ನಾಲ್ಕು ಸಲ ಕೇಳಿದ ಒಂದು ಕಥೆ

ಯಶಸ್ವಿನಿ

ನನ್ನಜ್ಜಿ ನನಗೊಂದು ಕಥೆ ಹೇಳಿದ್ದಳು. ಆ ಕಥೆಯನ್ನ ಅವಳು ನನಗೆ ಒಟ್ಟು ನಾಲ್ಕು ಬಾರಿ ಹೇಳಿದ್ದಳು. ಅದ್ಹೇಗೆ ಅಷ್ಟು ನಿಖರವಾಗಿ ಹೇಳ್ತಿ ಅಂತ ನೀವು ಕೇಳೇ ಕೇಳ್ತೀರಿ ಅಂತ ಗೊತ್ತು. ಚತುರ್ಯುಗ, ಚತುರಾಶ್ರಮ, ಚತುವರ್ಣ ಇತ್ಯಾದಿಗಳಿಗೆಲ್ಲ ಇರುವಂತೆ, ನಾಲ್ಕು ಸಲ ಕಥೆ ಹೇಳಿದ್ದಕ್ಕೇನಾದರೂ ವಿಶೇಷ ಅರ್ಥ ಇದೆಯ? ಅನ್ನುವ ಗೊಂದಲವೂ ಜಾಣರಾದ ನಿಮ್ಮ ತಲೆಯಲ್ಲಿ ಹುಟ್ಟಬಹದು. ಅದಕ್ಕೆಲ್ಲ ಉತ್ತರವಾಗಿಯೇ ನಾನು ಈ ಕಥೆ ಹೇಳ ಹೊರಟದ್ದು.

ನನ್ನಜ್ಜಿ ದೊಡ್ಡ ಕಥೆಗಾರ್ತಿಯೇನಲ್ಲ, ಹಾಗೆ ನೋಡಿದರೆ ಅವಳು ಕಥೆಗಾರ್ತಿಯೇ ಅಲ್ಲ! ಅವಳು ಮಾತಾಡುವುದೇ ಕಡಿಮೆ. ಕಥೆಗಳೇ ಗೊತ್ತಿರದ ಅವಳೊಬ್ಬಳು ದಡ್ಡ ಅಜ್ಜಿ.. ಅಂತ ಅವಳ ಇತರ ಮೊಮ್ಮಕ್ಕಳೆಲ್ಲಾ ತೀರ್ಮಾನಿಸಿದ್ದರು. ಅಂತಾದ್ರಲ್ಲಿ ಅವಳು ನನಗೆ ಒಂದು ಕಥೆ ಹೇಳಿದ್ದೇ ವಿಶೇಷ! ಒಂದು ಕಥೆಯನ್ನ ನಾಲ್ಕು ಸಲ ಹೇಳಿದ್ದು ಮತ್ತೂ ವಿಶೇಷ!

ನಾಲ್ಕು ಸಲ ಅಜ್ಜಿಯ ಬಾಯಿಂದ ಆ ಕಥೆ ಕೇಳಿದ್ದೆ ಅಂತ ಹೇಳಿದೆನಲ್ಲ- ಪ್ರತಿ ಸಲ ಕೇಳಿದಾಗಲೂ ಆ ಕಥೆಯ ಬಗ್ಗೆ ಹೊಸ ಹೊಳಹು ಸಿಕ್ಕಿದೆ, ಹೊಸ ತಲೆನೋವು ಹುಟ್ಟಿದೆ, ಕಥೆಯ ಹೊಸ ಆಯಾಮ ಕಂಡಿದೆ. ಹಿಂದೆಯೇ ಇದೇಕೆ ನನಗೆ ಗೊತ್ತಾಗಲಿಲ್ಲ! ನನಗೆ ಗೊತ್ತಾಗಿಲ್ಲವೊ ಅಥವಾ ಅಜ್ಜಿಯೇ ಹೇಳಲು ಮರೆತಿದ್ದಳೋ?? ಅನ್ನುವ ಗೊಂದಲವೂ ಹುಟ್ಟಿದೆ. ಆ ಕಥೆ ಕೇಳುತ್ತಾ ನಾನು ಬೆಳೆದಂತೆ ಕಥೆಯೂ ನನ್ನೊಳಗೆ ಬೆಳೆದು ಬಂದಿದೆ.

ಅಜ್ಜಿ ಮೊದಲ ಬಾರಿಗೆ ಆ ಕಥೆ ಹೇಳಿದಾಗ ನನಗೆ ಐದೋ ಆರೋ ವಯಸ್ಸಿರಬೇಕು. ಕಥೆ ಯಾವುದು ನಿಜ ಅನ್ನುವುದು ಗೊತ್ತಿರದ ವಯಸ್ಸದು!

ಅಜ್ಜಿಗೆ ಆಗ ಹತ್ತು ವರ್ಷ ವಯಸ್ಸಂತೆ. ಹತ್ತು ವರ್ಷ ಅಂದರೆ ಈಗಿನ ಕಾಲದ ಹಾಗೆ ಆಟ ಆಡುವ ವಯಸ್ಸಲ್ಲ, ಇಡೀ ದಿನ ಕೆಲಸ ಮಾಡ್ತಾ ಇರಬೇಕಿತ್ತಂತೆ. ಅವಳ ಮನೆಯ ಪಕ್ಕ ಜಾಜಿ ಎಂಬ ಹೆಸರಿನ ಹೆಂಗಸಿದ್ದಳಂತೆ. ಒಂದು ರಾತ್ರಿ, ಎಲ್ಲರೂ ಮಲಗಿರುವಾಗ ಒಂದು ರಾಕ್ಷಸ ಹುಲಿ ಬಂದು ಅವಳನ್ನ ಎಳೆದುಕೊಂಡು ಹೋಯ್ತಂತೆ!

ಚಿಕ್ಕ ಮಕ್ಕಳಿಗೆ ಹೇಳುವ ಕಥೆಯೇ ಇದು? ಬೆಕ್ಕು ಕಂಡರೂ ಹೆದರುವವಳು ನಾನು- ಹುಲಿಯ ಸುದ್ದಿ ಎತ್ತಿದರೆ ಉಸಿರೇ ನಿಂತು ಹೋಗಲಿಕ್ಕಿಲ್ಲವೆ? ಅಷ್ಟೆಲ್ಲಾ ಸೈಕಾಲಜಿ ನನ್ನಜ್ಜಿಗೆ ಹೇಗೆ ಗೊತ್ತಾಗಬೇಕು? ಅಜ್ಜಿಯಂತೂ ಆ ಹುಲಿಯನ್ನ, ಕೋರೆ ಹಲ್ಲಿನ, ಚೂಪು ಉಗುರುಗಳ, ಕೆಂಡಗಣ್ಣಿನ ಆ ಹುಲಿಯನ್ನ ಹೇಗೆ ವರ್ಣಿಸಿದ್ದಳೆಂದರೆ ಮುಂದಿನ ಮೂರು ವಾರ ನನಗೆ ನಿದ್ದೆಯಿಲ್ಲ. ಕಣ್ಣು ಮುಚ್ಚಿದರೆ ಯಕ್ಷಗಾನದ ರಾಕ್ಷಸನ ಹಾಗೆ ಹುಲಿ ಶಾಲು ಬೀಸುತ್ತಾ, ನಿಧಾನ ಗತಿಯ ಹೆಜ್ಜೆಗಳನ್ನಿಡುತ್ತಾ ಬೊಬ್ಬೆ ಹೊಡೆಯುತ್ತಾ ಬರುತ್ತಿತ್ತು. ಮಂಚದಲ್ಲಿ ಮಲಗಿದ್ದ ನನ್ನನ್ನ ಎಳೆದುಕೊಂಡು ಕಾಡಿಗೆ ಹೋಗುತ್ತಿತ್ತು. ಜಾಜಿಯ ಹೆಣದ ಪಕ್ಕ ನನ್ನನ್ನ ಹಾಕಿ ಹುಚ್ಚೆದ್ದು ನಗುತ್ತಿತ್ತು.

ಒಂದೆರಡು ತಿಂಗಳಲ್ಲಿ ಆ ಕಥೆ ನನಗೆ ಮರೆತು ಹೋಯ್ತು. ಮುಂದೆ ಬಹಳ ವರ್ಷಗಳ ನಂತರ ಅಜ್ಜಿ ಮತ್ತೆ ಆ ಕಥೆ ಹೇಳಿದಾಗ ನನಗೆ ಹನ್ನೆರಡು ವರ್ಷ. ಆದಿತ್ಯವಾರ, ಮಳೆಗಾಲದ ಸಂಜೆ, ಶಾಲೆಯ ಕೆಲಸಗಳನೆಲ್ಲಾ ಬೆಳಗ್ಗೆಯೇ ಮಾಡಿ ಮುಗಿಸಿದ್ದೆ. ಕರೆಂಟ್ ಹೋದ ಕಾರಣ ಟಿವಿ ಗೆ ಕೆಲಸ ಇರಲಿಲ್ಲ. ಮಾತನಾಡಲು ಬೇರೇನೂ ವಿಷಯ ಇಲ್ಲ ಅಂತಂದಾಗ, ಜಾಜಿಯ ಕಥೆ ಗೊತ್ತ ನಿನಗೆ? ಅಂತ ನನ್ನ ಉತ್ತರಕ್ಕೂ ಕಾಯದೆ ಅಜ್ಜಿ ಕಥೆ ಶುರು ಮಾಡಿದಳು.

ಕಥೆಯ ಹುಲಿ ಹಳತಾಗಿತ್ತು. ಟಿವಿ ಆನ್ ಮಾಡಿದರೆ ಆ ಹುಲಿಯ ಅಪ್ಪನಂತದ್ದು ಕಾಣ ಸಿಗುತ್ತದೆ, ಹುಲಿಗಿಂತಲೂ ಭೀಕರವಾದ, ಹುಲಿಯ ರೂಪದ ರಾಕ್ಷಸರು ಎಷ್ಟೋ ಸಿನೆಮಾಗಳಲ್ಲಿ ಬರುತ್ತಾರೆ! ಅಜ್ಜಿಯ ಹುಲಿಯ ವರ್ಣನೆ ಅಷ್ಟೊಂದು ಪರಿಣಾಮ ಬೀರಲಿಲ್ಲ ನನ್ನ ಮೇಲೆ! ಅದರಿಂದ ಉಪಕಾರವೇ ಆಯ್ತು ಅನ್ನಿ, ಎಲ್ಲರನ್ನೂ ಬಿಟ್ಟು ಜಾಜಿಯನ್ನೇ ಹುಲಿ ಹಿಡಿಯಲು ಕಾರಣವೇನು ಅನ್ನೋದರ ಕಡೆ ಗಮನ ಕೊಡಲು ಸಾಧ್ಯವಾಯಿತು ನನಗೆ.

ಬೊಂಬಾಯಿಯಿಂದ ಯಾರೋ ಮಾವಯ್ಯ ಬಂದಿದ್ದರಂತೆ ಜಾಜಿಯ ಮನೆಗೆ. ಆಗೆಲ್ಲ ಬೊಂಬಾಯಿ ಅಂದರೆ ಭೂಲೋಕದ ಸ್ವರ್ಗ, ಅಲ್ಲಿಂದ ಬರುವವರು ದೇವರಾಗಿರದೆ ಮತ್ತಿನ್ಯಾರಾಗಲು ಸಾಧ್ಯ?? ಮಾವಯ್ಯ ಬಗೆಬಗೆಯ ತಿಂಡಿ ತಂದಿದ್ದರಂತೆ. ಜಾಜಿ ಮಿಠಾಯಿಯೊಂದನ್ನ ಬಟ್ಟೆಯಲ್ಲಿ ಕಟ್ಟಿ ಹಿತ್ತಲ ಮಾಡಿನ ಮೂಲೆಯಲ್ಲಿ ತೆಗೆದಿಟ್ಟಳಂತೆ. ರಾತ್ರಿ ಎಲ್ಲರೂ ಮಲಗಿದ ಮೇಲೆ ಮಿಠಾಯಿ ತಿನ್ನಲು ಹಿತ್ತಲಿಗೆ ಹೋದವಳನ್ನ ಹುಲಿ ಹಿಡಿಯಿತಂತೆ. ಜಾಜಿಯ ಪೆದ್ದುತನಕ್ಕೆ ನಗು ಬಂತು ನನಗೆ. ಈ ಜಾಜಿಗೆ ಮಿಠಾಯಿ ಅಡಗಿಸಿಡಲು ಬೇರೆ ಜಾಗವೇ ಇರಲಿಲ್ಲವೆ! ಹಿತ್ತಲಿನ ಮಾಡಿನ ಮೂಲೆಯಲ್ಲಿ ಬಟ್ಟೆಯಲ್ಲಿ ಕಟ್ಟಿ ಅಡಗಿಸಿಟ್ಟಳಂತೆ!

ಮನೆಯ ಹೊರಗೆ ಮಿಠಾಯಿ ಅಡಗಿಸಿಟ್ಟು ರಾತ್ರಿ ಹೊರಗೆ ಹೋಗಿ ಯಾರಿಗೂ ತಿಳಿಯದ ಹಾಗೆ ಅದನ್ನ ತಿನ್ನುವುದಂತೆ. ಮನೆಯ ಒಳಗೆ ಯಾವ ರಹಸ್ಯ ತಾಣವೂ ಸಿಗಲಿಲ್ಲವೆ ಅವಳಿಗೆ? ಅಡುಗೆ ಮನೆಯ ಡಬ್ಬಿಗಳಲ್ಲಿ, ಬಟ್ಟೆ ಮಡಚಿಡುವ ಬುಟ್ಟಿಗಳಲ್ಲಿ, ಕನ್ನಡಿಯ ಮೂಲೆಯಲ್ಲಿ, ಪಿನ್ನು ಬಳೆ ಇಡುವ ಪೆಟ್ಟಿಗೆಗಳಲ್ಲಿ, ಮನೆ ಅಂದರೆ ಎಷ್ಟು ಮೂಲೆಗಳಿರುತ್ತವೆ ಅಡಗಿಸಿಡಲು! ನಾನಾಗಿರುತ್ತಿದ್ದರೆ, ಟವೆಲ್ಲಿನಲ್ಲಿ ಕಟ್ಟಿ, ಒಗೆದು ಮಡಚಿಟ್ಟ ಯೂನಿಫಾರ್ಮ್ನ ಕಿಸೆಯಲ್ಲಿಡುತ್ತಿದ್ದೆ, ಶಾಲೆಗೆ ಹೋಗುವ ದಾರಿಯಲ್ಲಿ ಯಾರಿಗೂ ಗೊತ್ತಾದ ಹಾಗೆ ತಿನ್ನುತ್ತಿದ್ದೆ. ದಡ್ಡಿ ಜಾಜಿ!

ಈ ದಡ್ಡಿ ಜಾಜಿಯೇನು ನನ್ನ ಮನೆಯವಳೆ, ಪ್ರತಿದಿನವೂ ಮೂರೂ ಹೊತ್ತು ನಾನು ಅವಳನ್ನ ನೆನಪಿಟ್ಟುಕೊಳ್ಳಲು? ನಾನವಳನ್ನ ಮರೆತು ಬಿಟ್ಟೆ!

ಎಂಟು ವರ್ಷಗಳಾದ ಮೇಲೆ ನಾನು ಡಿಗ್ರಿ ಮುಗಿಸಿ, ಕೆಲಸ ಇಲ್ಲದ ಚಿಂತೆಯಲ್ಲಿ ಮನೆಯಲ್ಲಿ ಬಿದ್ದುಕೊಂಡಿದ್ದಾಗ, ಒಂದು ಸಂಜೆ.. ಹಿಂದೆ ಒಬ್ಬಳು ಜಾಜಿ ಅಂತ ಇದ್ದಳು ಮಾರಾಯ್ತಿ.. ಅಂತ ಅಜ್ಜಿ ಮತ್ತೆ ಶುರು ಮಾಡಿದಳು ಕಥೆಯನ್ನ. ನನ್ನ ತಲೆಬಿಸಿಯೇ ಹೆಚ್ಚಾಗಿತ್ತು ನನಗೆ ಆಗ, ಅವಳ ಕಥೆ ಕೇಳುವ ಆಸಕ್ತಿಯಿಲ್ಲದಿದ್ದರೂ, ಬಹುಕಾಲ ಮೌನವಾಗಿರುವ ಅವಳನ್ನು ತಡೆಯುವ ಧೈರ್ಯ ಸಾಲದೆ ಅವಳ ಕಥೆ ಕೇಳುತ್ತಾ ಕೂತೆ.

ಹುಲಿ ಮತ್ತು ಮಿಠಾಯಿಯನ್ನ ಬಿಟ್ಟು ಕಥೆಯಲ್ಲಿ ಇನ್ನೂ ಬೇರೆ ಸಂಗತಿಗಳಿವೆ ಅಂತ ನನಗೆ ಗೊತ್ತಾದದ್ದು ಆಗ. ಈ ಜಾಜಿ ಮೊದಲಿನಿಂದಲೂ ಹಾಗೆಯೇ, ತಿನ್ನೋದು ಅಂದ್ರೆ ಆಸೆ ಹೆಚ್ಚು. ತವರು ಮನೆಯಲ್ಲಿ ಬಡತನ ಇದ್ದರೂ ಒಬ್ಬಳೇ ಮಗಳಾದದ್ದರಿಂದ ತಿನ್ನೋದಕ್ಕೇನೂ ಕಡಿಮೆ ಮಾಡಿರಲಿಲ್ಲ. ಮೂರು ಹೊತ್ತು ಕುಟುಂ ಕುಟುಂ ಅಂತ ಏನಾದರೂ ಜಗಿಯುತ್ತಲೇ ಇದ್ದಳು. ದೊಡ್ಡ ಸಂಸಾರದ ಮನೆಗೆ ಸೊಸೆಯಾಗಿ ಬಂದಾಗ ಎಲ್ಲ ಬದಲಾಯಿತು.

ಮನೆ ತುಂಬಾ ಜನ, ಅತ್ತೆಯೋ ತಾಟಕಿ, ದೋಸೆ ಹುಯ್ಯುವಾಗಲೂ ಸೊಸೆ ಚೂರು ಪಾರು ತಿನ್ನುತ್ತಾಳೇನೋ ಅಂತ ಕಾವಲು ಕಾಯುತ್ತಿದ್ದಳು. ಅತ್ತೆಯ ಕಣ್ಣು ತಪ್ಪಿಸಿ ಏನನ್ನೂ ತಿನ್ನುವ ಹಾಗಿಲ್ಲ, ಮಧ್ಯಾಹ್ನವೂ ಎಲ್ಲರೂ ಉಂಡಾದ ಮೇಲೆ ಜಾಜಿಯ ಊಟ! ಹಪ್ಪಳವೋ ಶೆಂಡಿಗೆಯೋ ಕಾಯಿಸಿದರೆ ಜಾಜಿ ಉಣ್ಣುವವರೆಗೆ ಅವು ಉಳಿಯುವ ಭರವಸೆಯಿಲ್ಲ! ಪಾಪದ ಜಾಜಿ, ಕೋಣೆಯ ಕಡೆಗೆ ಹೋಗುವಾಗ ಸೆರಗಿನ ಗಂಟಲ್ಲೇನಾದರೂ ತಿಂಡಿ ಇಟ್ಟಿದ್ದಾಳೆಯೆ ಅಂತ ಅತ್ತೆ ಕಣ್ಣಲ್ಲೇ ಅಂದಾಜು ಮಾಡುತ್ತಿದ್ದಳು. ಅದಕ್ಕೆ ಜಾಜಿ ಒಂದು ಉಪಾಯ ಹೂಡಿದಳು.

ಅತ್ತೆಯ ಕಣ್ತಪ್ಪಿಸಿ ಏನಾದರೂ ತಿಂಡಿಯನ್ನ ಬಟ್ಟೆಯ ತುಂಡಲ್ಲಿ ಕಟ್ಟಿ ಬಚ್ಚಲಿಗೆ ಹೋಗುವಾಗ ಹಿತ್ತಲ ಮಾಡಿನಲ್ಲಿ ಅಡಗಿಸಿಡುತ್ತಿದ್ದಳು. ಅದೊಂದು ಚಾಳಿಯಾಗಿ ಬಿಟ್ಟಿತ್ತು ಅವಳಿಗೆ. ಒಂದರ್ಧ ದೋಸೆಯೋ ಇಡ್ಲಿಯೋ, ಬೇಯಿಸಿದ ಗೆಣಸಿನ ತುಂಡೋ, ಅವಳು ತಿಂಡಿ ತೆಗೆದಿಡದ ದಿನವೇ ಇಲ್ಲ ಅಂತಾಯ್ತು ಆಮೇಲೆ. ಆ ದಿನವೂ ಹಾಗೆಯೇ ಆಯ್ತು, ಬೊಂಬಾಯಿಯಿಂದ ಮಾವಯ್ಯ ಬಂದಾಗ ಎಲ್ಲರಿಗಿಂತಲೂ ಹೆಚ್ಚು ಖುಷಿ ಪಟ್ಟವಳು ಜಾಜಿಯೆ! ಮಾವಯ್ಯ ಬಂದರೆ ತರತರದ ತಿಂಡಿ ತರುವುದು ಗ್ಯಾರಂಟಿ. ಆ ದಿನವೂ ಚಾತುರ‍್ಯದಿಂದ ಮಿಠಾಯಿಯನ್ನ ಅಡಗಿಸಿಟ್ಟಿದ್ದಳು. ಆಯುಷ್ಯ ಮುಗಿದಿತ್ತು ಅಂತ ತೋರುತ್ತದೆ, ಆ ರಾತ್ರಿ ಹುಲಿಯ ಬಾಯಿಗೆ ಬಿದ್ದಳು. ಜಾಜಿ ಮಿಠಾಯಿಯನ್ನ ಹಿತ್ತಲ ಮಾಡಿನ ಬಳಿ ಯಾಕೆ ಅಡಗಿಸಿಟ್ಟಳು ಅನ್ನುವ ಪ್ರಶ್ನಗೆ ಅಂದು ಉತ್ತರ ಸಿಕ್ಕಿತು.

ಜಾಜಿಯ ಮೇಲೆ ಸಿಟ್ಟು ಬಂತು ನನಗೆ. ಈ ಜಾಜಿಗೆ ಮೂರು ಮಕ್ಕಳಂತೆ, ಆ ಮಕ್ಕಳಿಗೆ ಕೊಡೋದನ್ನ ಬಚ್ಚಿಟ್ಟು ತಿನ್ನಲು ಹೇಗೆ ಮನಸ್ಸು ಬಂತು ಈ ಜಾಜಿಗೆ! ಏನು ಮಿಠಾಯಿಯನ್ನ ನೋಡೇ ಇಲ್ಲವೆ ಇವಳು! ಎಂತಹಾ ಹೊಟ್ಟೆಬಾಕಿ ಇರಬೇಕು. ಇವಳ ನಾಲಗೆ ರುಚಿ ಬಹಳ ಕೆಟ್ಟದ್ದು! ಕದ್ದು ತಿನ್ನುವ ಬುದ್ಧಿಯಿಲ್ಲದಿದ್ದರೆ ನೂರು ಕಾಲ ಸುಖವಾಗಿ ಬಾಳುತ್ತಿದ್ದಳೇನೊ!

ಆದರೆ ನನ್ನನ್ನ ಚಿಂತೆಗೀಡು ಮಾಡಿದ ಸಂಗತಿ ಬೇರೊಂದಿದೆ. ಕೆಲವು ಕಥೆಗಳನ್ನ ಕೇಳುವಾಗ ಎಲ್ಲೋ ಹೇಗೋ ನಾವೂ ಆ ಕಥೆಯ ಭಾಗವೇನೋ ಅಂತನಿಸಲು ಶುರುವಾಗುತ್ತದೆ, ನಾವು ಆ ಕಥೆಯಲ್ಲಿ ಪಾತ್ರವಾಗಿ ಇದ್ದೇವೆಯೋ ಇಲ್ಲವೋ ಅನ್ನೋದಕ್ಕಿಂತಲೂ, ನಮಗೇ ಗೊತ್ತಿಲ್ಲದ ಹಾಗೆ ಆ ಕಥೆಯ ಲಯದ ಮೇಲೆ ನಾವೇನೋ ಪ್ರಭಾವ ಬೀರುತ್ತಿದ್ದೇವೆನೋ ಅಂತನಿಸತೊಡಗುತ್ತದೆ. ಜಾಜಿಯ ಕಥೆ ನನಗರಿಯದೆ ನನ್ನೊಳಗೇ ಇತ್ತು, ಈ ಅಜ್ಜಿ ಅದನ್ನ ನೆನಪಿಸಿದಳಷ್ಟೇ ಅನ್ನುವ ವಿಚಿತ್ರ ಭಾವನೆ ನನ್ನಲ್ಲಿ ಹುಟ್ಟತೊಡಗಿತ್ತು. ಬಯಸಿಯೋ ಬಯಸದೆಯೋ ಕಥೆಯ ಮೇಲೊಂದು ವಿಶೇಷ ಅಧಿಕಾರ ನನಗೆ ಪ್ರಾಪ್ತವಾದಂತಿತ್ತು. ಕಥೆಯ ಬಗ್ಗೆ ಹೆಚ್ಚು ಹೆಚ್ಚು ಯೋಚಿಸಿದಂತೆಲ್ಲ ಅಜ್ಜಿ ಹೇಳಿದ್ದು, ಮತ್ತು ನಾನೇ ಕಲ್ಪಿಸಿಕೊಂಡದ್ದರ ನಡುವೆ ಗೆರೆ ಎಳೆಯೋದು ಕಷ್ಟವಾಯಿತು.

ಕೆಲಸವಿಲ್ಲದೆ ಮನೆಯಲ್ಲಿ ಬಿದ್ದುಕೊಂಡ ಕಾರಣವೂ ಇರಬಹುದು. ಕಾಲೇಜು, ಅಟೆಂಡೆನ್ಸ್ ಅಂತೆಲ್ಲಾ ಗೋಳಾಟ ಇಲ್ಲದ ಕಾರಣವೂ ಇರಬಹುದು, ಮನಸ್ಸು ಎಂದಿಗಿಂತ ಖಾಲಿಯಾಗಿತ್ತು, ಭ್ರಮೆ ತುಂಬಿಕೊಳ್ಳಲು ಎಂದಿಗಿಂತ ಹೆಚ್ಚು ಜಾಗ ಇದ್ದಂತಿತ್ತು. ನನಗೆ ತಿಳಿಯದ ಹಾಗೆ ನಾನೂ ಆ ಕಥೆಯಲ್ಲಿ ಪಾತ್ರವಾಗಿದ್ದೇನೆ ಮತ್ತು ಆ ಕಥೆಯ ಗತಿಯನ್ನ ಬದಲಿಸುವ ಶಕ್ತಿ ನನ್ನಲ್ಲಿದೆ ಅಂತ ನನಗೆ ಅನಿಸಲು ಪ್ರಾರಂಭವಾಯಿತು.

ಅಜ್ಜಿ ಸಣ್ಣವಳಿದ್ದಾಗ ಆಗಿ ಹೋದ ಘಟನೆ ಅದು, ನನ್ನ ಅಪ್ಪ ಅಮ್ಮನೇ ಹುಟ್ಟಿರದ ಕಾಲದಲ್ಲಿ ನಡೆದ ಆ ಕಥೆಯಲ್ಲಿ ನನ್ನ ಪಾತ್ರ ಇರೋಕೆ ಹೇಗೆ ಸಾಧ್ಯ? ಅಜ್ಜಿ ಮೂರು ಬಾರಿ ನನಗೆ ಈ ಕಥೆಯನ್ನ ಹೇಳಿರುವುದೂ, ಆ ಕಥೆ ಆಳವಾಗಿ ನನ್ನೊಳಗೆ ಇಳಿದು, ಕೆಲಸ ಸಿಗದ ಚಿಂತೆಯ ನೆನೆಪೇ ಆಗದ ಹಾಗೆ ನನ್ನನ್ನ ಕಾಡುತ್ತಿದೆ ಎಂದರೆ ಏನೋ ವಿಶೇಷವಾದದ್ದು ಘಟಿಸಲಿದೆ ಅಂತ ನನಗೆ ಅನಿಸುತ್ತಿತ್ತು.

ಮನೆಯಲ್ಲೇ ಕೂತು ಕೂತು ಜಡ್ಡುಗಟ್ಟಿ ಹೋಗಿದ್ದೆ. ಕಥೆ ಬೇರೆ ದೆವ್ವದಂತೆ ಕಾಡುತ್ತಿತ್ತು. ಹೀಗೆ ಕೂತರೆ ಕಲ್ಲಾಗಿ ಹೋದೆನೆಂದು ಒಂದು ದಿನ ಅಟ್ಟ ಕ್ಲೀನ್ ಮಾಡುವ ನೆಪ ಹಿಡಿದುಕೊಂಡು ಹಿಡಿಸೂಡಿ ಹಿಡಿದುಕೊಂಡು ಅಟ್ಟ ಏರಿದೆ.

ಅಟ್ಟದ ಒಂದು ಮೂಲೆಯಲ್ಲಿ ಹಳೆಯ ಎರಡು ಕಬ್ಬಿಣದ ಪೆಟ್ಟಗೆಗಳನ್ನ ಒಂದರ ಮೇಲೊಂದರಂತೆ ಪೇರಿಸಿಟ್ಟಿದ್ದರು. ಅಟ್ಟ ಏರಿದ ಕೂಡಲೇ ಮೊದಲು ನನ್ನ ಗಮನ ಸೆಳೆದದ್ದು ಈ ಪೆಟ್ಟಿಗೆಗಳೆ! ಕುತೂಹಲದಿಂದ ಪೆಟ್ಟಿಗೆಗಳ ಹತ್ತಿರ ಹೋದೆ. ಮೇಲೆ ಇದ್ದ ಪೆಟ್ಟಿಗೆ ನನ್ನ ಅಜ್ಜನದ್ದು. ನನ್ನ ಅಜ್ಜನೋ ವಿಚಿತ್ರ ವ್ಯಕ್ತಿ, ನನಗವರನ್ನ ನೋಡಿದ ನೆನೆಪೇ ಇಲ್ಲ. ಬಹಳ ಹಿಂದೆಯೇ ಅವರು ಯಾತ್ರೆಗೆ ಹೋಗಿದ್ದರಂತೆ. ತಿರುಗಿ ಬಂದ ಮೇಲೆ ಏನೋ ಮಣಮಣ ಮಾತಾಡುತ್ತಿದ್ದರಂತೆ. ಮನಸ್ಸಾದಾಗ ಅಪರೂಪಕ್ಕೆ ಮನೆಗೆ ಬರುತ್ತಿದ್ದರಂತೆ. ಕೊನೆಯ ಬಾರಿಗೆ ಬಂದಾಗ ಈ ಪೆಟ್ಟಿಗೆ ಬಿಟ್ಟು ಹೋದರಂತೆ.

ಚಿನ್ನ ಹಣ ಇರಬಹುದೇನೋ ಎಂಬ ಆಸೆಯಲ್ಲಿ ತೆರೆದು ನೋಡಿದರೆ ಹಳೆಯ ಬಟ್ಟೆ ಪುಸ್ತಕ ಇನ್ನೂ ಏನೇನೋ ಬೇಡದ ವಸ್ತುಗಳೇ ಇದ್ದವಂತೆ. ಪೆಟ್ಟಿಗೆಯನ್ನ ಅಟ್ಟದಲ್ಲಿಟ್ಟು ಬಿಟ್ಟರಂತೆ. ನಾನೂ ಹಲವು ಸಲ ಅಟ್ಟ ಏರಿ ಪೆಟ್ಟಿಗೆ ತೆರೆದು ನೋಡಿದ್ದೆ. ಇವತ್ಯಾಕೋ ಮತ್ತೆ ಪೆಟ್ಟಿಗೆ ತೆರೆಯೋಣ ಅಂತನಿಸಿತು.

ಅಜ್ಜನ ಹಳೆಯ ಬಟ್ಟೆ, ಪುಸ್ತಕ, ಕನ್ನಡಿ, ಬಾಚಣಿಗೆ ಎಲ್ಲ ತೆಗೆದು ಹೊರಗಿಟ್ಟ ಮೇಲೆ ನ್ಯೂಸ್ ಪೇಪರ್ ಮುಚ್ಚಿದ್ದ ಪೆಟ್ಟಿಗೆಯ ತಳಭಾಗ ಕಂಡಿತು. ಅದನ್ನೂ ತೆಗೆದು ಹೊರಗಿಟ್ಟೆ. ಪೆಟ್ಟಿಗೆ ಮೂಲೆಯಲ್ಲಿ ಹಳೆಯ ಕಾಲದ ಚಿನ್ನದ ಬಣ್ಣದ ವಾಚು ಕಾಣಿಸಿತು. ಆ ವಾಚ್ ಇಲ್ಲಿಯ ತನಕ ನನ್ನ ಕಣ್ಣಿಗೆ ಬಿದ್ದಿರಲಿಲ್ಲ. ಬೆಳಕು ಬರುವ ಮೂಲೆಗೆ ಹೋಗಿ ವಾಚ್‌ನ ಮೇಲೆ ಕಣ್ಣಾಡಿಸಿದರೆ ಅದರ ಡಯಲ್‌ನ ಹಿಂದೆ ಟೈಮ್ ಟ್ರಾವೆಲ್ ವಾಚ್ ಅಂತ ಇಂಗ್ಲಿಷ್ ಅಕ್ಷರಗಳಲ್ಲಿ ಕೆತ್ತಿರೋದು ಕಾಣಿಸಿತು. ನೀವಂದುಕೊಂಡ ಹಾಗೆಯೇ ಅದರ ಡಯಲ್‌ನಲ್ಲಿ ಗಂಟೆಯ ಜೊತೆಗೆ ಇಸವಿ, ತಿಂಗಳು, ದಿನಗಳಿದ್ದು, ಡಯಲ್‌ನ ಬಲಬದಿಯಲ್ಲಿ ಮೂರು ಕೀಗಳಿದ್ದವು. ಎಲ್ಲಾ ಸಿನೆಮಾದಲ್ಲಾಗುವಂತೆ ನಾನೂ ಇದೊಂದು ಬಂಡಲ್ ವಾಚ್ ಇರಬಹುದು ಅಂತಂದುಕೊಂಡು ಮೂರು ಕೀಗಳನ್ನ ಮನಬಂದಂತೆ ತಿರುಗಿಸಿದೆ.

*

ಇಲ್ಲಿಂದ ಕಥೆ ಅರವತ್ತು ವರ್ಷ ಹಿಂದಕ್ಕೆ ಜಾಜಿಯನ್ನ ಹುಲಿ ಹಿಡಿದ ರಾತ್ರಿಗೆ ಹೊರಳುತ್ತದೆ. ನನಗೆ ಈ ಟೈಮ್ ಟ್ರಾವೆಲ್ ವಾಚ್ ಹೇಗೆ ಕೆಲಸ ಮಾಡುತ್ತದೆ ಅಂತ ವಿವರಿಸುವಷ್ಟು ವಿಜ್ಞಾನ ಗೊತ್ತಿಲ್ಲ, ನ್ಯೂಟನ್‌ನ ನಿಯಮದಾಚೆ ನನ್ನ ಫಿಸಿಕ್ಸ್ ಜ್ಞಾನ ಹೊರಳಿಲ್ಲ! ಮೂರು ಕೀಗಳನ್ನ ಮನಬಂದಂತೆ ತಿರುಗಿಸಿದ ಮಾತ್ರಕ್ಕೆ ಜಾಜಿಯನ್ನ ಹುಲಿ ಹಿಡಿದ ರಾತ್ರಿಗೆ, ಹಿಮ್ಮುಖ ಪ್ರಯಾಣ ಮಾಡಿ ನಾನು ತಲುಪಬೇಕಾದರೆ, ‘ಬೈ ಚಾನ್ಸ್’ ಅಂತ ನಾನು ಮಾಡಿದ ಸೆಟ್ಟಿಂಗ್ ಯಾವುದಿರಬಹುದು ಅಂತ ವಿವರಿಸಲು ಇದೇನು ಸಂಶೋಧನ ಪ್ರಬಂಧವೆ? ಬಡಪಾಯಿ ಕಥೆಯಲ್ಲವೆ?! ಸರಿ, ಕಥೆಗೆ ಮರಳುತ್ತೇನೆ ನಾನು.

ಜಾಜಿಯ ಮನೆಯ ಅಂಗಳದಲ್ಲಿ ನಿಂತಿದ್ದೆ ನಾನು. ಬಾಗಿಲಿಲ್ಲದ ಕಿಟಕಿಯ ಮೂಲಕ ಒಳಗೆ ಇಣುಕಿದರೆ ಚಾವಡಿಯಲ್ಲಿ ನಾಲ್ಕೈದು ಜನ ಹೊದಿಕೆ ಹೊದ್ದುಕೊಂಡು ಮಲಗಿದ್ದಾರೆ. ಜಾಜಿಯ ಮೈದುನರು ಮತ್ತು ಮಕ್ಕಳಿರಬೇಕು. ಅಷ್ಟರಲ್ಲಿಯೇ ಕೋಣೆಯ ಬಾಗಿಲು ಸರಿದಂತಾಯ್ತ. ಅದ್ಯಾರು ಅಂತ ಊಹಿಸೋದು ಕತೆ ಗೊತ್ತಿದ್ದ ನನಗೆ ಕಷ್ಟವೆ! ನಾನು ಸದ್ದು ಮಾಡದೆ ಹಿತ್ತಿಲ ಕಡೆಗೆ ನಡೆದೆ. ಹಿತ್ತಿಲ ಮಾಡಿನೆಡೆಗೆ ಕೈ ಚಾಚುತ್ತಿದ್ದ ಜಾಜಿಯ ಆಕೃತಿ ಕಂಡಿತು.
ಗುಟ್ಟಿನ ದನಿಯಲ್ಲಿ “ಜಾಜಿ.. ಜಾಜಿ..” ಅಂತ ಕರೆದೆ.
ನನ್ನ ಕಡೆಗೆ ತಿರುಗಿದವಳು, “ನೀನ್ಯಾರು?” ಅಂತ ಕೇಳ್ತಾಳೇನೋ ಅಂತಂದ್ಕೊಂಡರೆ, ಬೆಪ್ಪಳಂತೆ ನನ್ನನ್ನೇ ನೋಡ್ತಾ ಇದ್ದಾಳೆ.
“ಮಿಠಾಯಿ ಕದ್ದು ತಿನ್ತಾ ಇದ್ದೀಯಲ್ಲ.. ನನಗೆ ಗೊತ್ತು..”
“ಬೊಂಬಾಯಿಯಿಂದ ತಂದದ್ದು, ಬಹಳ ಚೆನ್ನಾಗಿದೆ..”
“ಮೂವರು ಮಕ್ಕಳಿಗೆ ಒಂದು ಮಿಠಾಯಿಯನ್ನ ಪಾಲು ಮಾಡಿ ಕೊಟ್ಟೆ, ನೀನು ಮಾತ್ರ ಕದ್ದು ಒಂದಿಡೀ ಮಿಠಾಯಿ ತಿನ್ತಾ ಇದ್ದೀಯಲ್ಲ!”
“ಹೌದು… ಒಂದಿಡೀ ಮಿಠಾಯಿ ತಿಂದರೂ ಇನ್ನೂ ಬೇಕನಿಸುತ್ತೆ, ಅಷ್ಟು ರುಚಿ ಅದು!”
“ನೀನದನ್ನ ಬಚ್ಚಿಟ್ಟು ತಿನ್ತಾ ಇದ್ದೀಯಲ್ಲ!”
“ಹೌದು ಮತ್ತೆ! ಇನ್ನೊಮ್ಮೆ ತಿನ್ನೋದಕ್ಕೆ ಸಿಗುತ್ತೋ ಇಲ್ವೊ!”
“ತಪ್ಪಲ್ವ ಅದು?”
ಅವಳ ಮುಖದಲ್ಲೊಂದು ಸಂಶಯದ ಗೆರೆ ಮೂಡಿತು, “ತಪ್ಪಲ್ವ… ತಪ್ಪಲ್ವ…” ಅಂತ ಅವಳು ಗೊಣಗಲು ಪ್ರಾರಂಭಿಸುತ್ತಿದ್ದಂತೆ ಗರ‍್ರೆಂಬ ಘರ್ಜನೆ ಕೇಳಿಸಿತು, ನಾನು ಗಾಬರಿಯಿಂದ ವಾಚ್‌ನ ಕೀ ತಿರುವಿದೆ.

*

ಆಫೀಸಿನಿಂದ, ಲೋಕದ ಸುಸ್ತನ್ನೆಲ್ಲಾ ಭುಜದ ಮೇಲೆ ಹೊತ್ತುಕೊಂಡು ಮನೆಗೆ ಬಂದಾಗ ಅಜ್ಜಿ, “ಜಾಜಿಯ ಕಥೆ ಹೇಳಿದ್ನ ನಿನಗೆ?” ಅಂತ ರಾಗ ಎಳೆದಳು. ಅಜ್ಜಿ ಜಾಜಿಯ ಕಥೆಯನ್ನ ಮೂರು ಸಲ ಹೇಳಿದ್ದನ್ನ ಮರೆಯೋದುಂಟೆ? ಕೆಲಸ ಇಲ್ಲದೆ ಮನೆಯಲ್ಲಿ ಬಿದ್ದುಕೊಂಡಿದ್ದಾಗ ಇವಳು ಆ ಜಾಜಿಯ ಕಥೆ ಹೇಳಿ, ಮತ್ತೆ ಕನಸಲ್ಲೂ ಆ ಜಾಜಿಯೇ ಬಂದು, ವಾಚ್ ತೊಟ್ಟುಕೊಂಡು ನಾನವಳ ಕಾಲಕ್ಕೆ ಪ್ರಯಾಣ ಮಾಡಿ.. ಅದನ್ನೆಲ್ಲಾ ನೆನೆದು ನಗು ಬಂತು.

ಅಜ್ಜಿಗ್ಯಾಕೆ ಬೇಜಾರು ಅಂತ ಸೋಫಾದಲ್ಲಿ ಕೂತು, “ಹೇಳಜ್ಜಿ” ಅಂತಂದು, ಮೊಬೈಲ್ ಸ್ಕ್ರೀನ್‌ನ ಮೇಲೆ ಕಣ್ಣಾಡಿಸತೊಡಗಿದೆ.

ಅಜ್ಜಿ ಹಳೆಯ ಕಥೆಯನ್ನ ಹೊಸ ಉತ್ಸಾಹದಲ್ಲಿ ಹೇಳತೊಡಗಿದಳು, ನಾನು ಬೆಳಗ್ಗಿನಿಂದ ನೋಡದೆ ಬಾಕಿ ಇಟ್ಟುಕೊಂಡಿದ್ದ ವಾಟ್ಸ್‌ ಆಪ್ ಸ್ಟೇಟಸ್‌ಗಳನ್ನ ನೋಡುತ್ತಾ ಕೂತೆ. ಎಲ್ಲರ ಸ್ಟೇಟಸ್ ನೋಡಿ ಮುಗಿಸಿದಾಗ ಅಜ್ಜಿಯ ಮಾತುಗಳು ಕಿವಿಗೆ ಬಿದ್ದವು, ಪ್ರತಿ ಸಲ ಜಾಜಿಯ ಕಥೆ ಕೇಳಿದಾಗ ಹೊಸತೊಂದು ವಿಚಾರ ಗೊತ್ತಾಗುತ್ತಿತ್ತಲ್ಲ, ಈ ಸಲವೂ ಹಾಗೆಯೇ ಆಯಿತು, ಜಾಜಿಯ ಕಥೆಯಲ್ಲಿ ನಾನು ಹಿಂದೆಂದೂ ಕೇಳಿದಂತಿರದ ಭಾಗದ ನಿರೂಪಣೆಗೆ ಕಿವಿಯಾದೆ.

“ಹುಲಿ ಬಂದು ಹಿಡಿಯೋದಂದರೇನು? ಕಾಡಿನಲ್ಲಾದರೆ ಹುಲಿಯಿರುತ್ತದೆ, ಊರಿಗೆ ಬಂದು ಮನುಷ್ಯರನ್ನ ಹಿಡಿದದ್ದು ನಮ್ಮೂರಿನ ಕಥೆಯಲ್ಲೂ ನಡೆದಿರಲಿಕ್ಕಿಲ್ಲ, ಕಾಡಿನಲ್ಲಿದ್ದ ಹುಲಿ, ಊರಿಗಿಳಿದು, ಜಾಜಿಯ ಹಿತ್ತಲಿಗೇ ಬಂದು, ಜಾಜಿಯನ್ನೇ ಹಿಡಿಯೋದಂದರೇನು? “ತಪ್ಪಲ್ವ..ತಪ್ಪಲ್ವ..”- ಅಂತ ಗೊಣಗುತ್ತಲೇ ಸತ್ತಳಂತೆ ಅವಳು…”

ಅಜ್ಜಿ ಕಥೆ ಮುಗಿಸುತ್ತಿದ್ದಂತೆ ಅರ್ಥವಾಗದ ಭಯದಲ್ಲಿ ನಾನು ಗಾಬರಿ ಬಿದ್ದು ಕೂತೆ.

‍ಲೇಖಕರು Avadhi

January 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ |ಕಳೆದ ಸಂಚಿಕೆಯಿಂದ|...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: