ನವೀನ ಸೊರಬ
ತ್ರಿಭಂಗ ನೃತ್ಯ
ಅಷ್ಟು ಸುಲಭವಲ್ಲ ನೀ ಎಣಿಸಿದಂತೆ
ನನ್ನ ತೊಡೆಯ ಮೇಲಿರುವಷ್ಟೇ
ನಂಬಿಕೆಯನ್ನು ನಿನ್ನ ತೊಡೆಯ
ಮೇಲೂ ಇಟ್ಟಿದ್ದೇನೆ..
ಹಣೆಯಗಲ ಕುಂಕುಮ
ಕೈಗೆ ಬೆಳ್ಳಿ ಖಡ ತೊಟ್ಟು
ಜಗಮಗಿಸುವ ಲೈಟುಗಳ ಮಧ್ಯೆ
ದೊಡ್ಡಗಣ್ಣುಗಳಲ್ಲಿ ಪ್ರೇಕ್ಷಕರ
ನೋಡುತ್ತಿದ್ದೇನೆ
ನಿನ್ನ ತೊಡೆಯ ಮೇಲೆ ನಂಬಿಕೆಯನಿಟ್ಟು..
ಏಕೆಂದರೆ ಬ್ಯಾಲೆನ್ಸ್ ತಪ್ಪುವುದು
ಬೇಡ ನೋಡು, ಕಲೆಯಿದು;
ಮುಗ್ಗರಿಸಿ ಬಿದ್ದರೆ ಬದುಕಿಗೆ
ಕಪ್ಪು ಚುಕ್ಕೆಯಿದು.
ಬಹಳ ನಂಬಿಕೆಯಿಟ್ಟಿದ್ದೇನೆ
ನಿನ್ನ ತೊಡೆಯ ಮೇಲೆ
ಭಂಗಿಗೆ ಭಂಗ ತರುವುದು ಬೇಡ
ನನ್ನ ಭಾವ, ಭಾರಗಳನ್ನೆಲ್ಲಾ
ನಿನ್ನ ಮಂದಹಾಸದಲ್ಲಿ ಬಚ್ಚಿಟ್ಟುಕೋ
ಮನದ ಅಭಾವ , ಬೇಗುದಿಗಳನ್ನೆಲ್ಲಾ
ಪ್ರೇಕ್ಷಕರಿಗೆ ತಲುಪದಂತೆ ಹಿಡಿದಿಟ್ಟುಕೋ
ನಿನ್ನ ಸ್ಥೈರ್ಯದ ನಿಲುವೇ
ನನಗೆ ಪಾಠ ಶಾಲೆ
ಬಹಳ ನಂಬಿಕೆಯಿಟ್ಪಿದ್ದೇನೆ
ನಿನ್ನ ತೊಡೆಯ ಮೇಲೆ..
0 ಪ್ರತಿಕ್ರಿಯೆಗಳು