್ರಶ್ನೆಗಳು ಉದ್ಭವಿಸಬಹುದು. ಯಾರ ದುಡ್ಡಿನಲ್ಲಿ ಈ ಶಿಕ್ಷಣ? ಊಟ? ಅದೆಲ್ಲವನ್ನೂ ಅಮಾಯಕ ಭಕ್ತರು ಕೊಟ್ಟಿದ್ದಲ್ಲವೆ?

*****

ಎಲ್‌ಬಿಯವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಎರಡು ಪ್ರಧಾನ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ದಲಿತರಿಗೆ ವಸತಿ ಶಾಲೆಗಳನ್ನು ತೆರೆಯಬೇಕು ಎಂಬುದು ಅವರ ಒಂದು ಆಗ್ರಹವಾದರೆ, ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕು ಎಂಬುದು ಮತ್ತೊಂದು ಆಗ್ರಹ. ಒಂದು ವೇಳೆ ಶಿಕ್ಷಣ ರಾಷ್ಟ್ರೀಕರಣಗೊಂಡರೆ ಮಠಾಧೀಶರು ನಿರುದ್ಯೋಗಿಗಳಾಗುತ್ತಾರೆ. ಆಗ ಅವರು ಪೂರ್ಣಕಾಲಿಕ ಧರ್ಮಗುರುಗಳಾಗಬಹುದು. ಆಗಲಾದರೂ ಪರಿಸ್ಥಿತಿ ಬದಲಾಗುವುದೆ?

೧೨ನೇ ಶತಮಾನದಲ್ಲೂ ಇದ್ದ ಇಂದಿನ ಮಠಾಧೀಶರಂಥವರನ್ನು ನೋಡಿಯೇ ಬಸವಣ್ಣ ಹೇಳಿದ್ದು:

ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ
ಸಲಿಗೆವಂತರಾಗಿ ಒಳಗೈದಾರೆ.
ಆನು ದೇವಾ ಹೊರಗಳವನು!
ಸಂಬೋಳಿಯೆನುತ್ತ, ಇಂಬಿನಲ್ಲಿದೇನೆ.
ಕೂಡಲಸಂಗಮದೇವ.
ನಿಮ್ಮ ನಾಮವಿಡಿದ ಅನಾಮಿಕ ನಾನು.

‍ಲೇಖಕರು avadhi

February 27, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ಕೆ. ಪುಟ್ಟಸ್ವಾಮಿ ಹಿಂದೀ ಭಾಷೆಯ ಹೇರಿಕೆಯ ನಾನಾ ನಮೂನೆಗಳನ್ನು ನೋಡಾಯಿತು. ಈಗ ನಮ್ಮ ಸರ್ಕಾರದ ಮುಖ್ಯಸ್ಥರಾದ ಘನತೆವೆತ್ತ ರಾಜ್ಯಪಾಲರು ಇನ್ನೂ...

2 ಪ್ರತಿಕ್ರಿಯೆಗಳು

 1. ಅಜಯ್

  ಆನೆಯನೇರಿಕೊಂಡು ಹೋದಿರಿ ನೀವು,
  ಕುದುರೆಯನೇರಿಕೊಂಡು ಹೋದಿರಿ ನೀವು.

  ಎಂದಿದ್ದೀರಾ ನೀವು, ಆದರೆ ಚಿತ್ರದಲ್ಲಿ ಸ್ಪಷ್ಟವಾಗಿ ಮಠಾಧೀಶರುಗಳೆಲ್ಲಾ ಸಮಾಜಮುಖಿಯಗಿ ಕಾಲ್ನಡಿಗೆಯಲ್ಲಿ, ಬಿಸಿಲಿನಲ್ಲಿ ನೆಡೆಯುತ್ತಿರುವುದು ಕಾಣುತ್ತಿದೆಯಲ್ಲಾ! 🙂

  ಪ್ರತಿಕ್ರಿಯೆ
 2. ಸಿದ್ದಮುಖಿ

  ಸನ್ಯಾಸಿಗಳು ಸ್ವಾಮಿ ಇವರು ಸನ್ಯಾಸಿಗಳು,
  ಯುದ್ದ ಬಂದಾಗ ಶಸ್ತ್ರ ಬಿಟ್ಟವರು..
  ಸನ್ಯಾಸಿಗಳು ಎಲ್ಲವನ್ನೂ ಬಿಟ್ಟವರು…ಇದು ಎ.ಕೆ. ರಾಮಾನುಜನ್ ಸ್ವಾಮಿಗಳ ಕುರಿತು ಕಟುವಾಗಿ ಬರೆದ ಪದ್ಯ.ಇದು ಸತ್ಯವೂ ಹೌದು.
  ಸರ್ವಸಂಗ ಪರಿತ್ಯಾಗಿಯಾಗಬೇಕಾಗಿದ್ದ ಸನ್ಯಾಸಿ ಇಂದು ಎಲ್ಲವೂ ಆಗಿದ್ದಾನೆ.
  ರಾಜಕೀಯ ಪಕ್ಷಗಳ, ಸರ್ಕಾರದ ನಿಯಂತ್ರಕ ಶಕ್ತಿಯಂತೆ ಸೂತ್ರಧಾರನಂತೆ ಕೆಲಸ ಮಾಡುತ್ತಿರುವುದು ಕಟು ವಾಸ್ತವ.
  ಸ್ವಾಮಿಗಳೆಂಬ ಧಾರ್ಮಿಕ ಭ್ರಷ್ಟಾಚಾರಿಗಳು ಧರ್ಮದ ತಿರುಳೇ ಅರಿಯದವರು.
  ಧರ್ಮ ವೃಕ್ಷದ ನೆರಳಿನಲ್ಲಿ ಬೆಂಕಿ ಕಾಸಿಕೊಳ್ಳುವ ವೀರರು.ಮೌಢ್ಯ ತುಂಬಿತ ಜನರೇ ಇವರಿಗೆ ಸೌದೆ. ಎಲ್ಲರ ಸಂಗವಿದ್ದರೂ ಅವರ ಅಭಿಮಾನಕ್ಕೆ ಭಂಗ ಬರದು. ಯಾಕೆಂದರೆ ಕಾವಿಧಾರಿಗಳು. ನಿತ್ಯವೂ ಒಣ ದ್ರಾಕ್ಷಿ ಗೋಡಂಬಿ ತಿಂದು ನಯಗೊಂಡ ರಾಸುಗಳು.
  ರಾಜ್ಯದಲ್ಲಿ ಸ್ವಾಮಿಗಳು ಮಠಗಳನ್ನು ಸ್ಥಾಪಿಸುತ್ತಿರುವುದನ್ನು ನೋಡಿದರೆ ಹಿಂದೆ ರಾಜರು, ಸಣ್ಣ ಪುಟ್ಟ ಪಾಳೇಗಾರರು ಪಾಳೆಪಟ್ಟುಗಳನ್ನು ಸಾಮ್ರಾಜ್ಯಗಳನ್ನು ಕಟ್ಟಿಕೊಂಡು ಆಳ್ವಿಕೆ ನಡೆಸುತ್ತಿದ್ದ ಚಿತ್ರಣ ಕಣ್ಣ ಮುಂದೆ ಬರುತ್ತದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬದುಕುತ್ತಿರುವ ಇವರಿಗೆ ಯಾವ ನಿಯಮಗಳು ಅನ್ವಯವಾಗುವುದಿಲ್ಲ. ತಾವು ನೀಡಿದ ಹೇಳಿಕೆಯೇ ವೇದ ವಾಕ್ಯ ಎಂದು ನಂಬಿಕೊಂಡ ಕೂಪ ಮಂಡೂಕಗಳು.
  ಸ್ವಾಮಿಗಳನ್ನು ಪಲ್ಲಕ್ಕಿಯ ಮೇಲೆ ಮೆರವಣಿಗೆ ಮಾಡಬೇಕು, ಬಹುಪರಾಕ್ ಕೂಗಬೇಕು.ಪಾದಕ್ಕೆ ಪೊಡಮಡಬೇಕು. ಟೀಕೆ ಮಾಡಬಾರದು ಎಂಬ ಧೋರಣೆಯುಳ್ಳ ಸ್ವಾಮಿಗಳು ಸ್ಥಾಪಿಸಿಕೊಂಡಿರುವ ಎಲ್ಲಾ ಮಠಗಳನ್ನು ರಾಷ್ಟ್ರೀಕರಣಗೊಳಿಸಬೇಕು. ಈಗ ಹೊಂದಿರುವ ಅಕ್ರಮ ಆಸ್ತಿಯನ್ನು ಸರ್ಕಾರಗಳು ವಶಪಡಿಸಿಕೊಳ್ಳಬೇಕು. ಮಠಗಳಿಗೆ ಹಣ ನೀಡುವುದನ್ನು ನಿಲ್ಸಿಸಬೇಕು …. ಹೀಗಾದಾಗ ಮಾತ್ರ ಸಮಾಜದಲ್ಲಿ ನೆಮ್ಮದಿ ನೆಲೆಸಲು ಸಾಧ್ಯ. ನಾಮವಿಟ್ಟರೆ, ವಿಭೂತಿ ಧರಿಸಿದರೆ ರುದ್ರಾಕ್ಷಿ ಹಾಕಿಕೊಂಡರೆ, ವೇದಮಂತ್ರಗಳನ್ನು ಕಲಿತರೆ ಅದು ಅವರ ಪಾಂಡಿತ್ಯದ ಪ್ರದರ್ಶನವೇ ಹೊರತು ಸ್ಲಂನಲ್ಲಿ ವಾಸಿಸುವವರು, ಸಾಮಾನ್ಯ ರೈತರಿಗಿಂತ ಹೆಚ್ಚೇನಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
  ಮಠಗಳು ಏನೋ ಮಹತ್ವದ ಸಾಧನೆ ಮಾಡಿವೆ ಎಂದಾದರೆ ಅದು ಸರ್ಕಾರಗಳು ಕಾಲಕಾಲಕ್ಕೆ ನೀಡಿದ ಪ್ರೋತ್ಸಾಹವೇ ಕಾರಣ.ಇಂದು ಯಾವುದೇ ಮಠ-ಪೀಠಾಧೀಶರು ನಾವು ಸರ್ಕಾರದ ಋಣದಲ್ಲಿ ಬದುಕುವುದಿಲ್ಲ. ಸರ್ಕಾರದ ನೆರವಿಲ್ಲದೆ ನಾವು ಮಠಗಳನ್ನು ನಡೆಸುತ್ತೇವೆ ಎಂದು ಎದೆತಟ್ಟಿಕೊಂಡು ಹೇಳಲಿ. ಇದಾಗದಿದ್ದರೆ ಎಲ್ಲವನ್ನೂ ತೊರೆದು ಮಠದ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಟ್ಟು ಸಾಮಾನ್ಯರಂತೆ ಬದುಕುವಂತಾದಾಗ ಮಾತ್ರ ಸಮತಾ ಸಮಾಜ ನಿರ್ಮಾಣವಾಗಲು ಸಾಧ್ಯ. ಕುವೆಂಪು ಅವರ ಸರ್ವರಿಗೂ ಸಮಪಾಲು,ಸರ್ವರಿಗೂ ಸಮಬಾಳು ಆಶಯ ನೆರವೇರಲಿದೆ. ಇಲ್ಲದಿದ್ದರೆ ಒಡೆಯ ಗುಲಾಮ ಪದ್ದತಿ ಮುಂದುವರಿಯಲಿದೆ.
  ಸ್ವಾಮಿಗಳೆಂಬ ಹಿಟ್ಲರ್್ಗಳು ದೇಶದ ಜನರನ್ನು ನುಂಗಿ ನೀರು ಕುಡಿಯುವುದರಲ್ಲಿ ಎರಡು ಮಾತಿಲ್ಲ.
  – ಸಿದ್ದಮುಖಿ

  ಪ್ರತಿಕ್ರಿಯೆ

Trackbacks/Pingbacks

 1. ಎಲ್ಲಾ ಮಠಗಳನ್ನು ರಾಷ್ಟ್ರೀಕರಣಗೊಳಿಸಬೇಕು… « ಅವಧಿ - [...] ಇದು ಅವದಿಯ ಜುಗಾರಿ ಕ್ರಾಸ್ ಅಂಕಣದಲ್ಲಿ ನಾನಂತೂ ಬಹುತೇಕ ಮಠಾಧೀಶರು ಸಮಾಜದ ಶತ್ರುಗಳ...ಎಂದು ಪುನರ್ ಬಳಕೆ ಮಾಡಿಕೊಳ್ಳಲಾಗಿತ್ತು. ಈ [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: