ನಾ ದಿವಾಕರ್ ನೇರ ನುಡಿ : ಬರ ಅಂದ್ರೆ ಇವರಿಗೂ ಇಷ್ಟ

ಬರಪೀಡಿತ ಪಕ್ಷಗಳ ಬವಣೆಗಳು

– ನಾ ದಿವಾಕರ್

ಕರ್ನಾಟಕದ ಜನತೆ ಇತಿಹಾಸದಲ್ಲೇ ಕಂಡಿರದಂತಹ ಬರಗಾಲವನ್ನೇನೂ ಕಾಣುತ್ತಿಲ್ಲ. ಆದರೆ ಸಮಾಜ ಸುಭಿಕ್ಷವಾಗಿದೆ ಎನ್ನುವಂತೆಯೂ ಇಲ್ಲ. ಮಳೆ ವಿಫಲವಾಗಿದೆ. ಬೆಳೆ ಕುಂಠಿತವಾಗಿದೆ. ಬೆಲೆಗಳು ಏರುತ್ತಿವೆ. ಜಾನುವಾರುಗಳಿಗೆ ಮೇವಿಲ್ಲ. ಜನರಿಗೆ ಕುಡಿಯುವ ನೀರಿಲ್ಲ. ಬೆಳೆಗಳಿಗೆ ನೀರಾವರಿ ಸೌಲಭ್ಯವಿಲ್ಲ. ಎಲ್ಲೆಡೆ ವಿದ್ಯುತ್ ಕ್ಷಾಮ. ಹಳ್ಳಿಗಳಲ್ಲಿ ವಿದ್ಯುತ್ ಎಂದರೆ ಸ್ವಾತಿ ನಕ್ಷತ್ರದಂತೆ. ಎಂದೋ ಒಂದು ದಿನ ಕಂಡು ಮರೆಯಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಇತ್ತ ವ್ಯವಸಾಯವೂ ಇಲ್ಲದೆ, ಕೂಲಿಯೂ ಇಲ್ಲದೆ ಪರದಾಡುತ್ತಿರುವ ಜನ ವಲಸೆ ಹೋಗಲಾರಂಭಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲೇ ಗ್ರಾಮೀಣ ಪ್ರದೇಶದ ಜನತೆಗೆ ಉದ್ಯೋಗ ನೀಡಲೆಂದು ರೂಪಿಸಿದ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಗೆ ಕೋಟ್ಯಂತರ ರೂಗಳ ನಿಧಿಯೇನೋ ಹರಿದುಬರುತ್ತಿದೆ. ಕೇಂದ್ರ ಸರ್ಕಾರರ ಹಣವನ್ನು ನೀಡುತ್ತಲೂ ಇದೆ. ಬಂದ ಹಣ ಖರ್ಚಾಗುತ್ತಲೂ ಇದೆ. ಆದರೆ ಸೇರಬೇಕಾದವರಿಗೆ ಸೇರುತ್ತಿಲ್ಲ. ಉದ್ಯೋಗ ಖಾತರಿ ಯೋಜನೆ ದಲ್ಲಾಳಿಗಳ ಕತ್ತರಿ ಯೋಜನೆಯಾಗಿದ್ದು, ಪ್ರತಿ ಗ್ರಾಮದಲ್ಲೂ ಪಂಚಾಯತ್ ಸದಸ್ಯರ ಹಫ್ತಾ ವಸೂಲಿಯ ಕಾರ್ಯಕ್ರಮವಾಗಿದೆ. ಪಾಪ, ಗಾಂಧೀಜಿ ಏನು ಕರ್ಮ ಮಾಡಿದ್ದರೋ, ಅವರ ಹೆಸರಿಟ್ಟ ಕಡೆಯೆಲ್ಲಾ ಅಕ್ರಮಗಳೇ ನಡೆಯಬೇಕೇ ! ಇಷ್ಟೆಲ್ಲಾ ಸಂಕಷ್ಟಗಳ ನಡುವೆ ಕರ್ನಾಟಕವನ್ನು ಬರಪೀಡಿತ ರಾಜ್ಯ ಎಂದು ಪರಿಗಣಿಸಲಾಗಿದೆ. ನಿಜವೇ. ಬರಗಾಲ ತಾಂಡವಾಡುತ್ತಿದೆ. ಕಳೆದ ಎಂಟು ತಿಂಗಳಿಂದಲೂ ಈ ಸಮಸ್ಯೆ ಕಾಡುತ್ತಲೇ ಇದೆ. ಆದರೆ ನಮ್ಮ ಸರ್ಕಾರಗಳು ಎಚ್ಚೆತ್ತುಕೊಳ್ಳುವುದು ಕೊಂಚ ನಿಧಾನ. ರಾಜತಾಂತ್ರಿಕ ನೀತಿಗಳಲ್ಲಿ ಶ್ರೀ ಕೃಷ್ಣನಂತೆಯೇ ಇದ್ದರೂ ಕಾರ್ಯ ನಿರ್ವಹಿಸುವಲ್ಲಿ ಮಾತ್ರ ಕುಂಭಕರ್ಣನ ವಂಶದವರು. ಅಷ್ಟಕ್ಕೂ ಕರ್ನಾಟಕದಲ್ಲಿ ಅಧಿಕಾರರೂಢ ಪಕ್ಷವಾಗಿರುವ ಬಿಜೆಪಿ ನಾಯಕರಿಗೆ ರಾಜ್ಯದ ಜನತೆಯ ಬಗ್ಗೆ ಚಿಂತಿಸಲು ಸಮಯವೆಲ್ಲಿತ್ತು. ಯಡಿಯೂರಪ್ಪ-ಸದಾನಂದಗೌಡ-ಈಶ್ವರಪ್ಪ-ಅನಂತಕುಮಾರ್ ಅವರ ಚತುಷ್ಟಯ ಸಂಘರ್ಷದಲ್ಲಿ ಪ್ರಜೆಗಳಿಗೆ ಅಸ್ತಿತ್ವವೇ ಇರಲಿಲ್ಲ. ರಾಜ್ಯವನ್ನು ಹೇಗೆ ಆಳಬೇಕು ಎನ್ನುವುದಕ್ಕಿಂತಲೂ ಯಾರು ಆಳಬೇಕು ಎಂಬುದೇ ಪ್ರಧಾನ ಚಚರ್ೆಯ ವಿಷಯವಾದಾಗ ರಾಜ್ಯದ ಜನತೆಯ ಹಿತಾಸಕ್ತಿ ಸ್ವಾಭಾವಿಕವಾಗಿ ಅವಗಣನೆಗೊಳಗಾಗುತ್ತದೆ. ನಮ್ಮ ರಾಜಕೀಯ ಪಕ್ಷಗಳಿಗೆ, ವಿಶೇಷವಾಗಿ ಪಾರ್ಟಿ ವಿದ್ ಡಿಫರೆನ್ಸ್, ಬಿಜೆಪಿಗೆ ಆಳ್ವಿಕೆ ನಡೆಸುವುದು ಎಂದರೆ ತಮ್ಮ ಪಕ್ಷದ ಹಿತಾಸಕ್ತಿಯನ್ನು ಕಾಪಾಡುವುದೇ ಹೊರತು, ಪ್ರಜೆಗಳ ಹಿತಾಸಕ್ತಿಯನ್ನಲ್ಲ. ಹಾಗಾಗಿ ತಮ್ಮ ಪಕ್ಷದಲ್ಲಿ ಉಂಟಾಗಿದ್ದ ಭೀಕರ ಕ್ಷಾಮವನ್ನು ಹೋಗಲಾಡಿಸುವುದರಲ್ಲೇ ಬಿಜೆಪಿ ನಾಯಕರು ನಿರತರಾಗಿದ್ದರು. ಸರ್ಕಾರ ಎಷ್ಟು ನಿಷ್ಕ್ರಿಯವಾಗಿತ್ತೆಂದರೆ ಮಂಗಳೂರಿನಲ್ಲಿ ಮಹಿಳೆಯರ ಮೇಲೆ ಪುಂಡ ಪೋಕರಿಗಳು ದೌರ್ಜನ್ಯ ನಡೆಸುತ್ತಿದ್ದರೂ ಕೇಳುವವರೇ ಇರಲಿಲ್ಲ. ಮಾಧ್ಯಮಗಳಲ್ಲಿ ಪ್ರಸಾರವಾದ ಮೇಲೆಯೇ ಕುಂಭಕರ್ಣರು ಎಚ್ಚರಗೊಂಡಿದ್ದು. ರಾಜ್ಯದಲ್ಲಿ ಬರಗಾಲ ಇದೆಯೋ ಇಲ್ಲವೋ, ಕಳೆದ ಒಂದು ವರ್ಷದಲ್ಲಿ ರಾಜ್ಯ ರಾಜಕಾರಣದಲ್ಲಂತೂ ಕ್ಷಾಮ ತಲೆದೋರಿರುವುದು ಸತ್ಯ. ರಾಜಕೀಯ ಎಂಬ ಫಲವತ್ತಾದ ಕ್ಷೇತ್ರದಲ್ಲಿ ಎಲ್ಲವೂ ನಾಶವಾಗಿದೆ. ಮೌಲ್ಯ, ಶ್ರದ್ಧೆ, ಬದ್ಧತೆ, ಪ್ರಾಮಾಣಿಕತೆ, ಪಾರದರ್ಶಕತೆ, ಸತ್ಯಸಂಧತೆ, ಸಂವಿಧಾನಬದ್ಧತೆ, ಪ್ರಜಾತಂತ್ರ ಮೌಲ್ಯಗಳು, ಮಾನವೀಯ ಮೌಲ್ಯಗಳು ಹೀಗೆ ಒಂದು ಸುಭಿಕ್ಷ ಸಮಾಜವನ್ನು ನಿಮರ್ಿಸಲು ಬೇಕಾದ ಯಾವುದೇ ಪರಿಕರಗಳೂ ಉಳಿದಿಲ್ಲ . ಇಂತಹ ಭೀಕರ ಬರಗಾಲ ಬಿಜೆಪಿಯನ್ನು ಕಾಡುತ್ತಿದೆ. ಈ ಬರಗಾಲದ ನಡುವೆಯೇ, ದುರ್ಭಿಕ್ಷದಲ್ಲಿ ಅಧಿಕಮಾಸ ಎಂಬಂತೆ, ಪಕ್ಷದಲ್ಲಿ ನಾಯಕತ್ವಕ್ಕಾಗಿ ನಡೆದ ಸಂಘರ್ಷ ಪಕ್ಷವನ್ನು ಸಾರ್ವಜನಿಕವಾಗಿ ಬೆತ್ತಲೆಯಾಗಿಸಿದೆ. ಹೀಗೆ ಬೆತ್ತಲೆಯಾದ ನಾಯಕ ಶಿಖಾಮಣಿಗಳೇ ಈಗ ಮೂರೂ ದಿಕ್ಕಿನಿಂದ ರಾಜ್ಯ ಪ್ರವಾಸ ಕೈಗೊಂಡು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರಂತೆ. ಇಬ್ಬರು ಮಾಜಿ ಸಿಎಂಗಳು ತಮ್ಮ ಬರಪೀಡಿದ ರಾಜಕೀಯ ಭವಿಷ್ಯವನ್ನು ಹಸನುಗೊಳಿಸಲು ಫಲವತ್ತಾದ ಭೂಮಿ(ಕೆ)ಯನ್ನು ಅರಸಿ ಹೊರಟಿದ್ದಾರೆ. ಇಲ್ಲಿ ಮುಂದಿನ ಚುನಾವಣೆಗಳಲ್ಲಿ ಉತ್ತಮ ಫಸಲು ಪಡೆಯಲು ಜಾತಿಯೇ ಹೈಬ್ರಿಡ್ ಬೀಜ. ಈ ಬೀಜವನ್ನು ಬಿತ್ತುವ ಉದ್ದೇಶದಿಂದಲೇ ಬರ ಪೀಡಿತ ಜಿಲ್ಲೆಗಳ ಪ್ರವಾಸ. ಗೌಲಿಂಕು (ಅಂದರೆ ಗೌಡ ಲಿಂಗಾಯತ ಕುರುಬ) ಸೂತ್ರವನ್ನಾಧರಿಸಿ ಅಧಿಕಾರದ ಗದ್ದುಗೆಯ ಮೇಲೆ ಸೂತ್ರದ ಬೊಂಬೆಗಳನ್ನು ಕೂಡಿಸುವ ಬಿಜೆಪಿಗೆ ತನ್ನ ರಾಜಕೀಯ ಭವಿಷ್ಯದಲ್ಲಿ ನಂಬಿಕೆ ಎಷ್ಟು ಕ್ಷೀಣಿಸಿದೆ ಎಂದರೆ ಇಡೀ ಶಾಸಕರ ಪಡೆಯನ್ನೇ ಪ್ರವಾಸ ಕಳುಹಿಸಲೂ ಸಿದ್ಧವಾಗಿದೆ. ಇಷ್ಟಕ್ಕೂ ಬರಗಾಲ ಸಮೀಕ್ಷೆಗೆ ಪ್ರವಾಸ ಹೊರಡುವ ನಮ್ಮ ಜ(ಧ)ನ ಪ್ರತಿನಿಧಿಗಳು ತಮ್ಮ ಖಚರ್ುಗಳನ್ನು ಕಡಿಮೆ ಮಾಡುತ್ತಾರೆಯೇ ? ಹೆಲಿಕಾಪ್ಟರ್ ಪಯಣ, ಗೂಟದ ಕಾರುಗಳು, ಹಿಂದೆ ಮುಂದೆ ಹತ್ತು ಹಲವಾರು ರಕ್ಷಣಾ ಸಿಬ್ಬಂದಿಯ ವಾಹನಗಳು, ಪ್ರತಿಯೊಂದು ಊರಿನಲ್ಲೂ ತಂಗಲು ವ್ಯವಸ್ಥೆ. ಅಲ್ಲಿ ಸಕರ್ಾರದ (ಅಂದರೆ ಪ್ರಜೆಗಳ ) ಹಣದಿಂದಲೇ ಇವರಿಗೆ ಆದರಾತಿಥ್ಯ. ಇವೆಲ್ಲವೂ ಬೇಕಿತ್ತೇ ?

ಬರಗಾಲದಿಂದ ರಾಜ್ಯದ ಜನತೆ ಪಡುತ್ತಿರುವ ಬವಣೆಯನ್ನು ತಿಳಿಯಲು ಅಂಕಿಅಂಶಗಳು ಮಾತ್ರ ಸಾಲದು. ಸಂವೇದನೆಯೂ ಇರಬೇಕು. ಮಾನವೀಯ ಸ್ಪರ್ಶವೂ ಇರಬೇಕು. ಇಲ್ಲವಾದರೆ ಹಸಿದ ಹೊಟ್ಟೆಯ ಮೇಲೆ ನಾಲ್ಕು ಕಾಸನ್ನು ಇರಿಸಿ ಸಾಧನೆಯ ಬೆನ್ನೇರುವ ಜನಪ್ರತಿನಿಧಿಗಳಿಗೆ ಸಾರ್ವಭೌಮ ಪ್ರಜೆಗಳ ಸಂಕಷ್ಟಗಳು ಅರಿವಾಗುವುದೇ ಇಲ್ಲ. ಆಗ ಇಡೀ ಬರಸಮೀಕ್ಷೆ ಒಂದು ನಾಟಕೀಯ ಪ್ರಹಸನವಾಗಿಬಿಡುತ್ತದೆ. ರಾಜ್ಯದಲ್ಲಿ ಈಗ ನಡೆಯುತ್ತಿರುವುದೂ ಇದೇ ಆಗಿದೆ. ಮೂರೂ ಪಕ್ಷಗಳಿಗೆ ಜನರ ನಾಡಿ ಮಿಡಿತವನ್ನು ಹಿಡಿಯಲಾಗುತ್ತಿಲ್ಲ. ದಿಕ್ಕು ತೋಚುತ್ತಿಲ್ಲ. ಭ್ರಷ್ಟಾಚಾರದ ಕಡಲಲ್ಲಿ ಮುಳುಗಿರುವ ಬಿಜೆಪಿ ಸಕರ್ಾರವನ್ನು ನೇರವಾಗಿ ಸ್ವೀಕರಿಸಿ ಸವಾಲೆಸೆಯುವ ಸಾಮಥ್ರ್ಯವನ್ನು ಕಾಂಗ್ರೆಸ್ ಪಕ್ಷ ಕಳೆದುಕೊಂಡುಬಿಟ್ಟಿದೆ. ಎರಡು ಭ್ರಷ್ಟಾತಿಭ್ರಷ್ಟ ಪಕ್ಷಗಳು ಕಾಳಗ ನಡೆಸುತ್ತಿರುವಾಗ ಜೆಡಿಎಸ್ ತನ್ನ ಅಸ್ತಿತ್ವವನ್ನು ರೂಪಿಸಿಕೊಳ್ಳಲು ಯತ್ನಿಸುತ್ತಿದೆ. ಆದರೆ ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಎಂಬ ಪೆಡಂಭೂತವನ್ನು ಸೃಷ್ಟಿಸಿದ ಶಕ್ತಿ ಯಾವುದೆಂದು ಜನತೆಗೆ ತಿಳಿದಿದೆ. ತಮ್ಮ ತಮ್ಮ ರಾಜಕೀಯ ನೆಲೆಗಳನ್ನು ಗುರುತಿಸಿ, ಜನರನ್ನು ಆಕರ್ಷಿಸಿ ಮುಂಬರುವ ಚುನಾವಣೆಗಳಲ್ಲಿ ಮತ ಗಳಿಸಲು ಹರಸಾಹಸ ಮಾಡುತ್ತಿರುವ ಜಾತ್ಯಾತೀತ ವ್ಯವಸ್ಥೆಯ ಜಾತ್ಯಾಧಾರಿತ ಪಕ್ಷಗಳೇ ಬರಪೀಡಿತವಾಗಿರುವುದು ಕರ್ನಾಟಕದ ದುರ್ದೈವ . ಈ ಪಕ್ಷಗಳನ್ನೇ ನಂಬಿ ಬಾಳಬೇಕಾದ ಕರ್ನಾಟಕದ ಜನತೆ ಶಾಶ್ವತ ಬರಪೀಡಿತರಾಗಿದ್ದಾರೆ. ಬರಗಾಲದ ರಾಜಕಾರಣ ಈ ದೇಶದ ರಾಜಕೀಯ ಮೌಲ್ಯಗಳನ್ನೇ ಭೂಗತಮಾಡಿರುವುದು ಸುಳ್ಳೇನಲ್ಲ. ಕನರ್ಾಟಕದಲ್ಲಿ ಇದರ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಗುತ್ತಿದೆ.  ]]>

‍ಲೇಖಕರು G

August 30, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ನಾ ದಿವಾಕರ ನಮ್ಮ ಸುತ್ತಲಿನ ನಾಗರಿಕ ಸಮಾಜದಲ್ಲಿ ಸಂವೇದನೆ ಕ್ಷೀಣಿಸುತ್ತ್ತಿದೆ ಎಂದು ಹಲವು ಬಾರಿ ಭಾಸವಾಗುತ್ತದೆ. ಇನ್ನೂ ಕೆಲವೊಮ್ಮೆ ನಮ್ಮ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This