“ನಾನಿನ್ನು ಹೊರಡ್ಲಾ?” ಎಂದಾಗ…

door_number1421.jpg

“ಡೋರ್ ನಂ 142”

ಬಹುರೂಪಿ

ಕ್ಕಾ ಕಡಲತಡಿಯ ಊರಿನ ಹಾವಿನಂತಹ ರಸ್ತೆಗಳು. ಪ್ರತೀದಿನಾ ಆಫೀಸಿನಿಂದ ಮನೆಗೆ ಹೋಗುವ ಇಳಿಸಂಜೆಯಾಗುತ್ತಿತ್ತು. ಆ ರಸ್ತೆಯ ಇಕ್ಕೆಲದಲ್ಲೂ ಆಳವಾದ ಕಂದರಗಳು. ಸೂರ್ಯ “ಇನ್ನೇನು ನನ್ನ ಕೆಲಸ ಮುಗಿಸುತ್ತಿದ್ದೇನೆ” ಎಂದು ಸಾರುತ್ತಾ ಹೋಗುವ ಸಮಯ. ರಸ್ತೆಯ ಮೇಲೆ ನಾನಿದ್ದ ಎತ್ತರಕ್ಕೆ ಸರಿಸಮನಾಗಿಯೇ ಆತ ಇರುತ್ತಿದ್ದ. ಹಕ್ಕಿಗಳು, ಅದರಲ್ಲೂ ಬೆಳ್ಳಕ್ಕಿಗಳು ಗುಂಪು ಗುಂಪಾಗಿ ಗೂಡಿಗೆ ಹಾರಿಹೋಗುತ್ತಿದ್ದವು. ಅಷ್ಟೇ ಅಲ್ಲ, ಆಳದ ಆ ಕಣಿವೆಗಳಲ್ಲಿದ್ದ ಮನೆಗಳಲ್ಲಿ ಒಲೆಯಲ್ಲಿ ಆಗ ತಾನೇ ಬೆಂಕಿ ಆಡುತ್ತಿರಬೇಕು. ಮನೆಯ ಚಿಮಣಿಗಳು ಹೊಗೆ ಹೊರಗೆ ಚೆಲ್ಲುತ್ತಿದ್ದವು. ಅತಿ ಎತ್ತರದ ಆ ರಸ್ತೆಯಲ್ಲಿ ಸಾಗುತ್ತಿದ್ದ ನನಗೆ ಆ ಕಾಡೊಳಗಣ ಮನೆಯಿಂದ ಉಕ್ಕಿ ಬರುತ್ತಿದ್ದ ಹೊಗೆ ಮೋಡಗಳು ಕಾಡಿಬಿಡುತ್ತಿದ್ದವು.

ಆಗಲೇ ಆಗಲೇ ಯಾಕೋ ಆತ ನೆನಪಾದ. ನನ್ನೊಡನೆ ಏನೋ ಗೊತ್ತಿಲ್ಲದ ಕರುಳಬಳ್ಳಿ ಸಂಬಂಧ ಸೃಷ್ಟಿಯಾಗಿತ್ತು. ಎಲ್ಲವನ್ನೂ ಮಾತಾಡಿಕೊಳ್ಳಬಹುದು ಎಂಬ ವಿಶ್ವಾಸ ನಮ್ಮಿಬ್ಬರ ನಡುವಿತ್ತು. ಏಕೋ ನಾವಿಬ್ಬರೂ ಕಂಡದ್ದು, ಮಾತಾಡಿದ್ದು ಕೆಲ ದಿನಗಳಾದರೂ, ದುಃಖದ ನಗರಿಯಲ್ಲಿ ಪರಿಶುದ್ಧ ಆತ್ಮಗಳನ್ನು ಹುಡುಕುತ್ತಾ ಹೊರಟ ಪಯಣಿಗರಂತಾಗಿಬಿಟ್ಟಿದ್ದೆವು. ಅಶಾಂತ ಸಾಗರದ ನಡುವೆ ಒಂದಿಷ್ಟು ನೆಮ್ಮದಿ ಸಿಕ್ಕಿತು ಎನ್ನುವಾಗಲೇ ಆತ ಇನ್ನೊಂದು ಊರಿಗೆ ಹೊರಟು ನಿಂತುಬಿಟ್ಟ. ಜರೂರಿತ್ತೇನೋ. ನಾನು ಇನ್ನೂ ಆ ಊರಲ್ಲಿ ನೆಲೆಯೂರುವ ವೇಳೆಗೆ ಆತ ವಿದಾಯದ ಕೈ ಬೀಸಿ ಹೊರಟೇಬಿಟ್ಟ. ನಾನೂ ಕೈ ಬೀಸಿದ್ದೆ.

ಆದರೆ ಆ ಹಾವಿನಂತಹ ರಸ್ತೆಯಲ್ಲಿ ಕತ್ತಲು ಹೆಜ್ಜೆ ಹಾಕುತ್ತಾ ಬರುವಾಗಲೇ ಆ ಹೊಗೆ ಮೋಡಗಳ ಮೇಲೆ ನಾನು ಹೋಗುವಾಗಲೇ ಆತ ನೆನಪಾಗಿಬಿಟ್ಟ. ನನಗೇ ಗೊತ್ತಿಲ್ಲದಂತೆ ಕಣ್ಣು ಒದ್ದೆಯಾಗಿಬಿಟ್ಟಿತು. ಎದೆ ಬಿಕ್ಕಳಿಸಲು ಶುರು ಮಾಡಿತು. “ಗೆಳೆಯ ಬರತೀನೋ/ಮನದಾಗಿಡೋ ನೆನಪ/ನೀ ಯಾರೋ ಏನೋ ಎಂತೋ/ಅಂತೂ ಪೋಣಿಸಿತು ಕಾಣದಾ ತಂತು/ಇದು ಹೌದು ಹಾದಿ ಗೆಳಿತಾನ/ಇದ್ದರಿದ್ದೀತು ಹಳಿಯ ಒಗಿತಾನ / ದಿನವೊಂದು ಕ್ಷಣದಾಂಗ/ಬೆಸೆದಾವೋ ನಮ್ಮ ಮನ್/ಕಡೆತನಕಾ ಇರಲೀ ಬಂಧನ…” ಕವಿತೆ ಮನಕ್ಕೆ ಹೊಕ್ಕಿತು. ಕಣ್ಣೀರು ಹಾಕುವುದಲ್ಲದೆ ನಾನು ಏನನ್ನೂ ಮಾಡಲು ಸಾಧ್ಯವಿರಲಿಲ್ಲ.

ಯಾಕೆ ಹೀಗೆ ಬೇಕು ಎನಿಸಿದ ಸಂಬಂಧಗಳು, ಈ ಅನಂತ ಜಗತ್ತಿನಲ್ಲಿ ಇದ್ದಕ್ಕಿದ್ದಂತೆ ನನ್ನ ಕೆಲಸವಾಯ್ತು ಎಂಬಂತೆ ಕೈ ಬೀಸಿ ಮರೆಯಾಗಿ ಹೋಗಿಬಿಡುತ್ತವೆ. ಸುಖದ ಅಂಚಿನಲ್ಲಿದ್ದೇನೆ ಎಂದು ಅಂದುಕೊಳ್ಳುತ್ತಿರುವಾಗಲೇ ಎಷ್ಟೋ ಸಂಬಂಧಗಳು ದಿಢೀರನೆ ಎದ್ದು ನಡೆದುಬಿಡುತ್ತವೆ. ಆಗ ತಾನೇ ಚಿಗುರುತ್ತಿದ್ದ ವಸಂತದ ಹಸಿರುಬಣ್ಣದ ಗೆಳೆತನವೊಂದು ಬಣ್ಣ ಬದಲಿಸಿ ಮಾಗಿಯ ಮೌನ ಹೊದ್ದುಕೊಳ್ಳುತ್ತದೆ.

ನನ್ನೊಳಗೆ ಇಂತಹ ವಿದಾಯದ ಕ್ಷಣಗಳು ಅಚ್ಚೊತ್ತಿ ನಿಂತಿವೆ. ಆ ಹುಡುಗಿ ನನಗೆ ಎಲ್ಲವೂ ಆಗಿದ್ದಳು. ಆಕೆ ಬರುತ್ತಾಳೆಂದರೆ ಒಂದು ವಸಂತದ ಆಗಮನವಾಗುತ್ತದೆ ಎಂದೇ ಭಾವಿಸಿದ್ದೆ. ಆಕೆಯ ಮುಗುಳ್ನಗು ನನ್ನೊಳಗೆ ಒಂದು ನಾವೆಯ ಸಂಚಾರಕ್ಕೆ ಕಾರಣವಾಗುತ್ತಿತ್ತು. ಅವಳ ಸ್ಪರ್ಶ ಸ್ವರ್ಗಲೋಕಕ್ಕೆ ಒಂದೊಂದು ಮೆಟ್ಟಿಲನ್ನು ಸೃಷ್ಟಿಸುತ್ತಿತ್ತು. “ನಿನ್ನೊಳು ನಾ/ನನ್ನೊಳು ನೀ/ಒಲಿದ ಮೇಲುಂಟೆ ನಾ ನೀ/ಇದೇ ಒಲವಿನ ಸರಿಗಮಪದನಿ” ಎನ್ನುವಂತೆ ಅವಳೂ ನಾನೂ ಬಹುವಚನವಾಗಿರಲಿಲ್ಲ. ಇಬ್ಬರೂ ಒಂದಾಗಿ ಏಕವಚನವಾಗಿಬಿಟ್ಟಿದ್ದೆವು. ಅಂತಹ ಆ ಹುಡುಗಿ ಒಂದು ದಿನ ಎದ್ದು ನಡೆದೇ ಬಿಟ್ಟಳು. ಮೌನವಾಗಿ ಎದೆಯೊಳಗೆ ಹರಿಯುತ್ತಿದ್ದ ನಾದದ ನದಿಯೊಂದು ತನ್ನಿಂತಾನೆ ಇಂಗಿಹೋಗಿಬಿಟ್ಟಂತೆ. ಅಂತರಗಂಗೆ ಹರಿಯುತ್ತಿದೆ ಎನ್ನುತ್ತಾರೆ. ಇದು ನನಗೆ ಗೊತ್ತಿಲ್ಲ. ಆದರೆ ನನ್ನೊಳಗೆ ಮಾತ್ರ ಗುಪ್ತಗಾಮಿನಿಯಾಗಿ ಜುಳುಜುಳು ಹರಿವ ಒಂದು ಹಾಡಾಗಿದ್ದಳು, ಅವಳು ಎಂದು ಮಾತ್ರ ನನಗೆ ಚೆನ್ನಾಗಿ ಗೊತ್ತು.

ಒಂದು ದಶಕವೇ ಉರುಳಿತೇನೋ, ಎದೆಯೊಳಗೆ ಜುಳುಜುಳು ನಾದವಿಎಯೇ ಇನ್ನೂ ಎಂದು ಕೇಳಿಸಿಕೊಳ್ಳಲೆಂದೇ ಬಂದಳೇನೋ ಎಂಬಂತೆ ಅದೇ ಆ ಕಾಡಿನ ನಡುವಿದ್ದ ನನ್ನ ಮನೆಗೆ ಬಂದುಬಿಟ್ಟಳು. ನಮ್ಮಿಬ್ಬರ ನಡುವೆ ಕೈ ಚಾಚಿದರೆ ಸಾಕು ಸಿಗುವ ದೂರ. ಆದರೆ ನಮ್ಮಿಬ್ಬರ ಸಂಬಂಧದ ನಡುವೆ ಮಾತ್ರ ಅನಂತ ಮೈಲುಗಲ್ಲುಗಳು ಮನೆ ಮಾಡಿಬಿಟ್ಟಿದ್ದವು. ಆಗಲೂ ಅಷ್ಟೆ. ಅವಳು ಕೈ ಬೀಸಿ ಹೋಗಲೇಬೇಕಾಯ್ತು. ನಾನು ಕಡಲ ದಂಡೆಯಲ್ಲಿ ನಿಂತಿದ್ದೆ. ಅವಳು ಅದೇ ವಸಂತದ ಉಲ್ಲಾಸವನ್ನು ಕಾಲ್ಗಳಿಗೆ ಲೇಪಿಸಿಕೊಂಡಿದ್ದಾಳೇನೋ ಎಂಬಂತೆ ಜಿಗಿದು ಮೆಟ್ಟಿಲಿಳಿಯುತ್ತಾ ದೋಣಿ ಏರಿ ಕೂತಳು. ದೋಣಿಗಳು ಎರಡು ದಂಡೆಗಳನ್ನು ಬೆಸೆಯುತ್ತವೆ ಎಂದೇ ಅದುವರೆಗೆ ನಾನು ಅಂದುಕೊಂಡಿದ್ದೆ. ಆದರೆ ಆ ಅವಳನ್ನು ಹೊತ್ತ ದೋಣಿ ದಂಡೆಗಳನ್ನು ದೂರ ಮಾಡುತ್ತಾ ಹೋಯಿತು. ಅವಳು ಕೈ ಬೀಸುತ್ತಲೇ ಇದ್ದಳು. ದೂರದಲಿ ಇದ್ದವರನು/ಹತ್ತಿರಕೆ ತರಬೇಕು/ಎಂದವರು ನೆನಪಾದರು.

ವಿದಾಯ ಎನ್ನುವುದು ಯಾಕೆ ಹೀಗೆ ಅಚ್ಚೊತ್ತಿ ಕೂತುಬಿಡುತ್ತದೆಯೋ. ಕಾಲನೆಂಬ ಪ್ರಾಣಿಯ ಕೈಗೆ ಕ್ಯಾಮೆರಾ ಕೊಟ್ಟವರಾರು? ಇಂತಹ ಅಳಿಸಲಾಗದ ಚಿತ್ರಗಳನ್ನು ನಮ್ಮ ಮುಂದೆ ಸುರುವಿ ಕೂರುವಂತಹದ್ದಾದರೂ ಏನಾಗಿದೆ ಅವನಿಗೆ?

ಆ ಊರಿಂದ ಹೊರಟುಬಿಡುತ್ತೇವೆ ಎಂದು ಗೊತ್ತಾದಾಗ ರೈಲ್ವೆ ನಿಲ್ದಾಣದಲ್ಲಿ ನೀರಿನ ಒರತೆಯಂತೆ ಉಕ್ಕಿ ಬಂದು ಬಿಟ್ಟರಲ್ಲಾ ಅವರು. ಏನಾಗಬೇಕು ಅವರು ನಮಗೆ. ಯಾವುದೋ ದೇಶದಲ್ಲಿ ಕಾವ್ಯ ಬರೆಯುತ್ತಲೇ ಗಲ್ಲಿಗೇರಿದನಲ್ಲಾ ಅವನು ಯಾಕೆ ಉಕ್ಕಿ ಬಂತು ಕಣ್ಣೀರು ನನಗೆ? ಅಮ್ಮಾ ನನ್ನ ಹಾಸ್ಟೆಲ್ ಗೆ ಕಳಿಸಬೇಡ ಎಂದು ಕಣ್ಣೀರಾದ ಹುಡುಗ ನನ್ನೊಳಗಿನ ಕಣ್ಣೀರಿಗೂ ಕೈ ಹಾಕಿದ್ದು ಏಕೆ? “ಪಾಪಾ” ಅಂತ ಏನೂ ಹೇಳದೆ ಗಟ್ಟಿಯಾಗಿ ನನ್ನ ಬೆನ್ನು ಬೀಳುವ ಹುಡುಗಿ ಲಗೇಜ್ ತುಂಬುವಾಗ ನನ್ನೊಳಗೆ ಯಾಕೆ ಮೌನ ಮನೆ ಮಾಡಿ ಕೂತುಬಿಡುತ್ತದೆ.

ಎಲ್ಲೋ ದೂರಕ್ಕೆ ಹಾರಿ ನಿಂತಾಗ ಆ ಹುಡುಗ ಒಂದು ಬಾಟಲಿಯಲ್ಲಿ ಹಿಡಿ ಮಣ್ಣು ತಂದುಕೊಟ್ಟನಲ್ಲಾ ಆತ ಯಾಕೆ ಬೀದಿಬೀದಿ ಅಲೆಯಬೇಕಿತ್ತು ನನಗಾಗಿ ಮಣ್ಣು ಹುಡುಕುತ್ತಾ? ಆ ಆರೆಂಟು ದಿನವೂ ಆ ಬಾಟಲಿಯಲ್ಲಿನ ಮಣ್ಣು ನನ್ನೊಳಗೆ ಒದೆಯುವ ನೆನಪುಗಳನ್ನು ಹುಟ್ಟು ಹಾಕಿದ್ದು ಏಕೆ?

ಪ್ರತಿಯೊಂದು ಸಂಬಂಧ ಏರ್ಪಡುವುದೇ ಬಿಡಿಸಿಕೊಂಡು ಹೋಗುವುದಕ್ಕಾಗಿ ಎನ್ನುವುದು ಎಷ್ಟು ನಿಜವಾಗುತ್ತದೆ ಮೇಲಿಂದ ಮೇಲೆ? ಜೊತೆಗೆ ಹೆಜ್ಜೆ ಹಾಕುತ್ತಲೇ ಇದ್ದವರು ಕಾಲನ ಪ್ರಯಾಣ ಮುಗಿಯುವ ಮೊದಲೇ ಎಲ್ಲೆಲ್ಲಾ ಕಳಚಿಕೊಂಡರು ಸದ್ದಿಲ್ಲದೆ. ಆ ಹುಡುಗಿ ರೈಲು ಏರಿ ಕಿಟಕಿಗೆ ಆತು ಗಾಳಿ ಸವಾರಿ ಮಾಡುತ್ತಾ ಬರುವಾಗ ಅದು ಬರುವುದೂ ಹೌದು, ಹೋಗುವುದೂ ಹೌದು ಎಂದು ಏಕೆ ಗೊತ್ತಾಗುವುದಿಲ್ಲ. ಅಮ್ಮನೆಂಬ ಅಮ್ಮ ಮನೆಗೆ ಬರುತ್ತಾರೆ ಎಂಬ ಸಂಭ್ರಮದಲ್ಲಿ ಕುಣಿತದ ಹೆಜ್ಜೆ ಹಾಕುವ ನಾವೆಲ್ಲಾ ಆ ಅಮ್ಮ ಹೋಗಲೆಂದೇ ಬರುತ್ತಾಳೆ ಎನ್ನುವುದನ್ನು ಯಾಕೆ ಕಾಣುವುದೇ ಇಲ್ಲ.

“ಸೋಮಲಿಂಗನ ಗುಡಿ/ಮೇಲಾ ಬಂಗಾರ ಛಡಿ/ನೋಡಿ ಬರೋಣು ನಡಿಯಾ” ಎಂದು ಹೊರಟ “ಸಂಗ್ಯಾಬಾಳ್ಯಾ” ನಾಟಕದ ಜೊತೆಗಿದ್ದವನನ್ನು ಕಳೆದುಕೊಳ್ಳಲೆಂದೇ ಹೊರಟಿದ್ದೇನೆ ಎಂದು ಏಕೆ ಮನಗಾಣಲಿಲ್ಲ? ಆ ಸೆಳೆವ ಕಣ್ಣುಗಳ, ಹಾಸಿಗೆಯಲ್ಲಿ ನರಳುವ ಉದ್ಗಾರ ತೆಗೆವವಳ, ಹಗಲು ಇರುಳುಗಳನ್ನು ಒಂದು ಮಾಡುವವಳ ಪಡೆಯಲು ಹೊರಟವನು ಬದುಕಿಗೆ ಒಂದು ಕೊನೆ ಗೊತ್ತು ಮಾಡಿಕೊಳ್ಳುತ್ತಿದ್ದೇನೆ ಎಂದು ಏಕೆ ತಿಳಿಯಲಿಲ್ಲ? ಹಾಸಿಗೆಯ ಆ ನರಳುವಿಕೆಯ ಕ್ಷಣಗಳಲ್ಲಿ ಇದು ಮಿಲನವಲ್ಲ ಬೇರ್ಪಡುವ ಕಾಲ ಎಂದು ಅರಿವೇ ಆಗಲಿಲ್ಲವಲ್ಲ?

“ಬದುಕು ಮಾಯದ ಮಾಟ/ಮಾತು ತೆರೆನೊರೆಯಾಟ/ ಜೀವಮೌನದ ತುಂಬಾ ಎಂತ…” ಎನ್ನುವುದು ಹತ್ತಿರಕೆ ಬಂದು ದೂರವಾಗಲೇ ಗೊತ್ತಾಗುತ್ತದೆಯಲ್ಲಾ?

ನನ್ನೊಳಗೆ ಆಳವಾಗಿ ಇಳಿಯುವ ಸಂಬಂಧಗಳಿಗೆ ನಾನು ನನ್ನನ್ನೇ ಕೊಟ್ಟು ಕೊಂಡುಬಿಟ್ಟಿರುತ್ತೇನೆ. ನನ್ನ ಅನಂತ ಮಾತುಗಳು ಅವರೊಂದಿಗೇ ಮೌನದಲ್ಲಿಯೇ ಸಾಗುತ್ತಿರುತ್ತವೆ. ಆ ಅವರಿಗೇ ಇನ್ನೊಬ್ಬರೊಂದಿಗೆ ಅದೇ ನಿರಂತರ ಮೌನ ಸಂವಾದಕ್ಕೆ ಇಳಿದುಬಿಟ್ಟಾಗ ಕಸಿವಿಸಿಯಾಗುತ್ತದಲ್ಲಾ, ಎದೆಗೇರುತ್ತದಲ್ಲಾ ಹೆಡೆ ಎತ್ತಿದ ಬುಸುಗುಡುವ ಸರ್ಪ ಅದು, ಅದೂ ಒಂದು ವಿದಾಯಕ್ಕೆ ಬರೆದ ಮುನ್ನುಡಿಯೇ. “ಸಂಬಂಜ” ಅನ್ನೋದು “ಕೋರಾ ಕಾಗಜ್” ಆದಾಗ, ಹಾರೋ ಗಾಳಿಪಟ ಆದಾಗ ಎಷ್ಟೊಂದು ಒದ್ದಾಡಿಹೋಗುತ್ತೆ ಮನಸ್ಸು. ಹೌದಲ್ಲಾ, ತನಗೆ ಗೊತ್ತೇ ಇಲ್ಲದ ಸಿನಿಮಾ ಪಾತ್ರಗಳಿಗೆ, ನಾಟಕದ ಸೀನ್ ಗೆ ಕಣ್ಣೀರು ಹಾಕ್ತಾ ಇರ್ತೀವಲ್ಲ ನಾವು ಏನು ಕಳಕೊಂಡಿದೀವಿ ಅಂತಾ? ಷೇಕ್ಸ್ ಪಿಯರ್ ನಾಟಕದಲ್ಲಿ ಹೆಕೂಬಾ ಪಾತ್ರ ನೋಡ್ತಾ ಆ ಹಳ್ಳಿಯವ ಬಿಕ್ಕಿ ಬಿಕ್ಕಿ ಅತ್ತನಲ್ಲಾ, ಅದಕ್ಕೆ ಏನು ಕಾರಣ ಅಂತ ಹುಡುಕೋದು “ನೀ ಯಾರೋ ಏನೋ ಎಂತೋ, ಅಂತು ಪೋಣಿಸಿತು ಕಾಣಾದಾ ತಂತೂ…” ಅನ್ನೋದುಬಿಟ್ಟು ಇನ್ನೇನಿದೆ!

ಒಂದು ಬಾರಿ ನನ್ನ ನೋಡಿ/ಒಂದು ನಗೀ ಹಾಂಗ ಬೀರಿ/ಮುಂದ ಮುಂದ ಮುಂದ ಹೋದ/ಹಿಂದ ನೋಡದಾ/ಗೆಳತೀ ಹಿಂದ ನೋಡದಾ… ಅನ್ನೋ ಹಾಡು ಈಗ ತೂರಿ ಬರ್ತಾ ಇರೋವಾಗಲೂ ಎದೆ ಒದ್ದೆಯಾಗಿ ಕೂತಿದೆಯಲ್ಲಾ ಇದಕ್ಕೆ ಏನು ಅಂತ ಅರ್ಥ ಹಚ್ಚಬೇಕು.

ಅದೆಲ್ಲಾ ಬಿಡಿ, ಇವರು ಯಾರು ಅಂತ ಗೊತ್ತಿರ್ಲಿಲ್ಲಾ, ಇವರು ಏನು ಅಂತ ಗೊತ್ತಿರ್ಲಿಲ್ಲಾ. ನನ್ನ ಕಥೆ ಅವರು ಯಾರಿಗೂ ಗೊತ್ತಿಲ್ಲ. ನಾನು ಬೈದಿದ್ದು ಅಂದಿದ್ದು ಅವರ ನೆನಪಲ್ಲೇ ಉಳಿದಿಲ್ಲ. ಆದರೆ ಇನ್ನು ಹೊರಡ್ಲಾ… ಅಂತ ಅಂದಾಗ ಕಲ ಕಲ ಅನ್ತಾ ಇದ್ದ ಮನಸ್ಸುಗಳು ಷಾಕ್ ಆಗಿ ನಂಬದೇ ನನ್ನ ಮುಖ ನೋಡ್ತಾ ತಬ್ಬಿಬ್ಬಾಗಿವೆಯಲ್ಲಾ ಇದಕ್ಕೆ ನಾನು ಯಾವ ಉತ್ತರ ನೀಡ್ಲಿ. ಈ ಎಲ್ಲರನ್ನೂ ಬಿಟ್ಟು ದೂರ ಹೋಗ್ತಾ ಇದೀನಿ ಅನ್ನೋದು ನನ್ನ ಕಣ್ಣು ತುಂಬಿ ತುಳುಕೋ ಆಗೆ ಮಾಡಿದೆಯಲ್ಲಾ, ಇದಕ್ಕೂ ಅಷ್ಟೆ ಏನನ್ನಬೇಕು…?

‍ಲೇಖಕರು avadhi

April 9, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಉದಯಕುಮಾರ್ ಹಬ್ಬು 'ಡೋರ್ ನಂ 142' ಈ ಕೃತಿ ನಮ್ಮೆಲ್ಲರ ಮನೆ ಮನದ ಡೋರ್ ನಂ ಆಗಿಬಿಟ್ಟಿದೆ. ನಮೆಲ್ಲರ ಬಾಲ್ಯದ ನೆನಪುಗಳು, ಹದಿಹರೆಯದ ಬಿಸಿ,...

ಯಾವುದೀ ಪ್ರವಾಹವು…

ಯಾವುದೀ ಪ್ರವಾಹವು…

ಡೋರ್ ನಂ 142 ಬಹುರೂಪಿ   ಮುಖ ಮುಖವೂ ಮುಖವಾಡವ ತೊಟ್ಟು ನಿಂತ ಹಾಗಿದೆ ಆಡುತಿರುವ ಮಾತಿನೊಳಗೆ ಹೃದಯ ಕಾಣದಾಗಿದೆ ಯಾವುದೀ ಪ್ರವಾಹವು... ರೇಡಿಯೋ...

೧ ಪ್ರತಿಕ್ರಿಯೆ

  1. ಶ್ರೀ

    ಓದುತ್ತಾ ಕಣ್ಣೀರು ಕಟ್ಟೆಯೊಡೆಯಿತು..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: