ನಾವ್ಯ್ಯಾಕೆ ಹೀಗಾದೆವು?

 

 

ಅಕ್ಷತಾ ಕೆ

ದಣಪೆಯಾಚೆ…

 

ನಾವ್ಯ್ಯಾಕೆ ಹೀಗಾದೆವು?

ಗಂಡಸರ ಕಥೆ ಹಾಳು ಬಡೀಲಿ ಬಿಡು ನಾವು ಹೆಂಗಸರ್ಯಾಕೆ ಹೀಗಾದ್ವಿ? ಅವಳು ಕೇಳಿದಳು. ನಾನು ಮತ್ತೆ ಮತ್ತೆ ಯೋಚಿಸಿದೆ ಹೌದಲ್ಲ ನಾವ್ಯಾಕೆ ಹೀಗಾದ್ವಿ … 

ಕುವೆಂಪು ಅವರ `ಮಲೆಗಳಲಿ ಮದುಮಗಳು’ ಕಾದಂಬರಿಯಲ್ಲಿ ಒಂದು ದೃಶ್ಯ ಬರುತ್ತದೆ. ಹೊಲೆಯರ ಆಳು ಸಣ್ಣಬೀರನನ್ನು ಯಜಮಾನಿಕೆಯ ದರ್ಪದಿಂದ ಗೌಡನೊಬ್ಬ ಕಂಬಕ್ಕೆ ಕಟ್ಟಿಸಿ ಹೊಡೆಸುತ್ತಿರುವಾಗ ಅಡುಗೆ ಮನೆಯಲ್ಲಿದ್ದ  ಗೌಡರ ಹೆಂಡತಿ ಅಲ್ಲಿಂದಲೇ ಹೊರಗೆ ನಡೆಯುತ್ತಿರುವುದನ್ನು ಗ್ರಹಿಸಿ ಹೋಗಪ್ಪಾ ಅಲ್ಲಿ ನಡೀತಿರುವುದನ್ನು ತಡೀ ಸಿಟ್ಟು ಬಂದಾಗ ನಿಮ್ಮಪ್ಪ ಮನುಷ್ಯರಾಗಿರುವುದಿಲ್ಲ ಎಂದು ಹೇಳಿ  ಆ ಭೀಭತ್ಸ ಘಟನೆ ನಡೆಯುತ್ತಿರುವಾಗ ಒಳಗೆ ಕೂತು ಅದರ ಬಗ್ಗೆ  ಒಂದು ರೀತಿಯ ನಿಲರ್ಿಪ್ತತೆ ವಹಿಸಿರುವ ಮಗನನ್ನು ಒತ್ತಾಯ ಪೂರ್ವಕವಾಗಿ ಜಗುಲಿಗೆ ಕಳುಹಿಸುತ್ತಾಳೆ. ಅಡುಗೆ ಮನೆಯಲ್ಲಿರುವ ತಾಯಿಗೆ ಆ ದೃಷ್ಯ ಕಣ್ಣಿಗೆ ಬಿದ್ದಿರುವುದಿಲ್ಲ ಆದರೆ ಅದರ ಭೀಭತ್ಸತೆಯನ್ನು ಗ್ರಹಿಸಿಯೇ ತಲ್ಲಣಿಸಿರುತ್ತಾಳೆ. ಮತ್ತು ಅದನ್ನು ತಡೆಯುವುದಕ್ಕಾಗಿ ಆಕೆ ಪ್ರಯತ್ನಿಸುತ್ತಾಳೆ.

ಇದು ಈ ಹೊತ್ತಿನಲ್ಲಿ ಮತ್ತೆ ಮತ್ತೆ ನೆನಪಾಗುತ್ತಿದೆ. ಚಚರ್್ಗಳ ಮೇಲೆ ಹಾಗೆ ಎಲ್ಲ ಕಡೆ ದಾಳಿ ನಡೆಯಿತಲ್ಲ, ಅದಕ್ಕೆ ಕಾರಣರಾದವರು, ಕುಮ್ಮಕ್ಕು ಕೊಟ್ಟವರು, ಅದರಿಂದ ಏನೋ ಸಾಧಿಸಿದವರಂತೆ ಬೀಗಿದವರು, ಅದು ನಾವೆ ಮಾಡಿದ ಕೃತ್ಯ ಎಂದು ಎದೆಯುಬ್ಬಿಸಿದವರು ಎಲ್ಲ ಗಂಡಸರೇ ಆಗಿರಬಹುದು ಖರೇ. ಆದರೆ ಅವರಿಗೂ ತಾಯಿ, ತಂಗಿ, ಹೆಂಡತಿ, ಎಲ್ಲ ಇದ್ದರಲ್ಲವೇ ಅವರು ಈ ಕೃತ್ಯವನ್ನು ಹೇಗೆ ಸಹಿಸಿದರು. ಗಂಡಸರು ಏನೇ ಕೊಚ್ಚಿದರೂ ಮನೆತನದ ಉದ್ದಾರ ಸೂತ್ರಕ್ಕೆ ಜೀವ ತೇಯುವವಳು ಹೆಣ್ಣೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು ಸ್ವತಃ ಗಂಡಸರು ಸಹ. ಹಾಗಿರುವಾಗ ಈ ಕಾರ್ಯದಲ್ಲಿ ತನಗೆ ಶಕ್ತಿ ನೀಡು ಭಗವಂತ ಎಂದು ಪದೇ ಪದೇ ಬೇಡುವ ಅವಶ್ಯಕತೆ ಬರುವುದು ಆಕೆಗೆ. ಮತ್ತೆ ಭಗವಂತನ ಕಾಣದ ಕೈಯೊಂದು ತನ್ನ ಶಿರದ ಮೇಲೆ ನೆಳಲಿನಂತೆ ಕಾಯುತ್ತಿದೆ ಎಂದು ನಂಬಿಕೆಯಿಟ್ಟವಳು ಅವಳೇ. ಹಾಗಿರುವಾಗ ಅವಳು ಬೇಡುವ ದೇವರುಗಳ ಪಟ್ಟಿಯಲ್ಲಿ ಕ್ರಿಸ್ತನ ಹೆಸರು ಇರದೇ ಇರಬಹುದು. ಎಂದಿಗೂ ಆಕೆ ಚಚರ್್ಗೆ ಕಾಲಿಡದೇ ಇರಬಹುದು ಆದರೆ ಆಕೆಗೆ ತನ್ನನ್ನು, ತನ್ನ ಸಂಸಾರವನ್ನು ಮನೆಯನ್ನು, ಆಸ್ತಿಯನ್ನು, ಸಕಲ ಸೌಭಾಗ್ಯಗಳನ್ನು  ಪೊರೆಯಲು ಶಿವ, ಕೃಷ್ಣ, ರಾಮನ ಮೊರೆ ಹೋಗುವೆನೋ ಹಾಗೆಯೇ ಕ್ರಿಸ್ತನನ್ನು  ನಂಬಿರುವ ಅವನ ಮೇಲೆ ಶ್ರದ್ಧೆ ಯಿಡುವ ಹೆಣ್ಣು ಮಕ್ಕಳು ಬಹಳಷ್ಟಿರುವರು ಎಂಬುದಂತೂ ತಿಳಿದೇ ಇದೆ. ದೇವರು ಬೇರೆ ಬೇರೆ ಇರಬಹುದು. ನಮಗೆ ನಮ್ಮ ದೇವರು ಹೆಚ್ಚಿರಬಹುದು ಅವರಿಗೆ ಅವರ ದೇವರೇ ಸರ್ವಶಕ್ತನೂ ಆಗಿರಬಹುದು ಆದರೆ ಎಲ್ಲ ಹೆಣ್ಣು ಮಕ್ಕಳು ದೇವರ ಮೊರೆಯಿಡುತ್ತಾರಲ್ಲ ಇದನ್ನು ಈಡೇರಿಸು ಇದನ್ನು ಈಡೇರಿಸು ಎಂದು ಅವರು ಬೇಡಿಕೊಳ್ಳುವ ವಿಷಯಗಳಲ್ಲಿ ಸಮಾನತೆ ಇರುತ್ತದೆ. ಹಾಗಿರುವಾಗ ಅದೆಷ್ಟೋ ಹೆಣ್ಣು ಮಕ್ಕಳು ನಂಬಿಕೊಂಡ ದೇವರ ದೇವಾಲಯವನ್ನೆ ನಾಶ ಮಾಡಿದವಲ್ಲ ಜೊತೆಗೆ ಅಲ್ಲಿಗೆ ಮನಃಶಾಂತಿಯನ್ನು ಬಯಸಿ ಹೋಗುತಿದ್ದ ಮನಸುಗಳಲ್ಲಿ ಒಂದು ರೀತಿಯ ಭಯ, ಆತಂಕವನ್ನು ತುಂಬಿದರಲ್ಲ ಆ ಮನುಷ್ಯರು  ಅವರ ತಾಯಂದಿರು, ಹೆಂಡತಿ, ಅಕ್ಕ, ತಂಗಿಯರು ಯಾರಿಗೂ ಏನೂ ಅನ್ನಿಸಲೇ ಇಲ್ಲವೆ ಹಾಗಾದರೆ? ದೇವಾಲಯದ ಮೇಲೆ ದಾಳಿ ಮಾಡಿದ, ಮನುಷ್ಯತ್ವವನ್ನೆ ಮರೆತ ನಿನಗೆ, ಬೇರೆಯವರ ನಂಬಿಕೆ ಮೇಲೆ ಹಲ್ಲೆ ನಡೆಸಿದ ನಿನಗೆ ನಾನು ನನ್ನ ಕೈಗಳಿಂದ ಉಣ್ಣಿಸಿ ಮಲಿನ ಮಾಡಿಕೊಳ್ಳಲಾರೆ ಎಂದು ತಾಯಿಯಾದವಳು ಅಬ್ಬರಿಸಿದ್ದರೆ, ಅಕ್ಕ ತಂಗಿಯರು ಬುದ್ದಿ ಹೇಳಿದ್ದರೆ, ಹೆಂಡತಿಯಾದವಳು ಸಾತ್ವಿಕ ಆಕ್ರೋಶವನ್ನು ವ್ಯಕ್ತ ಪಡಿಸಿದ್ದರೆ ಯಾವ ಗಂಡಸು ಇಂಥ ಕೃತ್ಯ ಮಾಡಲು ಮುಂದಾಗುತಿದ್ದ? ಕೊನೆ ಪಕ್ಷ ಇಂಥ ಹೀನ ಕೃತ್ಯದಲ್ಲಿ ಪಾಲ್ಗೊಂಡ ಬಗ್ಗೆ ಅವನಲ್ಲೊಂದು ಪಾಪ ಪ್ರಜ್ಞೆ ಯನ್ನಾದರೂ ಇದು ಹುಟ್ಟುಹಾಕದೇ ಹೋಗುತಿತ್ತೆ?

ಈ ವಿಷಯಕ್ಕೆ ಎಂದಲ್ಲ ಬಾಂಬ್ ಹಾಕಿ  ಅಮಾಯಕರ ಸಾವಿಗೆ ಕಾರಣವಾಗುವವರಿಗೂ, ಲಕ್ಷಗಟ್ಟಲೆ ಲಂಚ ಹೊಡೆದು ಬಡವರ ದುಡ್ಡಲ್ಲಿ ಬಂಗಲೆಯಲ್ಲಿ ಮೆರೆಯುವವರಿಗೂ, ಅಧಿಕಾರವಿದೆ ಎಂದು ದರ್ಪ ತೋರಿಸುವವರಿಗೂ,  ಸುಖಾ ಸುಮ್ಮನೆ ಜಾತಿ ಧರ್ಮದ ಹೆಸರಿನಲ್ಲಿ ಜನರ ಸಾವು ನೋವಿಗೆ ಪಿತೂರಿ ನಡೆಸುವ ವಿಕೃತ ಮನಸಿನವರಿಗೂ ಅವರ ತಾಯಿ, ಹೆಂಡತಿ, ಅಕ್ಕ ತಂಗಿಯರು ಮಾಡಬೇಕಾದ್ದು ಇದನ್ನೆ. ಆದರೆ ಅವೆಲ್ಲಕ್ಕಿಂತ ಮೊದಲು ನಾವು ಹೆಣ್ಣು ಮಕ್ಕಳು ಬಾಹ್ಯಾಢಂಬರವನ್ನು ತೊರೆದು ನಮ್ಮೊಳಗೆ ಜನ್ಮಗತವಾಗಿ ಬಂದಿರುವ ಮನುಷ್ಯತ್ವದ ಗುಣಗಳನ್ನು ಕಳೆಯದಂತೆ ಪೊರೆಯಬೇಕಲ್ಲ ಅದೆಷ್ಟೆ ಕಷ್ಟವಾದರೂ…

ಮೊನ್ನೆ ಒಂದು ಘಟನೆ ನಡೆಯಿತು. ಹಳ್ಳಿಯಲ್ಲಿರುವ ನನ್ನ ಗೆಳತಿ  ಹೇಳುತಿದ್ದಳು. ನನ್ನತ್ತೆ ಕೆಲಸದ ಆಳುಗಳಿಗೆ ಕೀಳು ಜಾತಿಯವರು ಅಂತ ಸಿಲಾವರದ ಲೋಟದಲ್ಲಿ ಯಾವತ್ತೂ ಕಾಫಿ ಕೊಡ್ತಿದ್ದರು. ನಾನು ಸ್ಟೀಲ್ ಲೋಟದಲ್ಲಿ ಕೊಡಿ ಅಂತ ಎಸ್ಟು ಹೇಳಿದ್ರೂ ಕೇಳ್ತಿರಲಿಲ್ಲ. ಅದಕ್ಕೆ ಮೊನ್ನೆ ಸಿಟ್ಟು ಬಂದು ಇನ್ಮೇಲೆ ಆಳುಗಳಿಗೆ ಕಾಫಿ ಕೊಡೋದೆ ಬೇಡ ಅಂತ ಕೂಗಾಡಿ ನಿಲ್ಲಿಸಿಬಿಟ್ಟೆ. ನಾನು ಕೇಳಿದೆ  ಇನ್ನು ಮುಂದೆ ನೀನು ಸ್ಟೀಲ್ ಲೋಟದಲ್ಲಿ  ಕಾಫಿ ಕೊಡ್ತೀಯಾ? ಇಲ್ಲಪ್ಪ  ಅತ್ತೆ ದಿನಕ್ಕೆ ನಾಲ್ಕು ಸರ್ತಿ ಕಾಫಿ ಕೊಡ್ತಿದ್ದರು ನನಗಷ್ಟು ಸರ್ತಿ ಒಲೆ ಹಚ್ಚೋಕೆ ಬೇಜಾರು ಅಂತದ್ರಲ್ಲಿ ಅವರಿಗೆ  ಕಾಫಿ ಕೊಡೋದು ಅದೆಲ್ಲ ಸಾಧ್ಯವಿಲ್ಲ. ನನ್ನದೇನಿದ್ರೂ ತಕರಾರಿದ್ದಿದ್ದು ಸ್ಟೀಲ್ ಲೋಟದಲ್ಲಿ ಕೊಡಿ ಅಂತ ವಿನಃ ಕಾಫಿ ಕೊಡೋ ಬಗ್ಗೆ ಅಲ್ವಲ್ಲ ಅಂದ್ಮೇಲೆ ನಾನ್ಯಾಕೆ ಯೋಚನೆ ಮಾಡ್ಲಿ. ನಾನಂದೆ ಇದರಿಂದ ಕೊನೆಗೂ ಆದ ಸಾಧನೆಯೆಂದರೆ ಹಗಲಿಡೀ ಬೆವರು ಸುರಿಸಿ ಗೇಯ್ಮೆ ಮಾಡೋ ಆ ಶ್ರಮಿಕರಿಗೆ ದಿನಾ ಕನಿಷ್ಟ ಎರಡು ಹೊತ್ತಾದರೂ ಬಿಸಿ ಕಾಫಿ ಸಿಗ್ತಾ ಇತ್ತು ಅದಕ್ಕೂ ಈಗ ಕಲ್ಲು ಬಿತ್ತು ಅಷ್ಟೆ. ಇದಕ್ಕೂ ಮೇಲೆ  ಹೇಳಿದೆನಲ್ಲ ಆ ಘಟನೆಗೂ  ಏನಾದರೂ ಸಂಬಂಧವಿದೆಯಾ? ನನಗಂತೂ ಇದೆ ಎನ್ನಿಸುತ್ತದೆ.      

 

 

‍ಲೇಖಕರು avadhi

October 5, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮೋಹನ ಮುರುಳಿಯ ಸೆಳೆತ.

ಮೋಹನ ಮುರುಳಿಯ ಸೆಳೆತ.

ಕಳೆದು ಹೋಗುವುದು ಎಚ್.ಆರ್. ರಮೇಶ ಇರುವುದರ ಮಹತ್ವವ ತಿಳಿಯದೆ ಇಲ್ಲದುದರ, ಕಳೆದು ಹೋದುದರ ಬಗ್ಗೆನೇ ಕೊರಗುತ್ತೇವೆ. ಕಳೆದು ಹೋದುದು ನಮ್ಮ...

ಅವರು ಮನಮೋಹನ್ ಅಂಕಲ್..

ಅವರು ಮನಮೋಹನ್ ಅಂಕಲ್..

ಶ್ಯಾಮಲಾ ಮಾಧವ ಮೊನ್ನೆ 'ಬಹುರೂಪಿ' ಜಂಗಲ್ ಡೈರಿ ಕೃತಿ ಪ್ರಕಟಿಸಿದೆ ಎಂದು ಗೊತ್ತಾಯಿತು. ಪತ್ರಕರ್ತ ವಿನೋದಕುಮಾರ್ ನಾಯ್ಕ್ ಬರೆದ ಪುಸ್ತಕವನ್ನು...

ಅವರು ಮನಮೋಹನ್ ಅಂಕಲ್..

ಅವರು ಮನಮೋಹನ್ ಅಂಕಲ್..

ಶ್ಯಾಮಲಾ ಮಾಧವ ಮೊನ್ನೆ 'ಬಹುರೂಪಿ' ಜಂಗಲ್ ಡೈರಿ ಕೃತಿ ಪ್ರಕಟಿಸಿದೆ ಎಂದು ಗೊತ್ತಾಯಿತು. ಪತ್ರಕರ್ತ ವಿನೋದಕುಮಾರ್ ನಾಯ್ಕ್ ಬರೆದ ಪುಸ್ತಕವನ್ನು...

5 ಪ್ರತಿಕ್ರಿಯೆಗಳು

 1. Guru Baliga

  ಒಂದ್ಸಾರಿ ಊಟದ ಸಮಯಕ್ಕೆ ಒಬ್ಬ ಹುಡುಗ ಮನೆ ಬಾಗಿಲಿಗೆ ಬಂದ. ಹಸಿವಾಗಿದೆ ತಿನ್ನಕ್ಕೆನಾದ್ರು ಕೊಡಿ ಅಂದ. ನಮ್ಮಮ್ಮ ನನ್ನನ್ನು ಪಕ್ಕದ ಮನೆಗೆ ಹೋಗಿ ಬಾಳೆ ಎಲೆ ತಾ ಅಂತ ಕಳಿಸಿದಳು. ಆಯಮ್ಮ ಯಾರಿಗೆ ಏನು ಕತೆ ಎಲ್ಲ ಕೇಳಿ ಬಾಳೆ ಎಲೆ ಬೇಡ ಅಂತ ಕೆಸುವಿನ ಎಲೆ ಕೊಯ್ದು ಕೊಟ್ಳು.
  ನನಗೆ ಇರುಸುಮುರುಸು. ಅಮ್ಮ ಹೇಳಿದ್ರು. ಈಗ ಆ ಹುಡುಗನಿಗೆ ಹಸಿವಾಗಿದೆ. ಯಾವುದರ ಮೇಲೆ ಬಳಸ್ತೀವಿ ಅನ್ನೋದು ಮುಖ್ಯವಲ್ಲ. ಊಟ ಕೊಡೋದು ಮುಖ್ಯ ಅಂತ ಜಗಲಿಯಲ್ಲಿ ಕೆಸುವಿನ ಎಲೆಯ ಮೇಲೆ ಊಟ ಬಳಸಿದರು. ಅವನು ಚೆನ್ನಾಗಿ ಉಂಡದ್ದು ನನಗೆ ನೆನಪಿದೆ. ಅವತ್ತು ಅಮ್ಮ ಇನ್ನೊಂದ್ಸಾರಿ ಅನ್ನ ಮಾಡಬೇಕಾಯಿತು.
  ಸಮಾನತೆಯ ದ್ವಂದ್ವಗಳಲ್ಲಿ ಬ್ರಾಹ್ಮಣ್ಯದ ಕೆಟ್ಟ ಮುಖಗಳು ಅಡ್ಡ ಕಾಲು ಹಾಕಿದ್ರು ಅದೇ ಬ್ರಾಹ್ಮಣ್ಯದ ಒಳ್ಳೆ ಮನಸ್ಸುಗಳು ಹಸಿವಾದವರಿಗೆ ಅನ್ನ ಕೊಟ್ಟಿವೆ. ಇದು ಗ್ರೇಟ್ ಅಂತ ಹೇಳ್ತಾ ಇಲ್ಲ. ಅವರಿಗೂ ಎಲ್ಲವನ್ನು ಬ್ಯಾಲೆನ್ಸ್ ಮಾಡಬೇಕಾದ ಅನಿವಾರ್ಯತೆಯೂ ಇತ್ತು ಅಂತ ಅನ್ನಿಸ್ತ ಇದೆ.

  ಪ್ರತಿಕ್ರಿಯೆ
 2. supreeth

  ಆತ್ಮಾವಲೋಕನಕ್ಕೆ ಯೋಗ್ಯವಾದ ಚಿಂತನೆಯಿದು. ಆದರೆ ನಾವು ಈ ಸಂಗತಿಯ ಮತ್ತೊಂದು ಆಯಾಮವನ್ನೂ ಸಹ ಗಮನಿಸಲೇಬೇಕು. ತಮ್ಮ ವೈಯಕ್ತಿಕ ಅಸೂಯೆಗಾಗಿ ಗಂಡಂದಿರನ್ನು ಶಸ್ತ್ರ ಸಜ್ಜಿತಗೊಳಿಸಿ, ತಾಯಿ ಹಾಲಿನಲ್ಲಿ ರೋಷವನ್ನೂ ಬೆರೆಸಿ ಕಳುಹಿಸುತ್ತಾಳೆ.
  ಚರ್ಚುಗಳ ಮೇಲೆ ಆಕ್ರಮಣ ಮಾಡಿರುವ ಹಿಂದು ಮನಸ್ಥಿತಿಯಲ್ಲಿ ಗಂಡು ಹೆಣ್ಣು ಎಂಬುದಿಲ್ಲ. ಧಾರ್ಮಿಕ ಭಾವನೆಯ ಪ್ರಶ್ನೆ ಬಂದಾಗ ಲಿಂಗ ಬೇಧ ಬಾಧಿಸದು ಎನ್ನಿಸುತ್ತದೆ.
  ಈ ದಾಳಿಯ ಹಿಂದಿನ ತಾತ್ವಿಕತೆ, ಅದರ ಸಾಚಾತನದ ಬಗ್ಗೆ ಚರ್ಚೆ ಪಕ್ಕಕ್ಕಿಟ್ಟು ನೋಡಿದರೆ ನಮ್ಮ ನಾಡಿನಲ್ಲಿ ಇಂಥ ಘಟನೆಗಳು ನಡೆಯುವುದು ಅವಮಾನಕರ ಎಂದೆನಿಸುತ್ತದೆ. ಪ್ರಾರ್ಥಿಸುವವರ, ಪ್ರಾರ್ಥನೆ ನಡೆಯುತ್ತಿರುವ ಆಲಯಗಳನ್ನು ದಾಳಿಗೆ ಗುರಿ ಮಾಡಿಕೊಳ್ಳುವುದು ಅಮಾನವೀಯ. ಅದಕ್ಕೆ ಪ್ರಚೋದನೆಗಳು ಎಷ್ಟೇ ನ್ಯಾಯಯುತವಾಗಿರಲಿ ಇಂಥ ಕೃತ್ಯಗಳು ಖಂಡನೀಯ.
  ಸುಪ್ರೀತ್

  ಪ್ರತಿಕ್ರಿಯೆ
 3. sughosh nigale

  ಗಂಡಸು ದೈಕಿಕವಾಗಿ ಸ್ತ್ರೀಗಿಂತ ಎಷ್ಟೇ ಗಟ್ಟಿಯಿದ್ದರೂ ಮಾನಸಿಕವಾಗಿ ಆಕೆಯನ್ನು ಸರಿಗಟ್ಟಲಾರ. ಆದರೆ ಯಾವ ಜಾತಿಗಳಲ್ಲಿ, ಮನೆಗಳಲ್ಲಿ, ಮನಗಳಲ್ಲಿ ಸ್ತ್ರೀಯರ ಸ್ವಾತಂತ್ರ ಹರಣ ಮಾಡಲಾಗಿದೆಯೋ ಅಂತಹ ಪರಿಸ್ಥಿತಿಗಳಲ್ಲಿ ಬಹುಷಃ ಸ್ತ್ರೀ ಅಸಹಾಯಕಳಾಗುತ್ತಾಳೆ. ಇದೆ ವೇಳೆ, ಸ್ತ್ರೀ ಸ್ವಾತಂತ್ರದ ಹೆಸರಿನಲ್ಲಿ ಸ್ವೆಚ್ಹಾರಕ್ಕೆ ಎಡೆಮಾಡಿ ಕೊಡುವ ನಿದರ್ಶನಗಳಿಗೂ ಭಾರತೀಯ ಸಮಾಜದಲ್ಲಿ ಕೊರತೆಯಿಲ್ಲ.

  ಪ್ರತಿಕ್ರಿಯೆ
 4. ಬಾಲಕೃಷ್ನ

  ಮುಖ್ಯವಾಗಿ ನಾವು ನಮ್ಮ ಮೂಲ ಸಂವೇದನೆಗಳನ್ನ ಕಳೆದುಕೊಳ್ಳುತಿದ್ದೇವೆ ಹಾಗು ನಮ್ಮಲ್ಲಿರಬೇಕಾದ ಸೂಕ್ಷ್ಮತೆಯಿಂದ ದೂರಸರಿಯುತಿದ್ದೇವೆ ಎನಿಸುತ್ತದೆ.

  ಪ್ರತಿಕ್ರಿಯೆ
 5. ಲಕ್ಷ್ಮೀನರಸಿಂಹ

  ಇದು ತುಂಬಾ ದಿನದಿಂದ ನಡೆಯುತ್ತಿರುವ ಚಿಂತನೆಯ ಮುಂದುವರಿಕೆ. ನಮ್ಮ ಸಾಂಪ್ರದಾಯಿಕ ಸಮಾಜದಲ್ಲಿ ಮಾನವೀಯತೆಯನ್ನು ಮೆರೆಯುತ್ತಿದ್ದಂತಹ ಸನ್ನಿವೇಶಗಳು ಅನೇಕವಿದ್ದವು. ‘ಸಾಮುದಾಯಿಕತೆ’ ಮುಖ್ಯವಾಗಿದ್ದಂತಹ ವಾತಾವರಣದಲ್ಲಿ ಸುಲಿಗೆ ಶೋಶಣೆಯ ಜೊತೆಗೆ ಈ ಲೇಖನದಲ್ಲಿ ಬಂದ ಹಾಗೆ ಮಾನವೀಯತೆ ತೋರುವ ಸಂಧರ್ಭಗಳು ಸಾಕಷ್ಟು ಇರುವಂತಹದನ್ನ ಕಾಣಬಹುದು. ಆದರೆ ಈ ಸುಲಿಗೆ, ಶೋಶಣೆಗಳ ವಿರುದ್ಧ ಸಾರಲಾದ ‘ಯುದ್ಧ’ದಲ್ಲಿ ಸಮಾಜದ ಸಾಮುದಾಯಿಕತೆ ‘ನಾಶ’? ವಾಗುತ್ತಿರುವುದು ಒಂದು ವಿಪರ್‍ಯಾಸ. ಒಂದೋ ಸಾಮುದಾಯಿಕತೆ ಇರದ ಸಮಾನತೆಯ ಸಮಾಜ ಅಥವಾ ಸಮಾನತೆ ಇರದ ಸಾಮುದಾಯಿಕ ಸಮಾಜ: ಇಂಥ ಆಯ್ಕೆಯ ಎದುರಲ್ಲಿ ನಮ್ಮ ಸಮಾಜ ಈಗಾಗಲೆ ಮೊದಲನೆಯದರ ಆಯ್ಕೆ ಮಾಡಿಯಾಗಿದೆ ಎನ್ನಿಸುತ್ತಿದೆ. ಹಾಗೆ ಮಾಡಿದಮೇಲೆ ಸಾಮುದಾಯಿಕತೆಯ, ಅದರಲ್ಲಿನ ಅವ್ಯಾಜ ಪ್ರೀತಿ, ಸಹಾನುಭೂತಿಯಂತಹ ಮೌಲ್ಯಗಳ ಕುರಿತು ಹಳಹಳಿಸುತ್ತಿದ್ದೇವೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: