ನಿದ್ರಾ ಸುಂದರಿಯ ನೆನಪಿನಲ್ಲಿ…

door_number142.jpg“ಡೋರ್ ನಂ. 142”

 

 

ಬಹುರೂಪಿ

ಯಾಕೊ ಕಣ್ಣಂಚು ಒದ್ದೆಯಾಗುತ್ತದೆ. ಒಳಗೆ ಅದುಮಿಟ್ಟ ನೋವೆಲ್ಲಾ ಹೊರಗೆ ಇಣುಕುತ್ತದೆ. ಈ ಹಿಂದೆ ಯಾವಾಗಲೋ ಯಾರೋ ಬರೆದ ಕವಿತೆಯ ಸಾಲು “ಕಣ್ಣಿನೊಳಗೆ ಕೂತು ನೀರ ದೂಡುವ ಮುಖವೇ, ನಿನ್ನ ನೆನೆ ನೆನೆದಿಲ್ಲಿ ಹೌಹಾರುತಿರುವೆ” ಸುಳಿದುಹೋಗುತ್ತದೆ.

ನಿದ್ರಾ ಸುಂದರಿಯ ಕಥೆ ಸುಖಾಂತ್ಯವೇ. ಕಣ್ಣೀರು ತರಿಸುವಂಥದ್ದೇನೂ ಅದರಲ್ಲಿಲ್ಲ. ರಾಜಕುಮಾರ-ರಾಜಕುಮಾರಿ ಕೊನೆಗೆ ಜೊತೆಯಾಗೇ ಆಗುತ್ತಾರೆ. ಪ್ರೀತಿ, ಮದುವೆ, ಮಕ್ಕಳು… ಎಲ್ಲಾ ಅದೇ ಕೊನೆಗೆ ಎಲ್ಲರೂ ಸುಖವಾಗಿದ್ದರು ಅನ್ನೋ ಥರಾನೇ ಎಂಡ್ ಆಗುತ್ತೆ. ಆದರೆ ನನಗೆ ಮಾತ್ರ ಈ ಕಥೆ ದುಃಖದ ಎಲ್ಲಾ ಮುಖಗಳನ್ನೂ ಪರಿಚಯಿಸಿಬಿಡುತ್ತೆ.eemane.jpg

ಆಗ ನಾನು ಮೂರನೇ ಕ್ಲಾಸಿನಲ್ಲಿದ್ದೆ. ಅಷ್ಟೊತ್ತಿಗಾಗಲೇ ಅಣ್ಣನಿಂದ ಪುಸ್ತಕದ ಗೀಳು ಅಂಟಿಕೊಂಡಿತ್ತು. ಎಲ್ಲಿಗೋದ್ರೂ ಪುಸ್ತಕ ಬೇಕು. ಯಾವ ಅಂಗಡಿಗೋದ್ರೂ ಪುಸ್ತಕ ತಡಕಾಡಬೇಕು ಅನ್ನೋ ಆಸೆ. ಆಗ ಮೆಜೆಸ್ಟಿಕ್ ಅಂದ್ರೆ ಅದು ಯಾವುದೋ ಊರು ಅನ್ನೋಷ್ಟು ದೂರ ಅನ್ನಿಸ್ತಿತ್ತು. ಬಸ್ ಹತ್ತಿ ಎಲ್ಲಿಗೆ ಹೋಗೋ ಸ್ಥಳಾನೂ ದೂರ ಅನ್ನೋ ಕಾಲ ಅದು. ಆಗಲೇ ನಾನು ಅವರ ಬೆರಳು ಹಿಡಿದುಕೊಂಡು, ಬೆರಗುಗಣ್ಣಾಗಿ, ಕೆಂಪು ಬಸ್ ಹತ್ತಿಕೊಂಡು ಹೋಗಿದ್ದು. ಚಡ್ಡಿ ತೊಟ್ಟ ನಾನು ಅವರಿಗೆ ಕೇಳಿದ್ದು ಒಂದೇ: “ಪುಸ್ತಕಾ ಬೇಕು” ಅಂತ. ಗೆಳತಿ ಮನೆಗೆ ಹೋಗಿದ್ದ ಅವರು ತಮ್ಮನ ಆಸೆ ಈಡೇರಿಸಬೇಕು ಅಂತ ಕೈ ಹಿಡಿದು ಜೋಪಾನವಾಗಿ ರಸ್ತೆ ದಾಟಿಸ್ತಾ, ನೂರೆಂಟು ಕಥೆ ಹೇಳ್ತಾ ದೊಡ್ಡ ಮೆಟ್ಟಿಲುಗಳನ್ನು ಏರೋದಕ್ಕೆ ಸಹಾಯ ಮಾಡ್ತಾ ಪುಸ್ತಕದ ಅಂಗಡಿಗೆ ಕರೆದುಕೊಂಡು ಹೋದ್ರು.

ನನ ಉಸಿರೇ ನಿಂತು ಹೋಯ್ತು. ಅಷ್ಟು ದೊಡ್ಡ ಅಂಗಡಿ. ಅಷ್ಟು ದೊಡ್ಡದಾದ ಪುಸ್ತಕದ ಅಂಗಡಿ ನನ್ನ ಅದುವರೆಗಿನ ಆ ಎರಡು ವರ್ಷಗಳ ಲೈಫಲ್ಲೇ ನೋಡಿರಲಿಲ್ಲ. ಅದರಲ್ಲೂ ಒಂದು ಕಡೆ ಅಮರ ಚಿತ್ರಕಥೆಗಳ ರಾಶಿ ರಾಶಿ. ಎಷ್ಟೊಂದು ಬಣ್ಣ, ಎಷ್ಟೊಂದು ಚಿತ್ರ, ಎಷ್ಟೊಂದು ಕಥೆ. ಹಾಗೆ ಹುಡುಕ್ತಾ ಹುಡುಕ್ತಾ ಇರುವಾಗಲೇ ಈ ನಿದ್ರಾ ಸುಂದರಿ ಕಾಮಿಕ್ಸ್ ಕಣ್ಣಿಗೆ ಬಿದ್ದಿದ್ದು. ಬೇಕೂ ಇದು ಅನ್ನೋ ಹಾಗೆ ಮೂತಿ ಮಾಡಿ ನಿಂತ್ಕೊಂಡೆ. ಕೊಡಿಸಿದ್ರು. ಆಕಾಶಾನೇ ಕೆಳಗೆ ಬಂದುಬಿಟ್ಟಿತ್ತೋ ಅಥವಾ ನಾನೇ ಆಕಾಶದ ಎತ್ತರ ಬೆಳೆದುಬಿಟ್ಟಿದ್ದೆನೊ… ಅಂತೂ ನನಗೆ ಆಕಾಶ ಕೈಗೆ ಸಿಕ್ಕಿಬಿಟ್ಟಿತ್ತು.

ಮತ್ತೆ ಕೈಬೆರಳು ಹಿಡ್ಕೊಂಡು, ಇನ್ನೊಂದು ಕೈಯಲ್ಲಿ ನಿದ್ರಾ ಸುಂದರಿ ಹಿಡ್ಕೊಂಡು, ಮೆಟ್ಟಿಲಿಳಿದು, ರಸ್ತೆಗಳನ್ನು ದಾಟಿ ಆ ತಿರುವು ಮೀರಿ, ಇನ್ನೊಂದು ರಸ್ತೆ ಎಟುಕಿಸಿಕೊಂಡು ಆ ಮನೆ ಬಾಗಿಲು ತಟ್ಟಿದ್ವಿ. ಬಾಗಿಲು ತೆರೀತು. ಬಾಗಿಲು ತೆರೀತೊ ಇಲ್ಲ, ನನ್ನ ಪಾಲಿಗೆ ಬಾಗಿಲು ಮುಚ್ಚಿಕೊಳ್ತೊ ಗೊತ್ತಿಲ್ಲ… ಅವತ್ತಲ್ಲ, ಇವತ್ತಿಗೂ ಗೊತ್ತಿಲ್ಲ. ಆ ಗೆಳತಿ ಬಂದವರೇ ಒಳಗೆ ಕರೆದುಕೊಂಡು ಹೋದ್ರು. ನಾನು ಮೈಮೇಲೆ ಪರಿವೆ ಇಲ್ಲದೆ “ನಿದ್ರಾ ಸುಂದರಿ”ಯಲ್ಲಿ ಮುಳುಗಿಬಿಟ್ಟೆ. ಲೋಕ ಬಿಟ್ಟು ಲೋಕಕ್ಕೆ ಹೋಗಿದ್ದೆ. ಏನಾಗ್ತಿದೆ ಜಗತ್ತಿನಲ್ಲಿ ಅನ್ನೋದು ಗೊತ್ತೇ ಆಗ್ತಿರಲಿಲ್ಲ. ಕಣ್ಣೆದುರಿಗೆ ಏನಾದ್ರೂ ನಡೆದ್ರೂ ಅದು ಏನು ಅಂತಾ ಗೊತ್ತಾಗೋ ವಯಸ್ಸೂ ನನ್ನದಾಗಿರಲಿಲ್ಲ. ಅಥವಾ ಜಗತ್ತು ಹೀಗಿರುತ್ತೆ ಅಂತಾನೇ ಯಾರೂ ನನಗೆ ತಿಳಿಸಿರಲಿಲ್ಲ. ಒಳಗೆ ಮಾತ್ರ ಗುಸುಗುಸು ಪಿಸಪಿಸ ಕೇಳಿಸ್ತ್. ಆಮೇಲೆ ನಗುವಿನ ಅಲೆ.. ಮತ್ತೆ… ಮತ್ತೆ… ಏನೋಪ್ಪಾ, ಅವತ್ತು ಗೊತ್ತಾಗದೇ ಇರೋದಕ್ಕೆ ಇವತ್ತು ಅಕ್ಷರ ಕೊಡೋದು ಹೇಗೆ…?

ಆಮೇಲೆ ಆ ಗೆಳತಿ ನಮ್ಮ ಮನೆಗೆ ಬಂದ್ರು. ಆಗ್ಲೂ ಪುಸ್ತಕಾನೇ ಹಿಡ್ಕೊಂಡಿದ್ದೆ. ಆದರೆ ಈ ಬಾರಿ ಈ ಗುಸುಗುಸು, ಪಿಸಪಿಸ ಎಲ್ಲಾ ಮರೆಲೇನೂ ಆಗ್ಲಿಲ್ಲ. ನನ್ನ ಕಣ್ಣೆದುರಿಗೇ ಇತ್ತು. ಆದರೆ ವಯಸ್ಸು ಏನು ಅಂತ ಅರ್ಥ ಮಾಡಿಕೊಳ್ಳಲಾಗದಂತಿತ್ತು.

ಇದೆಲ್ಲ ನಡೆದು ಒಂದಷ್ಟು ತಿಂಗಳು ಕಳೆದಿರಬೇಕು. ಬೆಳಗ್ಗೆ ಶಾಲೆಯ ಅಂಗಳದಲ್ಲಿ ಮುಂದಾಗಿ ನಿಂತು, ಕೈಜೋಡಿಸಿ, ಕಣ್ಣು ಮುಚ್ಚಿಕೊಂಡು “ಸ್ವಾಮಿ ದೇವನೆ, ಲೋಕಪಾಲನೆ…” ಹಾಡುತ್ತಿದ್ದೆ. ಯಾಕೋ ಕಣ್ಬಿಟ್ಟೆ. ಯಾರೋ ನನ್ನನ್ನು ಗಮನಿಸುತ್ತಿದ್ದಾರೆ ಅನ್ನಿಸಿತು. ಅತ್ತಿತ್ತ ನೋಡಿದೆ. ಅಲ್ಲಿ ಪಕ್ಕದ ಇನ್ನೊಂದು ಶಾಲೆಯಲ್ಲಿ ಅವರು ನಾನು ಹಾಡುತ್ತಿದ್ದ ರೀತಿಯನ್ನೇ ಅಭಿಮಾನದಿಂದ ನೋಡುತ್ತಿದ್ದರು.

ಒಂದು ದಿನ ಓಡಿ ಬಂದವನೇ ಸ್ಕೂಲ್ ಬ್ಯಗ್ ಮೂಲೆಗೆ ಬಿಸಾಕಿ, ಹೊರಕ್ಕೆ ಕುಣಿಯಲು ಓಡಬೇಕು. ಯಾಕೋ ಕಾಲಿಗೆ ಬ್ರೇಕ್ ಹಾಕಿದಂತಾಯಿತು. ಅಮ್ಮನ ಕಣ್ಣಲ್ಲಿ ನೀರು ನುಗ್ಗಿ ಬರುತ್ತಿತ್ತು. ಎಂದೂ ಕಲಕಿ ಹಾಕುವ ನೋವಾದರೂ ಬಿಕ್ಕದ ಅಮ್ಮ ಅಂದು ನೋವಿಗೆ ದನಿ ನೀಡಿಬಿಟ್ಟಿದ್ದರು. ಅಂತಹ ಸಿಟ್ಟಿನ ಅಪ್ಪನ ಮುಖವೂ ಕಳೆಗುಂದಿಹೋಗಿತ್ತು. ಅಲ್ಲೂ ದುಃಖ ಮ್ನೆಮಾಡಿ ಕೂತಿತ್ತು. “ಎಲ್ಲಾ ಕಡೆ ಹುಡುಕಿದ್ವಿ, ಎಲ್ಲೂ ಗೊತ್ತಾಗಲಿಲ್ಲ. ಇನ್ನೂ ಎಲ್ಲಂತಾ ಹುಡುಕೋದು” -ಕೇಳಿಬಂದಿದ್ದು ಇಷ್ಟೇ. ರಾತ್ರಿಯಾಗಿ, ಬೆಳಗಾಗಿ ಮತ್ತೆ ರಾತ್ರಿಯಾದಾಗ ನನಗೆ ಗೊತ್ತಾದದ್ದು ಇಷ್ಟೆ. ಮನೆಗೆ ಬರಬೇಕಾಗಿದ್ದ ಒಬ್ಬಳು ಬಂದಿಲ್ಲ.

ಎಷ್ಟಿತ್ತು ನೆನಪು. ನಾನು ಒಡನಾಡಿದ್ದು ತುಂಬಾ ಕಡಿಮೆ. ಆದರೂ ಯಾಕೊ ಆಗ ಈಗ ಕಂಡ ಮುಖ ನೆನಪಾಗಿಬಿಡುತ್ತೆ. ಅಣ್ಣ ಒಂದು ದಿನ ಎಲ್ಲರ ಮೇಲೂ ಅಬ್ಬರಿಸಿದಾಗ ಕಣ್ಣೀರ್‍ಆಗಿ ಹೋಗಿದ್ದು, ಇಡೀ ಮನೆಯೇ ಬಡಿಗೆಯವರೊಂದಿಗೆ ಕದನಕ್ಕೆ ಬಿದ್ದಾಗ ಕೂದಲು ಹಿಡಿದು ಜಗಳವಾಡುತ್ತಿದ್ದುದು, ಕಾಲೇಜಿನಲ್ಲಿ ಪ್ರಾಕ್ಟಿಕಲ್ಸ್ ಗಾಗಿ ಅಡುಗೆ ತಯಾರು ಮಾಡುತ್ತಿದ್ದುದು…

ಕಳೆದುಹೋದ ಹಸು, ಮತ್ತೆ ಕಳೆದುಹೋದ ಅವರು ನನ್ನೊಳಗೆ ಆಡುತ್ತಾರೆ. ಎದ್ದು ಕುಳಿತುಕೊಳ್ಳುತ್ತಾರೆ. “ಇಗೋ ಇಲ್ಲಿದ್ದೇನೆ” ಎನ್ನುತ್ತಾರೆ. ಪಕ್ಕದ ಊರಿಂದ ಈಗ ಬಂದುಬಿಟ್ಟವರಂತೆ ಬಂದುಬಿಡುತ್ತಾರೆ. ನಾನೇ ನಿದ್ದೆಯಲ್ಲಿದ್ದೇನೇನೋ, ಅವರು ಇಲ್ಲೇ ಕುಳಿತೇ ಇದ್ದರೇನೋ ಎಂಬಂಥ ಭ್ರಮೆ ಹುಟ್ಟಿಸುತ್ತಾರೆ. ಕಳೆದುಹೋಗುವ ಯಾವುದೇ ಕಥೆ, ಕಳೆದುಹೋಗುವ ಯಾವುದೇ ಹಾಡು ನನ್ನನ್ನು ದುಃಖದ ಕಡಲಿಗೆ ತಳ್ಳಿಬಿಡುತ್ತದೆ.

ಯಾರೋ ಹೇಳಿದರು: “ಅಲ್ಲಿ ನೋಡಿದೆ.” ಇಡೀ ಮನೆಯೇ ಗುಳೆ ಎದ್ದು ಹೊರಟುಬಿಟ್ಟಿತು, ಇರಬಹುದು ಎಂಬ ಒಂದು ಕುಡಿ ಆಸೆಯ ಹಿಡಿದುಕೊಂಡು. “ಇಲ್ಲಿ ನೋಡಿದೆ” ಎಂದರು ಮತ್ತೆ. ಓಡಿಹೋಗಿ ನೋಡಿ ಬಂದಾಯ್ತು. “ಯಾರು ಜೀವವೆ ಯಾರು ಬಂದವರು…” ರೇಡಿಯೋದಲ್ಲಿನ ಈ ಹಾಡು ಮೊಳಗುವಾಗ ಮತ್ತೆ ಒಂದು ಆಸೆ ಎದ್ದುಬಿಡುತ್ತೆ. ಇಲ್ಲ, ಬರುತ್ತಾರೆ, ಇಂದಲ್ಲ ನಾಳೆ… ನಾಳೆಯಲ್ಲ, ನಾಡಿದ್ದಾದರೂ…

ನಿದ್ರಾ ಸುಂದರಿಯೂ ಹೀಗೆ ಕಾದಿದ್ದಳಲ್ವಾ? ದೀರ್ಘ ನಿದ್ರೆಗ ಹೊರಟು ಕಣ್ಣು ಬಿಟ್ಟಾಗ ತನಗೆ ಬೇಕಾದವರು ನಿಂತಿದ್ದರಲ್ಲವಾ? ಅಂತಹ ಮ್ಯಾಜಿಕ್ ಆಗಿಬಿಡುತ್ತಾ ಅಂತ ಕಾಯುತ್ತ ಇದ್ದೇನೆ. ಈ ಮ್ಯಾಜಿಕ್ ಎಲ್ಲಾ ಆಗೋದು ಅಡಗೂಲಜ್ಜಿ ಕಥೆಯಲ್ಲಿ ಮಾತ್ರ.

ಮೊನ್ನೆ ಬೆಂಗಳೂರಿಗೆ ಬಂದಾಗ ಹಾಗೇ ಹೋಗಿ ಬಂದೆ. ನಾನಿದ್ದ ಶಾಲೆ, ಪಕ್ಕದಲ್ಲಿದ್ದ ಪ್ರೇಯರ್ ಅಂಗಳ, ಅದರ ಪಕ್ಕದಲ್ಲಿದ್ದ ಅವರ ಇನ್ನೊಂದು ಶಾಲೆ… ಎಲ್ಲವೂ ಮಾಯವಾಗಿದ್ದವು. ದೊಡ್ಡ ದೊಡ್ಡ ಮನೆಗಳು ಎದ್ದು ನಿಂತಿದ್ದವು.

‍ಲೇಖಕರು avadhi

December 18, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಉದಯಕುಮಾರ್ ಹಬ್ಬು 'ಡೋರ್ ನಂ 142' ಈ ಕೃತಿ ನಮ್ಮೆಲ್ಲರ ಮನೆ ಮನದ ಡೋರ್ ನಂ ಆಗಿಬಿಟ್ಟಿದೆ. ನಮೆಲ್ಲರ ಬಾಲ್ಯದ ನೆನಪುಗಳು, ಹದಿಹರೆಯದ ಬಿಸಿ,...

ಯಾವುದೀ ಪ್ರವಾಹವು…

ಯಾವುದೀ ಪ್ರವಾಹವು…

ಡೋರ್ ನಂ 142 ಬಹುರೂಪಿ   ಮುಖ ಮುಖವೂ ಮುಖವಾಡವ ತೊಟ್ಟು ನಿಂತ ಹಾಗಿದೆ ಆಡುತಿರುವ ಮಾತಿನೊಳಗೆ ಹೃದಯ ಕಾಣದಾಗಿದೆ ಯಾವುದೀ ಪ್ರವಾಹವು... ರೇಡಿಯೋ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This