ನಾನು ನನ್ನ ಹೆಸರು ‘MANJUNATH’ ಅಂತ ಸುಳ್ಳು ಹೇಳಿದೆನಾ?

ಅಫಘಾನಿಸ್ಥಾನ್ ಪ್ರವಾಸ ಕಥನ-೨

-ಮಂಜುನಾಥ್ ಕುಣಿಗಲ್, ದುಬೈ

ಮಂಜನ್ ಲೋಕ

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇನ್ನೂ ದೇವನಹಳ್ಳಿಗೆ ಸ್ಥಳಾಂತರಗೊಂಡಿರದಿದ್ದ ದಿನಗಳವು.

ಅಮ್ಮ,ಅಕ್ಕ,ನೆಚ್ಚಿನ ಮಡದಿ ಸೇರಿದಂತೆ ಬಹುತೇಕ ಹತ್ತಿರದ ಸಂಬಂಧಿಗಳೆಲ್ಲಾ ನನ್ನನ್ನು ಬೀಳ್ಕೊಡಲು HAL ವಿಮಾನ ನಿಲ್ದಾಣಕ್ಕೆ ನನ್ನೊಡನೆ ಬಂದಿದ್ದಾಗಿತ್ತು. ನನಗಂತೂ ಭಾರವಾದ ಮನಸ್ಸು.ಎದೆಯಲ್ಲೇನೋ ಚುಚ್ಚುತ್ತಿರೋ ಹಾಗೆ ಭಾಸವಾಗ್ತಾ ಇತ್ತು. ಎಲ್ಲರ ಮುಖಗಳಲ್ಲೂ ಪ್ರಯತ್ನಪೂರ್ವಕ ನಗುವಷ್ಟೇ.ಅಗಲಿಕೆಯ ಸನಿಹದ ಮುಂಚೂಣಿಯಲ್ಲಿದ್ದ ಅವರಿಗೆಲ್ಲರಿಗೂ ಆಗುತ್ತಲಿದ್ದ ಮಾನಸಿಕ ತಳಮಳದ ಸೂಕ್ಷ್ಮತೆಯನ್ನು ಗ್ರಹಿಸಬಹುದಾಗಿದ್ದ ಸಂದರ್ಭವದು. ಆದರೆ ಕರ್ತವ್ಯದ ಕರೆಗೆ ಓಗೊಡಲೇ ಬೇಕಾದ ಅನಿವಾರ್ಯತೆಯ ಬಿಗಿ ಹಿಡಿತ ನನಗೆ.

ಸಂಜೆ ೬.೩೦ಕ್ಕೆ ಸರಿಯಾಗಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದಿಂದ ದುಬೈಗೆ ಹಾರಲಿರುವ ‘ಎಮಿರೇಟ್ಸ್ EK567’ ವಿಮಾನದ ‘check in’ ಈಗಾಗಲೇ ಆರಂಭವಾಗಿದೆ ಎಂದು ವಿಮಾನ ನಿಲ್ದಾಣದ ಧ್ವನಿವರ್ಧಕಗಳು ಸೌಮ್ಯವಾಗೇ ಅರುಚಲಾರಂಭಿಸಿದ್ದವು. ಎಲ್ಲರನ್ನೂ ಬೀಳ್ಕೊಡುವ ಮೊದಲು ಮಡದಿಯ ಮುದ್ದಿನ ತಬ್ಬುಗೆ ಮನಸ್ಸಿಗೆ ಸ್ವಲ್ಪ ಹಿತವೆನಿಸುವಂತೆ ಇತ್ತು. ನನ್ನ ಕಣ್ಣಂಚಿನಲ್ಲಿ ನೀರು ಸುಳಿದಾಡಿದ್ದನ್ನ ಗಮನಿಸಿಯೂ, ನಾನೆಲ್ಲಿ ಉದ್ವೇಗಕ್ಕೊಳಗಾಗುವೆನೋ ಎಂದು ಎಲ್ಲರೂ ತಮ್ಮ ಅಗಲಿಕಾಶ್ರುಗಳನ್ನ ನಿರ್ದಯವಾಗಿ ಒಳಗೆ ಕಟ್ಟಿಹಾಕಿಕೊಳ್ಳುತ್ತಿದ್ದರು. ಎಲ್ಲರಿಗೂ ಒಮ್ಮೆ ಕೈ ಬೀಸಿ, ಯಾಂತ್ರಿಕ ನಗೆ ನಕ್ಕು, ಹೋಗಿಬರುವೆನೆಂದು ಹೇಳಿ ಮತ್ತೊಮ್ಮೆ ತಿರುಗಿ ನೋಡದೆ ನಿಲ್ದಾಣದೊಳಗೆ ಪ್ರವೇಶಿಸಿಯೇ ಬಿಟ್ಟೆ.

ಮೊದಲ ವಿಮಾನ ಪ್ರಯಾಣವಾದ್ದರಿಂದ ವಿಮಾನ ನಿಲ್ದಾಣದ ರೀತಿ ನೀತಿಗಳೆಲ್ಲ ಹೊಸದು. ಸನಿಹದಲ್ಲಿದ್ದ ಸಹ ಪ್ರಯಾಣಿಕರ ನೆರವಿನೊಂದಿಗೆ ಎಲ್ಲವೂ ಸುಗಮವೇ ಆಗಿತ್ತು. ಗಗನಸಖಿಯರ ಮಂದಸ್ಮಿತ ಸ್ವಾಗತ ಇಷ್ಟವಾಗಿತ್ತು ಮತ್ತು ಅವರ ನಿರ್ದೇಶನಗನುಗುಣವಾಗಿ ನನಗೆ ಮೀಸಲಿಟ್ಟ ಜಾಗದಲ್ಲಿ ಆಸೀನನಾದೆ. ಕಿಟಕಿಯ ಪಕ್ಕದಲ್ಲಿದ್ದ ನನ್ನ ಹಿರಿಯ ಸಹ ಪ್ರಯಾಣಿಕರಾಗಲೇ ನಿದ್ರಾದೇವಿಗೆ ಶರಣಾದಂತಿತ್ತು. ನಿಟ್ಟುಸಿರು ಬಿಡುತ್ತಾ ಒಮ್ಮೆ ವಿಮಾನದೆಲ್ಲೆಡೆ ದೃಷ್ಟಿ ಹಾಯಿಸಿದೆ. ಗುಜುಗುಜು ಶಬ್ದ ಸ್ವಲ್ಪ ಜೋರಾಗಿಯೇ ಇತ್ತು. ಕೆಲವರು ತಮ್ಮ ಆಸನಗಳನ್ನ ಹುಡುಕುತ್ತಿದ್ದರೆ, ಮತ್ತೆ ಕೆಲವರು ತಮ್ಮ ಹ್ಯಾಂಡ್ ಬ್ಯಾಗ್ ಗಳನ್ನು ಮೇಲಿನ ಕ್ಯಾರಿಯರ್ ಡಬ್ಬದೊಳಗೆ ತುರುಕುತ್ತಿದ್ದದ್ದು ಸಾಮಾನ್ಯ ದೃಶ್ಯವಾಗಿತ್ತು. ಕೆಲವಾರು ನಿಮಿಷಗಳ ತರುವಾಯ ಪೈಲಟ್, ವಿಮಾನದ ಧ್ವನಿವರ್ಧಕದಲ್ಲಿ ತನ್ನ ಹಾಗು ತನ್ನೆಲ್ಲಾ ಸಹ ಸಿಬ್ಬಂದಿಯ ಪರಿಚಯವನ್ನಿತ್ತು, ಪ್ರಯಾಣದ ವಿವರಗಳು ಹಾಗೂ ಕೆಲ ಸೂಚನೆಗಳೊಂದಿಗೆ ಎಲ್ಲರಿಗೂ ಪ್ರಯಾಣದ ಶುಭ ಹಾರೈಕೆಯನ್ನು ಮಾಡಿದ್ದಾಯ್ತು. ಅಷ್ಟರಲ್ಲಾಗಲೇ ಬಹುತೇಕ ಎಲ್ಲರೂ ಆಸೀನರಾಗಿದ್ದರು. ತಮ್ಮ ಮುಂದಿದ್ದ ಪುಟ್ಟ ದೂರದರ್ಶನದಲ್ಲಿ ವಿಮಾನ ಸುರಕ್ಷತಾ ವಿಧಾನಗಳನ್ನು ಪ್ರಾಯೋಗಿಕವಾಗಿಯೇ ತೋರಿಸಲಾಗುತ್ತಿತ್ತು. ನನಗಿದೆಲ್ಲಾ ಹೊಸದಾದ್ದರಿಂದ ಹೆಚ್ಚಿನ ಆಸಕ್ತಿಯಿಂದಲೇ ನೋಡುತ್ತಿದ್ದೆ. ನಂತರ ಇದನ್ನೆಲ್ಲಾ ನೋಡಿ ‘ಏನಾದರೂ ಆದ್ರೆ ಏನಪ್ಪಾ ಗತಿ’? ಎಂದು ಸ್ವಲ್ಪ ಸಹಜ ಆತಂಕಕ್ಕೊಳಗಾಗಿದ್ದಂತೂ ಹೌದು.

ನಿಗದಿಗಿಂತ ಹತ್ತು ನಿಮಿಷ ಮುಂಚಿತವಾಗಿಯೇ ವಿಮಾನ ಹಾರಲನುವಾಯ್ತು. ನನಗೋ ಕಿಟಕಿಯಿಂದಾಚೆಗಿನ ದೃಶ್ಯಗಳನ್ನ ನೋಡುವ ಕೆಟ್ಟ ಕುತೂಹಲ. ಆದರೆ ನನಗೆ ಕಿಟಕಿಯ ಪಕ್ಕದ ಆಸನ ಲಭ್ಯವಾಗಿರಲಿಲ್ಲವಾದ್ದರಿಂದ, ಪಕ್ಕದಲ್ಲಿದ್ದ ಸಹ ಪ್ರಯಾಣಿಕರನ್ನ ಜಾಗ ಬದಲಿ ಮಾಡೋಣವೆಂದು ಪ್ರಸ್ತಾಪಿಸಲು ಅಂಜಿಕೆ. ಹೇಗೋ ಹಾಗೆ ಸ್ವಲ್ಪ ಇಣುಕುವ ಪ್ರಯತ್ನವನ್ನಂತೂ ಜಾರಿಯಲ್ಲಿಟ್ಟಿದ್ದೆ. ಎಲ್ಲರಿಗೂ ಒಮ್ಮೆ ಸಂದೇಶವನ್ನಿತ್ತ ಪೈಲಟ್ ಭರ್ರನೆ ರನ್ ವೇಯಿಂದ ಸಾಗಿ ವಿಮಾನವನ್ನು ಮೇಲೆರಿಸಿಯೇ ಬಿಟ್ಟ. ಅಹಾ..ಅದೆಂತಹ ರೋಮಾಂಚನಕಾರಿ ಅನುಭವ! ಎದೆ ಒಮ್ಮೆ ಝಲ್ಲೆಂದಿತ್ತು!. ಸಾವರಿಸಿಕೊಂಡ ನನಗೆ ಗಗನ ಸಖಿಯರ ನಗುಮೊಗದ ಸೇವೆ,ಸ್ವಲ್ಪ ಹಾಟ್ ಡ್ರಿಂಕ್ಸ್, ಕೇರಳ ಶೈಲಿಯ ಮಟನ್ ಊಟ ಅಪ್ಯಾಯಮಾನವಾಗಿದ್ದು ಬಿಟ್ಟರೆ ಮಿಕ್ಕ ಮೂರೂವರೆ ತಾಸಿನ ಪ್ರಯಾಣ ಮಹಾ ಬೋರಾಗಿತ್ತೆಂದೇ ಹೇಳಬೇಕು. ತೇಜಸ್ವಿಯವರ ‘ಅಲೆಮಾರಿ ಅಂಡಮಾನ್’ ಕೃತಿಯಲ್ಲಿ ಅವರು ತಮ್ಮ ಪ್ರಥಮ ವಿಮಾನ ಪ್ರಯಾಣವನ್ನ ವಿಶ್ಲೇಷಿಸಿದ ಹಾಗೆ, ಹಾರುವ ಮೊದಲು ಮತ್ತು ಇಳಿಯುವ ಮೊದಲಿನ ಸಂದರ್ಭವಷ್ಟೇ ರೋಚಕವೆನ್ನೋ ಸತ್ಯ ನನಗಂದು ಸ್ವಾನುಭವದಿಂದ ವೇದ್ಯವಾಗಿತ್ತು.

ಅತ್ತ-ಇತ್ತ, ಕಿಟಕಿಯಿಂದಾಚೆ ನೋಟ ಬೀರುತ್ತಲೇ ಸಮಯ ಕಳೆಯಲು ಯತ್ನಿಸುತ್ತಿದ್ದೆ. ಎದುರಿದ್ದ ಪುಟ್ಟ ದೂರದರ್ಶನ ಅಷ್ಟಾಗಿ ರುಚಿಸಲಿಲ್ಲ. ಪೈಲಟ್ ಕಾಕ್ ಪಿಟ್ ನಿಂದ ಕೆಲ ಸಂದೇಶಗಳನ್ನ ಬಿತ್ತರಿಸಲು ಶುರುಮಾಡಿದ. ಹೊರಗಿನ ವಾತಾವರಣದ ವಿವರಣೆ,ಸುರಕ್ಷಾ ಪಟ್ಟಿಯ ಬಂಧನದ ಖಾತ್ರಿಯ ಬಗ್ಗೆ ಹಾಗೂ ಇನ್ನಿತರ ಕೆಲ ಸೂಚನೆಗಳನ್ನಿಡುತ್ತಾ ಕೆಲವೇ ಕ್ಷಣಗಳಲ್ಲಿ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ ನಂ.೦೧ರಲ್ಲಿ ಇಳಿಯುತ್ತಿರುವುದಾಗಿ ಘೋಷಿಸಿಯೇ ಬಿಟ್ಟ. ನನಗೋ ಒಂದೆಡೆ ಅಪರಿಮಿತ ಸಂತೋಷ ಇನ್ನೊಂದೆಡೆ ಹೊಸ ದೇಶ, ಹೊಸ ರೀತಿ-ನೀತಿ-ರಿವಾಜುಗಳನ್ನ ಸಂಭಾಳಿಸಿಕೊಂಡು ಹೋಗೋದು ಹೇಗಪ್ಪಾ ಎಂಬ ಆತಂಕ. ಗಗನ ಸಖಿಯರ ಮಂದಸ್ಮಿತ ಬೀಳ್ಕೊಡುಗೆಯೊಂದಿಗೆ ಕೈಚೀಲವನ್ನ ಹಿಡಿದು ಏರೋ ಬ್ರಿಡ್ಜ್ ದಾಟಿ ಟರ್ಮಿನಲ್ ನೊಳಗೆ ಪ್ರವೇಶಿಸಿಯೇ ಬಿಟ್ಟೆ. ಅಬ್ಬಬ್ಬಾ.!!ಅದೆಂತಹ ನೋಟ! ಅದೆಂತಹ ಆಡಂಬರದ ವಿನ್ಯಾಸವಿತ್ತು ಅಲ್ಲಿ! ನೋಡುಗರ ಕಣ್ಣಿಗೆ ಅದೊಂದು ಹಬ್ಬವೇ ಸರಿ. ಅಷ್ಟೊಂದು ವೈವಿಧ್ಯತೆಯ ಜನಜಂಗುಳಿಯನ್ನ ನೋಡಿದ್ದು ಅದೇ ಮೊದಲು. ಸುಮಾರು ಹೊತ್ತು ನೋಡುತ್ತಲೇ ನಿಂತಿದ್ದೆ ಕಣ್ತುಂಬಿಸಿಕೊಂಡು. ಅಷ್ಟೊಂದು ವಿಸ್ತಾರವಾದ ವಿಮಾನ ನಿಲ್ದಾಣ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸರಿಸಾಟಿಯಿಲ್ಲದಂತೆ ಕಂಗೊಳಿಸುತ್ತಿತ್ತು ಎನ್ನೋದಂತೂ ಸತ್ಯ. ‘ಇದೆಲ್ಲಾ ನಮ್ಮಲ್ಲಿ ಏಕಿಲ್ಲ’? ಎಂಬ ಬೇಸರವೂ ಮನದಾಳದಲ್ಲಿ ಹಾಗೆ ತೇಲಿ ಹೋದದ್ದಂತೂ ಹೌದು. ಅಷ್ಟರಲ್ಲಾಗಲೇ ಬಹುತೇಕ ಸಹ ಪ್ರಯಾಣಿಕರೆಲ್ಲ ಮುಂದೆ ಸಾಗಿಯಾಗಿತ್ತು. ಅಲ್ಲಿಂದ ಸಾವರಿಸಿಕೊಂಡು ಮಾರ್ಗ ನಿರ್ದೇಶನದ ಫಲಕಗಳನ್ನ ಅನುಸರಿಸಿ ಪಾಸ್ಪೋರ್ಟ್ ನಿಯಂತ್ರಣ ಘಟಕಕ್ಕೆ ಬಂದಿದ್ದೆ.

ಅಲ್ಲಿನ ಪರಿಶೀಲನಾ ಕಾರ್ಯವನ್ನೆಲ್ಲಾ ಮುಗಿಸಿಕೊಂಡು ಬ್ಯಾಗೇಜ್ ಕನ್ವೇಯರ್ ಬೆಲ್ಟ್ ಹತ್ತಿರ ಧಾವಿಸಿದೆ. ನನ್ನ ಲಗೇಜನ್ನ ಸಂಗ್ರಹಿಸಿಕೊಳ್ಳಲು ತುಸು ಹೆಚ್ಚಿನ ಸಮಯವೇ ಹಿಡಿಯಿತು. ನಂತರ ಟ್ರಾಲಿಯಲ್ಲಿ ಲಗೇಜುಗಳನ್ನೆಲ್ಲ ಪೇರಿಸಿಕೊಂಡು ಹೊರ ನಡೆದೆ. ಅಲ್ಲೆಲ್ಲಾ ಹಲವಾರು ತರಹದ ಜನರು ಪ್ರಯಾಣಿಕರ ನಾಮ ಫಲಕವನ್ನು ವಿವಿಧ ಭಂಗಿಯಲ್ಲಿ ಹಿಡಿದು ಕಾಯುತ್ತಾ ನಿಂತದ್ದು ಸಾಮಾನ್ಯ ದೃಶ್ಯವೇ ಆಗಿತ್ತು. ಕೆಲವೇ ನಿಮಿಷಗಳಲ್ಲಿ ನನ್ನ ದೃಷ್ಟಿ ಒಬ್ಬ ಹೋಟೆಲ್ ಡ್ರೈವರ್ ಎಂದೇ ಗುರುತಿಸಬಹುದಾಗಿದ್ದ ಶ್ವೇತ ವಸ್ತ್ರಧಾರಿ ಭಾರತೀಯ ವ್ಯಕ್ತಿಯೊಬ್ಬನು ಹಿಡಿದಿದ್ದ ನಾಮಫಲಕದೆಡೆ ಹೊರಳಿತು. “Mr.MANJUNATH & Mr. SRINIVASAN” ಎಂಬ ಎರಡು ಹೆಸರುಗಳಿದ್ದದ್ದನ್ನ ನೋಡಿ ತಕ್ಷಣ ಅವನೆಡೆಗೆ ಧಾವಿಸಿ ನನ್ನ ಪರಿಚಯ ಮಾಡಿಕೊಳಲು, ಆತ ನನ್ನ ಪ್ರವರಕ್ಕೆ ಅಷ್ಟಾಗಿ ಗಮನ ಕೊಡದೆ ತನ್ನ ಎಂದಿನ ಧಾಟಿಯೆಂದೆ ಗುರುತಿಸಬಹುದಾಗಿದ್ದ ಶೈಲಿಯಲ್ಲಿ ಸ್ವಾಗತಿಸಿ, ಅಲ್ಲಿಯೇ ತುಸು ದೂರದಲ್ಲಿದ್ದ ವಿಶ್ರಾಂತಿ ಲಾಂಜ್ ನೆಡೆಗೆ ಕೈ ತೋರಿಸಿ ಅಲ್ಲಿ ವಿರಮಿಸಿರೆಂದೂ, ಮತ್ತೊಬ್ಬ ಅತಿಥಿ ಬಂದ ನಂತರ ಎಲ್ಲರೂ ಒಟ್ಟಿಗೇ ಹೋಟೆಲ್ ನೆಡೆಗೆ ಹೋಗೋಣವೆಂದೂ ಬಿನ್ನವಿಸಿಕೊಂಡ. ಎಲ್ಲವೂ ನಾನೆಣಿಸಿದಂತೆ ಸುಸೂತ್ರವಾಗೇ ನಡೆದಿತ್ತಾದ್ದರಿಂದ ನನ್ನಲ್ಲಿ ನಿರಾಳ ಭಾವವಾವರಿಸಿತ್ತು.

ವಿಶ್ರಾಂತಿ ಲಾಂಜ್ ನಲ್ಲಿ ನಿಟ್ಟುಸಿರು ಬಿಡುತ್ತಾ ಕುಳಿತ ನನ್ನ ಮನದಲ್ಲಿ ಕೆಲ ಆಲೋಚನೆಗಳು ಹರಿದಾಡಲು ಮೊದಲಿಟ್ಟವು. ನಾನು ಹೊಸದಾಗಿ ಸೇರಲಿರುವ ಕಂಪನಿಯ ‘ಮಾನವ ಸಂಪನ್ಮೂಲ ಅಭಿವೃದ್ಧಿ ಘಟಕ’ದ ಮುಖ್ಯಸ್ಥರು “ನೀವು ಟರ್ಮಿನಲ್ ಹೊರಗೆ ಬಂದ ನಂತರ ನಮ್ಮವರು ನಿಮ್ಮನ್ನು ಬರ ಮಾಡಿಕೊಂಡು ಕಂಪನಿ ಅಕೊಮೊಡೇಶನ್ ನತ್ತ ಕರೆದೊಯ್ಯುವರು” ಎಂದಷ್ಟೇ ನನಗೆ ತಿಳಿಸಿದ್ದರಾದ್ದರಿಂದ “ಆ ನಮ್ಮವರು” ಯಾರೆಂದು ನನಗೆ ಅಷ್ಟೊಂದು ಸ್ಪಷ್ಟವಾಗಿರಲಿಲ್ಲ. ಕಂಪೆನಿಯ ಸಿಬ್ಬಂದಿ ಯಾರಾದರೂ ಬಂದು ನನ್ನನ್ನು ಕರೆದೊಯ್ಯಬಹುದೆಂದು ನಿರೀಕ್ಷಿಸಿದ್ದ ನನಗೆ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿರುವ ಬಗ್ಗೆ ಆಶ್ಚರ್ಯವೂ, ಅಸಮಂಜಸವೂ ಆಗತೊಡಗಿತು. “ಇಪ್ಪತ್ತೈದು ನಿಮಿಷಕ್ಕೂ ಹೆಚ್ಚಿನ ಸಮಯವಾದರೂ ಆ ಡ್ರೈವರ್ ಇತ್ತ ಬರಲೇ ಇಲ್ಲವಲ್ಲ? ಅಲ್ಲದೇ ನನಗೆ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿರುವ ಬಗ್ಗೆ ಇನ್ನಷ್ಟು ಮಾಹಿತಿಯನ್ನ ಅವನಿಂದಲೇ ಕೇಳಿ ತಿಳಿದುಕೊಂಡದ್ದೇ ಆದಲ್ಲಿ ನನ್ನೆಲ್ಲ ಅಸಮಂಜಸತೆಗಳಿಗೆ ಇತಿಶ್ರೀ ಹಾಡಬಹುದು” ಎಂದೆಣಿಸಿ ಡ್ರೈವರ್ ಹತ್ತಿರ ಹೋಗಿ ವಿಚಾರಿಸಲೆತ್ನಿಸಿದೆ. “ನನಗೆ ಹೆಚ್ಚಿನ ವಿವರಗಳೆಲ್ಲಾ ಗೊತ್ತಿಲ್ಲ ಸಾರ್… (ನಾಮ ಫಲಕದತ್ತ ಕೈ ತೋರಿಸಿ) ಈ ಎರಡು ಹೆಸರಿನವರು ಬೆಂಗಳೂರಿನಿಂದ ಬರುತ್ತಾರೆ, ಕರೆದುಕೊಂಡು ಬಾ ಎಂದಷ್ಟೇ ನನಗೆ ಹೇಳಿದ್ದಾರೆ. ಬೇಕಿದ್ದರೆ ನಮ್ಮ ಮ್ಯಾನೇಜರ್ ಹತ್ತಿರ ಮಾತಾಡಿ” ಎಂದು ತನ್ನ ಸೆಲ್ ಫೋನನ್ನ ರಿಂಗಣಿಸಿ ನನಗೆ ಕೊಟ್ಟ. ಅತ್ತ ಕಡೆಯಿಂದ ಬಂದ ಹೆಣ್ಣಿನ ಧ್ವನಿಯೊಂದು ನನ್ನ ಪ್ರಶ್ನೆಗೆ “ಹೌದು ‘MANJUNATH’ ಎಂಬುವರ ಹೆಸರಲ್ಲಿ ಒಂದು ರೂಮ್ ಬುಕ್ ಆಗಿದೆ” ಎಂದು ವೇಗವಾಗಿ ಉತ್ತರಿಸಿ ‘ಫಟ್’ ಅಂತ ಫೋನ್ ಕುಕ್ಕಿದ ಶಬ್ದದಿಂದ ಸ್ವಲ್ಪ ವಿಚಲಿತನಾದೆ.

ಡ್ರೈವರ್ ಒಮ್ಮೆ ನನ್ನ ಪರಿಸ್ಥಿತಿ ಅರ್ಥವಾದವನಂತೆ ನೋಡಿ “ಏನೂ ಯೋಚನೆ ಮಾಡ್ಬೇಡಿ ಸಾರ್.. ನೀವು ಅಲ್ಲೇ ಕುಳಿತಿರಿ, ಮತ್ತೊಬ್ಬರು ಬಂದ ತಕ್ಷಣ ಎಲ್ಲರೂ ಹೊರಟುಬಿಡೋಣ” ಎಂದು ಮತ್ತೊಮ್ಮೆ ಬಿನ್ನವಿಸಿಕೊಂಡ. “ಎಷ್ಟೊತ್ತಾಯ್ತು.. ಆ ಪುಣ್ಯಾತ್ಮ ಇನ್ಯಾವಾಗ ಬರ್ತಾನೋ?” ಎಂದು ಸ್ವಗತದಲ್ಲೇ ಕನವರಿಸುತ್ತಾ ವಿಶ್ರಾಂತಿ ಲಾಂಜ್ ನತ್ತ ನಡೆದೆ. ಇಷ್ಟಾಗಿ ಕೆಲವೇ ನಿಮಿಷಗಳಾಗಿದ್ದಿರಬಹುದಷ್ಟೇ.. ಡ್ರೈವರ್ ಓಡೋಡಿ ನನ್ನತ್ತ ಬರುವ ಹಾಗೆ ದೂರದಿಂದಲೇ ಅಸ್ಪಷ್ಟವಾಗಿ ಗೋಚರಿಸುತ್ತಿತ್ತು. ಬಹುಶಃ ‘SRINIVASAN’ ಅನ್ನೋ ಇನ್ನೊಬ್ಬ ಕೂಡ ಬಂದಿರಬಹುದೆಂದು ನನ್ನ ಲಗೇಜಿನ ಟ್ರಾಲಿಯನ್ನ ಸಿದ್ದಪಡಿಸಿಕೊಂಡು ವಿಶ್ರಾಂತಿ ಲಾಂಜ್ ನಿಂದ ಹೊರನಡೆಯಲನುವಾದೆ. ಏದುಸಿರು ಬಿಡುತ್ತಾ ಹತ್ತಿರ ಬಂದ ಡ್ರೈವರ್, ಹಿಂದೆ ತೋರಿಸಿದ್ದ ಮೃದು ಧೋರಣೆಗೆ ತುಸು ಭಿನ್ನವಾಗಿ ಸ್ವಲ್ಪ ಗಡಸು ಧ್ವನಿಯನ್ನೇರಿಸಿ “ಏನ್ರೀ ಸಾರ್, ನೀವು ಸುಳ್ಳು ಹೇಳಿ ನಮ್ಮ ಸಮಯವನ್ನೆಲ್ಲಾ ಹಾಳುಮಾಡಿದಿರಲ್ಲ.. ಅಲ್ನೋಡಿ ಅಲ್ಲಿ ಬಿಳಿ ಶರ್ಟ್ ಹಾಕ್ಕೊಂಡು ನಿಂತವ್ರಲ್ಲಾ ಅವರು ‘MANJUNATH’, ಅವರ ಪಕ್ಕದಲ್ಲಿ ಕಾಣ್ತಿದಾರಲ್ಲ ಅವರು ‘SRINIVASAN’ ಅಂತೆ” ಎಂದು ಒಂದೇ ಸಮನೆ ಬಡಬಡಿಸುತ್ತಾ ನನ್ನ ಪ್ರತಿಕ್ರಿಯೆಗೂ ಕಾಯದೆ ಬೆನ್ನು ತಿರುಗಿಸಿ ನಡೆದೇ ಬಿಟ್ಟ. ಅಷ್ಟಕ್ಕಾಗಲೇ ನನ್ನ ಸಮಯಪ್ರಜ್ಞೆ ನನ್ನನ್ನ ಛೇಡಿಸಿ ನಕ್ಕ ಹಾಗೆ ಭಾಸವಾಗ್ತಿತ್ತು. ಹಾಗಾದರೆ ಇವನ ಪ್ರಕಾರ ನಾನು ನನ್ನ ಹೆಸರು ‘MANJUNATH’ ಅಂತ ಸುಳ್ಳು ಹೇಳಿದೆನಾ? ಇದಲ್ವೇ ಫಜೀತಿ.. ಎಂದೆನ್ನುತ್ತಾ, ನನ್ನ ಕರ್ಮಕ್ಕೆ ಮತ್ತಿನ್ಯಾರಾದರೂ ನನ್ನನ್ನು ನಿರೀಕ್ಷಿಸುತ್ತಿರಬಹುದೆಂದು ನಾಮ ಫಲಕ ಹಿಡಿದವರನ್ನೆಲ್ಲಾ ಒಮ್ಮೆ ಸೂಕ್ಷ್ಮವಾಗಿ ಗಮನಿಸಿದ್ದಷ್ಟೇ ಬಂತು. ನಾನು ನಿರೀಕ್ಷಿಸುತ್ತಿರುವ ಯಾವುದೇ ವ್ಯಕ್ತಿಗಳ ಸುಳಿವಿರಲಿಲ್ಲ.

ಮನಸ್ಸಂತೂ ಬಹಳ ಉದ್ವೇಗಗೊಂಡಿತ್ತು. ನಿಯಂತ್ರಣಕ್ಕೆ ಬಾರದಷ್ಟು ತಳ ಮಳ ನರ್ತನ. ‘ಎಲ್ಲಿಗೆ ಬಂದು ಸಿಕ್ಕಿ ಹಾಕಿಕೊಂಡೆನಪ್ಪಾ?’ ಎಂದು ಹಲುಬುತ್ತಾ ಮತ್ತಿನ್ನೊಂದು ಬಾರಿ ಪ್ರತಿ ನಾಮಫಲಕದಲ್ಲೂ ನನ್ನ ಹೆಸರಿಗಾಗಿ ತದೇಕವಾಗಿ ಹುಡುಕಾಟ ಆರಂಭಿಸಿದೆ. ಊಹೂಂ.. ಪ್ರಯೋಜನವಾಗಲಿಲ್ಲ.. ಯಾರೂ ನನ್ನ ಹೆಸರಿನ ನಾಮ ಫಲಕವಿಡಿದಿರಲಿಲ್ಲ. ನನ್ನ ವಿಚಿತ್ರ ನಡೆಯನ್ನ ಗಮನಿಸುತ್ತಿದ್ದ ಕೆಲವರಂತೂ ನನ್ನನ್ನ ಅನುಮಾನ ದೃಷ್ಟಿಯಿಂದ ನೋಡಿದರೆ, ಮತ್ತೆ ಕೆಲವರು ನನ್ನ ಅಸಾಹಯಕತನಕ್ಕೆ ತಮ್ಮ ಅಸಾಯಕತೆಯ ನೋಟವೊಂದನ್ನ ಬೆರೆಸುತ್ತಿದ್ದುದು ಗಮನಕ್ಕೆ ಬಂದಿತ್ತು.

ಕೊನೆಯದಾಗಿ ಕಂಪನಿಯ ಸಂಬಂಧಪಟ್ಟವರಿಗೆ ಫೋನಾಯಿಸುವುದೊಂದೇ ಉಳಿದ ದಾರಿಯೆಂದು ಭಾವಿಸಿ ಹತ್ತಿರದಲ್ಲಿ ಯಾವುದಾದರೂ ಟೆಲಿಫೋನ್ ಬೂತ್ ಇದೆಯೇ ಎಂದು ಕಣ್ಣಾಡಿಸುತ್ತ ನಿಂತ ನನಗೆ ನಾನು ಹೊಸದಾಗಿ ಸೇರಲು ಬಂದಿರುವ ಕಂಪನಿಯ ವಿಷಯವಾಗಿ ಯಾರೋ ಇಬ್ಬರು ಮಾತನಾಡುತ್ತಿರುವ ಕ್ಷೀಣ ಶಬ್ದ ಅಷ್ಟೊಂದು ಜನ ಜಂಗುಳಿಯ ಮಧ್ಯದಲ್ಲೂ ತೇಲಿ ಬಂದಿತ್ತು. ಅದರ ಜಾಡನ್ನು ಹಿಡಿದು ಸುತ್ತ ಕಣ್ಣಾಡಿಸಿದ ನನಗೆ ಅದೊಂದು ಜಂಗುಳಿಯ ಮಧ್ಯೆ ಇಬ್ಬರು ಭಾರತೀಯರೇ ಎಂದು ಗುರುತಿಸಬಹುದಾಗಿದ್ದ ಮಾಸಲು ಅಂಗಿಯ ಇಬ್ಬರು ಯುವಕರು ತಮ್ಮ ಪಾಡಿಗೆ ತಾವು ಲೋಕಾಭಿಮರಾಗಿ ಏನನ್ನೂ ಮಾತನಾಡುತ್ತಿರುವುದು ಕಾಣಿಸಿತು. ಮನಸ್ಸಿನಲ್ಲಿ ಏನೋ ಮಿಂಚು ಹೊಡೆದಂತೆ ತಕ್ಷಣ ಅವರ ಬಳಿ ನಡೆದು “ನೀವು DOLPHIN Group of Company” ಕಡೆಯವರ ಎಂದು ಅನುಮಾನದಿಂದಲೇ ಪ್ರಶ್ನಿಸಿದೆ. ‘MANJUNATH KUNIGAL’ ನೀವೇನಾ? ಅಂದ ಅವರೊಲ್ಲೊಬ್ಬ. “ಹೌದೌದು ನಾನೇ” ಎಂದೆ ಸಾವರಿಸಿಕೊಂಡು. “ಎಷ್ಟೊತ್ತಿಗ್ರೀ ಸ್ವಾಮೀ ಬರೋದು? ಹತ್ತು ಘಂಟೆಗೆ ಬರ್ತಾರೆ ಅಂತ ಹೇಳಿದ್ದರು ಆಫೀಸ್ನಲ್ಲಿ, ಒಂಭತ್ತು ವರೆಯಿಂದ ಹೆಣ ಕಾಯ್ದಂಗೆ ಕಾಯ್ತಾ ಇಲ್ಲೇ ನಿಂತಿದ್ದೀವಿ.. ಹನ್ನೆರಡು ಘಂಟೆಗೆ ಬಂದಿದ್ದೀರಲ್ಲಾ, ಸರಿ ಹೋಯ್ತು ಹಿಂಗ್ಮಾಡಿದ್ರೆ” ಎಂದು ತನಗಷ್ಟೇ ಅರ್ಥವಾಗಬಲ್ಲ ಮಲಯಾಳಿ ಮಿಶ್ರಿತ ಹಿಂದಿಯಲ್ಲಿ ಒದರತೊಡಗಿದ. ಬ್ಯಾಗೇಜ್ ಸಿಕ್ಕಿರಲಿಲ್ಲ ಅಂತ ಏನೋ ಸುಳ್ಳು ಹೇಳಿ ಅವನನ್ನ ಸಮಾಧಾನಿಸಲೆತ್ನಿಸಿದೆ.

ಅಷ್ಟರಲ್ಲಿ ಒಬ್ಬನ ಕೈನಲ್ಲಿ ಮಡಚಿಟ್ಟಿದ್ದ A4 ಅಳತೆಯ ಮಾಸಲು ಹಾಳೆಯೊಂದನ್ನ ಗಮನಿಸಿ ಅದೇನು ಎಂದೆ. ಉದಾಸೀನನಾಗಿಯೇ ಬಿಚ್ಚಿದ. ದುಬೈ ಶೆಖೆಗೆ ಬೆವನೀರು ಹರಿಸಿ ನಿಂತಿದ್ದ ಅವನ ಕೈಯಲ್ಲಿದ್ದ ಆ ಹಾಳೆಯ ಸ್ಥಿತಿ ನನಗಿಂತಲೂ ಚಿಂತಾಜನಕವಾಗಿತ್ತು. “A WARM WELOCME TO MANJUNATH KUNIGAL” ಎಂದು ಬರೆಯಲಾಗಿತ್ತು ದಪ್ಪ ಅಕ್ಷರಗಳಲ್ಲಿ. ಈ ಎಲ್ಲ ಅಸಂಬದ್ಧ ಘಟನೆಗಳಿಗೆ ನಾನೂ ಸೇರಿದಂತೆ ನನಗೆ ಸಿಕ್ಕ ಎಲ್ಲರ ಪಾತ್ರವಿದ್ದದ್ದನ್ನ ಯೋಚಿಸುತ್ತಾ ಒಳಗೊಳಗೇ ನಕ್ಕಿದ್ದಂತೂ ಹೌದು.

ಅವರಿಬ್ಬರಲ್ಲಿ ಯಾರೂ ಕನಿಷ್ಠ ನನ್ನ ಲಗೇಜ್ ಟ್ರಾಲಿಯತ್ತಲೂ ನೋಡದೆ ನಮ್ಮನ್ನು ಹಿಂಬಾಲಿಸಿರೆಂದು ಎತ್ತಲೋ ಬಿರ ಬಿರನೆ ನಡೆದೇಬಿಟ್ಟರು. ನಾನು ಅವರನ್ನು ಹಿಂಬಾಲಿಸುತ್ತಾ ಹೊರಟೆ. ವಿಮಾನ ನಿಲ್ದಾಣದ ಸೀಮಾ ವಲಯವನ್ನ ದಾಟಿ ಹೋಗುವ ಮೊದಲು ಟ್ರಾಲಿಯನ್ನ ಅಲ್ಲಿಯೇ ಬಿಟ್ಟು ಇದ್ದ ಎರಡು ಲಗೇಜುಗಳಲ್ಲಿ ಒಂದನ್ನು ಹೆಗಲಿಗೇರಿಸಿ ಮತ್ತೊಂದಕ್ಕೆ ಗಾಲಿಯಿದ್ದದ್ದರಿಂದ ತಳ್ಳಿಕೊಂಡು ನಡೆದೆ. ಸುಮಾರು ದೂರ ನಡೆದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ತಮ್ಮಿಷ್ಟಕ್ಕೆ ತಾವು ಗಾಳಿಯನ್ನು ತೂರಿ ನಡೆಯುತ್ತಲೇ ಇದ್ದಾರೆ. ತುಸು ಹೊತ್ತಿಗೆ ಕ್ಷೀಣ ಬೆಳಕಿನಿಂದ ಕೂಡಿದ ಅದ್ಯಾವುದೋ ನಿರ್ಜನ ಪ್ರದೇಶ ಎದುರಾಗಿತ್ತು. ಅಷ್ಟರಲ್ಲಾಗಲೇ ನನ್ನ ಸಂಯಮದ ಕಟ್ಟೆಯೊಡೆದು ಕೈಯಲ್ಲಿದ್ದ ಲಗೇಜನ್ನು ಕೆಳಗೆ ಹಾಕಿ ಕೇಳಿಯೇ ಬಿಟ್ಟೆ “ಎಲ್ಲಿಗೆ ಕರೆದುಕೊಂಡು ಹೋಗ್ತಾ ಇದ್ದೀರಿ, ಇನ್ನೆಷ್ಟು ದೂರ ನಡೆಯಬೇಕು, ನೀವು ವೆಹಿಕಲ್ ಏನೂ ತಂದಿಲ್ವೆ”?. ಇದೆಲ್ಲಾ ಸಾಮಾನ್ಯವೆಂಬಂತೆ, ನನ್ನ ಆರ್ತತೆಗೆ ಕಿಂಚಿತ್ತೂ ಗಮನ ಕೊಡದೆ “ವೆಹಿಕಲ್ ಹತ್ರಾನೇ ಹೋಗ್ತಾ ಇರೋದು” ಅಂದ ಅವರೊಲ್ಲೊಬ್ಬ ಉದಾಸೀನವಾಗಿ. “ಹಾಗಾದ್ರೆ ಕಾರ್ ಪಾರ್ಕಿಂಗ್ ನಲ್ಲೆ ನಿಲ್ಲಿಸಬಹುದಾಗಿತ್ತಲ್ಲ, ಇಷ್ಟೊಂದು ದೂರ ನಡೆದು ಬರುವ ಪ್ರಮೇಯವೂ ಇರುತ್ತಿರಲಿಲ್ಲ ಅಲ್ಲದೇ ಸ್ವಲ್ಪ ನನ್ನ ಲಗೇಜನ್ನು ನೀವ್ಯಾರಾದರೂ ಹಿಡಿದರೆ ನನಗೂ ಸ್ವಲ್ಪ ಆರಾಮಾಗುತ್ತೆ” ಎಂದೆ. “ನಾವೇನು ಕೂಲಿಗಳಲ್ಲ!! ಪಾರ್ಕಿಂಗ್ ಗೆ ೧೦/-ದಿರಹಂ ಕೊಡ್ಬೇಕು… ಅದನ್ನ ಕಂಪನಿಯೇನು ಕೊಡುತ್ತಾ? ಅಥವಾ ನೀವೇನಾದರೂ ಕೊಡ್ತೀರಾ? ಸರಿ ಹಾಗಾದರೆ ನೀವಿಲ್ಲೇ ಇರಿ ನಾನು ಹೋಗಿ ಕಾರನ್ನು ತೆಗೆದುಕೊಂಡು ಇಲ್ಲಿಗೆ ಬರ್ತೇನೆ” ಎಂದು ನನ್ನ ಪ್ರತಿಕ್ರಿಯೆಗೂ ನಿರೀಕ್ಷಿಸದೆ ಕತ್ತಲಲ್ಲಿ ಲೀನವಾದರು. ಕೆಲ ನಿಮಿಷಗಳಲ್ಲೇ ಗಾಢ ಬೆಳಕನ್ನು ಚೆಲ್ಲುತ್ತಾ ಬಂದ ವಾಹನ ನನ್ನ ಮುಂದೆ ನಿಂತಿತು. ವಾಹನವನ್ನು ಹಾಗೆಯೇ ಪರಿಶೀಲಿಸಿದೆ.. ಸರಕು ಸಾಗಣೆಗೆ ನಿರ್ಮಾಣ ಕಂಪನಿಗಳು ಬಳಸುವ ‘ಟಾಟಾ ಮೊಬೈಲ್’ ನಂತಹ ಧೂಳು ಹಿಡಿದ ಹಳೇ ವಾಹನ. ಆ ವಾಹನದಿಂದಿಳಿದ ಒಬ್ಬ ನನ್ನ ಲಗೇಜುಗಳನ್ನ ಮೂಟೆ ಎಸೆದಂತೆ ಧೊಪ್ಪನೆ ಹಿಂದೆ ಬಡಿದು ”ಒಳಗೆ ಕುಳಿತುಕೊಳ್ಳಿ, ಹೋಗೋಣ” ಎಂದು ಹೇಳಿ ನನಗಿಂತ ಮೊದಲೇ ಒಳಸೇರಿಯೇಬಿಟ್ಟ.”ಇಲ್ಲಿಗೆ ಸಾರ್ಥಕವಾಗಿತ್ತು ನಾನು ದುಬೈನಲ್ಲಿ ಕೆಲಸಕ್ಕೆ ಸೇರಿದ್ದು!!” ಎಂದು ಹೀಗೆ ನೂರಾರು ಲಹರಿಗಳು ಮನಸ್ಸಿನಲ್ಲಿ ಹೊಯ್ದಾಡುತ್ತಿದ್ದವು, ಕೆಲವಂತೂ ನನ್ನನ್ನ ಶಪಿಸುತ್ತಾ ಹಾಡಿದಂತೆ ಭಾಸವಾಗುತ್ತಿತ್ತು.

ಆ ಕ್ಷಣ ನನ್ನ ವಿಧಿಯನ್ನು ಎಷ್ಟೊಂದು ಹಳಿದೇನೋ ಆ ವಿಧಿಗೇ ವೇದ್ಯವಾಗಿರಬಹುದು. ದುಬೈ ಎಂದರೆ ರಂಗು ರಂಗಿನ ನಗರವೆಂಬ ಕಲ್ಪನೆಗೆ ಧಿಕ್ಕಾರವೆನ್ನುವಂತೆ ಇತ್ತು ಅಲ್ಲಿ ನಾ ನೋಡಿದ ದೃಶ್ಯಗಳು. ಸುತ್ತ ಮುತ್ತ ಬರೀ ಕತ್ತಲು, ಅದೆಲ್ಲೋ ದೂರದಲ್ಲಿ ಮಂದವಾದ ಬೀದಿ ದೀಪದ ಬೆಳಕು, ಹಳೇ ಕಾಲದ ಗೋಡೌನ್ ನಂತಿದ್ದ ಕೆಲ ಶೆಡ್ಡುಗಳು, ಆಗೊಮ್ಮೆ ಈಗೊಮ್ಮೆ ಎಂಬಂತೆ ಕೆಲ ವಾಹನಗಳ ಓಡಾಟ. ರಂಗಿನ ನಗರಿಯ ಮತ್ತೊಂದು ಪಾರ್ಶ್ವದ ದರ್ಶನ ನನಗೆ ಆರಂಭದಲ್ಲೇ ಆಗಿಬಿಟ್ಟಿತ್ತು.

ಸುಮಾರು ಅರ್ಧ ತಾಸಿನ ಪ್ರಯಾಣದ ನಂತರ ಇದ್ದಕ್ಕಿದ್ದಂತೆ ವಾಹನಕ್ಕೆ ಬ್ರೇಕ್ ಬಿದ್ದಿತ್ತು. ಕಿಟಕಿಯಿಳಿಸಿ ಹೊರಗೆ ನೋಡಿದೆ. ಮೊಘಲ್ ಶೈಲಿಯ ತರಹದ ಕಟ್ಟಡಗಳನೇಕವು ಸಾಲಾಗಿ ಕಟ್ಟಲ್ಪಟ್ಟಿದ್ದವು. “ಈಗ ಎಲ್ಲಿಗೆ ಬಂದಿದ್ದೇವೆ”? ಎಂದೆ. “ಇಲ್ಲೇ ಇಳಿಯಿರಿ, ನಿಮಗೆ ‘ಪರ್ಷಿಯಾ’ ಕ್ಲಸ್ಟರಿನಲ್ಲಿ ರೂಮ್ ಕೊಟ್ಟಿದ್ದಾರೆ” ಎಂದ ಒಬ್ಬನು ತಾನೂ ಇಳಿದು ಲಗೇಜನ್ನು ಕೆಳಗಿಳಿಸಿ ‘P16’ ಎಂದು ದಪ್ಪಕ್ಷರಗಳಲ್ಲಿ ಬರೆದ ಕಟ್ಟಡವೊಂದರಲ್ಲಿ ಪ್ರವೇಶಿಸತೊಡಗಿದ. ಲಗೇಜನ್ನು ಹಿಡಿದು ನಾನೂ ಅವನನ್ನು ಹಿಂಬಾಲಿಸಿದೆ. ಮುಚ್ಚಿಕೊಳ್ಳಲೆತ್ನಿಸುತ್ತಿದ್ದ ಲಿಫ್ಟ್ ನ ಬಾಗಿಲನ್ನು ತಡೆ ಹಿಡಿದು ನನಗೆ ಲಿಫ್ಟ್ ನೊಳ ಬರಲು ಆದೇಶಿಸಿದ. ೨ನೇ ಅಂತಸ್ತಿನ ಮಹಡಿಗೆ ಏರುತ್ತಲಿದ್ದೆವು. “ಏಕೆ ಇದನ್ನು ‘ಪರ್ಷಿಯಾ’ ಅಂತಾರೆ”? ಎಂದು ಕೇಳಿದೆ. ಇದು ‘ಇಂಟರ್ನ್ಯಾಷನಲ್ ಸಿಟಿ’ ಅಂತ ಒಂದು ಪ್ರದೇಶ. ಇಲ್ಲಿ ಹಲವಾರು ದೇಶದ ವಾಸ್ತು ಶೈಲಿಯನ್ನ ಅನುಕರಿಸಿ ಕಟ್ಟಡಗಳನ್ನ ಕಟ್ಟಿದ್ದಾರೆ ಮತ್ತು ಅವುಗಳಿಗೆ ಆ ದೇಶದ ಹೆಸರನ್ನೇ ಇಟ್ಟಿದ್ದಾರೆ ಎಂದು ಅವನ ಮಾತಿನಿಂದ ಅರ್ಥವಾಗಿತ್ತು. ಬಹಳ ಒಳ್ಳೆ ಕಲ್ಪನೆ ಅಲ್ಲವೇ ಎಂದು ಸ್ವಗತದಲ್ಲೇ ಹೇಳಿಕೊಂಡೆ.

ಫ್ಲಾಟ್ ನಂ.೨೦೬ ರ ಕರೆಘಂಟೆಯನ್ನು ಬಾರಿಸಿದ ಕೆಲ ನಿಮಿಷಗಳ ತರುವಾಯ ಆಕಳಿಸುತ್ತಲೇ ಬಂದ ಗಿಡ್ಡಗಿನ ಕಪ್ಪು ವ್ಯಕ್ತಿಯೊಂದು ಬೇಸರಗೊಂಡಂತೆ ನಿದ್ದೆಗಣ್ಣಿನಲ್ಲಿಯೇ ನಮ್ಮನ್ನು ಅಪಾದಮಸ್ತಕ ನೋಡಿ ಏನು ಎಂಬಂತೆ ಕತ್ತನ್ನಾಡಿಸಿಯೇ ಪ್ರಶ್ನಿಸಿದ. ನನ್ನೊಡನೆ ಬಂದಿದ್ದ ವ್ಯಕ್ತಿ ಅವನ ಕೈನಲ್ಲಿ ಅದೆಂತದೋ ಹಾಳೆಯನ್ನಿಟ್ಟು ನನಗೆ ಇನ್ನೇನೂ ಸಂಬಂಧವಿಲ್ಲವೆನ್ನುವಂತೆ ಹೊರಟೇ ಬಿಟ್ಟ. ಆ ಕುಳ್ಳಗಿನ ವ್ಯಕ್ತಿ ನನ್ನನ್ನು ಒಳಗೆ ಬರುವಂತೆ ಹೇಳಿ, ಬಾಗಿಲನ್ನು ಭದ್ರ ಮಾಡಿದ. ಅಲ್ಲಿದೆ ನೋಡಿ ನಿಮ್ಮ ಬೆಡ್ ಎನ್ನುತ್ತಾ ಆ ಕಡೆ ಕೈ ತೋರಿಸಿ, ದೀಪವಾರಿಸಿ ಮಲಗಿಕೊಳ್ಳಿ ಎಂದು ತನ್ನ ಹಾಸಿಗೆಗೆ ಬೋರಲಾಗಿ ಬಿದ್ದ ಕೆಲವೇ ಸೆಕಂಡುಗಳಲ್ಲಿ ಸುಖ ನಿದ್ರೆಯ ಚರಮ ಘಟ್ಟದ ಶಬ್ದ ಮಾಡತೊಡಗಿದ. ಲಗೇಜನ್ನು ಪಕ್ಕಕ್ಕೆಸೆದು, ರಾತ್ರಿ ಧಿರಿಸನ್ನು ಹೆಕ್ಕಿ ತೆಗೆದು ಧರಿಸಿ, ಸ್ವಲ್ಪ ಮುಖಕ್ಕೆ ನೀರು ಚಿಮ್ಮಿಸಿಕೊಂಡು ಬಂದಾಗ ಸ್ವಲ್ಪ ಆಹ್ಲಾದಕರವಾಗಿತ್ತು. ಗಡಿಯಾರದ ಸಮಯ ನೋಡಿದೆ. ಆಗಲೇ ಬೆಳಗಿನ ೩.೦೦ ಗಂಟೆ ತೋರಿಸುತ್ತಿತ್ತು. ಗಡಿಯಾರವನ್ನ ದುಬೈ ಸ್ಥಳೀಯ ಸಮಯ ೧.೩೦ಕ್ಕೆ ಬದಲಾಯಿಸಿ ಹಾಸಿಗೆಗೆ ಹಾಗೇ ಒರಗುತ್ತಾ, ದುಬೈ ಬಂದಾಗಿನಿಂದ ನಡೆದ ಅಸಂಬದ್ದ ಪ್ರಹಸನಗಳನ್ನೆಲ್ಲಾ ಒಮ್ಮೆ ಮೆಲುಕು ಹಾಕುತ್ತಾ ನನ್ನಲ್ಲೇ ನಕ್ಕು ನಿದ್ರೆಗೆ ಜಾರಿದ್ದು ಗೊತ್ತೇ ಆಗಲಿಲ್ಲ

‍ಲೇಖಕರು avadhi

April 6, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

೧ ಪ್ರತಿಕ್ರಿಯೆ

  1. Vivek

    ತುಂಬಾ ಚೆನ್ನಾಗಿ ಬರೆದಿದ್ದೀರ. ಓದಿದಾಗ ಇಷ್ಟು ಬೇಗ ಮುಗಿದೇ ಹೋಯ್ತಲ್ಲ ಅನಿಸಿತು. ಅಂದ ಹಾಗೆ ನೀವು ಹೋಗಿದ್ದು ದುಬೈಗಾ ? ಅಲ್ಲ ಆಫ್ಘಾನ್ ಗಾ ? ನಂತರದ experiences ಖಂಡಿತ ಬರೀರಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: