ನಾವು ‘ಮೀನ್’ ಮೈಡೆಂಡ್ ಫೆಲೋಸ್…

ವಿಲಿಯಂ, ಕೆ ರಾಮದಾಸ್ ಅವರ ಬಾಲ್ಯ ಸ್ನೇಹಿತರು. ೫೫ ವರ್ಷಗಳ ಸ್ನೇಹದ ನಂಟು. ತಮ್ಮ ಪುಸ್ತಕ ‘ಪ್ರೊ ಕೆ ರಾಮದಾಸ್ ಬಾಲ್ಯ’ದಲ್ಲಿ ತಮ್ಮ ಒಡನಾಟದ ಬುತ್ತಿ ಬಿಚ್ಚಿದ್ದಾರೆ. ಒಂದು ಭಾಗ ಇಲ್ಲಿದೆ-

ಪುಸ್ತಕಕ್ಕಾಗಿ ಸಂಪರ್ಕ- ಅಭಿರುಚಿ ಪ್ರಕಾಶನ 

386, 14 ನೆಮುಖ್ಯ ರಸ್ತೆ ಮೂರನೇ ಕ್ರಾಸ್

ಸರಸ್ವತಿಪುರಂ ಮೈಸೂರು- 9

ಪುಟ: 60        ಬೆಲೆ: 40 

 

k-ramdas

ಬಂಗಡೆ ಮೀನು, ತಾರ್ಲೆ

ಚಿಕ್ಕಂದಿನಿಂದಲೂ ರಾಮದಾಸ್ ಗೆ ನನ್ನ ಹಾಗೆ ಮೀನೆಂದರೆ ಇಷ್ಟ. ನನ್ನ ತಾಯಿ ಕುಮಟದವರಾದರೆ ತಂದೆ ಮುಲ್ಕಿಯವರು. ನಮ್ಮ ಮನೆಯ ನ್ಯಾಷನಲ್ ಫುಡ್ -ಮೀನು. ರಾಮದಾಸ್ ಅವರೇನೂ ಕರಾವಳಿಯವರಲ್ಲ. ಆದರೂ ಮೀನು ಇಷ್ಟ. ಅವರಿಗೆ ಸಮುದ್ರದ ಮೀನೇ ಬೇಕೆಂತಿರಲಿಲ್ಲ. ಹೊಳೆ, ಕೆರೆದು ಅಗ್ತಾಯಿತ್ತು. ನಾವು, ರಾಮದಾಸ್, ಮಂಜಕ್ಕ ಎಲ್ಲ ಮೀನ್ ಮೈಡೆಂಡ್ ಫೆಲೋಸ್.

ಸಾಗರದಲ್ಲಿ ಯಾವಾಗಲೂ ಮೀನು ಜಾಸ್ತಿಯಿರುತ್ತೆ. ಇಡೀ ಕರ್ನಾಟಕದಲ್ಲಿಯೇ ಅತಿ ದೊಡ್ಡ ಒಣ ಮೀನಿನ ಮಾರ್ಕೆಟ್ ಸಾಗರದಲ್ಲಿದೆ. ಕಾರವಾರ, ಭಟ್ಕಳ, ಹೊನ್ನಾವರ, ಕುಮಟ ಕಡೆಗಳಿಂದಲೂ ಮೀನು ಲಾಗಾಯ್ತಿನಿಂದಲೂ ಬರ್ತಾ ಇದೆ. ಆಗೆಲ್ಲಾ ಮೀನುಗಳ ಸುಗ್ಗಿಯೇ ಸುಗ್ಗಿ.

 

ಬಂಗಡೆ ಮೀನು ಬಡವರ ಬಂಧು. ಜನಪ್ರಿಯತೆಯ ಟಾಪಟೆನ್ ನಲ್ಲಿ ಬಂಗಡೆ ಮತ್ತು ತಾರ್ಲೆಗೆ ಮೊದಲ ಸ್ಥಾನ. ಆಗ ಒಂದು ರೂಪಾಯಿಗೆ 30-40 ಬಂಗಡೆ ಮೀನು ಸಿಗ್ತಾಯಿತ್ತು. ತಾರ್ಲೆ ರೂಪಾಯಿಗೆ ನೂರು ಸಹ. ಸಂಜೆ ಆಗ್ತ ಆಗ್ತ ತಾರ್ಲೆಯನ್ನು ಬಾಚಿಬಾಚಿ ಕೊಡ್ತಾಯಿದ್ರು. ಆಗ ಮೀನಿನ ಮಾರ್ಕೆಟ್ ಗೆ ಐಸ್ ಪ್ರವೇಶ ಆಗಿರಲಿಲ್ಲ. ಐಸ್ ಬಂದ ಮೇಲೆ ಮೀನನ್ನು ವಾರಗಟ್ಲೆ,ತಿಂಗಳುಗಟ್ಲೆ ಇಟ್ಟು ಮಾರುವ ವ್ಯವಸ್ಥೆಯೂ ಬಂತು, ದುಬಾರಿಯೂ ಆಯ್ತು, ರುಚಿಯೂ ಹೋಯ್ತು.

 

ಆಗ ಮೀನು ತಿನ್ನುವ ದೊಡ್ಡ ದೊಡ್ಡ ಕೇರಿಗಳೆಲ್ಲಾ ಚಿಕ್ಕ ಚಿಕ್ಕ ಲಾರಿಗಳಲ್ಲಿ, ದೊಡ್ಡ ದೊಡ್ಡ ವ್ಯಾನ್ ಗಳಲ್ಲಿ ಮೀನು ಬರ್ತಾಯಿತ್ತು. ಆ ಲಾರಿಗಳ, ವ್ಯಾನುಗಳ ಹಾರ್ನ್ ಗಳಿಗೆಲ್ಲಾ ಮೀನಿನ ರುಚಿ. ಮೀನ್ ಹಾರ್ನ್ ಕೇಳಿದೊಡನೆ ಕೇರಿ ಜನ ಒಮ್ಮೆಲೆ ಅಲರ್ಟ್. ತಕ್ಷಣ ಮಂಜಕ್ಕ, ರಾಮದಾಸ ಲಾರಿ ಹತ್ತಿರ ಹಾಜರ್. ಎಲ್ಲರಿಗಿಂತ ಮೊದಲು ಮಂಜಕ್ಕ ಅದನ್ನು ಎತ್ತಿ ನೋಡಬೇಕು, ಮೀನನ್ನು ಪರೀಕ್ಷೆ ಮಾಡಬೇಕು, ಅದರ ಕಣ್ಣು ನೋಡಬೇಕು. ಇವೆಲ್ಲಾ ಮಂಜಕ್ಕನ ಪರೀಕ್ಷೆ. ಎಲ್ಲವೂ ಸರಿಯಿತ್ತೆಂದರೆ ಮಂಜಕ್ಕ ಕೈಬೀಸಿ ಓ.ಕೆ. ಸಿಗ್ನಲ್ ಕೊಡ್ತಾಯಿದ್ರು. ತಕ್ಷಣ ತಟ್ಟೆಗಳು, ತಪ್ಪಲೆಗಳು ಲಾರಿ ಬಳಿ ಓಡೋಡಿ ಬರ್ತಾಯಿದ್ದವು. ರಾಮದಾಸ ಸುಮ್ಮನೆ ಮೀನಿನ ರಾಶಿಯನ್ನೇ ನೋಡ್ತಾಯಿದ್ದ, ಕಡಲ ಧ್ನಾನಸ್ಥನಂತೆ.

 

ಪ್ರೈಮರಿ ಶಾಲೆಯಲ್ಲಿರುವಾಗಲೂ ಆಗೊಮ್ಮೆ ಈಗೊಮ್ಮೆ ಮೀನು ಹಿಡಿಯಲು ಹೋಗ್ತಾ ಇದ್ದದ್ದು ನಮಗೆಲ್ಲಾ ಗೊತ್ತಿರುವ ವಿಷಯ.ರಾಮದಾಸ ವರದಾನದಿಯ ದಡದ ಮೇಲೆ ಸ್ವಲ್ಪ ದೂರ ಹೋಗಿ ಗಾಳ ಹಾಕಿ ಕುಲಿತುಕೊಳ್ಳುವುದಿತ್ತು ಒಂದೆರಡು ಸಾರಿ ನಾನೂ ಅವನ ಸಂಗಡ ಸುಮ್ಮನೆ ಕೂತಿದ್ದೆ. ಮೀನು ಗಾಳ ಹಾಕುವವರ ಪಕ್ಕದಲ್ಲಿ ಇರೋದು ತುಂಬ ಕಷ್ಟದ ಕೆಲಸ. ಕೆಮ್ಮುವ ಹಾಗಿಲ್ಲ, ಆಕಳಿಸುವಂತಿರಲಿಲ್ಲ. ಚೂರೂ ಶಬ್ದವಾಗಬಾರದು, ಹೊಗೆ ಬಿಡುವಂತಿಲ್ಲ. ಗಾಳ ಹಾಕುವವನಿಗೆ ಬಹುಶಃ ಒಬ್ಬ ಮೂಕ ಒಳ್ಳೆಯ ಕಂಪನಿ ಆಗಬಹುದು. ಮೀನು ಹಿಡಿಯುವುದು ಒಂದು ರೀತಿಯಲ್ಲಿ ಜೂಜು ಇದ್ದ ಹಾಗೆ. ‘ಸಿಕ್ಕಿದರೆ ಶಿಕಾರಿ ಇಲ್ಲದಿದ್ದರೆ ಬಿಕಾರಿ’ ಸಾಗರದಲ್ಲಿದ್ದಾಗ ಚಿಕ್ಕಚಿಕ್ಕ ಜಬ್ಬುಗಳು ಸಿಕ್ಕಿದರೆ ಸಾಕು ರಾಮದಾಸ್ ಗೆ ಅದೇ ಬಿಗ್ ಕ್ಯಾಚ್.

 

ಶಿವಮೊಗ್ಗಾದಲ್ಲಿ ಮಾತ್ರ ಹೊಳದಂಡೆಯ ಹಾಸ್ಟೆಲಿನಲ್ಲಿದ್ದಾಗ ಆವನು ಮೀನು ಹಿಡಿಯುವ ಉಸಾಬರಿಗೆ ಹೋಗ್ತಾಯಿರಲಿಲ್ಲ. ಮತ್ತೆ ಆ ಹವ್ಯಾಸದ ಪ್ರಯತ್ನಗಳ ಆಗೊಮ್ಮೆ ಈಗೊಮ್ಮೆ ಆಗುತ್ತಿದ್ದದ್ದು ಮೈಸೂರಿಗೆ ಹೋದ ಮೇಲೆ. ರಾಮದಾಸ ಗಂಗೋತ್ರಿಯ ಸ್ಟಾಫ್ ಕ್ವಾಟ್ರ್ರಸ್ ನಲ್ಲಿದ್ದಾಗ ನಾನು ಎಂ.ಎ.ಕಾಂಟಾಕ್ಟ್ ಪ್ರೋಗಾಂಗೆ ಅಂತ ಒಂದು ತಿಂಗಳು ಅವರ ಮನೆಯಲ್ಲಿ ಇದ್ದೆ. ಅದು ರಾಮದಾಸ್ ಗೆ ರಜೆಯ ಕಾಲ. ಅವತ್ತು ರಾಮದಾಸ್ ಬೆಳಗ್ಗೆ ಹೋದವರು ರಾತ್ರಿತನಕ ಬಂದಿರಲಿಲ್ಲ. 3-4 ಮೋಟಾರ್ ಬೈಕ್ ಗಳು ಹೋಗಿತ್ತಂತೆ. ನಾನು ಬಂದಿರೋದು ರಾಮದಾಸ್ ಗೆ ಗೊತ್ತಿರಲಿಲ್ಲ.ರಾತ್ರಿ ಹತ್ತರ ತನಕ ರಾಮದಾಸನನ್ನು ಕಾಯುತ್ತಿದ್ದೆ. ಮಂಜಕ್ಕ ಎರಡು ಮೂರು ಸಾರಿ ಹೇಳಿದ್ರು ವಿಲ್ಲಿ, ಸ್ವಲ್ಪ ತಾಳು, ರಾಮದಾಸ್ ಬಂದ ಮೇಲೆ ಊಟ ಮಾಡುವಿಯಂತೆ ಅಂತ.

 

10 ಗಂಟೆಗೆ ರಾಮದಾಸನ ಚೇತೋಹಾರಿ ಮೋಟಾರ್ ಬೈಕ್ ಬಂತು. ಬಂದವನೆ ನನಗೆ ನೋಡಿ ಸಂತೋಷದಿಂದ ಚೀಲದಿಂದ ದೊಡ್ಡ ಮೀನನೊಂದನ್ನು ತೆಗೆದು ತಾಯಿ ಕೈಯಲ್ಲಿ ಕೊಟ್ಟ. ಮಂಜಕ್ಕ 10-15 ನಿಮಿಷದಲ್ಲಿ ಪದಾರ್ಥ ಮಾಡಿಯೇ ಬಿಟ್ಟರು. ಮೀನು ಹೊರತು ಮತ್ತೆಲ್ಲವೂ ಸಿದ್ದವಾಗಿತ್ತು. ಏನು ಮರಾಯ ಎಂಥ ಮೀನು ತಂದಿದ್ದೀಯಾ ಅಂದಾಗ ‘ಇದೆಂಥ ಮೀನು’| ಇದಕ್ಕಿಂತ ದೊಡ್ಡ ಮೀನು ತಂದ ಕತೆಗಳನ್ನು ಬಹಳ ಹೊತ್ತು ಹೇಳುತ್ತಾ ಹೋದ. ರಾಮದಾಸದ ನ ಸಂದರ್ಭ ವಿವರಣೆ, ಹಾಸ್ಯ ಪ್ರಜ್ಞೆಯ ಚಿತ್ತಕ ಶಕ್ತಿಯ ಕೇಳುಗ ಮೋಡಿಯಾಗ್ತಾನೆ.

 

ರಾಮದಾಸ್ ಗೆ ದೊಡ್ಡ ದೊಡ್ಡ ಮೀನುಗಳು ಸಿಕ್ಕ ಹಾಗೆ, ಬಹಳ ಜನ ಯುವಮಿತ್ರರು ಸಿಗ್ತಾಯಿದ್ದರು. ಮನುಷ್ಯರನ್ನು ಹಿಡಿಯುವ ಮೀನುಗಾರ. ಆದರೆ ರಾಮದಾಸ ಎಂದೂ ತನ್ನ ಹಿಂಬಾಲಕರಿಗಾಗಿ ತನ್ನ ಗಾಳವನ್ನಾಗಲಿ, ಬಲೆಯನ್ನಾಗಲಿ ಬೀಸುತ್ತಿರಲಿಲ್ಲ. ಅವರಾಗಿಯೇ, ರಾಮದಾಸ್ ನ ವರ್ಚಸ್ಸನ್ನು ನೋಡಿ, ಅವನಲ್ಲಿ ಒಬ್ಬ ನಾಯಕನನ್ನು ಕಂಡು ಹಿಂಬಾಲಿಸುತ್ತಿದ್ದರು. ರಾಮದಾಸ ಅವರಾರಿಗೂ ನಿರಾಶೆ ಮಾಡಿಲ್ಲ, ದಾರಿ ತಪ್ಪಿಸಲಿಲ್ಲ. ಹಿಂಸೆ ಮಾರ್ಗವನ್ನು ತಾನು ಹಿಡಿಯಲಿಲ್ಲ, ತನ್ನವರೂ ಹಿಡಿಯಲು ಬಿಡಲಿಲ್ಲ. ಕೊನೆಯವರೆಗೂ ಅಪ್ಪಟ್ಟ ಪ್ರಜಾಪ್ರಭುತ್ವವಾದಿ, ಅಹಿಂಸವಾದಿ, ಇದನ್ನೇ ತನ್ನ ಹಿಂಬಾಲಕರಿಗೆ ಆದರ್ಶವಾಗಿ ಕೊಟ್ಟಿದ್ದು.

‍ಲೇಖಕರು avadhi

November 7, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಇಂದು ಸಂಜೆ ಜರುಗುವ 'ಅಮ್ಮ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ.....

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This