ನಿನ್ನ, ಬೆಚ್ಚಗಿನ ಉಸಿರು

‘ಸಿರಿ’ ಬಂದ ಕಾಲಕ್ಕೆ…

-ಮೃಗನಯನಿ

ನಿಮ್ಮಲ್ಲಿ ಒಂದರ್ಧದಷ್ಟು ಜನಕ್ಕಾದರೂ ಪ್ರೀತಿಯ ಅನುಭವ ಆಗಿರುತ್ತೆ. ನಯನದಂಚಿನ ನಗು, ತುಟಿಯಂಚಿನ ತುಂಟತನ, ಕಣ್ಣಿಂದ ಜಾರಿ ಬೀಳುವ ದುಃಖ, ಭುಗಿದೇಳುವ ಪೊಸ್ಸೆಸಿವ್ನೆಸ್ಸು, ಅವಳಿಲ್ಲದ ಜನನಿಬಿಡ ರಸ್ತೆಗಳು, ಅವನ ಬಗ್ಗೆ ಯೋಚಿಸಿದಾಗಲೆಲ್ಲ ಸಂಪಿಗೆ ಹೂವಾಗುವ ಸಂಭ್ರಮ, ಮೂಟೆಗಟ್ಟಲೆ ಕಿಸ್ಸುಗಳು, ಬಿಗಿದಪ್ಪುಗೆಗಳು, ಲಕ್ಷಾಂತರ ಎಸ್ ಎಮ್ ಎಸ್ ಗಳು . ಉಹುಂ ಆದರೂ ಏನೋ ಹೇಳಲಾರದೆ ಉಳಿದು ಹೋಗುತ್ತೇವೆ! ಕಿಸ್ಸು-ಅಪ್ಪುಗೆಗಳು ಅವಳಲ್ಲಿ ಸ್ವಲ್ಪ ಅನುಮಾನವನ್ನೂ ಹೂತು ಹೋದವು! ಎಸ್ ಎಮ್ ಎಸ್ ಗಳು ಕಿತ್ತಲೆ ಹಣ್ಣನ್ನು ಯಾರೋ ತಿಂದು, ಬರೀ ಸಿಪ್ಪೆಯನ್ನು ನಿಮಗೆ ಉಳಿಸಿ ಹೋದ ಹಾಗೆ. ನಿಮಿಗನ್ನಿಸಿದ್ದನ್ನ ಅವ್ಳಿಗೆ ಸರಿಯಾಗಿ ಅರ್ಥ ಮಾಡೀಸೋಕ್ಕೇ ಆಗ್ತಿಲ್ಲ, ಅವ್ನಿಗೆ ನಿಮ್ಮ ಮನಸ್ಸು ಭೇದಿಸಲಾಗದ ಏಳು ಸುತ್ತಿನ ಕೋಟೆ! ಇದನ್ನೆಲ್ಲಾ ತುಂಬಿಸೋಕ್ಕೆ ಪತ್ರದಿಂದ ಮಾತ್ರ ಸಾಧ್ಯ. ಎಷ್ಟೋ ಸತಿ ಏನೇನೂ ಹೇಳೋಕ್ಕಾಗಲ್ಲ, ಗಂಟಲು ಕಟ್ಟಿರುತ್ತೆ, ಉಮ್ಮಳಿಕೆ, ಸಿಟ್ಟು, ಸೆಡವು ಇನ್ನೂ ಏನೇನೋ ಆದರೆ ಮೌಂಟ್ ಎವರೆಸ್ಟ್ ಅಷ್ಟು ಹೇಳೋಕ್ಕಿರುತ್ತೆ, ಶಾಂತವಾದ ಮೇಲೆ ‘ಲವ್ ಯು ಎ ಲಾಟ್’ ಅಥವ ‘ಸಾರಿ’ ಅಷ್ಟೇ ಸಾಕಾ? ಉಹುಂ ಅದನ್ನ ಪತ್ರವೇ ತುಂಬಿಸಲು ಸಾಧ್ಯ. ಹಾಗಂತ ಉದ್ದದ ಈ ಮೈಲ್ನಲ್ಲಿ ಮುಗಿಸಿದರೆ ಆ ಆರ್ದ್ರತೆ ಆರಿ ಹೋಗತ್ತೆ. ಅದಕ್ಕೇ ಪತ್ರ ಬರೀಬೇಕು ಅವನ ಹ್ಯಾಂಡ್ ರೈಟಿಂಗು, ಇವಳ ಕಣ್ಣಿಂದ ಟಪ್ ಎಂದು ಬಿದ್ದ ಹನಿ, ಅವಳು ನಿಮ್ಮ ಪತ್ರವನ್ನು ಕೈ ತೊಳೆದುಕೊಳ್ಳುವ ವ್ಯವಧಾನವೂ ಇಲ್ಲದೆ ಮಸಾಲೆ ಕಲಿಸುತ್ತಿದ್ದ ಕೈಯಲ್ಲೇ ಬಿಡಿಸಿ ನೋಡಿದ ಗುರುತು… ಕಾಗದಗಳ ಬಗ್ಗೆ ಮಾತಾಡುತ್ತಾ ಕೆ. ಎಸ್. ನ. ರನ್ನು  ಮರೆಯುವುದಾದರೂ ಹೇಗೆ?
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ಹುಣ್ಣಿಮೆ, ಹೋಳಿಗೆ, ದೀಪ.
ಹೆಂಡತಿ ತೌರಿಗೆ ಹೊರಡುವನೆಂದರೆ
ನನಗಿನ್ನಿಲ್ಲದ ಕೋಪ.
ಎಂದು ಕೋಪಿಸಿಕೊಳ್ಳುವ ರಾಯರು. ಆದರೆ ವಿಧಿಯಿಲ್ಲ ಹೋಗಲೇಬೇಕು. ಇನ್ನೊಂದು ತಿಂಗಳಿರುವ ತಂಗಿಯ ಮದುವೆಯ ಸಿದ್ಧತೆಯ ಸಂಭ್ರಮದಲ್ಲಿ ಅಕ್ಕ ಭಾಗವಹಿಸದಿದ್ದರೆ ಹೇಗೆ? ಅದಕ್ಕೇ ಹೋಗಿದ್ದಾಳೆ ಪಾಪ. ಕೋಪದ ಗಂಡ ‘ನೀನು ನನ್ನ ಮರತ್ಬಿಟ್ತಿದೀಯಾ , ತೌರು ಮನೆ ಊಟ ಮಾಡ್ಕೊಂಡ್ ಹಾಯಾಗಿದ್ಯ ಇಲ್ಲಿ ನನ್ನ ಕೇಳೋರು ಯಾರೂ ಇಲ್ಲ, ನಿಂಗೆ ನಾನು ಬೇಕಾಗಿಲ್ಲ’ ಅಂತ ಮುನಿದು ಕೊರಗಿ ಚುಚ್ಚು ಮಾತುಗಳನ್ನ ಬರೆದು ಕಳುಹಿಸಿದ್ದಾರೆ. ಅದಕ್ಕೆ ‘ಹೆಂಡತಿಯ ಕಾಗದ’

ಕಣ್ಣೆದುರಿಗಿರುವಾಗ ನಿಮ್ಮ ಮನವುಕ್ಕುವುದು
ಕ್ಷೀರಸಾಗರದಂತೆ ಶಾಂತಿಯೊಳಗೆ
ಕಣ್ಣ ಮರೆಯಾದಾಗ ಹೂವಲ್ಲ ಹಾವೆಂದು
ಬಿರುನುಡಿಯನಾಡುವುದು ನಿಮಗೆ ತರವೇ?
ಅಂತ ಅಲವತ್ತುಕೊಂಡು ಬರೆದ ಕಾಗದವನ್ನು ಕಂಡ ತಕ್ಷಣವೇ ಬಂಡಿ ಹತ್ತಿ ರಾಯರು ಬಂದರು ಮಾವನ ಮನೆಗೆ ಆದರೇನು ಮಾಡುವುದು ಪದುಮಳು ಒಳಗಿಲ್ಲ!
* * *
ಮುಂಜಾವಿನ ಮುದ್ದು ಬಿಸಿಲೇ…
ಇಷ್ಟೆಲ್ಲಾ ದೂರ ಹೋಗ್ತೀವಿ ಅಂದ್ಕೊಂಡಿರಲಿಲ್ಲ ಅನ್ನೋದಕ್ಕೆ ಇಷ್ಟು ದೂರ ಹೋಗಲ್ಲ ಅಂದುಕೊಂಡಿರಲೂ ಇಲ್ಲ. ಸುಮ್ಮನೆ ಹಾಗೇ ಏನಾದರೂ ಘಟಿಸಲಿ ಎನ್ನುವಂತೆ ಇದ್ದುಬಿಟ್ಟೆವಲ್ಲ ಇಬ್ಬರೂ.
ನಾನು ನಿನ್ನ ಕೆನ್ನೆಗೆ ಮುತ್ತಿಟ್ಟು ಕಿವಿ ಕಚ್ಚಿದ್ದು, ನೀನು ಆಗತಾನೇ ಸಿಗರೇಟು ಸೇದಿದ ತುಟಿಯನ್ನೇ ನನ್ನ ತುಟಿಗೆ ಒತ್ತಿದ್ದು, ಅಂಥದ್ದು, ಅದಕ್ಕಿಂತ ಹೆಚ್ಚಿನದು ನೂರಾರು ಸಾರಿ ಆಗಿದ್ದು, ಉಹು ಅದನ್ನ ನೆನಪಿಸೋಕ್ಕೆ ಪತ್ರ ಬರೀತಿಲ್ಲ
ನೀನು ಆಗಾಗ ಫೋನ್ನಲ್ಲಿ ಕದ್ದು ಮಾತಾಡುವ ನಿನ್ನ ಗರ್ಲ್ ಫ್ರೆಂಡುಗಳ ಬಗ್ಗೆ ಮಾತಾಡಿದರೆ ಬುದ್ಧಿ  ಇಲ್ಲದವಳಾಗುತ್ತೇನೆ. ಗರ್ಲ್ ಫ್ರೆಂಡುಗಳು ಅಂತ ಹೇಳುವುದರಲ್ಲಿ ನನ್ನ ಸ್ವಂತದ್ದೊಂದು ಸಮಾಧಾನವಿದೆ. ಬಹಳಷ್ಟು ಜನ ಹುಡುಗಿಯರಿದ್ದಾರೆ ಯಾರನ್ನೂ ಹಚ್ಚಿಕೊಳ್ಳುವ ಜಾಯಮಾನವಲ್ಲ ಇವನದ್ದು ಅನ್ನೋ ನಂಬಿಕೆ. ಇಲ್ಲ ನಿನಗೆ ಒಬ್ಬಳೇ ಗರ್ಲ್ ಫ್ರೆಂಡ್ ಎಂದುಕೊಂಡುಬಿಟ್ಟರೆ ಈ ಪತ್ರಕ್ಕೂ ಅರ್ಥವಿರುವುದಿಲ್ಲ.
ಅವನ ಜೊತೆ ಅವತ್ತು ನಾನು ಮೊಬೈಲ್ನಲ್ಲಿ ಮಾತಾಡುತ್ತಿದ್ದಾಗ ನೀನು ನನ್ನ ಕೈಯಿಂದ ಮೊಬೈಲ್ ಕಿತ್ತುಕೊಂಡು ಎಸೆದೆಯಲ್ಲಾ, ಆವಾಗಲೇ ಅರ್ಥವಾಗಿದ್ದು you can be so furious  ಅಂತ. ಆಮೇಲೆ ಇಬ್ಬರೂ ಅತ್ತೆವಲ್ಲಾ ಒಟ್ಟಿಗೇ ಕೂತು. ‘ನಾನು ಪೊಸೆಸ್ಸಿವ್ ಅನ್ನ್ಸ್ತೀನಾ ಚಿನ್ನ? ಹಿಂಸೆ ಮಾಡ್ತಿದೀನ ನಾನು ನಿಂಗೆ? ನಂಗೆ ಅವ್ನು ಇಷ್ಟ ಇಲ್ಲ ಕಣೇ, ನಂಗೆ ಕಷ್ಟ ಆಗುತ್ತೆ. ಸಾರಿ. ನನ್ನೆದುರಿಗೆ ಅವ್ನ ಜೊತೆ ಮಾತಾಡ್ಬೇಡ ಪ್ಲೀಸ್. ನಾನಿಲ್ದಿರೋವಾಗ ಎಷ್ಟ್ಬೇಕಾದ್ರೂ ಮಾತಾಡು ನಾನು ಬೇಡ ಅನ್ನಲ್ಲ.’ ಎನ್ನುತ್ತಿದ್ದ ನಿನ್ನ ಮುದ್ದುಗರೆಯಬೇಕೆನಿಸಿತ್ತು ನನಗೆ. ನಾವಿಬ್ಬರೂ ಜೊತೆಗಿರಲು ಶುರುವಾಗಿ ಏಳು ವರ್ಷದ ನಂತರ ಮೊದಲ ಸಾರಿ ಹೀಗಾಗಿದ್ದಲ್ಲವ? ನಿನ್ನ ಪೊಸೆಸಿವ್ ಎಂದು ಹೇಗೆ ಕರೆಯಲಿ ನಾನು?
ನಾನು ಇಲ್ಲಿಗೆ ಬಂದದ್ದು ಯಾಕೆ ಗೊತ್ತಾ? ಇಬ್ಬರೂ ಒಬ್ಬರಿಗೊಬ್ಬರು ಬೋರಾಗಿಬಿಡುತ್ತಿದ್ದೇವೇನೋ ಅಂತ ಭಯ ಕಾಡತೊಡಗಿತ್ತು. ಒಬ್ಬರಿಗೊಬ್ಬರು ಬೋರಾದಾಗಲೂ ಒಟ್ಟಿಗೇ ಇರುವ ಹಿಂಸೆಯನ್ನು ಪಡಬಾರದು ಎಂಬ ಕಾರಣಕ್ಕೆನೇ ಮದುವೆಯ ಗೋಜಿಗೆ ಹೋಗದೆ ಸುಮ್ಮನೆ ಜೊತೆಗಿರಲು ಶುರು ಮಾಡಿದವರಲ್ಲವೇ ನಾವು, ಈಗ ಇನ್ನೊಬ್ಬರಿಗೆ ಬೇಜಾರಾಗಬಾರದು, ಹರ್ಟ್ ಮಾಡಬಾರದು ಎಂಬ ಕಾರಣಕ್ಕೆ ಒಟ್ಟಿಗೆ ಇರಬಾರದು.
ನಿನಗೆ ನಾನು ಬೋರಾಗತೊಡಗಿದ್ದೇನೆ ಎಂದು ಸ್ಪಷ್ಟವಾಗತೊಡಗಿದ್ದು, ನೀನು ಅತ್ಯಂತ busy ಆಗಿ, ನನ್ನ ಜೊತೆ ಮಾತಾಡಿ ಕರ್ತವ್ಯವನ್ನು ಮುಗಿಸಬೇಕೆನ್ನುವಂತೆ ಎಣಿಸಿ ಐದು ನಿಮಿಷ ಎದುರು ಕೂತು ಎದ್ದು ಹೋಗತೊಡಗಿದೆಯಲ್ಲಾ ಆಗ. ಹಾಗೆ ಹಿಂಸೆಪಟ್ಟುಕೊಂಡು ಇರಬಾರದು ಹುಡುಗ. ನಿನಗೆ ಯಾವಾಗ ನನ್ನ ಜೊತೆ ಇರುವುದು ಕರ್ತವ್ಯವೆನಿಸತೊಡಗಿದೆ, ನಿನಗೆ ನನ್ನ ಸಾಂಗತ್ಯ ಯಾವ ರೀತಿಯ ಖುಷಿಯನ್ನೂ ಕೊಡುತ್ತಿಲ್ಲ ಎಂದು ತಿಳಿಯಿತೋ ನನಗೆ ಆ ಕ್ಷಣದಿಂದ ನಿನ್ನ ಜೊತೆಗೆ ಇರುವುದು ಉಸಿರು ಕಟ್ಟಿದ ಅನುಭವ.
ಅದಕ್ಕೇ ಇಲ್ಲಿಗೆ ಬಂದು ಬಿಟ್ಟೆ. ತಾತ ನನ್ನ ಹೆಸರಿಗೆ ಬರೆದ ಈ ಕಾಫಿ ಎಸ್ಟೇಟ್ ಮಾತ್ರ ಸಮಾಧಾನ ಕೊಡುತ್ತೆ ಅನ್ನಿಸಿತು. ನಿನಗೆ ನಾನು ಬೇಕೆನ್ನಿಸಿದರೆ ಇಲ್ಲಿಗೆ ಬಂದೇ ಬರುತ್ತೀಯ ಎಂದು ಗೊತ್ತಿತ್ತು. ನೀನು ಬರದೇ ಹೋಗಿದ್ದರೆ ಜೀವನ ಪೂರ್ತಿ ನಿನಗಾಗಿ ಕಾಯುತ್ತಾ ಕೂರುತ್ತಿದ್ದೆ ಎನ್ನುವುದು ಸುಳ್ಳು. ಆದರೆ ಅವತ್ತಿನಿಂದ, ನಾನು ಅಲ್ಲಿಂದ ಇಲ್ಲಿಗೆ ಹೊರಟು ಬಂದ ದಿನದಿಂದ ನೆನ್ನೆಯವರೆಗೂ ಅಂದರೆ ಐವತ್ತೇಳು ದಿನ ಒಂಭತ್ತು ಗಂಟೆಗಳು ಬೇರೆ ಯಾರೂ ಬೇಕೆನಿಸಲಿಲ್ಲ.
ನೆನ್ನೆ ನೀನು ಬಂದು ಎದುರು ಕೂತಾಗ ಅಳದೆ ಯಾವ ಭಾವನೆಗಳನ್ನೂ ತೋರಿಸದೆ ಸಹಜವಾಗಿರಲು ಎಷ್ಟು ಕಷ್ಟಪಟ್ಟೆ ಗೊತ್ತಾ? ನನ್ನ ನಾಟಕದ ಕಟ್ಟೆ ಒಡೆದು, ನಾನು ಭೋರ್ಗರೆದು ನೀರಾಗಿ ಸುರಿದದ್ದು ಕಾಫಿ ಬಟ್ಟಲ ಕೆಳಗೆ ಸಿಕ್ಕ ನಿನು ಬರೆದಿಟ್ಟು ಹೋದ ಚೀಟಿ ಓದಿದಾಗ..  ‘I can exist without you, but can’t live. I want to live please come’  ಹೌದು ಹುಡುಗ ನಾನೂ ಬದುಕಬೇಕು, ಬರುತ್ತೇನೆ.
ತೇರೇ ಬಿನ್ ಮೆ ಯು ಕೈಸೆ ಜಿಯಾ
ಕೈಸೆ ಜಿಯಾ ತೆರೆ ಬಿನ್
ನಿನ್ನ
ಬೆಚ್ಚಗಿನ ಉಸಿರು

‍ಲೇಖಕರು avadhi

October 20, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

ಚಂಪಾ ಶೆಟ್ಟಿ । ಕಳೆದ ವಾರದಿಂದ । ಸಿನೆಮಾ ಮಾಡಬೇಕೆಂದಕೂಡಲೇ ಅನೇಕರಿಂದ ಬಂದದ್ದು ಒಂದೇ ಪ್ರಶ್ನೆ " ನಿಮ್ಮದು ಆರ್ಟ್ ಮೂವಿನಾ? ಕಮರ್ಷಿಯಲ್...

2 ಪ್ರತಿಕ್ರಿಯೆಗಳು

  1. subramani

    ಹೌದು.ನಿಮ್ಮ ಮಾತು ನಿಜ.ಪ್ರೀತಿಯ ನೆನಪುಗಳು ಬೆಚ್ಚಗೆ.

    ಪ್ರತಿಕ್ರಿಯೆ
  2. kumarsringeri

    ನೆನಪುಗಳ ಬುತ್ತಿ ಯಾವುದೇ ಕಂಪ್ಯೂಟರ್ ನಿಂದಾಗಲಿ, ಯಂತ್ರದಿಂದಾಗಲಿ ನೆನಪಿಸಲು ಸಾಧ್ಯವೇ? ಸ್ಪರ್ಶಜ್ಞಾನ ಬರುವುದು ಅವರ ಬರವಣಿಗೆ ಎಂದಲ್ಲವೇ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: