ನಾ ದಿವಾಕರ್ ಕಾಲ೦ : ಅ೦ಬೇಡ್ಕರ್ ವ್ಯ೦ಗ್ಯ ಚಿತ್ರ ಮತ್ತು ಅಭಿವ್ಯಕ್ತಿ ಸ್ವಾತ೦ತ್ರ್ಯ

ಪ್ರಗತಿಪರತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ

– ನಾ ದಿವಾಕರ್

ಪ್ರಭುತ್ವ ಮತ್ತು ಸಕರ್ಾರಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುವುದು ಆಳುವ ವರ್ಗಗಳ ದೃಷ್ಟಿಯಿಂದ ಸ್ವಾಭಾವಿಕ. ಕಾರಣ, ಅದು ಅಧಿಕಾರ ರಕ್ಷಣೆಯ ಒಂದು ತಂತ್ರ ಮತ್ತು ಅಸ್ತ್ರವಾಗಿ ಪರಿಣಮಿಸುತ್ತದೆ. ಆದರೆ ಪ್ರಭುತ್ವದ ಇಂತಹ ದಮನಕಾರಿ ನೀತಿಗಳನ್ನು ವಿರೋಧಿಸುವ ಮೂಲಕ ಸಾಮಾಜಿಕ ಪ್ರಜ್ಞೆ ಮೂಡಿಸಿ ಜನಸಾಮಾನ್ಯರನ್ನು ಆಳುವ ವರ್ಗಗಳ ಅನೀತಿ, ಕುತಂತ್ರಗಳ ವಿರುದ್ಧ ಬಡಿದೆಬ್ಬಿಸುವ ಗುರುತರ ಜವಾಬ್ದಾರಿ ಹೊತ್ತಿರುವ ಸಂಘಟನೆಗಳು ಯಾವುದೇ ಸಂದರ್ಭದಲ್ಲೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಪ್ರಯತ್ನ ಮಾಡುವಂತಿಲ್ಲ. ಹಾಗೊಮ್ಮೆ ಮಾಡಿದಲ್ಲಿ ಪ್ರಭುತ್ವದ ದಮನಕಾರಿ ನೀತಿಗಳಿಗೆ ಇಂಬು ಕೊಟ್ಟಂತಾಗುತ್ತದೆ. ಆದರೆ ದುರಾದೃಷ್ಟವಶಾತ್ ಭಾರತದ ಸಂದರ್ಭದಲ್ಲಿ ಇದು ಒಂದು ಸಹಜ ಪ್ರವೃತ್ತಿಯಾಗಿ ವ್ಯಕ್ತವಾಗುತ್ತಿದೆ. ಜಾತಿ, ಧರ್ಮ, ಭಾಷೆ, ಪ್ರಾದೇಶಿಕ ಅಸ್ಮಿತೆ ಮತ್ತು ವ್ಯಕ್ತಿ ಪೂಜೆಯ ಹಿನ್ನೆಲೆಯಲ್ಲಿ ಸಂಘಟಿತರಾಗುವ ಜನಸಮುದಾಯಗಳು ತಮ್ಮ ಸಂಘಟನಾತ್ಮಕ ಧ್ಯೇಯಗಳನ್ನೂ ಮರೆತು ವ್ಯಕ್ತಿಗತ ವೈಭವೀಕರಣದಲ್ಲಿ ತೊಡಗಿದಾಗ ಸಂಘಟನಾತ್ಮಕ ಧ್ಯೇಯೋದ್ದೇಶಗಳಿಗಿಂತಲೂ ಸ್ವಹಿತಾಸಕ್ತಿಗಳೇ ಪ್ರಧಾನವಾಗಿಬಿಡುತ್ತವೆ.

ಹಾಗಾಗಿ ಕೆಲವು ಐತಿಹಾಸಿಕ ವ್ಯಕ್ತಿಗಳು ಪ್ರಶ್ನಾತೀತವಾಗಿಬಿಡುತ್ತಾರೆ, ಸ್ಪರ್ಷಾತೀತವಾಗಿಬಿಡುತ್ತಾರೆ. ಬಹುಶಃ ಸಂವಿಧಾನ ಕತೃ ಡಾ. ಬಿ.ಆರ್.ಅಂಬೇಡ್ಕರ್ ಈಗ ಹಲವರ ದೃಷ್ಟಿಯಲ್ಲಿ ಈ ರೀತಿಯ ಪ್ರಶ್ನಾತೀತ ನಾಯಕರಾಗಿದ್ದಾರೆ. ಅಂಬೇಡ್ಕರ್ ಅವರನ್ನು ಶ್ಲಾಘಿಸುವುದಾದರೆ ಒಪ್ಪಿಗೆ, ಟೀಕಿಸುವುದಾದರೆ ಪ್ರತಿಭಟನೆ ಎಂಬ ಒಂದು ಹೊಸ ಮಂತ್ರ ಇಂದು ದಲಿತ ಸಂಘಟನೆಗಳ ನಡುವೆ, ರಾಜಕೀಯ ಪಕ್ಷಗಳ ನಡುವೆ ಬೆಳೆದುಬಂದಿದೆ. ಎರಡೂ ಬಣಗಳಿಗೆ ಅಂಬೇಡ್ಕರ್ ಒಬ್ಬ ಮಹಾನ್ ಧೀಮಂತ ಪ್ರೇರೇಪಣಾ ಶಕ್ತಿಯಾಗಿ ಕಂಡುಬರುವುದಿಲ್ಲ. ಬದಲಾಗಿ ತಮ್ಮ ರಾಜಕೀಯ, ಸಾಂಸ್ಥಿಕ ಮತ್ತು ಸಂಘಟನಾತ್ಮಕ ಅಸ್ಮಿತೆಗಳ ಉಳಿವಿಗೆ ಒಂದು ಅಸ್ತ್ರವಾಗಿ ಕಂಡುಬರುತ್ತಾರೆ. ಹಾಗಾಗಿಯೇ 1949ರಲ್ಲಿ ಪ್ರಕಟವಾಗಿದ್ದ ಅಂಬೇಡ್ಕರ್ ಅವರ ವ್ಯಂಗ್ಯ ಚಿತ್ರವೊಂದನ್ನು ಪಠ್ಯಕ್ರಮದಲ್ಲಿ ಅಳವಡಿಸುವ ಎನ್ಸಿಇಆರ್ಟಿ ಸಂಸ್ಥೆಯ ಕ್ರಮವನ್ನು ಉಗ್ರವಾಗಿ ಖಂಡಿಸಲಾಗುತ್ತಿದ್ದು, ಪಠ್ಯವನ್ನೇ ಬಹಿಷ್ಕರಿಸಲು ಆಗ್ರಹಿಸಲಾಗುತ್ತಿದೆ. ಸಂಸತ್ತಿನಲ್ಲಿ ಸಂಸದರು ಪಕ್ಷಾತೀತವಾಗಿ ಈ ಕೂಗಿಗೆ ಸ್ಪಂದಿಸಿದ್ದರೆ, ಕೆಲವು ದಲಿತ ಸಂಘಟನೆಗಳು ಈ ಪಠ್ಯವನ್ನು ರೂಪಿಸಿದ ಪ್ರೊಫೆಸರ್ ಕಚೇರಿಯ ಮೇಲೆ ದಾಳಿ ನಡೆಸುವ ಮೂಲಕ ತಮ್ಮ ಅಸಹನೆ ಮತ್ತು ಕ್ರೌರ್ಯವನ್ನು ಪ್ರದರ್ಶಿಸಿವೆ. ಅಂಬೇಡ್ಕರ್ ಭಾರತದ ಸಂವಿಧಾನ ಕರ್ತೃ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಸಂವಿಧಾನದ ಒಡೆಯರಲ್ಲ. ಭಾರತದ ಸಂವಿಧಾನಕ್ಕೆ ತನ್ನದೇ ಆದ ಸ್ವಂತಿಕೆ, ಅಸ್ತಿತ್ವ ಇದೆ. ಇಂತಹ ಮಹಾನ್ ಸಂವಿಧಾನವನ್ನು ರೂಪಿಸಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಈ ಸಂವಿಧಾನ ರಚನೆಯ ಸಂದರ್ಭದಲ್ಲಿ ಉಂಟಾದ ವಿಳಂಬವನ್ನು ತಮ್ಮದೇ ಆದ ದೃಷ್ಟಿಯಿಂದ ನೋಡಿರುವ ವ್ಯಂಗ್ಯಚಿತ್ರಕಾರ ಶಂಕರ್, ಅತ್ಯಂತ ನಿಧಾನಗತಿಯಲ್ಲಿ ಚಲಿಸುವ ಬಸವನ ಹುಳುವಿನ ಮೇಲೆ ಕುಳಿತ ಅಂಬೇಡ್ಕರ್ ಅವರನ್ನು ಪ್ರಧಾನಿ ನೆಹರೂ ಚಾಟಿಯಿಂದ ಮುನ್ನಡೆಸುತ್ತಿರುವ ವ್ಯಂಗ್ಯ ಚಿತ್ರವನ್ನು ಬಿಡಿಸಿದ್ದಾರೆ. ಇದರಲ್ಲಿ ಅಪರಾಧವೇನಿದೆ ಎಂದು ಪ್ರತಿಭಟನಕಾರರು ಹೇಳಬೇಕಾಗಿದೆ. ಸಂವಿಧಾನ ರಚನೆಯ ಪ್ರಕ್ರಿಯೆಯಲ್ಲಿ ವಿಳಂಬವಾಗಿರಲೂಬಹುದು, ಇದರಿಂದ ನೆಹರೂ ಅವರಷ್ಟೇ ಅಲ್ಲ, ಸ್ವತಃ ಅಂಬೇಡ್ಕರ್ ಸಹ ನಿರಾಶರಾಗಿರಬಹುದು. ಒಬ್ಬ ಕಲಾವಿದ ದೃಷ್ಟಿಯಲ್ಲಿ ಈ ಪ್ರಸಂಗ ಈ ರೀತಿ ಕಂಡಿರಲೂಬಹುದು. ಆದರೆ ಒಬ್ಬ ಕಲಾವಿದನ ಆಂತರ್ಯವನ್ನಾಗಲಿ, ಕಲೆಯ ಮೂಲಕ ವ್ಯಕ್ತವಾಗುವ ಅಭಿವ್ಯಕ್ತಿಯನ್ನಾಗಲೀ, ಅಂಬೇಡ್ಕರ್ ವಿರಚಿತ ಸಂವಿಧಾನವೇ ದಯಪಾಲಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಆಗಲಿ ಗುರುತಿಸದ ಸಂಘಟನೆಗಳು ಸ್ವತಃ ಪ್ರಜಾತಂತ್ರವನ್ನು ಅಪಮೌಲ್ಯಗೊಳಿಸುವುದೇ ಅಲ್ಲದೆ, ಅಂಬೇಡ್ಕರ್ ಅವರ ವ್ಯಕ್ತಿತ್ವಕ್ಕೂ ಮಸಿ ಬಳಿಯುತ್ತಿದ್ದಾರೆ. ಒಬ್ಬ ವ್ಯಂಗ್ಯ ಚಿತ್ರಕಾರನಿಗೆ ತನ್ನ ಸುತ್ತಲಿನ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಿದ್ಯಮಾನಗಳು ವಿಭಿನ್ನವಾಗಿಯೇ ಕಾಣುತ್ತವೆ. ಸಂವಿಧಾನವನ್ನು ರಚಿಸಿದ ಸಂದರ್ಭ, ಸಂವಿಧಾನ ರಚನಾ ಮಂಡಲಿಯಲ್ಲಿದ್ದ ಸದಸ್ಯರುಗಳ ಭಿನ್ನಾಭಿಪ್ರಾಯ ಮತ್ತು ಭಾರತದ ಸಾಮಾಜಿಕ ವ್ಯವಸ್ಥೆಗೆ ಅನುಗುಣವಾಗಿ ಸಂವಿಧಾನವನ್ನು ರಚಿಸುವ ಅಂಬೇಡ್ಕರ್ ಅವರ ದೃಢ ನಿರ್ಧಾರ ಇವೆಲ್ಲವೂ ಸಹ ಒಂದೇ ರಾತ್ರಿಯಲ್ಲಿ, ಒಬ್ಬರೇ ವ್ಯಕ್ತಿಯಿಂದ ಸಂಭವಿಸಿದ ಘಟನೆಗಳಲ್ಲ. ದೇಶಾದ್ಯಂತ ಜನಾಭಿಪ್ರಾಯ ಸಂಗ್ರಹಿಸಿದಿದ್ದರೂ, ಪ್ರಾದೇಶಿಕ ಪ್ರಾತಿನಿಧಿತ್ವದ ಮೂಲಕ ಜನರ ಮನದಾಳದ ಇಂಗಿತಗಳನ್ನು ಗ್ರಹಿಸಿ ರಚಿಸಲಾದ ಸಂವಿಧಾನಕ್ಕೆ ಒಂದು ಸ್ಪಷ್ಟ ಸ್ವರೂಪ ಮತ್ತು ಪ್ರಜಾಸತ್ತಾತ್ಮಕ ಲಕ್ಷಣಗಳನ್ನು ನೀಡಿದವರು ಅಂಬೇಡ್ಕರ್ ಮತ್ತಿತರ ಸದಸ್ಯರುಗಳು. ಈ ಹೆಮ್ಮೆಯ ಸಾಧನೆಯನ್ನು ಶ್ಲಾಘಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವೂ ಹೌದು. ಆದರೆ ಸಂವಿಧಾನ ರಚನೆಯ ಪ್ರಕ್ರಿಯೆಯಲ್ಲಿ ನಡೆದಿರಬಹುದಾದ ಅಪಭ್ರಂಶಗಳನ್ನು ಮತ್ತು ವಿಳಂಬವನ್ನು ಅಲ್ಲಗಳೆಯಲಾಗುವುದಿಲ್ಲ. ಭಾರತದ ಸಂವಿಧಾನವೇನೂ ಸರ್ವಸಮ್ಮತಿಯಿಂದ ಒಪ್ಪಿತವಾದದ್ದಲ್ಲ. ಅಥವಾ ಪ್ರಶ್ನಾತೀತವಾದ ಪವಿತ್ರ ಗ್ರಂಥವೂ ಅಲ್ಲ. ಹಾಗಾಗಿದ್ದರೆ ಸಂವಿಧಾನಕ್ಕೆ ತಿದ್ದುಪಡಿ ತರಲೂ ಆಗುತ್ತಿರಲಿಲ್ಲ. ಸಂವಿಧಾನದ ನಿಯಮಗಳು ಆದಷ್ಟೂ ಬದಲಾವಣೆಗೆ ಒಳಪಡುವಂತಿರಬೇಕು ಎಂದು ಅಂಬೇಡ್ಕರ್ ಅವರೇ ಪ್ರತಿಪಾದಿಸಿದ್ದರು. ಹೀಗಿರುವಾಗ ಅಂಬೇಡ್ಕರ್ ಅವರ ವ್ಯಂಗ್ಯ ಚಿತ್ರವನ್ನು ಅವಹೇಳನಕಾರಿ ಎಂದು ಪರಿಗಣಿಸುವುದು ಅಪ್ರಬುದ್ಧತೆಯ ಪರಮಾವಧಿ ಎಂದಷ್ಟೇ ಹೇಳಬಹುದು. ವಿಪರ್ಯಾಸವೆಂದರೆ ಅನೇಕ ದಲಿತ ಸಂಘಟನೆಗಳು ಈ ಪ್ರತಿಭಟನೆಗಳಿಗೆ ದನಿಗೂಡಿಸಿರುವುದು. ಮಹಾರಾಷ್ಟ್ರದಲ್ಲಿ ಫ್ಯಾಸಿಸ್ಟ್ ಪಕ್ಷಗಳೊಡನೆ ಮೈತ್ರಿ ಸಾಧಿಸಿರುವ, ಬಹುತೇಕ ಸಂದರ್ಭಗಳಲ್ಲಿ ಕಾಂಗ್ರೆಸ್ನೊಡನೆ ಕೈಜೋಡಿಸಿರುವ ಆರ್ಪಿಐ ಎನ್ಸಿಇಆರ್ಟಿ ಪ್ರೊಫೆಸರ್ ಪಾಲ್ಷಿಕರ್ ಅವರ ಕಚೇರಿಯ ಮೇಲೆ ದಾಳಿ ನಡೆಸಿರುವುದು ಅಂಬೇಡ್ಕರ್ ಅವರ ಮೇಲಿನ ಗೌರವದಿಂದಲೋ ಅಥವಾ ಕ್ಷೀಣಿಸುತ್ತಿರುವ ಪಕ್ಷದ ವರ್ಚಸ್ಸನ್ನು ಉಳಿಸಿಕೊಳ್ಳಲೋ ಎಂದು ಯೋಚಿಸಬೇಕಿಲ್ಲ. ಅಷ್ಟಕ್ಕೂ ಶಂಕರ್ ಅವರ ವ್ಯಂಗ್ಯ ಚಿತ್ರ ಏನನ್ನು ಬಿಂಬಿಸುತ್ತದೆ. ಸಂವಿಧಾನ ರಚನೆಯ ನೇತೃತ್ವವನ್ನು ಅಂಬೇಡ್ಕರ್ ವಹಿಸಿಕೊಂಡಿರುತ್ತಾರೆ, ಸಂವಿಧಾನ ರಚನೆಯಲ್ಲಿನ ವಿಳಂಬವನ್ನು ಸಹಿಸಲಾರದ ಪ್ರಧಾನಿ ಶೀಘ್ರಗತಿಯಲ್ಲಿ ಚಲಿಸಲು ಆದೇಶ ನೀಡುತ್ತಿದ್ದಾರೆ ಎಂಬ ಸಂದೇಶವನ್ನು ನೀಡುತ್ತದೆ. ಇಲ್ಲಿ ಅಂಬೇಡ್ಕರ್ ಅವರಿಗೆ ಅವಮಾನವಾಗುವ ಸಂಭವವೇ ಉದ್ಭವಿಸುವುದಿಲ್ಲ. ಸ್ವತಃ ಅಂಬೇಡ್ಕರ್ ಅವರೂ ಸಹ ಇದನ್ನು ವಿರೋಧಿಸುತ್ತಿರಲಿಲ್ಲ. ಆದರೆ ದಲಿತರನ್ನು ತಮ್ಮ ರಾಜಕೀಯ ಚದುರಂಗದಾಟದ ದಾಳಗಳಂತೆ ಬಳಸುವ ರಾಜಕೀಯ ಪಕ್ಷಗಳಿಗೆ ಈ ವ್ಯಂಗ್ಯ ಚಿತ್ರ ವೋಟ್ ಬ್ಯಾಂಕ್ ರಾಜಕಾರಣದ ಪರಿಕರವಾಗಿ ಪರಿಣಮಿಸಿದೆ. ಇರಲಿ,ರಾಜಕೀಯ ಪಕ್ಷಗಳ ಲಕ್ಷಣವೇ ಅದು. ಆದರೆ ನಮ್ಮ ದಲಿತ ಸಂಘಟನೆಗಳಿಗೇನಾಗಿದೆ ? ಅಂಬೇಡ್ಕರ್ ಅವರನ್ನು ಪ್ರಶ್ನಿಸಲೇ ಬಾರದು, ಟೀಕಿಸಲೇ ಬಾರದು ಎಂಬ ನಿಯಮವನ್ನು ಮಾಡಿದವರಾರು. ಅಂಬೇಡ್ಕರ್ ಅವರ ನಿಂದನೆ ತರವಲ್ಲ. ಇದು ಒಪ್ಪುವ ಮಾತು. ಆದರೆ ಅವರ ನಿಲುವುಗಳನ್ನು ಪ್ರಶ್ನಿಸುವುದು ಅಪರಾಧವೇನಲ್ಲ. ಗಾಂಧೀಜಿಯಾಗಲಿ, ಅಂಬೇಡ್ಕರ್ ಆಗಲಿ ತಮ್ಮ ರಾಜಕೀಯ ಜೀವನದಲ್ಲಿ ತಪ್ಪು ಹೆಜ್ಜೆಗಳನ್ನು ಇಟ್ಟವರೇ ಅಲ್ಲವೆಂದು ವಾದಿಸುವುದು ಕೇವಲ ವಿತಂಡವಾದ ಮಾತ್ರವಲ್ಲ, ಅಪ್ರಬುದ್ಧ ವಾದವಾಗುತ್ತದೆ. ರಾಷ್ಟ್ರೀಯ ನಾಯಕರುಗಳನ್ನು ನಾವು ಗೌರವಿಸುವುದೇ ಆದರೆ ಅವರ ವೈಭವೀಕರಣವನ್ನು ನಿಲ್ಲಿಸಬೇಕು. ಈ ಮಹಾನ್ ನಾಯಕರು ಪ್ರಶ್ನಾತೀತರಲ್ಲ, ಸ್ಪಶರ್ಾತೀತರಲ್ಲ ಎಂದು ಭಾವಿಸಬೇಕು. ಅಂಬೇಡ್ಕರ್ ತೀವ್ರವಾಗಿ ವಿರೋಧಿಸಿದ ಅಸ್ಪೃಶ್ಯತೆಯಷ್ಟೇ ಅಪಾಯಕಾರಿ ಮತ್ತು ಆಘಾತಕಾರಿಯಾದದ್ದು ಸ್ಪರ್ಷಾತೀತತೆ. ವಿಪಯರ್ಾಸವೆಂದರೆ ದೇಶದ ಸಂವಿಧಾನಕ್ಕೆ ಪ್ರಜಾಪ್ರಭುತ್ವದ ಮಹತ್ತರ ಅಂಶಗಳನ್ನು ಸೇರಿಸಿ, ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಒಂದು ಹೊಸ ವಿಶಿಷ್ಟ ಆಯಾಮ ಒದಗಿಸಿದ ಬಿ.ಆರ್. ಅಂಬೇಡ್ಕರ್ ಇಂದು ಪ್ರಜಾತಂತ್ರ ವಿರೋಧಿ ಪಕ್ಷ-ಸಂಘಟನೆಗಳ ಕೈಗೊಂಬೆಯಾಗಿದ್ದಾರೆ. ಅಂಬೇಡ್ಕರ್ ಅವರ ಮೂಲ ಸಿದ್ಧಾಂತ, ಧ್ಯೇಯ ಮತ್ತು ಉನ್ನತ ಆದರ್ಶಗಳು ಮಣ್ಣುಪಾಲಾಗುತ್ತಿದ್ದರೂ, ಅವರ ಪ್ರತಿಮೆಗಳು, ಫ್ಲೆಕ್ಸ್ ಬೋರ್ಡ್ಗಗಳು ದೇಶಾದ್ಯಂತ ರಾರಾಜಿಸುತ್ತಿವೆ. ಹಾರ ತುರಾಯಿಗಳು ಈ ಪ್ರತಿಮೆಗಳನ್ನು ಕಂಗೊಳಿಸುವಂತೆ ಮಾಡುತ್ತಿವೆ. ಆದರೆ ಎಲ್ಲೋ ಒಂದು ಕಡೆ ಈ ಪ್ರತಿಮೆಗಳ ಹಿಂದಿರುವ ಅಂಬೇಡ್ಕರ್ ಅವರ ಚಿಂತನೆ, ಧೋರಣೆ ಮತ್ತು ಸಿದ್ಧಾಂತಗಳು ಅನಾಥ ಪ್ರಜ್ಞೆಯಿಂದ ಬಳಲುತ್ತಿರುವುದು ಗೋಚರಿಸುತ್ತಿದೆ. ಎಂ.ಎಫ್. ಹುಸೇನರ ಕಲೆಯನ್ನು ನಾಶಪಡಿಸಿದ ಸಂಘಪರಿವಾರಕ್ಕೂ, ವ್ಯಂಗ್ಯಚಿತ್ರಕಾರನನ್ನು ಬಂಧಿಸಿದ ಮಮತಾ ದೀದಿಗೂ, ಸಲ್ಮಾನ್ ರಷ್ದಿಯ ತಲೆದಂಡಕ್ಕಾಗಿ ಹಾತೊರೆಯುತ್ತಿರುವ ಮುಸ್ಲಿಂ ಮೂಲಭೂತವಾದಿಗಳಿಗೂ, ಅಂಬೇಡ್ಕರ್ ವ್ಯಂಗ್ಯ ಚಿತ್ರವನ್ನು ಖಂಡಿಸಿ, ಎನ್ಸಿಇಆರ್ಟಿ ಪ್ರೊಫೆಸರ್ ಕಚೇರಿಯ ಮೇಲೆ ದಾಳಿ ನಡೆಸಿ, ಯೋಗೆಂದ್ರ ಯಾದವ್ ಮತ್ತು ಪಾಲ್ಷಿಕರ್ ತಮ್ಮ ಹುದ್ದೆಗಳಿಗೆ ರಾಜೀನಾಮೆ ಕೊಡುವಂತೆ ಮಾಡಿದ ದಲಿತ ನಾಯಕರುಗಳಿಗೂ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ಇದು ಸ್ವತಂತ್ರ ಭಾರತದ ಮತ್ತೊಂದು ದುರಂತ.]]>

‍ಲೇಖಕರು G

May 18, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ನಾ ದಿವಾಕರ ನಮ್ಮ ಸುತ್ತಲಿನ ನಾಗರಿಕ ಸಮಾಜದಲ್ಲಿ ಸಂವೇದನೆ ಕ್ಷೀಣಿಸುತ್ತ್ತಿದೆ ಎಂದು ಹಲವು ಬಾರಿ ಭಾಸವಾಗುತ್ತದೆ. ಇನ್ನೂ ಕೆಲವೊಮ್ಮೆ ನಮ್ಮ...

3 ಪ್ರತಿಕ್ರಿಯೆಗಳು

  1. ವಿ.ಎನ್.ಲಕ್ಷ್ಮೀನಾರಾಯಣ

    ಲೇಖನ ಸಕಾಲಿಕ,ಸಮಂಜಸ ಹಾಗೂ ಸರಿಯಾಗಿದೆ. ಅಪ್ರಿಯವಾದ, ಸುಲಭವಾಗಿ ಅಥವಾ ದುರುದ್ದೇಶಪೂರಿತವಾಗಿ ಮೇಲ್ಜಾತಿಯ ಜನರ ಅಸಂವೇದನೆಯೆಂದು ತಿರುಚಿ ದೂಷಿಸಲು ಆಸ್ಪದವಿರುವ ಅಭಿಪ್ರಾಯಗಳನ್ನು ಎದೆಗುಂದದೆ ಮಂಡಿಸಿದ್ದೀರಿ. ಯಾವುದೇ ರೂಪದಲ್ಲಿ ಪ್ರಕಟಿಸಿದ ನಿರ್ದಿಷ್ಟವಾದ, ಸಾಂದರ್ಭಿಕ ಟೀಕೆ, ದೃಷ್ಟಿಕೋನ, ಅಭಿಪ್ರಾಯವನ್ನು ಮೇಲುಜಾತಿಯ ಜನರ ಮನೋಭೂಮಿಕೆಯ ಬಿಂಬವೆಂದು ಪ್ರತಿಭಟಿಸುವುದಾಗಲಿ ಅಥವಾ, ದೃಷ್ಟಿಕೋನಭೇದದ ಅಸಹನೆಯನ್ನು ಅಲ್ಪಸಂಖ್ಯಾತರ ಸಂವೇದನೆಯ ಸೂಕ್ಷ್ಮತೆಯೆಂದು ಕೀರ್ತಿಸುವುದಾಗಲಿ ರಾಜಕೀಯವಾಗಿ ಸರಿಯಾದ ಗ್ರಹಿಕೆಯಲ್ಲ. ದೃಷ್ಟಿಕೋನ ಭೇದಕ್ಕೆ ಜಾಗವಿಲ್ಲದಂತೆ ಎಲ್ಲಾ ಕಡೆಗಳಿಂದಲೂ ಆವರಿಸುತ್ತಿರುವ ತೀವ್ರ ಅಸಹನೆಯ ಮನೋವೃತ್ತಿ ಇಂದಿನ ಜಾಗತೀಕರಣದ ರಾಜಕೀಯದಲ್ಲಿ ಕಾಣುವ ಆತಂಕಕಾರಿಯಾದ ಬೆಳವಣಿಗೆ. ಮುಖ್ಯವಾಗಿ, ಮನಮೋಹನ್ ಸರಕಾರ, ತನ್ನ ಆದರ್ಶವೆಂದು ಒಪ್ಪಿ ಅನುಸರಿಸುತ್ತಿರುವ ಜಾಗತಿಕ ಬಂಡವಾಳ, ಪ್ರಜಾತಂತ್ರ, ಪಾರದರ್ಶಕತೆ ಮತ್ತು ಮಾನವತಾವಾದದ ಮುಖವಾಡ ಧರಿಸಿ ಎಲ್ಲರನ್ನೂ ದಾರಿತಪ್ಪಿಸುತ್ತಿದೆ. ಭಾರತದಲ್ಲಿ ಈಗಿರುವಷ್ಟು ಭ್ರಷ್ಟಾಚಾರ, ಕೋಮುವಾದ ಮತ್ತು ಫ್ಯಾಸಿಸ್ಟ್ ಧೋರಣೆ ಹಿಂದೆಂದೂ ಇರಲಿಲ್ಲ. ಜಾಗತಿಕ ಬಂಡವಾಳಕ್ಕೂ, ಈ ಬೆಳವಣಿಗೆಗಳಿಗೂ ಇರುವ ಕರಳುಬಳ್ಳಿ ಸಂಬಂಧವನ್ನು ನೋಡಲಾಗದ, ಸಮಗ್ರ ಸೈದ್ಧಾಂತಿಕ ಸ್ಪಷ್ಟತೆಯಿಲ್ಲದ ಪಕ್ಷ, ಸಂಘಟನೆಗಳು ತಮ್ಮ ಪ್ರತಿಭಟನಾ ಶಕ್ತಿ ಮತ್ತು ಚಿಂತನಾ ಸಾಮರ್ಥ್ಯಗಳನ್ನು ಎಲ್ಲೆಲ್ಲೋ ವ್ಯರ್ಥಮಾಡಿಕೊಳ್ಳುವುದು ಅನಿವಾರ್ಯ. ದಲಿತ ಸಂಘಟನೆಗಳೂ ಇದಕ್ಕೆ ಹೊರತಲ್ಲ. ಹುಸಿ ವಿವಾದಗಳನ್ನು ಎಬ್ಬಿಸಿ ನಿಜವಾದ ವಿವಾದಗಳತ್ತ ಶೋಷಿತರು ಗಮನಹರಿಸಲಾಗದಂತೆ ಮಾಡುವ ತಂತ್ರ ಜಾಗತಿಕ ಬಂಡವಾಳದ ಅಸ್ತ್ರಗಳಲ್ಲಿ ತುಂಬಾ ಪುರಾತನವಾದದ್ದು. ಭಾಷಾಭಿಮಾನ, ಲೈಂಗಿಕ ತಾರತಮ್ಯ, ದೇಶಭಕ್ತಿ, ವ್ಯಕ್ತಿಪೂಜೆ, ಜಾತಿ-ಧರ್ಮ-ನಂಬಿಕೆಗೆ ಸಂಬಂಧಿಸಿದ ವಿವಾದಗಳನ್ನು ತನಗೆ ಬೇಕಾದಾಗಲೆಲ್ಲಾ ಹುಟ್ಟುಹಾಕಿ ಜನರ ನೈಜ ಸಮಸ್ಯೆಗಳನ್ನು ಮರೆಸುವ ಕಲೆ ಜಾಗತಿಕ ಬಂಡವಾಳಕ್ಕೆ ಕರಗತವಾಗಿದೆ. ಬಿಲಿಯರ್ಡ್ಸ್ ಆಟದಂತೆ ಎಲ್ಲೋ ಗುರಿಯಿಟ್ಟು ಮತ್ತಾವುದನ್ನೋ ಪಡೆಯುವ ತಂತ್ರಗಳು ವಾಣಿಜ್ಯದಿಂದ ಹಿಡಿದು ಶಕ್ತಿರಾಜಕೀಯದವರೆಗೆ ಆಳುವವರ ಎಲ್ಲಾ ವಲಯಗಳಲ್ಲೂ ಹಾಸುಹೊಕ್ಕಾಗಿವೆ.ಮೊದಲೇ ನೊಂದಿದ್ದು ಭಾವನಾತ್ಮಕವಾಗಿ ಮತ್ತಷ್ಟು ನೋಯಿಸಬಹುದಾದ ದಲಿತರನ್ನು ಕೋಮುವಾದಿ-ಫ್ಯಾಸಿಸ್ಟ್ ಶಕ್ತಿಗಳು ತಮ್ಮ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಾರೆಂದು ದಲಿತರಿಗೇ ಮನವರಿಕೆಯಾಗುವವರೆಗೂ ಇಂಥ ದುರಂತಗಳು ಸಂಭವಿಸುತ್ತಲೇ ಇರುತ್ತವೆ.

    ಪ್ರತಿಕ್ರಿಯೆ
  2. ಕನ್ನಡಿಗ...

    ಅಬ್ಬ, ಇಷ್ಟು ವರ್ಷಗಳ ಅಬ್ಬರವನ್ನು ಹೀಗೆ ತನ್ನಗೆ ಮಾಡುವ ಈ ಹುನ್ನಾರ ಎಷ್ಟು ದಿನದಿಂದ ದಲಿತರನ್ನು ಸದೆಬಡಿಯಲು ಕಾದುಕುಳಿತಿತ್ತೋ.. ಈಗ ಅವರೆಲ್ಲ ಒಂದಾಗುತ್ತಿದ್ದಾರೆ. ಈ ದಲಿತರ ಸೊಕ್ಕು ಜಾಸ್ತಿಯಾಗಿತ್ತು, ಇದೆ ಅವಕಾಶ ಎಂದು ಆದಷ್ಟು ಸಮರ್ಥವಾಗಿ ಶಂಕರ ಪಿಳ್ಳೆಯ ವ್ಯಂಗ್ಯ ಚಿತ್ರದ ನೆಪ ಮಾಡಿಕೊಂಡು ಭಾರತದ ಇನ್ನಿತರ ಜಾತಿಯವರೆಲ್ಲ ಒಂದಾಗಿ ಹಣಿಯಲು ತಡಕಾಡುತ್ತಿದ್ದಾರೆ. ಬಸವನ ಕಾಲದಲ್ಲೊಮ್ಮೆ ಹೊಸಗಾಳಿ ಉಂಡಿದ್ದವರು ಮತ್ತೆ ಜೀವಂತಿಕೆಗಾಗಿ ಎಂಟು ಶತಮಾನ ಕಾದಿದ್ದರು. ಈಗ ಮತ್ತೆ ಈ ಮುಖೇನ ಶ್ರೇಷ್ಠರೆಲ್ಲ ಒಂದಾಗಿ ಮಾತಿನ ಜಾಣ್ಮೆಯಿಂದ ಹೊಡಿಯಲು, ತುಳಿಯಲು ಹೀಗೆ ಅಲ್ಲಲ್ಲಿ ಭೂಮಿಕೆ ಹಾಕಿಕೊಳ್ಳುತ್ತಿದ್ದಾರೆ. ಮಾತು ಮತ್ತು ಓದು, ಹಕ್ಕುಗಳನ್ನ ಕೊಟ್ಟವನನ್ನು ಪ್ರೀತಿಸುವುದು ಪೂಜಿಸುವುದು ಈಗ ಸನಾತನದಂತೆ ಸಂಕೇತವಾಗಿದೆ ಎಂದು ಹೇಳುತ್ತಿದ್ದಾರೆಂದ ಮೇಲೆ ಎಲ್ಲರೂ ಎಗರುತ್ತಾರೆ. ಈ ಎರಡು ದಿನಗಳಲ್ಲಿ ಬಂದ ಪ್ರತಿಕ್ರಿಯೆ ನೋಡುವಾಗ ಅಂದಾಜ ಆಯ್ತು ದಲಿತನು ಹುಂಬನೆಂಬುದನ್ನು ಈ ಬುದ್ಧಿವಂತ ವರ್ಗ ಸಮರ್ಪಕವಾಗಿ ನಿರೂಪಿಸುತ್ತಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: