ನಾನು ಶ್ಯಾಮಲಾ…

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆಹುಡುಕುತ್ತಿದ್ದಾರಂತೆಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ.

ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ ಇಂಥದ್ದೊಂದು ನಡೆಯಲಿಲ್ಲವಲ್ಲ ನಮ್ಮ ಮಕ್ಕಳು ಮುಚ್ಚಟೆಯಾಗಿದ್ದಾರಲ್ಲ ಎನ್ನುವ ನೆಮ್ಮದಿಯ ಭಾವ ಮನಸಿನಾಳದಲ್ಲಿ ಬೆಚ್ಚಗೆ ಕೂತಿರುತ್ತದೆ.

ಈ ಕಾಣದಾದ ಮತ್ತು ವಾಪಸ್ಸು ಮನೆಗೆ ಹೋಗದ ಹೆಣ್ಣುಮಕ್ಕಳ ಬಗ್ಗೆ ಲೀಲಾ ಸಂಪಿಗೆ ನಮ್ಮ ನಿಮ್ಮೆಲ್ಲರ ವೈಯಕ್ತಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ತುಸು ಜಾಗೃತಗೊಳಿಸುತ್ತಿದ್ದಾರೆ ‘ಆಫ್ ದಿ ರೆಕಾರ್ಡ್’ ನಲ್ಲಿ.

ಸರಿರಾತ್ರಿ ಒಂದು ಗಂಟೆ ಇರಬಹುದು. ನಾವಿದ್ದ ಗುಡಿಸಲಿಗೆ ಬೆಂಕಿ ಹಚ್ಚಿದೆವು. ಬೆಂಕಿ ನಿಧಾನವಾಗಿ ಆವರಿಸುತ್ತಿತ್ತು. ಓಡಲು ಶುರು ಮಾಡಿದೆವು. ಓಡಿ ಓಡಿ ರಸ್ತೆಗೆ ಬಂದು ಕೆಂಪು ಬಸ್ಸೊಂದನ್ನು ಅಡ್ಡಗಟ್ಟಿದೆವು. ಬಸ್ ನಿಲ್ಲಿಸಿದ. ಬಸ್ ವೇಲೂರಿಗೆ ಹೋಗುತ್ತೆ ಅಂದ ಕಂಡಕ್ಟರ್. ವೇಲೂರಿಗೆ ಐದು ಟಿಕೆಟ್ ತಗೊಂಡು, ನಮ್ಮ ಸಾಹಸವನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಲೇ ನಿದ್ರೆಗೆ ಜಾರಿದೆವು. ಎಚ್ಚರವಾದಾಗ ವೇಲೂರು ಬಸ್ಟಾಂಡ್..! 

ಇದ್ಯಾವ ವೇಲೂರು, ಇಲ್ಲಿ ಯಾರಿಗೂ ಕನ್ನಡವೇ ಬರಲ್ವಲ್ಲೇ ಅಂತ ಕುಮುದಾ ಗಾಬರಿಯಾಗಿದ್ದಳು. ಶೌಚಾಲಯಕ್ಕೆ ಹೋಗಿ ಮುಖ ತೊಳೆದು ಫ್ರೆಷ್ ಆದೆವು. ಹತ್ತಿರದಲ್ಲಿದ್ದ ಹೋಟೆಲ್ಗೆ ಹೋಗಿ ತಿಂಡಿ ತಿಂದೆವು. ಹಿಂದಿನ ದಿನ ಮಧ್ಯಾಹ್ನ ಊಟ ಮಾಡಿದ್ದು. 

ಮತ್ತೆ ಬಸ್ಟ್ಯಾಂಡ್ ನ ವಿಶ್ರಾಂತಿ ಕೊಠಡಿಗೆ ಬಂದು ಕುಳಿತೆವು. ಇದ್ದುದರಲ್ಲಿ ಅದೇ ಸೇಫ್ ಅಂತ ಅನಿಸಿತು. ಕಸ ಹೊಡೆಯಲು ಬಂದವಳು ನಮ್ಮನ್ನು ನೋಡಿ ಅದೇನೋ ಅಂದಾಜಿಸಿದಳೋ ಕೆಕ್ಕರಿಸಿದಳು. ಕೂಡಲೇ ಕಾರ್ಯೋನ್ಮುಖಳಾದ ಸರೂ ಇಪ್ಪತ್ತು ರೂಪಾಯಿ ಅವಳ ಕೈಗಿತ್ತು ಟೀ ಕುಡ್ಕೊ ಅಂದಳು. ಕ್ಷಣಮಾತ್ರದಲ್ಲಿ ಅವಳ ಮುಖ ಬದಲಾಯಿತು. ಬಹಳ ಕಕ್ಕುಲತೆಯಿಂದ ನಮ್ಮ ಕಡೆ ನೋಡಿ ಕೊಠಡಿ ಕುಡಿಸಿದಳು. ನಮ್ಮ ಬದುಕಿನಲ್ಲಿ ಮೊದಲ ಬಾರಿಗೆ ಕೊಡುವಷ್ಟು ದುಡ್ಡಿತ್ತು! 

ಹೋ… ನನ್ನ ಪರಿಚಯ ಮಾಡಿಸಲಿಲ್ಲ ಅಲ್ವಾ?

ಆ ದಿನ ಮನೆಯಿಂದ ಒಂದೆರಡು ಜೊತೆ ಬಟ್ಟೆ ತಗೊಂಡು ದೇವರ ಹುಂಡಿಯಲ್ಲಿದ್ದ ಚಿಲ್ಲರೆ ಕಾಸು ಸುರ್ಕೊಂಡು ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ಗೆ ಬಂದು ಕುಳಿತಿದ್ದೆ. ದಿಕ್ಕೇ ತೋಚುತ್ತಿರಲಿಲ್ಲ. ಒಬ್ಬ ಹೆಂಗಸು ಬಂದು ಪಕ್ಕ ಕುಳಿತಳು. ಎಲ್ಲಿಗೆ ಹೋಗಬೇಕು ಮಗಳೇ ಅಂದ್ಲು. ಅವಳು ಮಗಳೇ ಅಂದ ಕೂಡಲೇ ನನ್ನ ದುಗುಡ ದುಃಖವಾಯಿತು. ಎಲ್ಲವನ್ನೂ ಅವಳ ಮುಂದೆ ಬಿಚ್ಚಿಟ್ಟೆ. 

ಅವಳು ನನ್ನೊಂದಿಗೆ ಕಣ್ಣೀರಾದಳು.‌ ಬಸ್ಟ್ಯಾಂಡ್ ಹೋಟೆಲಿನಲ್ಲಿ ಹಸಿದಿದ್ದ ನನ್ನ ಒಡಲ ಶಾಂತಗೊಳಿಸಿದಳು. ಅವಳ ವಾತ್ಸಲ್ಯದಿಂದ ನಾನು ಕರಗಿಹೋದೆ. ಬಾ ಮಗಳೇ, ನನ್ನ ಮನೆಯಲ್ಲಿ ಯಾರೂ ಇಲ್ಲ, ನನ್ನೊಟ್ಟಿಗೇ ಇರು ಅಂದ್ಲು. ಅದೃಷ್ಟ ಎಂದರೆ ಇದೇ ಇರಬೇಕು ಎಂದುಕೊಂಡೆ. ಅವಳನ್ನು ಹಿಂಬಾಲಿಸಿದೆ. ಆಟೋ ಹತ್ತಿದೆವು.  ದಾರಿಯಲ್ಲಿ ಅವರಿಬ್ಬರ ಮಾತುಕತೆ ಗಮನಿಸಿ ಆಟೋ ಡ್ರೈವರ್ ಇವಳಿಗೆ ಚಿರಪರಿಚಿತ ಅಂದುಕೊಂಡೆ.  

ಕೆ. ಆರ್. ಪುರಂ ಅಂತ ಓದಿದೆ. ಅವಳು ಓದಿದ್ದೀಯಾ ಅಂತ ಕೇಳಿದ್ಲು. ಹೂಂ, ಒಂಭತ್ತನೇ ಕ್ಲಾಸು ಪಾಸು ಅಂದೆ. ಹೊರವಲಯದ ಒಂದು ಮನೆ ಮುಂದೆ ಆಟೋ ನಿಂತಿತ್ತು. ಒಳಗೆ ಕರೆದುಕೊಂಡು ಹೋದಳು. ಅಲ್ಲಿಂದಲೇ ಮುರುಗಮ್ಮಾ ಅಂತ ಕೂಗಿದಳು. ಒಂದು ಮಧ್ಯವಯಸ್ಸು ದಾಟಿದ ಹೆಂಗಸು ಬಂತು. ನಾನು ಒಬ್ಬಳೇ ಅಂದಿದ್ದಳಲ್ವಾ? ಅಂತ ನನ್ನ ಮನಸ್ಸಲ್ಲಿ ಒಂದು ಪ್ರಶ್ನೆ ಇಣುಕಿತ್ತು. ಈ ಹುಡುಗಿ ಕರ್ಕೊಂಡು ಹೋಗು ಅಂದಳು. ಆ ಹೆಂಗಸಿನ ಹಿಂದೆ ಹೋದೆ. ಒಳಹೊಕ್ಕ ನಂತರ ಮೆಟ್ಟಿಲುಗಳ ಇಳಿಯತೊಡಗಿದ್ಲು. ಇದೇನು ಮೆಟ್ಟಿಲು ಹತ್ತಬೇಕಲ್ವಾ, ಇವಳು ಇಳೀತಿದ್ದಾಳೆ, ಅಂದ್ರೆ ನೆಲ ಮಾಳಿಗೆಯಿದೆಯಾ? ಒಂದು ಕ್ಷಣ ಕಾಲು ಕಂಪಿಸಿದವು.

ಕೆಳಗೆ ಹತ್ತನ್ನೆರಡು ಮೆಟ್ಟಿಲು ಇಳಿದು ಹೋದರೆ ಅಲ್ಲಿ ನನ್ನಂತಹ, ಹೆಚ್ಚು ಕಡಿಮೆ ನನ್ನದೇ ವಯಸ್ಸಿನ ಹುಡುಗಿಯರು ಇದ್ರು. ಕೆಲವರು ದಿಕ್ಕಾಪಾಲಾಗಿ ಮಲಗಿದ್ರು. ಕೆಲವರು ಕೂತು ಉಗುರು ತೆಗೆಯುತ್ತಿದ್ದರು. ಎದ್ದಳ್ರೇ.. ತಿಂದು ಹಂದಿಗಳ ಥರಾ ಮಲಗಿದ್ದೀರಾ? ಅಂತ ಮುರುಗಮ್ಮ ಕೂಗು ಹಾಕ್ತಿದ್ದ ಹಾಗೆ ನಾನು ನಡುಗಿ ಹೋದೆ. ಮನಸ್ಸಿನೊಳಗೆ ಯಾವುದೋ ಒಂದು ದೊಡ್ಡ ಅಪಾಯಕ್ಕೆ ಸಿಕ್ಕಿಹಾಕ್ಕೊಂಡೆ ಅಂತ ಖಾತ್ರಿಯಾಯಿತು. ಅವರಲ್ಲಿ ಕೆಲವರು ಎದ್ದು ಮೈ ಮುರೀತಾ ಇದ್ರು. 

ಇವಳು ಮಣಿ ಅಂತ.. ನಿಮ್ಮ ಜೊತೆ ಕರ್ಕೊಳ್ರಿ ಅಂದ್ಲು ಮುರುಗಮ್ಮ. ಹೊಸಾ ಮಾಲಾ? ಅಂದ್ಲು ಅದರಲ್ಲಿ ಒಬ್ಬಳು. ಹೂಂ.. ನೀನೇ ಅವಳಿಗೆ ಮೇಡಂ, ಎಲ್ಲ ಹೇಳಿ ಕೊಡು ಅಂತ ಹೇಳಿ ಮೆಟ್ಟಿಲು ಹತ್ತಿ ಹೋಗಿಯೇ ಬಿಟ್ಟಳು. ನಾನು ಮುದುರಿ ಹೋಗಿದ್ದೆ. ಬಾ ಕುತ್ಕೋ, ಏನು ರೈಲ್ವೆ ಸ್ಟೇಷನ್ ನಲ್ಲಿ ಈ ಬಟ್ಟೆ ಬ್ಯಾಗ್ ಇಟ್ಟುಕೊಂಡು ಕೂತಿದ್ದಾ ಅಂದ್ಲು.  ಇಲ್ಲ ಬಸ್ಟ್ಯಾಂಡ್ನಲ್ಲಿ ಕೂತಿದ್ದೆ ಅಂತ ಈ ಮನೆ ಹೆಂಗಸು ಪರಿಚಯವಾದಾಗಿನಿಂದ ಇಲ್ಲೀವರೆಗೂ ಎಲ್ಲಾ ಹೇಳ್ಕೊಂಡೆ. 

ಅಯ್ಯೋ ಮಂಕೇ.. ಇಲ್ಲಿರೋ ಹೆಚ್ಚಿನ ಹುಡುಗಿರೆಲ್ಲ ಹೀಗೆ ಬಂದಿರೋದು. ನಾನೊಬ್ಬಳು ಹಳಬಳು ಅಷ್ಟೇ. ಇಲ್ಲಿ ಹುಡುಗೀರು ಹೆಚ್ಚಾದ ಕೂಡಲೇ ಇನ್ನೊಂದು ಕಡೆ ರವಾನಿಸಿ ಬಿಡ್ತಾಳೆ. ಇವಳ ಮೊಸಳೆ ಕಣ್ಣೀರಿಗೆ ಮೋಸ ಹೋಗಿದ್ದೀಯಾ. ಇವಳೊಬ್ಬ ಹೆಣ್ಣುಮಕ್ಕಳನ್ನೇ ಹರಾಜಿಗಿಟ್ಟಿರೋ ದಂಧೆಕೋರಳು. ಇವರದ್ದು ದೊಡ್ಡ ಗ್ಯಾಂಗ್ ಇದೆ. ದಿನಾಲು ರೈಲ್ವೆ ಸ್ಟೇಷನ್, ಬಸ್ ಸ್ಟ್ಯಾಂಡು, ದೇವಸ್ಥಾನ ಹೀಗೆ ಸುತ್ತುತ್ತಲೇ ಇರುತ್ತಾರೆ. ಮಿಕಗಳು ಸಿಕ್ಕಿದ ಕೂಡಲೇ ಎತ್ತಾಕೊಂಡು ಬರ್ತಾರೆ. 

ಇವಳಂಥೋರು ಈ ಮನೆಯಲ್ಲಿ ತುಂಬಾ ಜನ ಇದ್ದಾರೆ. ಅವರದ್ದೆಲ್ಲಾ ಇದೇ ದಂಧೆ. ಮಂಗಮ್ಮನಪಾಳ್ಯದಲ್ಲಿರುವ ಮುನಿಯಮ್ಮನಿಗಿಂತ ದೊಡ್ಡ ಶ್ರೀಮಂತೆ ಆಗಬೇಕು, ದಂಧೆ ಮಾಡೋದ್ರಲ್ಲಿ ನಂಬರ್ ಒನ್ ಆಗಿ ಮೆರೀಬೇಕು ಅಂತ ನಮ್ಮವಳು ದುಂಬಾಲು ಬಿದ್ದಿದ್ದಾಳೆ. ಅವಳು ಹೇಳ್ತಾನೇ ಇದ್ಲು… ನನಗೇನೂ ಅರ್ಥನೇ ಆಗಿಲಿಲ್ಲ, ಕಣ್ಣು ಬಾಯಿ ಬಿಟ್ಟುಕೊಂಡು ಕುಳಿತಿದ್ದೆ. ಯಾಕೆ ಇಲ್ಲಿ ಏನು ಕೆಲಸ ಅಂತ ಕೇಳಿದೆ. ಅವಳು ಬಿದ್ದು ಬಿದ್ದು ನಗೋಕೆ ಶುರು ಮಾಡಿದ್ಲು, ನೋಡ್ತಿರು ಇಲ್ಲಿ ಆಫೀಸರ್ ಕೆಲಸ ಕೊಡುತ್ತಾಳೆ ಈ ಮಾರಿ ಅಂದಳು. 

ಅಷ್ಟೊತ್ತಿಗೆ ಮುರುಗಮ್ಮ ಮೆಟ್ಟಿಲು ಇಳಿದು ಬಂದ್ಲು. ಇನ್ನೊಂದು ಮಿಕ್ಕ ಸಿಕ್ತು ಅನ್ಸುತ್ತೆ ಮುದುಕಿ ಬರ್ತಾ ಇದ್ದಾಳೆ, ಇವತ್ತು ಹೊಡೆದಳಲ್ಲ ಚಾನ್ಸು ಎರಡು ಮಿಕ ಸಿಕ್ಕಿದಾವೆ ಅಂತ ಗೊಣಗಿದ್ಳು. ಅಷ್ಟರಲ್ಲಿ ನನಗಿಂತಲೂ 2- 3 ವರ್ಷ ಚಿಕ್ಕದಿರಬೇಕು, ಬೆದರಿದ ಹರಿಣಿಯಂತೆ ಒಂದು ಸಣ್ಣ ಹುಡುಗಿ ಬಂತು‌. ಅವಳು ನನ್ನೊಂದಿಗೆ ಮಾತು ಮುಂದುವರಿಸಿದಳು. ನಾನು ಮನೆಯ ಬಗ್ಗೆ ಹೇಳಿಕೊಂಡೆ.

ನಾನು ಶ್ಯಾಮಲಾ.. ಬೆಂಗಳೂರಿನಿಂದ ಮೂವತ್ತು ಕಿ ಮೀ ದೂರದ ಹಳ್ಳಿಯವಳು. ಒಬ್ಬಳೇ ಮಗಳು ನಾನು. 

ಅಪ್ಪ-ಅಮ್ಮ ನನ್ನನ್ನು ಚೆನ್ನಾಗಿ ಪ್ರೀತಿಯಿಂದ ಬೆಳೆಸಿದ್ದರು. ಅಪ್ಪ ಟೈಲರ್ ಆಗಿದ್ದರು. ನಮ್ಮ ಪುಟ್ಟ ಬದುಕಿಗೆ ಅಪ್ಪ ದುಡಿಯುತ್ತಿದ್ದ ದುಡಿಮೆ ಸಾಕಾಗಿತ್ತು. ಅಮ್ಮನಿಗೆ ವಿಪರೀತ ಕೆಮ್ಮು ಶುರುವಾಯ್ತು. ಅದು ಟಿಬಿ ಅಂತ ಗೊತ್ತಾಯ್ತು. ಸಮಾಧಾನವಾಗಿದ್ದ ನಮ್ಮ ಬದುಕಿಗೆ ದೊಡ್ಡ ಪೆಟ್ಟೇ ಬಿದ್ದಂತಾಯ್ತು. ಅಮ್ಮನನ್ನು ಆಸ್ಪತ್ರೆಗೆ ತೋರಿಸಲು ಆಗಾಗ ಬೆಂಗಳೂರಿಗೆ ಬರಬೇಕಿತ್ತು. ಇದರಿಂದ ತುಂಬಾ ಹಣ ಖರ್ಚಾಗುತ್ತಿತ್ತು. ಅದಕ್ಕೆ ನಮ್ಮ ತಂದೆ ಮನೆಯನ್ನು ಬೆಂಗಳೂರಿನಲ್ಲೇ ಮಾಡಿದರು. ಅಮ್ಮನಿಗೆ ದಿನದಿಂದ ದಿನಕ್ಕೆ ಖಾಯಿಲೆ ಜಾಸ್ತಿ ಆಯ್ತು. ಟಿಬಿ ಆಸ್ಪತ್ರೆಗೆ ಸೇರಿಸಿದರು. 

ನಾನು ಅಮ್ಮನನ್ನು ನೋಡಿಕೊಂಡು ಆಸ್ಪತ್ರೆಯಲ್ಲಿದ್ದೆ. ಒಂದು ದಿನ ಅಪ್ಪ ಮನೆಯಿಂದ ಆಸ್ಪತ್ರೆಗೆ ಬರುವಾಗ ಆಕ್ಸಿಡೆಂಟ್ ಆಯ್ತು.  ಸ್ವಲ್ಪ ದಿನ ಆಸ್ಪತ್ರೆಯಲ್ಲಿದ್ದು ಕಣ್ಮುಚ್ಚಿದರು. ಇದಾವುದನ್ನು ಅಮ್ಮನಿಗೆ ತಿಳಿಸಿರಲಿಲ್ಲ, ಏಕಾಏಕಿಯಾಗಿ ಅಪ್ಪ ಸತ್ತ ಸುದ್ದಿ ಹೇಳುತ್ತಿದ್ದಂತೆ ಅಮ್ಮ ಕುಸಿದಳು. ಮತ್ತೆ ಮೇಲೇಳಲೇ ಇಲ್ಲ. ಅಜ್ಜಿಯೂ ಬಂದು ನನ್ನ ಜೊತೆಯಲ್ಲಿದ್ದಳು. ಸ್ವಲ್ಪ ದಿನದಲ್ಲೇ ಅಮ್ಮ ನನ್ನನ್ನಗಲಿದಳು. 

ಅನಾಥಳಾದ ನನ್ನನ್ನು ಅಜ್ಜಿ ಕರೆದುಕೊಂಡು ಹೋಗಿ ಸಾಕಿದಳು. ತಾಯಿ ತಂದೆ ಇಲ್ಲದ ತಬ್ಬಲಿ ಅಂತ ಎಲ್ಲಿಲ್ಲದ ಪ್ರೀತಿಯಿಂದ ನನ್ನ ಯೋಗಕ್ಷೇಮ ನೋಡಿಕೊಂಡಳು. ನಾನು ಮೈನೆರೆದಾಗ ಸಂಭ್ರಮದಿಂದ ನೆಂಟರನ್ನೆಲ್ಲಾ ಕರೆದು ಊಟ ಹಾಕಿ, ಫೋಟೋ ತೆಗೆಸಿ ವಿಜೃಂಭಣೆಯಿಂದ ಕಾರ್ಯ ನೆರವೇರಿಸಿದ್ದಳು. ಅದಾದ ಒಂದು ವರ್ಷದಲ್ಲೇ ಅಜ್ಜಿ ತೀರಿ ಹೋದಳು. ನಾನು ಒಂಭತ್ತನೇ ತರಗತಿ ಪಾಸಾಗಿದ್ದೆ. ಈಗ ನಾನು ನಿಜವಾದ ತಬ್ಬಲಿಯಾದೆ. ಆಕಾಶವೇ ತಲೆ ಮೇಲೆ ಬಿದ್ದಂತಾಗಿತ್ತು. ಒಂದರ ಮೇಲೊಂದು ಸಾವುಗಳು ನನ್ನನ್ನು ಕಂಗಾಲಾಗಿಸಿ ಬಿಟ್ಟವು. 

ಅಲ್ಲೇ ಹತ್ತಿರದಲ್ಲಿದ್ದ ನಮ್ಮ ಮಾವ  ನನ್ನನ್ನು ಮನೆಗೆ ಕರೆದೊಯ್ದರು. ಅಷ್ಟೇನೂ ಚೆನ್ನಾಗಿ ನೋಡಿಕೊಂಡಿರಲಿಲ್ಲ. ಸ್ವಲ್ಪ ದಿನಗಳು ಕಳೆದಿತ್ತು ಅಷ್ಟೇ, ಒಂದು ದಿನ ಅತ್ತೆ ಊರಿಗೆ ಹೋಗಿದ್ದಳು. ರಾತ್ರಿ ಮಾವ ಬಂದು ನನ್ನನ್ನು ಹಿಡಿದುಕೊಂಡ. ನಾನು ಎಷ್ಟು ಬೇಡಿಕೊಂಡರೂ ಬಿಡಲಿಲ್ಲ ನನಗೆ ಬೇರೆ ದಾರಿ ಕಾಣಲಿಲ್ಲ, ಅಲ್ಲೇ ಇದ್ದ ಹಿಟ್ಟಿನ ದೆಬ್ಬೆಯಲ್ಲಿ ಅವನ ತಲೆಗೆ ಹೊಡೆದೆ. ಗಾಬರಿಯಾಗಿ ಅವನು ಕೆಳಗೆ ಬಿದ್ದ. ಅಲ್ಲೇ ದೇವರ ಫೋಟೋ ಮುಂದಿದ್ದ ಹುಂಡಿಯಿಂದ ಚಿಲ್ಲರೆ ಸುರ್ಕೊಂಡು ಮನೆಬಿಟ್ಟು ಓಡಿದೆ. 

ಎಲ್ಲಿಗೆ ಹೋಗುವುದೆಂದು ತಿಳಿಯದೆ ಬಸ್ ಸ್ಟ್ಯಾಂಡ್ ಗೆ ಬಂದು ಯಾವುದಾದರೂ ಬೇರೆ ಊರಿಗೆ ಹೋಗಿ ದುಡಿದು ಬದುಕಬೇಕು ಅಂತ ನಿರ್ಧರಿಸಿದೆ. ಬಹುಶಃ ಮಾವನಿಗೆ ದೊಡ್ಡ ಏಟು ಬಿದ್ದಿತ್ತು. ಆ ಭಯ ನನ್ನನ್ನು ಊರಿನಿಂದಲೇ ಓಡಿಸಿತ್ತು. ಹಾಗೆ ಬಂದು ಬಸ್ಟ್ಯಾಂಡ್ನಲ್ಲಿ ಕುಳಿತಾಗಲೇ ಈ ಹೆಂಗಸಿನ ಪರಿಚಯವಾಗಿತ್ತು.

ಸರಿ, ತಲೆ ಬಾಚ್ಕೋ, ಅಲ್ಲಿ ಒಳಗಡೆ ನಿನ್ನ ಸೈಜಿಗೆ ಆಗೋ ಬಟ್ಟೆ ಹಾಕ್ಕೋ. ಯಾಕೆ ಎಲ್ಲಿಗಾದರೂ ಹೋಗಬೇಕಾ? ಅಂದೆ. ಹೂಂ. ಆ ಮಾರಿ ಕರೆಯುತ್ತಾಳೆ, ಅಷ್ಟರಲ್ಲಿ ರೆಡಿ ಇರಬೇಕು ಅಂದ್ಲು. ನೋಡೋಕೆ ಸ್ವಲ್ಪ ಒರಟೇ ಆದರೂ ಒಳಗೆ ಒಳ್ಳೆಯವಳೇ ಅನ್ನಿಸ್ತು. ಒಳಹೋದೆ. ಮೈಗೆ ನೀರು ಸುರ್ಕೊಂಡೆ. ಸ್ವಲ್ಪ ಹಾಯೆನಿಸಿತು. ನನಗ್ಯಾಕೋ ಆ ಬಟ್ಟೆ ಇಷ್ಟ ಆಗಲಿಲ್ಲ, ನನ್ನ ಬಟ್ಟೇನೇ ಹಾಕ್ಕೊಂಡೆ. ತಲೆ ಬಾಚಿಕೊಂಡೆ. ಅಷ್ಟರಲ್ಲಿ ನನ್ನನ್ನು ಕರ್ಕೊಂಡು ಬಂದಿದ್ದ ಆ ಹೆಂಗಸು ಕೂಗು ಹಾಕಿತ್ತು.

ಮೆಟ್ಟಿಲು ಹತ್ತಿ ಹೋದೆ. ಹತ್ತಿರ ಕರೆದು, ಮಣಿ ನೆನ್ನೆ ಬಂದೆವಲ್ಲ ಆ ಆಟೋ ಅಣ್ಣ ನಿನ್ನನ್ನು ಒಂದು ಕಡೆ ಕರ್ಕೊಂಡ್ ಹೋಗ್ತಾನೆ. ನೀನು ಅವನ ಜೊತೆ ಹೋಗು, ಅಲ್ಲಿ ಒಬ್ಬಳು ಆಂಟಿ ಇರ್ತಾಳೆ. ಅವಳು ಹೇಳಿದಂಗೆ ಕೇಳು. ನಿನ್ನ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಬೇಕಾದಷ್ಟು ದುಡ್ಡು ಮಾಡಿಕೊಳ್ಳುವಿಯಂತೆ. ಯಾರ ಹಂಗೂ ಬೇಡ. ತಾಯಿ ಇಲ್ಲದ ಮೇಲೆ ನಿನ್ನನ್ ಯಾರು ಕೇಳ್ತಾರೆ ಅಂದ್ಲು. ನಾನು ಬೇರೆ ಏನನ್ನೂ ಹೇಳಲು ಅವಕಾಶವೇ ಇರಲಿಲ್ಲ… ಎಲ್ಲವೂ ನಿಯಂತ್ರಿಸಲ್ಪಡುವ ಅನಿವಾರ್ಯವಾಗಿತ್ತು. 

ಮತ್ತೆ ಕೆಳಗಿಳಿದು ಬಂದೆ. ಅವಳಿಗೆ ಮೇಡಂ ಹೇಳಿದ್ದನ್ನು ಹೇಳಿದೆ, ಹೂಂ.. ಹೋಗು ಹೋಗು ಅಲ್ಲಿ ಅವಳು ನಿನಗೆ ಎಲ್ಲಾ ಟ್ರೈನಿಂಗ್ ಕೊಡ್ತಾಳೆ. ಅವಳು ಇನ್ನೊಬ್ಬ ಮಿಟಕಲಾಡಿ ಅಂದ್ಲು. ಯಾಕೆ ನಿಮಗೆ ಇಲ್ಲಿರೋಕೆ ಇಷ್ಟ ಇಲ್ವಾ ಅಕ್ಕ? ಇವರನ್ನೆಲ್ಲಾ ಬೈಯ್ತಾನೇ ಇರ್ತೀಯ ಅಂದೆ. ನಾನು ತುದಿಗಾಲಲ್ಲಿದ್ದೀನಿ. ಆದರೆ ನಾನು ಇಷ್ಟು ವರ್ಷ ಮೈ ಚೆಲ್ಲಿರೋದನ್ನೆಲ್ಲ ಅವಳೇ ಗಂಟು ಹಾಕಿಕೊಂಡು ಇಟ್ಕೊಂಡಿದಾಳೆ, ನನ್ನ ಪಾಲಿನದು ಕೊಟ್ಟರೆ ಹಿಂದಿರುಗಿ ನೋಡದಂತೆ ಹೋಗಿಬಿಡ್ತೀನಿ ಅಂದ್ಲು. ಸರಿ ನೀನು ಹೊರಡು ಬಂದು ಹುಲಿ ಬಲೆಯಲ್ಲಿ ಬಿದ್ದಿದ್ದೀಯಾ ಸುಮ್ಮನೆ ಹೇಳಿದಂಗೆ ಕೇಳಿಬಿಡು, ಇಲ್ದಿದ್ರೆ ಕೊಂದೇ ಬಿಡ್ತಾರೆ ಈ ಧನ ಪಿಶಾಚಿಗಳು ಅಂದಳು. 

ನರನಾಡಿಗಳೆಲ್ಲಾ ಭಯದಲ್ಲಿ, ಆತಂಕದಲ್ಲಿ ಮುಳುಗಿದ್ವು. ಜೀವನವನ್ನು ಏನೋ ಅಂದುಕೊಂಡು ಬಂದ್ಬಿಟ್ಟೆ, ಈ ಪ್ರಪಂಚ ಇಷ್ಟೊಂದು ನಿಗೂಢ ಅಂತ ಗೊತ್ತಿರಲಿಲ್ಲ ಅಂತ ನನ್ನೊಳಗೆ ನಾನೇ ಪಿಸುಗುಟ್ಟಿದೆ. ಆಟೋದವನ ಜೊತೆ ಹೊರಟೆ. ಅವನು ಒಂದಷ್ಟು ದೂರ ಹೋದವನು ಒಂದು ಲಾಡ್ಜ್ ಮುಂದೆ ನಿಲ್ಲಿಸಿದ. ಒಂದು ಹೆಂಗಸು ಬಂದು ನನ್ನನ್ನು ತನ್ನ ರೂಮಿಗೆ ಕರೆದುಕೊಂಡು ಹೋದಳು. ನನಗೆ ಇವೆಲ್ಲಾ ಸಂಕೋಲೆಗಳು ಅರ್ಥವಾಗಲೇ ಇಲ್ಲ. ಇದೆಂಥ ಲಾಡ್ಜು ಜನರೇ ಇಲ್ಲದೆ ಬಣ ಗುಡುತ್ತಿದೆ ಅಂದುಕೊಂಡೆ.

ಸಂಜೆ ಹೊತ್ತಿಗೆ ನಾನು ಸ್ವಲ್ಪ ಹೊರಗಡೆ ಹೋಗಿ ಬರುತ್ತೇನೆ ನೀನು ಆರಾಮಾಗಿ ಇರು ಅಂತ ಹೇಳಿ ಆ ಹೆಂಗಸು ಆಚೆ ಹೋದಳು. ಸುಮಾರು ಒಂದು ಅರ್ಧ ಗಂಟೆ ಕಳೆದಿರಬಹುದು, ಬಾಗಿಲು ಬಡಿದ ಸದ್ದಾಯ್ತು. ಬಾಗಿಲು ತೆರೆದೆ. ಒಬ್ಬ ಮಧ್ಯವಯಸ್ಕ ಒಳಬಂದ. ಮೇಡಂ ಇಲ್ಲ ಎಂದೆ, ಆಚೆ ಇದ್ದಾಳಲ್ಲ ಅಂದ ಅವನು. ಅಂದ್ರೆ ಅವಳು ಎಲ್ಲಿಯೂ ಹೋಗಿಲ್ಲ ಅಂತ ಗೊತ್ತಾಯ್ತು. ಮತ್ತೆ ಅಲ್ಲೇ ಮಾತಾಡ್ಸಿ ಅಂದೆ. ಇಲ್ಲ.. ನಿನ್ನ ಮಾತಾಡ್ಸೋಕೇ ಬಂದಿರೋದು ಚಿನ್ನ ಅಂತ ಹತ್ತಿರ ಬಂದ. ನಾನು ಸರಿದೆ. ಹೊಸಬಳಾ ಅಂದ. ಮಾತಾಡಲಿಲ್ಲ. 

ಮನೆಯಲ್ಲಿದ್ದ ಅಕ್ಕ ಹೇಳಿದ್ದಲ್ಲ ಮಾತುಗಳು ನೆನಪಾದವು. ಏನು ಮಾಡೋದು ಗೊತ್ತಾಗಲಿಲ್ಲ, ಅಯ್ಯೋ ಯಾಕೆ ಮೇಲೇ ಬರ್ತೀಯ ಅಂತ ಸ್ವಲ್ಪ ಜೋರಾಗಿ ಕಿರುಚಿದೆ. ಅಯ್ಯೋ ಬಾರೆ, ಕಣಿ ಕೇಳೋಕೆ ಟೈಮ್ ಇಲ್ಲ ಅಂತ ಮೇಲೆ ಬಿದ್ದೇ ಬಿಟ್ಟ. ಒದರಾಡಿದೆ… ಒದರಾಡಿದೆ… ಅವನ ಭಾರ ನನ್ನ ದೇಹದ ಮೇಲೆ ಬಿದ್ದು ನನ್ನ ಕನ್ಯತ್ವ ಹರಿದ ಶಬ್ದ… ನಾನು ನೋವಿನಿಂದ ಕೂಡಿದ ಕೂಗು ಬೆರೆತು ಹೋಗಿದ್ವು. ಅವನ  ಕೆಲಸ ಮುಗಿಸಿ ಕೊಡವಿ ಎದ್ದ. ಪ್ಯಾಂಟ್ ಏರಿಸಿದವನು ಹೋಗೇ ಬಿಟ್ಟ. ನನ್ನಪ್ಪನ ವಯಸ್ಸಿನ ಅವನ ನೆನೆದರೆ ಅಸಹ್ಯ ಹುಟ್ಟುತ್ತಿತ್ತು. ಅಸಹನೀಯವಾಗುತ್ತಿತ್ತು. ನನ್ನ ಬದುಕಿನ ರಕ್ತ ಸಿಕ್ತ ಅಧ್ಯಾಯ ಆರಂಭವಾಗಿತ್ತು. 

ಅವಳು ಅದೇ ಲಾಡ್ಜ್ ನಲ್ಲಿಯೇ 3-4 ರೂಮುಗಳನ್ನು ಬುಕ್ ಮಾಡಿಕೊಂಡಿದ್ದಳು. ನನ್ನನ್ನು ಒಂದು ರೂಮಿನಲ್ಲಿಯೇ ಇರಿಸಿದ್ದಳು. ರಕ್ತಸಿಕ್ತವಾಗಿದ್ದ ಬಟ್ಟೆ ಬದಲಿಸಿ ಬೇರೆ ಬಟ್ಟೆ ಹಾಕಿಸಿದಳು. ಆ ಬಟ್ಟೆ ಬದಲಿಸಿದಂತೆಯೇ ನಿರಂತರವಾಗಿ ನನ್ನ ದೇಹದ ಮೇಲೆ, ಮನಸ್ಸಿನ ಮೇಲೆ ಗೀರು ಗಾಯಗಳು, ಸೀಳು ಗಾಯಗಳು, ಕಚ್ಚಿದ ಗಾಯಗಳು, ಒತ್ತಿದ ಗಾಯಗಳು… ರಣವಾಗುತ್ತಲೇ ಹೋದವು.

ಆ ದಿನವೂ ಯಾವನೋ ಒಬ್ಬ ಬಂದ. ಬಟ್ಟೆ ಕಳಚಿ ನೇತು ಹಾಕುತ್ತಿದ್ದ. ಅಷ್ಟರಲ್ಲಿ ಬಾಗಿಲು ಬಡಿದ ಶಬ್ದ… ಕೂಡಲೇ ಬಟ್ಟೆ ಏರಿಸಿ ಕೊಂಡವನು ನಿಂತಲ್ಲೇ  ಪತರುಗುಟ್ಟಿದ. ಬಾಗಿಲು ತೆರೆದ ಕೂಡಲೇ ಒಬ್ಬ ಪೊಲೀಸ್ ಒಳನುಗ್ಗಿದ. ಬಂದಿದ್ದ ಗಿರಾಕಿ ಅಲ್ಲಿಂದ ತಳ್ಳಿಕೊಂಡು ಓಡಿಯೇ ಬಿಟ್ಟ. ನನ್ನನ್ನು ಏ ಬಾರೆ ಸ್ಟೇಷನ್ಗೆ, ಬೇರೆ ಏನೂ ಮಾಡೋಕಾಗಲ್ಲ ವೇನ್ರೇ ? ಬೆತ್ತಲಾಗುವುದು ಬಿಟ್ಟು… ಅಂತ ಬಾಯಿಗೆ ಬಂದಂತೆ ಬೈತಿದ್ದ. ನಾನು ಹಿಂಬಾಲಿಸಿದೆ. 

ಆಟೋ ನಿಂತಿತ್ತು, ಹತ್ತು ಅಂದ. ಆಟೋ ಹತ್ತೋಕೆ ಹೋದ್ರೆ ಅದರಲ್ಲಿ ಆಗಲೇ ನಾಲ್ಕು ಹುಡುಗೀರು ಕೂತಿದ್ರು.  ಉಸಿರು ಕಟ್ಟೋಹಂಗೆ ಒತ್ತರಿಸಿಕೊಂಡು ಕೂತ್ಕೊಂಡೆ. ಅವನು ಸೀದಾ ಸ್ಟೇಷನ್ ಗೆ ಕರ್ಕೊಂಡ್ ಬಂದ. ಅಲ್ಲಿಂದ ಸ್ಟೇಟ್ ಹೋಂಗೆ ಕರ್ಕೊಂಡು ಹೋದರು. ಆ ರಾತ್ರಿ ನಾವು ಐದು ಜನ ಪರಸ್ಪರ ಎಲ್ಲ ಹೇಳಿಕೊಂಡೆವು. ಒಂಥರಾ ಸ್ನೇಹಿತೆಯರಾದೆವು. ಒಬ್ಬೊಬ್ಬರದೂ ಒಂದೊಂದು ಕರುಳು ಕಿವುಚುವ ಕಥೆ. ನನಗೆ ನನ್ನದೇ ಸ್ಥಿತಿಯಲ್ಲಿರುವ ಗೆಳತಿಯರು ಸಿಕ್ಕಿದ್ದು ಸ್ವಲ್ಪ ನಿರಾಳವಾಯಿತು.  

ಮಾರನೇ ದಿನ ಬೆಳಗ್ಗೆ ಕೋರ್ಟ್ ಗೆ ಕರೆದುಕೊಂಡು ಬಂದ್ರು. ಸಾಮಾನ್ಯವಾಗಿ ಕೋರ್ಟ್ ಗೆ ಬಂದು ಆ ಮೇಡಂ ಫೈನ್ ಕಟ್ಟಿ ಬಿಡಿಸಿಕೊಂಡು ಕರ್ಕೊಂಡು ಹೋಗ್ತಾಳೆ ಅಂತ ಒಬ್ಬಳು ಹೇಳಿದ್ಲು. ಆವತ್ತು ಅವಳಿಗೆ ಅದೇನಾಯ್ತೋ, ಪೊಲೀಸರ ಜೊತೆ ಅಡ್ಜಸ್ಟ್ಮೆಂಟ್ ಆಗಲಿಲ್ಲವೋ ಏನೋ ಅವಳು ಬರಲೇ ಇಲ್ಲ. ಫೈನ್ ಕಟ್ಟಿ ಓಡಿ ಹೋಗೋಕೆ ನಮ್ಮ ಯಾರ ಹತ್ತಿರವೂ ಬಿಡಿಗಾಸೂ ಇರಲಿಲ್ಲ. ಐದು ಜನಾನು ತಲೆ ಮೇಲೆ ಕೈಹೊತ್ತ್ಕೊಂಡು ಕೂತಿದ್ವು, ಇನ್ನೇನು ಜೈಲೇ ಗತಿ ಅಂತ..

ಅಷ್ಟೊತ್ತಿಗೆ ಲೇಡಿ ಪಿಸಿ ಬಂದು ಅವನ್ಯಾರೋ ನಿಮ್ಮ ಫೈನ್ ಕಟ್ತಾನಂತೆ ಬರ್ರೇ ಅಂದಳು. ಅವಳಿಗೂ ಹೇಗಾದ್ರೂ ಸರಿ, ಯಾರಾದ್ರೂ ಸರಿ.. ಒಂದಿಷ್ಟು ಕಾಸು ಗಿಲುಬ ಬೇಕಿತ್ತು ಅಷ್ಟೇ. ಇವರನ್ನು ಬಿಡಿಸಿಕೊಂಡು ಹೋಗೋ ಅವನ ಹುನ್ನಾರ ಏನಿರಬಹುದು ಅನ್ನೋ ಕರ್ತವ್ಯ ಕೆಲಸ ಮಾಡಲೇ ಇಲ್ಲ. ಅವನು ನೋಡೋಕೆ ಸಭ್ಯನಂತಿದ್ದ. ಅಬ್ಬಾ, ದೇವರಾಗಿ ಬಂದ, ಇಲ್ಲದಿದ್ದರೆ ಜೈಲಿಗೆ ಹೋಗಬೇಕಿತ್ತು ಅಂದಳು ನಮ್ಮಲ್ಲೇ ಒಬ್ಬಳು. ಅವನು ಬಂದು ನಮ್ಮೆಲ್ಲರ ಫೈನ್ ಕಟ್ಟಿ, ಪೊಲೀಸರಿಗೂ ಏನೋ ಕೈಗಿತ್ತು ಆಚೆ ಕರ್ಕೊಂಡು ಬಂದ. ಇವನ್ಯಾರು ಸಮಾಜಸೇವಕನಿರಬೇಕು ಅಂದುಕೊಂಡೆ.

ಈ ವ್ಯಾನಿನಲ್ಲಿ ಕೂತ್ಕೊಳ್ಳಿ ಅಂದ. ಅವನ ನಡತೆ, ಅವನ ಮಾತು, ನಮಗೆ ಮರು ಜೀವ ಬಂದಂತಾಯ್ತು. ಕೀ ಕೊಟ್ಟವರಂತೆ ಮಾರುತಿ ವ್ಯಾನಿನಲ್ಲಿ ಕುಳಿತುಕೊಂಡೆವು. ವ್ಯಾನಿನ ಮೇಲೆ ಆಶ್ರಯ ಅಂತ ಬರೆದಿತ್ತು. ದಾರಿ ಮಧ್ಯೆ ಊಟ ಕಟ್ಟಿಸಿಕೊಂಡ. ನಮಗೂ ಹಸಿವಿನದ್ದೇ ಸಾಮ್ರಾಜ್ಯ. ಊಟ ಆದರೆ ಸಾಕು ಜೀವಕ್ಕೆ ತಂಪಾಗ್ತಿತ್ತು. ಹೊಸಕೋಟೆ ದಾಟಿ ತಿರುಪತಿ ರಸ್ತೆಯಲ್ಲಿ ಸುಮಾರು ದೂರ ಪಯಣಿಸಿತು ವ್ಯಾನ್. 

ಏನಣ್ಣ ಎಲ್ಲಿಗೆ ಕರ್ಕೊಂಡ್ ಹೋಗುತ್ತಿದ್ದೀಯಾ ನಮ್ಮನ್ನ, ಅಂತ ಒಬ್ಬಳು ಕೇಳಿದಳು. ಬಂದ್ರಮ್ಮ, ನಿಮಗೆ ಸ್ವತಂತ್ರವಾಗಿ ಬದುಕುವ ದಾರಿ ತೋರಿಸ್ತೀನಿ.. ಅಂದ. ದೇವರು ಬಂದಂಗೆ ಬಂದೆ ಕಣಣ್ಣ ಅಂದ್ಲು ಇನ್ನೊಬ್ಬಳು. ಆ ದೇವರು ನನಗೆ ಆ ಶಕ್ತಿ ಕೊಟ್ಟವ್ನೆ ಅಂದ. ಅಷ್ಟರಲ್ಲಿ ವ್ಯಾನು ಒಂದು ತೋಟದೊಳಕ್ಕೆ ಹೋಯಿತು. ತೋಟದ ತುಂಬಾ ಅಲ್ಲಲ್ಲಿ ತೆಂಗಿನ ಮರ. 

ಮೂಲೆಯಲ್ಲೊಂದು ಗುಡಿಸಲು. ಅದರ ಪಕ್ಕದಲ್ಲಿ ಒಂದು ಹಳೇ ದೊಡ್ಡ ಮನೆ. ಅಲ್ಲಿ ನಮ್ಮನ್ನು ಇಳಿಸಿದ. ಇಲ್ಲಿದ್ದುಕೊಳ್ಳಿ. ನಿಮಗಿಲ್ಲಿ ಯಾವುದಕ್ಕೂ ಕೊರತೆಯಿಲ್ಲ. ದುಡ್ಡು ಕಾಸಿಗೂ ಕೂಡ.. ಊಟ ಮಾಡಿ ಮಲಗಿದೆವು. ಹಿಂದಿನ ರಾತ್ರಿ ಒಂದು ನಿಮಿಷಾನೂ ನಿದ್ರೆ ಇಲ್ಲ, ಬೆಳಗ್ಗೆಯಿಂದ ಅಲೆದದ್ದೇ ಆಗಿತ್ತು. ನಮ್ಮೊಂದಿಗೆ ಊಟ ಮಾಡಿದ ಅವನು  ನಮ್ಮನ್ನು ಅಲ್ಲೇ ಬಿಟ್ಟು, ನಾನು ಸಾಯಂಕಾಲ ಬರ್ತೀನಿ ಅಂತ ಹೇಳಿ ಹೊರಟು ಹೋದ.

ಸಂಜೆಯಾಯ್ತು. ಮತ್ತೆ ವ್ಯಾನ್ ಬಂತು. ವ್ಯಾನಿನಲ್ಲಿ ಐದಾರು ಗಂಡಸರು ಇದ್ರು. ಅಯ್ಯೋ ನಮಗೇ ಜಾಗ ಇಲ್ಲ, ಇವನು ಇನ್ಯಾರನ್ನೋ ಕರ್ಕೊಂಡು ಬರ್ತಾ ಇದಾನೆ ಅಂತ ಚೀರಿತು ನನ್ನ ಮುಗ್ದ ಮನಸ್ಸು. ಅವನು ಮಾತ್ರ ಒಳಗೆ ಬಂದ. ಬರುವಾಗಲೇ ಊಟದ ಪ್ಯಾಕೆಟ್ ಗಳು, ಬಾಟಲುಗಳು ತಂದ. ನೀರಿಗಿಳಿದಿದ್ದೇವೆ, ಚಳಿಯೇನು! ಮಳೆಯೇನು! ಪಾರ್ಟಿ ಮಾಡ್ತಾನೆ ಅನ್ಸುತ್ತೆ ಪಾಪ… ದೇವರಂತೋನು ಅಂದಳು ಕುಮುದ. 

ಎಲ್ಲವನ್ನು ಅವನೇ ಜೋಡಿಸಿದ. ಅವನ ಜೊತೆ ಬಂದೋರು, ನಾವು, ಎಲ್ಲಾ ಸೇರಿ ಪಾರ್ಟಿ ಜೋರಾಗಿ ಆಯ್ತು. ಬಲವಂತವಾಗಿ ನನಗೂ ಕುಡಿಸಿದಳು ಮೀರಾ. ಗಂಟಲು ವಿಷವಾಗಿ, ನೆತ್ತಿ ಉರಿಯಾಗಿ ಹೊಟ್ಟೆ ತೊಳಸಿಕೊಂಡು ಬಂತು. ಸರಿ ಹೋಗುತ್ತೆ ಸುಮ್ನಿರು ಅಂದ್ಲು. ಮುಂದಿನದ್ದೇನೂ ಗೊತ್ತಿಲ್ಲ… ಎಚ್ಚರವಾದಾಗ ಬಂದವರಲ್ಲಿ ಒಬ್ಬ ನನ್ನ ಜೊತೆ ಮಲಗಿದ್ದ. ಮೈ ಕೊಡವಿ ಎದ್ದೆ. ಬಂದವರೆಲ್ಲರೂ ಒಬ್ಬರ ಜೊತೆ ಮಲಗಿದ್ದರು. ನನ್ನ ಜೊತೆ ಮಲಗಿದ್ದವನು ಎದ್ದು ನನಗೆ 500 ರೂಪಾಯಿ ಕೊಟ್ಟ. ಅದೇ ನಾನು ಕಂಡ, ನನ್ನ ಕೈ ಸೋಕಿದ ಮೊದಲ ದುಡ್ಡು. ಕಣ್ಣಿಗೊತ್ತಿ ಎದೆಯೊಳಗೆ ತುರುಕಿದೆ. 

ಹೀಗೆ ದಿನವೂ ಬೇರೆ ಬೇರೆ ಜನ ಬರುತ್ತಿದ್ದರು. ಊಟ, ಕುಡಿತ, ದುಡ್ಡು, ಬೆತ್ತಲಾಟ ಎಲ್ಲವೂ ಸಾಗಿತ್ತು. ಬರುಬರುತ್ತಾ ಪೊರ್ಕಿಗಳು, ರೌಡಿಗಳು ಬರೋಕೆ ಶುರು ಮಾಡಿದ್ರು. ಸಂಜೆ ಮಾತ್ರ ಬರುತ್ತಿದ್ದವರು ಬೆಳಗ್ಗೆಯೂ ಬರೋಕೆ ಶುರು ಮಾಡಿದ್ರು. ಒಂಥರಾ ಸಾಮೂಹಿಕವಾಗಿ ಹಿಂಸಿಸ್ತಾ ಇದ್ರು. ಇನ್ನು ಈ ಹಿಂಸೆ ತಡೆಯೋಕೆ ಸಾ‍ಧ್ಯವಿಲ್ಲ ಅನ್ನಿಸ್ತು.  ದೇವತಾ ಮನುಷ್ಯನ ಹತ್ತಿರ ಕೂಗಾಡಿದ್ದಕ್ಕೆ ಅವನೂ ಕೂಗಾಡಿದ, ಪೊಲೀಸರಿಗೆ ಸುದ್ದಿ ಕೊಡುವುದಾಗಿ! ತೆಪ್ಪಗಾದ್ವು. ಅವನಂತೂ ದಿನದಿಂದ ದಿನಕ್ಕೆ ಚೆನ್ನಾಗಿ ಸಂಪಾದನೆ ಮಾಡಿಕೊಳ್ಳುತ್ತಿದ್ದ.

ಆ ದಿನ ನಾವು ಐವರೂ ಕೂಡಿ ನಿರ್ಧರಿಸಿದ್ವು.. ನಾವು ಈ ದಿನ ಕುಡಿಯುವುದು ಬೇಡ, ಕುಡಿದಂತೆ ನಾಟಕ ಮಾಡೋಣ, ಅವರಿಗೆಲ್ಲ ಚೆನ್ನಾಗಿ ಕುಡಿಸಿ ರಾತ್ರೋರಾತ್ರಿ ಓಡಿ ಹೋಗೋಣ ಅಂತ. ನಮ್ಮ ಪ್ಲಾನ್ ಯಶಸ್ವಿಯಾಗಿತ್ತು. ಹಾಗೇ ಮಾಡಿದ್ವು. ಜೊತೆಗೆ ಪಕ್ಕದಲ್ಲಿದ್ದ ಗುಡಿಸಲಿಗೆ ಬೆಂಕಿ ಹಚ್ಚಿ ಬಂದಿದ್ವು. ಅವನು ನಮ್ಮ ಮೇಲೆ ದೂರು ಕೊಡೋಕಂತೂ ಸಾಧ್ಯವಿಲ್ಲ, ಯಾಕೆಂದರೆ ನೀನೇ ದಂಧೆ ನಡೆಸುತ್ತಿದ್ದಾ ಅಂತ ಅವನನ್ನೇ ಹಿಡ್ಕೊಳ್ತಾರೆ ಅನ್ನೋ ಧೈರ್ಯ ನಮಗಿತ್ತು. ಹಾಗೆ ಓಡಿ ಬಂದವರು ಬಂದು ತಲುಪಿದ್ದು ವೇಲೂರಿಗೆ. 

ವೇಲೂರಿನಲ್ಲಿಯೇ ರಸ್ತೆ ಬದಿ ನಿಂತು ಬಂದ ಗಿರಾಕಿಗಳೊಂದಿಗೆ ಹೋಗೋಕೆ ಶುರು ಮಾಡಿದೆವು. ಎಲ್ಲಿಯಾದ್ರೇನು, ಈ ದಂಧೆ ವಿಶ್ವವ್ಯಾಪಿ.. ಆದರೆ ಹೆಚ್ಚು ದಿನ ನಡೀಲಿಲ್ಲ, ಅಲ್ಲಿದ್ದ ಲೋಕಲ್ ಹುಡ್ಗೀರು ರೌಡಿಗಳಿಂದ ಹೊಡೆಸಿದ್ರು.. ಅಲ್ಲಿಂದ ವಾಪಸ್ ಬೆಂಗಳೂರಿಗೆ ಬಂದೆವು. ರಸ್ತೆ ಬದಿ, ಬ್ರಾಥೆಲ್, ಲಾಡ್ಜ್, ಎಲ್ಲಾ ಕಡೆ ಚಂಡಾಟವಾಗಿತ್ತು ಬದುಕು. ಎಲ್ಲಿಯೂ ನೆಲೆನಿಲ್ಲಲು ಅಡಿ ಜಾಗವಿಲ್ಲ. ರಕ್ತಸಿಕ್ತವಾದ ಮನಸ್ಸು, ದಣಿದ ದೇಹ, ಒಳಗೊಂದು ಸಿನ್…

ನಾವು ಐವರೂ ಕೆಲವೊಮ್ಮೆ ಚದುರಿ ಹೋಗ್ತಿದ್ದೆವು, ಕೆಲವೊಮ್ಮೆ ಎಲ್ಲಿಯೋ ಭೇಟಿಯಾಗುತ್ತಿದ್ದೆವು. ಕೊನೆಗೆ ನಾನು ಮತ್ತು ಕುಮುದ ಮಾತ್ರ ಜೊತೆಯಲ್ಲಿ ಇದ್ದೆವು.  ಉಳಿದವರೆಲ್ಲ ಏನಾದರೋ! ನಮ್ಮ ಈ ದಾರುಣ ಪ್ರಯಾಣದಲ್ಲಿ ಯಾವ ಯಾವ ಮೋರಿಗಳ ಕರಾಳತೆಗೆ ಬಲಿಯಾದ್ರೋ…. ಅವರ ನೆನಪು ಮಾತ್ರ ಇದೆ ಅಷ್ಟೇ.

ಅದೊಂದು ದಿನ ಮುಸ್ಸಂಜೆಯ ಸಮಯ… ಕುಮುದಾಳನ್ನು ಒಬ್ಬ ಗಿರಾಕಿ ಕರೆದ. ಸರ್ಜಾಪುರಕ್ಕೆ ಬರ್ತೀಯಾ ಅಂದ. ಚಂದ್ರಲೋಕಕ್ಕೆ ಬೇಕಾದ್ರೂ ಬರ್ತೀನಿ ಅಂದ್ಲು. ಅವಳು ಯಾವಾಗಲೂ ಸ್ವಲ್ಪ ತಮಾಷೆಯೇ….. ಆಟೋ ಹತ್ತಿಸಿಕೊಂಡ.

ಮಾರನೇ ದಿನ ಅವಳು ಬರಲಿಲ್ಲ! ನನಗೆ ಆತಂಕವಾಯಿತು. ಅಲ್ಲಿದ್ದವರು ಮಾತಾಡಿಕೊಳ್ಳುತ್ತಿದ್ದರು, ಸರ್ಜಾಪುರ ರಸ್ತೆಯಲ್ಲಿ ಐದಾರು ದಾಂಢಿಗರು ಒಂದು ಹೆಂಗಸನ್ನು ಅತ್ಯಾಚಾರ ಮಾಡಿ, ತಲೆ ಮೇಲೆ ಚಪ್ಪಡಿ ಹಾಕಿ ಹೋಗಿದ್ದಾರಂತೆ. ಅವಳು ಅಲ್ಲೇ ಸತ್ತಳಂತೆ. ಅವಳ್ಯಾರೋ ಬೀದಿ ಸೂಳೆಯಿರಬೇಕು ಅಂತ ಬಿಬಿಎಂಪಿಯವರು ಹೆಣ ಎತ್ತಾಕಿದ್ರಂತೆ.

ಅಯ್ಯೋ ಕುಮುದ… ಈ ನಕಲಿ ಹೆಸರುಗಳು, ಈ ಗಿರಾಕಿಗಳು, ಈ ಘರ್ವಾಲಿಗಳು, ಪೋಲೀಸರು, ಪಿಂಪ್ ಗಳು, ಪೊರ್ಕಿಗಳು, ರೌಡಿಗಳು, ಆಟೋಗಳು… ನನ್ನ ಸುತ್ತಾ ನನ್ನನ್ನೂ ಸೇರಿಸಿಕೊಂಡು ಗಿರಕಿ ಹೊಡೆಸಿ, ಹೊಡೆಸಿ ರಪ್ ಅಂತ ಬಿಸಾಡಿಬಿಟ್ವು…

ಅಲ್ಲೇ ಕುಸಿದೆ. ಅವಳೊಂದಿಗೇ ನಾನೂ ಸತ್ತಿದ್ದೆ ಚಪ್ಪಡಿ ಇರಲಿಲ್ಲ ಅಷ್ಟೇ…

‍ಲೇಖಕರು ಲೀಲಾ ಸಂಪಿಗೆ

December 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

೧ ಪ್ರತಿಕ್ರಿಯೆ

  1. ಶಶಿ.ಕಳಸದ

    ಒದ್ತಾ ಒದ್ತಾ ಅಳು ಬರ್ತಾ ಇದೆ. ಇಂಥದಕ್ಕೆಲ್ಲ ಪರಿಹಾರ ಇಲ್ವಾ. ಅಥವಾ ಇದು ಕೂಡ ನಾಗರೀಕ ಸಮಾಜದ ಒಂದು ಭಾಗನಾ? ಹಂಗಂದಮೇಲೆ ನಮಗೂ ಪ್ರಾಣಿಗಳಿಗೂ ಇರೋ ವ್ಯತ್ಯಾಸ? ಇವರಗಳ ಬಳ್ಸಕೊಂಡು ದುಡ್ಡು ಮಾಡೊ ಧನಪಿಶಾಚಿಗಳಿಗೆ, ಪೋಲಿಸ್ ರಿಗೆ ನನ್ನದೊಂದು ದಿಕ್ಕಾರವಿರಲಿ.ನನ್ನ ಅಕ್ಕತಂಗಿಯರಿಗೆ ಆದಷ್ಟು ಬೇಗ ಇಂಥವು ಗಳಿಂದ ಮುಕ್ತಿ ಸಿಗಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: