ನಿಜಕ್ಕೂ ಇದು ಸಸ್ಪೆನ್ಸ್ ಕಥೆ

‘ಸಿರಿ’ ಬಂದ ಕಾಲಕ್ಕೆ…

-ಮೃಗನಯನಿ

ನನ್ನಿಂದೇನು ತಪ್ಪಾಯಿತೆಂದು ನನಗಿನ್ನೂ ಸ್ಪಷ್ಟವಾಗಿಲ್ಲ. ತಪ್ಪು ಮಾಡಿರಲೇ ಬೇಕು ನಾನು, ಇಲ್ಲದಿದ್ದರೆ ಇವರೆಲ್ಲಾ ಇಷ್ಟು ಆಸಕ್ತಿವಹಿಸಿ ನನ್ನ ಕೇಸಿನ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ನನಗೆ ಈ ದಿನದಿಂದ ಸರಿಯಾಗಿ ಎರೆಡು ತಿಂಗಳಿಗೆ ಆಜೀವನ ಕಾರಾಗೃಹ ವಾಸ ಎಂದು ನಿರ್ಧಾರವಾಗಿದೆ. ನಿಜವಾದ ಶಿಕ್ಷೆಯಾಗುವ ಮುಂಚೆಯೇ ಅದರ ಕಲ್ಪನೆಗಳು ನಮ್ಮನ್ನು ಆವರಿಸಿಕೊಂಡು ತಿನ್ನುತ್ತವೆ ಎಂದು ಕೇಳಿದ್ದೆ. ಆದರೆ ಅದು ಹೀಗೆ ನನ್ನ ವಿಷಯದಲ್ಲೇ ಸತ್ಯವಾಗುತ್ತೆ ಎಂದು ತಿಳಿದಿರಲಿಲ್ಲ! ತಿಳಿದಿದ್ದರೂ ಏನುಮಾಡಬಹುದಿತ್ತು ತಪ್ಪಿಸಿಕೊಳ್ಳಲಂತೂ ಸಾಧ್ಯವಿಲ್ಲವಲ್ಲ! ದಿನದ ಇಪ್ಪತ್ನಾಲ್ಕು ಘಂಟೆಯೂ ಆಜೀವ ಪರ್ಯಂತ ನಡೆಸಬೇಕಾದ ಜೈಲು ವಾಸದ ಕಲ್ಪನೆಗಳು ಕಿತ್ತು ತಿನ್ನುತ್ತಿವೆ.. ಅದರ ಕಷ್ಟಗಳನ್ನು ನೆನೆ-ನೆನೆದು ಚಿಂತಾಕ್ರಾಂತನಾಗಿದ್ದೇನೆ.

ಇದೆಲ್ಲಾ ವ್ಯವಸ್ಥಿತವಾಗಿ ನನ್ನ ವಿರುದ್ಧ, ನನ್ನನ್ನು ಇದರಲ್ಲಿ ಸಿಕ್ಕಿಹಾಕಿಸಲು ಮಾಡಿದ ತಂತ್ರ ಎಂಬುದು, ಒಂದೊಂದಾಗಿ ಘಟನೆಗಳನ್ನು ಅವಲೋಕಿಸುತ್ತಾ ಹೋದ ಹಾಗೆ ತಿಳಿಯುತ್ತಿದೆ. ಸುಮಾರು ಐದಾರು ತಿಂಗಳಿಂದಲೇ ಇದೆಲ್ಲಾ ನಡೆಯುತ್ತಿತ್ತೇನೋ? ನನ್ನ ಕಣ್ಣೆದುರಿಗೆ ನಡೆಯುತ್ತಿದ್ದರೂ ಇದು ನನಗೆ ಶಿಕ್ಷೆಯಾಗಿ ಪರಿಣಮಿಸುತ್ತದೆ ಎಂಬ ಕಿಂಚಿತ್ ಅರಿವೂ ಇರಲಿಲ್ಲ. ಇದ್ದಿದ್ದರೆ ಹೀಗಾಗುವುದನ್ನು ಹೇಗಾದರೂ ತಪ್ಪಿಸುತ್ತಿದ್ದೆ.

img_5562

ದುಃಖದ ವಿಚಾರವೆಂದರೆ ನಾನು ಮಾಡ(ಡಿ)ದ ತಪ್ಪಿಗೆ ಸಾಕ್ಷಿಯಾಗಿ ಒಬ್ಬೊಬ್ಬರಾಗಿ ಬಂದು ಪುರಾವೆ ಒದಗಿಸಿದವೆರೆಲ್ಲಾ ನನಗೆ ತೀರ ಹತ್ತಿರದವರೇ. ಅಮ್ಮನ ಎದೆ ಹಾಲೇ ವಿಷವಾದರೆ ಕಾಯುವರಾರು ಹೇಳಿ? ಮೊದಲು ನನ್ನ ಬಗ್ಗೆ ಸಾಕ್ಷಿ ಹೇಳಿದವನು ಆ ದಲ್ಲಾಳಿಯೇ ಇರಬೇಕು! ಅವನೊಬ್ಬ ಹಣದ ಪಿಶಾಚಿ. ಹಣಕ್ಕೋಸ್ಕರ ಏನನ್ನೂ ಮಾಡಲು ಹೇಸದವ. ಅವನು ಹೇಳುವಾಗ ಅಲ್ಲಿ ನಾನಿರಲಿಲ್ಲ. ನಿಜ ಹೇಳಬೇಕೆಂದರೆ ಅವನು ಹಾಗೆ ಸಾಕ್ಷಿ ಹೇಳುತ್ತಿರುವ ಸಮಯಕ್ಕೆ ಸರಿಯಾಗಿ ಇಂಥ ಯಾವುದರ ಕಲ್ಪನೆಯೂ ಇಲ್ಲದೆ ನಾನು ಯಾವುದೋ ಪಬ್ಬಿನಲ್ಲಿ ಬಿಯರ್ ಕುಡಿಯುತ್ತಿದ್ದೆನೋ ಏನೋ. ಆಮೇಲೆ ಒಬ್ಬೊಬ್ಬರಾಗಿಯೇ ನನ್ನ ಮುಂದೆಯೇ ಕಿಂಚಿತ್ತೂ ಪಾಪ ಪ್ರಜ್ಞೆ ಇಲ್ಲದೆ ಬಂದು ಸಾಕ್ಷಿ ಹೇಳಿದರಲ್ಲ. ಅಪ್ಪ ಅಮ್ಮನೂ ಕೂಡ. ಹೇಳುವಾಗ ಎಂಥಾ ಖುಷಿ ಅವರ ಕಣ್ಗಳಲ್ಲಿ! ಇವರ ಸ್ವಂತ ಮಗನಾ ನಾನು ಎಂದು ಅನುಮಾನವಾಗುತ್ತಿದೆ. ಸ್ವಂತ ಮಗನೇ ಆಗಿದ್ದರೆ ಹೇಗೆ ಇಷ್ಟೊಂದು ನಿಷ್ಟುರತೆಯಿಂದ ನನ್ನ ಈ ಶಿಕ್ಷೆಗೆ ತಳ್ಳುತ್ತಿರಲಿಲ್ಲ! ಚಿಕ್ಕಂದಿನಿಂದಲೂ ನನ್ನೊಂದಿಗೆ ಚಿಕ್ಕ ಚಿಕ್ಕ ವಿಷಯಗಳಿಗೂ ಜಗಳ ಆಡುತ್ತಿದ್ದ ನನ್ನ ತಂಗಿಯಂತೂ ಅವತ್ತು ಸಾಕ್ಷಿ ಹೇಳುವ ಸಮಯದಲ್ಲಿ ಇಡೀ ಬಾಲ್ಯದ ಸಿಟ್ಟನ್ನೆಲ್ಲಾ ಕಾರಿಕೊಳ್ಳುವಂತೆ ಸಾಕ್ಷಿ ನುಡಿದಳು!

ನನ್ನ ಶಿಕ್ಷೆಯ ದಿನ ನಿಗದಿಯಾಗುತ್ತಿದ್ದಂತೆ ಇವರೆಲ್ಲರ ಖುಷಿ ಹೇಳತೀರದು. ತಮ್ಮ ಬಹುಕಾಲದ ಹೋರಾಟಕ್ಕೆ ಸಂದ ಪ್ರತಿಫಲದಂತೆ ಎಲ್ಲರೂ ಹರ್ಷಿಸಿದರು. ಹತ್ತಿರದವರಿಗೆಲ್ಲಾ ಫೋನು ಮಾಡಿ ತಿಳಿಸಿ ಸಂಭ್ರಮಿಸಿದರು. ಈ ಶಿಕ್ಷೆಯ ದಿನದ ಸಿದ್ಧತೆಯಲ್ಲಿ ತಮ್ಮನ್ನು ತಾವು ಮುಳುಗಿಸಿಕೊಂಡರು. ಯಾಕೆ ಹೀಗೆ ಇವರೆಲ್ಲಾ ನಡೆದುಕೊಂಡರು? ನಾನು ಮಾಡದ ತಪ್ಪಿಗೆ ನನಗ್ಯಾಕೆ ಹೀಗೆ ಶಿಕ್ಷೆ ಆಗುವಂತೆ ಮಾಡಿದರು?

2

ಈಗ ನೆನಪಾಗುತ್ತಿದೆ. ಹೋದವರ್ಷವೇ ನಡೆದಿದ್ದು. ಅವನು ನನ್ನ ಬಾಲ್ಯದ ಗೆಳೆಯ. ಅವನನ್ನೂ ಇದೇ ರೀತಿಯ ಶಿಕ್ಷೆಗೆ ಗುರಿಮಾಡಲಾಗಿತ್ತು. ಅವತ್ತು ಭಾನುವಾರ. ಅವನನ್ನು ಅವನಿದ್ದ ಜೈಲಿನಲ್ಲೇ ಭೇಟಿ ಮಾಡಿದ್ದೆ. ಆದರೂ ಅವನ ಹಾಸ್ಯಭರಿತ ಮಾತುಗಳಿಂದ, ಅವನ ಸಹಜ ನಡತೆಯಿಂದ ಅದು ಜೈಲೆಂದು ಭಾಸವಾಗಿರಲಿಲ್ಲ. ಅವನಿಗಲ್ಲಿ ಕಷ್ಟವೇ ಇಲ್ಲವೆಂದುಕೊಂಡಿದ್ದೆ. ಆದರೆ ಅವನ ಮಾತುಗಳನ್ನು ಇಂದು ನೆನೆಸಿಕೊಂಡರೆ ಅದಕ್ಕೆ ಬೇರೆಯೇ ಅರ್ಥ ಹುಟ್ಟುತ್ತಿದೆ. ಅದೇ ಅವನ ಮಾತಿನ ನಿಜವಾದ ಅರ್ಥ ಎಂಬ ಅರಿವು ಹುಟ್ಟುತ್ತಿದೆ ಜೊತೆಗೆ ಇದು ನನಗೆ ಅಂದೇ ಏಕೆ ಅರ್ಥವಾಗಲಿಲ್ಲ ಎಂಬ ವ್ಯಥೆಯೂ!

ಮೊನ್ನೆ ಮತ್ತೆ ಅವನನ್ನು ನೋಡಲು ಹೋದೆ. ನನ್ನ ಜೊತೆ ಹೆಚ್ಚು ಹೊತ್ತು ಮಾತಾಡಲು ಜೈಲರಿನಿಂದ ಕಷ್ಟ ಪಟ್ಟು ಬಹಳಷ್ಟು ಕೋರಿಕೆಗಳನ್ನು ಸಲ್ಲಿಸಿ ಅನುಮತಿ ಪಡೆದಿದ್ದ. ನಾನು ಹೇಳುವ ಮೊದಲೇ ನನಗೆ ಶಿಕ್ಷೆಯಾಗಿರುವ ಸಂಗತಿ ಅವನಿಗೂ ತಿಳಿದಿತ್ತು. ನನ್ನ ಸ್ಥಿತಿಗೇ ಇವನೂ ಬಂದನಲ್ಲಾ ಎಂದು ಒಳಗೊಳಗೇ ಸಂತೋಷಪಡುತ್ತಿದ್ದಾನೆ ಎಂಬ ಅನುಮಾನವು ನನ್ನ ಹಾದು ಹೋದರೂ ಅದನ್ನು ಸುಳ್ಳಾಗಿಸುವಂತೆ ತುಂಬಾ ಮರುಕ ಪಟ್ಟ. ನನಗೆ ಎಲ್ಲರೂ ಸೇರಿ ಎಸಗಿದ ದ್ರೋಹದ ಬಗ್ಗೆ ಹೇಳಿಕೊಂಡೆ ಸಹನೆಯಿಂದ ಕೇಳಿಸಿಕೊಂಡ.ಭುಜದ ಮೇಲೆ ಕೈಯಿಟ್ಟು ಸಮಾಧಾನ ತುಂಬಲು ಯತ್ನಿಸಿದ.

ಜೈಲಿನಲ್ಲಿ ತುಂಬ ಕಷ್ಟ ಕೊಡ್ತಾರ ತೊದತೊದಲಿ ಕೇಳಿದೆ. ಅದರ ಬಗ್ಗೆ ಹೇಳಿ ಇನ್ನೂ ನನ್ನ ಚಿಂತೆಗೆ ಕೆಡವಲು ಅವನಿಗೆ ಇಷ್ಟವಿರಲಿಲ್ಲವೋ ಏನೋ ಅಷ್ಟೇನೂ ಕಷ್ಟವಾಗುವುದಿಲ್ಲವೆಂದು ಮಾತು ತೇಲಿಸಿದ. ನಿಜ ಹೇಳಬೇಕೆಂದರೆ ಈ ಜೀವನವೇ ಒಂಥರಾ ನೆಮ್ಮದಿ. ಜೈಲಿನ ಹೊರಗಡೆಯಾದರೆ ಕೆಲಸವನ್ನೂ ನಮ್ಮ ಬೇರೆ ಬೇರೆ ಜವಾಬ್ದಾರಿಗಳನ್ನು ನಾವೇ ನೋಡಿಕೊಳ್ಳಬೇಕು, ಆದರೆ ಇಲ್ಲಿ ಕಷ್ಟಪಟ್ಟು ಕೆಲಸಗಳನ್ನು ಮಾಡಿದರಾಯಿತು. ಊಟ ತಿಂಡಿಯ ಜವಾಬ್ದಾರಿಯಾಗಲೀ ಅವರಿವರಿಗೆ ಹೇಳಬೇಕೆಂಬ ಕಷ್ಟಗಳಾಗಲೀ ಇರುವುದಿಲ್ಲ ಎಲ್ಲವನ್ನೂ ಜೈಲರೇ ನೋಡಿಕೊಳ್ಳುತ್ತಾರೆ. ಏನೆಂದರೆ ನಮಗೇನು ಬೇಕೋ ಅದನ್ನು ಮಾಡುವ ಸ್ವಾತಂತ್ರವಿರುವುದಿಲ್ಲ ಅಷ್ಟೇ ಅದಕ್ಕೇ ಇದಕ್ಕೆ ಜೈಲೆಂದು ಹೆಸರು ಎಂದ. ಅದೇ ಮುಖ್ಯವಲ್ಲವಾ? ಸ್ವಾತಂತ್ರ್ಯವಿಲ್ಲವೆಂದಮೇಲೆ ಬದುಕಿ ಏನು ಮಾಡಬೇಕು ಅನ್ನಿಸಿತು. ಬದುಕಬೇಕು ಬದುಕಿದರೆ ಮುಂದೆ ಎಂದಾದರೂ ಬಿಡುಗಡೆಯಾಗಬಹುದು ಆವಾಗ ಸ್ವತಂತ್ರವಾಗಿರಬಹುದು ಎಂಬ ಆಸೆಯಾದರೂ ಇರುತ್ತದೆ ಹೆದರಿ ಸತ್ತರೆ ಮುಂದೆ ಸಿಗುವ ಬಿಡುಗಡೆಯನ್ನೂ ಕತ್ತು ಹಿಚುಕಿ ಕೊಂದ ಹಾಗೆ ಎಂದ. ಯಾವುದೋ ಪುಸ್ತಕದ ಸಾಲುಗಳನ್ನ ನನ್ನ ಮುಂದೆ ಒಪ್ಪಿಸುತ್ತಿದ್ದಾನೆ. ಸಾಯಲು ಧೈರ್ಯವಿಲ್ಲದವರು ಹೀಗೆ ಮಾತಾಡುವುದು ಅನ್ನಿಸಿತು.

ಎದ್ದು ಬಂದೆ ಖಾಲಿ ರಸ್ತೆಗಳಲ್ಲಿ ಮನಬಂದಂತೆ ಅಲೆದಾಡಿದೆ. ಬೇಕ್ಕಾದ್ದು ಕೊಂಡು ತಿಂದೆ, ಇಷ್ಟವಾದ ವಿಸ್ಕಿಯನ್ನ ಮತ್ತೆ ಮತ್ತೆ ಕುಡಿದೆ. ಬೇಕಾದಹಾಗೆ ಕೂಗಾಡಿದೆ ಎಲ್ಲರಿಗೂ ಇವನಿಗೆ ಹುಚ್ಚು ಹಿಡಿದಿದೆ ಎಂದೇ ಅನ್ನಿಸಿರಬೇಕು. ತಪ್ಪಿಲ್ಲ ನನಗೆ ಹುಚ್ಚು ಹಿಡಿದಿರುವುದು ಹೌದು. ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗಿ ಬಂದರೆ ಅದು ಹುಚ್ಚೇ!

3

ಇವತ್ತಿನಿಂದ ನನ್ನ ಶಿಕ್ಷೆ ಜಾರಿಯಾಗುತ್ತದೆ. ಜೈಲರು ಅತ್ಯಂತ ಉತ್ಸಾಹದಲ್ಲಿದ್ದಾರೆ. ಮನುಷ್ಯ ನಲ್ಲಿ ಯಾವಾಗಲೂ ತಾನು ಬೇರೆಯವರನ್ನು ಆಳಬೇಕು ಎಂಬ ಹಪಹಪಿರುತ್ತದೆ. ಬ್ರಿಟೀಷರು ಕೇವಲ ಹಣದಾಸೆಗಾಗಿ ನಮ್ಮನ್ನು ಆಳಿದರಾ? ಉಹು ಬೇರೆಯವರನ್ನು ಆಳುತ್ತಿದ್ದೇನೆ ಅವನ ಎಲ್ಲಾ ಚಟುಟಿಕೆಗಳನ್ನ ನಿಗ್ರಹಿಸುತ್ತಿದ್ದೇನೆ ಎಂಬ ಅನಿಸಿಕೆಯೇ ವಿಚಿತ್ರವಾದ ಒಂದು ಸಂತೋಷವನ್ನು ಕೊಡುತ್ತೆ.ಹಮ್ಮನ್ನು ಅಹಂಕಾರವನ್ನ ತೃಪ್ತಿಗೊಳಿಸುತ್ತೆ. ಅಂಥಾ ಅಹಂಕಾರವನ್ನ ತಣಿಸಿಕೊಳ್ಳಲೆಂದೇ ಬ್ರಿಟೀಶರು ನಮ್ಮನ್ನ ಅಷ್ಟು ವರ್ಷಗಳ ಕಾಲ ಆಳಿದರು ಅಲ್ಲವಾ? ಜೈಲರಿಗೆ ಇಂದಿನಿಂದ ನನ್ನನ್ನು ನಿಗ್ರಹಿಸುವ ಸಂತೋಷ.

ಈಗ ಅಲ್ಲಿಗೆ ಹೋಗಲೇ ಬೇಕಾದ ಘಳಿಗೆ ಬಂದಿದೆ. ನಾನು ತಡ ಮಾಡುತ್ತಿದ್ದೇನೆಂದು ಆಗಲೇ ಹಲವರು ಸಿಟ್ಟಾಗಿದ್ದಾರೆ. ನಾನು ಕೊನೆಯದಾಗಿ ಸ್ವತಂತ್ರವಾಗಿರುವುದನ್ನು ನೋಡಲೆಂದೇ ಬಹಳಷ್ಟು ಜನ ಸೇರಿದ್ದಾರೆ. ಬಂಧುಗಳು ಸ್ನೇಹಿತರು ಮಿತ್ರರು. ನಾನು ಜೈಲು ಸೇರುವುದನ್ನು ನೋಡಿಯೇ ಅವರು ವಾಪಸ್ಸು ಹೋಗುವುದು. ಇವರೆಲ್ಲರ ಇರುವಿಕೆಯಿಂದಲೇ ನನ್ನ ಕಿರಿಕಿರಿ ಇನ್ನೂ ಹೆಚ್ಚುತ್ತಿದೆ. ನಾನು ಹೊರಟಿದ್ದರಿಂದ ಜೈಲರ್ ಖುಶಿಯಾಗಿದ್ದಾರೆ. ವಧಾಸ್ಥಾನಕ್ಕೆ ಹೋಗುವ ಕುರಿಯಂತೆ ನಾನು ಕಂಡರೆ ವ್ಯಾಧನಂತೆ ಅವರ ಸಂತೋಷ ಕಣ್ಣುಗಟ್ಟುತ್ತಿದೆ.

ಮುಗಿಯಿತು. ನನಗೆ ಗೊತ್ತು ಇನ್ನು ನನ್ನ ಮಾತಾಡಗೊಡುವುದಿಲ್ಲ. ನನ್ನ ಸ್ವಾತಂತ್ರದ ಹಕ್ಕಿ ರೆಕ್ಕೆ ಕತ್ತರಿಸಿಕೊಂಡು ಕೆಟ್ಟದಾಗಿ ಕಾಣುತ್ತಿದೆ.. ಈಗಲೂ ಓಡಿಹೋಗಿ ಬಿಡಲ? ಕೊನೆಯ ಅವಕಾಶ.. ಅಯ್ಯೂ ನನ್ನ ತಲೆಯ ಮೇಲೆ ನಾನೇ ಚಪ್ಪಡಿಕಲ್ಲು ಎತ್ತಿಹಾಕಿಕೊಳ್ಳುತ್ತಿದ್ದೇನೆ… ಅವಳಿಗೆ ತಾಳಿ ಕಟ್ಟೇ ಬಿಟ್ಟೆ… ಮಾಂಗಲ್ಯಂ ತಂತುನಾನೇನಾ ಮಮ ಜೀವನ…

‍ಲೇಖಕರು avadhi

November 29, 2008

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

10 ಪ್ರತಿಕ್ರಿಯೆಗಳು

 1. ರಾಮಚಂದ್ರ ಅಡಿಗ

  ಕತೆ ಮಜವಾಗಿ ಓದಿಸಿಕೊಂಡು ಹೋಯ್ತು. ನಂಗಿಷ್ಟವಾದ ಇನ್ನೊಂದು ಅಂಶ ಎಂದರೆ ನೀವು ಸಸ್ಪನ್ಸ್ ಉಳಿಸಿಕೊಂಡದ್ದು. ಇಂತ ಕತೆಗಳನ್ನು ಬರಿತಿರಿ

  ಪ್ರತಿಕ್ರಿಯೆ
 2. ಶಾಲ್ಮಲಿ

  ಕತೆ ತುಂಬಾ ಚೆನ್ನಾಗಿ ಬಂದಿದೆ. ನಿಮ್ಮ ಬ್ಲಾಗಿನಲ್ಲೂ ಈ ಥರದ ಥ್ರಿಲ್ಲರ್ ಓದಿದ್ದೆ. ಇದೂ ಚೆನ್ನಾಗಿದೆ. ಥ್ಯಾಂಕ್ಯೂ ವೆರಿಮಚ್.

  ಪ್ರತಿಕ್ರಿಯೆ
 3. Siri

  ಹುಡುಗನಿಗಷ್ಟೇ ಜೈಲಲ್ಲ ಹುಡುಗರಿಗೂ ಜೈಲು ಅಂತ. 🙂

  ಪ್ರತಿಕ್ರಿಯೆ
 4. parasurama kalal

  ಈ ಕಥೆಯನ್ನು ಬರೆದಿದ್ದು ಮೃಗನಯನಿ ಎನ್ನುವುದೇ ಒಂದು ಅಚ್ಚರಿ ಸಂಗತಿ.
  ಒಂದು ಹೆಣ್ಣಾಗಿ ನೀವು ಈ ಕಥೆಯನ್ನು ಪರಕಾಯ ಪ್ರವೇಶ ಮಾಡಿ ಬರೆದಿದ್ದು ನನಗಂತೂ ಸ್ವಲ್ಪವೂ ಇಷ್ಟವಾಗಲಿಲ್ಲ. ಬಾಳಸಂಗಾತಿಯನ್ನು ಆರಿಸಿಕೊಳ್ಳುವುದು ತಪ್ಪೇ?
  ಮಹಿಳೆಯರ ಬಗ್ಗೆ ನಿಮ್ಮ ಧೋರಣೆಯೇ ಸಮಸ್ಯಾತ್ಮಕವಾಗಿದೆ.
  -ಪರುಶುರಾಮ ಕಲಾಲ್

  ಪ್ರತಿಕ್ರಿಯೆ
 5. narendrabhat

  ಹನ್ನೊಂದು ವರುಷದ ಮೊದಲು ಈ ಕತೆ ಓದಿದ್ದರೆ, ನಾನು ಸಿಕ್ಷೆಯಿಂದ ಪಾರಗಬಹುದಿತ್ತು. ಏನ್ ಮಾಡಕ್ಕಾಗುತ್ತೆ. ಮಾಂಗಲ್ಯಂ ತಂತುನಾನೇನಾ.
  Yek Dor Khinche, Doojaa Daudaa Chalaa Aaye
  Kachche Dhaage Mein Bandhaa Chalaa Aaye

  ಪ್ರತಿಕ್ರಿಯೆ
 6. ಋಷ್ಯಶೃಂಗ

  ಶ್ರೀ ಕಲಾಲ್
  ತಮ್ಮ ಧೋರಣೆಯೇ ವಿಚಿತ್ರವಾಗಿದೆ. ಈ ಕಾಲದಲ್ಲೂ ಹೆಣ್ಣು ಗಂಡು ಪರಕಾಯ ಪ್ರವೇಶ ಅನ್ನೋದು ಎಷ್ಟು ಸರಿ. ಕತೆಯನ್ನು ಅದರ ಸ್ವಾರಸ್ಯಕ್ಕಾಗಿ ಓದುಬೇಕಲ್ಲವೇ. ನನಗಂತೂ ಕತೆ ಇಷ್ಟ ಆಯ್ತಪ್ಪ. ಶಿಕ್ಷೆಯಿಂದ ಪಾರಾಗೋದು ಹೇಗೆ ಅಂತ ಥಿಂಕ್ ಮಾಡ್ತಿದ್ದೀನಿ.

  ಪ್ರತಿಕ್ರಿಯೆ
 7. niranjana kottur

  avadi super nanna friend siddu kavana hakiddakke kotturina ell geleyara paravagi thanks

  ಪ್ರತಿಕ್ರಿಯೆ
 8. shashi sampalli

  ಇದು ಕಥೆನಾ? ಹೀಗೂ ಕಥೆ ಇರುತ್ತಾ? ನಾನಂತೂ ಇಂತಹದ್ದನ್ನೆಲ್ಲ ಕಥೆ ಅನ್ನೋರನ್ನು ನೋಡಿದ್ದು ಇದೇ ಮೊದಲು… ಇಂತಹದ್ದನ್ನ ಪ್ರಬಂಧವೆಂದೋ, ಲಘು ಬರಹವೆಂದೋ ಹೇಳುವುದನ್ನು ಕೇಳಿದ್ದೆ… ಈಗೇಕೋ ಎಲ್ಲವೂ ಬದಲಾಗುತ್ತಿದೆ.. ಬದಲಾಗಿಬಿಟ್ಟಿದೆ!

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: