ನಾಲ್ಕೂ ಮೂವತ್ತರ ಕಲರವ

-ಪ್ರಶಾಂತ್ ಹುಲ್ಕೋಡು
ಕೆನೆಮೊಸರು

ಇದು ಸಂಜೆ ನಾಲ್ಕ ಮೂವತ್ತರ ನಂತರದ ಕಲರವ. ತೀರ್ಥಹಳ್ಳಿಯ ಬಸ್ ನಿಲ್ದಾಣದಲ್ಲಿ ಶಾಲೆ ಬಿಡುತ್ತಿದ್ದಂತೆ ಮಕ್ಕಳು ಸಾಲು ಸಾಲಾಗಿ ತಮ್ಮೂರಿಗೆ ಹೋಗುವ ಬಸ್ಸುಗಳಿಗಾಗಿ ಕಾಯುತ್ತಿರುತ್ತಾರೆ. ಒಂದು ಹತ್ತು ವರ್ಷಗಳ ಹಿಂದೆ ನಾನು ಕೂಡ ಸೇವಾ ಭಾರತಿ ಶಾಲೆಯ ಸಮವಸ್ತ್ರದಲ್ಲಿ ನಮ್ಮೂರಿಗೆ ಹೋಗುವ ಬಸ್ಸಿಗಾಗಿ ಕಾಯುತ್ತಾ ನಿಂತಿರುತ್ತಿದ್ದೆ. ತೀರ್ಥಹಳ್ಳಿಯಲ್ಲಿ ಸೋಮವಾರ ಸಂತೆ. ಅವತ್ತು ಮಾತ್ರ ಬಸ್ಸಿನಲ್ಲಿ ಕಾಲು ಹಾಕಲೂ ಜಾಗವಿರುವುದಿಲ್ಲ. ಸಂತೆ ಮಾಡಿ ಬಂದವರ ತರಕಾರಿ, ಒಣಮೀನುಗಳ ವಾಸನೆ ಘಮ ಬಸ್ಸಿನ ತುಂಬಾ ಆವರಿಸಿಕೊಳ್ಳುತ್ತಿತ್ತು.
ಇವತ್ತೂ ಕೂಡ ಭಾರದ ಬ್ಯಾಗನ್ನು ಹಾಕಿಕೊಂಡ ಅನಾಮಿಕ ಪುಟಾಣಿಗಳು ಅದೇ ಕಂಪನ್ನು ಸವಿಯುತ್ತಿದ್ದಾರೆ. ಅವತ್ತು ಒಂದು ರೂಪಾಯಿ ಇದ್ದರೆ ಚಾಕೋಲೆಟ್ ತಿನ್ನುತ್ತಿದ್ದಾಗ ಇದ್ದ ಸಮಾಧಾನ ಇವತ್ತು ಕಾಫಿ ಡೇಯಲ್ಲಿ ಕುಳಿತರು ಸಿಗುವುದಿಲ್ಲ.
ನಾನಿಲ್ಲಿ ಹೇಳ ಹೊರಟಿದ್ದು ಅಂತಹ ಪುಟ್ಟು ಮಕ್ಕಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಚಿಕ್ಕ ವಯಸ್ಸಿನಲ್ಲಿ ತೆರುತ್ತಿರುವ ಬೆಲೆಯ ಕುರಿತು.
ತೀರ್ಥಹಳ್ಳಿಯ ಆರ್ಥಿಕ ಪರಿಸ್ಥಿತಿಗೋ ಅಥವಾ ಅಲ್ಲಿನ ಅಡಿಕೆ ಬೆಳೆಗಿರುವ ಬೆಲೆಗೊ ಸಾಮಾನ್ಯರೂ ಕೂಡ ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳುಹಿಸುತ್ತಾರೆ. ಗಲ್ಲಿಗೊಂದರಂತೆ ಪೇಯಿಂಗ್ ಗೆಸ್ಟ್‌ಗಳಿವೆ. ಸ್ವಲ್ಪ ಹಣವಂತರು ತಮ್ಮ ಮಕ್ಕಳನ್ನು ಅಂತಹ ಪೇಯಿಂಗ್ ಗೆಸ್ಟ್‌ಗಳಲ್ಲಿ ಬಿಡುತ್ತಾರೆ. ನಾನು ೮ನೆ ತರಗತಿಯಲ್ಲಿರುವಾಗ ಎರಡೂವರೆ ವರ್ಷದ ಮಗುವೊಂದು ಆಗಷ್ಟೇ ಎಲ್‌ಕೆಜಿ ಸೇರಿತ್ತು ಅಥವಾ ಸೇರಿಸಲಾಗಿತ್ತು. ಇನ್ನೂ ಆಮ್ಮನ ಮಮತೆಯ ಮಡಿಲಿನಲ್ಲಿ ಸಹಜ ಸಂಸ್ಕಾರಗಳನ್ನು ಕಲಿಯಬೇಕಿದ್ದ ಪುಟಾಣಿ ಹುಡುಗನಿಗೆ ದಿನಾ ಎ.ಬಿ.ಸಿ.ಡಿ ಕಲಿಯಲಿಲ್ಲ ಎಂದು ಹೊಡೆತಗಳೂ ಬೀಳುತ್ತಿದ್ದವು. ಅವನ ಅಪ್ಪ, ಅಮ್ಮ ವಾರಕ್ಕೊಮ್ಮೆ ಬಂದು ಭಾನುವಾರದ ರಜೆಗೆ ಮನೆಗೆ ಕರೆದುಕೊಂಡು ಹೋಗಿ ತಮ್ಮ ಮಮತೆಯನ್ನು ಧಾರೆ ಎರೆಯುತ್ತಿದ್ದರು!.
ಇಂತಹದೊಂದು ಸಂಸ್ಕೃತಿ ತೀರ್ಥಹಳ್ಳಿಯಲ್ಲಿ ಶ್ರೀಮಂತಿಕೆಯ ಸಂಕೇತ ಕೂಡ. ಮದುವೆಗಳಲ್ಲಿ ಅಥವಾ ಇನ್ನಾವುದೋ ಸಂಮಾರಂಭದಲ್ಲಿ ಎದುರಿಗೆ ಸಿಕ್ಕ ಸಂಬಂಧಿಕರ ಎದುರಿಗೆ ತಮ್ಮ ಮಕ್ಕಳು ಬೋರ್ಡಿಂಗ್‌ನಲ್ಲಿದ್ದಾರೆ ಎಂದು ಹೇಳಿಕೊಳ್ಳುವಲ್ಲಿ ಎಂತಹದೊ ಒಣ ಪ್ರತಿಷ್ಠೆ ಎದ್ದು ಕಾಣುತ್ತಿರುತ್ತದೆ.
ಕೆಲವು ಮಕ್ಕಳು ದಿನ ನಿತ್ಯ ತೀರ್ಥಹಳ್ಳಿಗೆ ಗಿಜಿಗುಡುವ ಬಸ್ಸುಗಳಲ್ಲಿ ಓಡಾಡಿಕೊಂಡು ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ಅಂತವರದು ಒಂದು ಕತೆ. ಅದರ ಅನುಭವವೇ ಬೇರೆ. ದಿನಪ್ರತಿ ನೋಡುವ ಹೊಸ ಹೊಸ ಜನ. ಮೈಗೆ ತಾಕುವ ಮೊದಲ ಸ್ಪರ್ಷ, ಮೊದಲ ಪ್ರೀತಿ ಅರಳುವ ಮಾಗಿ ಕಾಲದ ರೋಮಾಂಚನಗಳಿಂದಾಗಿ ಈ ಬಸ್ಸಿನ ಪ್ರಯಾಣ ಪ್ರತಿನಿತ್ಯದ ಪಿಕ್‌ನಿಕ್ಕು.
ಮೂರು ವರ್ಷದ ಮಗುವಿನಿಂದ ಹಿಡಿದು ಕಾಲೇಜು ಓದುವವರು ಒಟ್ಟಿಗೆ ಓಡಾಡುವುದರಿಂದ ಒಂತರದ ಬಾಂಧವ್ಯ ಬೆಳೆಯುತ್ತದೆ. ನಾವು ಹತ್ತುವ ಸ್ಟಾಪಿಗಿಂತ ಮುಂಚೆ ಹತ್ತಿದವರು ನಮಗಾಗಿ ಸೀಟು ಕಾಯ್ದಿರಿಸಿಕೊಂಡು ಬರುತ್ತಿದ್ದರು. ಮತ್ತೆಲ್ಲೋ ಹತ್ತುವ ಹೊಸ ಹುಡುಗಿ ನಮ್ಮ ಪಕ್ಕದಲ್ಲೇ ನಿಂತುಕೊಳ್ಳಲಿ, ಆವಳ ಬ್ಯಾಗನ್ನು ನಾವೇ ತೊಡೆಯ ಮೇಲೆ ಇಟ್ಟುಕೊಳ್ಳುವಂತಾಗಲಿ ಎಂದು ಬೆಳಗ್ಗಿನ ಪ್ರಾರ್ಥನೆ ಬೇರೆ.
ಹೀಗೆ ನನ್ನ ಬಾಲ್ಯದ ಜೊತೆ ಬಸ್ಸಿಗೊಂದು ಭದ್ರ ನೆನೆಪುಗಳ ಜಾಗ ಲಭ್ಯವಾಗಿದ್ದು. ಮುಂದೆ ಪಿಯುಸಿಗೆ ಬರುವ ಹೊತ್ತಿಗೆ ಆಗ ಪದವಿ ಓದುತ್ತಿದ್ದ ಹುಡುಗ-ಹುಡುಗಿಯರೆಲ್ಲಾ ಸೇರಿ ಒಂದು ಪಿಕ್‌ನಿಕ್‌ಗೆ ಹೋಗಿದ್ದೆವು. ನಾನೊಬ್ಬನೆ ಚಿಕ್ಕವನು. ಆದರೂ ಅವರೆಲ್ಲಾ ತೋರಿಸಿದ ಆತ್ಮೀಯತೆ ಇವತ್ತಿಗೂ ಮರೆಯಲಾಗುತ್ತಿಲ್ಲ. ನನ್ನ ಅಕ್ಕನ ಸ್ನೇಹಿತೆಯೊಬ್ಬಳು ನನಗೆ ಅದೆಷ್ಟು ಹಿಡಿಸಿದ್ದಳು ಎಂದರೆ ಅವಳ ಜೊತೆಯಲ್ಲಿ ಹೇಳಲಾರದ ಆತ್ಮೀಯತೆ. ದಿನ ಅವಳಿಗಾಗಿ ನಾನು ಸೀಟು ಹಿಡಿದಿಡುವುದು, ನನಗಾಗಿ ಅವಳು ಸೀಟು ಕಾಯ್ದಿರಿಸುವು. ಕೊನೆಗೊಮ್ಮೆ ಬೇಸಿಗೆ ರಜೆ ಕಳೆದು ಅವಳು ಬರಲೇ ಇಲ್ಲ. ಒಳ್ಳೆಯ ಸಂಬಂಧ ಬಂದಿದ್ದರಿಂದ ಅವಳ ಮನೆಯಲ್ಲಿ ಮದುವೆ ಮಾಡಿದ್ದರು. ಹಾಗೆ ಮೊದಲ ಆತ್ಮೀಯ ಸಂಬಂಧವೊಂದು ಕಳಚಿಕೊಂಡಿತು.
ಉಳಿದವರು ತಮ್ಮ ವಿದ್ಯಾಭ್ಯಾಸ ಮುಗಿಸಿ ಹೊರಟು ಹೋದರು. ನಾನು ತೀರ್ಥಹಳ್ಳಿ ಬಿಟ್ಟೆ. ತುಂಬಾ ಆತ್ಮೀಯ ಬಾಂಧವ್ಯಗಳೂ ವ್ಯವಹಾರಿಕವಾಗತೊಡಗಿದ್ದರ ಮೊದಲ ಅನುಭವ. ಸಿಕ್ಕರೂ ಮಾತನಾಡುವಾಗ ಮೊದಲಿನ ಮಮತೆ ಮರೆಯಾಗಿದೆ. ಇವೆಲ್ಲಾ ಸಹಜ ಇರಬಹುದು.
ಇತ್ತೀಚೆಗೆ ಅದೇ ನಾಲ್ಕುವರೆ ಗಂಟೆಯಗೆ ಬಸ್ ನಿಲ್ದಣಕ್ಕೆ ಹೋದರೆ ಮತ್ತದೆ ಪುಟಾಣಿ ಮಕ್ಕಳ ಬೆನ್ನ ಮೇಲೆ ಭಾರದ ಬ್ಯಾಗುಗಳು. ಅಂಗಡಿ ಮುಂದೆ ಚಿಲ್ಲರೆ ಹಿಡಿದು ನಿಂತ ಕೈಗಳು. ಪಿಯುಸಿಗೆ ಬರುತ್ತಿರುವವರ ಕೈಯಲ್ಲಿ ಮೊಬೈಲ್‌ಗಳು. ಪರಸ್ಪರ ಪರಿಚಯವೇ ಇಲ್ಲವೇನೊ ಎಂಬಂತೆ ಕುಳಿತುಕೊಂಡವರು.
ಇವೆಲ್ಲವುಗಳ ನಡುವೆ, ಸೋಮವಾರ ಸಂತೆಯ ತರಕಾರಿ ಒಣ ಮೀನಿನ ವಾಸನೆ ಮಾತ್ರ ಹಾಗೆ ಇತ್ತು. ಅದೇ ಕಲರವ ಮತ್ತೊಂದು ಮುಖ!

‍ಲೇಖಕರು avadhi

November 27, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This