
ದಾದಾಪೀರ್ ಜೈಮನ್
ನೀವು ನಮ್ಮ ಹೆಸರು ಕೇಳುತ್ತೀರಿ
ನಾವಾಗ
ಈ ಬೀದಿಯಲ್ಲಿ ರಾಧೆ ಆ ಬೀದಿಯಲ್ಲಿ ಮಜನು
ಅದರ ಪಕ್ಕದ ಓಣಿಯಲ್ಲಿ ಜ್ಯುಲಿಯೆಟ್
ನಿಮ್ಮ ಕಣ್ಣುಗಳು ಕೆಂಪಾಗುತ್ತವೆ
ನಾವಾಗ
ಈ ಬೀದಿಯಲ್ಲಿ ಮಳೆ, ಪಕ್ಕದ ಬೀದಿಯಲ್ಲಿ ಚಳಿ
ಅದರ ಪಕ್ಕದ ಓಣಿಗಳಲ್ಲಿ ಮಂಜು ಮಂಜಾಗಿ..
ನೀವಾಗ
ಮಂಜು ಮಂಜಾಗಿ
ದಿಕ್ಕೆಟ್ಟು ಓಡುತ್ತೀರಿ
ನೀವು ಜಾಗಗಳಿಗೆ ಬೇಲಿ ಹಾಕಿಸುತ್ತೀರಿ
ನಾವಾಗ
ಹೂ ಪರಿಮಳದ ಜಾಡಿನಲ್ಲಿ
ನೋಟಗಳು ಭೇಟಿಯಾಗಿ ಕಟ್ಟಿದ ಅದೃಶ್ಯ ಸೇತುವೆಯ
ನಡುವಲ್ಲಿ ಕೂಡಿಬಿಡುತ್ತೇವೆ
ತುಟಿಗಳು ಮುತ್ತಿಕ್ಕುತ್ತವೆ
ಬಾಹುಗಳು ಬೆಸೆದುಕೊಳ್ಳುತ್ತವೆ
ಆತ್ಮಗರ್ಭದಲ್ಲಿ ಕೆಂಪುಗುಲಾಬಿ ಕುಡಿಯೊಡೆಯುತ್ತದೆ

ನೀವು ಪ್ರೇಮಿಸಿದ್ದಕ್ಕೆ ಜುಲ್ಮಾನೆ ಹಾಕುತ್ತೀರಿ
ನಾವಾಗ
ಜೀವವಿಲ್ಲದ ನಿಮ್ಮ ಹಾಳೆಯ ಮೇಲೆ
ಪ್ರೇಮ ಪದ್ಯವ ಗೀಚಿ ನಿಮ್ಮ ಜೇಬಿಗಿಡುತ್ತೇವೆ
ನೀವು ನಮ್ಮನ್ನು ಗಲ್ಲಿಗೇರಿಸುವ ನಿರ್ಧಾರ ಮಾಡುತ್ತೀರಿ
ನಾವಾಗ
ನಿಮ್ಮೆದೆಯ ಗೂಡಿನೊಳಗೆ
ಪ್ರೀತಿ ಕಾವ್ಯವಾಗಲೆಂದು ಮಮತೆಯಿಂದ ಬೇಡುತ್ತೇವೆ
ನೀವು ಗುಂಡು ಹಾರಿಸುತ್ತೀರಿ
ನಾವಾಗ
ನಮ್ಮುಸಿರಿನ ನಿಶ್ವಾಸದಿಂದ
ಉಸುರುತ್ತೇವೆ
ಪ್ರೀತಿ ಪ್ರೇಮ ಪ್ಯಾರ್ ಮೊಹಬ್ಬತ್

ನೀವು ನಮ್ಮನ್ನು ಅಗಲಿಸಿ
ಬೇರೆ ಬೇರೆ ದಿಕ್ಕುಗಳಿಗೆ ಎಸೆಯುತ್ತೀರಿ
ನಾವಾಗ
ಹೂವಾಗಿ ಮೇಲೆದ್ದು ಪರಿಮಳವಾಗಿ ಭೇಟಿಯಾಗುತ್ತೇವೆ
ನೀವು ಗುಂಡು ಹಾರಿಸಿದ ಗರ್ವದಿಂದ
ನಿದ್ದೆ ಹೋಗಲು ಕಣ್ಣು ಮುಚ್ಚುತ್ತೀರಿ
ನಾವಾಗ
ನಿಮ್ಮ ಕನಸುಗಳಲ್ಲಿ ಬಂದು ಪ್ರೇಮಿಸುತ್ತೇವೆ
ಪ್ರೇಮಿಸುತ್ತಲೇ ಇರುತ್ತೇವೆ
ಕೊನೆಗೆ
ಪ್ರೇಮವೇ ನಾವಾಗುತ್ತೇವೆ
ಚಂದದ ಕವನ… ಸೂಕ್ತ ಆಶಯದೊಂದಿಗೆ ಸುಂದರ ಪ್ರಸ್ತುತಿ