ನಾ ದಿವಾಕರ್ ನೇರನುಡಿ : ಭ್ರೂಣ ಹತ್ಯೆಗೊಳಗಾದ ಹೆಣ್ಣು ಜೀವಿಗಳೇ ಪುಣ್ಯವಂತರೇನೋ

ಸ್ವತಂತ್ರ ಭಾರತದ ಮಹಿಳೆ ಎಷ್ಟು ಸ್ವತಂತ್ರಳು ? – ನಾ ದಿವಾಕರ ಮಹಿಳೆಯರನ್ನು ಎಲ್ಲಿ ಪೂಜಿಸುತ್ತಾರೋ ಅಲ್ಲಿ ದೇವತೆಗಳು ನರ್ತಿಸುತ್ತಾರೆ ಎಂದು ಹಿಂದೂಧರ್ಮದ ಗ್ರಂಥವೊಂದರಲ್ಲಿ ಉದ್ಧರಿಸಲಾಗಿದೆ. ಅಂದರೆ ಭಾರತೀಯ ಅಥವಾ ಹಿಂದೂ ಸಮಾಜದಲ್ಲಿ ಮಹಿಳೆಯರಿಗೆ ಅತ್ಯಂತ ಉನ್ನತ ಗೌರವ ನೀಡಲಾಗುತ್ತದೆ ಎಂದು ಶತಮಾನಗಳಿಂದ ನಂಬಿಕೊಂಡು ಬರಲಾಗಿದೆ. ಅಷ್ಟೇ ಅಲ್ಲ ಪ್ರಕೃತಿಯ ಸೃಷ್ಟಿಯಲ್ಲಿ, ನಿಸರ್ಗದ ಒಡಲಲ್ಲಿ, ಹರಿವ ನದಿಗಳಲ್ಲಿ, ಮೇರು ಪರ್ವತಗಳಲ್ಲಿ ಹೆಣ್ಣನ್ನು ಸಾಕ್ಷಾತ್ಕರಿಸಿಕೊಳ್ಳುವ ಒಂದು ಪರಂಪರೆಯೂ ಭಾರತದಲ್ಲಿ ಬೆಳೆದುಬಂದಿದೆ. ಒಂದು ರೀತಿಯಲ್ಲಿ ಭಾರತೀಯ ಮಹಿಳೆಯನ್ನು ವೈಭವೀಕರಿಸಿ ನಾಲ್ಕು ಗೋಡೆಗಳ ನಡುವೆ ಬಂಧಿಸುವ ತಂತ್ರಗಾರಿಕೆ ಇದಾಗಿದೆಯಾದರೂ ಮತ್ತೊಂದೆಡೆ ಇದೇ ಸಂಸ್ಕೃತಿ, ಪರಂಪರೆ ಮತ್ತು ಧರ್ಮದ ಸಂರಕ್ಷಕರು ಮಹಿಳೆಯನ್ನು ಸಂಸ್ಕೃತಿಯ ರಕ್ಷಕಳೆಂದೂ , ರಾಷ್ಟ್ರ-ಧರ್ಮ ಮತ್ತು ಸಮಾಜದ ಘನತೆಯ ಸಂರಕ್ಷಕರೆಂದೂ ಬಿಂಬಿಸುತ್ತಾ ಬಂದಿರುವ ಮತೀಯವಾದಿಗಳು ಮಹಿಳೆಯನ್ನು ವೈಭವೀಕರಿಸುತ್ತಲೇ ಹಲವು ರೀತಿಗಳಲ್ಲಿ ಶೋಷಣೆಗೊಳಪಡಿಸುತ್ತಲೂ ಬಂದಿದ್ದಾರೆ. ಈ ಎರಡು ಆಯಾಮಗಳ ನಡುವೆಯೇ ಭಾರತೀಯ ಮಹಿಳೆ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ವಲಯದಲ್ಲಿ, ಕೌಟುಂಬಿಕ ಪರಿಸರದಲ್ಲಿ ಮತ್ತು ವ್ಯಕ್ತಿಗತ ಜೀವನದಲ್ಲಿ ಹಲವು ರೀತಿಯ ದೌರ್ಜನ್ಯಗಳಿಗೆ ಒಳಗಾಗುತ್ತಿರುವುದು ಸ್ವತಂತ್ರ ಭಾರತದ ವಿಡಂಬನೆ. ಆದರೂ ಮಹಿಳಾ ಸ್ವಾತಂತ್ರ್ಯ , ವಿಮೋಚನೆ, ಸಬಲೀಕರಣ ಇತ್ಯಾದಿ ಘೋಷಣೆಗಳು ದಿನನಿತ್ಯ ಮೊಳಗುತ್ತಲೇ ಇರುತ್ತವೆ. ಪಂಚಾಯತಿ ಮಟ್ಟದಿಂದ ಹಿಡಿದು ಸಂಸತ್ತಿನವರೆಗೂ ಮಹಿಳೆಯರಿಗೆ ಅಧಿಕಾರ ನೀಡುವ ಬಗ್ಗೆ ಉಪನ್ಯಾಸಗಳು ಪುಂಖಾನುಪುಂಖವಾಗಿ ಕೇಳಿಬರುತ್ತಲೇ ಇರುತ್ತದೆ. ಮಹಿಳಾ ಮೀಸಲಾತಿ ಮಸೂದೆ ನೆನೆಗುದಿಗೆ ಬಿದ್ದಿದ್ದರೂ ರಾಜಕೀಯ ಪಕ್ಷಗಳು, ಚುನಾವಣೆಗಳಲ್ಲಿ ಟಿಕೆಟ್ ನೀಡದಿದ್ದರೂ ಮಹಿಳೆಯರಿಗೆ ಅಧಿಕಾರ ನೀಡುವ ಘೋಷಣೆ ಮಾಡುತ್ತಲೇ ಇರುತ್ತಾರೆ. ಒಬ್ಬ ಮೀರಾ ಕುಮಾರ್, ಒಬ್ಬ ಪ್ರತಿಭಾ ಪಾಟೀಲ್ ಅಥವ ಹಲವು ಜಯಾ-ಮಾಯಾ-ಮಮತಾಗಳು ಸಬಲೀಕರಣಗೊಂಡ ಮಹಿಳೆಯರ ಸಂಕೇತವಾಗಿ ಕಾಣುತ್ತಾರೆ. ಇವರ ಛಾಯೆಯಲ್ಲೇ ಇತರ ಮಹಿಳೆಯರ ವೈಭವವನ್ನೂ ಸಮೀಕರಿಸುತ್ತಾ ಭಾರತದ ಆಳುವ ವರ್ಗಗಳು ಆತ್ಮರತಿಯಲ್ಲಿ ತೊಡಗಿರುತ್ತವೆ. ಸುಶಿಕ್ಷಿತ, ನಗರೀಕೃತ, ಮೇಲ್ಪದರದ ಮಹಿಳೆಯರ ಸಾಧನೆಗಳನ್ನೇ ವೀರಗಾಥೆಗಳಂತೆ ಬಿಂಬಿಸಿ ಭಾರತೀಯ ಮಹಿಳೆ ಔನ್ನತ್ಯ ಸಾಧಿಸಿದ್ದಾಳೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಲಾಗುತ್ತದೆ. ಆದರೆ ವಾಸ್ತವ ಭಿನ್ನವಾಗಿದೆ. ನವ ಉದಾರವಾದ ಮತ್ತು ಜಾಗತೀಕರಣದ ಪ್ರಹಾರದಿಂದ ತತ್ತರಿಸಿ ಹೋಗಿರುವ ಗ್ರಾಮೀಣ ಬಡಜನತೆ ತಮ್ಮ ಜೀವನಾಧಾರವನ್ನರಸಿ ತಂಡೋಪತಂಡವಾಗಿ ವಲಸೆ ಹೋಗಲಾರಂಭಿಸಿದ್ದಾರೆ. ಇವರಲ್ಲಿ ಮಹಿಳೆಯರೇ ಅಧಿಕ ಎಂದು ಹೇಳಬೇಕಿಲ್ಲ. ಒಂದು ವೇಳೆ ಪುರುಷರು ಮಾತ್ರ ವಲಸೆ ಹೋದರೂ ಮಹಿಳೆಯರು ಕೌಟುಂಬಿಕ ಜವಾಬ್ದಾರಿಯನ್ನು ಹೊರಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿನ ಬಿಕ್ಕಟ್ಟು ಗ್ರಾಮೀಣ ಮಹಿಳೆಯರನ್ನು ಗಾರ್ಮೆ೦ಟ್ ಕಾರ್ಖಾನೆಗಳ ಗೇಟ್ ಬಳಿ ನೌಕರಿಗಾಗಿ ಸಾಲುಗಟ್ಟಿ ನಿಲ್ಲುವಂತೆ ಮಾಡಿದೆ. ಗಾರ್ಮೆ೦ಟ್ ಕಾರ್ಖಾನೆಗಳಲ್ಲಿ ಹಗಲಿರುಳು ಗಾಣದೆತ್ತಿನಂತೆ ದುಡಿಯುವ ಮಹಿಳೆಯರಿಗೆ ನೀಡುವ ಅತ್ಯಲ್ಪ ವೇತನ ಮತ್ತು ಕಾರ್ಖಾನೆಯ ಆಡಳಿತ ವರ್ಗಗಳು ಭವಿಷ್ಯನಿಧಿ ಮುಂತಾದ ಯಾವುದೇ ಸವಲತ್ತುಗಳನ್ನು ಒದಗಿಸದಿರುವುದು ಮಹಿಳಾ ಕಾರ್ಮಿಕರನ್ನು ಶೋಷಣೆಯ ಸರಕುಗಳನ್ನಾಗಿ ಮಾಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸಲು ಕೇಂದ್ರ ಸರ್ಕಾರ ರೂಪಿಸಿರುವ ಉದ್ಯೋಗ ಖಾತರಿ ಯೋಜನೆ ಪಟ್ಟಭದ್ರ ಹಿತಾಸಕ್ತಿಗಳ, ದಲ್ಲಾಳಿಗಳ ಮತ್ತು ಪ್ರಬಲ ರಾಜಕೀಯ ವ್ಯಕ್ತಿಗಳ ದಂಧೆಯಾಗಿದ್ದು ಇಲ್ಲಿಯೂ ಸಹ ಮಹಿಳೆಯರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ.ನಗರ ಪ್ರದೇಶಗಳಲ್ಲಿ ಮಹಿಳೆಯರು ಸರ್ವ ಸ್ವತಂತ್ರರಾಗಿ ಕಂಡುಬಂದರೂ ಅತ್ಯಾಧುನಿಕ ಸಾಫ್ಟ್ವೇರ್ ಉದ್ಯಮವನ್ನೂ ಸೇರಿದಂತೆ ಎಲ್ಲ ಕಚೇರಿಗಳಲ್ಲಿ ಲೈಂಗಿಕ ಕಿರುಕುಳ, ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ಸಾಫ್ಟ್ ವೇರ್ ಕಾಲ್ ಸೆಂಟರ್ಗಳಲ್ಲಿ ಕೆಲಸ ಮಾಡುವ ಯುವತಿಯರ ಹತ್ಯೆ ಸಾಮಾನ್ಯವಾಗಿದ್ದು, ಎಷ್ಟೇ ಆಧುನಿಕ ಸೌಕರ್ಯಗಳನ್ನು ಹೊಂದಿದ್ದರೂ ಮಹಿಳಾ ಕಾರ್ಮಿಕರು ನಿರ್ಭಯರಾಗಿ ಓಡಾಡುವುದು ದುಸ್ತರವಾಗಿದೆ. ಇದು ಆರ್ಥಿಕ ವಲಯದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು.

ಸಾಂಸ್ಕೃತಿಕ ದಾಳಿ ಸಾಮಾಜಿಕ ವಲಯದಲ್ಲಿ ಮಹಿಳೆಯರು ಮತ್ತೊಂದು ರೀತಿಯ ಸಂಕಟಕ್ಕೆ ಸಿಲುಕಿದ್ದಾರೆ. ಭಾರತೀಯ, ಹಿಂದೂ, ಇಸ್ಲಾಮಿಕ್ ಅಥವಾ ಕ್ರೈಸ್ತ ಧರ್ಮಗಳ ಮತ್ತು ಸಂಸ್ಕೃತಿಗಳ ರಕ್ಷಣೆಯ ಹೊಣೆಗಾರಿಕೆಯನ್ನು ಮಹಿಳೆಯರ ಹೆಗಲಿಗೇರಿಸಿರುವ ಪಿತೃ ಪ್ರಧಾನ ಸಮಾಜ ತನ್ನ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಹೆಣ್ಣಿನ ಮೊರೆ ಹೋಗುತ್ತಿರುವುದು ಅಪಾಯಕಾರಿ ಹಂತ ತಲುಪುತ್ತಿದೆ. ಮಹಿಳೆಯರ ಉಡುಪುಗಳಿಂದ ಹಿಡಿದು ದೈನಂದಿನ ಚಟುವಟಿಕೆಗಳವರೆಗೂ ನಿಗಾ ವಹಿಸುತ್ತಿರುವ ಪುರುಷ ಪ್ರಧಾನ ಸಮಾಜದ ಸಾಂಸ್ಕೃತಿಕ ಆರಕ್ಷಕರು ಸಂಸ್ಕೃತಿ ಮತ್ತು ಸಮಾಜದ ಘನತೆಯನ್ನು ಅಳೆಯಲು ಮಹಿಳೆಯರನ್ನೇ ಮಾನದಂಡವನ್ನಾಗಿ ಬಳಸುತ್ತಿರುವುದು ಇತ್ತೀಚಿನ ದಿನಗಳ ವಿಶಿಷ್ಟ ಬೆಳವಣಿಗೆ. ಅಸ್ಸಾಂನ ಗವಹಾತಿಯಲ್ಲಿ ಗೆಳೆಯರೊಡನೆ ಬಾರ್ಗೆ ಹೋಗಿದ್ದ ಮಹಿಳೆಯ ಮೇಲೆ ಸಾರ್ವಜನಿಕರ ಸಮ್ಮುಖದಲ್ಲೇ ಹಲ್ಲೆ ನಡೆಸಿ, ಲೈಂಗಿಕ ದೌರ್ಜನ್ಯ ಎಸಗಿದರೂ, ಸುತ್ತಲೂ ನೆರೆದಿದ್ದ ಜನ ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸಿರುವುದು ನಮ್ಮ ಸಮಾಜದ ನಿಷ್ಕ್ರಿಯತೆ ಮತ್ತು ಅಮಾನವೀಯ ಧೋರಣೆಯ ದ್ಯೋತಕವಾಗಿ ಕಾಣುತ್ತದೆ. ಈ ಪ್ರಕರಣದಲ್ಲಿ ಮಾಧ್ಯಮದ ಪ್ರತಿನಿಧಿಗಳೂ ಭಾಗಿಯಾಗಿರುವ ಸಂದೇಹ ಮೂಡಿರುವುದು ಪ್ರಜಾತಂತ್ರ ವ್ಯವಸ್ಥೆಯನ್ನೇ ಅಣಕಿಸುವಂತಿದೆ. ಈ ಘಟನೆಯ ಮುಂದುವರೆದ ಭಾಗವೇನೋ ಎಂಬಂತೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಅಧಿಕೃತ ಪರವಾನಗಿ ಪಡೆದವರಂತೆ ವರ್ತಿಸುತ್ತಿರುವ ಸಾಂಸ್ಕೃತಿಕ ಆರಕ್ಷಕರು ಮಂಗಳೂರಿನ ಹೋಂಸ್ಟೇ ಒಂದರಲ್ಲಿ ಹುಟ್ಟುಹಬ್ಬದ ಸಮಾರಂಭದಲ್ಲಿ ತೊಡಗಿದ್ದ ಮಹಿಳೆಯರ ಮೇಲೆ ಅಮಾನುಷ ಆಕ್ರಮಣ ನಡೆಸಿದ್ದಾರೆ. ಇಲ್ಲಿಯೂ ಮಾಧ್ಯಮಗಳ ಪಾತ್ರ ಪ್ರಶ್ನಾರ್ಹವಾಗಿದೆ. ಮಹಿಳೆಯರನ್ನು ವಿವಸ್ತ್ರಗೊಳಿಸಿ, ಅವರ ಮೇಲೆ ಹಲ್ಲೆ ನಡೆಸಿ ಹಿಗ್ಗಾಮುಗ್ಗಾ ಥಳಿಸುವುದನ್ನು ಟಿವಿ ಧಾರಾವಾಹಿಯಂತೆ ಚಿತ್ರಿಸಿರುವ ಮಾಧ್ಯಮ ಛಾಯಾಗ್ರಾಹಕರು, ಗವಹಾತಿಯ ಸಾರ್ವಜನಿಕರಷ್ಟೇ ನಿಷ್ಕ್ರಿಯ, ನಿರ್ಭಾವುಕ, ನಿರ್ದಾಕ್ಷೀಣ್ಯ ಪುರುಷರಂತೆ ಕಾಣುತ್ತಾರೆ. ಅಚ್ಚರಿಯ ಅಂಶವೆಂದರೆ ಈ ಘಟನೆಯನ್ನು ತನಿಖೆ ನಡೆಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರೂ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ದೂಷಿಸದೆ, ಮಹಿಳೆಯರು ಬಾರ್ಗಳಲ್ಲಿ, ಪಾರ್ಟಿಗಳಲ್ಲಿ, ಮೋಜು ಮಸ್ತಿಯಲ್ಲಿ ತೊಡಗುವುದೇ ಅಪರಾಧ ಎಂಬಂತೆ ವರದಿ ಸಲ್ಲಿಸಿದ್ದಾರೆ. ಒಂದು ಪುರುಷ ಪ್ರಧಾನ ವ್ಯವಸ್ಥೆಯ ಪ್ರಭುತ್ವದಲ್ಲಿ ಆಡಳಿತ ಯಂತ್ರಗಳೂ ಹೇಗೆ ಮಹಿಳಾ ವಿರೋಧಿಯಾಗಿರುತ್ತವೆ, ಸಂವೇದನಾರಹಿತವಾಗಿರುತ್ತವೆ ಎಂದು ರಾಜ್ಯ ಮಹಿಳಾ ಆಯೋಗ ಸ್ಪಷ್ಟವಾಗಿ ನಿರೂಪಿಸಿದೆ. ಇಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕಿಂತಲೂ, ಮಹಿಳೆಯರು ಧರಿಸುವ ಉಡುಪು, ಭಾಗವಹಿಸುವ ಚಟುವಟಿಕೆಗಳು, ಸಾರ್ವಜನಿಕ ವಲಯದಲ್ಲಿ ನಡೆದುಕೊಳ್ಳುವ ರೀತಿ ಇವುಗಳೇ ಅಪರಾಧಗಳಂತೆ ಕಾಣುತ್ತಿರುವುದು ಸ್ವತಂತ್ರ ಭಾರತದ ವಿಡಂಬನೆಯಲ್ಲವೇ ? ಧರ್ಮ ಸಂಸ್ಥಾಪನೆಗಾಗಿಯೇ ಜನಿಸಿರುವ ಮತೀಯವಾದಿಗಳು ಮಹಿಳೆಯರನ್ನು ನಿಯಂತ್ರಿಸುವುದೇ ಧರ್ಮ ರಕ್ಷಣೆ ಎಂದು ಭಾವಿಸಿದ್ದರೆ, ಭಾರತದ ಮತ್ತೊಂದು ಅನಿಷ್ಟ ಜಾತಿ ವ್ಯವಸ್ಥೆಯನ್ನು ನಿಯಂತ್ರಿಸುವ ಪುರುಷ ಪ್ರಧಾನ ಸಮಾಜವೂ ತಮ್ಮ ಸಾಮುದಾಯಿಕ ಸಂಪ್ರದಾಯ ಮತ್ತು ಪರಂಪರೆಗಳನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಮಹಿಳೆಯರ ಮೇಲೇ ಹೊರಿಸಿದ್ದಾರೆ. ಒಂದೆಡೆ ಜಾತಿ ಖಾಪ್ ಪಂಚಾಯತ್ಗಳು ಅಂತಜರ್ಾತಿ ವಿವಾಹವಾಗುವ ಮಹಿಳೆಯರನ್ನು ಸಾಮುದಾಯಿಕ ಗೌರವ ರಕ್ಷಿಸುವ ನೆಪದಲ್ಲಿ ಹತ್ಯೆ ಮಾಡುತ್ತಿದ್ದರೆ ಮತ್ತೊಂದೆಡೆ ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರ ಸ್ತಂಭಗಳಾದ ಪಂಚಾಯತ್ಗಳು ಮಹಿಳೆಯರ ಚಲನವಲನಗಳನ್ನೇ ನಿಯಂತ್ರಿಸುತ್ತಿವೆ. ಮೊಬೈಲ್ ಬಳಸುವಂತಿಲ್ಲ, ಷಾಪಿಂಗ್ ಮಾಲ್ಗೆ ಹೋಗುವಂತಿಲ್ಲ. ರಾತ್ರಿ ಹತ್ತರ ನಂತರ ಒಬ್ಬರೇ ಹೊರ ಬರುವಂತಿಲ್ಲ. ತುಂಡುಡುಗೆಗಳನ್ನು ಧರಿಸುವಂತಿಲ್ಲ ಹೀಗೆ ನಿಷೇಧಗಳ ಪಟ್ಟಿಯನ್ನೇ ಪಂಚಾಯತ್ಗಳು ಸಿದ್ಧಪಡಿಸುತ್ತಿವೆ. ಈ ನಿಯಮಗಳನ್ನು ಅನುಮೋದಿಸುವ ಚುನಾಯಿತ ಪ್ರತಿನಿಧಿಗಳು ಪ್ರಶ್ನಾತೀತರಾಗಿ ಮೆರೆಯುತ್ತಾರೆ. ಸಾಂವಿಧಾನಿಕ ಸಂಸ್ಥೆಗಳೇ ದೌರ್ಜನ್ಯ, ಹಲ್ಲೆ, ಆಕ್ರಮಣ ಮತ್ತು ಮಾನಭಂಗಕ್ಕೊಳಗಾದ ಮಹಿಳೆಯರ ಕೌಟುಂಬಿಕ ಹಿನ್ನೆಲೆ ಮತ್ತು ಚಾರಿತ್ರ್ಯವನ್ನು ಪ್ರಶ್ನಿಸುತ್ತಿರುವುದನ್ನು ನೋಡಿದರೆ ಮತೀಯವಾದಿಗಳು, ಖಾಪ್ ಪಂಚಾಯತ್ಗಳು ಯಾವುದೋ ಒಂದು ವ್ಯವಸ್ಥಿತ ಚೌಕಟ್ಟಿನೊಳಗೆ ಕಾರ್ಯ ನಿರ್ವಹಿಸುತ್ತಿರುವುದು ಸ್ಪಷ್ಟವಾಗುತ್ತದೆ. ಮಾದಕ ದ್ರವ್ಯ ಸೇವಿಸುವುದು, ಮದ್ಯಪಾನ ಮಾಡುವುದು, ಅಶ್ಲೀಲವಾಗಿ ವರ್ತಿಸುವುದು ಸಾಮಾಜಿಕ ಮೌಲ್ಯಗಳ ದೃಷ್ಟಿಯಿಂದ ಒಳಿತಲ್ಲ ನಿಜ. ಆದರೆ ಈ ಮೌಲ್ಯಗಳ ಮಾನದಂಡವಾದರೂ ಏನು ? ಈ ದುಷ್ಟಟಗಳು ಮಾನವ ಕುಲಕ್ಕೇ ಅಂಟಿದ ಶಾಪಗಳು. ಆದರೆ ನಮ್ಮ ಪಿತೃ ಪ್ರಧಾನ ಸಮಾಜದಲ್ಲಿ ಪುರುಷರಿಗೆ ಈ ದುಷ್ಟಟಗಳನ್ನು ಹೊಂದಿರಲು ಅಧಿಕೃತ ಪರವಾನಗಿ ನೀಡಲಾಗಿದೆ. ಮಹಿಳೆಯರು ಮಾತ್ರ ನಿಷೇಧ ಎದುರಿಸುತ್ತಾರೆ. ಪುರುಷರು ತಮ್ಮ ಕಾಮನೆಗಳನ್ನು ನಿಗ್ರಹಿಸಲು ಮಹಿಳೆಯರು ಸಹಕಾರ ನೀಡುವುದು ಸಮಾಜದಲ್ಲಿ ಅನಿವಾರ್ಯವೇನೋ ಎಂಬಂತೆ ತುಂಡುಡುಗೆ ಧರಿಸುವವರನ್ನು ದಂಡಿಸುವ ಪರಿಪಾಠ ಆರಂಭವಾಗಿದೆ. ಯಾವುದೇ ಮಹಿಳೆ ಅತ್ಯಾಚಾರಕ್ಕೊಳಗಾದ ಕೂಡಲೇ ಆಕೆ ಧರಿಸಿದ ಉಡುಪು ಪ್ರಧಾನ ಚರ್ಚೆಯ ವಿಚಾರವಾಗುತ್ತದೆಯೇ ಹೊರತು, ಪುರುಷರ ಕಾಮಾಸಕ್ತಿ ಅಥವಾ ಮನೋನಿಗ್ರಹಗಳು ಚರ್ಚೆಗೊಳಪಡುವುದಿಲ್ಲ. ದೃಶ್ಯ ಮಾಧ್ಯಮಗಳ ಸಂವಾದಗಳಲ್ಲಿ ಇದನ್ನು ಸ್ಪಷ್ಟವಾಗಿ ಕಾಣಬಹುದು. ವೇಶ್ಯಾವಾಟಿಕೆಯಲ್ಲಿ ತೊಡಗುವ ಮಹಿಳೆಯರನ್ನು ವ್ಯಭಿಚಾರಿಗಳೆಂದು ಕಪ್ಪು ಮಸಿ ಬಳಿಯುವ ಪುರುಷ ಸಮಾಜ ತನ್ನೊಳಗೇ ಇರುವ ವ್ಯಭಿಚಾರವನ್ನು ಮರೆಮಾಚಲು ಇಂತಹ ಆಕ್ರಮಣಗಳನ್ನು, ನಿಷೇಧಗಳನ್ನು, ನಿರ್ಬಂಧಗಳನ್ನು ಬ್ರಹ್ಮಾಸ್ತ್ರವನ್ನಾಗಿ ಬಳಸುತ್ತಿದೆ. ಈ ಬ್ರಹ್ಮಾಸ್ತ್ರಕ್ಕೆ ಧರ್ಮ, ಜಾತಿ, ಸಂಸ್ಕೃತಿ ಮತ್ತು ಸಮಾಜದ ಗೌರವದ ಲೇಪನ ನೀಡಲಾಗುತ್ತಿದೆ. ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಶಿಶು ಹತ್ಯೆ, ಹೆಣ್ಣು ಮಕ್ಕಳ ನಿರ್ಲಕ್ಷ್ಯ, ವರದಕ್ಷಿಣೆ ಸಾವುಗಳು, ಅತ್ಯಾಚಾರ, ಮಾನಭಂಗ, ವೇಶ್ಯಾವಾಟಿಕೆ, ಹೆಣ್ಣುಮಕ್ಕಳ ಮಾರಾಟ ಹೀಗೆ ದೇಶದ ಬಹುತೇಕ ಬೃಹತ್ ಸಮಸ್ಯೆಗಳು ಮಹಿಳೆಯನ್ನೇ ಆವರಿಸಿವೆ. ಇಂದಿನ ಸನ್ನಿವೇಶದಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ಶೋಷಣೆ, ದೌರ್ಜನ್ಯಗಳನ್ನು ಗಮನಿಸಿದರೆ, ಭ್ರೂಣ ಹತ್ಯೆಗೊಳಗಾದ ಹೆಣ್ಣು ಜೀವಿಗಳೇ ಪುಣ್ಯವಂತರೇನೋ ಎನಿಸಿದರೂ ಅಚ್ಚರಿಯೇನಿಲ್ಲ. ಅಲ್ಲವೇ ?]]>

‍ಲೇಖಕರು G

August 15, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ನಾ ದಿವಾಕರ ನಮ್ಮ ಸುತ್ತಲಿನ ನಾಗರಿಕ ಸಮಾಜದಲ್ಲಿ ಸಂವೇದನೆ ಕ್ಷೀಣಿಸುತ್ತ್ತಿದೆ ಎಂದು ಹಲವು ಬಾರಿ ಭಾಸವಾಗುತ್ತದೆ. ಇನ್ನೂ ಕೆಲವೊಮ್ಮೆ ನಮ್ಮ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This