’ನಾರಾಯಣ್ ರನ್ನು ನಾವು ಯಾಕೆ ನೆನಪಿಸಬೇಕು ಎಂದರೆ..’ – ಬಿ ಎಂ ಬಶೀರ್

ಆರ್ ಕೆ ನಾರಾಯಣ್ ಯಾಕೆ ಕನ್ನಡಿಗರಲ್ಲ? 

ಬಶೀರ್ ಬಿ ಎಮ್

ಕೃಪೆ :  ವಾರ್ತಾಭಾರತಿ

ಆರ್.ಕೆ.ನಾರಾಯಣ್ ಹಾಗೂ ಆರ್. ಕೆ. ಲಕ್ಷ್ಮಣ್ ಈ ಎರಡು ಹೆಸರುಗಳನ್ನು ದೇಶದಲ್ಲಿ ಅರಿಯದವರಿಲ್ಲ. ಒಬ್ಬರು ಸಾಹಿತ್ಯ ಕ್ಷೇತ್ರದ ಸಾಧಕರಾಗಿದ್ದರೆ, ಮಗದೊಬ್ಬರು ವ್ಯಂಗ್ಯಚಿತ್ರ ಕ್ಷೇತ್ರದ ಹಿರಿಯ ಸಾಧಕರಾಗಿದ್ದಾರೆ. ‘ಮಾಲ್ಗುಡಿ’ಯ ಕನಸುಗಾರ ಆರ್. ಕೆ. ನಾರಾಯಣ್‌ರಂತೂ ಒಬ್ಬ ಅಪರೂಪದ ಇಂಗ್ಲಿಷ್ ಕಾದಂಬರಿಕಾರ. ಅವರು ಬರೆದುದು ಇಂಗ್ಲಿಷ್‌ನಲ್ಲಾದರೂ, ಅವರು ಆಲೋಚಿಸಿದ್ದು ಪ್ರಾದೇಶಿಕವಾಗಿ. ಕರ್ನಾಟಕದ ಪಾಲಿಗೆ ಒಂದು ಹೆಮ್ಮೆಯೆಂದರೆ, ನಾರಾಯಣ್ ಕನ್ನಡಿಗರೂ ಹೌದು ಎನ್ನುವುದು. ಅವರ ತಾಯಿ ಬೇರು ತಮಿಳೇ ಆಗಿದ್ದರೂ, ಅವರನ್ನು ನಾವು ಕನ್ನಡಿಗರೆಂದೇ ಗುರುತಿಸುತ್ತೇವೆ. ಮೈಸೂರಿನ ಯಾದವಗಿರಿಯಲ್ಲಿ ಅವರ ಮನೆಯೂ ಇದ್ದು ಅದನ್ನು ಸಾರ್ವಜನಿಕ ಸ್ಮಾರಕ ಭವನವನ್ನಾಗಿ ಪರಿವರ್ತಿಸುವ ಉದ್ದೇಶವನ್ನು ಸರಕಾರ ಹೊಂದಿದೆ.ಕೆಲವು ಹಿರಿಯ ಸಾಹಿತಿಗಳು ಇದೀಗ ಕೆ. ಆರ್.ನಾರಾಯಣ್ ಕನ್ನಡಿಗರೇ ಅಲ್ಲ ಎಂದು ಸಾಧಿಸುವುದಕ್ಕೆ ಹೊರಟಿದ್ದಾರೆ. ಅದಕ್ಕೆ ಕಾರಣ ಸ್ಪಷ್ಟ. ಆರ್. ಕೆ. ನಾರಾಯಣ್ ಅವರ ಮನೆಯನ್ನು ನಮ್ಮ ಸರಕಾರ ಸುಮಾರು ಒಂದು ಕೋಟಿಗೂ ಅಧಿಕ ವೆಚ್ಚದಲ್ಲಿ ಸ್ಮಾರಕ ಭವನವನ್ನಾಗಿಸಲು ಹೊರಟಿದೆ. ಆರ್. ಕೆ. ನಾರಾಯಣ್ ಕನ್ನಡಿಗರಾಗಿರಲೇ ಇಲ್ಲ. ಕನ್ನಡಕ್ಕೆ ಅವರ ಕೊಡುಗೆಯೇನೇನೂ ಇಲ್ಲ. ಆದುದರಿಂದ ಕನ್ನಡ ತೆರಿಗೆದಾರನ ಹಣವನ್ನು ನಾರಾಯಣ್ ಅವರ ಸ್ಮಾರಕ ಭವನಕ್ಕೆ ವ್ಯಯಿಸಬಾರದು ಎನ್ನುವುದು ಈ ಹಿರಿಯ ಸಾಹಿತಿಗಳ ವಾದ. ಡಾ.ಡಿ.ಎ. ಶಂಕರ್, ಪ್ರೊ. ಜಿ. ವೆಂಕಟಸುಬ್ಬಯ್ಯ, ಚಿದಾನಂದ ಮೂರ್ತಿ, ಡಾ.ಜಿ.ಎಸ್.ಶಿವರುದ್ರಪ್ಪ, ಪ್ರೊ. ಸುಮತೀಂದ್ರ ನಾಡಿಗ್, ಡಾ.ಎಸ್.ಎಲ್.ಭೈರಪ್ಪ, ಪ್ರೊ.ಎಸ್. ಎಲ್.ಶೇಷಗಿರಿರಾವ್ ಮೊದಲಾದ ಹಿರಿಯರು ಈ ವಾದದ ನೇತೃತ್ವವನ್ನು ವಹಿಸಿರುವುದು ವಿಷಾದನೀಯ ಸಂಗತಿ. ಆರ್.ಕೆ.ನಾರಾಯಣ್ ಕನ್ನಡದಲ್ಲಿ ಬರೆದಿಲ್ಲ, ಅವರು ತಮಿಳಿನ ಕಂಬನ್ ರಾಮಾಯಣವನ್ನು ಇಂಗ್ಲಿಷ್‌ಗೆ ಅನುವಾದಿಸಿ ತಮಿಳು ಭಾಷೆ ಪ್ರಚಾರಕ್ಕೆ ನೆರವಾದರು ಎಂಬಿತ್ಯಾದಿ ಹೇಳಿಕೆಗಳು ಸಾಹಿತ್ಯೇತರವಾದುದು. ನಾರಾಯಣ ಯಾವ ರೀತಿಯಲ್ಲೆಲ್ಲ ಕನ್ನಡಿಗರಾಗುತ್ತಾರೆ ಎನ್ನುವ ಕಾರಣವನ್ನು ನಾವು ಹುಡುಕಿಕೊಂಡು ಅವರನ್ನು ಕನ್ನಡಿಗರಾಗಿಸಲು ಪ್ರಯತ್ನಿಸುವುದು ಬಿಟ್ಟು, ಅವರು ಯಾಕೆ ಕನ್ನಡಿಗರಲ್ಲ ಎನ್ನುವುದಕ್ಕೆ ಸಾಕ್ಷಗಳನ್ನು ಹುಡುಕುತ್ತಾ ಹೋಗುವುದು ಸಾಹಿತ್ಯಕ್ಕೆ ಮಾಡುವ ಅಪಚಾರವಾಗುತ್ತದೆ. ನಾರಾಯಣ್ ಅವರು ಬರೆದ ಮಾಲ್ಗುಡಿಯ ಕತೆಗಳು ಇಂಗ್ಲಿಷ್ ಭಾಷೆಯಲ್ಲಿರಬಹುದು. ಆದರೆ ಅವರು ಆ ಕತೆಗಳಲ್ಲಿ ಸೃಷ್ಟಿಸಿದ ಬದುಕು, ವಾತಾವರಣ ಅಪ್ಪಟ ಪ್ರಾದೇಶಿಕವಾದುದು. ಮಾಲ್ಗುಡಿ ಇಂದು ದೇಶಾದ್ಯಂತ ಜನಪ್ರಿಯವಾಗಿದ್ದರೆ ಅದಕ್ಕೆ ಕನ್ನಡದ ಖ್ಯಾತ ನಿರ್ದೇಶಕ ಶಂಕರ್‌ನಾಗ್ ಅವರು ಕಾರಣ ಎನ್ನುವುದನ್ನು ಈ ಸಂದರ್ಭದಲ್ಲಿ ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ.ಇಂದು ನಾರಾಯಣ್ ಯಾವ ಭಾಷೆಯಲ್ಲಿ ಬರೆದರು ಎನ್ನುವುದು ಮುಖ್ಯವಲ್ಲ. ಯಾವ ಭಾಷೆಯಲ್ಲಿ ಏನನ್ನು ಬರೆದರು ಎನ್ನುವುದು ನಮಗೆ ಮುಖ್ಯವಾಗಬೇಕು. ಒಬ್ಬ ಸಾಹಿತಿಯನ್ನು ಕೇವಲ ಭಾಷೆಯ ದೃಷ್ಟಿಯಿಂದ ನೋಡಿ ಅವನನ್ನು ಕಿರಿದುಗೊಳಿಸುವುದು, ಅವನು ‘ನಮ್ಮವನಲ್ಲ’ ಎಂದು ಹೇಳುವುದು ಸಾಹಿತ್ಯ ಮನಸ್ಸುಗಳಿಗೆ ತಕ್ಕುದಲ್ಲ. ಕಂಬನ್ ರಾಮಾಯಣವನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದು ಒಂದು ಅಪರಾಧವೆಂಬಂತೆ ಈ ಹಿರಿಯ ಸಾಹಿತಿಗಳು ಭಾವಿಸಿದ್ದಾರೆ.ಆ ಮೂಲಕ ಅವರು ತಮಿಳು ಪ್ರಚಾರಕ್ಕೆ ಸಹಾಯ ಮಾಡಿದರು ಎಂದು ಮತ್ತೆ ಸಂಕುಚಿತವಾದ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ. ಭಾರತೀಯ ಭಾಷೆಯೊಂದನ್ನು ಅದರಲ್ಲೂ ಕಂಬನ್ ರಾಮಾಯಣವನ್ನು ಇಂಗ್ಲಿಷ್‌ಗೆ ಮಾಡುವುದರಿಂದ ಪರೋಕ್ಷವಾಗಿ ದ್ರಾವಿಡ ಭಾಷೆಗಳಿಗೆ ಸಹಾಯವಾಗಿದೆ. ಅವರು ತಮಿಳು ಕೃತಿಯನ್ನೇ ಇಳಿಸಲಿ, ಕನ್ನಡ ಕೃತಿಯನ್ನೇ ಇಳಿಸಲಿ. ಅದನ್ನು ಕೇವಲ ನಾವು ಭಾಷೆಯ ಬೇಲಿಯೊಳಗಿಟ್ಟು ನೋಡುವುದು ತರವಲ್ಲ. ನಾರಾಯಣ್‌ರನ್ನು ನಾವು ಯಾಕೆ ನೆನಪಿಸಬೇಕು ಎಂದರೆ ಅವರು ಭಾರತೀಯ ಕತೆಗಾರರು, ಕಾದಂಬರಿಕಾರರು. ಅವರ ಇಂಗ್ಲಿಷ್ ಕುರಿತಂತೆ ಹಲವರು ಟೀಕೆ ಮಾಡಿದ್ದಾರೆ. ಆದರೆ ಅದರಲ್ಲಿ ಸಂಕುಚಿತತೆಯಿರಲಿಲ್ಲ. ಇಲ್ಲಿ, ನಾರಾಯಣ್‌ರನ್ನು ಭಾಷಾ ರಾಜಕೀಯಕ್ಕೆ ಬಲಿ ಮಾಡುವ ಪ್ರಯತ್ನ ನಡೆದಿದೆ. ನಾರಾಯಣ್ ಭಾರತೀಯ ಕಾದಂಬರಿಕಾರರೂ ಹೌದು, ತಮಿಳರೂ ಹೌದು. ಕನ್ನಡಿಗರೂ ಹೌದು. ಇಷ್ಟಕ್ಕೇ ಅವರ ಸ್ಮಾರಕ ಮಾಡಬಾರದು ಎನ್ನುವುದು ನಮ್ಮ ಸಣ್ಣತನವಾಗುತ್ತದೆ. ತಮಿಳಿನ ಅದೆಷ್ಟೋ ಲೇಖಕರು ಕನ್ನಡದ ಹಿರಿಯ ಸಾಹಿತಿಗಳಾಗಿ ಮೂಡಿ ಬಂದಿದ್ದಾರೆ. ಅದಕ್ಕಾಗಿ ಅವರನ್ನು ತಮಿಳರು ನಿಕೃಷ್ಟವಾಗಿ ನೋಡಬೇಕೆ? ಸಾಹಿತ್ಯವನ್ನು ಭಾಷಾರಾಜಕೀಯದ ಗಡಿಗಳಲ್ಲಿ ಬಂಧಿಸುವುದು ಮೊದಲ ತಪ್ಪು. ಕನ್ನಡಿಗ ನಾರಾಯಣ್ ವಿಷಯದಲ್ಲಂತೂ ಇದು ಅಕ್ಷಮ್ಯ. ಇನ್ನು ಅವರ ಮನೆಯನ್ನು ಸಾರ್ವಜನಿಕ ಸ್ಮಾರಕ ಭವನ ಮಾಡಬೇಕೋ ಬೇಡವೋ ಎನ್ನುವುದಕ್ಕೆ ಅವರು ಕನ್ನಡಿಗರು ಹೌದೋ ಅಲ್ಲವೋ ಎನ್ನುವುದು ಮಾನದಂಡವಾಗಬಾರದು. ಬದಲಿಗೆ ಈ ಚರ್ಚೆಯ ನೆಲೆಯನ್ನು ನಾವು ಬದಲಿಸಬೇಕು. ನಿಜಕ್ಕೂ ಈ ಸ್ಮಾರಕ ಭವನಗಳು ಒಬ್ಬ ಸಾಹಿತಿಯನ್ನು ನೆನಪಿಸಲು ಸಹಾಯವಾಗುತ್ತದೆಯೇ ಎಂಬ ಪ್ರಶ್ನೆಯ ಜೊತೆಗೆ ಇದನ್ನು ಚರ್ಚಿಸಬಹುದಾಗಿದೆ. ಈಗಾಗಲೇ ಇರುವ ಹತ್ತು ಹಲವು ಸ್ಮಾರಕಭವನಗಳು ಧೂಳು ತಿನ್ನುತ್ತಾ ಬಿದ್ದುಕೊಂಡಿವೆ. ಅವರ ಸಾಹಿತ್ಯ, ಆದರ್ಶ ಇತ್ಯಾದಿಗಳನ್ನು ಮೂಲೆಗುಂಪು ಮಾಡಿ ಅವರ ಮನೆಗಳನ್ನು ಸ್ಮಾರಕ ಭವನವಾಗಿ ಪರಿವರ್ತಿಸಿ, ಅದರಲ್ಲಿ ಅವರನ್ನು ಹುಡುಕಲು ಪ್ರಯತ್ನಿಸುತ್ತಿದ್ದೇವೆ. ನಾರಾಯಣ್ ಅವರ ಎಲ್ಲ ಸಾಹಿತ್ಯಗಳನ್ನು, ಬರಹಗಳನ್ನು ಕನ್ನಡಕ್ಕೆ ತರಲು ವಿನಿಯೋಗಿಸುವ ಮೂಲಕ ನಾರಾಯಣ್ ಅವರನ್ನು ನಾವು ಇನ್ನಷ್ಟು ಹತ್ತಿರವಾಗಿಸಬೇಕೇ ಹೊರತು, ಅವರ ಮನೆಯನ್ನು ಸ್ಮಾರಕಭವನವಾಗಿಸುವ ಮೂಲಕ ಅಲ್ಲ. ಹಾಗೆಯೇ ನಾರಾಯಣ್ ಅವರು ನಮಗೆ ಸಾಹಿತಿ ಹೇಗೆಯೋ, ಅವರ ಕುಟುಂಬಕ್ಕೆ ತಂದೆಯೂ ಹೌದು. ಅವರು ಬಿಟ್ಟು ಹೋದ ಮನೆಯನ್ನು ಪುಕ್ಕಟೆಯಾಗಿ ಬಿಟ್ಟುಕೊಡಬೇಕು ಎಂದು ಬಯಸುವುದೂ ತಪ್ಪು. ಸಾಹಿತಿಯೊಬ್ಬನ ಚಿಂತನೆ, ಆದರ್ಶ, ಬರಹಗಳನ್ನು ನಾವು ಅವರ ಮನೆ, ತೋಟ ಇತ್ಯಾದಿಗಳ ಜೊತೆಗೆ ತಳಕು ಹಾಕಿ ನೋಡುವುದನ್ನು ನಿಲ್ಲಿಸಿ, ಅದನ್ನು ಅವರ ಕುಟುಂಬಕ್ಕೆ ಒಪ್ಪಿಸುವುದೇ ಒಳಿತು. ಒಂದು ವೇಳೆ ಅದನ್ನು ಸ್ಮಾರಕ ಮಾಡುವುದೇ ಆಗಿದ್ದರೂ, ನ್ಯಾಯವಾದ ಬೆಲೆಯನ್ನು ಕೊಟ್ಟೇ ಕೊಂಡುಕೊಳ್ಳಬೇಕಾಗುತ್ತದೆ. ಒಟ್ಟಿನಲ್ಲಿ ಗಲ್ಲಿಗಲ್ಲಿಗಳಲ್ಲಿ ಸಾಹಿತಿಗಳ ಪ್ರತಿಮೆ, ಸ್ಮಾರಕಗಳಿಗೆ ಅವರ ಬರಹ ಚಿಂತನೆಗಳನ್ನು ಸೀಮಿತಗೊಳಿಸಿದರೆ, ಮುಂದೊಂದು ದಿನ ಆ ಸ್ಮಾರಕಗಳೇ ನಮಗೆ ಸಮಸ್ಯೆಯಾಗಿ ಪರಿಣಮಿಸುತ್ತದೆ. ಆದುದರಿಂದ, ನಿಜಕ್ಕೂ ನಾರಾಯಣ್‌ರನ್ನು ಕನ್ನಡದ ಆಸ್ತಿಯಾಗಿಸಬೇಕಾದರೆ ಸರಕಾರ, ಸ್ಮಾರಕಕ್ಕೆ ವ್ಯಯಿಸಬೇಕಾದ ಹಣವನ್ನು ನಾರಾಯಣ್ ಬರಹ, ಚಿಂತನೆಗಳಿಗೆ ಮೀಸಲಿರಿಸಲಿ.ಅವರೆಲ್ಲ ಪುಸ್ತಕಗಳು ಕನ್ನಡಕ್ಕೆ ಅನುವಾದಗೊಳ್ಳಲಿ ಮತ್ತು ಅದು ಕಡಿಮೆ ಬೆಲೆಯಲ್ಲಿ ಎಲ್ಲರಿಗೂ ದೊರಕುವಂತಾಗಲಿ. ಅದೇ ನಾವು ಭಾರತೀಯನೂ, ಕನ್ನಡಿಗನೂ ಆಗಿರುವ ನಾರಾಯಣ್‌ಗೆ ಸಲ್ಲಿಸುವ ಅತ್ಯುತ್ತಮ ಶ್ರದ್ಧಾಂಜಲಿ.]]>

‍ಲೇಖಕರು G

September 22, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

2 ಪ್ರತಿಕ್ರಿಯೆಗಳು

 1. varsa sagar

  when we will be able to stop such thing as RKN himself not bothered about memorials. what is his contribution to Karanataka culture? He “was” a good English writer at his time, that does not mean all time great. Any way we Kannadigas are more gracious to welcome others than our own people. Kannadigas are most tolerant people in the world. Log live Kannadigas!!!!

  ಪ್ರತಿಕ್ರಿಯೆ
  • Anonymous

   I am reading this very late. I also feel that he is not kannadiga. Even in his books he described Tamil culture only. It is Shankarnag who gave a kannada touch.

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: