ನಾ ದಿವಾಕರ್ ನೇರ ನುಡಿ : ಸಾಮಾಜಿಕ ಚಳುವಳಿಗಳು

ಆತ್ಮಾವಲೋಕನದ ಛಾಯೆಯಲ್ಲಿ

ನಾ ದಿವಾಕರ್

ಸಾಮಾಜಿಕ ಅಸಮಾನತೆ, ತಾರತಮ್ಯ, ದೌರ್ಜನ್ಯ ಮತ್ತು ಹಿಂಸೆ ಯಾವ ಸಮಾಜದಲ್ಲಿ ಅಡಕವಾಗಿರುವುದೋ ಅಂತಹ ಸಮಾಜದ ಬೆಳವಣಿಗೆಯುದ್ದಕ್ಕೂ ಸಿಟ್ಟು, ಆಕ್ರೋಶ, ಹತಾಶೆ, ಭ್ರಮನಿರಸನಗಳು ಪ್ರಕಟಗೊಳ್ಳುತ್ತಲೇ ಇರುತ್ತವೆ. ಪಾರಂಪರಾನುಗತವಾಗಿ ಬೆಳೆದು ಬಂದ ಅಸಮಾನತೆಯ ಒಂದು ವ್ಯವಸ್ಥೆಯಲ್ಲಿ ಇಂತಹ ಆಕ್ರೋಶಗಳು ಜನಸಮೂಹಗಳ ದನಿಯಾಗಿ ಕೇಳಿಬರುವುದೂ ಅಷ್ಟೇ ಸಹಜ. ಈ ದನಿಗಳಿಗೆ ಇಂತಹುದೇ ನಿದರ್ಿಷ್ಟ ಸ್ವರೂಪ, ವ್ಯಾಪ್ತಿ ಅಥವಾ ಆಯಾಮಗಳಿರುವುದಿಲ್ಲ. ಕಾಲಕಾಲಕ್ಕೆ ಸಂಭವಿಸುವ ಸಾಮಾಜಿಕ ಘಟನೆಗಳಿಗೆ ಪ್ರತಿಸ್ಪಂದಕವಾಗಿ ರೂಪುಗೊಳ್ಳುವ ಪ್ರತಿಭಟನೆಯ ದನಿಗಳು ಕಾಲಕ್ರಮೇಣ ಒಂದು ಸಮೂಹ ಸನ್ನಿಯಂತೆ ಪರಿವತರ್ಿತವಾಗಿ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಪ್ರಯತ್ನಿಸುತ್ತಿರುತ್ತವೆ. ಈ ನಿಟ್ಟಿನಲ್ಲಿ ಮುಗಿಲು ಮುಟ್ಟುವ ದನಿಗಳು ಕೆಲವೇ ಕ್ಷಣಗಳಲ್ಲಿ ಭೂಗತವಾದರೂ ಅಚ್ಚರಿಯೇನಿಲ್ಲ. ಅಥವಾ ಶಾಶ್ವತವಾಗಿ ಜನಸಮುದಾಯಗಳ ನಡುವೆ ಉಳಿದು ಹೋದರೂ ಹೆಚ್ಚೇನಲ್ಲ. ಶ್ರೇಣೀಕೃತ ಜಾತಿ ವ್ಯವಸ್ಥೆಯ ಸುಭದ್ರ ಅಡಿಪಾಯದ ಮೇಲೆ ನಿಮರ್ಿತವಾಗಿರುವ ಭಾರತದಂತಹ ದೇಶದಲ್ಲಿ ಸಾಮಾಜಿಕ ದೌರ್ಜನ್ಯ ಮತ್ತು ತಾರತಮ್ಯಗಳೂ ಸಹ ಒಂದು ನಿದರ್ಿಷ್ಟ ಆಯಾಮವನ್ನು ಹೊಂದಿರುತ್ತವೆ. ಜಾತಿ, ಅಂತಸ್ತು, ಭಾಷೆ, ಧರ್ಮ ಮತ್ತು ಪ್ರಾಂತೀಯ ಭಾವನೆಗಳು ಇಲ್ಲಿ ಮಾನವ ಜನಾಂಗವನ್ನು ಬೆಸೆಯುವ ಸರಪಣಿಗೆ ಕೊಂಡಿಗಳಾಗಿ ಕಾರ್ಯ ನಿರ್ವಹಿಸುತ್ತವೆ. ಹಾಗಾಗಿ ಭಾರತೀಯ ಸಮಾಜದ ಅಂತಃಸತ್ವವನ್ನು ಗ್ರಹಿಸುವ ಅಥವಾ ಒರೆ ಹಚ್ಚಿ ನೋಡುವ ಸಂದರ್ಭದಲ್ಲಿ ಜನಸಮುದಾಯಗಳ ನಡುವೆ ಉದ್ಭವಿಸುವ ಸಾಮಾಜಿಕ ಚಳುವಳಿಗಳನ್ನು ನಿರ್ಲಕ್ಷಿಸಿ ಮುನ್ನಡೆಯಲಾಗುವುದಿಲ್ಲ. ಸಮಕಾಲೀನ ಭಾರತದ ಇತಿಹಾಸದಲ್ಲಿ ಸಾಮಾಜಿಕ ಚಳುವಳಿಗಳನ್ನು ಸ್ವಾತಂತ್ರ್ಯಪೂರ್ವ ಅವಧಿಯಿಂದ ಗುರುತಿಸಬಹುದಾದರೂ, ಸಮಗ್ರ ಇತಿಹಾಸದ ಅವಲೋಕನ ಮಾಡಿದಾಗ ಇಲ್ಲಿನ ಸಾಮಾಜಿಕ ಚಳುವಳಿಗಳ ಪರಿಕಲ್ಪನೆ ಕ್ರಿ ಪೂ 7ನೆಯ ಶತಮಾನಕ್ಕೂ ಹಿಂದೆ ಸಾಗುತ್ತದೆ. ವೈದಿಕ ಸಾಮ್ರಾಜ್ಯದ ಸಂಹಿತೆಗಳನ್ನು, ರೀತಿ ನೀತಿಗಳನ್ನು ಧಿಕ್ಕರಿಸಿ ಜನಸಮುದಾಯಗಳ ಅಸ್ಮಿತೆಗಳಿಗೆ ಒಂದು ನಿದರ್ಿಷ್ಟ ಸ್ವರೂಪ ನೀಡುವ ಪ್ರಯತ್ನ ಬೌದ್ಧ, ಜೈನ ಧರ್ಮಗಳಲ್ಲಿ, ಚಾವರ್ಾಕ ಸಿದ್ಧಾಂತಗಳಲ್ಲಿ ವ್ಯಕ್ತವಾಗುತ್ತದೆ. ಅಂದಿನಿಂದ ಇಂದಿನವರೆಗೂ 27 ಶತಮಾನಗಳಲ್ಲಿ ಭರತ ಭೂಮಿ ಅಸಂಖ್ಯಾತ ಚಳುವಳಿಗಳನ್ನು , ಪ್ರತಿಭಟನೆಯ ದನಿಗಳನ್ನು ಕಂಡಿದೆ. ಈ ಎಲ್ಲಾ ದನಿಗಳನ್ನು ಒಂದುಗೂಡಿಸುವ, ಒಂದೇ ಕಕ್ಷೆಯಲ್ಲಿ ತಂದು ನಿಲ್ಲಿಸುವ ಒಂದು ಧೋರಣೆ ಎಂದರೆ ಭಾರತೀಯ ಸಮಾಜವನ್ನು ತನ್ನ ಕಬಂಧ ಬಾಹುಗಳಲ್ಲಿ ಬಂಧಿಸಿರುವ ಜಾತಿ ವ್ಯವಸ್ಥೆಯ ವಿರೋಧ ಮತ್ತು ಈ ವ್ಯವಸ್ಥೆಯ ಮೂಲ ಆಧಾರಸ್ತಂಭವಾದ ಬ್ರಾಹ್ಮಣಶಾಹಿಯ ವಿರೋಧ. ಈ ಚೌಕಟ್ಟಿನಿಂದ ಆಚೆಗಿನ ಯಾವುದೇ ಚಳುವಳಿಯೂ ಅರ್ಧಸತ್ಯವಾಗಿಯೇ ಕಾಣುತ್ತವೆ. ಶುಷ್ಕವಾಗಿಯೇ ಕಾಣುತ್ತದೆ. ಭಾರತೀಯ ಸಮಾಜದ ಒಳ ಹೊರಹುಗಳನ್ನು ಗ್ರಹಿಸಲು ಈ ಧೋರಣೆ ಬಹಳ ಮುಖ್ಯವಾಗುತ್ತದೆ. ಹಾಗಾಗಿಯೇ ಸಾಮಾಜಿಕ ಚಳುವಳಿಗಳೆಂದಾಕ್ಷಣ ನಮ್ಮ ಗಮನ ಬೌದ್ಧ , ಜೈನ ಧರ್ಮಗಳತ್ತ ಸಾಗುತ್ತವೆ. ನಂತರ ಚಾವರ್ಾಕ, ಸಾಂಖ್ಯ ಸಿದ್ಧಾಂತಗಳೆಡೆಗೆ ವಾಲುತ್ತವೆ. ತದನಂತರದಲ್ಲಿ ದಾಸಪರಂಪರೆ, ಅವೈದಿಕ ತತ್ವಗಳನ್ನು ಪ್ರಚುರಪಡಿಸಿದ ತತ್ವಜ್ಞಾನಿಗಳ ಪರಂಪರೆ, ಸೂಫಿ ಪರಂಪರೆ ಹೀಗೆ ಇತಿಹಾಸದುದ್ದಕ್ಕೂ ಪ್ರತಿರೋಧದ ದನಿಗಳನ್ನು ಗುರುತಿಸಬಲ್ಲ ಮೈಲಿಗಲ್ಲುಗಳು ಕಾಣುತ್ತಲೇ ಬರುತ್ತವೆ. ಕನರ್ಾಟಕದ ಸಂದರ್ಭದಲ್ಲಿ ಬಸವಣ್ಣನವರ ವಚನ ಕ್ರಾಂತಿ ಮತ್ತು ದಾಸಪರಂಪರೆಗಳು ಪ್ರಧಾನವಾಗಿ ಕಾಣುತ್ತವೆ. ಆಧುನಿಕ ಇತಿಹಾಸವನ್ನು ಪರಿಗಣಿಸುವಾಗ ಮಹಾತ್ಮ ಫೂಲೆ ಮತ್ತು ಅಂಬೇಡ್ಕರ್, ಪೆರಿಯಾರ್ ಚಳುವಳಿಗಳು ಎದುರಾಗುತ್ತವೆ. ಸಮಕಾಲೀನ ಸಂದರ್ಭದಲ್ಲಿ ದಲಿತ ಚಳುವಳಿಗಳು ಪ್ರಮುಖವಾಗಿ ಎದುರಾಗುತ್ತವೆ. ಮೇಲೆ ಹೇಳಿದಂತೆ ಈ ಎಲ್ಲಾ ಚಳುವಳಿಗಳ ಆಶಯ ಮತ್ತು ಧ್ಯೆಯೋದ್ದೇಶಗಳು ಒಂದೇ ಆದರೂ ವಿಭಿನ್ನ ಕಾಲಘಟ್ಟಗಳಲ್ಲಿ ಭಾರತೀಯ ಸಾಮಾಜಿಕ ಸ್ಥಿತ್ಯಂತರಗಳಿಗೆ ತಮ್ಮದೇ ಆದ ರೀತಿಯಲ್ಲಿ ಸ್ಪಂದಿಸಿರುವುದನ್ನು ನಾವು ಕಾಣಬಹುದು. ಈ ಚಳುವಳಿಗಳ ಸಾಫಲ್ಯ ವೈಫಲ್ಯಗಳು ಏನೇ ಇರಲಿ, ಜನಸಮುದಾಯಗಳಲ್ಲಿ ಈ ಆಂದೋಲನಗಳು ಮೂಡಿಸಿರುವ ಹೆಜ್ಜೆ ಗುರುತುಗಳು, ಹೊತ್ತಿಸಿದ ಕಿಡಿಗಳು ಇಂದಿನವರೆಗೂ ನಂದಿಲ್ಲ ಎನ್ನುವುದೇ ಹೆಗ್ಗಳಿಕೆಯ ವಿಚಾರ. ಇದು ಯಾವುದೇ ವ್ಯಕ್ತಿ, ಸಿದ್ಧಾಂತ ಅಥವಾ ಸಂಘಟನೆಗೆ ಸಲ್ಲುವ ಗೌರವವಲ್ಲ, ಜಾತಿ ವ್ಯವಸ್ಥೆಯ ದೌರ್ಜನ್ಯವನ್ನು ಶತಮಾನಗಳ ಕಾಲದಿಂದಲೂ ಸಹಿಸಿಕೊಂಡು ಬಂದಿದ್ದು ಇಂದಿಗೂ ಅನುಭವಿಸುತ್ತಿದ್ದರೂ ತಮ್ಮ ಪ್ರತಿರೋಧದ ದನಿಗಳನ್ನು ಕಾಪಾಡಿಕೊಂಡು ಬಂದಿರುವ ಶೋಷಿತ ಜನಸಮುದಾಯಗಳಿಗೆ ಸಲ್ಲುವ ಗೌರವ.

ಕಳೆದ ನಾಲ್ಕು ದಶಕಗಳಿಂದ ಕನರ್ಾಟಕದ ದಲಿತ ಚಳುವಳಿಯ ಒಂದು ಭಾಗವಾಗಿ ತಮ್ಮನ್ನು ತೊಡಗಿಸಿಕೊಂಡು 20ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಡಾ. ಮುನಿವೆಂಕಟಪ್ಪ ತಮ್ಮ ಸಾಮಾಜಿಕ ಚಳುವಳಿಗಳು (ವಾಣಿ ಪ್ರಕಾಶನ ಮೈಸೂರು) ಕೃತಿಯಲ್ಲಿ ಕನರ್ಾಟಕದ-ಭಾರತದ ವಿಭಿನ್ನ ಕಾಲಘಟ್ಟಗಳ ಸಾಮಾಜಿಕ ಚಳುವಳಿಗಳನ್ನು ವಾಸ್ತವಗಳಿಗೆ ಒರೆ ಹಚ್ಚಿ ನೋಡಲು ಯತ್ನಿಸಿದ್ದಾರೆ. ಈ ಕೃತಿಯ ಬಹುತೇಕ ಲೇಖನಗಳು ದಲಿತ ಚಳುವಳಿಗಳನ್ನೇ ಕೇಂದ್ರೀಕರಿಸಿದ್ದರೂ, ಜಾಗತೀಕರಣ, ಮಿಸಲಾತಿ, ಮತಾಂತರ ಮತ್ತು ಅಂಬೇಡ್ಕರ್ ದೃಷ್ಟಿಕೋನದ ಕಾಮರ್ಿಕ ಚಳುವಳಿಗಳನ್ನೂ ವಿಶ್ಲೇಷಿಸಲಾಗಿದೆ. ಚಾರಿತ್ರಿಕ ಹಿನ್ನೆಲೆಯಲ್ಲಿ ವಚನ ಚಳುವಳಿ ಮತ್ತು ಬಸವಣ್ಣನವರ ಕ್ರಾಂತಿಯನ್ನೂ ವಿಶ್ಲೇಷಿಸಲಾಗಿದೆ. ಕೃತಿಯಲ್ಲಿನ ಬಹುಪಾಲು ಲೇಖನಗಳಲ್ಲಿ ಕಂಡುಬರುವ ಸಮಾನ ಅಂಶವೆಂದರೆ ಈ ಚಳುವಳಿಗಳ ವಿಘಟನೆಯ ಹಿಂದೆ ಲೇಖಕರಲ್ಲಿ ಅಡಗಿರುವ ವಿಷಾದ, ಕೆಲವು ನಾಯಕರ ಬಗ್ಗೆ ಇರುವ ಆಕ್ರೋಶ ಮತ್ತು ನಾಯಕರ ತಪ್ಪು ನಡೆಗಳ ಬಗ್ಗೆ ಇರುವ ನಿಷ್ಠುರವಾದ , ಮೊನಚಾದ ಮಾತುಗಳು. ಕೃತಿಯ ಮುನ್ನುಡಿಯಲ್ಲಿ ಡಾ. ಇಂದಿರಾ ಅವರು ಹೇಳಿರುವಂತೆ ಲೇಖಕರು ಜಾತಿ-ಲಿಂಗ-ವರ್ಗ ಆಧಾರಿತ ಅಸಮಾನತೆಗಳ ವಿರುದ್ಧ ಧ್ವನಿ ಎತ್ತಿದ ಎಲ್ಲ ಚಳುವಳಿಗಳ ಬಗ್ಗೆಯೂ ವಿಶ್ಲೇಷಣೆ ಮಾಡಿದ್ದಾರೆ. ಈ ಎಲ್ಲ ಚಳುವಳಿಗಳೂ ಸಹ ಇಂದು ಕವಲು ಹಾದಿಯಲ್ಲಿ ನಿಂತಿರುವ ಹಿನ್ನೆಲೆಯಲ್ಲಿ ಆಂದೋಲನಗಳ ವೈಫಲ್ಯ, ಹಿನ್ನಡೆ ಮತ್ತು ಸಾರ್ಥಕತೆಯ ಬಗ್ಗೆ ಭ್ರಮನಿರಸನವಾಗಿರುವುದನ್ನು ಲೇಖಕರ ಆಕ್ರೋಶದ ನುಡಿಗಳಲ್ಲಿ ಕಾಣಬಹುದು. ಇದು ಅಪೇಕ್ಷಣೀಯವಲ್ಲವಾದರೂ ಅಸಹಜವಂತೂ ಅಲ್ಲ. ಕಾರಣ ಕನರ್ಾಟಕದ ಸಂದರ್ಭದಲ್ಲಿ ದಲಿತ ಚಳುವಳಿಗಳ ವಿಘಟನೆ ಜಾತಿಪ್ರಜ್ಞೆ ಮತ್ತು ಜಾತಿ ವ್ಯವಸ್ಥೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಸಹಕಾರಿಯಾಗಿವೆ.

ವಚನ ಚಳುವಳಿ ಮತ್ತು ಅಂಬೇಡ್ಕರ್ವಾದದ ಮೂಲಕ ಭಾರತದ ಸಾಮಾಜಿಕ ಚಳುವಳಿಗಳ ಮೂಲ ಆಶಯಗಳನ್ನು ಸ್ಪಷ್ಟವಾಗಿ ವಿಷದಪಡಿಸುವ ಲೇಖಕರು, ಎಷ್ಟೇ ವೈಫಲ್ಯಗಳಿದ್ದರೂ, ವೈರುಧ್ಯಗಳನ್ನು ಎದುರಿಸಿದ್ದರೂ, ಎಷ್ಟೇ ಸೈದ್ಧಾಂತಿಕ ಹಿನ್ನಡೆ ಅನುಭವಿಸಿದ್ದರೂ ಭಾರತದ ಸಾಮಾಜಿಕ ಚಳುವಳಿಗಳ ಸಾಲಿನಲ್ಲಿ ತಮ್ಮದೇ ಆದ ಕೊಡುಗೆ ಸಲ್ಲಿಸಿರುವ ಎಡಪಂಥೀಯ ಚಳುವಳಿಗಳ ಬಗ್ಗೆ ನಿರ್ಲಕ್ಷ್ಯ, ನಿಷ್ಕಾಳಜಿ ಮತ್ತು ಋಣಾತ್ಮಕ ಧೋರಣೆ ತಾಳಿರುವುದು ಎದ್ದು ಕಾಣುತ್ತದೆ. ಎಡಪಂಥೀಯರೆಂದರೆ ಕೇವಲ ಕಮ್ಯುನಿಸ್ಟ್ ಪಕ್ಷಗಳಲ್ಲ, ಪಕ್ಷದಿಂದ ಹೊರತಾದ ಎಡಪಂಥೀಯ ಚಿಂತಕರೂ ಇದ್ದು, ಸಾಮಾಜಿಕ ಚಳುವಳಿಯ ಸಂದರ್ಭದಲ್ಲಿ ತಮ್ಮದೇ ಆದ ಸಕಾರಾತ್ಮಕ ಕೊಡುಗೆ ಸಲ್ಲಿಸಿರುವುದನ್ನು ಅಲ್ಲಗಳೆಯುವಂತಿಲ್ಲ. ಒಂದು ಸಂದರ್ಭದಲ್ಲಿ ಡಿಎಸ್ಎಸ್ ವಿಘಟನೆಗೆ ಎಡ ಪಂಥೀಯ ಮತ್ತು ಮೇಲ್ಜಾತಿ ಹಿಂದೂಗಳು ಕಾರಣ ಎಂದು ನೇರವಾಗಿ ಆರೋಪಿಸುವುದೂ ಉಂಟು. (ಪು. 11 ಸಾಮಾಜಿಕ ಚಳುವಳಿಗಳು). ಇಂತಹ ವಿರೋಧಾಭಾಸದ ಹೇಳಿಕೆಗಳು ಅಲ್ಲಲ್ಲಿ ವ್ಯಕ್ತವಾಗಿರುವುದು ಕಾಣುತ್ತದೆ. ಯಾವುದೇ ಒಂದು ಸಾಮಾಜಿಕ ಚಳುವಳಿಯ ಸಾಫಲ್ಯ ವೈಫಲ್ಯಗಳಿಗೆ ಆಯಾ ಕಾಲಘಟ್ಟದ ಸಾಮಾಜಿಕ-ಆಥರ್ಿಕ-ಸಾಂಸ್ಕೃತಿಕ ಆಯಾಮಗಳು ಎಷ್ಟು ಕಾರಣವೋ ಅಷ್ಟೇ ಮಟ್ಟಿಗೆ ಸಂಘಟನೆಗಳ ಸೈದ್ಧಾಂತಿಕ ತಳಹದಿಯೂ ಕಾರಣ ಎಂಬ ಅಂಶವನ್ನು ಲೇಖಕರು ಕಡೆಗಣಿಸಿದಂತಿದೆ. ಅಥವಾ ದಲಿತ ಸಮುದಾಯದ ಬಗ್ಗೆ ಇರುವ ಅತೀವ ಕಾಳಜಿಯಿಂದ ಮೂಡುವ ಆಕ್ರೋಶ ಈ ಅಂಶಗಳನ್ನು ಮರೆಸುತ್ತವೆಯೇನೋ ? ಈ ಕೆಲವು ಲೋಪಗಳ ನಡುವೆಯೂ ಮುನಿವೆಂಕಟಪ್ಪನವರ ಕೃತಿ ಅನೇಕ ಅಗೋಚರ ಸಂಗತಿಗಳನ್ನು ಬಿಚ್ಚಿಡುತ್ತವೆ. ಕನರ್ಾಟಕದ ಸಂದರ್ಭದಲ್ಲಿ ಸಾಮಾಜಿಕ ಚಳುವಳಿಗಳಲ್ಲಿನ ಒಳ ಹುಳುಕುಗಳನ್ನು ದಿಟ್ಟತನದಿಂದ ಹೊರಗೆಡಹುತ್ತಾರೆ. ಆದರೆ ಇಡೀ ದಲಿತ ಚಳುವಳಿಯ ಅವಲೋಕನ ಮಾಡಿದಾಗ ಈ ರೀತಿಯ ದೋಷಾರೋಪಣೆ ಬೃಹತ್ ಸ್ವರೂಪದಲ್ಲಿ ಎದ್ದು ಕಾಣುತ್ತದೆ. ದಲಿತ ಚಳುವಳಿಯ ವೈಫಲ್ಯಕ್ಕೆ ಇದೂ ಒಂದು ಕಾರಣ ಎನ್ನಲು ಅಡ್ಡಿಯಿಲ್ಲ. ಇಲ್ಲಿ ವ್ಯಕ್ತಿಗತ ಲೋಪಗಳ ಹಿಂದಿರುವ ಸಾಮಾಜಿಕ-ಸಾಂಸ್ಕೃತಿಕ ಅಥವಾ ಕೆಲವೊಮ್ಮೆ ಆಥರ್ಿಕ ಹಿನ್ನೆಲೆಯನ್ನು ಗ್ರಹಿಸುವುದು ಅತ್ಯವಶ್ಯ. ಕೃತಿಯಲ್ಲಿ ಈ ಅಂಶ ಕಂಡುಬರುವುದಿಲ್ಲ. ಕೃತಿಯಲ್ಲಿನ ಲೇಖನಗಳು ಒಂದೇ ಸರಪಳಿಯ ಕೊಂಡಿಗಳಂತೆ ಕಂಡುಬಂದರೂ, ವಿಭಿನ್ನ ಕಾಲಘಟ್ಟಗಳಲ್ಲಿ ಬರೆದಿರುವ ಲೇಖನಗಳಾದ್ದರಿಂದ ಆಯಾ ಸಂದರ್ಭದ ಹಿನ್ನೆಲೆಯೇ ಪ್ರಧಾನವಾಗಿ ಕಾಣುತ್ತದೆ. ಹಾಗಾಗಿ ಇಡೀ ಕೃತಿಯನ್ನು ಓದಿ ಮುಗಿಸಿದ ನಂತರ ಒಂದು ಸಮಗ್ರ ಚಿತ್ರಣ ಮೂಡುವುದು ಕಷ್ಟ. ಇದು ಅಪೇಕ್ಷಣೀಯವೂ ಅಲ್ಲ. ಆದರೆ ಕನರ್ಾಟಕದ ಬಹುತೇಕ ಜನಪರ ಚಳುವಳಿಗಳು ಕವಲು ಹಾದಿಯಲ್ಲಿ ನಿಂತು ತಮ್ಮ ಹೆಜ್ಜೆ ಗುರುತುಗಳನ್ನು ತಾವೇ ಕಂಡುಹಿಡಿಯದಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಇಂತಹ ಒಂದು ಕೃತಿ ಎಲ್ಲೋ ಒಂದು ಕಡೆ ಆತ್ಮಾವಲೋಕನಕ್ಕೆ ಎಡೆ ಮಾಡಿಕೊಡುತ್ತದೆ. ವ್ಯಕ್ತಿಗತ ನಿಂದೆ, ಆರೋಪಗಳನ್ನು ಬದಿಗಿರಿಸಿ, ಲೇಖಕರ ಮೂಲ ಆಶಯವಾದ ಸಾಮಾಜಿಕ ಚಳುವಳಿಗಳ ಸಾಫಲ್ಯದ ಬಗ್ಗೆ , ಸಾರ್ಥಕತೆಯ ಬಗ್ಗೆ ಚಿಂತಿಸಲು ಕೃತಿ ಸಾಕಷ್ಟು ಪರಿಕರಗಳನ್ನು ನೀಡುತ್ತದೆ. ದಲಿತ ಚಳುವಳಿ ಮತ್ತು ಸಾಹಿತ್ಯ ಲೋಕದ ಹಿರಿಯ ಲೇಖಕರಾಗಿ ಮುನಿವೆಂಕಟಪ್ಪ ಈ ಕೃತಿಯ ಮೂಲಕ ಮತ್ತೊಮ್ಮೆ ಬೆತ್ತ ಹಿಡಿದ ಶಿಕ್ಷಕರಂತೆ ಸಮಾಜವನ್ನು, ಚಳುವಳಿಗಳನ್ನು ಮತ್ತು ಯುವ ಪೀಳಿಗೆಯನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ.

ಕೃತಿ : ಸಾಮಾಜಿಕ ಚಳುವಳಿಗಳು

ಲೇ : ಡಾ. ವಿ. ಮುನಿವೆಂಕಟಪ್ಪ

ಪ್ರಕಟಣೆ : ವಾಣಿ ಪ್ರಕಾಶನ

ಬೆಲೆ ರೂ.165/-

 

]]>

‍ಲೇಖಕರು G

August 31, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ಒಂದು ಟೊಪ್ಪಿ, ಕುರುಚಲು ಗಡ್ಡ, ಕಾಣದ ಮನ

ನಾ ದಿವಾಕರ ನಮ್ಮ ಸುತ್ತಲಿನ ನಾಗರಿಕ ಸಮಾಜದಲ್ಲಿ ಸಂವೇದನೆ ಕ್ಷೀಣಿಸುತ್ತ್ತಿದೆ ಎಂದು ಹಲವು ಬಾರಿ ಭಾಸವಾಗುತ್ತದೆ. ಇನ್ನೂ ಕೆಲವೊಮ್ಮೆ ನಮ್ಮ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This