ನಾಲ್ಕು ಮಾತಿಗೂ ಮಕ್ಕಳು ಹುಟ್ಟೋದಕ್ಕೂ ಏನು ಸಂಬಂಧ?

chetana3.jpg 

“ಭಾಮಿನಿ ಷಟ್ಪದಿ”

ಚೇತನಾ ತೀರ್ಥಹಳ್ಳಿ

ಮ್ಮನೆ ಮಲ್ಲಿಗೆ ಮಾಲೆ ನೇತುಬಿಟ್ಟ ಹೂ ಮಂಚ. ಗೋಡೆ ತುಂಬೆಲ್ಲ ಸೆಲ್ಲೋಟೇಪಲ್ಲಿ ಬಿಗಿದು ನಿಂತ ಕೆಂಪು ಗುಲಾಬಿಗಳು. ರೂಮಿನ ತುಂಬ ಪೋಲಿ ಪೋಲಿ ಸ್ಲೋಗನ್ ಹೊತ್ತ ಪೋಸ್ಟರುಗಳು. ಮಂಚದಡಿ ಎರಡು ಮೂರು ಅಲರಾಮ್ ಗಡಿಯಾರ. ಕಿಟಕಿ ಸಂದಿಯಲ್ಲಿ ಬಲೂನು. ಅಲ್ಲೆಲ್ಲೋ ಆಚೆ ಪಟಾಕಿಗಳ ದಾಂಧಲೆ…

ಅವನ ಪಟಾಲಮ್ಮು ಸಾಕಷ್ಟು ಮೆಹನತ್ತು ಮಾಡಿಯೇ ಕೋಣೆ ಸಿಂಗರಿಸಿತ್ತು. ಅವನಕ್ಕ, ತಂಗಿಯರು ಸುಮ್ಮಸುಮ್ಮನೆ ನಗುತ್ತ ನನ್ನನ್ನ ಅಲ್ಲಿ ಕೂರಿಸಿ, ಅಂವನ್ನೂ ಒಳ ದಬ್ಬಿ, ಬೀಡಾ ಬಾಯಿಗಿಡಿಸಿ ಫೋಟೋ ತೆಗೆದು ಹೋದರು.
ಅಂವ ಬಂದು ಕುಂತ. ಹೊರಗೆ ಗೆಳೆಯರು ಬೀರು ಕುಡಿದು ಮಸ್ತಿ ಏರಿ ಚೇರು ಮುರೀತಿದ್ದರೆ, ಇಂವ ಕೂತಲ್ಲೆ ಏನೋ ಕಳಕೊಂಡವರ ಹಾಗೆ ಚಡಪಡಿಸ್ತಿದ್ದ.

* * *

ನಾನು ಕಾಯುತ್ತಿದ್ದೆ.
ಎದೆ ತುಂಬ ಮಾತಿನ ನಕ್ಷತ್ರ ಹೊತ್ತು ಕುಳಿತಿದ್ದೆ. ಅಂವ, “ಈಚೆ ತಿರುಗೇ ಗೊಂಬೆ” ಅನ್ನಲಿ ಅಂತ ಕೆನ್ನೆ ಕೆಂಪು ಮಾಡ್ಕೊಂಡು ಕಾಯುತ್ತ ಕುಳಿತಿದ್ದೆ.

ಊಹೂಂ…
“ನಮಗೆ ಇಷ್ಟ್ ಬೇಗ ಮಕ್ಳು ಬೇಡ ಆಯ್ತಾ? ಆಮೇಲೆ ಫ್ರೆಂಡ್ಸ್ ಎಲ್ಲ ಛೇಡಿಸ್ತಾರೆ” ನಿರ್ಲಿಪ್ತವಾಗಿ ಹೇಳುತ್ತಲೇ ದಿಂಬು ಅವುಚಿ ಮಲಗಿಬಿಟ್ಟ. ಎದೆಯೊಳಗಿನ ಹಾಡೆಲ್ಲ ದಳದಳ ಕಣ್ಣೀರಾಗಿ ಹರಿದುಬಿತ್ತು.
ನಗುವಿನ ನಾಲ್ಕು ಮಾತಿಗೂ, ಮಕ್ಕಳು ಹುಟ್ಟೋದಕ್ಕೂ ಏನು ಸಂಬಂಧ? ಗೊತ್ತಾಗಲಿಲ್ಲ.
ರಾತ್ರಿಯೆಲ್ಲ ಅದನ್ನೆ ಯೋಚಿಸುತ್ತ ನಿದ್ದೆ ಬಿಟ್ಟೆ.

ಬೆಳಗಾಗೆದ್ದು ಮುಖ ನೋಡಿದ ನಾದಿನಿ, “ಹೋ…! ರಾತ್ರಿ ಇಡೀ ಗಮ್ಮತ್ತಾ?” ಅಂತೆಲ್ಲ ಏನೇನೋ ಚೇಷ್ಟೆ ಮಾಡಿ ರೇಗಿಸಿದಳು.

* * *

“ಅಂವ ಹೂವಂಥ ಹುಡುಗ. ಅವಳಿಗೆ ಒಂದೂ ಗಟ್ಟಿ ಮಾತಾಡೋಲ್ಲ ನೋಡು!” ಜನದ ಸರ್ಟಿಫಿಕೇಟು.
ಅಪ್ಪ ಅಮ್ಮ ಕೂಡ ಹೇಳಿದ್ದುಂಟು, “ಅಂವ ಕೋಲೆ ಬಸವನಂಥ ಹುಡುಗ. ಪಾಪ!”

ಒಳ್ಳೆ ಮನುಷ್ಯ!?
ನನ್ನ ಹತ್ತಿರ ಅವನ ಮಾತಿಲ್ಲ. ಇದ್ದರೂ ಅದು ಎದೆಗೆ ಹತ್ತಿರವಲ್ಲ.
ಹನಿಮೂನಿಗೆ ಗೆಳೆಯನ್ನ ಕರಕೊಂಡು ಬಂದವನ ಹತ್ತಿರ, ನನಗಾಗಿ ಮಾತಿಲ್ಲ.
ಕಾರಲ್ಲಿ ಸದಾ ನನಗೆ ಹಿಂದಿನ ಸೀಟು, ಅವನ ಮಾತಿಲ್ಲ.
ಸೋಫಾದಲ್ಲಿ ಪಕ್ಕ ಹೋಗಿ ಕುಂತರೆ ಮುಖ ತಿರುಗಿಸುವ, ಅವನ ಹತ್ತಿರ ಮಾತಿಲ್ಲ.
ಗೆಳೆಯರೊಟ್ಟಿಗೆ ಕುಂತು ಹರಟುವಾಗ ನಾ ಎದುರು ಬಂದರೆ, ಮತ್ತೆ…. ಮಾತಿಲ್ಲ!

ಯಾರೋ ಹೇಳಿದರು, “ಅವಂಗೆ ಹೆಂಡ್ತಿ ಅಂದ್ರೆ ಅದೆಷ್ಟು ಗೌರವ!?”

* * *

ಮದುವೆಯಾಗಿ ಐದನೇ ವರ್ಷ. ಮಕ್ಕಳಿಲ್ಲ.
ಮನೆ ಮಂದಿ `ಬರ ಬಿದ್ದವಳು’ ಅಂತ ಆಡಿಕೊಂಡರು. ಸಾಲದ್ದಕ್ಕೆ ನನ್ನ ಮನೆ ತುಂಬಿಸಿಕೊಂಡ ವರ್ಷವೇ ಅಡಿಕೆ ರೇಟು ತನ್ನ ಸಹಜ ನೆಲೆಗೆ ಬಂದಿತ್ತು. ಬಾಯಲ್ಲಿನ ಗುಟಖಾ ಸಿಡಿಸುತ್ತ ಸಾಹುಕಾರರು “ರೇಟು ಕುಸೀತು” ಅಂತ ವರಲಿಕೊಂಡರು.
ಅತ್ತೆ ಎದುರಾ ಎದುರಿಯೇ “ ಇವಳು ಕಾಲಿಟ್ಟಿದ್ದೇ ಹಿಂಗಾಯ್ತು, ದರಿದ್ರ ಲಕ್ಷ್ಮಿ!” ಅಂದಳು.

ಅಂವ ನೆಮ್ಮದಿಯಾಗಿ ಸಾಲದ ಮೇಲೆ ಸಾಲ ಮಾಡಿ ತುಪ್ಪ ಕುಡಿಯುತ್ತ ಉಳಿದುಬಿಟ್ಟ.

* * *

ಕೊಟ್ಟಿಗೆಯ ಗೌರಿ ಹಾಯಾಗಿ ಅಂಬಾ ಅಂದುಕೊಂಡು ಮಲಗಿದೆ. ತಿನ್ನುತ್ತ, ಕುಡಿಯುತ್ತ, ಹಾಲು ಸುರಿಸುತ್ತ.
ನಾನೂ ಹೊತ್ತು ಹೊತ್ತಿಗೆ ತಿನ್ನುತ್ತೇನೆ. ದರಿದ್ರಳಾಗುತ್ತ, ಬಂಜೆಯಾಗುತ್ತ… ಸುಮ್ಮನೆ ಬಿದ್ದಿದ್ದೇನೆ.
ಹೀಗೇ ಆಗೀಗ ಊರು ಮನೆಯಿಂದ ಊಟಕ್ಕೆ ಕರೆ ಬರುತ್ತೆ. ಆಗೆಲ್ಲ ಮನೆ ಮಂದಿ ಒತ್ತಾಯ ಮಾಡಿ ನನ್ನ ಹೊರಡಿಸ್ತಾರೆ. ಯಾರಯಾರದೋ ಸೀರೆ- ಒಡವೆ ತೊಟ್ಟು ನಾನೂ `ಚೆಂದ’ವಾಗುತ್ತೇನೆ.
ಹರಟೆಗೆ ಕುಂತ ಹೆಂಗಸರು ನನ್ನ `ಸುಖ’ಕ್ಕೆ ಕರುಬುತ್ತಾರೆ. ಕಣ್ಣಲ್ಲೇ ಅಳೆದು ಸುರಿದು “ಪುಣ್ಯವಂತೆ” ಅನ್ನುತ್ತಾರೆ.
“ಇವಳು  ಬರಡು ಗೊಡ್ಡಾದರೂ ಅಂವ ಎಷ್ಟು ಸುಮ್ಮನಿರ್ತಾನೆ… ಒಂದು ಗಟ್ಟಿ ಮಾತೂ ಇಲ್ಲ! ” ಲೊಚಗುಡುತ್ತಾರೆ.

ಬಿಡಿ. ಈಗ ನನಗೂ,
ಮಾತು ಮರೆತು ಹೋಗಿದೆ.

‍ಲೇಖಕರು avadhi

February 8, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚೇತನಾ ಎಂಬ ‘ಗಾನಾ ಜೋಯ್ಸ್

ಚೇತನಾ ಎಂಬ ‘ಗಾನಾ ಜೋಯ್ಸ್

' ಕನಸುಗಾರ ವೆಂಕಟ್ರಮಣ ಗೌಡರು 'ಹಂಗಾಮ' ಆರಂಭಿಸಿದಾಗ ಮೂಡಿ ಬಂದ ವಿಶಿಷ್ಟ ಲೇಖಕಿ ಗಾನಾ ಜೋಯ್ಸ್. ಈಗ ಈಕೆ ಚೇತನಾ ತೀರ್ಥಹಳ್ಳಿ. ಈಗಾಗಲೇ...

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಹಳೆಯ ನೆನಪು ಮತ್ತು ಒಂದು ಹೊಸ ಪುಸ್ತಕ ಈಗ ಅದೆಲ್ಲ ಮಜಾ ಅನಿಸತ್ತೆ. ನಾನು ಒಂದನೇ ಕ್ಲಾಸಿಂದ ಫಸ್ಟ್ ಬಿಎಸ್ಸಿ ವರೆಗೂ ಒಂದೇ ಒಂದು ನೋಟ್ಸೂ...

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

-ನಟರಾಜ್ ಹುಳಿಯಾರ್ 'ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡಿ'ನ ಸ್ಥಿತಿಯನ್ನು ನಿಷ್ಠುರ ಸ್ತ್ರೀವಾದಿ ದೃಷ್ಟಿಕೋನದಿಂದ ಗ್ರಹಿಸಿ ಚೇತನಾ...

6 ಪ್ರತಿಕ್ರಿಯೆಗಳು

 1. uniquesupri

  ಇದು ಭಾಮಿನಿಯ ಷಟ್ಪದಿ. ಇಲ್ಲಿ ಪುರುಷ ಪುಂಗವರ ಚೌಪದಿಯನ್ನೂ ಸೇರಿಸುವುದಾದರೆ ಒಂದು ಮಾತು.
  ಹೆಣ್ಣಿಗೆ ಬಂಜೆ ಎಂದು ಹೆಸರು ಕೊಟ್ಟು ಸಮಾಜ ನೋಡುವಾಗ ಅದರ ಕಣ್ಣಲ್ಲಿರುವ ಸ್ವಲ್ಪ ಗೇಲಿ, ಹೆಚ್ಚು ಕನಿಕರ ಗಂಡಸನ್ನು ‘ನಾಮರ್ದ’ ಎಂದು ಕರೆಯುವಾಗ ಬದಲಾಗುತ್ತದೆ. ಅಲ್ಲಿ ಕನಿಕರಕ್ಕೆ ಜಾಗವೇ ಇರುವುದಿಲ್ಲ. ಸಮಾಜ ಕಣ್ಣ ತುಂಬ ಗೇಲಿ ಥಕಥೈ ಅಂತ ಕುಣಿಯುತ್ತಿರುತ್ತದೆ. ಬಂಜೆ ಎನ್ನಿಸಿಕೊಂಡ ಹೆಣ್ಣಿಗಿಂತ ನಪುಂಸಕ ಎನ್ನಿಸಿಕೊಂಡ ಗಂಡು ಮಾನಸಿಕವಾಗಿ ತುಂಬಾ ಕುಗ್ಗಿ ಹೋಗುತ್ತಾನೆ. ಗಂಡಿಗೆ ಸಮಾಜದಲ್ಲಿ ‘ಅದೇ’ ಗೌರವದ ಸ್ಥಾನವನ್ನು ಕೊಟ್ಟಿರುವಾಗ ಅದನ್ನೇ ಆತ ಕಳೆದುಕೊಂಡರೆ ಅವನ ಅಸ್ತಿತ್ವವೇ ಇಲ್ಲದ ಹಾಗಾಗುತ್ತದೆ.ಅದರಿಂದ ಗಂಡಸನ್ನು ಪಾರುಮಾಡಲು ಹೆಣ್ಣು ಈ ರೀತಿಯ ತ್ಯಾಗಕ್ಕೆ ಸಿದ್ಧಳಾಗುತ್ತಾಳೆನೋ…

  ಪ್ರತಿಕ್ರಿಯೆ
 2. chetanachaitanya

  haudu Supreet, Gandu sOlu sahisalAra. adakkE Ata heNNannu Dominate mADalu yatnisOdu.

  – Chetana.

  ಪ್ರತಿಕ್ರಿಯೆ
 3. navada

  ಚೇತನಾ ಅವರೇ,
  ಐದು ಸನ್ನಿವೇಶಗಳಲ್ಲಿ ಕಟ್ಟಿಕೊಡುವ ಚಿತ್ರಣ ಚೆನ್ನಾಗಿದೆ. ಹೆಣ್ಣು ಪ್ರತಿ ಬಾರಿ ಸೋಲಬೇಕೆಂದು ಯಾಕೆ ಗಂಡು ಬಯಸುತ್ತಾನೋ? ಅದೂ ಪ್ರಿಶ್ರಮ್ವಿಲ್ಲದೇ
  ನಾವಡ

  ಪ್ರತಿಕ್ರಿಯೆ
 4. Mayura

  Dear Chetana

  Excellent story. I know a instance where this has actually happened.

  Keep the good stories coming every week.

  With warm regards,

  Mayura

  ಪ್ರತಿಕ್ರಿಯೆ
 5. ನಾ.ಸೋಮೇಶ್ವರ

  ಮಾತು ಮರೆತು ಕುಳಿತದ್ದು ಅವಳದ್ದೆ ತಪ್ಪು. ತಪ್ಪನ್ನು ಸರಿಪಡಿಸುವ ಬಗ್ಗೆ ಅವಳು
  ಯಾಕೆ ಯೋಚಿಸಲಿಲ್ಲ?

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: