ನಿಮಗೆ ಹೇಗನ್ನಿಸಿತೋ ಹಾಗೇ ಓದಿಕೊಂಡುಬಿಡಿ!

ಕನಸು ಮತ್ತು ಕಥೆ 

-ವೈಶಾಲಿ 
‘ಕೆನೆ coffee ಬ್ಲಾಗ್’ನಿಂದ

ಒಂದು ಮುಸ್ಸಂಜೆ ಯಾರ ಜೊತೆಯಿರದೆ ಒಂಟಿಯಾಗಿ ಹೋಗುತ್ತಿದ್ದ ಮೋಡವೊಂದನ್ನು ಕೇಳಿದೆ. ನಿನ್ನೊಳಗೊಂದಷ್ಟು ಕನಸು ಬಿತ್ತಲೇ? ಮಳೆಯೊಂದನ್ನೇ ಸುರಿಸಿ ಬೇಸರವಾಗಿದ್ದಿರಬೇಕು ಅದಕ್ಕೆ. ಒಪ್ಪಿಗೆ ಎಂಬಂತೆ ತಲೆಯಾಡಿಸಿತು.

ನನ್ನೊಳಗೆ ಅವಿತುಕೊಂಡಿದ್ದ ಕೆಲ ಚಂದದ ಕನಸುಗಳನ್ನು ತೆಗೆದು ಮೆಲ್ಲನೆ ಮೋಡದ ಎದೆಯೊಳಕ್ಕೆ ಇಟ್ಟೆ. ಜೊತೆಗೊಂದಷ್ಟು ನೆನಪುಗಳನ್ನೂ ಹಾಕಿದೆ. ಮೋಡ ಒಮ್ಮೆ ನಕ್ಕು ಸರಿಯಿತು. ಬರುತ್ತಿದ್ದ ಇನ್ನಷ್ಟು ಮೋಡಗಳ ಗುಂಪಿನೊಳಗೆ ಸೇರಿಕೊಂಡು ಮುನ್ನಡೆಯಿತು.

ಊರು, ಪೇಟೆ, ಪಟ್ಟಣಗಳನ್ನೆಲ್ಲ ಸವರುತ್ತ ನಡೆಯಿತು ಮೋಡ. ಆಕಾಶವನ್ನೇ ದಿಟ್ಟಿಸುತ್ತಾ ಕುಳಿತ ರೈತನನ್ನು ನೋಡಿತು. ಒಂದಷ್ಟು ಮಳೆಯ ಚೆಲ್ಲಿ ಹೋಗು ಎಂದು ಯಾವುದೊ ದೇವರ ಮೇಲೆ ಕೊಡಗಟ್ಟಲೆ ನೀರು ಸುರಿಯುತ್ತಿದ್ದವರು ಕಂಡರು. ಅಯ್ಯೋ! ಮಳೆ ಬಂದುಬಿಡುತ್ತೇನೋ ಎಂಬಂತೆ ಮೇಲೆ ನೋಡಿದ ಆಟವಾಡುತ್ತಿದ್ದ ಮಕ್ಕಳ ಕಣ್ಣಲ್ಲೊಮ್ಮೆ ಕಾಣಿಸಿಕೊಂಡಿತು ಮೋಡ. ಬಾರದ ಮಳೆಗಾಗಿನ ಅಜ್ಜಿಯರ ಶಾಪವೂ ಕೇಳಿತು…

ಮೋಡ ಎಲ್ಲ ಗಮನಿಸುತ್ತ ಮುನ್ನಡೆಯಿತು. ಆದರೆ ಎಲ್ಲಿಯೂ ನಿಲ್ಲಲಿಲ್ಲ. ಜನ ಕೂಗಿದರು. ಬೈದರು. ಅಸಹಾಯಕರಾಗಿ ಹರಕೆಯನ್ನೂ ಹೊತ್ತರು. ಮೋಡ ದೇವರ ಮಾತನ್ನೂ ಕೇಳಲಿಲ್ಲ.

ಕಡೆಗೊಂದು ದಿನ ತುಂಬ ದೂರ ಸಾಗಿದ ಮೇಲೆ ಮೋಡಕ್ಕೆ ಸುಸ್ತಾಯಿತು. ಕನಸುಗಳ ಭಾರ ಹೊರುವುದು ಇನ್ನು ಕಷ್ಟ ಅನ್ನಿಸತೊಡಗಿತು. ಮೋಡಗಳು ನಿತ್ತವು. ನಿಂತಲ್ಲೇ ತಂಪಾದವು. ಮೋಡಗಳ ಎದೆಯಿಂದ ಹನಿಗಳುದುರಿದವು. ಕಾದಿದ್ದ ಭೂಮಿಯೂ ತಣಿಯಿತು. ಜನ ಖುಷಿಯಾದರು. ಎಲ್ಲ ಮರೆತರು. ಹಾಡಿದರು. ಕುಣಿದರು….

ಇವೆಲ್ಲದರ ಮದ್ಯೆ ಕನಸುಗಳನ್ನು ಹೊತ್ತ ಮೋಡ ಸಮಯ ನೋಡಿ ನನ್ನ ಕನಸುಗಳನ್ನು ಎದೆಯಿಂದಿಳಿಸಿತು. ಕನಸುಗಳೆಲ್ಲ ಮೆಲ್ಲಗೆ ಕೆಳಗಿಳಿದವು. ಒಂದು ಕನಸು ಮಳೆಗೆ ಕೈ ಹಿಡಿದ ಪುಟ್ಟ ಹುಡುಗಿಯೊಬ್ಬಳ ಅಂಗೈಯೊಳಗೆ ಬಿತ್ತು. ಇನ್ನೊಂದು ಕನಸು ತನ್ನ ಹುಡುಗನ ಕಾಯುತ್ತ ಕುಳಿತ ಹುಡುಗಿಯ ಮಡಿಲೊಳಗೆ ಇಳಿಯಿತು. ಎಂಥ ಮಳೆ! ಎನ್ನುತ್ತ ಹೊರಬಂದ ಅಪ್ಪ, ಅಣ್ಣಂದಿರ ಒಳಗೂ ಮೆಲ್ಲಗೆ ಸೇರಿಕೊಂಡುಬಿಟ್ಟವು. ಕಿಟಕಿಯಿಂದ ಮಳೆ ನೋಡುತ್ತಾ ನಿಂತ ಗೃಹಿಣಿಯರ ಕಣ್ಣಲ್ಲೂ ಕನಸುಗಳಿಳಿದವು….

ಹಾಗೇ ಇಳಿದ ಕನಸು ಸುಮ್ಮನಾಗಲಿಲ್ಲ. ಒಂದಕ್ಕೆ ಎರಡಾಯಿತು. ಎರಡು ನಾಲ್ಕಾಯಿತು….. ಕನಸುಗಳ ಸರಪಳಿಯಾಯಿತು… ಪುಟ್ಟ ಹುಡುಗ ಮೋಡಗಳ ಮೇಲೆ ಹಾರುತ್ತಿದ್ದ. ಹುಡುಗಿ ತನ್ನ ಕನಸುಗಳೊಡನೆ ಕಳೆದುಹೋದಳು.. ಹುಡುಗರು, ಅಪ್ಪ, ಅಣ್ಣ೦ದಿರೆಲ್ಲ ಕನಸ ಗಟ್ಟಿಯಾಗಿ ಹಿಡಿದುಕೊಂಡರು…ಮನೆಯ ಹಿರಿಯರಿಗೆಲ್ಲ ಈ ಬದಲಾವಣೆ ಅಚ್ಚರಿ ಹುಟ್ಟಿಸಿ ನೋಡುತ್ತಾ ಕುಳಿತುಬಿಟ್ಟರು…. ಕನಸು ಹೆಚ್ಚಾದಂತೆಲ್ಲ ಕೆಲವರು ಹಂಚುತ್ತ ಹೊರಟರು… ಈಗ ಊರ ತುಂಬ ಕನಸ ಮೆರವಣಿಗೆ!

ಕನಸು ಕೆಲಸ ಮರೆಸೀತು ಎಂದು ಎಚ್ಚರಿಸಿದರು ಊರ ಹಿರಿಯರು. ಹೌದು ಹೌದು ಎನ್ನುತ್ತಲೇ ಮತ್ತಷ್ಟು ಕನಸು ತುಂಬಿಕೊಳ್ಳುತ್ತಾ ನಡೆದರು ಕಿರಿಯರು…. ಬದುಕು ಚಂದವಾಗಿತ್ತು. ಕನಸುಗಳಿಂದಾಗಿ ಹೊಸ ಬಣ್ಣ ಬಂದಿತ್ತು… ಮನಸು ಹಾಡಿಕೊಳ್ಳುತ್ತಿತ್ತು. ಜನ ಖುಷಿಯಾದರು…

ನಾನು ನೋಡುತ್ತಲೇ ಇದ್ದೆ. ನನ್ನೊಳಗೆ ಬಂಧಿಯಾಗಿದ್ದ, ನನಗಷ್ಟೇ ಎಂದುಕೊಂಡಿದ್ದ ಕನಸುಗಳೀಗ ಎಲ್ಲೆಡೆ ಹರಡಿಕೊಂಡಿದ್ದವು. ಕನಸು ಕಾಣುವ ಹುಚ್ಚು ನನಗೆ ಮಾತ್ರ ಎಂದುಕೊಂಡಿದ್ದೆ. ನನ್ನ ಸುತ್ತಲ ಜಗತ್ತೆಲ್ಲ ಈಗ ನನ್ನಂತೆಯೇ ಕನಸು ಕಾಣತೊಡಗಿತ್ತು. ಮಳೆಹನಿಯ ಸದ್ದಾದರೆ ಸಾಕು, ಕನಸು ಹೆಕ್ಕಿಕೊಳ್ಳಲು ಜನ ಕಾಯುತ್ತಿದ್ದರು. ನನ್ನದೆಂದುಕೊಂಡಿದ್ದ ಕನಸು ಎಲ್ಲರದೂ ಆಗಿಬಿಟ್ಟಿತು… ಖುಷಿಯಾದ ನಾನು ಕನಸು ಕಟ್ಟುತ್ತಲೇ ಹೋದೆ…..ಮತ್ತೆ ಮತ್ತೆ… ……

( ಅಬ್ಬಾ! ಸುಸ್ತಾಗಿಬಿಟ್ಟೆ!! ಅನಿಸಿದ್ದನ್ನೆಲ್ಲ ಈ……….ಷ್ಟುದ್ದಕ್ಕೆ ಯಾವತ್ತೂ ಬರೆದಿರಲಿಲ್ಲ. ಇದೇನು ಪ್ರಭಂದವಾ ಅಂದರೆ ಅಲ್ಲ. ಕಥೆಯಾ ಅಂದರೆ ಅದೂ ಅಲ್ಲ, ಪದ್ಯ. ಗದ್ಯ…ಯಾವುದೂ ಅಲ್ಲ.. ಮತ್ತ್ಯಾವುದು ಅಂತ ಕೇಳಿದರೆ ಉತ್ತರಕ್ಕೆ ಆಕಾಶ ನೋಡಿಯೇನು… ನಿಮಗೆ ಹೇಗನ್ನಿಸಿತೋ ಹಾಗೇ ಓದಿಕೊಂಡುಬಿಡಿ! ಇದೊಂದು ಸಲ….ಮತ್ತೆ ಇಂತ ಪ್ರಯತ್ನಕ್ಕೆ ಕೈ ಹಾಕಲಾರೆ.. ಪ್ರಾಮಿಸ್ ) )

‍ಲೇಖಕರು avadhi

November 11, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

4 ಪ್ರತಿಕ್ರಿಯೆಗಳು

 1. ಮಂದಾರ

  ತುಂಬಾ ಚೆನ್ನಾಗಿದೆ. ಮೋಡ ಹಾಗೂ ಕನಸುಗಳ ರೂಪಕ ಮುದಕೊಟ್ಟಿತು. ಪ್ರಾಮಿಸ್ ಮಾಡಿ, ಇಂಥವುಗಳನ್ನು (ಕಥೆಯೋ, ಪ್ರಬಂಧವೋ ಇನ್ನೊಂದೋ ಅದರ ಗೊಡವೆ ಏಕೆ?) ಬರೀತಾನೇ ಇರಿ, ಪ್ಲೀಸ್

  ಪ್ರತಿಕ್ರಿಯೆ
 2. hemapowar123

  che adyake hagantiri, neevu mathe mathe inthaha prayathna madtha irbeku naavu odtha irbeku, odi mechtha irbeku… once more pleaaase 🙂

  Hema

  ಪ್ರತಿಕ್ರಿಯೆ
 3. ವೈಶಾಲಿ

  ಥ್ಯಾಂಕ್ಸ್ ಮಂದಾರ ಹಾಗೂ ಹೇಮಾ ಪವಾರ್,

  ಹೀಗೆ ಮೆಚ್ಚಿಕೊಳ್ಳುವವರು ಇರೋವಾಗ, ಪ್ರೀತಿಯಿಂದ ಬರೆಯಿರಿ ಅನ್ನೋವಾಗ ಇಲ್ಲ ಅನ್ನೋಕಾಗುತ್ತಾ? ಖಂಡಿತಾ ಮುಂದುವರೆಸ್ತೀನಿ. ನಿಮ್ಮ ಪ್ರೀತಿಗೆ ಋಣಿ.

  ನಿಮ್ಮ ಪ್ರೀತಿ, ಪ್ರೋತ್ಸಾಹಕ್ಕೆ ಧನ್ಯವಾದಗಳು ಅವಧಿ.

  ಪ್ರತಿಕ್ರಿಯೆ
 4. eshakumar h n

  matte matte moda thanna odalanu katti mutta haniya
  mukena dhareya pulakagolisuvanthe,nimma kanasugalu
  nimmanu anugaalavu kaadi adara bhavaroopavu aksharagala
  moolaka nammanu thanisali…danyavaada

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: