ನಾ ದಿವಾಕರ್ ಕಾಲ೦ : ’ಆರು ದಶಕಗಳ ಕಥೆ’

ಆರು ದಶಕಗಳ ಸಾರ್ಥಕತೆಯೋ

ಗತಿಸಿಹೋದ ಸ್ವಾರ್ಥದ ಕಥೆಯೋ !

– ನಾ ದಿವಾಕರ

ಭಾರತದ ಸಂಸತ್ತಿಗೆ ಆರು ದಶಕಗಳು ಸಂದಿವೆ. ಸ್ವಾತಂತ್ರ್ಯಾನಂತರದಲ್ಲಿ ದೇಶದ ಆಳ್ವಿಕೆಯ ಹೊಣೆಗಾರಿಕೆ ಹೊತ್ತ ಭಾರತದ ರಾಜಕೀಯ ಮುತ್ಸದ್ದಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿರ್ವಹಿಸಲು ಆಯ್ಕೆ ಮಾಡಿದ್ದು ಸಂಸದೀಯ ಪ್ರಜಾತಂತ್ರವನ್ನು. ದೇಶದ ಸಾರ್ವಭೌಮ ಪ್ರಜೆಗಳು ಆಯ್ಕೆ ಮಾಡುವ ಜನಪ್ರತಿನಿಧಿಗಳು ತಮ್ಮ ಆಳುವ ಹಕ್ಕು ಮತ್ತು ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುಂದೊಯ್ಯುವ ಕರ್ತವ್ಯವನ್ನು ನಿಭಾಯಿಸಲು ವೇದಿಕೆಯಾದದ್ದು ಈ ದೇಶದ ಸಂಸತ್ತು. ಆಳ್ವಿಕರ ದೃಷ್ಟಿಯಲ್ಲಿ ಸಂಸತ್ತು ಒಂದು ಅಧಿಕಾರ ಕೇಂದ್ರಿತ ಸಂಸ್ಥೆ. ಸಂವಿಧಾನದ ದೃಷ್ಟಿಯಲ್ಲಿ ಸಂಸತ್ತು ಒಂದು ಪವಿತ್ರವಾದ ಉನ್ನತ ಧ್ಯೇಯೋದ್ಧೇಶಗಳನ್ನು ಹೊಂದಿದ ಸಂಸ್ಥೆ. ದೇಶದ ಪ್ರಜೆಗಳ ದೃಷ್ಟಿಯಲ್ಲಿ ಸಂಸತ್ತು ತಮ್ಮ ಭವಿಷ್ಯವನ್ನು ನಿರ್ಧರಿಸಬಹುದಾದ ಒಂದು ಮಹಾನ್ ಸಂಸ್ಥೆ. ಈ ಮೂರೂ ಆಯಾಮಗಳನ್ನು ಸಮೀಕರಿಸುತ್ತಲೇ ಭಾರತೀಯ ಸಂಸತ್ತಿನ ಆರು ದಶಕಗಳ ಇತಿಹಾಸದ ಅವಲೋಕನ ಮಾಡಬೇಕಾಗುತ್ತದೆ. ಭಾರತದ ಪ್ರಜಾತಂತ್ರ ವ್ಯವಸ್ಥೆ ಪ್ರವರ್ಧಮಾನಕ್ಕೆ ಬಂದಿದೆಯೇ, ಪ್ರಬುದ್ಧತೆಯನ್ನು ಪಡೆದಿದೆಯೇ, ತನ್ನ ಸ್ವಂತ ಬಲದ ಮೇಲೆ ಕಾರ್ಯ ನಿರ್ವಹಿಸುವ ಸಾಮಥ್ರ್ಯ ಗಳಿಸಿದೆಯೇ ಎಂಬ ಮಾನದಂಡಗಳನ್ನು ಎದುರಿನಲ್ಲಿಟ್ಟುಕೊಂಡು ವಿಶ್ಲೇಷಿಸುವಾಗ ನಮ್ಮ ಆಳುವವರ್ಗಗಳ ಆಡಳಿತ ವೈಖರಿ ಮತ್ತು ಸಾಧನೆಗಳನ್ನು ವಾಸ್ತವತೆಗೆ ಒರೆ ಹಚ್ಚಿ ನೋಡಬೇಕಾಗುತ್ತದೆ. ಸಂಸದೀಯ ವ್ಯವಸ್ಥೆಯ ಸಾಫಲ್ಯ ವೈಫಲ್ಯಗಳನ್ನು ವಿಮಶರ್ಿಸುವ ಸಂದರ್ಭದಲ್ಲಿ ಈ ದೇಶದ ಸಂಸತ್ತು ರೂಪುಗೊಂಡ ಹಾಗೂ ನಡೆದುಬಂದ ಹಾದಿಯನ್ನೂ ಗಮನಿಸುವುದು ಅಗತ್ಯ. ಕಳೆದ ಆರು ದಶಕಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ದೇಶದ ಸಾಮಾಜಿಕ, ಆಥರ್ಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ವಲಯಗಳಲ್ಲಿ ಅಭೂತಪೂರ್ವ ಪರಿವರ್ತನೆ ಕಂಡುಬಂದಿದೆ. ಸಂಸತ್ ಭವನದಲ್ಲಿ ನಡೆಯುವ ಕಲಾಪಗಳಲ್ಲಿ ವ್ಯಕ್ತವಾಗುವ ಜನಸಾಮಾನ್ಯರ ನೋವು, ನಲಿವು, ಸಂಕಟ ಮತ್ತು ಆಕ್ರೋಶಗಳು ವಾಸ್ತವ ಸನ್ನಿವೇಶದಲ್ಲಿ ಇನ್ನೂ ಹೆಚ್ಚು ಗಂಭೀರ ಸ್ವರೂಪ ಪಡೆದಿರುವುದನ್ನು ಇತಿಹಾಸ ಸಾಬೀತುಪಡಿಸಿದೆ. ಆಯ್ದ ಪ್ರತಿನಿಧಿಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ತೋರ್ಪಡಿಸುವ ಲೋಪಗಳು, ನ್ಯೂನತೆಗಳು ದೇಶದ ಜನಸಾಮಾನ್ಯರ ನಿತ್ಯ ಜೀವನದ ಮೇಲೆ ಬೀರುವ ಪರಿಣಾಮಗಳು ಸಂಸತ್ ಭವನದ ಅಂಗಣದಲ್ಲಿ ಪ್ರತಿಧ್ವನಿಸುತ್ತವೆ. ಆದರೆ ಈ ಪ್ರತಿಧ್ವನಿಗೆ ಸೂಕ್ತ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಸ್ಪಂದಿಸುವಂತಹ ಸಂವೇದನೆಯನ್ನು ನಮ್ಮ ಆಳುವ ವರ್ಗಗಳ ಪ್ರತಿನಿಧಿಗಳು ಕಳೆದುಕೊಂಡಿರುವುದು ಸಂಸದೀಯ ಪ್ರಜಾತಂತ್ರದ ದುರಂತವೆಂದು ಹೇಳಬಹುದು. ಆರು ದಶಕಗಳ ಹಿಂದೆ ದೇಶದ ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಹತ್ತು ಜನಿಸಿದ ಸಂಸತ್ತು ಒಂದು ಪರ್ವಕಾಲವನ್ನು ಪೂರೈಸಿದೆ. ಆರು ದಶಕಗಳನ್ನು ಪೂರೈಸಿದೆ. ಪ್ರಾರಂಭಿಕ ಹಂತದಲ್ಲಿ ಸಂಸತ್ತಿನಲ್ಲಿ ದೇಶದ ಅತ್ಯುನ್ನತ ಮೇಧಾವಿಗಳು, ನಿಷ್ಠಾವಂತ ರಾಜಕಾರಣಿಗಳು ಮತ್ತು ದೂರದೃಷ್ಟಿ-ದಾರ್ಶನಿಕತೆ ಹೊಂದಿದ ಮುತ್ಸದ್ದಿಗಳು ರಾರಾಜಿಸುತ್ತಿದ್ದರು. ಅಂದಿನ ಚಚರ್ೆಗಳ ಗುಣಮಟ್ಟ ಅಥವಾ ಚಚರ್ಿತ ವಿಷಯಗಳ ಆಳ ಮತ್ತು ವ್ಯಾಪ್ತಿ ಅಪಾರ. ಅಂದಿನ ಬಹುಪಾಲು ಸಂಸದರು ವಕೀಲರಾಗಿದ್ದರೆ, ಶೇ. 25ರಷ್ಟು ಸಂಸದರು ಪ್ರೌಢಶಿಕ್ಷಣವನ್ನೂ ಹೊಂದಿರಲಿಲ್ಲ. ಬಹುಶಃ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳಲೂ ವಿದ್ಯಾಭ್ಯಾಸವನ್ನು ತ್ಯಜಿಸಿದ್ದುದು ಕಾರಣವಿರಬಹುದು. ಶೇ. 80ರಷ್ಟು ಸಂಸದರು 56 ವರ್ಷಕ್ಕೂ ಕಡಿಮೆ ವಯಸ್ಸಿನವರಾಗಿದ್ದರು. ಈಗ ಪ್ರೌಢಶಿಕ್ಷಣ ಹೊಂದಿರದವರ ಸಂಖ್ಯೆ ಶೇ. 3ರಷ್ಟಿದ್ದರೆ, 56 ವರ್ಷ ಮೀರಿದವರ ಸಂಖ್ಯೆ ಶೇ.43ರಷ್ಟಾಗಿದೆ. 1962ರ ಅವಧಿಯಲ್ಲಿ ದಿನಕ್ಕೆ 72 ಮಸೂದೆಗಳು ಜಾರಿಯಾಗುತ್ತಿದ್ದವು ಆದರೆ ಈಗ ಕೇವಲ 40 ಮಸೂದೆಗಳು ಜಾರಿಯಾಗುತ್ತಿವೆ. ಮತ್ತೊಂದು ಕುತೂಹಲಕಾರಿ ಅಂಶವೆಂದರೆ ಪ್ರಾರಂಭಿಕ ದಿನಗಳಲ್ಲಿನ ಸಂಸದರ ಹಾಜರಾತಿಯ ಪ್ರಮಾಣಕ್ಕೂ ಇಂದಿನ ಸನ್ನಿವೇಶಕ್ಕೂ ಅಪಾರ ವ್ಯತ್ಯಾಸವಿದೆ. ಅಂದಿನ ಗೈರು ಹಾಜರಿಯ ಪ್ರಮಾಣ ಇಂದಿನ ಹಾಜರಾತಿಯ ಪ್ರಮಾಣಕ್ಕೆ ಸಮ ಎಂದು ಹೇಳಿದರೆ ಸಾಕಲ್ಲವೇ ?   ಸದನದ ಹೊಣೆಗಾರಿಕೆ 60 ಸಂವತ್ಸರಗಳನ್ನು ಪೂರೈಸಿದ ವ್ಯಕ್ತಿಯೊಬ್ಬನ ಬಾಳಿನಲ್ಲಿ ಸಾಧನೆ-ವೈಫಲ್ಯಗಳ ಪರಾಮಶರ್ೆ ನಡೆಯುವಂತೆಯೇ ಸಂಸತ್ತಿನ ಸಂದರ್ಭದಲ್ಲೂ ಸಾಧ್ಯ. ಇಲ್ಲಿ ಭಾರತದ ಜನತೆಯನ್ನು ಪ್ರತಿನಿಧಿಸಿದ ಆಳುವ ವರ್ಗಗಳ ವಿವಿಧ ಪ್ರತಿನಿಧಿಗಳ ಕಾರ್ಯವೈಖರಿ ಮತ್ತು ಧೋರಣೆಗಳಿಗಿಂತಲೂ ಹೆಚ್ಚಾಗಿ ಆಳ್ವಿಕರು ನಮ್ಮ ದೇಶದ ಸಂಸತ್ತನ್ನು ಎಷ್ಟರ ಮಟ್ಟಿಗೆ ಗೌರವಿಸುತ್ತಿದ್ದಾರೆ ಅಥವಾ ಎಷ್ಟು ಪರಿಣಾಮಕಾರಿಯಾಗಿ ಒಂದು ಪ್ರಜಾಸತ್ತೆಯ ವೇದಿಕೆಯಾಗಿ ಬಳಸುತ್ತಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ. ಸಕರ್ಾರದ ಸಾಮಾಜಿಕ-ಆಥರ್ಿಕ ನೀತಿಗಳು ಮತ್ತು ಸಾಂಸ್ಕೃತಿಕ ನಿಲುವುಗಳು ತಮ್ಮ ಪರಿಪೂರ್ಣತೆ ಮತ್ತು ಸಾರ್ಥಕತೆಯನ್ನು ಕಂಡುಕೊಳ್ಳುವುದೇ ಸಂಸತ್ತಿನ ಭೂಮಿಕೆಯಲ್ಲಿ. ಆಳುವ ಪಕ್ಷಗಳ ನೀತಿಗಳು ಜನಪರವಾಗಿರಲಿ, ಜನವಿರೋಧಿಯಾಗಿರಲಿ ಈ ನೀತಿಗಳ ವಸ್ತುನಿಷ್ಠ ಪರಾಮಶರ್ೆಯಾಗಬೇಕಿರುವುದು ಸಂಸತ್ತಿನ ವೇದಿಕೆಯಲ್ಲಿ. ಹಾಗಾಗಿಯೇ ಭಾರತದ ಸಂವಿಧಾನದಲ್ಲಿ ಸಂಸತ್ತಿಗೆ ಅತಿಹೆಚ್ಚು ಮಹತ್ವ ನೀಡಲಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಗಳ ಕಾರ್ಯಕಲಾಪಗಳನ್ನು ನಿರ್ವಹಿಸಲು ಚುನಾಯಿಸಲಾಗುವ ಅಧ್ಯಕ್ಷರ ಕಾರ್ಯ ವ್ಯಾಪ್ತಿ ಮತ್ತು ಹೊಣೆಗಾರಿಕೆಯನ್ನು ವಿಷದಪಡಿಸಲಾಗಿದೆ. ಸಂಸತ್ತಿನಲ್ಲಿ ನಡೆಯುವ ಚಚರ್ೆಗಳನ್ನು ನಿರ್ವಹಿಸುವುದಷ್ಟೇ ಅಲ್ಲದೆ , ಚಚರ್ೆಗಳ ವ್ಯಾಪ್ತಿ, ದೃಷ್ಟಿಕೋನ ಮತ್ತು ಬದ್ಧತೆಗಳನ್ನು ಗಮನಿಸುತ್ತಾ ಒಂದು ಆರೋಗ್ಯಕರ ಚಚರ್ೆಗೆ ಅವಕಾಶ ಮಾಡಿಕೊಡುವ ಮೂಲಕ ದೇಶದ ಜನತೆಗೆ ಆಳ್ವಿಕರ ಮನದಾಳದ ಇಂಗಿತಗಳನ್ನು ಪರಿಚಯಿಸುವ ಗುರುತರ ಹೊಣೆಗಾರಿಕೆ ಸಂಸದರಿಗಿಂತಲೂ ಹೆಚ್ಚಾಗಿ ಲೋಕಸಭೆ-ರಾಜ್ಯಸಭೆಯ ಅಧ್ಯಕ್ಷರ ಮೇಲಿರುತ್ತದೆ. ಪಕ್ಷಾತೀತ ಧೋರಣೆ, ಪ್ರಾಮಾಣಿಕತೆ, ಪಕ್ಷಪಾತ ರಹಿತ ಮನೋಭಾವ ಹಾಗೂ ವಸ್ತುನಿಷ್ಠತೆಯಿಂದ ತಮ್ಮ ಕಾರ್ಯ ನಿಭಾಯಿಸುವ ನೈತಿಕ ಜವಾಬ್ದಾರಿ ಈ ಪದವಿಯನ್ನು ಅಲಂಕರಿಸುವವರ ಮೇಲಿರುತ್ತದೆ. ವಿಪಯರ್ಾಸವೆಂದರೆ ಭಾರತದ ಸಂಸತ್ತಿನ ಇತಿಹಾಸದಲ್ಲಿ ಈ ಎರಡು ಪವಿತ್ರ ಹುದ್ದೆಗಳೇ ಅಪಮೌಲ್ಯಕ್ಕೊಳಗಾಗಿವೆ. ಈ ಸ್ಥಾನವನ್ನು ಅಲಂಕರಿಸಿರುವ ಅನೇಕಾನೇಕ ರಾಜಕೀಯ ಮುತ್ಸದ್ದಿಗಳ ವ್ಯಕ್ತಿಗತ ಮೌಲ್ಯ-ನಿಲುವುಗಳನ್ನು ಗೌರವಿಸುತ್ತಲೇ ಹೇಳುವುದಾದರೆ, ಈ ಎರಡೂ ಹುದ್ದೆಗಳು ರಾಜಕೀಯ ಹಿತಾಸಕ್ತಿಗಳಿಂದ ಮುಕ್ತವಾಗಿಲ್ಲ ಎಂದು ಮಾತ್ರ ಸ್ಪಷ್ಟವಾಗಿ ಹೇಳಬಹುದು. ಕಾರಣ ಸ್ಪಷ್ಟ. ಈ ಎರಡೂ ಹುದ್ದೆಗಳ ಆಯ್ಕೆ ನಡೆಯುವುದು ರಾಜಕೀಯ ಪಕ್ಷಗಳ ಸಂಖ್ಯಾಬಲವನ್ನು ಅಲವಲಂಬಿಸಿಯೇ ಹೊರತು, ಅಧ್ಯಕ್ಷ ಪದವಿಯ ಹಿಂದಿರುವ ಮೌಲಿಕ ಪ್ರಜ್ಞೆಯನ್ನು ಅವಲಂಬಿಸಿ ಅಲ್ಲ. ಇದು ವ್ಯವಸ್ಥೆಯ ದೋಷ ಎನ್ನುವುದಕ್ಕಿಂತಲೂ ರಾಜಕೀಯ ಪಕ್ಷಗಳು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಸೃಷ್ಟಿಸಿರುವ ಸನ್ನಿವೇಶ ಎಂದು ಹೇಳಬಹುದು. ಈ ಹಿನ್ನೆಲೆಯಲ್ಲಿ ನೋಡಿದಾಗ ಉಭಯ ಸದನಗಳಲ್ಲಿ ನಡೆಯುವ ಕಲಾಪಗಳು ಎಷ್ಟರ ಮಟ್ಟಿಗೆ ಈ ದೇಶದ ಸಾರ್ವಭೌಮ ಪ್ರಜೆಗಳ ಆಶೋತ್ತರಗಳನ್ನು ಪ್ರತಿನಿಧಿಸುತ್ತವೆ ಎಂದು ಸ್ಪಷ್ಟವಾಗುತ್ತದೆ. ಒಂದು ಕಾಲದಲ್ಲಿ ಯಾವುದೇ ಕೇಂದ್ರ ಮಂತ್ರಿ ತಮ್ಮ ಸಚಿವಾಲಯಕ್ಕೆ ಸಂಬಂಧಿಸಿದ ಪ್ರಶ್ನಾವಳಿ ಇದ್ದಲ್ಲಿ ಕಡ್ಡಾಯವಾಗಿ ಹಾಜರಾಗುವುದೇ ಅಲ್ಲದೆ ಸಮಾಧಾನಕರ ಪ್ರತಿಕ್ರಿಯೆಯನ್ನೂ ನೀಡುತ್ತಿದ್ದುದುಂಟು. ಹಾಗೆಯೇ ವಿರೋಧ ಪಕ್ಷಗಳ ಸದಸ್ಯರ ಮಾತುಗಳಿಗೆ ಸೂಕ್ತ ಮನ್ನಣೆ ನೀಡುತ್ತಿದ್ದುದೂ ಉಂಟು. ಭಾರತೀಯ ಸಂಸತ್ತಿನ ಇತಿಹಾಸದಲ್ಲಿ ಆಳುವ ಪಕ್ಷಗಳನ್ನು ಎಂದಿಗೂ ಪ್ರತಿನಿಧಿಸದಿದ್ದರೂ ವಿರೋಧ ಪಕ್ಷದಲ್ಲಿದ್ದುಕೊಂಡೇ ತಮ್ಮ ಜನಪರ ಕಾಳಜಿಯನ್ನು ವ್ಯಕ್ತಪಡಿಸುತ್ತಾ ಸಕರ್ಾರದ ತಪ್ಪು ಒಪ್ಪುಗಳನ್ನು ಸರಿಪಡಿಸಿದ ಸಿಂಹಧ್ವನಿಗಳು ದಾಖಲಾಗಿವೆ. ಆದರೆ ಇಂದು ಈ ಸನ್ನಿವೇಶವನ್ನು ಊಹಿಸಲೂ ಸಾಧ್ಯವಿಲ್ಲ. ವಿರೋಧ ಪಕ್ಷ ಎಂದರೆ ಸಕರ್ಾರದ ನೀತಿಗಳನ್ನು ವಿರೋಧಿಸುವುದೇ ಎಂಬಂತೆ ರಾಜಕೀಯ ನಾಯಕರು ಟೀಕಾಚಾರ್ಯರಾಗಿ ಪರಿಣಮಿಸಿದ್ದಾರೆ. ಹಾಗಾಗಿಯೇ ಸಕರ್ಾರದ ಯಾವುದೇ ಜನವಿರೋಧಿ ನೀತಿಗೂ ಒಂದು ಪಯರ್ಾಯ ಮಾರ್ಗವನ್ನು ಸೂಚಿಸುವಲ್ಲಿ ರಾಜಕೀಯ ಪಕ್ಷಗಳು ವಿಫಲವಾಗಿವೆ. ರಾಜಕೀಯ ಪಕ್ಷಗಳ ಅಭಿಪ್ರಾಯ ಮಂಡನೆಯಲ್ಲಿ ಇರಬೇಕಾದ ವಸ್ತುನಿಷ್ಠತೆ, ಪ್ರಖರತೆ ಮತ್ತು ಜನಪರ ಕಾಳಜಿ ಮಾಯವಾಗುತ್ತಿರುವಂತೆಲ್ಲಾ ವಾಕ್ ಔಟ್ ಸಂಸ್ಕೃತಿ ಮಾನ್ಯತೆ ಪಡೆಯುತ್ತಿದೆ. ರಾಜಕೀಯ ವೈರುಧ್ಯಗಳಿಗಿಂತಲೂ ಪರಸ್ಪರ ದೋಷಾರೋಪಣೆ ಮತ್ತು ದ್ವೇಷಗಳೇ ಹೆಚ್ಚು ಪ್ರಧಾನವಾಗುತ್ತಿದ್ದು ಸಂಸತ್ನ ಆವರಣ ಹೊಡೆದಾಟದ ಅಖಾಡಾಗಳಾಗಿ ಪರಿಣಮಿಸಿರುವುದೂ ಉಂಟು. ಇಲ್ಲಿ ಸಂಸತ್ತಿನ ಮೌಲ್ಯಗಳಿಗಿಂತಲೂ ಹೆಚ್ಚಾಗಿ ಸಾಂವಿಧಾನಿಕ ಮೌಲ್ಯಗಳು ಕ್ರಮೇಣ ಕಳೆದುಹೋಗುತ್ತಿರುವುದನ್ನು ಈ ಸಂದರ್ಭದಲ್ಲಿ ನೆನೆಯಬೇಕಾಗಿದೆ. ಸಾಫಲ್ಯ-ವೈಫಲ್ಯಗಳು ದೇಶ ಮುನ್ನಡೆದಿದೆ. ಭಾರತ ಇಂದು ಅಗ್ರಮಾನ್ಯ ರಾಷ್ಟ್ರಗಳಲ್ಲಿ ಒಂದು ಪ್ರಮುಖ ಸ್ಥಾನ ಗಳಿಸಿದೆ. ಆರು ದಶಕಗಳಲ್ಲಿ ಸಾಧನೆಯ ಹಾದಿಯಲ್ಲಿ ಭಾರತ ಸಾಕಷ್ಟು ಮುನ್ನಡೆದಿದೆ. ಜನಸಾಮಾನ್ಯರಲ್ಲಿ ರಾಜಕೀಯ ಪ್ರಬುದ್ಧತೆ ಹೆಚ್ಚಾಗುತ್ತಿದೆ. ರಾಜಕೀಯ ಪ್ರಜ್ಞೆ ಮೂಡುತ್ತಿದೆ. ರಾಜಕೀಯ ಪಕ್ಷಗಳಿಗೂ ಸಹ ಜನಾಭಿಪ್ರಾಯದ ಮೇಲೆ ವಿಶ್ವಾಸ ಹೆಚ್ಚಾಗುತ್ತಿದ್ದು ತಮ್ಮ ಸಾಧನೆಗಳ ಮಹತ್ವ ಮತ್ತು ಪರಿಣಾಮದ ಗ್ರಹಿಕೆ ಹೆಚ್ಚಾಗುತ್ತಿದೆ. ಆದರೂ ಸಂಸತ್ತಿನ ಸುತ್ತ ಆವರಿಸಿರುವ ಒಂದು ಕರಾಳ ಛಾಯೆ ಮಾತ್ರ ದೇಶದ ಪ್ರಜ್ಞಾವಂತರನ್ನು ಕಾಡುತ್ತಲೇ ಇದೆ. ರಾಜಕಾರಣಿಗಳ ಸಂವಿಧಾನ ಬದ್ಧತೆ, ನಿಷ್ಠೆ ಮತ್ತು ಜನಪರ ಕಾಳಜಿಗಳನ್ನು ಸಾರ್ವತ್ರಿಕವಾಗಿ ಪ್ರಶ್ನಿಸಲಾಗುವುದಿಲ್ಲವಾದರೂ, ನವ ಉದಾರವಾದ ಸೃಷ್ಟಿಸಿರುವ ಸನ್ನಿವೇಶದಲ್ಲಿ ಬಂಡವಾಳದ ಪ್ರಭಾವ ಹೆಚ್ಚಾಗಿರುವುದರಿಂದ ಸಂಸತ್ತಿನ ಭೂಮಿಕೆಯೂ ಸಹ ಇದೇ ಹಣದ ಮದದಿಂದ ಕಲುಷಿತವಾಗುತ್ತಿರುವುದು ದೇಶದ ಜನತೆಯನ್ನು ಬಾಧಿಸುತ್ತಿದೆ. ಚುನಾಯಿತ ಪ್ರತಿನಿಧಿಗಳಿಗೆ ತಮ್ಮ ಹಿಂದಿರುವ ಸಾರ್ವಭೌಮ ಪ್ರಜೆಗಳ ಬಲಕ್ಕಿಂತಲೂ, ಜಾಗತಿಕ ಬಂಡವಾಳದ ಬಲವೇ ಹೆಚ್ಚು ಮಹತ್ವದ್ದೆನಿಸುತ್ತಿರುವುದು ಸಂಸತ್ತಿನ ಘನತೆ ಗೌರವಗಳಿಗೆ ಚ್ಯುತಿ ಉಂಟುಮಾಡುತ್ತಿದೆ. ಹಾಗಾಗಿಯೇ ರಾಜಕೀಯ ನಿಲುವುಗಳು ಮತ್ತು ಜನಪರ ನೀತಿಗಳಿಗಿಂತಲೂ ರಾಜಕೀಯ ಅಸ್ತಿತ್ವ, ವ್ಯಕ್ತಿಗತ ಪ್ರತಿಷ್ಠೆ, ನಾಯಕರ ಸ್ವಹಿತಾಸಕ್ತಿ ಮತ್ತು ತಮ್ಮನ್ನು ಪೋಷಿಸುವ ಕಾರ್ಪೊರೇಟ್ ಔದ್ಯಮಿಕ ಶಕ್ತಿಗಳ ಒಳಿತು ಕೆಡಕುಗಳೇ ಸಂಸದರ ವರ್ತನೆಯನ್ನು ನಿರ್ವಹಿಸುವ ಪ್ರೇರಕ ಶಕ್ತಿಗಳಾಗಿ ಪರಿಣಮಿಸಿವೆ. ಈ ವಿದ್ಯಮಾನಕ್ಕೆ ಬಲಿಯಾಗಿರುವುದು ಉಭಯ ಸದನಗಳಲ್ಲಿರುವ ಪೀಠಗಳು, ಆಸನಗಳು, ಆಡಳಿತ ಪಕ್ಷ ಸಂಸತ್ತಿಗೆ ಸಲ್ಲಿಸುವ ಕಡತಗಳು ಮತ್ತು ಸಂಸದರು ತಮ್ಮ ಆಕ್ರೋಶ ವ್ಯಕ್ತಪಡಿಸಲು ಧುಮುಕುವ ವೆಲ್ ಆಫ್ ದ ಹೌಸ್ ಎನ್ನಲಾಗುವ ಒಂದು ಕೇಂದ್ರ ಬಿಂದು. ಇಂದಿನ ಸಂಸದರಲ್ಲಿ ಕಾಳಜಿಗಿಂತಲೂ ಹೆಚ್ಚು ಸ್ವಾರ್ಥತೆ ಇದೆ, ಪ್ರಬುದ್ಧತೆಗಿಂತಲೂ ಹೆಚ್ಚು ಆಕ್ರೋಶವಿದೆ, ಬದ್ಧತೆಗಿಂತಲೂ ಹೆಚ್ಚು ಅಸ್ತಿತ್ವದ ಗುಂಗಿದೆ. ತಮ್ಮ ಈ ಲಕ್ಷಣಗಳನ್ನು ಉಳಿಸಿಕೊಳ್ಳಲು ಸಂಸತ್ ಸದಸ್ಯರು ಸಂಸತ್ತಿನ ಭೂಮಿಕೆಯನ್ನು ಬಳಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಸಂಸತ್ತಿನ ಮೇಲೆ ದಾಳಿ ನಡೆಸುವ ಬಾಹ್ಯ ಶಕ್ತಿಗಳನ್ನು ದೇಶದ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆ ನಿಯಂತ್ರಿಸುವುದು ಸುಲಭ. ಆದರೆ ಆಂತರಿಕವಾಗಿ ಸಂಸತ್ತಿನ ಮೇಲೆ ನಡೆಯುತ್ತಿರುವ ಬೌದ್ಧಿಕ ದಾಳಿ , ತತ್ಪರಿಣಾಮವಾಗಿ ಕಾಣುತ್ತಿರುವ ಸಂಸತ್ತಿನ ಅಪಮೌಲ್ಯೀಕರಣವನ್ನು ತಡೆಗಟ್ಟುವುದು ಕಷ್ಟಸಾಧ್ಯ. ಇದು ಈ ದೇಶದ ಸಾರ್ವಭೌಮ ಪ್ರಜೆಗಳ ಹೊಣೆಗಾರಿಕೆಯಾಗಿದೆ. ಆರು ದಶಕಗಳಲ್ಲಿ ದೇಶದ ಸಾಧನೆ ಎಷ್ಟೇ ಎತ್ತರೆತ್ತರಕ್ಕೆ ಸಾಗಿದ್ದರೂ, ಎಲ್ಲೋ ಒಂದು ಕಡೆ ಒಂದು ಪ್ರಜ್ಞಾವಂತ ರಾಷ್ಟ್ರವಾಗಿ ಸಂಸತ್ತಿನ ಗೌರವ ಘನತೆಯನ್ನು ಕಾಪಾಡುವಲ್ಲಿ ನಾವು ವಿಫಲರಾಗಿದ್ದೇವೆ ಎನಿಸುತ್ತದೆ. ಅರವತ್ತರ ಹೊಸ್ತಿಲಲ್ಲಿರುವ ಭಾರತೀಯ ಸಂಸತ್ತು ಮತ್ತು ಸಂಸತ್ತನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ. ಬಿಟ್ಟುಹೋದ ಹೆಜ್ಜೆ ಗುರುತುಗಳನ್ನು ಗಮನಿಸುತ್ತಲೇ ಮುಂದಿಡುವ ಹೆಜ್ಜೆಗಳನ್ನೂ ಎಚ್ಚರದಿಂದ ಗಮನಿಸುವುದು ಈ ಸಂದರ್ಭದ ತುರ್ತು ಅಗತ್ಯತೆ.          ]]>

‍ಲೇಖಕರು G

May 29, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ನಾ ದಿವಾಕರ ನಮ್ಮ ಸುತ್ತಲಿನ ನಾಗರಿಕ ಸಮಾಜದಲ್ಲಿ ಸಂವೇದನೆ ಕ್ಷೀಣಿಸುತ್ತ್ತಿದೆ ಎಂದು ಹಲವು ಬಾರಿ ಭಾಸವಾಗುತ್ತದೆ. ಇನ್ನೂ ಕೆಲವೊಮ್ಮೆ ನಮ್ಮ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This