ನಿಮಗೆ ಗೊತ್ತಿಲ್ಲದ ರಾಧಿಕಾ ಪಂಡಿತ್..

rekharani3

ರೇಖಾರಾಣಿ 

ನಾನು ಅಳುಬುರುಕಿಯಲ್ಲ!!!
ಆದರೆ ಮೊನ್ನೆ ಅತ್ತುಬಿಟ್ಟೆ. ಅದೂ ಸಾರ್ವಜನಿಕವಾಗಿ!!!

ನಾನಿದುವರೆಗೂ ಅತ್ತಿದ್ದು ಎರಡೇ ವಿಷಯಗಳಿಗೆ.

ನನ್ನದಲ್ಲದ ತಪ್ಪಿಗೆ ಹೊಣೆ ಮಾಡಿದಾಗ ಮತ್ತು

ನನ್ನ ಪ್ರೀತಿಪಾತ್ರರು ನನ್ನನ್ನು ಬಿಟ್ಟು ಅಗಲಿದಾಗ.

ಇತ್ತೀಚೆಗಂತೂ ನಾನು ತುಂಬಾ ಗಟ್ಟಿಯಾಗಿದ್ದೇನೆ. ಅಳಬೇಕೆಂದರೂ ಅಳು ಬರುವುದಿಲ್ಲ. ಕಾರಣ ಅಶೋಕ್ ಕಶ್ಯಪ್ ಸಾವನ್ನು ಗೆದ್ದು ಆರೋಗ್ಯದಿಂದಿದ್ದಾರೆ…
ಸದಾ ಹೋರಾಟ ಮಾಡುವ ಛಲವಿರುವ ನಾನು ಒಂದಲ್ಲ ಒಂದು ಪ್ರಯೋಗಗಳಿಗೆ ನನ್ನನ್ನು ಒಡ್ಡಿಕೊಳ್ಳುತ್ತಲೇ ಇರುತ್ತೇನೆ…ಈ ಕೆಲಸವಿಲ್ಲದಿದ್ದರೆ ಪರವಾಗಿಲ್ಲ.. ಒಳ್ಳೆಯದಾಯಿತು.. ಮತ್ತೊಂದು ಹೊಸ ಕೆಲಸ ಮಾಡುವ ಎನ್ನುವ ಹುಮ್ಮಸ್ಸಿನವಳು. ಕೇವಲ ನನ್ನನ್ನು ಒಡ್ಡಿಕೊಂಡರೆ ಪರವಾಗಿಲ್ಲ.. ಆದರೆ ನನ್ನ ಜೊತೆಗೆ ನಮ್ಮ ಜೀವನವನ್ನೂ ಒಡ್ಡಿಕೊಂಡರೆ?…

radhika pandithಯಾವುದೇ ಧಾರಾವಾಹಿಯಾಗಲಿ, ಸಿನೆಮಾ ಆಗಲಿ ನಿರ್ಮಾಪಕರು ಹಣ ಹೂಡುತ್ತಾರೆ. ಆದರೆ ನಾನು ನಿರ್ಮಾಪಕಿಯಾದಾಗ.. ನನ್ನ ಮತ್ತು ಅಶೋಕ್ ಜವಾಬ್ದಾರಿಗಳು ಬೇರೆಯೇ ಇರುತ್ತವೆ. ಕಥೆ-ಚಿತ್ರಕಥೆ-ಸಂಭಾಷಣೆ, ನಿರ್ಮಾಣ- ನಿರ್ದೇಶನ, ಮೇಲ್ವಿಚಾರಣೆ ಮತ್ತು ಛಾಯಾಗ್ರಹಣ ಇವಿಷ್ಟೂ ನಮ್ಮಿಬ್ಬರಿಂದ ನಡೆಯಲ್ಪಡುತ್ತದೆ. ಅಶೋಕ್ ಕಶ್ಯಪ್ ಗೆ ಸಿನೆಮಾ ಆದರೂ ಅಷ್ಟೇ, ಧಾರಾವಾಹಿಯಾದರೂ ಅಷ್ಟೇ! ಎಲ್ಲವೂ ಸಿನೆಮಾ ರೀತಿಯೇ ಇರಬೇಕು. ಅಗತ್ಯಕ್ಕಿಂತ, ಬಡ್ಜೆಟ್ ಗಿಂತಾ ಹೆಚ್ಚು ಹಣ ಖರ್ಚಾಗುತ್ತಿದೆ ಎಂದರೆ ಅವರಿಗೆ ಕಿವಿಯೇ ಕೇಳಿಸೋಲ್ಲ!! ಅಂದರೆ ಯಾವುದೇ project ಆಗಲಿ ಹಣ, ಶ್ರಮ, ಪ್ರತಿಭೆಯ ಜೊತೆಗೆ ನಮ್ಮ ಜೀವನವನ್ನೇ ಪಣಕ್ಕಿಟ್ಟುಬಿಡುತ್ತೇನೆ.

ಇರಲಿ…ಇವೆಲ್ಲಾ ಇದ್ದದ್ದೇ. ನಮ್ಮ ಆಸೆ..ನಮ್ಮ ಕನಸು..ಯಾರನ್ನೂ ದೂರುವ ಹಾಗಿಲ್ಲ. ವಿಷಯಕ್ಕೆ ಬರುತ್ತೇನೆ.

ಧಾರಾವಾಹಿಗಳಲ್ಲಿ ನಾವು ನಿರ್ಮಾಪಕರು ಷೂಟಿಂಗ್ ಶುರುವಾದ ಕ್ಷಣದಿಂದ ಅಸುರಕ್ಷಿತ ಮನೆಗೆ ವರ್ಗಾಯಿಸಲ್ಪಡುತ್ತೇವೆ. ಸಾವಿರ ಎಪಿಸೋಡ್ ಗಳನ್ನು ಮಾಡಿ ಎಂದು ಅಂಗೈನಲ್ಲಿ ಆಕಾಶ ತೋರಿಸುವ ಚಾನಲ್ ಗಳು ಯಾವುದೇ ಕಾರಣ ಕೊಡದೆ ದೀಡೀರೆಂದು ಸೀರಿಯಲ್ ನಿಲ್ಲಿಸಿ ಲಕ್ಷಾಧಿಪತಿಯನ್ನು ಭಿಕ್ಷಾಧಿಪತಿ ಮಾಡಿಬಿಡುವುದೊಂದು ಕಡೆಯಾದರೆ…ನಾವು ಕಷ್ಟಪಟ್ಟು ಆರಿಸಿ, ಟ್ರೈನಿಂಗ್ ಕೊಟ್ಟು, ಪಾತ್ರ ರೂಪಿಸಿ, stand ಹಾಕಿಕೊಂಡು ಸೈಕಲ್ ಹೊಡೆಯುತ್ತಿದ್ದ ಕಲಾವಿದರಿಂದ ನಟನೆ ಹೊರಗೆಳೆದು…ಕಡೆಗೂ ಆ ಕಲಾವಿದರಿಗೊಂದು “ಖ್ಯಾತಿ”ಎಂಬ ಲೇಬಲ್ ಅಂಟಿಸಿ ಸೀರಿಯಲ್ ಇನ್ನೇನು ಪ್ರಸಿದ್ದಿಯ ತುತ್ತ ತುದಿಗೇರುತ್ತಿದೆ ಎಂದಾಗ ನಿರ್ಮಾಪಕರ ಜೇಬು ಬರಿದಾಗಿರುತ್ತದೆ…ಕಲಾವಿದರ ಜೇಬೂ, ನೇಮೂ, ಫೇಮೂ ತುಂಬಿರುತ್ತದೆ.

ಅದೃಷ್ಟವೋ..ದುರಾದೃಷ್ಟವೋ..ಈ ಕಲಾವಿದರೇ ಸೀರಿಯಲ್ ಆತ್ಮವಾಗಿಬಿಡುತ್ತಾರೆ….ಇಂತಹ ಸಂಕಷ್ಟದ ದಿನಗಳಲ್ಲಿದ್ದು ಇನ್ನೇನು ಕೆಲವು ದಿನಗಳಲ್ಲಿ ಹಾಕಿದ ಹಣ ಮರಳಿ ಪಡೆಯುವ ಎಂದು..ನಿರ್ಮಾಪಕ ಆಸೆಗಣ್ಣಿನಿಂದ ನಿರೀಕ್ಷಿಸುತ್ತಿರುವಾಗ…..ಮಾನವ ಜಾತಿಗೆ ಸೇರಿರದ ನಿರ್ಮಾಪಕನೊಬ್ಬ ನಮ್ಮ ಶ್ರಮವನ್ನು ದಿಢೀರ್ encash ಮಾಡಿಕೊಳ್ಳಲು ನಮ್ಮ ಸೀರಿಯಲ್ ಕಲಾವಿದರನ್ನು ಹೈಜಾಕ್ ಮಾಡಿಬಿಡುತ್ತಾನೆ.

ಆ ಕಲಾವಿದರೋ?!!! ಎಲ್ಲರನ್ನೂ, ಎಲ್ಲವನ್ನೂ ಝಾಡಿಸಿ ಒದ್ದು, ಸಂಬಂಧವೇ ಇಲ್ಲದಂತೆ ಕೊಸರಿಕೊಂಡು ಹೋಗಿಬಿಡುತ್ತಾರೆ. ಕಕ್ಕಾಬಿಕ್ಕಿಯಾದ ನಿರ್ಮಾಪಕ, ನಿರ್ದೇಶಕ ಖಾಲಿಯಾದ ಸ್ಥಾನಕ್ಕೆ ಬೇರೆ ಕಲಾವಿದರನ್ನು replace ಮಾಡಿ ಸೀರಿಯಲ್ ಮುಂದುವರೆಸಲು ಹೆಣಗಾಡುತ್ತಿದ್ದಾಗ, ಇದ್ಯಾವುದರ ಅರಿವಿಲ್ಲದ ಮುಗ್ದ ಪ್ರೇಕ್ಷಕರು ಹಳೆಯ ಕಲಾವಿದರಿಗೆ ಜೋತುಬಿದ್ದು ಅವರೇ ಬೇಕೆಂದು ಆಸೆಪಡುತ್ತಾರೆ. ಹೊಸ ಕಲಾವಿದರ ಜೊತೆ ಮಾನಸಿಕವಾಗಿ ಮುಂದುವರೆಯಲು ಕಷ್ಟಪಡುತ್ತಾರೆ.

ಈ ಹೆಣಗಾಟದಲ್ಲಿ TRP ಬಿದ್ದು ಚಾನಲ್ ಕಡೆಯಿಂದ ನಿರ್ಮಾಪಕನಿಗೆ ವಾರ್ನಿಂಗ್ ಕೂಡಾ ಬಂದುಬಿಡುತ್ತದೆ!!! ಒಂದು ಪಕ್ಷ ಸೀರಿಯಲ್ ನಿಂತು ಹೋಗಿದ್ದೇ ಆದರೆ…ದೇವರಾಣೆಯಾಗಲೂ ಹೇಳ್ತಿದ್ದೀನಿ…ಆ ನಿರ್ಮಾಪಕ ಕಂಗಾಲಾಗಿ ಎದೆಯನ್ನು ಒತ್ತಿಹಿಡಿದು ಮೂಲೆ ಸೇರಿ ಮತ್ತೆ ಸುಧಾರಿಸಿಕೊಳ್ಳಲು ಹಲವಾರು ವರ್ಷಗಳ ಕಾಲ ಒದ್ದಾಡುತ್ತಾನೆ. ಇದು ನಾನೇ ಕಣ್ಣಾರೆ ಕಂಡ ಮತ್ತು ಅನುಭವಿಸಿದ ಸತ್ಯ!

rekha rani radhika pandith3ಸುತ್ತ ಮುತ್ತ ಇಂತಹುದೇ ಕಥೆಗಳು ನಡೆಯುತ್ತಿರುವುದರ ಮಧ್ಯೆಯೂ ಕೆಲವು ಅಪರಂಜಿ ಕಲಾವಿದರಿದ್ದಾರೆ. ನಿಯತ್ತು ಅಂದರೆ ನಿಯತ್ತು.! ಕೀರ್ತಿ, ಹಣ ಯಾವುದರ ಹಿಂದೆಯೂ ಓಡದೆ…ನಮ್ಮ ಪ್ರೀತಿ ವಿಶ್ವಾಸಗಳ ಹಿಂದೆ ಬರುವವರು. ಇಂತಹವರು ಎಲ್ಲೇ ಇದ್ದರೂ ನಮ್ಮ ಅಂತರಂಗದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ… ನನ್ನ ಹೃದಯದೊಳಗೆ ಈ ಸ್ಥಾನ ಪಡೆದಿರುವಾಕೆ ಕನ್ನಡದ ಪ್ರಖ್ಯಾತ ನಟಿ ರಾಧಿಕಾ ಪಂಡಿತ್.

ನನ್ನ ನಿರ್ಮಾಣದ “ನಂದಗೋಕುಲ” ಧಾರಾವಾಹಿಯಿಂದ ರಾಧಿಕಾ ಯಶಸ್ಸಿನ ತುತ್ತತುದಿಗೇರಿದ್ದಳು. ಪ್ರತೀ ಸೀನ್ ನಲ್ಲಿಯೂ ಈಕೆ ಇರಬೇಕೆಂದು ಜನ ಆಸೆ ಪಡುತ್ತಿದ್ದರು. ನಾವು ಮನೆಯಿಂದ ಹೊರಗಡೆ ಷೂಟಿಂಗ್ ಹೋದರೆ ಸಿನೆಮಾಗೆ ಸೇರಿದಂತೆ ಜನಜಾತ್ರೆ ಸೇರುತ್ತಿತ್ತು. ನಾನು ಹಾಕಿದ ಬಂಡವಾಳ ವಾಪಸ್ ಬರುವ ಮುನ್ನವೇ ಎರಡು ಸಿಡಿಲುಗಳು…ಒಂದು..ಅಶೋಕ್ ಕಶ್ಯಪ್ ಲ್ಯೂಕೇಮಿಯಾ ( blood cancer) ಕಾಯಿಲೆಗೆ ತುತ್ತಾದರು. ಎರಡನೆಯದು…ನನ್ನ ಧಾರಾವಾಹಿಯ ಆತ್ಮ ರಾಧಿಕಾ ಪಂಡಿತ್ ಗೆ ಸಿನೆಮಾಗಳಿಂದ, ಸೀರಿಯಲ್ ಗಳಿಂದ ಆಫರ್ ಗಳೋ..ಆಫರ್ ಗಳು…

ಪ್ರತಿ ದಿನಾ ಬೆಳಿಗ್ಗೆ ಸೆಟ್ ಗೆ ಹೋಗುವಾಗ “ನಾಳೆಯಿಂದ ನಾನು ಬರೊಲ್ಲ” ಎಂದು ರಾಧಿಕಾ ಹೇಳಿದರೆ ನಮ್ಮ ಜೀವನವೇ ಮುಳುಗಿ ಹೋಗುತ್ತದಲ್ಲ ಎಂದು ಡವಗುಟ್ಟುವ ಹೃದಯವನ್ನು ಕೈಯಲ್ಲಿಟ್ಟುಕೊಂಡು ಹೋಗುತ್ತಿದ್ದೆ. “ಈಕೆ ನನಗೆ ಕೈ ಕೊಡದಿರಲಿ..ನನ್ನ ಬಂಡವಾಳ ನನಗೆ ಮರಳಿ ಬಂದರೆ ಅಶೋಕ್ ಕಶ್ಯಪ್ ರನ್ನು ಉಳಿಸಿಕೊಂಡುಬಿಡುತ್ತೇನೇ…ಹೇಗಾದರೂ ಮಾಡಿ ಇದೊಂದು ಬಾರಿ ನನ್ನನ್ನು ಗೆಲ್ಲಿಸು “ ಎಂದು ನೆನಪಿರುವ ದೇವರುಗಳಿಗೆಲ್ಲಾ ಕೇಳಿಕೊಳ್ಳುತ್ತಿದ್ದೆ.

ನನ್ನ ಆತಂಕ, ನಮ್ಮ ವಿಚಿತ್ರವಾದ, ಸೂಕ್ಷ್ಮವಾದ ಪರಿಸ್ಥಿತಿ ನೋಡಿ ರಾಧಿಕಾ ಪಂಡಿತ್ ಮತ್ತವಳ ಅಮ್ಮ ಕಂಗಾಲಾಗಿದ್ದರು. ಪ್ರತಿಯೊಬ್ಬರೂ “ನಂದಗೋಕುಲ ಸೀರಿಯಲ್ ನಡೆಯುತ್ತದಾ? ಇಲ್ಲವಾ? ಒಂದು ಪಕ್ಷ ಅಶೋಕ್ “ಹೊರಟು ಹೋದರೆ” ಸೀರಿಯಲ್ ನಿಲ್ಲಿಸುತ್ತೀರಾ? ಅಥವಾ ಬೇರೆ ಯಾರಿಗಾರರೂ ವಹಿಸುತ್ತೀರಾ? ನಾವೆಲ್ಲಾ ಬೇರೆ ಸೀರಿಯಲ್ ಈಗಲೇ ನೋಡಿಕೊಂಡರೆ ಒಳ್ಳೆಯದಾ?” ಇತ್ಯಾದಿ ಸಾವಿರ ಪ್ರಶ್ನೆಗಳನ್ನು ಕೇಳಿ ನನ್ನ ದು:ಖ ಹೆಚ್ಚು ಮಾಡುತ್ತಿದ್ದರೆ…ರಾಧಿಕಾ ಮಾತ್ರ ಒಂದೇ ಒಂದೂ ಪ್ರಶ್ನೆ ಕೇಳದೆ ತನ್ನ ಪಾಡಿಗೆ ಸೀರಿಯಲ್ ನಲ್ಲಿ ತೊಡಗಿಸಿಕೊಂಡಿದ್ದಳು.

ನಂತರ ನಡೆದಿದ್ದೆಲ್ಲಾ ಇತಿಹಾಸ…ನಾನು ಅಶೋಕ್ ಕಶ್ಯಪ್ treatment ಕೆಲಸದಲ್ಲಿ ನನ್ನನ್ನು ತೊಡಗಿಸಿಕೊಂಡೆ…ಬೇರೆ episode director ಬಂದು ಕೆಲಸ ಮುಂದುವರೆಸಿದರು.. ಆ ನಂತರ ಸುಮಾರು ತಿಂಗಳ ಕಾಲ ನಡೆದ ನಂದಗೋಕುಲ ಧಾರವಾಹಿಯಲ್ಲಿ ಕಡೆಯ ದಿನದವರೆಗೂ, ಕಡೆಯ ಸೀನ್ ವರೆಗೂ, ಕಡೆಯ ಕ್ಷಣದವರೆಗೂ ರಾಧಿಕಾ ಪಂಡಿತ್ ನಮ್ಮೊಂದಿಗಿದ್ದು ಒಳ್ಳೆಯತನ ಮೆರೆದಿದ್ದಳು…

rekha rani radhika pandithಅಂದು ನಂದಗೋಕುಲ ಧಾರಾವಾಹಿಯ ಆತ್ಮವಾಗಿದ್ದ ರಾಧಿಕಾ ಪಂಡಿತ್ ಬೇರೆ ಕಲಾವಿದರಂತೆ ನಮ್ಮ ಧಾರಾವಾಹಿ ಬಿಟ್ಟು ಹೋಗದೆ ನಮ್ಮೊಂದಿಗಿದ್ದುದರಿಂದ ಹಾಕಿದ ಬಂಡವಾಳವೂ ಬಂತು…ಲಾಭವೂ ಬಂತು. ಪ್ರತೀ ಪೈಸೆಯನ್ನು ಅಶೋಕ್ ಕಶ್ಯಪ್ ಅವರನ್ನು ಉಳಿಸಿಕೊಳ್ಳಲು ಖರ್ಚು ಮಾಡಿದೆ.
ಇಂದು ಅಶೋಕ್ ಕಶ್ಯಪ್ ಸರಿಯಾದ ಸಮಯದಲ್ಲಿ, ಸರಿಯಾದ treatment ಪಡೆದು ಬದುಕುಳಿದಿದ್ದಾರೆ. ಇದಕ್ಕೆ ರಾಧಿಕಾ ಪಂಡಿತ್ ಅಂತ ನಾನು ಹೃದಯಪೂರ್ವಕವಾಗಿ ಹೇಳುತ್ತಿದ್ದೇನೆ. ನೀವೂ ಒಪ್ಪುತ್ತೀರಲ್ಲವೆ?

Zee TV ಯ Weekend With Ramesh ಕಾರ್ಯಕಮದಲ್ಲಿ ರಾಧಿಕಾ ಪಂಡಿತ್ ಬಗ್ಗೆ ಮಾತನಾಡುವಾಗ …ಇಷ್ಟುದಿನ ತುಂಬಿಟ್ಟಿದ್ದ ಪ್ರೀತಿ- ಕೃತಜ್ಞತೆಗಳೆಲ್ಲಾ ಕಣ್ಣೀರಾಗಿ ಹೊರಬಂತು…!!!

WWR ನಲ್ಲಿ ನಟ ರವಿಚಂದ್ರನ್ ಮಾತನಾಡುವಾಗ ಅವರ ಹೆಂಡತಿ ಅತ್ತಿದ್ದು ಯಾಕೆಂದು ಈಗ ಅರ್ಥವಾಯಿತು. ಕೆಲವು ವಿಷಯಗಳನ್ನು ಹೇಳಿಕೊಳ್ಳಲು ನಮಗೆ ವೇದಿಕೆಯೇ ಸಿಕ್ಕಿರುವುದಿಲ್ಲ. ವಿಷಯ ನಮ್ಮೊಳಗೇ ಇದ್ದಿದ್ದು ಎಂದೋ ಒಂದು ದಿನ ಪಟಕ್ಕನೆ ಎಲ್ಲರ ಮುಂದೆ ಬಂದಾಗ…ಯಾರಿಗೆ ಮಾತು ತಲುಪಬೇಕಿತ್ತೋ ಅವರ ಪ್ರತಿಕ್ರಿಯೆ, ಪ್ರೀತಿಯ ನೋಟ, ಪಕ್ಕದಲ್ಲಿದ್ದವರು ಅರ್ಥಮಾಡಿಕೊಳ್ಳುತ್ತಾ “ಸಮಾಧಾನ” ಎಂದು ಬೆನ್ನು ತಟ್ಟುವ ಆ ಸ್ಪರ್ಶ, ಎದುರಿಗಿದ್ದವರ ಆತ್ಮೀಯ ಸ್ಪಂದನ, ಸುತ್ತಲಿದ್ದವರ ವಿಶ್ವಾಸದ, ನಿಟ್ಟುಸಿರಿನ ಪ್ರತಿಕ್ರಿಯೆ …ಇವೆಲ್ಲಾ ನಮ್ಮೊಳಗೆ ವಿಚಿತ್ರ ಸಂಚಲನ ಶುರುಮಾಡಿಬಿಡುತ್ತದೆ…ಇದನ್ನು ಅನುಭವಿಸಿದವರಿಗೇ ಗೊತ್ತು…ಸಾರ್ವಜನಿಕವಾಗಿ ಯಾಕೆ ಅಳು ಬರುತ್ತದೆಂದು!!!

ರಾಧಿಕಾ ಪಂಡಿತ್ ರೀತಿ ಗುಣವಿರುವ ಪ್ರತಿಭಾವಂತ ಮಕ್ಕಳು ನಮ್ಮ ಕನ್ನಡ ನಾಡಿನ ತುಂಬಾ ಹುಟ್ಟಿ ಮೆರೆದಾಡಲಿ

‍ಲೇಖಕರು Admin

August 13, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮ್ಯಾರಡೋನಾ, ಮ್ಯಾರಡೋನಾ….

ಮ್ಯಾರಡೋನಾ, ಮ್ಯಾರಡೋನಾ….

ಕೆ. ಪುಟ್ಟಸ್ವಾಮಿ ಡೀಗೋ ಮ್ಯಾರಡೋನಾ ನಿಧನರಾದ ಸುದ್ದಿಯನ್ನು ದರ್ಶನ್‌ ಜೈನ್‌ ಅವರ ವಾಲ್‍ನಲ್ಲಿ ಓದಿದಾಗ 1982,1986 ಮತ್ತು1990ರ...

ತಬ್ಬಲಿ ಜಾತಿಯ ಸೂಲಗಿತ್ತಿ ಮಲ್ಲಮ್ಮ…..!

ತಬ್ಬಲಿ ಜಾತಿಯ ಸೂಲಗಿತ್ತಿ ಮಲ್ಲಮ್ಮ…..!

ಶಿವರಾಜ್ ಮೋತಿ ಒಡಹುಟ್ಟಿದ ಹತ್ತು ಮಕ್ಕಳಿರುವ ತುಂಬು ಸಂಸಾರದಲ್ಲಿ ಜನಿಸಿ, ತಾನೂ ಸಹ ಹನ್ನೆರಡು ಮಕ್ಕಳ ಹೆತ್ತಿ, ಇಬ್ಬರು ತೀರಿದ್ದಾರೆ. ಈಗ...

2 ಪ್ರತಿಕ್ರಿಯೆಗಳು

 1. lalitha sid

  ರಾಧಿಕಾ ನಿಮಗೆ ನಮಸ್ಕಾರ. ನಲಿವು ಕೊಡಲಾಗದಿದ್ದರೆ ಬೇಡ ಕಂಡವರಿಗೆ ನೋವು ಕೊಡದೆ ಬಾಳಿಬಿಟ್ಟರೆ ಅದೇ ದೊಡ್ಡ ಸಜ್ಜನಿಕೆ ಅಂತಾರೆ. ನೀವು ಇಷ್ಟು ಚಿಕ್ಕ ವಯಸ್ಸಿನಲ್ಲಿ ರೇಖಾ ಅವರ ನೋವು ಅರಿತು ನಡೆದಿರಿ. ರೇಖಾ ಅವರದ್ದು ನಿಸ್ಪೃಹ ನುಡಿ. ಇದನ್ನು ಹಂಚಿಕೊಂಡು ಮನುಷ್ಯರ ಒಳ್ಳೇತನದಲ್ಲಿ ಕೆಲವರಿಗಾದರೂ ಇರುವ ನಂಬಿಕೆಯನ್ನು ದೃಢೀಕರಿಸಿದರು.

  ಪ್ರತಿಕ್ರಿಯೆ
 2. ಕಲ್ಕೆರೆ ದೀಪಕ್

  ಅರ್ಥವಾಗದವರು ಮನ ಒಲಿಸಿದವರು ನಿಂದ ಇಲ್ಲಿತನಕ ಅನೇಕ ಕಷ್ಟ ಸುಖಗಳನ್ನು ಅನುಭವಿಸಿಕೊಳ್ಳುತ್ತಾ ಬದುಕು ಕಟ್ಟಿಕೊಂಡವರು.
  ಮುಂದಿನ ವೈಯಕ್ತಿಕ , ವೃತ್ತಿಜೀವನ ಸುಖವನ್ನು ತರಲಿ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: