ನಾ ದಿವಾಕರ್ : ಗಾಂಧೀಜಿ ಕನ್ನಡಕಕ್ಕೆ ಗಾಜುಗಳೇ ಇರಲಿಲ್ಲ..

ಗಾಂಧೀಜಿಯ ಕನ್ನಡಕದೊಳಗಿಂದ…..

ಆಧುನಿಕ ಭಾರತದ ಇತಿಹಾಸವನ್ನು ಕೆದಕಿದಾಗ ಕಣ್ಣೆದುರು ನಿಲ್ಲುವುದು ಬರೇ ದ್ವಂದ್ವಗಳೇ. ಒಂದೆಡೆ ವಸಾಹತುಶಾಹಿಯನ್ನು ಸ್ವೀಕರಿಸಿ ತಮ್ಮ ಪಾಳಯಗಳನ್ನು ರಕ್ಷಿಸಿಕೊಳ್ಳಲು ಹೆಣಗಾಡಿದ ರಾಜಮಹಾರಾಜರುಗಳ ಕಥೆಯಾದರೆ ಮತ್ತೊಂದೆಡೆ ಸ್ವದೇಶದ ವಿಮೋಚನೆಗಾಗಿ ಬಲಿದಾನ ಮಾಡಿದ ವೀರ ಯೋಧರ ಕಥನಗಳು ರಾರಾಜಿಸುತ್ತವೆ. ಮತ್ತೊಂದೆಡೆ ರಾಷ್ಟ್ರ ವಿಮೋಚನೆಯೊಂದಿಗೇ ದೇಶದ ಆಂತರ್ಯವನ್ನು ದಹಿಸುತ್ತಿದ್ದ ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸಲು ಪಣ ತೊಟ್ಟ ನಿದರ್ಶನಗಳು ಅನಾವರಣಗೊಳ್ಳುತ್ತವೆ. ಫುಲೆ, ಅಂಬೇಡ್ಕರ್, ಮಹಾತ್ಮ ಗಾಂಧೀಜಿಯವರ ಸಂಕಥನಗಳು ನವ ಭಾರತದ ಇತಿಹಾಸವನ್ನು ಅಲಂಕರಿಸುತ್ತವೆ. ಗಾಂಧೀಜಿಯವರ ಶಾಂತಿ ಅಹಿಂಸೆಯ ಮಂತ್ರದೊಂದಿಗೇ ಭಗತ್ ಸಿಂಗ್ ಮತ್ತು ಸಂಗಡಿಗರ ಕ್ರಾಂತಿಕಾರಿ ಚಿಂತನೆಗಳೂ ಕಂಗೊಳಿಸುತ್ತವೆ. ಭಾರತದ ಚರಿತ್ರೆಯ ಈ ವೈರುಧ್ಯಗಳ ಹಿನ್ನೆಲೆಯಲ್ಲೇ ಪ್ರಸ್ತುತ ಸಂದಿಗ್ಧಮಯ ಸನ್ನಿವೇಶದಲ್ಲಿ ಗಾಂಧಿ ಏಕೋ ನೆನಪಾಗುತ್ತಾರೆ. ತನ್ನ ನೆಚ್ಚಿನ ರಾಷ್ಟ್ರವನ್ನು ವೀಕ್ಷಿಸಲು ಬರುವ ಮೃತ ಗಾಂಧೀಜಿಯವರ ಕಂಗಳ ಮೂಲಕ ಅವರ ಕನ್ನಡಕದೊಳಗಿಂದಲೇ ಪ್ರಸಕ್ತ ಭಾರತವನ್ನು ನೋಡುವ ಒಂದು ಕಲ್ಪನೆ ಇಲ್ಲಿದೆ :

ಯುವ ಭಾರತ : ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ ಯುವಪೀಳಿಗೆಯನ್ನು ಸೆಳೆದಿದ್ದು ಗಾಂಧೀಜಿಯ ಅಹಿಂಸಾತ್ಮಕ ಧೋರಣೆ ಮತ್ತು ವಸಾಹತುಶಾಹಿ ವಿರೋಧಿ ನಿಲುವು. ಗಾಂಧೀಜಿಯ ದೃಷ್ಟಿಯಲ್ಲಿ ದೇಶದ ಭವಿಷ್ಯವನ್ನು ನಿರ್ಧರಿಸುವಲ್ಲಿ ಯುವಜನತೆಯ ಪಾತ್ರ ಹೆಚ್ಚು ಮಹತ್ತರವಾಗಿತ್ತು. ಆದರೆ ಇಂದು ಭಾರತ ಕಾಣುತ್ತಿರುವ ಯುವ ಪೀಳಿಗೆ ಎತ್ತ ಸಾಗುತ್ತಿದೆ ? ಈ ಪೀಳಿಗೆಗೆ ಸ್ಫೂತರ್ಿಯಾಗಬಲ್ಲ ಮಾದರಿಗಳೇ ಕಾಣುತ್ತಿಲ್ಲ. ಇವರಿಗೆ ಮಾರ್ಗದರ್ಶನ ನೀಡಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸುವಂತೆ ಮಾಡುವ ನಾಯಕತ್ವವೇ ಇಲ್ಲ. ಭ್ರಷ್ಟ ರಾಜಕಾರಣದಲ್ಲಿ ಮುಳುಗಿಹೋಗಿರುವ ಸಮಾಜದಲ್ಲಿ, ಹೊಸ ಸಮಾಜಕ್ಕೆ ಕಣ್ಣು ತೆರೆಯುವ ಯುವ ಸಮುದಾಯ ಎತ್ತ ನೋಡಿದರೂ ಕಾಣುವುದು ಕೇವಲ ಭ್ರಷ್ಟತೆ, ಹಿಂಸೆ, ದಬ್ಬಾಳಿಕೆ, ಶೋಷಣೆ. ಶಿಕ್ಷಣವನ್ನೂ ಒಳಗೊಂಡಂತೆ ಎಲ್ಲ ಕ್ಷೇತ್ರಗಳ ವಾಣಿಜ್ಯೀಕರಣ. ಶಿಥಿಲವಾಗುತ್ತಿರುವ, ಕ್ಷೀಣಿಸುತ್ತಿರುವ ಮಾನವೀಯ ಮೌಲ್ಯ ಮತ್ತು ಸಂಸ್ಕೃತಿ. ನಾವಿಕನಿಲ್ಲದ ಹಡಗಿನಲ್ಲಿ ಸಾಗುತ್ತಿರುವ ಯುವಪೀಳಿಗೆ ಈ ಹಡಗಿಗೆ ಲಂಗರು ಹಾಕಿರುವ ಭ್ರಷ್ಟ ವ್ಯವಸ್ಥೆ. ಗಾಂಧೀಜಿಯ ದೃಷ್ಟಿ ಮಸುಕಾಗುತ್ತಿದೆ.

ಧಾಮರ್ಿಕ ಭಾರತ : ಹಿಂದೂ ಧರ್ಮವನ್ನು ಒಪ್ಪಿಕೊಂಡರೂ ಗಾಂಧೀಜಿಯ ದೃಷ್ಟಿಯಲ್ಲಿ ಧರ್ಮ ಎನ್ನುವುದು ಮಾನವೀಯ ನೆಲೆಗಟ್ಟಿನಲ್ಲಿ ವ್ಯಕ್ತವಾಗುವ ಮನೋಧರ್ಮವಾಗಿತ್ತು. ಅನ್ಯ ಧರ್ಮಗಳನ್ನು ದ್ವೇಷಿಸದೆಯೇ ತನ್ನ ಧರ್ಮವನ್ನು ಆರಾಧಿಸುವ ಉದಾತ್ತತೆ ಅವರಲ್ಲಿ ಅಡಕಗೊಂಡಿತ್ತು. ಆದರೆ ಪ್ರಸಕ್ತ ಭಾರತದಲ್ಲಿ ಧರ್ಮ ಎಂದರೆ ಮಾನವೀಯ ಮೌಲ್ಯಗಳಿಂದ ಹೊರತಾದ ಒಂದು ಸಾಮಾಜಿಕ-ರಾಜಕೀಯ, ಕೆಲವೊಮ್ಮೆ ಸಾಂಸ್ಕೃತಿಕ ಅಸ್ತ್ರ. ಅಸ್ಮಿತೆಗಳ ಮೂಲಕ ಅಸ್ತಿತ್ವಗಳನ್ನು ಸ್ಥಾಪಿಸಿ, ಜನಸಮುದಾಯಗಳನ್ನು ನಿದರ್ಿಷ್ಟ ಚೌಕಟ್ಟಿನಲ್ಲಿ ಬಂಧಿಸುವ ಸಾಂಸ್ಥಿಕ ಸ್ವರೂಪ. ತಮ್ಮ ಸಾಮುದಾಯಿಕ, ವೈಯ್ಯಕ್ತಿಕ ಮತ್ತು ಜಾತೀಯ ಹಿತಾಸಕ್ತಿಗಳಿಗೆ ಪೂರಕವಾಗಿ ಬಳಸಿಕೊಳ್ಳಬಹುದಾದ ಒಂದು ಆಧ್ಯಾತ್ಮಿಕ ಮಾರ್ಗ. ಸ್ವಧರ್ಮ ಆರಾಧನೆ ಎಂದರೆ ಪರಧರ್ಮ ದ್ವೇಷ ಎಂಬ ನೆಲೆಗಟ್ಟಿನಲ್ಲಿ, ಶ್ರೇಷ್ಠತೆಯ ಅಹಂಕಾರದ ಬುನಾದಿಯ ಮೇಲೆ ಇಡೀ ಮಾನವ ಸಮಾಜವನ್ನು ಛಿದ್ರಗೊಳಿಸಿ ಸ್ಥಾಪಿಸುವ ಹುನ್ನಾರ.

ಧರ್ಮದ ಅಡಿಪಾಯವಾದ ಆಧ್ಯಾತ್ಮ, ಭಕ್ತಿ, ನಿಷ್ಠೆ, ಬದ್ಧತೆ ಮತ್ತು ಶ್ರದ್ಧೆ ಮಾರುಕಟ್ಟೆಯ ಸರಕುಗಳಂತಾಗಿರುವುದನ್ನು ಕಂಡು ಗಾಂಧೀಜಿ ಮಂಕಾಗುತ್ತಿದ್ದಾರೆ.

ಗ್ರಾಮೀಣ ಭಾರತ : ತಮ್ಮ ಆಥರ್ಿಕ ಚಿಂತನೆಯಲ್ಲಿ ಗಾಂಧೀಜಿ ಗ್ರಾಮೀಣ ಪರಿಸರದ ಚೌಕಟ್ಟನ್ನು ಮೀರಿ ಯೋಚಿಸಿದವರೇ ಅಲ್ಲ. ಭಾರತ ಗ್ರಾಮಗಳ ದೇಶ, ಗ್ರಾಮೀಣ ಬಡ ಜನತೆಯೇ, ಕೃಷಿಕರೇ ದೇಶದ ಬೆನ್ನೆಲುಬು ಎಂದು ನಂಬಿದವರು. ಈ ನಿಟ್ಟಿನಲ್ಲಿ ಆಧುನಿಕ ಕೈಗಾರಿಕೆಯನ್ನೂ ವಿರೋಧಿಸಿದವರು. ಆದರೆ ಪ್ರಸಕ್ತ ಭಾರತದಲ್ಲಿ ಗ್ರಾಮ ಎಂದರೆ ಯಾವುದೇ ಸಂದರ್ಭದಲ್ಲಿ ಒಕ್ಕಲೆಬ್ಬಿಸಬಹುದಾದ, ಮುಳುಗಿಸಬಹುದಾದ, ನಿರ್ಲಕ್ಷಿಸಬಹುದಾದ ಜನಸಮುದಾಯಗಳ ಒಕ್ಕೂಟ ಅಷ್ಟೆ. ನವ ಉದಾರೀಕರಣ ನೀತಿಗಳಿಂದ ಇಡೀ ವಿಶ್ವವೇ ಒಂದು ಪುಟ್ಟ ಗ್ರಾಮದಂತಾಗುತ್ತದೆ ಎಂಬ ಆಶಾಭಾವನೆ ನುಚ್ಚುನೂರಾಗಿ, ಸಣ್ಣ ಪುಟ್ಟ ಗ್ರಾಮಗಳು ಜಾಗತೀಕರಣ ಪ್ರಕ್ರಿಯೆಗೆ ಬಲಿಯಾಗಿ ನಗರ ಸಂಸ್ಕೃತಿಯಲ್ಲಿ ಲೀನವಾಗುತ್ತಿವೆ. ಗ್ರಾಮೀಣ ಪರಿಸರದಲ್ಲಿ, ಹಚ್ಚ ಹಸುರಿನ ನಡುವೆ ಸ್ವರ್ಗ ಕಾಣುತ್ತಿದ್ದ ಜನಸಮುದಾಯಗಳು ನುಣ್ಣಗಿನ ದೂರದ ಬೆಟ್ಟಗಳೆಡೆಗೆ ತಂಡೋಪತಂಡವಾಗಿ ವಲಸೆ ಹೋಗುತ್ತಿದ್ದಾರೆ. ಏಕೆ ? ಕೃಷಿಕರ ಜೀವನ, ಗ್ರಾಮೀಣ ಬಡವರ ಜೀವನ ನರಕ ಸದೃಶವಾಗಿದೆ. ಗಾಂಧೀಜಿ ಏಕೋ ಖಿನ್ನರಾದಂತೆ ಕಾಣುತ್ತಿದೆ.

ಸಾಂಸ್ಕೃತಿಕ ಭಾರತ : ಗಾಂಧೀಜಿಗೆ ಸಂಸ್ಕೃತಿ ಎಂದರೆ ನಿಂತ ನೀರಲ್ಲ. ಚಲನಶೀಲತೆಯನ್ನು ಮೆರೆವ ಸಂಸ್ಕೃತಿಯನ್ನೇ ಉನ್ನತ ಸಂಸ್ಕೃತಿ ಎಂದು ನಂಬಿದ್ದವರು. ಭಾರತೀಯ ಸಂಸ್ಕೃತಿಯನ್ನು ಶೋಷಿತ ಜನಸಮುದಾಯಗಳ ನೆಲೆಗಟ್ಟಿನಲ್ಲಿ ನಿಂತು ನೋಡಿದ ದಾರ್ಶನಿಕ ಬಾಪೂ ಎಲ್ಲ ಭಿನ್ನ ಸಂಸ್ಕೃತಿಗಳನ್ನೂ ಒಪ್ಪಿಕೊಂಡವರು, ಅಪ್ಪಿಕೊಂಡವರು. ಆದರೆ ಈಗ ಕಾಣುತ್ತಿರುವುದೇನು ? ಭಾರತೀಯ ಸಂಸ್ಕೃತಿಯ ಸಂಕಥನಗಳನ್ನೇ ಹೈಜಾಕ್ ಮಾಡುವ ಮೂಲಕ ಜನ ಸಂಸ್ಕೃತಿ, ನೆಲ ಸಂಸ್ಕೃತಿಗಳನ್ನು ನಿದರ್ಿಷ್ಟ ಧರ್ಮಗಳ ಚೌಕಟ್ಟಿನೊಳಗೆ ಬಂಧಿಸುವ ಪ್ರವೃತ್ತಿ ರಾರಾಜಿಸುತ್ತಿದೆ. ನಮ್ಮ ಜನತೆಯ ಸಂಸ್ಕೃತಿ ವಿದೇಶಿ ಆಕ್ರಮಣದಿಂದ ನಾಶವಾಗುತ್ತಿದೆ ಎಂದು ಬೊಬ್ಬಿಡುವ ಶಕ್ತಿಗಳೇ, ಶತಮಾನಗಳಿಂದ ಬೆಳೆದು ಬಂದಿರುವ ದೇಶೀ ನೆಲಸಂಸ್ಕೃತಿಯನ್ನು ತುಳಿಯಲು ವಾಮನಾವತಾರ ತಾಳುತ್ತಿವೆ. ಸಂಸ್ಕೃತಿಯ ರಕ್ಷಣೆಯ ಹೊಣೆಗಾರಿಕೆ ಹೊತ್ತಿರುವ ಸ್ವಯಂ ಸೇವಕರ ಪಡೆಗಳು ಹೊಸ ವ್ಯಾಖ್ಯಾನಗಳನ್ನು ಮುಂದಿಡುವ ಮೂಲಕ ಮೂಲ ಸಂಸ್ಕೃತಿಗಳನ್ನು ಅಪಮೌಲ್ಯಗೊಳಿಸುತ್ತಿವೆ. ಸಾಮುದಾಯಿಕ ಅಸ್ಮಿತೆಗಳಲ್ಲಿ ಕಾಣುತ್ತಿದ್ದ ಸಂಸ್ಕೃತಿಯ ಸಂಕಥನಗಳು ಈಗ ಸಾಂಸ್ಥಿಕ ಧರ್ಮಗಳ ಅಸ್ಮಿತೆಗಳಲ್ಲಿ ಕಾಣುತ್ತಿವೆ. ಗಾಂಧೀಜಿಯ ಮುಖದಲ್ಲಿ ದುಃಖ ಮಡುಗಟ್ಟಿದಂತೆ ತೋರುತ್ತಿದೆ.

ಆಧ್ಯಾತ್ಮಿಕ ಭಾರತ : ಗಾಂಧೀಜಿ ಮಾತ್ರವಲ್ಲ, ಯಾವುದೇ ದಾರ್ಶನಿಕ ವ್ಯಕ್ತಿಯ ದೃಷ್ಟಿಯಲ್ಲಿ ಆಧ್ಯಾತ್ಮ ಎಂದರೆ ಮಾನವೀಯ ಮೌಲ್ಯಗಳನ್ನು ವಾಸ್ತವದ ನೆಲೆಗಟ್ಟಿನಲ್ಲಿ ವ್ಯಾಖ್ಯಾನಿಸಿ, ಅತೀತ ಶಕ್ತಿಗಳ ಆರಾಧನೆಯ ಮೂಲಕ ಸಾಕಾರಗೊಳಿಸುವ ಒಂದು ಪಾರಮಾಥರ್ಿಕ ಪ್ರವೃತ್ತಿ. ಪಾರಮಾಥರ್ಿಕವಲ್ಲದ ಆಧ್ಯಾತ್ಮದ ಇರುವಿಕೆಯನ್ನೂ ಒಪ್ಪಿಕೊಳ್ಳುತ್ತಿದ್ದುದು ಗಾಂಧೀಜಿಯವರ ಹೆಮ್ಮೆಯ ವಿಷಯ. ಸಮಕಾಲೀನ ಭಾರತದಲ್ಲಿ ಆಧ್ಯಾತ್ಮ ಎಂದರೇನು ? ದೇಶವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳಿಗೆಲ್ಲವೂ ಪರಿಹಾರ ಒದಗಿಸುವ ಸೋಗಿನಲ್ಲಿ, ಜನಸಾಮಾನ್ಯರನ್ನು ತನ್ನೆಡೆಗೆ ಸೆಳೆದು, ಅವರಲ್ಲಿನ ವೈಜ್ಞಾನಿಕ ಮನೋಭಾವ ಮತ್ತು ದೃಷ್ಟಿಕೋನಗಳನ್ನು ನಾಶಪಡಿಸಿ, ಇಡೀ ಸಮಾಜವನ್ನು ಒಂದು ನಿದರ್ಿಷ್ಟ ಸಾಂಸ್ಥಿಕ ಧರ್ಮದ ಚೌಕಟ್ಟಿನಲ್ಲಿ ಬಂಧಿಸಿಡುವ ದಂಧೆ. ಆಧ್ಯಾತ್ಮ ಮತ್ತು ಆಧ್ಯಾತ್ಮಿಕತೆಯ ಹೆಸರಿನಲ್ಲಿ ಏನೆಲ್ಲಾ ನಡೆಯುತ್ತಿವೆ. ಜಾತಿಗೊಂದು ಮಠ, ಊರಿಗೊಬ್ಬ ಜಗದ್ಗುರು. ಆಧ್ಯಾತ್ಮದಲ್ಲಿ ಆತ್ಮವೇ ಕಾಣೆಯಾಗಿದ್ದರೂ ವಿಭಿನ್ನ ಸ್ವರೂಪಗಳನ್ನು ಜನಸಮುದಾಯಗಳನ್ನು ನಿರಂತರ ಶೋಷಣೆಯಲ್ಲಿಡಲು ನೆರವಾಗುವ ನಿಟ್ಟಿನಲ್ಲಿ ಮಠಮಾನ್ಯಗಳು ಕಾರ್ಯಪ್ರವೃತ್ತವಾಗಿವೆ. ಗಾಂಧೀಜಿ ಗಾಢ ಚಿಂತನೆಯಲ್ಲಿ ಮುಳುಗಿರುವಂತೆ ಕಾಣುತ್ತಿದೆ.

ಸ್ವಾವಲಂಬಿ ಭಾರತ : ಭಾರತ ಕೇವಲ ಸ್ವತಂತ್ರ ರಾಷ್ಟ್ರವಾಗುವುದು ಮಾತ್ರವಲ್ಲದೆ ಒಂದು ಸ್ವಾವಲಂಬಿ, ಸಾರ್ವಭೌಮ ರಾಷ್ಟ್ರವಾಗುವುದು ಗಾಂಧೀಜಿ ಮತ್ತಿತರ ಸ್ವಾತಂತ್ರ್ಯ ಯೋಧರ ಕನಸಾಗಿತ್ತು. ಗಾಂಧೀಜಿಯವರ ಸ್ವದೇಶಿ ಪರಿಕಲ್ಪನೆ ಕೇವಲ ಪದಾರ್ಥಗಳ ಉಪಯೋಗಕ್ಕೆ ಸೀಮಿತವಾಗಿರಲಿಲ್ಲ. ನಮ್ಮದೇ ಆದ ಸ್ವಂತಿಕೆಯನ್ನು ಉಳಿಸಿಕೊಳ್ಳುವ ಮೂಲಕ, ಅನ್ಯ ರಾಷ್ಟ್ರಗಳ ಕಪಿಮುಷ್ಟಿಯಿಂದ ಮುಕ್ತವಾಗಿ ಬಾಳುವ ಒಂದು ಮಹತ್ತರ ಕನಸು ಸ್ವದೇಶಿ ಪರಿಕಲ್ಪನೆಯ ಹಿಂದೆ ಅಡಗಿತ್ತು. ಆದರೆ ಇಂದು ? ಅಣು ಒಪ್ಪಂದ, ಪರಮಾಣು ಅವಘಡಗಳ ಹೊಣೆಗಾರಿಕೆ, ನವ ಉದಾರವಾದದ ಆಥರ್ಿಕ ನೀತಿ, ವಿದೇಶಿ ನೀತಿಗಳು ಎಲ್ಲವೂ ಭಾರತವನ್ನು ಮತ್ತೊಮ್ಮೆ ಗುಲಾಮಗಿರಿಗೆ ತಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ. ಶಾಂತಿ ಪ್ರಿಯವಾಗಿರಬೇಕಾದ ವಿಶ್ವವನ್ನು ಯುದ್ಧ ಪರಂಪರೆಗೊಳಪಡಿಸುವ ಸಾಮ್ರಾಜ್ಯಶಾಹಿಗಳ ಹುನ್ನಾರಕ್ಕೆ ಬಲಿಯಾಗುತ್ತಿರುವ ಭಾರತದ ಆಳ್ವಿಕರು ದೇಶದ ಸ್ವಾವಲಂಬನೆಯನ್ನೇ ಒತ್ತೆ ಇಟ್ಟು ನವ ಉದಾರವಾದವನ್ನು ಪೋಷಿಸುತ್ತಿದ್ದಾರೆ. ಗಾಂಧೀಜಿಯ ಚಹರೆ ಏಕೋ ಬದಲಾಗುತ್ತಿದೆ. ಕಣ್ಣುಗಳು ಒದ್ದೆಯಾಗುತ್ತಿವೆ.

ಜಾತಿ ವ್ಯವಸ್ಥೆಯ ಭಾರತ : ಚಾತುರ್ವರ್ಣ ವ್ಯವಸ್ಥೆಯನ್ನು ಒಪ್ಪಿಕೊಂಡರೂ ತಮ್ಮದೇ ಆದ ವಿಭಿನ್ನ ರೀತಿಯಲ್ಲಿ ಜಾತಿ ವ್ಯವಸ್ಥೆಯ ಕರಾಳತೆಯನ್ನು ಗ್ರಹಿಸಿದ್ದ ಗಾಂಧೀಜಿ ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯಗಳ ವಿರುದ್ಧ ಸಮರವನ್ನೇ ಸಾರಿದ್ದರು. ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಶ್ರಮ ವಹಿಸಬೇಕೆಂದು ಆಶಿಸುತ್ತಿದ್ದರು. ಆದರೆ ಪ್ರಸಕ್ತ ಭಾರತದಲ್ಲಿ ಜಾತಿ ಆಧಾರಿತ ಶೋಷಣೆ, ದಬ್ಬಾಳಿಕೆ ಹೆಚ್ಚಾಗುತ್ತಿರುವುದೇ ಅಲ್ಲ, ಅಸ್ಪೃಶ್ಯತೆಯ ಸೂಕ್ಷ್ಮ ತರಂಗಗಳೂ ಭಾರತೀಯ ಸಮಾಜದಲ್ಲಿ ಸುಳಿದಾಡುತ್ತಿವೆ. ತಲೆಯ ಮೇಲೆ ಮಲ ಹೊರುವ ಪದ್ಧತಿ ಇಂದಿಗೂ ಜೀವಂತವಾಗಿರುವುದನ್ನು ಕಂಡು, ಜಾತಿ ದೌರ್ಜನ್ಯ ಹೊಸ ಸ್ವರೂಪ ಪಡೆದಿರುವುದನ್ನು ಕಂಡು, ಕಂಬಾಲಪಲ್ಲಿ, ಸವಣೂರು, ಖೈಲರ್ಾಂಜಿಗಳನ್ನು ಕಂಡು ಗಾಂಧೀಜಿಯ ಮನಸ್ಸು ಖಿನ್ನವಾಗಿದೆ.

ಸೌಹಾರ್ದ ಭಾರತ : ಹಿಂದೂ ಧರ್ಮದ ಶ್ರೇಷ್ಠತೆಯಲ್ಲಿ ಅಪಾರ ವಿಶ್ವಾಸ ಹೊಂದಿದ್ದರೂ ಇತರ ಧರ್ಮಗಳನ್ನು ಗೌರವಿಸುತ್ತಿದ್ದ ಗಾಂಧೀಜಿಯವರಿಗೆ ಧಾಮರ್ಿಕ ಸೌಹಾರ್ದತೆ ಮತ್ತು ಭ್ರಾತೃತ್ವಗಳು ಮಹತ್ತರ ಸಂಗತಿಗಳಾಗಿದ್ದವು. ಪ್ರಥಮ ಸ್ವಾತಂತ್ರ್ಯೋತ್ಸವದಲ್ಲೂ ಭಾಗವಹಿಸದೆ, ನೌಖಾಲಿಯಲ್ಲಿ ಕೋಮುಸಂಘರ್ಷಕ್ಕೆ ತುತ್ತಾದ ಅಮಾಯಕ ಜೀವಿಗಳಿಗೆ ಸಾಂತ್ವನ ಹೇಳುತ್ತಿದ್ದರು. ಕೋಮುವಾದದ ವಿಷ ಬೀಜವನ್ನು ಬಿತ್ತುತ್ತಾ ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಪ್ರಸಕ್ತ ಭಾರತದ ರಾಜಕೀಯ ಶಕ್ತಿಗಳು ಜನರನ್ನು ಒಡೆದು ಆಳುವ ವಸಾಹತುಶಾಹಿ ನೀತಿಯನ್ನೇ ಅನುಸರಿಸುತ್ತಿವೆ. ಮಂದಿರ ಮಸೀದಿಗಳ ಸುತ್ತ ತಮ್ಮ ರಾಜಕೀಯ ಅಸ್ಮಿತೆಗಳನ್ನು ಕಂಡುಕೊಳ್ಳುತ್ತಿರುವ ರಾಜಕಾರಣಿಗಳು ಜನಸಮುದಾಯಗಳನ್ನು ತಮ್ಮ ರಾಜಕೀಯ ದಾಳಗಳನ್ನಾಗಿ ಬಳಸಿಕೊಳ್ಳುತ್ತಿವೆ. ಏತನ್ಮಧ್ಯೆ ಅಯೋಧ್ಯೆಯ ರಾಮಮಂದಿರದ ತೀಪರ್ು ಜನರಲ್ಲಿ ಮತ್ತೊಮ್ಮೆ ಆಶಾಭಾವನೆಯನ್ನು ಮೂಡಿಸುವಂತೆ ಕಾಣುತ್ತಿದೆ. ಆದರೂ ಜನಸಮುದಾಯಗಳಲ್ಲಿನ ಹತಾಶ ಭಾವನೆ ಮತ್ತು ಅಭದ್ರತೆಯ ಕಲ್ಪನೆಗಳನ್ನು ಕಂಡು ಗಾಂಧೀಜಿ ಹತಾಶರಾಗುತ್ತಿದ್ದಾರೆ.

ಕೊನೆಯದಾಗಿ ತಮ್ಮ ನೆಚ್ಚಿನ ಹೋರಾಟದ ಅಸ್ತ್ರವಾದ ಉಪವಾಸ ಸತ್ಯಾಗ್ರಹವೂ ಅಪಹಾಸ್ಯಕ್ಕೀಡಾಗಿರುವುದನ್ನು ಕಂಡ ಗಾಂಧೀಜಿ ತನ್ನ ಕನ್ನಡಕದ ಗಾಜುಗಳ ಮೇಲೆ ಧೂಳು ಇರಬಹುದೇನೋ, ಅದಕ್ಕೇ ನನ್ನ ನೆಚ್ಚಿನ ಭಾರತ ಹೀಗೆ ಕಾಣುತ್ತಿದೆ ಎಂದು ಭಾವಿಸಿ ಗಾಜುಗಳನ್ನು ಒರೆಸಲು ಮುಂದಾದ ಅವರಿಗೆ ಕಂಡ ಕಟು ಸತ್ಯ, ಕನ್ನಡಕಕ್ಕೆ ಗಾಜುಗಳೇ ಇರಲಿಲ್ಲ !

‍ಲೇಖಕರು G

October 2, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ನಾ ದಿವಾಕರ ನಮ್ಮ ಸುತ್ತಲಿನ ನಾಗರಿಕ ಸಮಾಜದಲ್ಲಿ ಸಂವೇದನೆ ಕ್ಷೀಣಿಸುತ್ತ್ತಿದೆ ಎಂದು ಹಲವು ಬಾರಿ ಭಾಸವಾಗುತ್ತದೆ. ಇನ್ನೂ ಕೆಲವೊಮ್ಮೆ ನಮ್ಮ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This