ನಿತ್ಯ ನೂತನ ದಿನಚರಿ!

burger.jpg

 

 “ವೆಂಕಿ ಬರ್ಗರ್”

 

ವೆಂಕಿ

“ನೀವು ರೆಡಿನಾ?” ಬೆಳಕ್ಕೆ ೮ಕ್ಕೆ ಸಿದ್ಧರಾಗಿ ಬಂದ ಡಾ.ವಸುಂಧರಾ ಕೇಳಿದರು. ಸ್ಥಳ: ಲಾಂಗ್ ಐಲ್ಯಾಂಡ್ (ಐಲ್ಯಾಂಡ್/ದ್ವೀಪ)ನಲ್ಲಿನ ಸುಂದರವಾದ ರೋಸ್ಲಿನ್ ಹೈಟ್ ನಲ್ಲಿನ ಅವರ ಮನೆ. ಹೂಂಗುಟ್ಟಿದ ನಾನು ಕಾರುಗಳು ನಿಲ್ಲಿಸಿದ್ದ ಸ್ಥಳಕ್ಕೆ ಅವರ ಹಿಂದೆ ಹೆಜ್ಜೆ ಹಾಕಿ, ಅವರ ಐಷಾರಾಮಿ ಕಾರು ಲೆಕ್ಸಸ್ ನ ಆರಾಮಾಸನದಲ್ಲಿ ಮೈಚೆಲ್ಲಿದೆ. ಅಭ್ಯಾಸಬಲವೋ ಎಂಬಂತೆ ತೀರಾ ಸ್ವಾಭಾವಿಕವಾಗಿ ಜೋಬು ತಡವಿಕೊಂಡೆ. ಏಳು ಡಾಲರ್ ಗಳ ಸ್ಪರ್ಶ ಮುಖದಲ್ಲೊಂದು ಮುಗುಳ್ನಗು ಅರಳಿಸಿತು. ಸದ್ಯ, ಲಾಂಗ್ ಐಲ್ಯಾಂಡ್ ರೇಲ್ ರೋಡ್(LIRR)ನವರ ಬಾಯಿಗೆ ಹಾಕಿ ನ್ಯೂಯಾರ್ಕ್ ನ ಸಬ್ ವೇ ತನಕ ಹೋಗುವ ಹಣ ಉಳಿಯಿತು. ಮಧ್ಯಾಹ್ನದ ಊಟಕ್ಕೆ ಏಳು ಡಾಲರ್ ಗೆ ಒಳ್ಳೆಯ ಸಲಾಡ್ ಸಿಗುತ್ತದೆ ಅಂತ ಅಂದುಕೊಂಡೆ.

ನ್ಯೂಯಾರ್ಕ್ ನ ಎಕ್ಸ್ ಪ್ರೆಸ್ ಹಾದಿಯಲ್ಲಿ ತಮ್ಮ ಕಾರನ್ನು ಸರಾಗವಾಗಿ ನಡೆಸಿದ್ದರು ಡಾ. ವಸುಂಧರಾ. ವೃದ್ಧಾರೋಗ್ಯ ಅಥವಾ ಮುಪ್ಪು ವೈದ್ಯಶಾಸ್ತ್ರದಲ್ಲಿ(geriatrics)  ಪರಿಣಿತಿ ಹೊಂದಿರುವ ಮನಃಶಾಸ್ತ್ರದ ಈ ವೈದ್ಯೆಗೆ ನ್ಯೂಯಾರ್ಕ್ ನ ಹಾದಿಗಳಲ್ಲಿ ಯಾರ ಎಗ್ಗೂ ಇಲ್ಲದೆ ಮನ ಬಂದಂತೆ ವಾಹನಗಳನ್ನು ಚಲಾಯಿಸುವವರೆಲ್ಲರ ಮನಸ್ಸನ್ನು ಅರಿಯುವ ಸಾಮರ್ಥ್ಯ ಇದೆಯೇನೋ ಅಂತ ನನಗನ್ನಿಸುತ್ತಿತ್ತು. ಹಾದಿಯುದ್ದಕ್ಕೂ ನಡೆದ ನಮ್ಮ ಮಾತುಕತೆಯ ಮಧ್ಯೆ ವಸುಂಧರಾ ಹೇಳಿದ್ದು, ಭಾರತೀಯ ಮೂಲವಿರುವ ಇಲ್ಲಿನ ವೃದ್ಧರಿಗಾಗಿ ಒಂದು ಕುಟೀರವನ್ನು ತೆರೆಯಬೇಕು ಎಂದು. ಮೂವತ್ತು ನಿಮಿಷಗಳ ಪಯಣದ ನಂತರ ನಾನು “ಪರ್ಸನ್ಸ್ ಬೌಲ್ ವಾರ್ಡ್” ಹತ್ತಿರ ಎಫ್ ರೈಲಿಗಾಗಿ ಇಳಿದೆ. “Have a good day” ಎಂದ ವಸುಂಧರಾ ಮುಂದೆ ಸಾಗಿದರು.

ಸಬ್ ವೇ ವ್ಯವಸ್ಥೆಯ ಕಿಕ್ಕಿರಿದ ನೆಲಗವಿಯೊಳಕ್ಕೆ ಎಚ್ಚರಿಕೆಯಿಂದ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಸರಿಯಾದ ಗೇಟು, ಅಲ್ಲಿಂದ ಸರಿಯಾದ ಪ್ಲಾಟ್ ಫಾರ್ಮ್ ಮುಂದೆ ಸರಿಯಾದ ರೈಲನ್ನು ತಡಕುತ್ತಾ ಸಾಗಿದೆ. ಬಂದ ವಿ ರೈಲನ್ನು ಹತ್ತಿ ಕುಳಿತೆ. ರೈಲು ಸಾಗಿತು.

ಇಡೀ ನ್ಯೂಯಾರ್ಕ್ ನಗರ ನಿಜವಾಗಿಯೂ ಈ ನೆಲದಾಳದ ರೈಲು ವ್ಯವಸ್ಥೆಯ ಉದ್ದಗಲದ ಭುಜಗಳ ಮೇಲೆ ಕುಳಿತಿದೆ ಎಂದರೆ ಉತ್ಪ್ರೇಕ್ಷೆಯೇ ಅಲ್ಲವೇನೋ ಅನಿಸುತ್ತದೆ. ಅಬ್ಬ ಅದೆಷ್ಟು ಭಾರ ಹೊತ್ತಿದೆಯೋ ಏನೋ!! ನಮ್ಮ ಕೃಷ್ಣ ಇಡೀ ಗೋವರ್ಧನ ಗಿರಿಯನ್ನು ತನ್ನ ಕಿರು ಬೆರಳಿನ ಮೇಲೆ ಎತ್ತಿ ಹಿಡಿದಂತೆ. ಸದ್ಯ ಈ ಸಬ್ ವೇನಲ್ಲಿ ಕುಳಿತು ಆರಾಮವಾಗಿ ಸಾಗಿದರೆ, ಹೊರಗಿನ ಕಾರುಗಳ ಭರಾಟೆ, ಹೊಗೆ, ಧೂಳು, ಬಿಸಿಲು, ಮಳೆ, ಚಳಿ ಎಲ್ಲದರಿಂದ ನಮ್ಮಂಥ ನೆಲಸಿಗರಿಗೆ ರಕ್ಷಣೆ ಖಾತರಿ.

ನ್ಯೂಯಾರ್ಕ್ ನ ಲಕ್ಷಾಂತರ ಜನರಿಗೆ ಇದೇ ದಿನಚರಿ. ವಾರಕ್ಕೆ ೫ ಮಿಲಿಯನ್ ಜನ ಸಬ್ ವೇನಲ್ಲಿ ಸಾಗುತ್ತಾರೆ ಅಂತ ಅಂಕಿಅಂಶಗಳ ವರದಿ. ಸಾವಿರ ಕಿಲೋಮೀಟರ್ ಉದ್ದದ ಈ ಸಬ್ ವೇನ ೪೬೮ ನಿಲ್ದಾಣಗಳಿರುವ ೨೮ ರೈಲು ಪಟ್ಟಿಗಳಲ್ಲಿ ಜನ ಒಬ್ಬರನ್ನೊಬ್ಬರು ತಳ್ಳಿಕೊಂಡು ಒಳಹೊರಕ್ಕೆ ಹೋಗುವುದು, ರೈಲಿನಲ್ಲಿ ಕೂರಲು ಆಸನ ಹಿಡಿಯಲು ನುಗ್ಗುವುದು ಎಲ್ಲವೂ ಇದ್ದದ್ದೇ. ಇದಕ್ಕೆ ಬಿಡುವೇ ಇಲ್ಲ. ದಿನದ ೨೪ ಘಂಟೆಯೂ ನಡೆದಿರುವುದೇ. ಊರಿನಂತೆಯೇ ಸಬ್ ವೇ ಕೂಡಾ. ನಿಲ್ಲುವುದು ಇಲ್ಲ ನಿದ್ದೆಯೂ ಇಲ್ಲ.

ನನ್ನ ದಿನ ನಿತ್ಯದ ಪ್ರಯಾಣದಲ್ಲಿ ಇದೆಲ್ಲಾ ಮಾಮೂಲಿ. ಏನೂ ವಿಶೇಷವಿಲ್ಲ. ನನ್ನಂತೆಯೇ ಇಲ್ಲಿನ ನೂರಾರು ಜನರ ಪಯಣವೂ ಕೂಡಾ. ಆದರೂ, ಖಂಡಿತಾ ಈ ಎಲ್ಲ ಪ್ರಯಾಣದಲ್ಲಿ “ಅದೇನೋ ಒಂದು ಅಸಾಮಾನ್ಯವಾದದ್ದು” ಇದ್ದೇ ಇದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಮಾಮೂಲಿ ಸಾಗುವಂತೆ ಅನ್ನಿಸುವುದೇ ಇಲ್ಲ. ಒಂಥರಾ ಅಡೆತಡೆಗಳನ್ನು ದಾಟಿ ಓಡುವಂತೆ. ಹಿಂದಿನ ದಿನದ ಕನಸುಗಳನ್ನೆಲ್ಲಾ ಇಂದು ನನಸಾಗಿಸುವ ಸಾಧ್ಯತೆಗಳಿಗೆ “ಈ ಪ್ರಯಾಣ” ಶಕ್ತಿ ನೀಡುವಂತಹ ಚೈತನ್ಯಭರಿತ ಉಸಿರಾಡುವ ಜೀವಿಯಂತೆ.

ಇಷ್ಟಾದರೂ ದಿನ ನಿತ್ಯ ಅದೇ ರೈಲು, ಅದೇ ರೈಲು ಪಟ್ಟಿ, ಹೆಚ್ಚೂ ಕಡಿಮೆ ಅದೇ ಆಸನದಲ್ಲಿ ಕುಳಿತು ಪ್ಲಾಟ್ ಫಾರಂನ ಅದೇ ಪಕ್ಕವನ್ನು ನೋಡುವುದು. ಆದಾಗ್ಯೂ ಪ್ರತಿದಿನ ಜೀವನ ನಾಟಕದ ಹೊಸತೊಂದು ಅಂಕ ತೆರೆದುಕೊಳ್ಳುತ್ತಾ, ಹೊಸ ಲಯಗಳನ್ನು ಕಂಡುಕೊಳ್ಳುತ್ತಾ, ನ್ಯೂಯಾರ್ಕ್ ನ ಜನ ಕೈಗೆ ಸುಲಭವಾಗಿ ಸಿಗದ ಯಶಸ್ಸೆಂಬ ಗುರಿಯತ್ತ ಸಾಗಿರುವ ಮತ್ತೊಂದು ಮಗದೊಂದು ಪ್ರಯತ್ನಗಳನ್ನು ಮರುದನಿಸುತ್ತಲೇ ಇದೆಯೆಂದು ಅನಿಸುತ್ತದೆ!

ಮುಂದಿನ ವಾರ: ಇ ಟ್ರೇನ್ ಎಂಬ ನನ್ನ ಜೀವನಾಡಿ!

‍ಲೇಖಕರು avadhi

August 11, 2007

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

2 ಪ್ರತಿಕ್ರಿಯೆಗಳು

  1. Vasudeva Sharma

    Good narration by Venky. I am hoping to get introduced to all the islands at Newyork which Venky has promissed.

    Vasu

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: