ನಾನು ನನ್ನ ಕ್ರಿಕೆಟ್ಟು! – ಬಿ ವಿ ಭಾರತಿ

ಕ್ರಿಕೆಟ್ ಬದುಕಲ್ಲಿ absolete ಆಗಿ ಹೋಯ್ತು …

ಬಿ ವಿ ಭಾರತಿ

ಈ ತೆಂಡೂಲ್ಕರ್ ನೂರನೇ ಸೆಂಚುರಿ ಹೊಡೆಯಲ್ಲ .. ಅವ ರಿಟೈರ್ ಆಗಲ್ಲ …

ದ್ರಾವಿಡ್ ರಿಟೈರ್ ಆದನಂತೆ …

ಪಾಕಿಸ್ತಾನ್-ಭಾರತದ ಆಟ ಫಿಕ್ಸ್ ಆಗಿತ್ತಂತೆ …

ದಿನಕ್ಕೊಂದು ಕ್ರಿಕೆಟ್ ಸುದ್ದಿ ಕಿವಿ ಮೇಲೆ ಬೀಳುತ್ತದೆ. ನಾನು ನಿರ್ಲಿಪ್ತಳಾಗಿ ‘ಕ್ರಿಕೆಟ್? ಹಾಗಂದ್ರೇನು?’ ಅನ್ನೋ ಥರ ನೋಡ್ತೀನಿ. ನನಗೆ ಈಗ ಕ್ರಿಕೆಟ್ ಅಂದರೆ ಏನು ಅಂತ ನೆನಪಿಲ್ಲ ಮತ್ತು ಆಗ ಕ್ರಿಕೆಟ್ ಅಂದರೆ ಏನು ಅಂತಲೇ ಗೊತ್ತಿರಲಿಲ್ಲ … ಆಗ ಅಂದರೆ ಒಂದಿಷ್ಟು ವರ್ಷಗಳ ಕೆಳಗೆ ನಾವು ಬೆಂಗಳೂರಿಗೆ ವಲಸೆ ಬರುವ ಮೊದಲಿನ ದಿನಗಳ ಬಗ್ಗೆ ನಾನು ಹೇಳುತ್ತಿರೋದು. ಕ್ರಿಕೆಟ್ ಅಂತ ಒಂದು ಆಟವಿದೆ ಅಂತಲೂ ಗೊತ್ತಿರಲಿಲ್ಲ .. ಕೀಟವಿದೆ ಅಂತಲೂ ಗೊತ್ತಿರಲಿಲ್ಲ !

ಕ್ರಿಕೆಟ್ ಅನ್ನೋ ಆಟವಿದೆ ಅನ್ನೋದು ಯಾಕೆ ಗೊತ್ತಿರಲಿಲ್ಲ ಅಂದರೆ ನಾವಿದ್ದಿದ್ದು ಒಂದು ಹಳ್ಳಿಯಲ್ಲಿ. ಆಗೆಲ್ಲ ರೇಡಿಯೊದಲ್ಲಿ ಕ್ರಿಕೆಟ್ ರನ್ನಿಂಗ್ ಕಾಮೆಂಟರಿ ಬರುತ್ತಿತ್ತೋ ಇಲ್ಲವೋ ನನಗೆ ಗೊತ್ತಿಲ್ಲ. ನಾವಿದ್ದ ಹಳ್ಳಿಯಲ್ಲಂತೂ ನೆಟ್ಟಗೆ ಬರುತ್ತಿದ್ದ ಸ್ಟೇಷನ್ ಅಂದರೆ ರೇಡಿಯೋ ಸಿಲೋನ್ ಒಂದೇ. ಹಿಂದಿ ಕೂಡಾ ಅರ್ಥವಾಗುತ್ತಿರಲಿಲ್ಲ. ಒಟ್ಟಿನಲ್ಲಿ ಅದೇನೋ ಹಾಡು ಬರುತ್ತಿತ್ತು .. ಕೇಳುತ್ತಿದ್ದೆವು. ರಾತ್ರಿ ಹನ್ನೊಂದಕ್ಕಿರಬೇಕು ಶ್ರೀಲಂಕಾದ ರಾಷ್ಟ್ರಗೀತೆ ‘ನಮೋ ನಮೋ ಮಾತಾ ..’ ಪ್ರಸಾರವಾಗುತ್ತಿತ್ತು. ನಮ್ಮ ರಾಷ್ಟ್ರಗೀತೆ ಬಿಟ್ಟರೆ ನನಗೆ ಇಂದಿಗೂ ಕೇಳಲು ತುಂಬ ಹಿತವೆನ್ನಿಸುವ ರಾಷ್ಟ್ರಗೀತೆ ಅದೊಂದೇ. ಅದನ್ನು ಕೇಳಿ ಮಲಗುವುದು ನಮ್ಮ ದಿನದ ಅಭ್ಯಾಸ ಅಲ್ಲಿರುವವರೆಗೂ. ಮತ್ತೆ ಒಂದು ಸ್ಟೇಷನ್ ಬರುತ್ತಿತ್ತು .. ಯಾವುದಂತ ನೆನಪು ಇಲ್ಲವೇ ಇಲ್ಲ. ಅದರಲ್ಲಿ ಭಾನುವಾರ ಮಧ್ಯಾಹ್ನದ ಸಿನೆಮಾ ಸೌಂಡ್ ಟ್ರ್ಯಾಕ್ ಒಂದು ಪ್ರಸಾರವಾಗುತ್ತಿತ್ತು. ಕೇಳುವಾಗ ಮಾತಿಗಿಂತ ಸುಯ್‌ಯ್‌ಯ್‌ಯ್.. ಕೊರ್‌ರ್‌ರ್ .. ಬುಸ್‌ಸ್‌ಸ್‌ಸ್ ಸದ್ದುಗಳೇ ಹೆಚ್ಚು ಕೇಳಿಸುತ್ತಿದ್ದರೂ ಕಷ್ಟ ಪಟ್ಟು ಅದೊಂದನ್ನು ಕೇಳುತ್ತಿದ್ದೆವು. ಅಲ್ಲಿಗೆ ಮುಗಿಯಿತು ನಮ್ಮ ಮತ್ತು ರೇಡಿಯೋ ನಡುವಿನ ನಂಟು. ಪೇಪರ್ ಓದೋ ಅಭ್ಯಾಸ ಇನ್ನೂ ಬೆಳೆದಿರಲಿಲ್ಲ. ಟಿ.ವಿ ಭಾರತದಲ್ಲಿ ಹುಟ್ಟಿರಲೇ ಇಲ್ಲ. ಹಾಗಾಗಿ ಕ್ರಿಕೆಟ್ ಅಂತ ಒಂದು ಆಟ ಈ ಜಗತ್ತಿನಲ್ಲಿದೆ ಅನ್ನೋ ಜ್ಞಾನೋದಯವಾಗಿದ್ದು ತುಂಬ ತಡವಾಗಿ .. ಬೆಂಗಳೂರಿಗೆ ಬಂದ ಮೇಲೆ! ಇನ್ನು ಕ್ರಿಕೆಟ್ ಅನ್ನೋ ಕೀಟ ಇದೆ ಅಂತ ಯಾಕೆ ಗೊತ್ತಿರಲಿಲ್ಲ ಅಂದರೆ ಇಂಗ್ಲಿಷ್ ಭಾಷೆಯೇ ಬರ್ತಿರಲಿಲ್ಲ!

ಇಲ್ಲಿ ಬಂದ ಹೊಸತರಲ್ಲಿ ನಮಗೆ ಒಂದೇ ಆಶ್ಚರ್ಯ .. ಯಾರ ಬಾಯಲ್ಲಿ ಯಾವಾಗ ನೋಡಿದರೂ ಬರೀ ಕ್ರಿಕೆಟ್ ಮಾತೇ! ಆಟದ ಗಂಧ ಗಾಳಿ ತಿಳಿಯದ ನಾವು ಬೋರೇಗೌಡ ಬೆಂಗಳೂರನ್ನ ಬಾಯ್ಬಿಟ್ಟು ನೋಡಿದ ಹಾಗೆ ಕೂತಿರುತ್ತಿದ್ದೆವು ಕ್ರಿಕೆಟ್‌ನ ಮಾತು ಬಂದಾಗ. ಆಮೇಲೆ ಯಾವುದೋ ಟೆಸ್ಟ್ ಮ್ಯಾಚ್ ಶುರುವಾಯ್ತು. ಅಬ್ಬಾ ಆಗಂತೂ ಐದು ದಿನ ಯಾವಾಗ ನೋಡಿದ್ರೂ ಅದರದ್ದೇ ಮಾತು. ಮ್ಯಾಚ್ ಮುಗಿದ ಮೇಲೆ ಆ ವಿಷಯವೂ ಸಾಯುವುದು ಗ್ಯಾರಂಟಿ ಅಂತ ಕಾದೆವು. ಮ್ಯಾಚು ಮುಗೀತು. ಆದರೆ ಅಕಟಕಟಾ ! ಕ್ರಿಕೆಟ್‌ನ ಹುಚ್ಚು ಮುಗಿಯುವುದೆಲ್ಲಿ ಬಂತು? ಆದರೆ ಅದರ ಬಗ್ಗೆ ಮಾತಾಡೋದು ಮಾತ್ರ ನಿಲ್ಲಲೇ ಇಲ್ಲ … ಮ್ಯಾಚ್ ಮುಗಿದ ಎಷ್ಟೋ ದಿನಗಳ ನಂತರವೂ. ನನಗೆ ಕೀಳರಿಮೆ ಶುರುವಾಗಿ ಹೋಯ್ತು. ಥೂ ನನ್ಮಗಂದು ಇದೇನು ಅಂತ ಅರ್ಥ ಮಾಡ್ಕೊಂಡೇ ಬಿಡಬೇಕು ಅಂತ ತೀರ್ಮಾನಿಸಿ ಒಂದು ದಿನ ಅಪ್ಪನಿಗೆ ದುಂಬಾಲು ಬಿದ್ದೆ. ಅಪ್ಪನ ಪಾಠ ಶುರುವಾಯ್ತು …

‘ಅಣ್ಣಾ … ಕ್ರಿಕೆಟ್ ಅಂದ್ರೆ ಹೆಂಗಿರತ್ತಣ್ಣಾ?’ …

‘ನೋಡಮ್ಮಾ ಆ ಕಡ್ಡಿ ತರ ಸಿಕ್ಕಿಸಿರ್ತಾರಲ್ಲ ಅದನ್ನ ವಿಕೆಟ್ ಅಂತಾರೆ. ಆಮೇಲೆ ಇಬ್ರೂ ಆ ಕಡೆಯಿಂದ ಈ ಕಡೆ – ಈ ಕಡೆಯಿಂದ ಆ ಕಡೆ ಬ್ಯಾಟ್ ಹಿಡಿದು ಓಡ್ತಾರಲ್ಲ ಅದಕ್ಕೆ ರನ್ ಅಂತಾರೆ …’

‘ಅಣ್ಣಾ ಬ್ಯಾಟ್ ಅಷ್ಟು ಭಾರ ಇರತ್ತಲ್ಲಾ ಅದ್ನೂ ಯಾಕೆ ಎತ್ಕೊಂಡು ಓಡ್ತಾರೆ? ಅಲ್ಲೇ ಇಟ್ಟು ಆಮೇಲೆ ವಾಪಸ್ ಬಂದ್ಮೇಲೆ ಎತ್ಕೋ ಬಹುದಲ್ವಾ?’

ನನ್ನ ಅದ್ಭುತ ಜ್ಞಾನ ಪ್ರದರ್ಶನ! ಅಪ್ಪ ಅಸಹಾಯಕತೆಯಿಂದ ಉಗುಳು ನುಂಗುತ್ತಾ ಪೇಲವ ನಗೆ ನಕ್ಕರು. ಎಂದಾದ್ರೂ ಈ ಮೊದ್ದು ತಲೆಯೊಳಕ್ಕೆ ವಿಷ್ಯ ಹೋದೀತಾ ಅನ್ನೋ ವಿಷಾದದ ನಗುವಿರಬೇಕು ಪಾಪ. ಆನು, ಆಫು ಇವೆಲ್ಲ ಸ್ವಿಚ್‌ನ ಬಗ್ಗೆ ಮಾತ್ರ ಕೇಳಿದ್ದ ನನ್ಗೆ ಕ್ರಿಕೆಟ್‌ನಲ್ಲೂ ಅದೆಲ್ಲ ಇದೆ ಅಂತ ಗೊತಾದಾಗ ಮೂಗಿನ ಮೇಲೆ ಬೆರಳಿಟ್ಟು ಕೊಂಡಿದ್ದೆ.

‘ಆಮೇಲೆ ಒಂದು ಟೀಮಿನ ಆಟಗಾರರು ಇಬ್ಬಿಬ್ಬರಾಗಿ ಬ್ಯಾಟ್ ಮಾಡಲು ಬರ್ತಾರೆ. ಇನ್ನೊಂದು ಪಾರ್ಟಿಯವರನ್ನ ಫೀಲ್ಡರ್ಸ್ ಅಂತಾರೆ …’

‘ಹೂ’ …

‘ಆಮೇಲೆ ಬೌಲರ್ ಬಾಲ್‌ನ ಬ್ಯಾಟ್ಸ್‌ಮನ್ ಕಡೆ ಎಸೀತಾನೆ … ’

‘ಅಣ್ಣಾ ಬೌಲರ್ ಎಲ್ಲಿದಾನೆ?!’

‘ಅದೇಮ್ಮಾ ಎದುರು ಪಾರ್ಟಿಯಲ್ಲಿರೋ ಒಬ್ಬನ್ನ ಬೌಲರ್ ಅಂತಾರೆ …

’ಮತ್ತೆ ಈಗ ತಾನೇ ಎದುರು ಪಾರ್ಟಿಯವರು ಫೀಲ್ಡರ್ಸ್ ಅಂದ್ರಿ …. ಈಗ ನೋಡಿದ್ರೆ ಬೌಲರ್ ಅಂತೀರಾ … ಒಬ್ಬನೇ ಎರಡೂ ಹೇಗಾಗ್ತಾನೆ?’ ..

ಓಹೋ ಮತ್ತೊಮ್ಮೆ ಮಗಳ ಬುದ್ಧಿವಂತಿಕೆಯ ಪ್ರದರ್ಶನ ! ಅದನ್ನು ಗಮನಿಸದ ಹಾಗೆ ತಾಳ್ಮೆ ತಂದುಕೊಂಡು ಪಾಪ ಗಂಟಲು ಹರಿದುಕೊಂಡು ವಿವರಿಸೇ ವಿವರಿಸಿದರು. ತಲೆಯೊಳಗೆ ಕಾಲು ಭಾಗದಷ್ಟು ಹೋಯ್ತು. ಉಳಿದದ್ದು ಹಳೆಯ ಸಿನೆಮಾಗಳಲ್ಲಿ ಎದುರಾಳಿಗಳು ಬಿಟ್ಟ ಬಾಣ ಒಂದಕ್ಕೊಂದು ಡಿಕ್ಕಿ ಹೊಡೆದು ಉರಿದು ಉದುರುತ್ತವಲ್ಲಾ ಹಾಗೆ ನನ್ನ ತಲೆಯ ಹೊರ ಆವರಣಕ್ಕೆ ಹೊಡೆದು, ಮಿದುಳು ತಲುಪದೇ ಅಲ್ಲೇ ಬಿದ್ದು ಹೋಯ್ತು.

ಆಗಲೇ ಯಾವುದೋ ಟೆಸ್ಟ್ ಸೀರೀಸ್ ಶುರುವಾಗೋಯ್ತು. ಅಪ್ಪ ಮಗಳಿಗೆ practical knowledge ಕೊಟ್ಟುಬಿಡೋಣ ಅಂತ ತೀರ್ಮಾನಿಸಿ ನನ್ನ ಹೊರಡಿಸೇ ಬಿಟ್ಟರು. ಅಮ್ಮ ಇಷ್ಟಿಷ್ಟು ದೊಡ್ಡ ಡಬ್ಬಿಗಳಲ್ಲಿ ಬಿಸಿಬೇಳೆ ಭಾತ್, ಮೊಸರನ್ನ ಮಾಡಿದಳು! ನಾವು ಕಾಶಿಯಾತ್ರೆಗೆ ಹೊರಟ ಹಾಗೆ ಅವುಗಳನ್ನ ಸಾಗಿಸಿಕೊಂಡು ಕ್ರಿಕೆಟ್ ನೋಡೋದಿಕ್ಕೆ ಹೊರಟೆವು. ಅಲ್ಲಿ ಹೋಗಿ ಕೂತಿದ್ದಾಯ್ತು. ಮ್ಯಾಚ್ ಶುರುವಾಯ್ತು. ಜನವೋ ಜನ. ಕಿರುಚಾಟ, ಅರಚಾಟ. ಆದರೆ ಅಬ್ಬಾ ದೇವರೇ! ಅದೆಂಥಾ ನಿಧಾನದ ಆಟ! ಆ ಬೌಲರ್ ನಿಧಾನಕ್ಕೆ ನಡ್ಕೊಂಡು ಬಂದು ಅವನ ಮಾರ್ಕ್ ತಲುಪಿ ಮತ್ತೆ ಓಡಿ, ಬಾಲ್ ಎಸೆದು, ಆ ಬ್ಯಾಟ್ಸ್‌ಮನ್ ಅದನ್ನ ಹೊಡೆದು, ಆಮೇಲೆ ಅದನ್ನ ಯಾರೋ ತಡೆದು, ವಾಪಸ್ ವಿಕೆಟ್ ಕೀಪರ್‌ಗೆ ಎಸೆದು, ಅವ ಮತ್ತೆ ಅದನ್ನ ಒಂದಿಷ್ಟು ಉಜ್ಜಿ, ಒಂದಿಷ್ಟು ಎಂಜಲು ಬಳಿದು ಮತ್ತೆ ತಿಕ್ಕಿ ಬೌಲರ್‌ಗೆ ಕೊಟ್ಟು, ಅವ ಮತ್ತೆ ಅದನ್ನ ಒಂದಿಷ್ಟು ತಿಕ್ಕಿ, ಎಂಜಲು ಮೆತ್ತಿ ಉಜ್ಜಿ , ಅವನ ರನ್ ಅಪ್ ಶುರು ಹಚ್ಚಿ … ಉಶ್ಶಪ್ಪಾ ! ನನಗೆ ತಿಕ್ಕಲು ಹಿಡಿದು ಹೋಯ್ತು. ಇದೆಲ್ಲಿ ಸಿಕ್ಕಿಕೊಂಡೆ ದೇವರೇ ಅಂತ ಹಳಹಳಿ ಶುರುವಾಗಿಹೋಯ್ತು. ‘ಅಮ್ಮಾ ಬಿಸಿಬೇಳೆ ಭಾತ್ ಕೊಡೇ ..’ ಪೀಡಿಸಲು ಶುರು ಮಾಡಿದೆ. ‘ಶ್! ಸುಮ್ನಿರು ಲಂಚ್ ಟೈಮ್ ಬರ್ಬೇಕು ಆಗ ತಿನ್ನೋಣ ..’ ಅಮ್ಮ ಗದರಿದಳು. ‘ಅವ್ರು ಆಡ್ತಿದಾರೆ ಅದಕ್ಕೇ ಲಂಚ್ ಟೈಮ್‌ಗೆ ಕಾಯ್ಬೇಕು. ನಾವ್ಯಾಕೆ ಕಾಯ್ಬೇಕು? ಈಗ್ಲೇ ಕೊಡೇ’ .. ಅಮ್ಮನಿಗೆ ಅವಮಾನದಿಂದ ಮುಖ ಕೆಂಪಾಯ್ತು. ತೊಡೆಗೆ ಚಿವುಟಿದಳು. ‘ಅಣ್ಣಾ ಅಮ್ಮ ಚಿವುಟ್ತಾಳೆ … ’ ಆಟದಲ್ಲಿ ಲೀನರಾಗಿದ್ದ ಅಪ್ಪನಿಗೆ ಅದೆಲ್ಲಿ ಕೇಳಿಸಬೇಕು? ನಾನು ತಲೆ ಮೇಲೆ ಕೈ ಹೊತ್ತು ಊಟಕ್ಕಾಗಿ ಕಾಯುತ್ತಾ ಕೂತೆ. ಊಟ ಮುಗೀತು. ಮತ್ತೆ ಆಟ ಶುರು. ಆಕಳಿಸಿ, ತೂಕಡಿಸಿ ದಿನ ಕಳೆವಷ್ಟರಲ್ಲಿ ಸಾಕಾಗಿಹೋಯ್ತು. ಕ್ರಿಕೆಟ್ ಆಟ ನನ್ನನ್ನು ಸೆಳೆಯುವಲ್ಲಿ ಸೋತಿತ್ತು.

ಆಮೇಲಾಮೇಲೆ ಕ್ರಿಕೆಟ್ ಬಾರದ ನಾನು ಗುಂಪಿನಲ್ಲಿ ಸೇರೋದಿಕ್ಕೆ ಅನರ್ಹಳೆನ್ನಿಸುವ ಹಾಗೆ ಭಾವನೆ ಬರೋದಿಕ್ಕೆ ಶುರುವಾಗಿ ಕಷ್ಟ ಪಟ್ಟು ಕ್ರಿಕೆಟ್‌ನ A B C D ಕಲಿತೆ. ೧೯೮೩ರ ವರ್ಲ್ಡ್ ಕಪ್ ಬಂತಲ್ಲಾ ಆಗಂತೂ ಕ್ರಿಕೆಟ್ ಹುಚ್ಚು ಹಿಡಿದು ಬಿಟ್ಟಿತ್ತು. ಆಗ ತಾನೇ ಬ್ಲ್ಯಾಕ್ ಅಂಡ್ ವೈಟ್ ಟಿ. ವಿ ಬೇರೆ ಕಾಲಿಟ್ಟಿತ್ತು .. ನಮ್ಮ ಮನೆಗಲ್ಲ ಎದುರು ಮನೆಗೆ! ರಾತ್ರೋ ರಾತ್ರಿ ಮ್ಯಾಚುಗಳು ಪ್ರಸಾರವಾಗ್ತಿದ್ದವು. ನಮ್ಮ ಇಡೀ ಬೀದಿಗೆ ಒಂದೇ ಒಂದು ಟಿ ವಿ. ನಾವು ಮಕ್ಕಳೆಲ್ಲ ಅವರ ಮನೆಯಲ್ಲಿ ಬೀಡು ಬಿಟ್ಟಿರುತ್ತಿದ್ದೆವು. ಎಂಥ ವಿಚಿತ್ರ ವಿಚಿತ್ರದ ಮೂಢ ನಂಬಿಕೆಗಳೆಂದರೆ ನಾವು ಟಾಯ್ಲೆಟ್‌ಗೆ ಹೋದಾಗ ಒಬ್ಬ ಔಟ್ ಆಗಿಹೋದರೆ ಮತ್ತೆ ಔಟ್ ಆಗಲಿ ಅಂತ ಮ್ಯಾಚ್ ಕೂಡಾ ನೋಡದೆ ಟಾಯ್ಲೆಟ್‌ನಲ್ಲೇ ಕೂತಿರ್ತಿದ್ದೆವು. ಯಾವನಾದರೂ ತಲೆ ಕೆರೆದುಕೊಂಡಾಗ ಔಟ್ ಆದರೆ ಕೈ ಕೊನೆವರೆಗೆ ಅಲ್ಲೇ ಇರಬೇಕು! ಎಂತೆಂಥಾ ಮಂಗ ಚೇಷ್ಟೆಗಳು!! ಅವತ್ತು ರಾತ್ರಿ ಭಾರತ ವೆಸ್ಟ್ ಇಂಡಿಸ್ ವಿರುದ್ದ ಫ಼ೈನಲ್ಸ್ ಗೆದ್ದಾಗ ಬೀದಿಯಲ್ಲಿ ಹಬ್ಬದ ಸಂಭ್ರಮ. ಮಧ್ಯ ರಾತ್ರಿ ಬೀದಿಯಲ್ಲಿ ಹಬ್ಬ. ನನ್ನ ದೊಡ್ಡಮ್ಮನ ಮಗ ವೆಸ್ಟ್ ಇಂಡೀಸ್ ತಂಡದ ಫ್ಯಾನು. ಅವನಿಗೆ ಆವರೆಗೆ ಬೋರ್ಡ್‌ನಲ್ಲೇ ಇಲ್ಲದ ಭಾರತ ಅಂಥಾ ಬಲಿಷ್ಟ ತಂಡವನ್ನು ಸೋಲಿಸಿದ್ದು ಅಘಾತವಾಗಿತ್ತು. `ಎಲ್ಲ ಬರೀ fluke ..’ ಅಂತ ಕೊರಗಿದಾಗ ನಾವು ಅವನ ರಕ್ತ ಹೀರಿ ಬಿಟ್ಟಿದ್ದೆವು! ಅವತ್ತು ರಾತ್ರಿ ನಮ್ಮ ಕೈಲೇ ಕಪ್ ಇದ್ದ ಹಾಗೆ ಕನಸು ….

ಆಗ ಶುರುವಾಯ್ತು ಕ್ರಿಕೆಟ್ ಜೊತೆಯ ನಂಟು. ನಾನಂತೂ ನಮ್ಮ ದೇಶದ ತಂಡದ ಉಗ್ರಪ್ರೇಮಿ. ಒಂದೊಂದು ಬಾಲನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುವಂಥ ಹುಚ್ಚು. ಕ್ರಿಕೆಟ್ ಮ್ಯಾಚ್ ಇರುವಾಗ ಕ್ಲಾಸಿನಲ್ಲಿ ಕದ್ದು ಕಾಮೆಂಟರಿ ಕೇಳೋ ಸೊಗಸು ! ಈಗಿನ ಮೊಬೈಲ್‌ಗಳನ್ನು ಕಾಲೇಜಿನಲ್ಲಿ ಕಿತ್ತಿಟ್ಟು ಕೊಳ್ತಾರಲ್ಲ ಹಾಗೆ ಆಗ ಪಾಕೆಟ್ ಟ್ರಾನ್ಸಿಸ್ಟರ್ ಕಿತ್ತಿಟ್ಟುಕೊಳ್ತಿದ್ದರು. ಆಮೇಲೆ ವಾಪಸ್ ಕೇಳೋದಿಕ್ಕೆ ಸ್ಟಾಫ್ ರೂಮಿಗೆ ಹೋದರೆ ನಮ್ಮ ಲೆಕ್ಚರರ್‌ಗಳು ನಮ್ಮದೇ ಟ್ರಾನಿಸ್ಟರ್‌ನಿಂದ ಕಾಮೆಂಟರಿ ಕೇಳ್ತಾ ಕೂತಿರ್ತಿದ್ರು ! ಸಾರ್‌ರ್‌ರ್‌ರ್ ಅಂತ ತಲೆ ಕೆರೆದು ರಾಗ ಎಳೆದರೆ ‘ಅಯ್ಯೋ ಸುಮ್ನಿರ್ರಿ ನಾವೊಂದಿಷ್ಟು ಹೊತ್ತು ಕೇಳಿ ಕೊಡ್ತೀವಿ’ ಅಂತ ನಗ್ತಿದ್ರು !.ಆಗ ನೆನಪಾಗ್ತಿತ್ತು ಅವರೂ ಮನುಷ್ಯರೇ ಅಂತ.

ಈ ಅಜ಼ರುದ್ದಿನ್ ಕಾಲಿಟ್ನಲ್ಲ ಕ್ರಿಕೆಟ್ ರಣರಂಗಕ್ಕೆ .. ಮೊದಲಿಗೇ ಎರಡು ಸೆಂಚುರಿ ಹೊಡೆದು ಬಿಟ್ಟ. ಮೂರನೇ ಸೆಂಚುರಿಗೆ ಕೂಡಾ ಹತ್ತಿರ ಆಗಿ ಹೋದ. ಹಿಂದಿನ ದಿನ ಅದೆಷ್ಟೋ ತೊಂಭತ್ತೋ, ತೊಂಭತ್ತೆರಡೋ ಹೊಡೆದ. ಮಾರನೇ ದಿನ ಇನ್ನೇನು ಒಂದ್ಹತ್ತು ರನ್ ಅಲ್ವಾ .. ಅಬ್ಬಬ್ಬಾ ಅಂದ್ರೆ ಹತ್ತು ನಿಮಿಷದಲ್ಲಿ ಹೊಡೆದು ಬಿಡ್ತಾನೆ ಅಂತ ತೀರ್ಮಾನಿಸಿ ಕೂತೆವು ಟಿ. ವಿ ಮುಂದೆ. ಆ ಅಜ಼ರ್‌ ತಿಣುಕಾಡಿದ .. ಆಡಿದ … ಆಡಿದ … ಮೊದಲ ಕ್ಲಾಸ್ ಬಿಟ್ಟಿದ್ದಾಯ್ತು. ಎರಡನೇ ಕ್ಲಾಸ್ ತುಂಬ ಮುಖ್ಯವಾದದ್ದಿತ್ತು. ಅದಕ್ಕೆ ಹೋಗೋಣ ಅಂತ ಕೂತೇ ಬಿಟ್ಟೆವು. ಅವನು ಹತ್ತಿರ ಹತ್ತಿರ ಒಂದು ಘಂಟೆ ಕಳೆದ್ರೂ ಸೆಂಚುರಿ ಮುಗಿಸ್ಲೇ ಇಲ್ಲ. ನಮಗೆ ತಲೆ ಕೆಟ್ಟೋಯ್ತು. ಅಷ್ಟು ಹೊತ್ತು ಕಾದು ನೋಡದೇ ಹೋಗಲೂ ಇಷ್ಟವಿಲ್ಲ. ಕೈ ಕೈ ಹಿಸುಕಿ ಒದ್ದಾಡುವಷ್ಟರಲ್ಲಿ ಅಬ್ಬಾ! ಅಂತೂ ಸೆಂಚುರಿ ಹೊಡೆದೇ ಬಿಟ್ಟ. ಟೈಮ್ ನೋಡಿದರೆ ಎರಡನೇ ಕ್ಲಾಸ್ ಶುರುವಾಗಿ ಹೋಗಿತ್ತು. ಕಾಲೇಜು ಎರಡು ಕಿಲೋಮೀಟರ್ ದೂರ. ಓಡಿದೆವು .. ಓಡಿದೆವು .. ಅಜ಼ರ್‌ಗೆ ಹಿಡಿ ಶಾಪ ಹಾಕುತ್ತಾ ಓಡಿದೆವು. ಏನೋ ಅಜ಼ರ್ ‘ನೀವಿಬ್ರೂ ಇಲ್ದಿದ್ರೆ ನಾನು ಸೆಂಚುರಿ ಹೊಡೆಯಲ್ಲ ಕಣ್ರೇ’ ಅಂತ ಹೇಳಿದನೇನೋ ಅನ್ನೋ ಹಾಗೆ ಅವನ ಆಟ ನೋಡೋದಿಕ್ಕೆ ಕೂತು ಈಗ ಅವನಿಗೆ ಶಾಪ ಹಾಕಿದೆವು! ಕೊನೆಗೆ ಓಡ್ತಾ ಓಡ್ತಾ ಕಾಲು ಘಂಟೆ ತಡವಾಗಿ ಕ್ಲಾಸ್ ತಲುಪಿದ್ದಾಯ್ತು. ನಮ್ಮ ಲೆಕ್ಚರರ್ ದುರುಗುಟ್ಟಿ ನೋಡಿದ್ರು. ನಾನು ಸುಳ್ಳು ಆಯಾಸ ನಟಿಸುತ್ತಾ ಗಂಟಲು ನೋವು, ಜ್ವರ ಅಂತ ಹೇಳಲು ಪ್ರಯಾಸ ಪಟ್ಟು ಗಂಟಲಿಗೆ ಕೈ ಇಟ್ಟು ಮಾತನಾಡಲು ಸಾಧ್ಯವಗುತ್ತಿಲ್ಲವೇನೋ ಅನ್ನುವ ಹಾಗೆ ನಟಿಸಿದೆ. ನನ್ನ ಫ಼್ರೆಂಡು ನನ್ನ ಪರವಾಗಿ ಅವರಿಗೆ ಅದನ್ನ ಹೇಳಿದಳು. ಅವರು ‘ಬಂದು ಹಾಳಾಗಿ’ ಅನ್ನೋ ಹಾಗೆ ನೋಡಿದರು. ನಾನು ಸುಳ್ಳು ಹೇಳಿದ ಪಾಪಕ್ಕೆ ಇಡೀ ಕ್ಲಾಸಿನಲ್ಲಿ ಸುಳ್ಳು ಸುಳ್ಳು ಕೆಮ್ಮನ್ನು ಕೆಮ್ಮುತ್ತಾ ಸಂಕಟದ ಮುಖದಲ್ಲಿ ಕೂತೆ. ಕ್ಲಾಸ್ ಮುಗೀತು. ನಾನು ಮನಸಲ್ಲೇ ಕೇಕೆ ಹಾಕಿದೆ. ಕ್ಲಾಸಿನಿಂದ ಹೊರಗೆ ಹೋದೋರು ಮತ್ತೆ ಬಗ್ಗಿ ನನ್ನನ್ನ ಆಚೆ ಬರೋ ಹಾಗೆ ಸನ್ನೆ ಮಾಡಿದ್ರು. ‘ಅಯ್ಯೋ ಗ್ರಹಚಾರವೇ’ ಅಂತ ಗಾಭರಿ ಬಿದ್ದು ಆಚೆ ಹೋದ್ರೆ ಅವರು ತುಂಟ ನಗು ನಗುತ್ತಾ ‘ಏನ್ರೀ ಅಜ಼ರ್ ಸೆಂಚುರಿ ಮುಗ್ಸಿದ್ನಾ?’ ಅಂದರು!! ನಾನು ಬ್ಬೆ ಬ್ಬೆ ಬ್ಬೆ ಅಂತ ‘ಸಾರ್ ಮ್ಯಾಚ್‌ಗೋಸ್ಕರ ಅಲ್ಲ ಸಾರ್ … ನಿಜಕ್ಕೂ ಗಂಟಲು ನೋವು ..’ ಅಂತ ಕೆಟ್ಟ ಮುಖದಲ್ಲಿ ಹೇಳಕ್ಕೆ ಹೊರಟ ಕೂಡಲೇ ‘ಅಯ್ಯೊ ಸುಮ್ನಿರ್ರಿ ನನಗೆ ಆಗ್ಲೆ ಗೊತ್ತು ನಿಮ್ದು ಬರೀ ಕಥೆ ಅಂತ. ನಂಬಿದ ಹಾಗೆ ನಟಿಸ್ದೆ ಅಷ್ಟೇ ! ನಿಮ್ಮ ಗಂಟಲು ನೆಟ್ಗೇ ಇದೆ ನಂಗೊತ್ತು. ಈಗ ನಾನು ನಿಮ್ ಲೆಕ್ಚರರ್ ಅಲ್ಲರೀ … ಅಜ಼ರ್ ಸೆಂಚುರಿ ಹೊಡೇದ ತಾನೇ’ ಅಂತ ನಕ್ಕಾಗ ನಾನು ಹುಳ್ಳ ಮುಖದಲ್ಲಿ ‘ಹೊಡೆದ ಸಾರ್’ ಅಂದಿದ್ದು ಈಗ .. ಈಗ .. ಈಗಲೇನೋ ಅನ್ನಿಸ್ತಿದೆ !

ಸುಮಾರು ವರ್ಷ ಕ್ರಿಕೆಟ್ ಆಟ ಗೆದ್ದಾಗ ಬೀದಿಯಲ್ಲಿ ಕುಣಿದಾಡಿದೆ , ಸೋತಾಗ ಬಿದ್ದು ಬಿದ್ದು ಅತ್ತೆ. ಕ್ಯಾಚ್ ಬಿಟ್ಟಾಗ ಟಿ.ವಿ ಗೆ ಕಲ್ಲು ಬೀಸುವಷ್ಟು ಆಕ್ರೋಶದಿಂದ ನಡುಗುತ್ತಿದ್ದೆ. ಕ್ರಿಕೆಟ್ ಬದುಕಿನ ಅವಿಭಾಜ್ಯ ಅಂಗ ಆಗಿ ಹೋಯ್ತು. ಜನರೆಲ್ಲ ಸೇರಿದಾಗ ಕ್ರಿಕೆಟ್ ಬಗ್ಗೆ ಮಾತಾಡೋದೇ ಒಂದು ಫ್ಯಾಷನ್. ನನ್ನ ಅತೀ ಪ್ರೀತಿಯ ಮತ್ತು ಅತೀ ಸಿಟ್ಟಿನ ಆ ಸೀನ್‌ಗಳನ್ನೆಲ್ಲ ಕಂಡ ಅಮ್ಮ ‘ಥೂ ನಿಂದು ಎಲ್ಲ ಅತೀನೇ’ ಅಂತ ಗೊಣಗಿದರೂ ನಾನು ಅದೇ ಉಗ್ರ ಪ್ರೇಮಿಯಾಗೇ ಉಳಿದೆ.

ಆಮೇಲೆ ಅದ್ಯಾವ ಮ್ಯಾಚು ಅಂತ ನೆನಪಿಲ್ಲ. ಯಾವುದೋ ಒಂದು ವರ್ಲ್ಡ್ ಕಪ್ ಮ್ಯಾಚ್ ಅಂತನ್ನೋದು ಮಾತ್ರ ನೆನಪಿದೆ. ನಮ್ಮ ಭಾರತ ಅಷ್ಟರಲ್ಲಾಗಲೇ ಸೋತು ಹಿಂತಿರುಗಿ ಆಗಿತ್ತು. ನನಗೆ ನಮ್ಮ ತಂಡ ಬಿಟ್ಟರೆ ಮುಂದಿನ favourite ತಂಡ ದಕ್ಷಿಣ ಆಫ್ರಿಕ. ನಮ್ಮ ದೇಶ ಸೋತ ಮೇಲೆ ಈಗ ನನ್ನ ಕಣ್ಣೆಲ್ಲ ದಕ್ಷಿಣ ಆಫ್ರಿಕಾ ತಂಡದ ಮೇಲೆ. ಸೆಮಿ ಫೈನಲ್ ಮ್ಯಾಚ್ ಅಂತ ನೆನಪು. ಹ್ಯಾನ್ಸಿ ಕ್ರೋನಿ ಅದ್ಭುತವಾಗಿ ತಂಡ ಲೀಡ್ ಮಾಡಿದ. ಎಲ್ಲರೂ ವೀರಾವೇಶದಿಂದ ಹೋರಾಡಿದರು. ಫೀಲ್ಡರ್‌ಗಳ ಎದುರೆದುರೇ ಬಾಲ್ ಬಿದ್ದಿತು. ಎದ್ದು ಬಿದ್ದು ಮಣ್ಣಲ್ಲಿ ಹೊಡೆದಾಡಿದ ಫೀಲ್ಡರ್‌ಗಳ ಕೈಗೆ ಬಾಲ್ ಸಿಕ್ಕದೇ ತುಂಬ ನೊಂದರು. ಬ್ಯಾಟ್ಸ್‌ಮನ್‌ಗಳೆಲ್ಲ ಅದೆಷ್ಟು ಕಷ್ಟ ಪಟ್ಟು ಬ್ಯಾಟ್ ಮಾಡಿದರೂ ಅದೃಷ್ಟ ಅವರ ಕಡೆಗಿರಲಿಲ್ಲ. ರನ್ ಔಟ್ ಆದವರು ಸುಮಾರು ಜನ. ಆಗೆಲ್ಲ ಕಳಾಹೀನ ಮುಖದಲ್ಲಿ ನಮ್ಮೆದುರಿಂದ ಸರಿದು ಹೋದ ಅವರನ್ನು ನೋಡಿ ನಾನು ದುಃಖದಲ್ಲಿ ಅಳುತ್ತ ಕೂತಿದ್ದೆ. ಒಟ್ಟಿನಲ್ಲಿ ಅವತ್ತು ಯಾವ ದಾಳವೂ ಸರಿಯಾಗಿ ಉರುಳದೇ south africa ಸೋತಿತು. ನಾನು ಹೃದಯ ಬಿರಿಯೋ ಹಾಗೆ ಅತ್ತಿದ್ದೂ ಆಯ್ತು. ಎಷ್ಟೆಲ್ಲ ಕಷ್ಟ ಪಟ್ಟು ಸೋತರಲ್ಲಾ ಅಂತ ಮನಸ್ಸು ತುಂಬ ದಿನ ಸಪ್ಪಗಾಗಿತ್ತು ….

ಆಮೇಲೆ ಒಂದಿಷ್ಟು ವರ್ಷ ಕಳೆಯಿತು … ಆಗ ಶುರುವಾಯ್ತು ಮ್ಯಾಚ್ ಫಿಕ್ಸಿಂಗ್ ಗಲಾಟೆ …. ! ಆಗೊಂದು ದಿನ ಈ ಪಾಪಿ ಹ್ಯಾನ್ಸಿ ಕ್ರೋನಿ ಅವತ್ತು ನಾನು ಬಿದ್ದು ಬಿದ್ದು ಅತ್ತ ಮ್ಯಾಚ್ ಇತ್ತಲ್ಲಾ ಅದು ಫಿಕ್ಸ್ ಆಗಿತ್ತು ಅಂತ ಒಪ್ಪಿಬಿಟ್ಟ … ! ಅವತ್ತು ಎಂಥಾ ಸಿಟ್ಟು , ಅವಮಾನ ಎಲ್ಲ ಆಗಿಹೋಯ್ತು ನನಗೆ. ಅವತ್ತು ನಾನು ಮಂಗನ ಹಾಗೆ ಕೂತು ಇವರಿಗೆ ಹುರಿದುಂಬಿಸಿದ್ದೆ. ಕ್ಯಾಚ್ ಬಿಟ್ಟಾಗ ನಾನೂ ನೆಲದ ಮೇಲೆ ಬಿದ್ದಿದ್ದೆ. ಬ್ಯಾಟ್ ಅವರ ಜೊತೆ ಜೊತೆಗೇ ಹಿಡಿದು ರನ್ನರ್ ಥರ ಓಡಿದ್ದೆ. ರನ್ ಔಟ್ ಆದಾಗ ಉದ್ದೋ ಉದ್ದಕ್ಕೆ ನೆಲದ ಮೇಲೆ ಬಿದ್ದು ಬ್ಯಾಟನ್ನು ಕ್ರೀಸ್ ತಲುಪಿಸಲು ಹರ ಸಾಹಸ ಮಾಡಿದ್ದೆ ! ನಾನು ಮಾನಸಿಕವಾಗಿ ಅಲ್ಲಿನ ಆಟಗಾರಳೇ ಆಗಿಹೋಗಿ ಅತ್ತು, ಕರೆದು ಎಲ್ಲ ಮಾಡಿದ ಆ ಮ್ಯಾಚ್ ಫಿಕ್ಸ್ ಆಗಿತ್ತು ಅಂತ ಗೊತ್ತಾದಾಗ ನಾನು ಪರಮ ಮೂರ್ಖಳಾಗಿಸಲ್ಪಟ್ಟಿದ್ದೆ ಅಂತ ಅನ್ನಿಸಿ ಬಿಟ್ಟಿತ್ತು. ಅವತ್ತೇ ಕಡೆ ನಾನು ಕ್ರಿಕೆಟ್ ಮ್ಯಾಚ್ ನೋಡಿದ್ದು. ಆಮೇಲೆ ಯಾವುದೇ ಮ್ಯಾಚ್ ನೋಡುತ್ತಿದ್ದರೂ ಅಲ್ಲಿನ ಔಟ್ ಆಗುವ, ರನ್ ಹೊಡೆಯುವ, ಏಳುವ, ಬೀಳುವ ಎಲ್ಲವೂ ನನಗೆ ಕೃತಕವಾಗಿ ಕಾಣಿಸುತ್ತವೆ ಅಂದಾಗ ಮ್ಯಾಚ್ ನೋಡುವುದು ಯಾಕಾಗಿ? ನಾನು ಕ್ರಿಕೆಟ್ ಬಗ್ಗೆ ಕೇಳಿದ ಕೊನೆಯ ಸುದ್ದಿ ಎಂದರೆ ಹ್ಯಾನ್ಸಿ ಕ್ರೋನಿ ಅಪಘಾತದಲ್ಲಿ ಸತ್ತ ಸುದ್ದಿ ….

ಕ್ರಿಕೆಟ್ ಆಟವನ್ನೇ ನನ್ನ ಪಾಲಿಗೆ absolete ಮಾಡಿಟ್ಟ ಮ್ಯಾಚ್ ಫಿಕ್ಸಿಂಗ್‌ಗೆ ನನ್ನದೊಂದು ಹೃದಯಪೂರ್ವಕ ತಿರಸ್ಕಾರ …

‍ಲೇಖಕರು G

September 28, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

7 ಪ್ರತಿಕ್ರಿಯೆಗಳು

 1. M.S.Prasad

  ನಿನ್ನ ಕ್ರಿಕೆಟ್ ನಿರೂಪಣೆ ಶಾಸ್ತ್ರೀ ಮತ್ತು ಗಾವಸ್ಕರ್ ಕಾಮೆಂಟರಿಗಿಂತ ಸುಪರಾಗಿದೆ 🙂

  ಪ್ರತಿಕ್ರಿಯೆ
 2. N.VISWANATHA

  Baraha,niroopane yellavoo kannige kattidante varnisalagide.Namma edurige eegaloo aa batsmangalu aduttiddarendu bhasavaguttade.Nanagoo ashte ‘MATCH FIXING’vishaya tilidu banda mele nannallidda cricket hucchhu harihoyithu.
  N.VISWANATHA

  ಪ್ರತಿಕ್ರಿಯೆ
 3. ಜಯಲಕ್ಷ್ಮಿ

  ನನಗೂ ಕ್ರಿಕೆಟ್ ಅಂದ್ರೆ ಆಸಕ್ತಿ ಇರ್ಲಿಲ್ಲ,ಇಲ್ಲ,ಇರೋದೂ ಇಲ್ಲ!!ಮದುವೆ ಆದ ಹೊಸದರಲ್ಲಿ ವಿಶ್ವಕಪ್ ಕ್ರಿಕೆಟ್ ಆಟ ನಡೀತಿತ್ತು,ಗಂಡನ ಪ್ರೀತ್ಯರ್ಥ ಹತ್ತಿರ ಕೂತ್ಕೊಂಡು ನೋಡ್ತಾ ಇದ್ದೆ,ಬೌಲರ್ ಚಂಡೆಸೆದಾಗ ಬ್ಯಾಟ್ಸ್ ಮನ್ ಓಡೋ ಪ್ರಕ್ರಿಯೆಯಲ್ಲಿ ಔಟಾಗೋ ಅಪಾಯ ಇರೋದು ಬ್ಯಾಟ್ಸ್ ಮನ್ ಗೆ ಹೇಗೆ,ಚೆಂಡೆಸೆದವನ್ಗೆ ತಾನೆ ಆ ಅಪಾಯ ಅಂತ ಪ್ರಶ್ನೆ ಕೇಳ್ದಾಗ ನನ್ನ ಮನಸ್ನಲ್ಲಿ ಲಗೋರಿ ಆಟದ್ದೇ ನೆನಪು,ಅದನ್ನ ಈಗ್ಲೂ ಹೇಳಿ ನಗ್ತಾರೆ ನನ್ನ ಗಂಡ.ನೀವು ಕೊನೆಯಲ್ಲಿ ಹೇಳಿದ ಮಾತು,‘ಯಾವುದೇ ಮ್ಯಾಚ್ ನೋಡುತ್ತಿದ್ದರೂ ಅಲ್ಲಿನ ಎಲ್ಲವೂ ಕೃತಕವಾಗಿ ಕಾಣುತ್ತದೆ’ ಅನ್ನುವುದು ಬರಿಯ ಕ್ರಿಕೆಟ್ಟಿಗಷ್ಟೆ ಸೀಮಿತವಾಗಿರದೆ ಮಾರ್ಮಿಕವಾಗಿದೆ:)

  ಪ್ರತಿಕ್ರಿಯೆ
 4. Swarna

  ಹೌದು ಭಾರಥಿಯವರೇ, ಮ್ಯಾಚ್ ಫಿಕ್ಸಿಂಗ್ ಆದ್ಮೇಲೆ ನಾನೂ ಬಿತ್ ಬಿಟ್ಟೆ ನೋಡೋದು.
  ಕಾಶಿಯಾತ್ರೆಗೆ ನಾವೂ ಬಿಸಿಬೇಳೆ ಬಾತ್ ತೊಗೊಂಡ್ ಹೋಗ್ತಿವಿ : )
  ಸ್ವರ್ಣಾ

  ಪ್ರತಿಕ್ರಿಯೆ
 5. mamata deva

  ಚೆನ್ನಾಗಿ ಬರೆದಿದ್ದೀರಿ.. ಭಾರತಿ.ನಿಮ್ಮ ಲೇಖನ ಓದೋವಾಗ ಈ ಕತೆ ನೆನಪಾಯ್ತು..ನಾನು ಶಾಲೆಗೆ ಹೋಗೋವಾಗ ಮನೇಲಿ ಯಾರಿಗೂ ಕ್ರಿಕೆಟ್ ಬಗ್ಗೆ ಅಸ್ಟೊಂದು ಗೊತ್ತಿರ್ಲಿಲ್ಲ. ವರ್ಷಕ್ಕೆ ಒಂದ್ ಸಲ ನಮ್ಮನೆಗೆ ಒಬ್ರು ಹಿರಿಯರು ಮಹಾಭಾರತ ವಾಚನ ಮಾಡೋಕೆ ಬರ್ತಿದ್ರು.ಒಂದೆರಡು ವಾರ ನಮ್ಮನೇಲೆ ಟೆಂಟ್ ಹಾಕ್ತ ಇದ್ರು. ಅವ್ರ ಕ್ರಿಕೆಟ್ ಪ್ರೇಮ ಎಷ್ಟೊಂದು ಅಂದ್ರೆ ..”ನಾಳೆ ಮ್ಯಾಚ್ ಇದೆ ನಾನು ಎಲ್ಲೂ ಹೋಗಲ್ಲ,ಇಲ್ಲಿದ್ರೆ ಕಾಮೆಂಟರಿ ಕೇಳಬಹುದು.. “ಅಂತ ರೇಡಿಯೋ ಅವ್ರ ಸ್ವಾಧೀನ ಮಾಡ್ಕೊಂಡ್ ಬಿಡ್ತಿದ್ರು.ನಮಗೆ ಓದೋಕೆ ಆಗಲ್ಲ ಅಂತ ಸಿಟ್ಟೇ ಬರ್ತಿತ್ತು.ಹೊಸ ರೇಡಿಯೋ ಅವ್ರಿಗೆ ಕೊಡಬೇಕಲ್ಲ ಅಂತ ಬೇರೆ.ಆದ್ರೆ ಅವರು ಇಂಗ್ಲಿಷ್ ಮಾತಾಡೋದು ಕೇಳಿ ಆಶ್ಚರ್ಯ ಕೂಡ ಆಗ್ತಾ ಇತ್ತು.ನಾವೂ ಕೇಳಿ,ಕೇಳಿ,ಬೋರ್ ಆದಾಗ.. ನಮಗೂ ಸ್ವಲ್ಪ ಹೇಳಿ ಕೊಡಿ ತಾತ.. ಕ್ರಿಕೆಟ್ ಆಟ ಹೇಗೆ ಅಂತ ನಾನು ,ನನ್ನ ತಂಗಿ ಕೇಳಿ ತಿಳ್ಕೊಂಡು ಮತ್ತೆ ಅವ್ರ ಜೊತೆ ನಾವೂ ಕಾಮೆಂಟರಿ ಕೇಳೋಕೆ ಶುರು..! ಎಲ್ಲ ಕ್ರಿಕೆಟ್ ಪದಗಳು ಅವರಿಂದ ಕಲಿತ ಮೇಲೆ ,ಮತ್ತೆ ರೇಡಿಯೋ ಕೊಡೋಕೆ ಹಿಂಜರಿಯಲಿಲ್ಲ.

  ಪ್ರತಿಕ್ರಿಯೆ
 6. Rao

  There is no word s absolete, the word you wanted to use is obsolete. the article is good

  ಪ್ರತಿಕ್ರಿಯೆ
  • bharathi

   thnx rao sir … adyaako gottilla naanu commerce degree oduvaaginindaloo adannu absolete anthale thaleli beroorisi kondidde ! namma paatadalli eshtu saavira sala ee pada baruvaagaloo naanu adannu absolete anthale bareyuttidde .. oduttidde !! anyway mistake is a mistake and thanks again for correcting me … 🙂

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: