ನಾ ದಿವಾಕರ್ ನೇರನುಡಿ : ’ವಲಸೆ’ ವದಂತಿಯಲ್ಲ ವ್ಯವಸ್ಥಿತ ಪಿತೂರಿ

ಅಸ್ಸಾಂನಲ್ಲಿ ಬೋಡೋ ಸಮುದಾಯ ಮತ್ತು ವಲಸೆ ಬಂದಿರುವ ಬಾಂಗ್ಲಾ ದೇಶದ ಮುಸ್ಲಿಮರ ನಡುವಿನ ಸಂಘರ್ಷವನ್ನು ಕೇವಲ ಜನಾಂಗೀಯ ದ್ವೇಷ ಮತ್ತು ಮತೀಯವಾದಿ ದೃಷ್ಟಿಕೋನದಿಂದ ಮಾತ್ರ ನೋಡುವುದು ಇತಿಹಾಸಕ್ಕೆ ಅಪಚಾರ ಬಗೆದಂತೆಯೇ ಸರಿ. ಹೌದು, ಮೇಲ್ನೋಟಕ್ಕೆ ಈ ಘರ್ಷಣೆ ಹಿಂದೂ-ಮುಸ್ಲಿಂ ಕಲಹದಂತೆಯೇ ಕಾಣುತ್ತದೆ. ಬೋಡೋ ಸಮುದಾಯದ ಆತಂಕ, ಆರೋಪಗಳು ಸುಳ್ಳೇನಲ್ಲ. ತಮ್ಮ ಸಾಮುದಾಯಿಕ ಅಸ್ಮಿತೆಯನ್ನು ಗುರುತಿಸಿಕೊಳ್ಳಲು ಹಲವು ದಶಕಗಳ ಹೋರಾಟ ನಡೆಸಿದ ಈ ಜನಾಂಗ ಈಗ ತಮ್ಮ ಅಸ್ತಿತ್ವದ ಉಳಿವಿಗಾಗಿ ಹೋರಾಡುತ್ತಿದೆ. ಇದು ಈಶಾನ್ಯ ರಾಜ್ಯಗಳಲ್ಲಿನ ಪ್ರತಿಯೊಂದು ಜನಾಂಗದ ಸಮಸ್ಯೆಯೂ ಆಗಿದೆ. ಬಾಂಗ್ಲಾ ಗಡಿ ಪ್ರದೇಶದಲ್ಲಿರುವ ಹಲವು ಜಿಲ್ಲೆಗಳಲ್ಲಿ ಈ ಸಮಸ್ಯೆ ಗಂಭೀರ ಸ್ವರೂಪ ಪಡೆದಿದ್ದು, ಭ್ರಾತೃಘಾತುಕ ಘಟನೆಗಳಿಗೆ ಎಡೆಮಾಡಿಕೊಟ್ಟಿದೆ. ಇಲ್ಲಿ ಗಲಭೆ ಸೃಷ್ಟಿಸುವ ಸಮಾಜಘಾತುಕ ಸಂಘಟನೆಗಳಿಗಿಂತಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಉತ್ತರದಾಯಿತ್ವ ಪ್ರಶ್ನಾರ್ಹವಾಗುತ್ತದೆ. ಹೊಣೆಗಾರಿಕೆಯೂ ಸಹ. ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳಲ್ಲಿ ಜನಾಂಗೀಯ ಸಮಸ್ಯೆ ಹಾಸು ಹೊಕ್ಕಾಗಿದೆ. ಸ್ವಾತಂತ್ರ್ಯಾನಂತರ ಭಾರತಕ್ಕೆ ಸೇರಿಸಲ್ಪಟ್ಟ ಹಲವು ರಾಜ್ಯಗಳಲ್ಲಿ ಇಂದಿಗೂ ಪ್ರತ್ಯೇಕತಾ ಚಳುವಳಿಗಳು ನಡೆಯುತ್ತಲೇ ಇವೆ. ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್ ಮುಂತಾದ ರಾಜ್ಯಗಳಲ್ಲಿ ಭಾರತದ ಸಂವಿಧಾನವೇ ಅನ್ವಯವಾದರೂ ಅಲ್ಲಿನ ಜನತೆ ಇಂದಿಗೂ ತಮ್ಮ ಸಾಮುದಾಯಿಕ-ಜನಾಂಗೀಯ ಅಸ್ಮಿತೆಗಳನ್ನೇ ಪ್ರಧಾನವಾಗಿ ಪರಿಗಣಿಸುವುದು ಚಾರಿತ್ರಿಕ ಸತ್ಯ. ಮೇಲ್ನೋಟಕ್ಕೆ ಇಲ್ಲಿನ ಜನಾಂಗೀಯ ಘರ್ಷಣೆಗಳು ವಿವಿಧ ಕೋಮುಗಳ ನಡುವೆ ಸಂಭವಿಸುವ ಮತೀಯ ಸಂಘರ್ಷಗಳಂತೆ ತೋರಿದರೂ ವಾಸ್ತವವಾಗಿ ಈಶಾನ್ಯ ರಾಜ್ಯಗಳಲ್ಲಿರುವುದು ಸಾಮಾಜಿಕ-ಆರ್ಥಿಕ ಸುಭದ್ರತೆಯ ಪ್ರಶ್ನೆ. ಸ್ವಾತಂತ್ರ್ಯಪೂರ್ವದಿಂದಲೂ ಅವಕಾಶವಂಚಿತರಾಗಿ, ಸೌಲಭ್ಯವಂಚಿತರಾಗಿ, ಅಭಿವೃದ್ಧಿ ಪಥದಿಂದ ದೂರವೇ ಉಳಿದಿರುವ ಈ ರಾಜ್ಯಗಳ ಮೂಲ ಸಮಸ್ಯೆ ಇರುವುದು ಬಂಡವಾಳದ ಉತ್ಪಾದನೆ ಮತ್ತು ಹೂಡಿಕೆಯಲ್ಲಿ. ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳಿಗೆ ಕೊರತೆಯೇ ಇಲ್ಲದ ಈ ರಾಜ್ಯಗಳಲ್ಲಿ ಉತ್ಪಾದನೆಯಾಗುವ ಬಂಡವಾಳ ಅಥವಾ ಸಂಪತ್ತು ಇಲ್ಲಿನ ಜನಸಮುದಾಯಗಳಿಗೇ ಲಭ್ಯವಾಗದಿರುವುದು ಇಲ್ಲಿನ ಮೂಲ ಸಮಸ್ಯೆಯಾಗಿದೆ. ಹಾಗಾಗಿ ಈ ರಾಜ್ಯಗಳಲ್ಲಿ ಎಷ್ಟೇ ಸಂಪನ್ಮೂಲ ಉತ್ಪಾದನೆಯಾದರೂ ಉದ್ಯೋಗಾವಕಾಶಗಳು ಕುಂಠಿತವಾಗಿವೆ. ಯುವಜನತೆಯ ಭವಿಷ್ಯದ ಹಾದಿ ದುರ್ಗಮವಾಗಿವೆ. ಬೃಹತ್ ಕೈಗಾರಿಕೆಗಳು ಇಲ್ಲಿ ನೆಲೆ ಮಾಡಲಾಗಿಲ್ಲ. ಸಕರ್ಾರದ ವತಿಯಿಂದ ಬಂಡವಾಳ ಹೂಡಿಕೆಯೂ ಇಲ್ಲಿ ದುರ್ಬಲವಾಗಿಯೇ ಇದೆ. ಮೇಲಾಗಿ ಇಲ್ಲಿನ ಬಹುತೇಕ ಬಂಡವಾಳಿಗರು ತಮ್ಮ ಉದ್ಯಮಗಳಿಗೆ ಬೇಕಾದ ಕಾಮರ್ಿಕರನ್ನು ಹೊರನಾಡುಗಳಿಂದ ಕರೆತಂದಿರುವುದೂ ಗಂಭೀರ ಸಮಸ್ಯೆಯಾಗಿದೆ. ಬಾಂಗ್ಲಾದೇಶದಿಂದ ವಲಸೆ ಬರುವ ಬಹುಪಾಲು ಜನರು ಈ ಕಾಮರ್ಿಕ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಆರು ದಶಕಗಳಿಂದ ದೇಶವನ್ನಾಳುತ್ತಿರುವ ರಾಜಕೀಯ ಪಕ್ಷಗಳ ವೈಫಲ್ಯ ಇರುವುದು ಇಲ್ಲೇ ಎನಿಸುತ್ತದೆ. 1948ಕ್ಕೂ ಮುನ್ನ ಈಶಾನ್ಯ ರಾಜ್ಯಗಳಲ್ಲಿ ಬಂದು ನೆಲೆಸಿದ ಜನರನ್ನು ನಂತರ ಬಂದು ನೆಲೆಸಿದ ಜನರಿಂದ ಬೇರ್ಪಡಿಸಿ, ಅಕ್ರಮವಾಗಿ ವಲಸೆ ಬಂದು ನೆಲೆಸಿರುವ ಬಾಂಗ್ಲಾ ಪ್ರಜೆಗಳನ್ನು ಹಿಂದಕ್ಕೆ ಕಳುಹಿಸುವ ನಿಟ್ಟಿನಲ್ಲಿ ಸಕರ್ಾರಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಪ್ರಸಕ್ತ ಸಂಘರ್ಷಕ್ಕೆ ಕಾರಣವಾಗಿದೆ. ಇದುವರೆಗೆ ನಡೆದಿರುವ ಜನಗಣತಿಗಳ ಗುಣಮಟ್ಟ ಮತ್ತು ಸಾಫಲ್ಯವೂ ಇಲ್ಲಿ ಪ್ರಶ್ನಾರ್ಹವಾಗುತ್ತದೆ. ತಮ್ಮ ದೈನಂದಿನ ಜೀವನ ನಡೆಸಲು ಪರದಾಡುತ್ತಿರುವ ಭಾರತೀಯ ಜನತೆಗೆ ಮತ್ತೊಂದು ದೇಶದ ಜನತೆಯನ್ನು ಸಲಹುವ ತಾಳ್ಮೆಯಾಗಲಿ, ಅನಿವಾರ್ಯತೆಯಾಗಲೀ ಇರಬೇಕೆಂದು ಅಪೇಕ್ಷಿಸುವುದು ತಪ್ಪಾಗುತ್ತದೆ. ಮಹಾರಾಷ್ಟ್ರ, ಕನರ್ಾಟಕ, ಒರಿಸ್ಸಾ ಮುಂತಾದ ರಾಜ್ಯಗಳಲ್ಲಿ ನೆರೆ ರಾಜ್ಯಗಳ ಜನತೆ ನೆಲೆಸುವುದನ್ನೇ ವಿರೋಧಿಸುವ ಜನಾಂದೋಲನಗಳು ಹುಟ್ಟಿಕೊಳ್ಳುತ್ತಿರುವಾಗ ಈಶಾನ್ಯ ರಾಜ್ಯಗಳಲ್ಲಿ ಹೊರದೇಶದ ವಲಸೆಗಾರರನ್ನು ವಿರೋಧಿಸುವುದು ಸಹಜವೇ ಅಲ್ಲವೇ ? ಈ ಗಂಭೀರ ಸಮಸ್ಯೆಯನ್ನು ಆಳ್ವಿಕರು ಏಕೆ ಅರ್ಥ ಮಾಡಿಕೊಳ್ಳುವುದಿಲ್ಲ ? ಇದರ ಉತ್ತರದಾಯಿತ್ವ ಯಾರದು ? ಬೆಕ್ಕಿಗೆ ಗಂಟೆ ಕಟ್ಟುವವರಾರು ? ಇವು ಪ್ರಜ್ಞಾವಂತ ನಾಗರಿಕರನ್ನು ಕಾಡುವ ಪ್ರಶ್ನೆಗಳು. ಕೋಮುವಾದಿಗಳ ಒಕ್ಕೂಟ ಅಸ್ಸಾಂನ ಬೋಡೋ ಜನಾಂಗ ಮತ್ತು ವಲಸೆ ಬಂದಿರುವ ಮುಸ್ಲಿಂ ಸಮುದಾಯಗಳ ನಡುವಿನ ಸಂಘರ್ಷ ಮಾನವೀಯತೆಯ ಎಲ್ಲ ಮೌಲ್ಯಗಳನ್ನೂ ಗಾಳಿಗೆ ತೂರಿದೆ. ರಾಜ್ಯದಲ್ಲಿ ನೆಲೆಸಿರುವ ಎಲ್ಲ ಮುಸ್ಲಿಮರನ್ನೂ ಹೊರಗಿನವರೆಂದು ಪರಿಗಣಿಸುವ ಮತೀಯ ಭಾವನೆಗಳನ್ನು ಅಲ್ಲಿನ ಜನರಲ್ಲಿ ಬಿತ್ತಲಾಗುತ್ತಿದೆ. ಇದು ಕಳೆದ ನಾಲ್ಕು ದಶಕಗಳ ವಿದ್ಯಮಾನ. ಈ ಜನಾಂಗೀಯ ದ್ವೇಷವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದರಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ನಿರತರಾಗಿವೆ. ಕಾಂಗ್ರೆಸ್ ಪಕ್ಷದ ನೀತಿಗಳನ್ನು ಟೀಕಿಸುವ ಬಿಜೆಪಿ 1980ರ ದಶಕದ ಅಸ್ಸಾಂ ಜನಾಂಗೀಯ ಹಿಂಸೆಯನ್ನೇ ತನ್ನ ರಾಜಕೀಯ ಬಂಡವಾಳವಾಗಿ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಮಿಜೋರಾಂ ಮತ್ತು ಮಣಿಪುರಗಳಲ್ಲಿ ಜಾರಿಯಲ್ಲಿರುವ ಸಶಸ್ತ್ರ ಸೇನಾ ವಿಶೇಷಾಧಿಕಾರ ಕಾಯ್ದೆ ಅಲ್ಲಿನ ಜನರಲ್ಲಿ ಪ್ರತ್ಯೇಕತಾ ಭಾವನೆಗಳನ್ನು ಹೆಚ್ಚಾಗಿಸುತ್ತಿದೆ. ತಾವು ಭಾರತೀಯರೇ ಅಲ್ಲವೇನೋ ಎಂಬ ಭಾವನೆಯನ್ನೂ ಮೂಡಿಸುತ್ತಿದೆ. ಆದರೆ ಪ್ರಜಾಪ್ರಭುತ್ವದ ಹರಿಕಾರರಂತೆ ಮಾತನಾಡುವ ಯಾವುದೇ ಪಕ್ಷವೂ ಈ ಕಾಯ್ದೆಯನ್ನು ವಿರೋಧಿಸುತ್ತಿಲ್ಲ. ಇದು ನಮ್ಮ ದೇಶದ ದುರಂತ. ಈ ಸನ್ನಿವೇಶಗಳು ಸದಾ ಕೋಮುವಾದಿ-ಫ್ಯಾಸಿಸ್ಟ್ ಶಕ್ತಿಗಳ ಏಳಿಗೆಗೆ ಪೂರಕವಾಗಿರುತ್ತದೆ. ಬೆಂಗಳೂರಿನಲ್ಲಿ ಸಂಭವಿಸಿರುವ ಘಟನೆಯನ್ನೂ ಈ ಹಿನ್ನೆಲೆಯಲ್ಲೇ ನೋಡಬೇಕಾಗುತ್ತದೆ. ಮತೀಯವಾದಿಗಳಿಗೆ ಜನಸಮುದಾಯಗಳ ಹಿತಾಸಕ್ತಿಗಳಿಗಿಂತಲೂ ತಮ್ಮ ಮತೀಯ ಅಸ್ಮಿತೆಗಳು ಮತ್ತು ಧರ್ಮಕೇಂದ್ರಿತ ಅಸ್ತಿತ್ವಗಳು ಪ್ರಧಾನವಾಗಿ ಕಾಣುತ್ತವೆ. ಭಾರತದಲ್ಲಿನ ಮುಸ್ಲಿಂ ಜನತೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಒಮ್ಮೆಯೂ ಪ್ರತಿಭಟಿಸದ ಮುಸ್ಲಿಂ ಸಂಘಟನೆಗಳಿಗೆ ಹಠಾತ್ತನೆ ಅಸ್ಸಾಂನಲ್ಲಿ ಆಕ್ರಮಣಕ್ಕೊಳಗಾದ ಬಾಂಗ್ಲಾ ವಲಸಿಗರ ಮೇಲೆ ಕರುಣೆ ಉಕ್ಕಿ ಹರಿಯುತ್ತದೆ. ಇಲ್ಲಿ ಅಕ್ರಮ-ಸಕ್ರಮ ವಲಸಿಗರ ಪ್ರಶ್ನೆಗಿಂತಲೂ ವಲಸೆಯ ಸಮಸ್ಯೆಯ ನೈಜತೆ ಮತ್ತು ಅದರಿಂದುಂಟಾಗುವ ಪರಿಣಾಮಗಳು ಮುಖ್ಯವಾಗುತ್ತವೆ. ಬಾಂಗ್ಲಾದಿಂದ ಲಕ್ಷಾಂತರ ಜನರು ಅಕ್ರಮವಾಗಿ ವಲಸೆ ಬಂದು ನೆಲೆಸಿರುವುದೇ ಆದಲ್ಲಿ ಕಾನೂನುರೀತ್ಯಾ ಅವರನ್ನು ಹಿಂದೆ ಕಳುಹಿಸುವುದು ಪ್ರಭುತ್ವದ ಆದ್ಯತೆಯಾಗಬೇಕು. ಸಕರ್ಾರ ಕ್ರಮ ಕೈಗೊಳ್ಳದಿದ್ದಾಗ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತವೆ. ಅಸ್ಸಾಂನ ಮುಸ್ಲಿಮರ ಮೇಲಿನ ಆಕ್ರಮಣವನ್ನು ಖಂಡಿಸಬೇಕು, ನಿಜ. ಪ್ರತಿಭಟನೆಯೂ ಅವಶ್ಯಕ. ಆದರೆ ಯಾರ ವಿರುದ್ಧ ಪ್ರತಿಭಟನೆ ನಡೆಸಬೇಕು ಎಂಬ ನಿದರ್ಿಷ್ಟ ಗುರಿ ಇರಬೇಕು. ಮಹಾರಾಷ್ಟ್ರದಲ್ಲಿ, ಅಲಹಾಬಾದ್ನಲ್ಲಿ ಪ್ರತಿಭಟನೆ ನಡೆಸಿದ ಮುಸ್ಲಿಂಸಂಘಟನೆಗಳು ಅನಗತ್ಯವಾಗಿ ಹಿಂಸಾಚಾರದಲ್ಲಿ ತೊಡಗಿ ತಮ್ಮ ಉದ್ದೇಶವನ್ನೇ ಮರೆತು ಕೋಮು ಭಾವನೆಗಳಿಗೆ ಎಡೆಮಾಡಿಕೊಟ್ಟಿರುವುದು ಅಕ್ಷಮ್ಯ, ಖಂಡನಾರ್ಹ. ಈ ಹಿನ್ನೆಲೆಯಲ್ಲೇ ಕನರ್ಾಟಕದಲ್ಲೂ ಸಹ ಹಲವು ಸಂಘಟನೆಗಳು ಈಶಾನ್ಯದ ಜನತೆಗೆ ಜೀವ ಬೆದರಿಕೆಯ ಮೆಸೇಜ್ಗಳನ್ನು ಕಳುಹಿಸಿರುವುದು, ಅಸ್ಸಾಂನಲ್ಲಿ ಹಲ್ಲೆಗೊಳಗಾದ ಮುಸ್ಲಿಮರ ಚಿತ್ರಗಳನ್ನು ಎಂಎಂಎಸ್ ಮಾಡಿರುವುದು ರಾಜ್ಯದಲ್ಲಿ ನೆಲೆಸಿರುವ ಈಶಾನ್ಯ ಜನತೆ ಗುಳೆ ಹೋಗಲು ಕಾರಣವಾಗಿದೆ. ಈ ಸಂದೇಶದ ಮೂಲ ಯಾವುದು ಎನ್ನುವುದಕ್ಕಿಂತಲೂ ಸಂದೇಶದ ಉದ್ದೇಶವನ್ನು ಪರಿಗಣಿಸಬೇಕಾಗುತ್ತದೆ. ಅಸ್ಸಾಂನ ಜನರು ಗುಳೆ ಹೋಗುವ ಪ್ರಕ್ರಿಯೆ ಚುರುಕಾಗುತ್ತಲೇ ತಮ್ಮ ಸಮವಸ್ತ್ರಗಳನ್ನು ಧರಿಸಿ, ದಂಡಗಳನ್ನು ಹಿಡಿದು ಹಿಂದೂಗಳ ರಕ್ಷಣೆಗೆ ಟೊಂಕಕಟ್ಟಿ ನಿಂತ ಚಡ್ಡಿಧಾರಿ ಸಂಘಪರಿವಾರದ ಕಾರ್ಯಕರ್ತರನ್ನು ನೋಡಿದಾಗ ಕೋಮುವಾದಿಗಳ ವ್ಯವಸ್ಥಿತ ಸಂಚು ಸ್ಪಷ್ಟವಾಗುತ್ತದೆ. ಮಂಗಳೂರಿನಲ್ಲಿ ಹಿಂದೂಗಳಿಂದಲೇ ಹಲ್ಲೆಗೊಳಗಾದ ಹಿಂದೂಗಳ ರಕ್ಷಣೆಗೆ ಒಂದು ಹೆಜ್ಜೆ ಮುಂದಿರಿಸದ ಚಡ್ಡಿ ರೆಜಿಮೆಂಟ್ನ ಸದಸ್ಯರಿಗೆ ಅಸ್ಸಾಂನ ಜನತೆಯ ಬಗ್ಗೆ ಅಪಾರ ಕಾಳಜಿ ಮೂಡಲು ಕಾರಣವಾದರೂ ಏನು ? ಮುಸ್ಲಿಂ ಮತಾಂಧರಿಂದ ಅಪಾಯಕ್ಕೊಳಗಾಗಿದ್ದಾರೆ ಎಂಬ ಕಾರಣವಷ್ಟೆ ಇರಲಿಕ್ಕೆ ಸಾಧ್ಯ. ಸಂದೇಶವನ್ನು ಸೃಷ್ಟಿಸಿದವರಿಗೂ, ಸಂದೇಶದ ವಿರುದ್ಧ ಸಮರ ಸಾರುವವರಿಗೂ, ಅನಧಿಕೃತ ರಕ್ಷಣಾ ಪಡೆಗಳಿಗೂ ಇರುವ ಸಾಮ್ಯತೆಯನ್ನು ಇಲ್ಲಿ ಗಮನಿಸಬೇಕು. ಹಲವು ವರ್ಷಗಳಿಂದ ಸೌಹಾರ್ದತೆಯನ್ನು ಕಾಣುತ್ತಿರುವ ಸಮಾಜದಲ್ಲಿ ಕೋಮುವಾದದ ವಿಷಬೀಜವನ್ನು ಮತ್ತೊಮ್ಮೆ ಬಿತ್ತಲು ಹಾತೊರೆಯುತ್ತಿರುವ ಮತೀಯವಾದಿಗಳ ವ್ಯವಸ್ಥಿತ ಸಂಚನ್ನು ಇಲ್ಲಿ ಕಾಣಬಹುದು. ಗೋಮಾಂಸ ಸೇವನೆ ನಿತ್ಯಾಹಾರವಾಗಿರುವ ಈಶಾನ್ಯ ರಾಜ್ಯಗಳಲ್ಲಿ ಇದೇ ಜನತೆ ಮುಂದೊಂದು ದಿನ ಗೋಮಾಂಸ ಸೇವನೆಯನ್ನು ಸಮಥರ್ಿಸಿ ಹೋರಾಡಿದಲ್ಲಿ ಸಂಘ ಪರಿವಾರದ ನಿಲುವು ಏನಾಗಿರುತ್ತದೆ ? ವಿಶೇಷ ಸೇನಾ ಕಾಯ್ದೆಯಿಂದ ನಲುಗುತ್ತಿರುವ ಮಣಿಪುರದ ಜನತೆಯ ಪರವಾಗಿ ಸಂಘಪರಿವಾರ ಏಕೆ ಪ್ರತಿಭಟನೆ ನಡೆಸುತ್ತಿಲ್ಲ ? ಈಶಾನ್ಯ ರಾಜ್ಯಗಳು ಅಭಿವೃದ್ಧಿ ವಂಚಿತರಾಗಿದ್ದರೂ ತಮ್ಮದೇ ಸಕರ್ಾರ ಆರು ವರ್ಷ ಆಡಳಿತ ನಡೆಸಿದ್ದರೂ ಸಕಾರಾತ್ಮಕ ಕ್ರಮ ಕೈಗೊಳ್ಳದ ಸಂಘಪರಿವಾರಕ್ಕೆ ಗುಳೇ ಹೊರಟ ಅಸ್ಸಾಮಿಗಳ ಬಗ್ಗೆ ಹಠಾತ್ ಅನುಕಂಪ ಮೂಡಲು ಕಾರಣವೇನು ?   ಈ ಪ್ರಶ್ನೆಗಳಿಗೆ ಉತ್ತರಗಳನ್ನು ಅರಸುತ್ತಾ ಹೊರಟಾಗ ಕೇವಲ ವದಂತಿಗಳಿಗೆ ಭಯಪಟ್ಟು ರಾಜ್ಯವನ್ನೇ ಬಿಟ್ಟು ಹೋಗುವ ಕಾಮರ್ಿಕ ವರ್ಗದ ನಿಧರ್ಾರದ ಹಿಂದೆ ಕೆಲವು ಅಗೋಚರ ಶಕ್ತಿಗಳು ಸಕ್ರಿಯವಾಗಿರುವುದು ಸ್ಪಷ್ಟವಾಗುತ್ತದೆ. ಗುಳೆ ಹೊರಟಿರುವವರಲ್ಲಿ ಬಹುಪಾಲು ಜನತೆ ಅತ್ಯಲ್ಪ ಆದಾಯದಿಂದ ದೂರದಲ್ಲಿರುವ ತಮ್ಮ ಕುಟುಂಬಗಳ ನಿರ್ವಹಣೆಯನ್ನು ಹೊತ್ತಿರುವ ಯುವಕರು ಅಥವಾ ಅಲ್ಲಿ ಶೈಕ್ಷಣಿಕ ಅವಕಾಶಗಳಿಲ್ಲದೆ ಇಲ್ಲಿಗೆ ವ್ಯಾಸಂಗಕ್ಕಾಗಿ ಬಂದಿರುವ ವಿದ್ಯಾಥರ್ಿಗಳು. ಈ ವರ್ಗದ ಜನತೆಗೆ ತಮ್ಮ ಬದುಕಿನ ಅನಿವಾರ್ಯತೆಗಳೇ ಮುಖ್ಯವಾಗುವುದೇ ಹೊರತು, ಮತೀಯ ಭಾವನೆಗಳಲ್ಲ.. ಆದರೂ ಇಂದು ಸಾವಿರಾರು ಅಮಾಯಕರು ಅನಿಶ್ಚಿತ ಭವಿಷ್ಯವನ್ನು ಹೊತ್ತು ತಮ್ಮ ತವರಿಗೆ ಹಿಂದಿರುಗುತ್ತಿದ್ದಾರೆ. ಇವರನ್ನು ತಡೆಯುವ ಶಕ್ತಿ ಇರುವುದು ಸಂಘಟನೆಗಳಲ್ಲಿ ಅಲ್ಲ, ಜನರ ಮನದಾಳದಲ್ಲಿನ ಭಾವನೆಗಳಲ್ಲಿ. ಈ ಭಾವನೆಗಳನ್ನು ಕಲುಷಿತಗೊಳಿಸುವ ಶಕ್ತಿಗಳೇ ಇಂದು ರಕ್ಷಕರಾಗಿ ಟೊಂಕ ಕಟ್ಟಿ ನಿಂತಿರುವುದು ವಿಡಂಬನೆಯೋ ವಿಪಯರ್ಾಸವೋ ? ದುರಂತ ಎಂದರೆ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳಲ್ಲಿ ಮತೀಯ ಭಾವನೆಗಳಿಗೆ ಬಲಿಯಾಗುವ ಯುವಕರನ್ನು ನಿಯಂತ್ರಿಸುವ ಶಕ್ತಿಗಳು ಪ್ರಬಲವಾಗಿವೆ. ಸಾಂತ್ವನ ಹೇಳಿ ಸೌಹಾರ್ದತೆ ಬೆಳೆಸುವ ಶಕ್ತಿಗಳು ಕ್ಷೀಣಿಸಿವೆ. ಶಾಂತಿ ಸೌಹಾರ್ದ ಸಭೆಗಳು ಘಟನೆ ಸಂಭವಿಸಿದ ನಂತರ ನಡೆಯುತ್ತವೆ ಆದರೆ ಇದು ಕೇವಲ ಚಿಕಿತ್ಸಕ ಪ್ರಭಾವ ಬೀರುತ್ತವೆ. ಹಿಂದೂ ಮತ್ತು ಮುಸ್ಲಿಂ ಸಮುದಾಯದ ಧರ್ಮ ಗುರುಗಳು ತಮ್ಮ ಸಮುದಾಯದ ಜನರಲ್ಲಿ ಮತೀಯ ಭಾವನೆಗಳು ಮೂಡದಂತೆ ಎಚ್ಚರ ವಹಿಸಿದಾಗ ಮಾತ್ರ ಈ ಅನಿಷ್ಠವನ್ನು ಹೋಗಲಾಡಿಸಬಹುದು. ಪವಿತ್ರ ಗ್ರಂಥಗಳನ್ನು ಉದ್ಧರಿಸಿ ತಮ್ಮ ಧರ್ಮಗಳು ಸೌಹಾರ್ದತೆ ಬಯಸುತ್ತವೆ ಎಂದು ಉಪನ್ಯಾಸ ನೀಡುವುದು ಶುಷ್ಕ ಸಾಂತ್ವನವಾಗುತ್ತದೆ. ವಾಸ್ತವವಾಗಿ ಸಮಾಜದಲ್ಲಿ ಮತೀಯವಾದಿಗಳು ಮೇಲುಗೈ ಸಾಧಿಸುತ್ತಿದ್ದಾರೆ. ಇದಕ್ಕೆ ಧರ್ಮಗುರುಗಳು, ಧಾಮರ್ಿಕ ಸಂಸ್ಥೆಗಳು ಪರೋಕ್ಷವಾಗಿ ಪ್ರೇರಣೆಯನ್ನೂ ನೀಡುತ್ತಿರುವುದು ಸ್ಪಷ್ಟ. ಈ ವಿಷವತರ್ುಲದಿಂದ ಹೊರಬರದೆ ಹೋದಲ್ಲಿ ಮುಂದೊಂದು ದಿನ ಇಡೀ ರಾಷ್ಟ್ರವೇ ಫ್ಯಾಸಿಸ್ಟರ ಕೈವಶವಾಗುತ್ತದೆ. ಮಾನವರು ಗುಳೆ ಹೊರಟರೆ ಹಿಂದಕ್ಕೆ ಕರೆತರಬಹುದು. ಮಾನವೀಯ ಮೌಲ್ಯಗಳು ಗುಳೆ ಹೊರಟರೆ ಏನು ಮಾಡುವುದು ? ಯಕ್ಷ ಪ್ರಶ್ನೆ !]]>

‍ಲೇಖಕರು G

August 20, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ನಾ ದಿವಾಕರ ನಮ್ಮ ಸುತ್ತಲಿನ ನಾಗರಿಕ ಸಮಾಜದಲ್ಲಿ ಸಂವೇದನೆ ಕ್ಷೀಣಿಸುತ್ತ್ತಿದೆ ಎಂದು ಹಲವು ಬಾರಿ ಭಾಸವಾಗುತ್ತದೆ. ಇನ್ನೂ ಕೆಲವೊಮ್ಮೆ ನಮ್ಮ...

೧ ಪ್ರತಿಕ್ರಿಯೆ

  1. D.RAVI VARMA

    ಮಾನವರು ಗುಳೆ ಹೊರಟರೆ ಹಿಂದಕ್ಕೆ ಕರೆತರಬಹುದು. ಮಾನವೀಯ ಮೌಲ್ಯಗಳು ಗುಳೆ ಹೊರಟರೆ ಏನು ಮಾಡುವುದು ? ಯಕ್ಷ ಪ್ರಶ್ನೆ !…
    thought provoking … aadare bekkige ghante kattuvavaru yaaru…..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: