ನಾನೇಕೆ ಈ ಕಾದಂಬರಿ ಬರೆದೆ?

ಬರಗೂರು ರಾಮಚಂದ್ರಪ್ಪ ಅವರ ಹೊಸ ಕೃತಿ ‘ಕಸ್ತೂರ್ ಬಾ ವರ್ಸಸ್ ಗಾಂಧಿ’

‘ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟವಾದ ಈ ಧಾರಾವಾಹಿ ಈಗ ಪುಸ್ತಕವಾಗಿದೆ.

ಈ ಕೃತಿ ಏಕೆ ಬರೆದೆ ಎನ್ನುವುದನ್ನು ಬರಗೂರು ಅವರು ಇಲ್ಲಿ ಬಿಚ್ಚಿಟ್ಟಿದ್ದಾರೆ-

ಬರಗೂರು ರಾಮಚಂದ್ರಪ್ಪ

ಎಲ್ಲಾ ಪುರುಷ ಸಾಧಕರ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬುದು ರೂಢಿಗತ ಮಾತು. ನಮ್ಮ ಸಾಮಾಜಿಕ ಆರ್ಥಿಕ ವ್ಯವಸ್ಥೆಯ ಸೂತ್ರವು ಪುರುಷರ ಕೈಗಳಲ್ಲಿರುವ ಇತಿಹಾಸದ ಫಲವಾಗಿ ಪುರುಷರು ಮುಂದೆ, ಮಹಿಳೆಯರು ಹಿಂದೆ, ಎಂಬ ಮಾತು ಮೂಡಿಬಂದಿದೆ. ಇದೇ ಇತಿಹಾಸದ ಕೆಲವು ಹಂತಗಳು ಮಹಿಳೆಯರು ಪುರುಷರಿಗೆ ಹೆಗಲೆಣೆಯಾಗಿ ನಿಂತ ಸಾಧನೆಯನ್ನು ಸಾರುತ್ತವೆ.

ನಾನು ಮೊದಲಿನಿಂದಲೂ ‘ಪುರುಷರ ಸಾಧನೆಯ ಹಿಂದೆ ಮಹಿಳೆ ಇರುತ್ತಾಳೆ’ ಎನ್ನುವ ಬದಲು ‘ಜೊತೆಯಾಗಿ ಇರುತ್ತಾಳೆ, ಹಿಂದೆ ಅಲ್ಲ’ ಎಂಬ ಸಮಾನದೃಷ್ಟಿಯನ್ನು ಹೊಂದಿದ್ದೇನೆ, ಪ್ರತಿಪಾದಿಸುತ್ತಾ ಬಂದಿದ್ದೇನೆ. ಈ ನನ್ನ ಪ್ರತಿವಾದನೆಯ ಪ್ರತೀಕವೆಂಬಂತೆ ಅನೇಕ ಮಹಿಳೆಯರ ಬದುಕು ನನ್ನ ಭಾವಕೋಶದ ಭಾಗವಾಗಿ ಬೆಳೆದಿದೆ. ಇಂಥವರ ಸಾಲಿನ ಪ್ರಮುಖರಲ್ಲೊಬ್ಬರಾಗಿ ಕಸ್ತೂರ್ ಬಾ ಅವರು ನನ್ನೊಳಗನ್ನು ಕಲಕಿದ್ದಾರೆ. ಅರ್ಥಮಾಡಿಕೊಳ್ಳುವ ಅಧ್ಯಯನಕ್ಕೆ ಒತ್ತಾಸೆಯಾಗಿದ್ದಾರೆ. ಹೀಗಾಗಿ ನಾನು ಅನೇಕ ವರ್ಷಗಳ ಹಿಂದೆಯೇ ಓದಿದ್ದ ಗಾಂಧಿಯವರ ಆತ್ಮಕತೆಯ ಜೊತೆಗೆ ಎರಡು ಮೂರು ವರ್ಷಗಳಿಂದ ಸಮಯಾನುಸಾರ ಇನ್ನೂ ಕೆಲವರ ಕೃತಿಗಳು ಹಾಗೂ ಲೇಖನಗಳನ್ನು ಓದುತ್ತಾ ಬಂದೆ.

ಕನ್ನಡದಲ್ಲಿ ಬಂದ ವೆಂಕೋಬರಾವ್ ಅವರ ʼಗಾಂಧಿ ಚರಿತ ಮಾನಸ’, ಎಚ್.ಎಸ್. ಅನುಪಮಾ ಅವರ ʼನಾನು ಕಸ್ತೂರ್’, ಡಿ.ಎಸ್. ನಾಗಭೂಷಣ ಅವರ ಕೃತಿಗಳನ್ನೂ ಒಳಗೊಂಡಂತೆ ನನ್ನ ನೆನಪಲ್ಲಿ ಇನ್ನು ಕೆಲವು ಕನ್ನಡ ಕೃತಿಗಳಿದ್ದವು. ಜೊತೆಗೆ ಆಂಗ್ಲಭಾಷೆಯಲ್ಲಿ ಇದ್ದ ಉಷಾ ಬಹೆನ್, ಅರುಣ್ ಗಾಂಧಿ, ತುಷಾರ್ ಗಾಂಧಿ, ಸಿಮ್ರಿನ್ ಸಿರೂರ್, ಲೋರ್ಗಾ ಮಂಗೂರ್, ಅಪರ್ಣಾ ಬಸು, ಬಿಬು ಪ್ರಸಾದ್ ರೋಟ್ರೆ, ತನ್ವಿದುಬೆ, ಬಿ.ಎಂ. ಬಲ್ಲಾ, ಸೈಫ್ ಹೈದರ್ ಹಸನ್, ವಿನಯಲಾಲ್, ಮುಂತಾದವರ ಪುಸ್ತಕ ಹಾಗೂ ಲೇಖನಗಳನ್ನು ಅಭ್ಯಾಸ ಮಾಡಿದೆ.

ಕೆಲವರ ಬರಹಗಳಲ್ಲಿ ಕಸ್ತೂರ್ ಬಾ ಮತ್ತು ಗಾಂಧಿ ಅವರ ನಡುವೆ ಇದ್ದ ಭಿನ್ನ ನೆಲೆಗಳ ಪ್ರಸ್ತಾಪವೂ ಅಲ್ಲಲ್ಲಿ ಸೂಚ್ಯವಾಗಿ ಬಂದಿರುವುದನ್ನು ಕಂಡೆ. ಈ ಎಲ್ಲ ಓದಿನ ನಂತರ ನನಗೆ ಕಸ್ತೂರಿಬಾ ಮತ್ತು ಗಾಂಧಿಯವರ ಭಾವ-ಬುದ್ಧಿ ಕೋಶದ ಭಿನ್ನ ನೆಲೆಗಳನ್ನು ಕೇಂದ್ರವಾಗಿಟ್ಟುಕೊಂಡು ಕೃತಿಯೊಂದನ್ನು ಬರೆಯಲು ಇನ್ನೂ ʼಅವಕಾಶ’ ಇದೆ ಅನ್ನಿಸಿತು. ಈ ಅನಿಸಿಕೆಯು ತೀವ್ರವಾಗಿ ಕಾಡಿದ ಫಲವೇ ಈ `ಕಸ್ತೂರ್ ಬಾ Vs  ಗಾಂಧಿ’ ಕಾದಂಬರಿ.

ಒಂದು ವಿಷಯವನ್ನು ಇಲ್ಲಿ ಸ್ಪಷ್ಟಪಡಿಸಬೇಕು. ಕಸ್ತೂರ್ ಬಾ ಮತ್ತು ಗಾಂಧಿ ನಡುವೆ ಇದ್ದದ್ದು ವಿಚಾರ ವೈರುಧ್ಯವೇ ಹೊರತು ವ್ಯಕ್ತಿ ವಿರೋಧವಲ್ಲ. ಇವರಿಬ್ಬರಲ್ಲಿ ಕಂಡುಬಂದ ಕೆಲವು ಭಿನ್ನ ನೆಲೆಗಳಿಂದಾಗಿ ವಿರೋಧಿ ಪಟ್ಟವನ್ನು ಕಟ್ಟಲಾಗದು, ಕಟ್ಟಬಾರದು. ವೈರುಧ್ಯ ಮತ್ತು ವಿರೋಧಗಳು ಒಂದೇ ಸ್ವರೂಪದಲ್ಲಿ ಇರುವುದಿಲ್ಲ. ಭಿನ್ನ ನೆಲೆ ಮತ್ತು ವೈರುಧ್ಯಗಳು ಸಾಧಕರ ವೈಯುಕ್ತಿಕ ಮತ್ತು ಸಾರ್ವಜನಿಕ ಬದುಕಿನಲ್ಲಿ ಬಂದು ಬೆರೆತು ಕಡೆಗೆ ಹೊರತಾಗಿ ಹೋಗುವುದು ಒಂದು ವಿಶಿಷ್ಟ ಹಾದಿಯೂ ಹೌದು.

ಈ ಹಾದಿಯಲ್ಲಿ ಜೊತೆಯಾಗಿ ಸಾಗಿದವರು ಕಸ್ತೂರ್ ಬಾ ಮತ್ತು ಗಾಂಧಿ. ಮುಖಾಮುಖಿ, ಅನುಸಂಧಾನ, ಅನುಬಂಧ – ಇವು ಇವರಿಬ್ಬರ ವ್ಯಕ್ತಿತ್ವದ ಅಸಾಧಾರಣ ಪ್ರಕ್ರಿಯಾ ರೂಪಗಳು; ಇಬ್ಬರದೂ ಚಲನಶೀಲ ಚಿಂತನೆಯ ವ್ಯಕ್ತಿತ್ವ. ಅನುಭವ ಮತ್ತು ಅರಿವುಗಳ ಅನುಸಂಧಾನದಲ್ಲಿ ತಪ್ಪು ತಿಳಿವಳಿಕೆಗಳನ್ನು ತಿದ್ದಿಕೊಳ್ಳುತ್ತಾ ಮುಖಾಮುಖಿಯನ್ನು ಅನುಬಂಧದ ನೆಲೆಗೆ ಕೊಂಡೊಯ್ದ ಅಪರೂಪದ ಆತ್ಮ ನಿರೀಕ್ಷೆಯ ವ್ಯಕ್ತಿತ್ವಗಳೆಂದರೆ ಕಸ್ತೂರ್ ಬಾ ಮತ್ತು ಗಾಂಧಿ. ಈ ಪ್ರಕ್ರಿಯಾ ಪ್ರತೀಕವೇ ನನ್ನ ಕಾದಂಬರಿಯ ಕೇಂದ್ರ ಪ್ರಜ್ಞೆ.

ಈ ಕಾದಂಬರಿ ರಚನೆಗೆ ಮುಂಚೆ ನನ್ನ ಓದಿಗೆ ಒದಗಿದ ಕೃತಿಗಳ ಕರ್ತೃಗಳನ್ನು ನೆನೆಯುತ್ತ ಸಹೃದಯ ಓದುಗರ ಮನದ ಮಡಿಲಿಗೆ ಸಲ್ಲಿಸುತ್ತ ಮತ್ತೆ ಮುಂದಿನಂತೆ ಸ್ಪಷ್ಟ ಪಡಿಸುತ್ತೇನೆ.

ಗಾಂಧಿ ಮತ್ತು ಕಸ್ತೂರ್ ಬಾ ಅವರ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಇದ್ದವೆಂಬ ಕಾರಣಕ್ಕೆ ಅವರು ಪರಸ್ಪರ ವಿರೋಧಿ ನೆಲೆಯಲ್ಲಿ ನಿಂತಿದ್ದರೆಂದು ಭಾವಿಸಬೇಕಾಗಿಲ್ಲ. ಮುಖಾಮುಖಿಯಾಗುತ್ತಲೇ ಬದಲಾಗುತ್ತ ಬಂದ ವಿಶಿಷ್ಟ ವ್ಯಕ್ತಿತ್ವದ ಇವರಿಬ್ಬರದೂ ಪ್ರಜಾಸತ್ತಾತ್ಮಕ ಮನಸ್ಸು. ತಂತಮ್ಮ ನಿಲುವುಗಳು ತಪ್ಪು ಎನ್ನಿಸಿದಾಗ ಅದನ್ನು ಒಪ್ಪಿಕೊಂಡು ಒಂದಾಗುವ ಪ್ರಕ್ರಿಯೆಯೇ ಒಂದು ಪ್ರಜಾಸತ್ತಾತ್ಮಕ ಪ್ರತೀಕ. ಇಬ್ಬರೂ ಸತ್ಯಾನ್ವೇಷಕರು. ಈ ಅನ್ವೇಷಣೆಯೇ ಅವರನ್ನು ಮುಕ್ತ ಚರ್ಚೆ, ಚಿಂತನೆಗಳಿಗೆ ಹಚ್ಚುತ್ತದೆ; ಅರಿವೇ ಗುರುವಾಗುವ, ಸತ್ಯವೇ ದೇವರಾಗುವ ಹಂತಕ್ಕೆ ಕೊಂಡೊಯ್ಯುತ್ತದೆ.

ಪರಸ್ಪರ ಎದುರು ಬದರಾಗುವ ವಿಷಯಗಳಿದ್ದ ಕಾರಣಕ್ಕೆ ಯಾವತ್ತೂ ವಿರೋಧಿಗಳಾಗಿ ವಿಜೃಂಭಿಸದೆ, ವೈರುಧ್ಯಗಳನ್ನು ಮೀರುವ ಮಾನಸಿಕ ಹೋರಾಟವನ್ನು ಉಳಿಸಿಕೊಂಡು ಬೆಳೆದ ಅಪರೂಪದ ಜೋಡಿ ಜೀವಗಳು ಈ ನಮ್ಮ ಕಸ್ತೂರ್ ಬಾ ಮತ್ತು ಗಾಂಧಿ. ಸತ್ಯಾನ್ವೇಷಣೆಯ ಆರಂಭಿಕ ಹಂತವನ್ನು ನಿರೂಪಿಸುವ ಸಂಕೇತವಾಗಿ ‘ಕಸ್ತೂರ್ ಬಾ Vs ಗಾಂಧಿ’ ಎಂಬ ಹೆಸರನ್ನು ಕಾದಂಬರಿಗೆ ಕೊಡಲಾಗಿದೆಯೇ ಹೊರತು, ಅವರು ಒಬ್ಬರಿಗೊಬ್ಬರು ವಿರೋಧಿಗಳಾಗಿದ್ದರು ಎಂದಲ್ಲ. ಸಹೃದಯ ಓದುಗರು ಈ ಅಂಶವನ್ನು ಗಮನಿಸಬೇಕೆಂದು ವಿನಂತಿಸುತ್ತೇನೆ.

‘ಸುಧಾ’ ವಾರಪತ್ರಿಕೆಯ ಸಂಪಾದಕರಾದ ಗೆಳೆಯ ಶ್ರೀ ಚ.ಹ. ರಘುನಾಥ್ ಅವರನ್ನು ಇಲ್ಲಿ ನೆನೆಯಲೇಬೇಕು. ಅವರೊಮ್ಮೆ ದೂರವಾಣಿ ಕರೆ ಮಾಡಿ ‘ಸುಧಾ ಪತ್ರಿಕೆಗೆ ಒಂದು ಕಾದಂಬರಿ ಬರೆದುಕೊಡಿ’ ಎಂದು ಕೇಳಿದರು. ಆನಂತರ ನಾನು ಈ ಕಾದಂಬರಿಯ ವಸ್ತು- ವಿನ್ಯಾಸ ಕುರಿತು ಆಲೋಚಿಸತೊಡಗಿದೆ. ಮತ್ತಷ್ಟು ಅಧ್ಯಯನ ಮಾಡಿದೆ; ಬರೆದುಕಳಿಸಿದೆ. ‘ಸುಧಾ’ದಲ್ಲಿ ಅವರು ಧಾರಾವಾಹಿಯಾಗಿ ಪ್ರಕಟಿಸಿದರು. ರಘುನಾಥ್ ಅವರ ಪ್ರೇರಣೆಗೆ ಧನ್ಯವಾದಗಳು. ಅಂತೆಯೇ ಧಾರಾವಾಹಿ ಕಾದಂಬರಿಯನ್ನು ಓದಿ ಪ್ರತಿಕ್ರಿಯಿಸಿದ ಅನೇಕರಿಗೆ ನಾನು ಆಭಾರಿಯಾಗಿದ್ದೇನೆ. ಓದುಗರ ಸಹಸ್ಪಂದನದಿಂದ, ನನ್ನ ಈ ಕಾದಂಬರಿಯು ವಿವಿಧ ವಲಯವನ್ನು ಸರಿಯಾಗಿ ತಲುಪಿದ್ದನ್ನು ಕಂಡು ಸಂತೋಷ ಪಟ್ಟಿದ್ದೇನೆ.

ಈ ಕಾದಂಬರಿಯು ಧಾರಾವಾಹಿಯಾಗಿ ಪ್ರಕಟವಾಗುತ್ತಿರುವಾಗಲೇ ತಾವೇ ಪುಸ್ತಕ ರೂಪದಲ್ಲಿ ಪ್ರಕಟಿಸಬೇಕೆಂದು ಪ್ರೀತಿಯ ಒತ್ತಾಯಮಾಡಿ ತಮ್ಮ ‘ಅಭಿರುಚಿ’ ಪ್ರಕಾಶನದಿಂದ ಹೊರತರುತ್ತಿರುವ ಶ್ರೀ ಗಣೇಶ್ ಅವರನ್ನು ವಿಶ್ವಾಸಪೂರ್ವಕವಾಗಿ ವಂದಿಸುತ್ತೇನೆ. ವಿಶೇಷ ಮುತುವರ್ಜಿಯಿಂದ ಮುದ್ರಣ ಕಾರ್ಯವನ್ನು ನಿರ್ವಹಿಸಿದ ‘ಸ್ವ್ಯಾನ್ ಪ್ರಿಂಟರ್ಸ್’ನ ಮಿತ್ರ ಶ್ರೀ ಕೃಷ್ಣಮೂರ್ತಿ ಮತ್ತು ಸಿಬ್ಬಂದಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಕೃತಿಗೆ ತಕ್ಕುದಾದ ಅರ್ಥಪೂರ್ಣ ಮುಖಚಿತ್ರ ರಚಿಸಿದ ಶ್ರೀ ಅರುಣಕುಮಾರ್ ಅವರಿಗೆ ವಂದನೆಗಳು.

ರಾಜ್ಯಾದ್ಯಂತ ಇರುವ ನನ್ನ ಆತ್ಮೀಯರು ‘ಸುಧಾ’ ಪತ್ರಿಕೆ ಬಂದ ಕೂಡಲೇ ಅದರ ಪುಟವನ್ನು ವಾಟ್ಸಾಪ್ ಮಾಡಿ ತಾವು ಕೊಂಡು ಓದುತ್ತಿರುವುದನ್ನು ಸಾಂಕೇತಿಕವಾಗಿ ತಿಳಿಸುತ್ತಿದ್ದರು. ಕೆಲವರು ಪ್ರತಿವಾರವೂ ವಿಶ್ಲೇಷಣೆ ಮಾಡಿ ಟಿಪ್ಪಣಿ ಬರೆದು ಕಳಿಸುತ್ತಿದ್ದರು. ಈ ಎಲ್ಲ ಆತ್ಮೀಯರ ಹಾರೈಕೆಗಳು ನನ್ನ ಮನಸ್ಸನ್ನು ತುಂಬಿಕೊಂಡಿವೆ. ಈಗ ಧಾರಾವಾಹಿ ಕಾದಂಬರಿಯು ಪುಸ್ತಕರೂಪದಲ್ಲಿ ಮತ್ತಷ್ಟು ಓದುಗರ ಕೈಸೇರುತ್ತಿದೆ. ಇನ್ನು ನಿಮ್ಮದಾಗಿದೆ; ದಯವಿಟ್ಟು ನಿಮ್ಮದಾಗಿಸಿಕೊಳ್ಳಿ.

‍ಲೇಖಕರು Avadhi

December 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಸತೀಶ ಕುಲಕರ್ಣಿ ಹಾವೇರಿ ನೆಲದ ಮಾತುಗಳಿಗೊಂದು ವಿಚಿತ್ರ ರುಚಿ ಇದೆ. ಸಿಟ್ಟು ಸೆಡವು, ಗಡಸು ಗಿಚ್ಚಿ ಹೊಡೆಯುವ ಮೊನಚು ಇವುಗಳದ್ದು. ವ್ಯಂಗ್ಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This