ಆಧುನಿಕ ದುಶ್ಯಾಸನರೂ.. ಸಂಜಯನ ಸಂತತಿಯೂ..

ಮಂಗಳೂರಿನ ಹೊರವಲಯದಲ್ಲಿ ಹಿಂದುತ್ವವಾದಿಗಳು ನಡೆಸಿದ ದಾಂಧಲೆ ಅಚ್ಚರಿ ಮೂಡಿಸುವ ವಿದ್ಯಮಾನವೇನಲ್ಲ. ಈ ಅಯೋಧ್ಯೆಯ ಕೂಸುಗಳಿಗೆ ತಮ್ಮ ಅಸ್ತಿತ್ವವನ್ನು ಸಾರಿ ಹೇಳಲು ಆಗಾಗ್ಗೆ ಇಂತಹ ಘಟನೆಗಳು ಅತ್ಯವಶ್ಯ. ಹಿಂದೂಗಳನ್ನು ಜಾಗೃತಗೊಳಿಸುವ ಗುತ್ತಿಗೆ ಪಡೆದಿರುವ ಈ ಪುಂಡರ ತಂಡಕ್ಕೆ ಟೆಂಡರ್ ದೊರೆತು ಎರಡು ದಶಕಗಳೇ ಕಳೆದಿವೆ. ಭಾರತೀಯ ಸಂಸ್ಕೃತಿಯ ರಕ್ಷಣೆಗಾಗಿ ಸ್ವಾತಂತ್ರ್ಯ ಪೂರ್ವದಲ್ಲೇ ಟೆಂಡರ್ ಪಡೆದಿರುವ ಸಂಘಪರಿವಾರ ತನ್ನ ರಾಜಕೀಯ ಆಕಾಂಕ್ಷೆಗಳ ಪೂರೈಕೆಗಾಗಿ ಶ್ರೀರಾಮನ ಪಾದುಕೆಗಳಡಿ ಅಯೋಧ್ಯಾ ಕಾಂಡದಲ್ಲಿ ಸೃಷ್ಟಿಸಿದ ಈ ಕೂಸುಗಳು ಈಗ ವಿಭಿನ್ನ ನಾಮಾವಳಿಗಳನ್ನು ಹೊತ್ತು ಕಾಯರ್ೋನ್ಮುಖರಾಗಿದ್ದಾರೆ. ಅಯೋಧ್ಯೆಯ ಬೆಂಕಿಯ ಕುಂಡದಲ್ಲಿ ಜನಿಸಿ, ಗುಜರಾತಿನ ಅಗ್ನಿಕುಂಡವನ್ನು ದಾಟಿ ಮುನ್ನಡೆದಿರುವ ಈ ಧರ್ಮರಕ್ಷಕರಿಗೆ ಸಂಸ್ಕೃತಿಯ ಪರಿಜ್ಞಾನವೇ ಇಲ್ಲದಿದ್ದರೂ ಇವರ ಹಿರೀಕರು ಮತ್ತು ಜನ್ಮದಾತರು ರೂಪಿಸಿದ ನೀತಿ ಸಂಹಿತೆಗಳೇ ವೇದವಾಕ್ಯಗಳಂತೆ. ಹಾಗಾಗಿಯೇ ಇವರ ದೃಷ್ಟಿಯಲ್ಲಿ ಆಧುನಿಕತೆ ಅಪರಾಧವಾಗಿಬಿಡುತ್ತದೆ. ಆದರೆ ಅದು ಮಹಿಳೆಯರಿಗೆ ಮಾತ್ರ ಸೀಮಿತ. ಇರಲಿ ಈಗ ಅಯೋಧ್ಯೆಯ ಕೂಸುಗಳು ಪ್ರಬುದ್ಧತೆಗೆ ಬಂದಿವೆ. ತಮ್ಮ ಸಾಂಸ್ಕೃತಿಕ ಹೊಣೆಗಾರಿಕೆಯನ್ನು ಅರಿತಿವೆ. ಹೆತ್ತವರಿಂದ ದೂರಾದರೂ ಮೂಲ ಬೇರುಗಳನ್ನು ಇನ್ನೂ ಮರೆತಿಲ್ಲ. ಹಾಗಾಗಿಯೇ ಈ ವಾನರ ಸೇನೆಗಳಿಗೆ ತಮ್ಮ ಧೋರಣೆಗೆ ವ್ಯತಿರಿಕ್ತವಾದ ಪ್ರತಿಯೊಬ್ಬ ವ್ಯಕ್ತಿಯೂ ಲಂಕಾ ನಿವಾಸಿಯಾಗಿಯೇ ಕಾಣುತ್ತಾರೆ. ಅಧಿಕೃತವಾಗಿ ಮೌನ ಸಮ್ಮತಿಯಿಂದ ಸಮರ್ಥನೆ ಪಡೆದು, ಅನಧಿಕೃತ ಆರಕ್ಷಕರಾಗಿ ಹಲವು ವರ್ಷಗಳಿಂದ ಕರಾವಳಿ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿಂದೂ ಸಂಸ್ಕೃತಿಯ ಹರಿಕಾರರು ತಮ್ಮದೇ ಆದ ಸಾಮಾಜಿ, ಸಾಂಸ್ಕೃತಿಕ ಸಂಹಿತೆಗಳನ್ನು ಜಾರಿಗೊಳಿಸಿದ್ದಾರೆ. ಸಂಘ ಪರಿವಾರ ಕೃಪಾಪೋಷಿತ ಸಕರ್ಾರ ಇರುವವರೆಗೂ ತಾವು ದೇಶದ ಯಾವುದೇ ಕಾನೂನು ಶಿಸ್ತಿಗೆ ಒಳಪಡುವುದಿಲ್ಲ ಎಂಬ ನಿರ್ಭಯತೆ ಇವರಲ್ಲಿ ಮನೆಮಾಡಿದೆ. ಹಾಗಾಗಿ ಮಹಿಳೆಯರು ಯಾವ ಉಡುಪು ಧರಿಸಬೇಕು, ಹೇಗೆ ಒಡಾಡಬೇಕು, ಎಲ್ಲೆಲ್ಲಿಗೆ ಹೋಗಬೇಕು, ಯಾವ ಪಾಟರ್ಿಗಳಲ್ಲಿ ಭಾಗವಹಿಸಬೇಕು , ಯಾವ ಜಾತಿ ಮತ್ತು ಧರ್ಮದವರೊಡನೆ ಸ್ನೇಹ ಬೆಳೆಸಬೇಕು ಎಂದು ಇವರು ನಿರ್ಧರಿಸಿಬಿಡುತ್ತಾರೆ. ಈ ಪುಂಡರ ತಂಡವನ್ನು ಸಾಮಾನ್ಯವಾಗಿ ತಾಲಿಬಾನಿಗಳಿಗೆ ಹೋಲಿಸಲಾಗುತ್ತದೆ. ಆದರೆ ಒಂದು ರೀತಿಯಲ್ಲಿ ತಾಲಿಬಾನಿಗಳಿಗೆ ಇವರೇ ಆದರ್ಶಪ್ರಾಯರೇನೋ ಎನಿಸುತ್ತದೆ. ಏಕೆಂದರೆ ಫ್ಯಾಸಿಸ್ಟ್ ತಂತ್ರಗಾರಿಕೆಯಲ್ಲಿ, ಸಾಂಸ್ಕೃತಿಕ ಆರಕ್ಷಣಾ ತಂತ್ರಗಳಲ್ಲಿ ಅಯೋಧ್ಯೆಯ ಕೂಸುಗಳು ತಾಲಿಬಾನಿಗಳಿಗಿಂತಲೂ ಹಿರಿಯರು, ಅನುಭವಸ್ಥರು. ಮತ್ತು ಸತತವಾಗಿ ಎಂಟು ದಶಕಗಳಿಂದಲೂ ತಮ್ಮ ಪ್ರಯೋಗಾಲಯಗಳಲ್ಲಿ ಪ್ರಯೋಗಗಳನ್ನು ನಡೆಸಿ ಪಳಗಿದ ಕೈಗಳು. ಮಂಗಳೂರಿನ ಘಟನೆಯಲ್ಲೇ ನೋಡಿ, ತಮ್ಮ ವಯೋಗುಣಕ್ಕನುಸಾರವಾಗಿ ಪೋಷಕರ ಅಪ್ಪಣೆಯೊಂದಿಗೆ ರೆಸಾಟರ್್ ಒಂದರಲ್ಲಿ ಸ್ನೇಹಿತರೊಡಗೂಡಿ ಜನ್ಮದಿನ ಆಚರಿಸುತ್ತಿದ್ದ ಯುವಕರು ಈ ರಕ್ಕಸರ ಕಣ್ಣಿಗೆ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ದುಷ್ಟರಾಗಿ ಕಾಣುತ್ತಾರೆ. ರೆಸಾಟರ್್ ಮೇಲೆ ಮಾಧ್ಯಮದವರ ಸಮ್ಮುಖದಲ್ಲಿ ಪೂರ್ವನಿಯೋಜಿತ ಕಾರ್ಯಕ್ರಮದಂತೆ ವ್ಯವಸ್ಥಿತವಾಗಿ ಹಲ್ಲೆ ನಡೆಸುತ್ತಾರೆ. ಭಾರತೀಯ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಬೊಬ್ಬಿರಿಯುತ್ತಾ ಅಲ್ಲಿ ನೆರೆದಿದ್ದ ಯುವತಿಯರ ವಸ್ತ್ರಾಪಹರಣ ಮಾಡುವ ಆಧುನಿಕ ದುಷ್ಯಾಸನರ ಕೃತ್ಯಗಳನ್ನು , ಮಹಾಭಾರತದಲ್ಲಿ ಅಂಧ ದೃತರಾಷ್ಟ್ರನಿಗೆ ಕುರುಕ್ಷೇತ್ರ ಯುದ್ಧವನ್ನು ಬಣ್ಣಿಸುವ ಸಂಜಯನ ಆಧುನಿಕ ಅವತಾರಗಳಾದ ದೃಶ್ಯ ಮಾಧ್ಯಮಗಳು ವಿಹಂಗಮವಾಗಿ ಸೆರೆಹಿಡಿಯುತ್ತವೆ. ಈ ಚಿತ್ರೀಕರಣ ಒಂದು ಹಂತ ತಲುಪುವವರೆಗೂ ಪೊಲೀಸರು ಆಗಮಿಸುವುದಿಲ್ಲ. ಬಹುಶಃ ಸಿನಿಮಾಗಳಲ್ಲಿ ನಡೆಯುವಂತೆ ಎಲ್ಲವೂ ಮುಗಿದ ಮೇಲೆ ಹ್ಯಾಂಡ್ಸ್ ಅಪ್ ಎಂದು ಹೇಳುತ್ತಾ ಬರುವ ಪೊಲೀಸರಂತೆ ಇಲ್ಲಿಯೂ ಬರುತ್ತಾರೆ. ಅಲ್ಲಿ ಅಶ್ಲೀಲತೆ ಇತ್ತು, ರೇವ್ ಪಾಟರ್ಿ ನಡೆಯುತ್ತಿತ್ತು, ಗುಂಡು ತುಂಡುಗಳು ದೊರೆತವು ಎಂದು ಬಣ್ಣಿಸುತ್ತಾ ದುಷ್ಯಾಸನರನ್ನು ಸಮಥರ್ಿಸುವ ಸಂಜಯರಿಗೆ ವಸ್ತ್ರಾಪಹರಣ ಪ್ರಕರಣ ಟಿಆರ್ಪಿ ರೇಟಿಂಗ್ ಹೆಚ್ಚಿಸುವ ಪರಿಕರವಾಗಿ ಪರಿಣಮಿಸುವುದರಿಂದ ಎಲ್ಲವೂ ರೋಚಕವಾಗಿ ಕಾಣುತ್ತದೆ. ಹಾಗಾಗಿ ಇಲ್ಲಿ ಪೊಲೀಸರ ಆಗಮನ ತಡವಾಗುತ್ತದೆ. ಸೂತ್ರಧಾರನ ಜಾಣ್ಮೆಯನ್ನು ಮೆಚ್ಚಿಕೊಳ್ಳಬೇಕಲ್ಲವೇ ? ಇನ್ನು ನಮ್ಮ ಸಂಜಯರ ಪಾತ್ರವೇನು ? ನಿಜ, ಘಟನೆ ಸಂಭವಿಸುತ್ತಿದೆ ಎಂದು ತಿಳಿದ ಕೂಡಲೇ ಸ್ಥಳಕ್ಕೆ ಕ್ಯಾಮರಾದೊಡನೆ ಧಾವಿಸುವುದು ಪತ್ರಕರ್ತರ ವೃತ್ತಿಪರ ಹೊಣೆಗಾರಿಕೆ. ಅಲ್ಲಿ ನಡೆಯುವ ಘಟನೆಗಳನ್ನು ಚಿತ್ರೀಕರಿಸುವುದೂ ಧರ್ಮ. ಆದರೆ ತಮ್ಮ ಕಣ್ಣೆದುರಿನಲ್ಲಿ ಅಮಾನುಷ ಹಲ್ಲೆ ನಡೆಯುತ್ತಿದ್ದರೂ ಅದನ್ನು ತಡೆಗಟ್ಟಲೂ ಯತ್ನಿಸದೆ, ಪೊಲೀಸರಿಗೆ ತಿಳಿಸಲೂ ಯತ್ನಿಸದೆ, ವಿಹಂಗಮವಾಗಿ ಚಿತ್ರೀಕರಣ ನಡೆಸಿ ಅದನ್ನು ಘಟನೆ ನಡೆದ ಎರಡು ದಿನಗಳ ಬಳಿಕವೂ ದಿನವಿಡೀ ಪ್ರಸಾರ ಮಾಡುವ ಸಂಜಯರ ಕೃತ್ಯವನ್ನು ಹೇಗೆ ಸಮಥರ್ಿಸಿಕೊಳ್ಳುವುದು. ಟಿವಿ ಪರದೆಯ ಮೇಲೆ ಬಿಂಬಿಸುತ್ತಿರುವ ಚಿತ್ರಣವನ್ನು ನೋಡಿದರೆ ಒಂದು ಸ್ಪಷ್ಟವಾಗುತ್ತದೆ. ಹಲ್ಲೆಗೊಳಗಾದವರನ್ನೇ ಹೆಚ್ಚು ಬಿಂಬಿಸಲಾಗುತ್ತಿದೆಯೇ ಹೊರತು, ಹಲ್ಲೆ ಮಾಡಿದವರನ್ನಲ್ಲ. ಅಂದರೆ ಸಂಸ್ಕೃತಿ ರಕ್ಷಣೆಯ ಜೊತೆಗೆ ಸಂಸ್ಕೃತಿ ರಕ್ಷಕರ ರಕ್ಷಣೆಯೂ ನಡೆಯುತ್ತಿದೆಯೇ ಎಂಬ ಅನುಮಾನ ಮೂಡುತ್ತದೆ. ಮಾಧ್ಯಮಗಳ ಈ ಬೇಜವಾಬ್ದಾರಿ ವರ್ತನೆ ಹೊಸತೇನಲ್ಲ. ಗವಹಾತಿ ಘಟನೆಯಲ್ಲೂ ಇದನ್ನು ಕಾಣಬಹುದು. ಎಲ್ಲೋ ಒಂದೆಡೆ ಜಾಗತೀಕರಣ ಸೃಷ್ಟಿಸಿರುವ ಲಾಭಕೋರತನ ಎಲ್ಲೆಡೆ ಆವರಿಸಿರುವುದು ಸ್ಪಷ್ಟವಾಗುತ್ತದೆ. ಮಂಗಳೂರಿನ ಘಟನೆಯನ್ನು ಕೇವಲ ಒಂದು ವಿಕೃತ ಸಂಘಟನೆಯ ಕೃತ್ಯ ಎಂದು ಪರಿಗಣಿಸಲಾಗದು. ಇದು ದೇಶದಲ್ಲಿ ಫ್ಯಾಸಿಸ್ಟ್ ಶಕ್ತಿಗಳು ಬೇರೂರುತ್ತಿರುವ ಒಂದು ಸ್ಪಷ್ಟ ಸೂಚನೆಯಾಗಿದೆ. ಹಲವು ವರ್ಷಗಳ ಹಿಂದೆ ಈ ಬೆಳವಣಿಗೆಗೆ ಬೀಜ ಬಿತ್ತಿದ ಹಲವರು ಇಂದು ರಾಜ್ಯ ಸಚಿವರುಗಳಾಗಿದ್ದಾರೆ. ಅವರು ಬಾಬಾಬುಡನ್ಗಿರಿ, ಹುಬ್ಬಳ್ಳಿ, ಶಿವಮೊಗ್ಗದಲ್ಲಿ ಬಿತ್ತಿದ ಬೀಜಗಳು ಇಂದು ಫಸಲು ನೀಡುತ್ತಿದೆ. ಉಳುವವರು ಬದಲಾಗಿದ್ದಾರೆ, ನೇಗಿಲು ಬದಲಾಗಿಲ್ಲ. ಮಂಗಳೂರು ಇಂತಹ ದ್ವéೇಷದ ಕೃಷಿಗೆ ಫಲವತ್ತಾದ ಭೂಮಿಯಾಗಿದೆ. ಆಧುನಿಕತೆ, ಸಂಪ್ರದಾಯ ಮತ್ತು ಬಹುಮುಖೀ ಸಂಸ್ಕೃತಿಗಳ ಸಮ್ಮಿಲನವಾದ ಮಂಗಳೂರು ಫ್ಯಾಸಿಸ್ಟ್ ಶಕ್ತಿಗಳಿಗೆ ಪ್ರಶಸ್ತವಾದ ರಣಭೂಮಿಯಾಗುತ್ತದೆ. ಹಾಗಾಗಿಯೇ ಸಂಸ್ಕೃತಿ ಎನ್ನುವುದು ವಿಕೃತಿಗಳ ಸಾಧನವಾಗುತ್ತದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ರಾಜ್ಯ ಸಕರ್ಾರದ ಆಶ್ವಾಸನೆಯನ್ನು ಹೇಗೆ ನಂಬುವುದು. 2009ರ ಪಬ್ ದಾಳಿಯ ಆರೋಪಿಗಳಿಗೆ ಯಾವ ಶಿಕ್ಷೆ ನೀಡಲಾಗಿದೆ ? ಪ್ರಸ್ತುತ ಘಟನೆಯಲ್ಲಿ ಶಿಕ್ಷೆಯಾಗುವುದೇ ಆದರೆ ಹಲ್ಲೆ ನಡೆಸಿದ ಆಧುನಿಕ ದುಷ್ಯಾಸನರಿಗೂ, ಘಟನೆಯ ವರದಿ ಮಾಡಿದ ಸಂಜಯರಿಗೂ ಮತ್ತು ನಮ್ಮ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ದೃತರಾಷ್ಟ್ರರರಿಗೂ ಶಿಕ್ಷೆ ಆಗಬೇಕಿದೆ. ನ್ಯಾಯಾಂಗದ ಕಟಕಟೆಯಲ್ಲಿ ಅಲ್ಲ, ಜನತಾ ನ್ಯಾಯಾಲಯದಲ್ಲಿ.  ]]>

‍ಲೇಖಕರು G

August 1, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ನಾ ದಿವಾಕರ ನಮ್ಮ ಸುತ್ತಲಿನ ನಾಗರಿಕ ಸಮಾಜದಲ್ಲಿ ಸಂವೇದನೆ ಕ್ಷೀಣಿಸುತ್ತ್ತಿದೆ ಎಂದು ಹಲವು ಬಾರಿ ಭಾಸವಾಗುತ್ತದೆ. ಇನ್ನೂ ಕೆಲವೊಮ್ಮೆ ನಮ್ಮ...

11 ಪ್ರತಿಕ್ರಿಯೆಗಳು

 1. anand prasad

  ಘಟನೆಯನ್ನು ವರದಿ ಮಾಡಿದ ಮಾಧ್ಯಮದವರಿಗೆ ಶಿಕ್ಷೆ ಆಗಬೇಕೆಂಬುದು ಸರಿಯಾದುದಲ್ಲ. ಮಾಧ್ಯಮದವರು ತಮ್ಮ ಕರ್ತವ್ಯವನ್ನು ಈ ಘಟನೆಯಲ್ಲಿ ಸರಿಯಾಗಿಯೇ ಮಾಡಿದ್ದಾರೆ. ಘಟನೆಯನ್ನು ವರದಿ ಮಾಡಿದ ನವೀನ ಸೂರಿಂಜೆ ಘಟನೆಯ ಸಂದರ್ಭವನ್ನು ಅವಧಿ, ವರ್ತಮಾನದಂಥ ವೆಬ್ ಪತ್ರಿಕೆಗಳಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ತಮಗೆ ಬಂದ ಮಾಹಿತಿಯನ್ನು ಅವರು ಅಲ್ಲಿಗೆ ಹೋಗುವ ಮೊದಲೇ ಪೊಲೀಸರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ, ಆದರೆ ಅದನ್ನು ಪೊಲೀಸರು ಕರೆಯನ್ನು ಸ್ವೀಕರಿಸಿಲ್ಲ. ಹೀಗಿರುವಾಗ ಇದನ್ನು ತಡೆಯಲು ಅವರು ಪ್ರಯತ್ನಿಸಲಿಲ್ಲ ಎಂಬುದು ಸಮಂಜಸವೆಂದು ಕಾಣುವುದಿಲ್ಲ. ಕೆಲವರು ೧೦೦ ನಂಬರಿಗೆ ಕರೆ ಮಾಡಬೇಕಿತ್ತೆಂದು ತಿಳಿಸಿದ್ದಾರೆ. ಬಹುಶ: ಆ ಕ್ಷಣದಲ್ಲಿ ಇದು ಅವರಿಗೆ ಹೊಳೆದಿರಲಿಕ್ಕಿಲ್ಲ. ಅವರು ಹೀಗೆ ಮಾಡಿದ್ದಿದ್ದರೆ ಅಂಥ ಒಂದು ಘಟನೆಯನ್ನು ತಡೆಯಬಹುದು, ಆದರೆ ರಾಜ್ಯಾದ್ಯಂತ ಮೂಲಭೂತವಾದಿ ಸಂಘಟನೆಗಳ ವಿರುದ್ಧ ಈಗ ಉಂಟಾಗುತ್ತಿರುವ ಜಾಗೃತಿ ಉಂಟಾಗುತ್ತಿರಲಿಲ್ಲ.

  ಪ್ರತಿಕ್ರಿಯೆ
  • ಎಚ್. ಸುಂದರ ರಾವ್

   ನವೀನ್ ತಮ್ಮ ಲೇಖನದಲ್ಲಿ “ನಾನು ಮತ್ತು ನನ್ನ ಕ್ಯಾಮರಮೆನ್ ಮಾತ್ರ ಅಲ್ಲಿದ್ದೆವು. ಅಷ್ಟರಲ್ಲಿ ಸ್ಥಳೀಯ ಸಹಾಯ ಎಂಬ ಕೇಬಲ್ ಚಾನೆಲ್ ಕ್ಯಾಮರಮೆನ್ ಶರಣ್ ಮತ್ತು ಫೋಟೋಗ್ರಾಫರ್ ವಿನಯ ಕೃಷ್ಣ ಅಲ್ಲಿಗೆ ಬಂದಿದ್ದರು” ಎಂದಿದ್ದಾರೆ. ಸಹಾಯ ಟಿವಿಯ ವರದಿಗಾರರಿಗೆ ಯಾರು ವಿಷಯ ತಿಳಿಸಿದ್ದು? ಎಷ್ಟು ಹೊತ್ತಿಗೆ? ಅವರಿಗೂ ಪೋಲೀಸರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲವೆ?

   ಪ್ರತಿಕ್ರಿಯೆ
  • ನಾ ದಿವಾಕರ

   ಇಲ್ಲಿ ಪ್ರಶ್ನೆ ಇರುವುದು ಪೊಲೀಸರಿಗೆ ತಿಳಿಸುವುದು ಮಾತ್ರವಲ್ಲ. ಇಂದಿನ ಆಧುನಿಕ ತಂತ್ರಜ್ಞಾನದಲ್ಲಿ ಒಂದು ಮೆಸೇಜ್ ಮೂಲಕ ಕ್ರಾಂತಿ ಮಾಡಬಹುದು. ಅಂತಹುದರಲ್ಲಿ ಹೆಣ್ಣು ಮಕ್ಕಳ ಮೇಲಿನ ಅಮಾನುಷ ಆಕ್ರಮಣವನ್ನು ಟಿವಿ ಧಾರಾವಾಹಿಯೇನೋ ಎನ್ನುವಂತೆ ಚಿತ್ರೀಕರಿಸುವ ಮಾಧ್ಯಮ ಮಿತ್ರರಿಗೆ ಅದನ್ನು ತಡೆಗಟ್ಟುವ ಕ್ರಮ ಕೈಗೊಳ್ಳಲು ಹೊಳೆಯಲಿಲ್ಲವೇ ? ನವೀನ್ ನೀಡಿರುವ ಸಮಜಾಯಿಷಿ ಒಪ್ಪಿಕೊಳ್ಳೋಣ ಅದರೆ ಅವರ ಪತ್ರಿಕಾ ಸಮೂಹದ ಕಚೇರಿಯಲ್ಲಿದ್ದವರಿಗೆ ವಿಷಯ ತಿಳಿದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬಹುದಿತ್ತಲ್ಲವೇ ? ದೃಶ್ಯ ಮಾಧ್ಯಮಗಳ ಟಿ ಆರ್ ಪಿ ರೇಟಿಂಗ್ ವ್ಯಾಮೋಹ ನಿರ್ಲಕ್ಷಿಸುವಂತಹುದಲ್ಲ. ಇದರಿಂದ ಸಮಾಜಕ್ಕೆ ಆಗುತ್ತಿರುವ ಅನಾಹುತಗಳೇ ಹೆಚ್ಚು. ಮಾಧ್ಯಮ ಸ್ವಾತಂತ್ರ್ಯವನ್ನು ಮನ್ನಿಸುತ್ತಲೇ ಮಾಧ್ಯಮಗಳ ನೈತಿಕ ಹೊಣೆಗಾರಿಕೆಯನ್ನು ನೆನಪು ಮಾಡುವುದೂ ಪ್ರಜ್ಞಾವಂತ ಸಮಾಜದ ಕರ್ತವ್ಯ.
   ನಾ ದಿವಾಕರ

   ಪ್ರತಿಕ್ರಿಯೆ
   • anand prasad

    ಮಾಧ್ಯಮದವರೋ ಅಥವಾ ಇನ್ಯಾರೋ ಪೊಲೀಸರಿಗೆ ಘಟನೆಯನ್ನು ತಿಳಿಸಿದ್ದಾರೆ, ೧೫ ನಿಮಿಷಗಳ ನಂತರ ಅಲ್ಲಿಗೆ ಪೊಲೀಸರು ಆಗಮಿಸಿದ್ದಾರೆ ಎಂಬುದು ನವೀನ ಸೂರಿಂಜೆ ಅವರ ಲೇಖನದ ಮೂಲಕ ತಿಳಿಯುತ್ತದೆ. ಮಾಧ್ಯಮದವರು ತಿಳಿಸಿದ ನಂತರ ಪೊಲೀಸರು ಬರಲು ಸ್ವಲ್ಪ ಸಮಯ ಹಿಡಿಯುತ್ತದೆ ಅಲ್ಲವೇ? ಪೊಲೀಸರು ಹೆಲಿಕಾಪ್ಟರಿನಲ್ಲಿ ಬರಲು ಸಾಧ್ಯವಿಲ್ಲ ತಾನೆ? ಇಲ್ಲಿ ಮಾಧ್ಯಮದಿಂದ ತಪ್ಪಾಗಿರುವುದು ಕಂಡು ಬರುವುದಿಲ್ಲ, ಬದಲಾಗಿ ಮಾಧ್ಯಮದವರಿಂದ ಅತ್ಯುತ್ತಮ ಕೆಲಸ ಆಗಿದೆ, ಇದಕ್ಕಾಗಿ ಮಾಧ್ಯಮದವರನ್ನು ಸನ್ಮಾನಿಸಬೇಕು. ಅವರಿಗೆ ಶಿಕ್ಷೆ ನೀಡುವುದಲ್ಲ. ಮಾಧ್ಯಮದವರು ಈ ಘಟನಾವಳಿಯನ್ನು ಚಿತ್ರೀಕರಿಸಿ ಪ್ರಸಾರ ಮಾಡಿರುವ ಕಾರಣ ಮೂಲಭೂತವಾದಿಗಳ ಮತಿಹೀನ ಕೃತ್ಯಗಳನ್ನು ರಾಜ್ಯ ಹಾಗೂ ದೇಶಾದ್ಯಂತ ಜನ ನೋಡಿ ಪ್ರತಿಭಟನೆ ವ್ಯಕ್ತಪಡಿಸುವಂತೆ ಆಯಿತು. ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರೂ ಈ ದೃಶ್ಯಗಳನ್ನು ಮಾಧ್ಯಮದಲ್ಲಿ ನೋಡಿ ಸ್ವಯಂಪ್ರೇರಿತರಾಗಿ ಘಟನೆಯನ್ನು ಖಂಡಿಸಿದ್ದಾರೆ ಎಂದ ಮೇಲೆ ಮಾಧ್ಯಮದವರು ಸಮರ್ಪಕವಾಗಿ ನಡೆದುಕೊಂಡಿದ್ದಾರೆ ಎಂದು ಅರ್ಥವಲ್ಲವೇ? ಮಾಧ್ಯಮದವರು ಈ ಘಟನೆಯ ವೀಡಿಯೊ ಪ್ರಸಾರ ಮಾಡುವಾಗ ಹುಡುಗಿಯರ ಗುರುತು ಪತ್ತೆ ಹಚ್ಚಲಾಗದ ರೀತಿಯಲ್ಲಿ ನೋಡಿಕೊಂಡಿದ್ದಾರೆ. ಹೀಗಾಗಿ ಮಾಧ್ಯಮದಿಂದಾಗಿ ಯಾರ ಜೀವನವನ್ನೂ ಬಲಿಕೊಟ್ಟಂತೆ ಆಗಿಲ್ಲ. ಮಾಧ್ಯಮವು ಒಂದು ಉತ್ತಮ ಕೆಲಸ ಮಾಡಿದಾಗ ಬೆನ್ನು ತಟ್ಟುವುದು ಬಿಟ್ಟು ಅವರಿಗೆ ಶಿಕ್ಷೆ ನೀಡಬೇಕೆಂದು ಹೇಳಿದರೆ ಭವಿಷ್ಯದಲ್ಲಿ ಮಾಧ್ಯಮದವರು ಒಳ್ಳೆಯ ಕೆಲಸ ಮಾಡಲು ಹಿಂಜರಿಯುವ ಸಾಧ್ಯತೆ ಇದೆ. ಮಾಧ್ಯಮದ ಒಳ್ಳೆಯ ಕೆಲಸವನ್ನು ಬೆನ್ನು ತಟ್ಟುವುದು ಎಲ್ಲ ಪ್ರಜ್ಞಾವಂತರ ಕರ್ತವ್ಯ.

    ಪ್ರತಿಕ್ರಿಯೆ
    • ಎಚ್. ಸುಂದರ ರಾವ್

     ೧. ಮೊದಲು, ಸಹಾಯ ಟಿವಿಯವರಿಗೆ ಎಷ್ಟು ಹೊತ್ತಿಗೆ ಮಾಹಿತಿ ಸಿಕ್ಕಿತು, ಅವರು ಪೋಲಿಸರನ್ನು ಸಂಪರ್ಕಿಸಲು ಪ್ರಯತ್ನಿಸಿದರೇ ಎಂಬುದು ಸ್ಪಷ್ಟವಾಗಬೇಕು. ಇದನ್ನು ಸ್ಪಷ್ಟಪಡಿಸಬೇಕಾದವರು ಅಲ್ಲಿ ಹಾಜರಿದ್ದ ವರದಿಗಾರರೇ.
     ೨. ನವೀನರಾಗಲೀ ಬೇರೆ ಯಾರೇ ಆಗಲಿ, ಅಲ್ಲಿದ್ದ ಹುಡುಗ – ಹುಡುಗಿಯರ ಮೇಲೆ ಮಾತ್ರ ದಾಳಿ ನಡೆಯಿತು ಎಂದು ಹೇಳಿದ್ದಾರೆ. ಆ ವಿಕೃತ ಮನಸ್ಕರು ಮಾಧ್ಯಮದವರ ಮೇಲೆ ಯಾವ ಹಲ್ಲೆಯನ್ನೂ ಮಾಡಲಿಲ್ಲ, ಘಟನೆಯನ್ನು ಚಿತ್ರೀಕರಿಸದಂತೆ ತಡೆಯಲಿಲ್ಲ. ಯಾಕೆ? ಮಾಧ್ಯಮದವರು ಅವರ ಗೆಳೆಯರೆ? ಘಟನೆ ಚಿತ್ರೀಕರಣವಾಗಿ ಟಿವಿಗಳಲ್ಲಿ ಪ್ರಸಾರವಾದರೆ, ಆ ಕೆಲಸ ಮಾಡಿದವರಿಗೆ ಅದರಿಂದ ತೊಂದರೆಯೇ ಹೊರತು ಲಾಭವಿಲ್ಲ ತಾನೆ? ಇದರ ಅರ್ಥ ಈ ವಿಕೃತ ಮನಸ್ಕರೊಂದಿಗೆ ಮಾಧ್ಯಮದವರು ಶಾಮೀಲಾಗಿದ್ದರು ಎಂದೇ ಆಗುವುದಿಲ್ಲವೆ? ನವೀನ್ ಘಟನೆಯಲ್ಲಿ ಶಾಮೀಲಾಗಿದ್ದರು ಎಂದು ಆಪಾದಿಸಲು ನನ್ನ ಮನಸ್ಸು ಒಪ್ಪುವುದಿಲ್ಲ. ಆದರೆ, ಗೊತ್ತಿದ್ದೋ ಇಲ್ಲದೆಯೋ, ಆ ವಿಕೃತಮನಸ್ಕರು ಕೊಟ್ಟ ಸಹಕಾರವನ್ನು ಅವರು ಬಳಸಿಕೊಂಡರು ಎಂದೇ ಹೇಳಬೇಕಾಗುತ್ತದೆ: ದಿವಾಕರರು ಹೇಳುವ ಹಾಗೆ: “ದೃಶ್ಯ ಮಾಧ್ಯಮಗಳ ಟಿ ಆರ್ ಪಿ ರೇಟಿಂಗ್ ವ್ಯಾಮೋಹ ನಿರ್ಲಕ್ಷಿಸುವಂತಹುದಲ್ಲ”

     ಪ್ರತಿಕ್ರಿಯೆ
     • anand prasad

      ದಾಳಿಕೋರರು ಮಾಧ್ಯಮದವರನ್ನು ಹಿಂದೆ ಮಂಗಳೂರಿನಲ್ಲಿ ಪಬ್ ದಾಳಿ ನಡೆದಾಗಲೂ ತಡೆದಿರಲಿಲ್ಲ ಅವರಿಗೆ ತಮ್ಮ ಕೃತ್ಯಕ್ಕೆ ಪಬ್ಲಿಸಿಟಿ ಸಿಗುವುದು ಬೇಕಿತ್ತು ಮತ್ತು ಎಂಥಾ ತೊಂದರೆ ಆದರೂ ತಮ್ಮನ್ನು ರಕ್ಷಿಸಲು ಸಂಘ ಪರಿವಾರದವರು ಇದ್ದಾರೆ ಎಂಬ ಧೈರ್ಯ ಅವರನ್ನು ಮಾಧ್ಯಮದವರನ್ನು ತಡೆಯದಂತೆ ಮಾಡಿದೆ. ತಮಗೆ ತೊಂದರೆ ಆಗುತ್ತದೆ ಎಂದು ತಿಳಿದಿದ್ದರೆ ಖಂಡಿತವಾಗಿಯೂ ಅವರು ಮಾಧ್ಯಮದವರನ್ನು ತಡೆಯುತ್ತಿದ್ದರು, ಕ್ಯಾಮರಾಗಳನ್ನು ಒಡೆದು ಹಾಕುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘ ಪರಿವಾರದ ನಿಯಂತ್ರಣದಲ್ಲಿರುವ ಪೊಲೀಸರಿಗೆ ಇಂಥ ಮಾಹಿತಿ ಕೊಟ್ಟರೂ ಅವರು ಇಂಥ ದಾಳಿಯನ್ನು ತಡೆಯದಂತೆ ಹಾಗೂ ಮೂಲಭೂತವಾದಿಗಳ ಕೃತ್ಯಗಳನ್ನು ಬೆಂಬಲಿಸುವಂತೆ ಅವರಿಗೆ ಸಂಘದ ನಾಯಕರಿಂದ ಸೂಚನೆ ಇರುತ್ತದೆ. ಹೀಗಾಗಿ ಇಲ್ಲಿ ಎಂಥದೇ ಪ್ರಚೋದನಕಾರಿ ಭಾಷಣ ಮಾಡಿದರೂ ಸಂಘದ ಮುಖಂಡರನ್ನು ಪೊಲೀಸರು ಮುಟ್ಟಲು ಹೋಗುವುದಿಲ್ಲ ಮಾತ್ರವಲ್ಲ ಅವರೇ ಸಂಘದ ನಾಯಕರಿಗೆ ರಕ್ಷಣೆ ಕೊಡುತ್ತಾರೆ. ಹೀಗಾಗಿ ಮಾಧ್ಯಮದವರು ದಾಳಿಯ ಬಗ್ಗೆ ಯಾವುದೇ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರೂ ಪರಿಣಾಮ ಮಾತ್ರ ಒಂದೇ ಆಗುತ್ತಿತ್ತು ಎಂಬುದರಲ್ಲಿ ಸಂದೇಹವಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂವಿಧಾನ ಸತ್ತು ಎಷ್ಟೋ ವರ್ಷಗಳಾದವು.

     • ಎಚ್. ಸುಂದರ ರಾವ್

      “ಮಾಧ್ಯಮದವರು ದಾಳಿಯ ಬಗ್ಗೆ ಯಾವುದೇ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರೂ ಪರಿಣಾಮ ಮಾತ್ರ ಒಂದೇ ಆಗುತ್ತಿತ್ತು ಎಂಬುದರಲ್ಲಿ ಸಂದೇಹವಿಲ್ಲ”- ಪರಿಣಾಮ ಒಂದೇ ಆಗುವುದು ಸಾಧ್ಯವಿಲ್ಲ.
      ೧. ಮಾಧ್ಯಮದವರು “ನಾವು ಮಾಹಿತಿ ಕೊಟ್ಟಿದ್ದೇವೆ, ಕರ್ತವ್ಯಲೋಪ ಆಗಿರುವುದು ನಿಮ್ಮಿಂದಲೇ” ಎಂದು ಗಟ್ಟಿಯಾಗಿ ಪೋಲೀಸರಿಗೆ ಹೇಳಬಹುದಿತ್ತು. ಮತ್ತು ಮಾಹಿತಿ ಕೊಟ್ಟಿದ್ದರೆ ಪೋಲೀಸಿನವರು ಮಾಧ್ಯಮದವರ ಮೇಲೆ ಕೇಸು ಹಾಕುವುದು ಸಾಧ್ಯವಿರಲಿಲ್ಲ.
      ೨. ಪೋಲೀಸ್ ವ್ಯವಸ್ಥೆ ಏನೇ ಇದ್ದರೂ ನಾವು ಅದರ ಮೇಲೆ ವಿಶ್ವಾಸ ಕಳೆದುಕೊಳ್ಳುವಂತಿಲ್ಲ. ಹಾಗೆ ಮಾಡಿದರೆ ಸಂವಿಧಾನದ ಮೇಲೆ ವಿಶ್ವಾಸ ಕಳೆದುಕೊಂಡಂತೆಯೇ. ಆಗ, ಯಾವ ತಪ್ಪಿಗಾಗಿ ಆ ವಿಕೃತಮನಸ್ಕರನ್ನು ನಾವು ದೂಷಿಸುತ್ತಿದ್ದೇವೋ ಅದೇ ತಪ್ಪನ್ನು ನಾವೂ ಮಾಡಿದ ಹಾಗಾಗುತ್ತದೆ.
      ೩. ಪೋಲೀಸರು ಸಕಾಲಕ್ಕೆ ಸ್ಥಳಕ್ಕೆ ಬರುವುದು ಸಾಧ್ಯವಿತ್ತು ಮತ್ತು ಆಗ ಈ ಘಟನೆ ನಡೆಯುವುದೇ ತಪ್ಪಿ ಹೋಗಬಹುದಿತ್ತು.

     • anand prasad

      ಪೊಲೀಸರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂವಿಧಾನದ ಪ್ರಕಾರ ಕರ್ತವ್ಯ ನಿಭಾಯಿಸುತ್ತಾ ಇಲ್ಲ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಕರಾವಳಿ ಅಲೆಯ ಸಂಪಾದಕರನ್ನು ಭಯೋತ್ಪಾದಕರನ್ನು ಬಂಧಿಸುವಂತೆ ಬಂಧಿಸಿ ತಿಂಗಳಿಗೂ ಹೆಚ್ಚು ಕಾಲ ಕಾರಣವಿಲ್ಲದೆ ಜೈಲಿನಲ್ಲಿಟ್ಟು ನಂತರ ಹೈಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡ ಘಟನೆ ನೋಡಿದಾಗ, ಸುಳ್ಯದಲ್ಲಿ ಪೋಲೀಸ್ ಠಾಣೆ ಮೇಲೆ ಮೂಲಭೂತವಾದಿಗಳು ಕಲ್ಲೆಸೆದಾಗ ಅವರ ಮೇಲೆ ಕ್ರಮ ತೆಗೆದುಕೊಂಡ ಪೊಲೀಸರನ್ನೇ ಎತ್ತಂಗಡಿ ಮಾಡಿದ್ದು, ಉಪ್ಪಿನಂಗಡಿಯಲ್ಲಿ ಸಂಘದ ಮುಖಂಡರೆ ಪ್ರಚೋದನಕಾರಿ ಭಾಷಣ ಮಾಡಿದಾಗ ಅವರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದಿದ್ದುದು ಇವೆಲ್ಲ ಕೆಲ ಉದಾಹರಣೆಗಳಷ್ಟೇ. ಪೊಲೀಸರು ಹೀಗೆ ಮಾಡುವುದರಿಂದ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಿರುವುದು ಇದುವೇ.

 2. Hi

  “ಈ ಧರ್ಮರಕ್ಷಕರಿಗೆ ಸಂಸ್ಕೃತಿಯ ಪರಿಜ್ಞಾನವೇ ಇಲ್ಲದಿದ್ದರೂ ಇವರ ಹಿರೀಕರು ಮತ್ತು ಜನ್ಮದಾತರು ರೂಪಿಸಿದ ನೀತಿ ಸಂಹಿತೆಗಳೇ ವೇದವಾಕ್ಯಗಳಂತೆ. ಹಾಗಾಗಿಯೇ ಇವರ ದೃಷ್ಟಿಯಲ್ಲಿ ಆಧುನಿಕತೆ ಅಪರಾಧವಾಗಿಬಿಡುತ್ತದೆ. ಆದರೆ ಅದು ಮಹಿಳೆಯರಿಗೆ ಮಾತ್ರ ಸೀಮಿತ”.– ನೀವು ಹೇಳಿದು ನೂರಕೆ ನೂರು ನಿಜ . ಉತ್ತಮ ಲೇಖನ

  ಪ್ರತಿಕ್ರಿಯೆ
 3. Santoshkumar

  ಸಂಸ್ಕೃತಿ ರಕ್ಷಣೆಯ ಜೊತೆಗೆ ಸಂಸ್ಕೃತಿ ರಕ್ಷಕರ ರಕ್ಷಣೆಯೂ ನಡೆದಿದೆ ಎಂದು ಎಲ್ಲಾರಿ ಅನಿಸಿದೆ. ದಾಳಿಗೊಳಗಾದವರೇ ಹೆಚ್ಹಾಗಿ ಕಾಣಿಸುತ್ತಾರೆ ಹೊರತು ದಲಿಕೊರರಲ್ಲ..
  ಮೂಲಭೂತವಾದಿ ಸಂಘಟನೆಗಳ ವಿರುದ್ಧ ಜಾಗೃತಿ ಉಂಟುಮಾಡಲು ಅಮಾಯಕ ಜನರು ಬಲಿಯಾಗಬೇಕೆ?

  ಪ್ರತಿಕ್ರಿಯೆ
 4. ನಾ ದಿವಾಕರ

  ಇಲ್ಲಿ ಪ್ರಶ್ನೆ ಉದ್ಭವಿಸುವುದು ಮಾಧ್ಯಮಗಳ ನೈತಿಕ ನಿಲುವುಗಳ ಬಗ್ಗೆ ಮಾತ್ರ. ಪೊಲೀಸರಿಗೆ ಮಾಹಿತಿ ನೀಡುವುದು, ಕ್ರಮ ಕೈಗೊಳ್ಳುವುದು, ಶಿಕ್ಷೆ ಆಗುವುದು ಇವೆಲ್ಲವು ಇಲ್ಲಿ ಅನಗತ್ಯ. ಆದರೆ ಕೆಲವು ಅಮಾಯಕರ ಮೇಲೆ ಹಲ್ಲೆ, ಮಾನಭಂಗ, ವಸ್ತ್ರಾಪಹರಣ, ದೌರ್ಜನ್ಯ ನಡೆಯುತ್ತಿರುವಾಗ ಅದನ್ನು ಕೊಂಚವೂ ಬಿಡದೆ ಚಿತ್ರೀಕರಿಸುವುದು ಮತ್ತು ಅದೇ ಚಿತ್ರನವನ್ನು ವಾರಗಟ್ಟಲೆ ಟಿವಿ ಪರದೆಯ ಮೇಲೆ ಬಿತ್ತರಿಸುವುದು ಜನತೆಗೆ ಸುದ್ದಿ ನೀಡುವ ಪರಿಯೇ ? ಇದು ಸಿನಿಮಾದಲ್ಲಿ ರೇಪ್ ದೃಶ್ಯ ತೋರಿಸಿಂತಾಗುವುದಿಲ್ಲವೇ ? ಇಲ್ಲಿ ಪ್ರಚಾರ ಪ್ರಿಯತೆ ಮತ್ತು ಜನಪ್ರಿಯತೆಯ ಭೂತ ಮಾಧ್ಯಮಗಳನ್ನು ಆವರಿಸಿರುವುದನ್ನು ವಸ್ತುನಿಷ್ಠವಾಗಿ ಒಪ್ಪಿಕೊಳ್ಳಬೇಕು. ಮಾಧ್ಯಮದವರಿಗೆ ಶಿಕ್ಷೆಯಾಗಬೇಕಿಲ್ಲ ಆದರೆ ಆತ್ಮಾವಲೋಕನವಂತೂ ಆಗಲೇ ಬೇಕಲ್ಲವೇ ? ಇಲ್ಲಿ ಪ್ರಶ್ನೆ ಇರುವುದು ಆತ್ಮಸಾಕ್ಷಿಯ ಬಗ್ಗೆ.
  ನಾ ದಿವಾಕರ

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ನಾ ದಿವಾಕರCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: