‘ನಿಮಗೇನ್ರಿ ಪ್ರಾಬ್ಲಂ’ ಎಂದು ದಬಾಯಿಸಿದೆ

ವಿ ಆರ್ ಕಾರ್ಪೆಂಟರ್

ಇಂದು ನನ್ನ ಮಗಳನ್ನು ಶಾಲೆಗೆ ಸೇರಿಸುವಾಗ ಹೆಡ್ ಮಾಸ್ಟರ್ ಅವರ ಬಳಿ ಕುಳಿತು ಅಪ್ಲಿಕೇಷನ್ ತುಂಬುತ್ತಿದ್ದೆ. ಅದರಲ್ಲಿ ರಾಷ್ಟ್ರೀಯತೆ / ಮತ/ ಮತ್ತು ಜಾತಿಯ ಕಾಲಂ ಇತ್ತು. ನಾನು ನನ್ನ ಜಾತಿ ಮತ್ತು ರಾಷ್ಟ್ರೀಯತೆಯನ್ನು ಮಾತ್ರ ನಮೂದಿಸಿ ಧರ್ಮದ ಕಾಲಂ ಅನ್ನು ಹಾಗೆ ಬಿಟ್ಟೆ. ಅದಕ್ಕೆ ಹೆಡ್ ಮಾಸ್ಟರ್ ಹಿಂದೂ ಎಂದು ಸೇರಿಸಿದರು. ನಾನು ವಿರೋಧಿಸಿದೆ.

ಅವರು ಹಾಗಾದರೆ ಕ್ರಿಶ್ಚಿಯನ್ ಎಂದು ಸೇರಿಸಲಾ? ಮುಸ್ಲಿಂ ಎಂದು ಸೇರಿಸಲಾ? ಕುಹಕವಾಡುತ್ತಿದ್ದರು. ಅದಕ್ಕೆ ನಾನು ನನಗೆ ಯಾವ ಧರ್ಮವೂ ಮುಖ್ಯ ಅನಿಸುವ…ುದಿಲ್ಲ, ಹಾಗಾಗಿ ಅದನ್ನು ಹಾಗೆಯೇ ಬಿಟ್ಟುಬಿಡಿ ಎಂದು ವಿನಂತಿಸಿಕೊಂಡೆ. ಅದಕ್ಕೆ ಅವರು ಯಾವುದೋ ವೇದವನ್ನು ಹೇಳುತ್ತಾ ಧರ್ಮದ ಉಪದೇಶವನ್ನು ಮಾಡುತ್ತಾ ಕಾನೂನಿನಲ್ಲಿ ಹಾಗಿದೆ ಹೀಗಿದೆ ಎಂದು ಏನೇನೋ ವದರುತ್ತಿದ್ದರು.

ನಾನು ನನಗೆ ತಿಳಿದ ಒಬ್ಬ ಪ್ರಸಿದ್ಧ ವಕೀಲರಿಗೆ ಫೋನ್ ಕಾಲ್ ಮಾಡಿ ಸ್ಪಷ್ಟನೆ ಕೇಳಿದೆ. ಅದಕ್ಕೆ ಅವರು ಧರ್ಮವನ್ನು ದಾಖಲಿಸದೇ ಬಿಡುವುದು ನಿಮ್ಮ ಸ್ವಾತಂತ್ರ್ಯ ಎಂದು ಧೈರ್ಯ ತುಂಬಿದರು. ಆದರೂ ಆ ಮಾಸ್ಟರ್ ಸುಮ್ಮನೇ ತರಲೇ ಮಾಡುತ್ತಲೇ ಇದ್ದರು. ಕೊನೆಗೆ ನಾನು ‘ನಿಮಗೇನ್ರಿ ಪ್ರಾಬ್ಲಂ’ ಎಂದು ಧಬಾಯಿಸಿದೆ. ಅವರು ಗೊಣಗಿಕೊಂಡು ಹಿಂದೂ ಎಂಬ ಪದವನ್ನು ಹೊಡೆದು ಹಾಕಿದರು ಸಮಾಧಾನವಾಯ್ತು.

ನೆಮ್ಮದಿಯಿಂದ ಮನೆಗೆ ಬಂದೆ ಗಾಂಧಿ ಹೇಳಿದ ಮಾತು ‘ಧರ್ಮ ಅಥವಾ ಭಕ್ತಿ ಎಂಬುದು ನಾವು ಹಾಕಿಕೊಳ್ಳು ಒಳ ಉಡುಪಿನಂತೆ ಖಾಸಗಿಯಾಗಿರಬೇಕು’ ಎಂಬ ಮಾತು ಎದೆಯಲ್ಲಿ ಲಕಲಕಿಸುತ್ತಿತ್ತು!

ನಿಜವಾಗಿಯೂ ನಾವು ಧರ್ಮದ ಕಾಲಂ ತುಂಬಲೇಬೇಕೆ. ಧರ್ಮ ಖಾಸಗಿಯಾಗಿರುವುದು ಸರಿಯಲ್ಲವೇ?

 

 

‍ಲೇಖಕರು G

May 31, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

7 ಪ್ರತಿಕ್ರಿಯೆಗಳು

 1. ಎಚ್. ಸುಂದರ ರಾವ್

  ಧರ್ಮ ಮಾತ್ರವಲ್ಲ ಜಾತಿಯೂ ಖಾಸಗಿಯಾಗಿರುವುದು ಒಳ್ಳೆಯದು. ಖಾಸಗಿಯಾಗಿಯೂ ಅದು ಇಲ್ಲದೇಹೋದರೆ ಇನ್ನೂ ಒಳ್ಳೆಯದು. ಆದರೆ ವ್ಯವಹಾರದಲ್ಲಿ ಅದು ಕಷ್ಟ. ನಾನು ನನ್ನ ಸ್ನೇಹಿತರೊಂದಿಗೆ ಒಂದು ಜಾನುವಾರು ಜಾತ್ರೆಗೆ ಹೋಗಿದ್ದೆ. ನನಗೆ ಒಂದು ಜೊತೆ ಎತ್ತು ಬೇಕಾಗಿತ್ತು. ನನ್ನೊಂದಿಗೆ ಬಂದ ಸ್ನೇಹಿತರು ಎತ್ತುಗಳ ಲಕ್ಷಣ ನೋಡುವುದರಲ್ಲಿ ಪಳಗಿದವರು. ಅವರು ಎತ್ತಿನ ಸುಳಿ ಅದು ಇದು ಅಂತ ಪರೀಕ್ಷಿಸಲು ಹೊರಟರು. ನಾನೆಂದೆ “ನನಗೆ ಅದರಲ್ಲೆಲ್ಲ ನಂಬಿಕೆ ಇಲ್ಲ. ಎತ್ತುಗಳು ಒಳ್ಳೆಯದಿದ್ದರೆ ಆಯಿತು”. ನನ್ನ ಸ್ನೇಹಿತರ ಉತ್ತರ: “ನೀವು ಕೊಳ್ಳುವಾಗ ಆ ಮಾತು ಸರಿ. ನಾಳೆ ಇದೇ ಎತ್ತುಗಳನ್ನು ನೀವು ಮಾರಬೇಕಾದರೆ ಏನು ಮಾಡುತ್ತೀರಿ?”. ನಂಬಿಕೆ ಏನೇ ಆಗಿರಲಿ, ಭಾರತದ ಮಟ್ಟಿಗಂತೂ ವ್ಯಕ್ತಿಯನ್ನು ಗುರುತಿಸುವುದು ಅವನ ಜಾತಿ, ಧರ್ಮಗಳಿಂದಲೇ. ಅಂಬೇಡ್ಕರ್ ಸಹ ಹಿಂದೂ ಧರ್ಮ ಬಿಟ್ಟು ಬೌದ್ಧರಾದರು. “ನನಗೆ ಧರ್ಮವೇ ಬೇಡ” ಅನ್ನಲಿಲ್ಲ ಅಲ್ಲವೆ? “ನಾರಣಪ್ಪ ಬ್ರಾಹ್ಮಣ್ಯ ಬಿಟ್ಟರೂ ಬ್ರಾಹ್ಮಣ್ಯ ನಾರಣಪ್ಪನನ್ನು ಬಿಡಲಿಲ್ಲ”! -ಎಚ್. ಸುಂದರ ರಾವ್

  ಪ್ರತಿಕ್ರಿಯೆ
  • ವಿ.ಆರ್.ಕಾರ್ಪೆಂಟರ್

   ನನಗೆ ಜಾತಿ ಯಾವುದೆಂದು ಹೇಳಿಕೊಳ್ಳುವುದಕ್ಕೆ ಕೀಳರಿಮೆ ಇಲ್ಲ. ಆದರೆ ಧರ್ಮವನ್ನು ಹೇಳಿಕೊಳ್ಳುವಾಗ ಮಾತ್ರ ಅಹಂ ಅಡ್ಡ ಬರುತ್ತದೆ. ಯಾಕೆಂದರೆ ಇಲ್ಲಿ ಮನುಷ್ಯ ಮನುಷ್ಯನ ನಡುವೆ ಕಂದಕ ಉಂಟಾಗಿರುವುದು ಧರ್ಮಗಳಿಂದಲೇ.ಅವು ಮನುಷ್ಯನನ್ನು ಕಟ್ಟಿಹಾಕುತ್ತವೆ. ಆ ರೀತಿಯ ಬಂಧನ ನನಗೆ ಇಷ್ಟವಿಲ್ಲ. ಹಾಗಾಗಿ ಮಕ್ಕಳಿಗೂ ಅದರ ಸೋಂಕು ತಗುಲಕೂಡದೆಂದು ತೀರ್ಮಾನಿಸಿದ್ದೇನೆ. ನಿಜವಾಗಿಯೂ ಮನುಷ್ಯನಿಗೆ ಧರ್ಮ ಬೇಕೆ ಬೇಕೆಂದು ನಿಮಗೆ ಅನಿಸಿದರೆ ತುಂಬಾ ಮಾನವೀಯವಾದ ಧರ್ಮವನ್ನು ತೋರಿಸಿ. ಈಗಲೇ ಸೇರಿಬಿಡುತ್ತೇನೆ. ಒಂದು ಧರ್ಮ ಬಿಟ್ಟು ಇನ್ನೊಂದಕ್ಕೆ ಸೇರುವುದು ನನಗೆ ಅಷ್ಟೇನೂ ಸರಿಕಾಣುವುದಿಲ್ಲ. ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದಾಗ ಪೆರಿಯಾರ್ ಹೇಳಿದ ಒಂದು ಮಾತು ನೆನಪಾಗುತ್ತದೆ. ‘ನಾನು ಈ ಧರ್ಮವನ್ನು ಬಿಟ್ಟು ಬೇರೆಯದನ್ನು ಸ್ವೀಕರಿಸಿದ್ದೇ ಆದರೆ ಈ ಧರ್ಮದ ಹುಳುಕುಗಳ ಬಗ್ಗೆ ಮಾತನಾಡುವ ಹಕ್ಕನ್ನು ಕಳೆದುಕೊಳ್ಳುತ್ತೇನೆ’. ಆದ್ದರಿಂದ ನಾವು ಯಾವುದನ್ನೂ ಮೇಲು ಮತ್ತು ಕೀಳು ಎಂದು ಕಾಣದೆ ಎಲ್ಲವನ್ನೂ ಸಮನಾಗಿ ಕಾಣಬೇಕು ಅಥವಾ ಬಿಟ್ಟುಬಿಡುವುದು ಉತ್ತಮ ಎಂಬ ಅಭಿಪ್ರಾಯಕ್ಕೆ ಬಂದು ಬಿಟ್ಟಿದ್ದೇನೆ.

   ಪ್ರತಿಕ್ರಿಯೆ
 2. Mohan Talakalukoppa

  If you think that religion is not required, then why Caste? Only nationality is enough.

  But if you think ” Caste” and ” Religion” as cultural units, then there is no harm in recording them. But any sort of discrimination from any side, based on these is highly unacceptable.

  Dr. Mohan Talakalukoppa

  ಪ್ರತಿಕ್ರಿಯೆ
 3. ದಿಲ್

  ಧರ್ಮಕ್ಕೆ ಸೇರಿಸಿಕೊಳ್ಳುವ ಏಕೋದ್ದೇಶದ ಕೆಲ ಧರ್ಮ ದುಕಾನುಗಳ ಮೇಲೆ ಈಗ “ಹೌಸ್ ಫುಲ್” ಬೋರ್ಡುಗಳು ನೇತಾಡುತ್ತಿರುವ ಕಾಲವಿದು. ಧರ್ಮದ ವ್ಯಾಪಾರ ಈಗ ಹಳತು ಎನಿಸಿಬಿಟ್ಟಿದೆ. ಅಥವಾ ಅದು ಸ್ಯಾಚುರೇಟ್ ಸ್ಥಿತಿ ತಲುಪಿದೆ. ಹೀಗಾಗಿ ನೀವು ಯಾವ ಧರ್ಮ ವ್ಯಾಪಾರದ ಗೊಡವೆಗೆ ಹೋಗದಿರುವುದೇ ಒಳಿತು. ಈ ನೆಲೆಯಲ್ಲಿ ನಿಮ್ಮ ನಿರ್ಧಾರ ಮೆಚ್ಚುಗೆಯಾಯ್ತು. ಧರ್ಮ- ಅದೊಂದು ಐಡೆಂಟಿಟಿ ಪ್ರಶ್ನೆ. ಐಡೆಂಟಿಟಿ ಕಾಪಾಡಿಕೊಳ್ಳಲು ನಡೆಯುವ ಯತ್ನಗಳು ಸಹಜವೇ. ಅದಕ್ಕಾಗಿ ಸಂಘರ್ಷವನ್ನೇ ನೆಚ್ಚಿಕೊಳ್ಳುವುದು ಅನಗತ್ಯ. ಅಥವಾ ಅದು ಅವರ ಆಯ್ಕೆಯಷ್ಟೇ ಎಂದು ಹೇಳಬಹುದು. ಮನುಷ್ಯ ಧರ್ಮವೊಂದಿದೆಯಲ್ಲ ಅದು ಮುಖ್ಯ. ಮಾನವೀಯತೆಯೇ ಅದರ ಮೂಲ ಆರಾಧನೆ.

  ಪ್ರತಿಕ್ರಿಯೆ
 4. ಅಶೋಕವರ್ಧನ ಜಿ.ಎನ್

  ೧೯೮೬-೮೭ರ ಸುಮಾರಿಗೆ ನಮಗೂ ಮಗನನ್ನು ಶಾಲೆಗೆ ಸೇರಿಸುವಾಗ ಈ ಕಾಲಂ ಕಾಡಿತು. ನಾವು ಎಲ್ಲಕ್ಕೂ `ಭಾರತೀಯ’ ಎಂದೇ ಸೇರಿಸಿದೆವು. ಒಂದೆರಡು ವರ್ಷ ಮಗನಿಗೆ ದಾಖಲೆಯ ವಿಚಾರದಲ್ಲಿ ಸಂಬಂಧಿಸಿದ ಟೀಚರಿಂದ “ಜಾತಿಯಿಲ್ಲದವನು” ಎಂದು ಹಗುರಕ್ಕೆ ಹಂಗಣೆ ಬಂದಿತ್ತು. ಮತ್ತೊಮ್ಮೆ ಹಕ್ಕೊತ್ತಾಯವೇ ಶಾಲೆಯಿಂದ ಬಂದಾಗ ನಾನು ಸ್ಪಷ್ಟವಾಗಿ ಬರೆದುಕೊಟ್ಟೆ – `ನಮಗೆ ಜಾತಿಯಿಲ್ಲ. ಇದರಿಂದ ಉಂಟಾಗುವ ಎಲ್ಲಾ ಕಷ್ಟ ನಷ್ಟಗಳಿಗೂ ನಾವೇ ಜವಾಬ್ದಾರರು.’ ನಮ್ಮ ಅದೃಷ್ಟಕ್ಕೆ ಅದು ಅಲ್ಲಿಗೇ ಶಾಂತವಾಯ್ತು.
  ಮತಪೆಟ್ಟಿಗೆ ರಾಜಕೀಯದಲ್ಲಿ ಇಂದು ವೈಯಕ್ತಿಕ ಯಾವುದು, ಸಾಮಾಜಿಕ ಯಾವುದು ಎಂಬುದರ ಗಡಿರೇಖೆ ಅಳಿಸಿಹೋಗಿದೆ. ಇದು ಜಾತಿ, ಧರ್ಮ ಮಾತ್ರವಲ್ಲ ಭಾಷೆ, ಆಹಾರ, ವ್ಯವಹಾರ ಎಲ್ಲವನ್ನೂ ಪೂರ್ಣ ಅಪಮೌಲ್ಯಗೊಳಿಸಿದೆ. ಮನುಷ್ಯಧರ್ಮಕ್ಕೆ ಚ್ಯುತಿಯಾಗದಂತೆ ನಮ್ಮ ವಿಚಾರಶಕ್ತಿಯನ್ನೇ ಹುರಿಗೊಳಿಸುವುದು ಒಂದೇ ದಾರಿ.
  ಅಶೋಕವರ್ಧನ

  ಪ್ರತಿಕ್ರಿಯೆ
 5. mahadev

  ಪ್ರಿಯ ವಿ.ಆರ್.ಕಾರ್ಪೆಂಟರ್ ಧರ್ಮವನ್ನು ನಮೂದಿಸದೆ ಬಿಟ್ಟವರು ಹೆಮ್ಮೆಯಿಂದ ಜಾತಿಯನ್ನು ಹೇಳಿಕೊಂಡಿದ್ದೀರಿ, ಆ ಜಾತಿಯನ್ನು ಬಿಡಲಿಕ್ಕಾಗಲಿಲ್ಲದ ಅಂಶವೊಂದು ನಿಮ್ಮೊಳಗೆ ಇದೆ ಅಥವಾ ಈ ಜಗತ್ತಿನ ಯಾವ ಮೂಲೆಗೆ ಹೋದರೂ ಜಾತಿ ಕೇಳುತ್ತಾರೆ… ಅದನ್ನು ಬಿಟ್ಟು ಇರಲು ಸಾಧ್ಯವೇ ಇಲ್ಲವೇ? ಉದ್ಯೋಗವೇ ಜಾತಿ ಎಂದು ನಮೂದಿಸಲು ಇಷ್ಟಪಟ್ಟಿದ್ದರೆ ಅದೊಂದು ಕುತೂಹಲಕರ ವಿಷಯ… ಯಾಕಂದ್ರೆ ಜಾತಿ ಅನ್ನೋದು ಗುರುತಿಸುವಿಕೆಯ ಟೋಟೆಮ್ ಆಗಿದೆ. ಈ ಉದ್ಯೋಗಾಧಾರಿತ ಗುರುತಿಸುವಿಕೆಯ ಒಳಗೆ ಒಂದು ತೆರನಾದ ಅಮಲಿನ ಶ್ರೇಷ್ಟತೆಯ ಗುಂಗೊಂದು ಇರುತ್ತದೆ ಅಂದುಕೊಳ್ಳುತ್ತೇನೆ. ಹಾಗಾಗಿ ಇವತ್ತಿಗೆ ನಾವು ಜಾತಿಯನ್ನು ಬಿಡಬೇಕಾದದ್ದು ಮುಖ್ಯವಲ್ಲವೇ? ಮತ್ತೊಂದನ್ನು ಯೋಚಿಸಲೂ ಆಗದಂತೆ ಸಾಧ್ಯಾಸಾಧ್ಯತೆಗಳನ್ನು ಈ ಧರ್ಮಗಳ ವಿನ್ಯಾಸದಲ್ಲಿ ರೂಪಿಸಿರುವಾಗಲೂ ನಾವು ಧರ್ಮವನ್ನ ತೊರೆದು ಅನುಭವ ಸತ್ಯದ ಜೊತೆಗೆ ಏಗಲು ಪ್ರಯತ್ನಿಸಬೇಕಾಗಿರುವುದು ಅನಿವಾರ್ಯವಿತ್ತು ಮತ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಧರ್ಮ ಅಗತ್ಯವೆಂದು ಅಂಬೇಡ್ಕರ್ ಅವರು ಬೌದ್ಧ ಮತಕ್ಕೆ ಹೋದರು.
  ತೀರ ವೈಯಕ್ತಿಕವಾಗಿ ನನ್ನನ್ನು ಕಾಡುವ ಪ್ರಶ್ನೆ ಎಂದರೆ.. ನಾನು, ನನ್ನ ಹೆಂಡತಿ ಜಾತಿಯಿಂದ ಬೇರೆ ಬೇರೆ, ಮುಂದೆ ನಮಗೆ ಹುಟ್ಟುವ ಮಕ್ಕಳಿಗೆ ಯಾವ ಜಾತಿಯ ನಾಮಕರಣ ಮಾಡಬೇಕು? (ತಂದೆಯ ಜಾತಿಯೇ ಮಕ್ಕಳಿಗೆ ಎನ್ನುವುದು ಗಂಡಸಿನ ದಾರ್ಷ್ಟ್ಯವಾದೀತು) ಉದ್ಯೋಗಾಧಾರಿತ ಜಾತಿಯನ್ನು ನಮೂದಿಸಬೇಕೆಂದಾದಲ್ಲಿ ನಾವು ಪಕ್ಕ ನಾಟಕದ ಮಂದಿ… ಯಾವ ಜಾತಿಗೆ ಸೇರುತ್ತೇವೆ? ಇಷ್ಟೆಲ್ಲ ಗೊಂದಲಗಳು ಕಾಡುವುದು ಜಾತಿ ದೆಸೆಯಿಂದಲೇ ಅಂದುಕೊಳ್ಳುತ್ತೇನೆ. ನೀವು ಭಾರತೀಯರು ಎಂದಾದಲ್ಲಿ ಧರ್ಮವನ್ನು ಹೇಳಲು ಹಿಂಜರಿದಿರುವುದು ಇಲ್ಲಿರುವ ನಾಲ್ಕೈದು ಧರ್ಮಗಳ ಆಯ್ಕೆಯ ಗೊಂದಲದಿಂದ ನುಣುಚಿಕೊಳ್ಳಲು ಎಂದುಕೊಳ್ಳುತ್ತೇನೆ. ಬೇರೆ ಧರ್ಮಗಳಲ್ಲಿ ಪಂಗಡಗಳಿವೆ ಹೊರತು ಜಾತಿಗಳಿಲ್ಲ ಎಂದುಕೊಳ್ಳುತ್ತೇನೆ. ಆ ಪಂಗಡಗಳೂ ತತ್ವಸಿದ್ಧಾಂತಗಳಿಗೆ ನಿಷ್ಟವಾಗಿ ನಡೆದುಕೊಳ್ಳುವಲ್ಲಿ ವಿಭಾಗವಾಗಿರುವಂತವು. ಈಗ ಸಮಾಜದ ಒಳಿತಿಗಾಗಿ ಪುನರ್ರಚನೆ ಆಗಬೇಕಿರುವ ನಡೆ ಜಾತಿಯ ವಿರುದ್ಧ ಆಗಬೇಕಾಗಿದೆ… ಧರ್ಮಗಳ ವಿರುದ್ಧವಲ್ಲ. ನಿಮ್ಮ ಪ್ರಯತ್ನ ವ್ಯವಸ್ಥೆಗೆ ಪ್ರತಿಕ್ರಿಯೆ ಕೊಡುವುದಷ್ಟೆ ಆಗಿರಲಾರದು ಹಾಗಾಗಿ ನಾನು ಒಂದು ಸಣ್ಣ ಪ್ರತಿಕ್ರಯೆ ಮಾಡಿದ್ದೇನೆ. ಇವತ್ತಿಗೆ ಧರ್ಮ ಮತ್ತು ಜಾತಿಗಳೆರಡೂ ಖಾಸಗಿ ಇರಬೇಕೆನ್ನುವ ಆದರ್ಶ ವಿಚಿತ್ರ ಸೆಳವಿನ ಮಡುವಿಗೆ ಹಾಕುತ್ತದೆ. ಕ್ರಿಶ್ಚಿಯನ್, ಮುಸ್ಲಿಮ್ ಸೇರಿಸಲಾ ಎಂದು ಕೇಳುವ ಮನಸ್ಥಿತಿ ವ್ಯವಸ್ಥೆಯಲ್ಲಿ ಇರೋವಾಗ ಜಾತಿಗಿಂತಲೂ ಧರ್ಮದ ಕಾಲಮ್ ತುಂಬಿದ್ದರೆ ಒಳ್ಳೆಯದಿತ್ತು.

  ಪ್ರತಿಕ್ರಿಯೆ
 6. shama, nandibetta

  ಧರ್ಮಗಳ ಒಳಸುಳಿಯ ಅವುಗಳ ಭಿಕರತೆಯ ಆಳ ಅಗಲಗಳು, ವಿಸ್ತಾರಗಳು ಯಾವುದನ್ನೂ ಅರಿಯದೆ ಏಣಿಗಾತು ನಿಂತು ನಗುವ ಮುಗ್ಧೆ ಜಾತಿ, ಧರ್ಮಾತೀತಳಾಗಿ ಬಾಳಿ ಬೆಳಗಲಿ… ಅವಳ ಆಧಾರಕ್ಕೆ ನಿಂತ ಮೆಟ್ಟಿಲುಗಳು ನಿರಂತರ ಹೊತ್ತು ಮುನ್ನಡೆಸಲಿ…

  ‘ಧರ್ಮ ಅಥವಾ ಭಕ್ತಿ ಎಂಬುದು ನಾವು ಹಾಕಿಕೊಳ್ಳು ಒಳ ಉಡುಪಿನಂತೆ ಖಾಸಗಿಯಾಗಿರಬೇಕು’ ಎಂಬುದು ಇಷ್ಟವಾಯ್ತು…

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: